ಮಂಟೊನ ‘The mottled dawn’

ಶಂಕರ್ ಎನ್.ಸೊಂಡೂರು

ಸಾದತ್ ಹಸನ್ ಮಂಟೊನ ದೇಶ ವಿಭಜನೆ ಕಾಲದ ಕತೆಗಳ ಸಂಕಲನ- ‘The mottled dawn’ (ಮಲಿನ ಬೆಳಗು).

ವರ್ಷಗಳ ಹಿಂದೆ ಓದಿದಾಗ ನನ್ನ ಊಟ ನಿದ್ದೆಯನ್ನು ಕಸಿದುಕೊಂಡು ನನ್ನಲ್ಲಿ ಅವರ್ಣನೀಯ ತಳಮಳ ಎಬ್ಬಿಸಿದ ಪುಸ್ತಕವಿದು. ಅದೇ ಗುಂಗಿನಲ್ಲಿ ಆಗ ಪತ್ರಿಕಾ ಅಂಕಣವೊಂದರಲ್ಲಿ ಮಂಟೊ ಬಗ್ಗೆ ಸುದೀರ್ಘ ಲೇಖನ ಬರೆದಿದ್ದೆ. ಅದರಿಂದ ಆಯ್ದ ಭಾಗಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:

ತನ್ನದಾದ ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿ ತನ್ನದಲ್ಲದ ಪಾಕಿಸ್ತಾನದಲ್ಲಿ ಸತ್ತ ಮಂಟೊ, ಉಪಖಂಡದ ಎದೆ ಸೀಳಿದ ವಿಭಜನೆಯ ಶಾಪಕ್ಕೆ ತುತ್ತಾಗಿ ಮಹಾ ಕೋಮುವಾದಿಯಾಗಬಹುದಿತ್ತು; ಅಥವಾ ಹುಚ್ಚನಾಗಬಹುದಿತ್ತು; ಅಥವಾ ಭಂಡನಾಗಿದ್ದರೆ ಪಾಕಿಸ್ತಾನದ ಭಾರತವಿರೋಧಿ ರಾಜಕಾರಣಿಯಾಗಿ ಬೆಂಕಿ ಕಾರಬಹುದಿತ್ತು.

ಆದರೆ ಮಂಟೊ ಅದೇನೂ ಆಗದೆ ತನ್ನ ಕಥಾನಾಯಕ ತೋಬಾ ತೇಕ್ ಸಿಂಗ್ ನಂತೆ – ಈ ಕಡೆ ಭಾರತವಲ್ಲದ ಆ ಕಡೆ ಪಾಕಿಸ್ತಾನವಲ್ಲದ, ಹಿಂದೂ ಅಲ್ಲದ ಮುಸ್ಲಿಮನಲ್ಲದ, ಯಾರಿಗೂ ಸೇರದ, ಯಾವ ಹೆಸರೂ ಇಲ್ಲದ ತನ್ನದೇ ತಟಸ್ಥ ನೆಲದ ತುಣುಕು (no man’s land) ಅರಸಿ ಬರೆಯತೊಡಗಿದ….

ಮಂಟೊ ಜೀವದ ಬೇರುಗಳು ಅಲ್ಲಾಡುವಂಥ ಸಂದಿಗ್ಧ ಎದುರಾದದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದ ಮುಂಚಿನ ಮತ್ತು ನಂತರದ ಕೋಮು ಹಿಂಸಾಕಾಂಡದ ಸಂದರ್ಭದಲ್ಲಿ.

ವಿಭಜನೆಯಿಂದಾಗಿ ಉಪಖಂಡದಲ್ಲಿ ಹರಿದ ಧಾರ್ಮಿಕ ಮತ್ತು ಪ್ರತ್ಯೇಕತಾವಾದದ ರಕ್ತಕ್ಕೆ ಸಾಟಿಯಾದ ಉದಾಹರಣೆಗಳು ನಾಗರಿಕ ಮನುಷ್ಯ ಚರಿತ್ರೆಯಲ್ಲೇ ಅಪರೂಪ. ಆಗೊಮ್ಮೆ ಈಗೊಮ್ಮೆ ಎದುರಾಬದುರಾಗಿ ಕಚ್ಚಾಡಿದ್ದು ಬಿಟ್ಟರೆ ಶತಮಾನಗಳ ಕಾಲ ಸಾಮಾನ್ಯ ಸೈರಣೆಯಲ್ಲೇ ಬದುಕಿದ್ದ ಜನಾಂಗಗಳಿಗೆ ಆಗ ಒಮ್ಮಿಂದೊಮ್ಮೆಲೇ ಹುಚ್ಚು ಹಿಡಿದಿತ್ತು.

ಸರ್ವನಾಶದ ಆ ಮೃಗೀಯ ರೊಚ್ಚು, ದೇಶದ ಆತ್ಮಕ್ಕೆ ಮೂಲಭೂತವಾದ ಯಾವುದೋ ಜೀವತಂತುವನ್ನೇ ಕಡಿದು ಹಾಕಿದಂತಿತ್ತು. ಆ ದಿನಗಳಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ ಸಂಖ್ಯೆ ಇಂದಿಗೂ ನಿಖರವಾಗಿ ಗೊತ್ತಿಲ್ಲ. ಲಾರ್ಡ್ ಮೌಂಟ್ ಬ್ಯಾಟನ್ ಎರಡೂವರೆ ಲಕ್ಷದ ಸಂಖ್ಯೆ ದಾಟಲು ಹೆದರಿದರೆ, ಕೆಲವರು ಐದು ಲಕ್ಷ ಅಂದರು. ಇಪ್ಪತ್ತು ಲಕ್ಷವೆಂದ ಇತಿಹಾಸಕಾರರೂ ಇದ್ದಾರೆ!…

ಆ ಸಮಯದಲ್ಲೊಮ್ಮೆ ಮಂಟೊ ತನ್ನ ಪರಮಾಪ್ತ ಮಿತ್ರ ಶ್ಯಾಂ (ಆಗಿನ ಜನಪ್ರಿಯ ನಟ) ಜತೆ ಪಾಕಿಸ್ತಾನದ ರಾವಲ್ಪಿಂಡಿಯಿಂದ (ಶ್ಯಾಂನ ಹುಟ್ಟೂರು) ಬಂದ ಕೆಲವು ಸಿಖ್ ನಿರಾಶ್ರಿತರನ್ನು ಭೇಟಿಯಾಗುತ್ತಾನೆ. ಆ ಬಗ್ಗೆ ಮಂಟೊ ಬರೆಯುತ್ತಾನೆ:

…ಅವರು ತಪ್ಪಿಸಿಕೊಂಡು ಬಂದ ಭಯಾನಕ ಕಥನವನ್ನು ಮೌನವಾಗಿ ಕೇಳುತ್ತ ದಿಗ್ಭ್ರಾಂತರಾಗಿದ್ದೆವು. ಶ್ಯಾಂ ತೀರಾ ವಿಚಲಿತನಾಗಿದ್ದ. ಅವನೊಳಗೆ ನಡೆದಿದ್ದ ಹೊಯ್ದಾಟ ನನ್ನ ಅರಿವಿಗೆ ಬರುತ್ತಿತ್ತು. ಅಲ್ಲಿಂದ ಹೊರ ಬಂದ ಮೇಲೆ ಕೇಳಿದೆ: ನಾನೂ ಮುಸ್ಲಿಂ. ನಿನಗೆ ನನ್ನನ್ನು ಕೊಲ್ಲಬೇಕು ಅನಿಸುತ್ತಿಲ್ಲವೇ? “ಈಗಿಲ್ಲ”- ಅವನು ಗಂಭೀರವಾಗಿ ಉತ್ತರ ಕೊಟ್ಟ-“ಆದರೆ ಮುಸ್ಲಿಮರ ದೌರ್ಜನ್ಯಗಳ ಬಗ್ಗೆ ಅವರು ಹೇಳುತ್ತಿದ್ದ ಆ ಗಳಿಗೆಯಲ್ಲಿ ನಾನು ನಿನ್ನನ್ನು ಕೊಂದರೂ ಕೊಲ್ಲಬಹುದಿತ್ತು…”! ಆ ಉತ್ತರ ಕೇಳಿ ನಾನು ತತ್ತರಿಸಿಹೋದೆ….

…ವಿಭಜನೆ ನಂತರ ಸಂಭವಿಸಿದ ವಿಪ್ಲವದ ಪರಿಣಾಮಗಳನ್ನು ನಾನು ಬಹಳ ದೀರ್ಘ ಕಾಲ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ್ಲ. ಈಗಲೂ ನನ್ನ ಮನಃಸ್ಥಿತಿ ಅದೇ. ಆದರೆ ಕಡೆಗೊಮ್ಮೆ ಈ ಭಯಾನಕ ವಾಸ್ತವವನ್ನು ನಾನು ಆತ್ಮಮರುಕ ಅಥವಾ ಹತಾಶೆಯಿಲ್ಲದೆ ಸ್ವೀಕರಿಸಲು ಸಾಧ್ಯವಾಯಿತೇನೋ. ಮತ್ತು ಆ ಹಾದಿಯಲ್ಲಿ, ಈ ಮನುಷ್ಯನಿರ್ಮಿತ ನೆತ್ತರ ಕಡಲಿನಿಂದ ಅಪರೂಪ ರಂಗಿನ ಮುತ್ತುಗಳನ್ನು ಹೆಕ್ಕಿ ತೆಗೆಯಲು ಯತ್ನಿಸಿದೆ. ಮನುಷ್ಯ ಮನುಷ್ಯನನ್ನು ಕೊಲ್ಲುವಾಗಿನ ಏಕಚಿತ್ತ ದೃಢತೆ; ಕೆಲವರಲ್ಲಿ ಮೂಡಿದ ಪಶ್ಚಾತ್ತಾಪ; ತಮ್ಮಲ್ಲಿನ್ನೂ ಮನುಷ್ಯ ಭಾವನೆಗಳೇಕೆ ಉಳಿದಿವೆಯೆಂದು ದಿಗ್ಭ್ರಮೆಗೊಳ್ಳುವ ಕೊಲೆಗಡುಕರ ಕಣ್ಣೀರು…

ಮತ್ತು ಈ ದುರಂತದ ನಿರರ್ಥಕತೆ. ಕಥಾನಾಯಕ ಮುಮ್ತಾಜ್ ಭಾರತ ತೊರೆದುಹೋದ ಕತೆಯಲ್ಲಿ ಮಂಟೊನ ನಾಯಕ ಹೇಳುತ್ತಾನೆ:

“…ಎರಡು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಕ್ಕಿಂತ ದೊಡ್ಡ ದುರಂತವೆಂದರೆ- ಇಷ್ಟು ಜೀವಗಳ ನಷ್ಟ ಕೂಡ ವ್ಯರ್ಥವಾಯಿತು ಅನ್ನುವುದು. ಒಂದು ಲಕ್ಷ ಹಿಂದೂಗಳನ್ನು ಕೊಂದ ಮುಸ್ಲಿಮರು, ತಾವು ಹಿಂದೂ ಧರ್ಮವನ್ನೇ ನಾಶ ಮಾಡಿದೆವು ಅಂದುಕೊಳ್ಳಬಹುದು. ಆದರೆ ಹಿಂದೂ ಧರ್ಮ ಸತ್ತಿಲ್ಲ, ಸಾಯುವುದೂ ಇಲ್ಲ. ಅದೇ ರೀತಿ ಒಂದು ಲಕ್ಷ ಮುಸ್ಲಿಮರನ್ನು ಕೊಂದ ಹಿಂದೂಗಳು ಇಸ್ಲಾಂ ಧರ್ಮವನ್ನೇ ನಾಶ ಮಾಡಿದ್ದಾಗಿ ಸಂಭ್ರಮಪಡಬಹುದು. ಆದರೆ ಇಸ್ಲಾಂಗೆ ಯಾವ ಕೊಂಕೂ ತಾಗಿಲ್ಲ… (ಹಿಂದೂ ಗೆಳೆಯ ಜುಗಲ್ಗೆ) ನೀನು ನನ್ನನ್ನು ಕೊಂದಿದ್ದರೆ, ನೀನು ಸಾಯಿಸಿದ್ದು ನಿನ್ನ ಗೆಳೆಯನಾದ ಮುಮ್ತಾಜ್ ಎಂಬ ಮುಸ್ಲಿಮನನ್ನಲ್ಲ, ಒಬ್ಬ ಮನುಷ್ಯನನ್ನು ಎಂಬುದು ನಿನ್ನ ಅರಿವಿಗೆ ಬರುತ್ತಿತ್ತು. ಅಂದರೆ ಸತ್ತವನೊಬ್ಬ ಸೂಳೇಮಗನಾಗಿದ್ದರೆ ನೀನು ಅವನ `ಸೂಳೇಮಗತನ’ವನ್ನು ಕೊಲ್ಲಲು ಆಗುತ್ತಿರಲಿಲ್ಲ. ಅದೇ ರೀತಿ ನೀನು ಒಬ್ಬ ಮುಸ್ಲಿಮನನ್ನು ಕೊಂದರೂ ಅವನ ಮುಸ್ಲಿಂತನವನ್ನು ಕೊಲ್ಲಲು ಸಾಧ್ಯವಿಲ್ಲ. ಅಲ್ಲಿ ಬರೀ ಒಬ್ಬ ಮನುಷ್ಯ ಸತ್ತಿರುತ್ತಿದ್ದ….”

ಮಂಟೊನ ಮಾನವ ಪ್ರೇಮ ತೆಳು ಆದರ್ಶದ ಅಂತರಿಕ್ಷದಲ್ಲಿ ನೇತಾಡುವಂಥದಲ್ಲ. ಯಾಕೆಂದರೆ ಮಂಟೊ ಮನುಷ್ಯನ ಕ್ರೌರ್ಯದ ಎಲ್ಲೆಗಳನ್ನು ಕಂಡು ಬಂದಿದ್ದಾನೆ. ಅಂತರಾತ್ಮದ ಕಗ್ಗತ್ತಲನ್ನು ಮುಟ್ಟಿ ನೋಡಿದ್ದಾನೆ. ಎಲ್ಲ ಶ್ರೇಷ್ಠ ಬರಹಗಾರರಂತೆ ತನ್ನ ತಲೆಮಾರಿನ ಪಾಪ ಪುಣ್ಯಗಳ ಶಿಲುಬೆ ಹೊತ್ತು ನಡೆದಿದ್ದಾನೆ.

ಮಂಟೊ ಸತ್ತಾಗ ಅವನಿಗಿನ್ನೂ 43 ವರ್ಷವೂ ತುಂಬಿರಲಿಲ್ಲ. ಆದರೆ ಸ್ವತಃ ಅವನಿಗೇ ತೀರಾ ತಡವಾಯಿತು ಅನ್ನಿಸಿತ್ತು! ಯಾಕೆಂದರೆ ಮಂಟೊ ಎಲ್ಲವನ್ನೂ ನೋಡಿಯಾಗಿತ್ತು. ಅಥವಾ ಎಲ್ಲರೂ ಹೇಳುವಂತೆ “ಕಂಡುಂಡಾಗಿತ್ತು”. ಮತ್ತು ತಾನು ಕಂಡಿದ್ದಕ್ಕೆ ಅಸಾಧಾರಣ ಅಕ್ಷರ ರೂಪ ಕೊಟ್ಟಾಗಿತ್ತು.

ಅವನು ಭಾರತ ಬಿಟ್ಟು ಹೋದ ಮೇಲೆ ಲಾಹೋರಿನಲ್ಲಿ ಕಳೆದಿದ್ದು ಏಳು ವರ್ಷ. ಬಾಳಿದ್ದು ನಿರಾಶ್ರಿತನ ಬದುಕು. ಆ ಏಳು ವರ್ಷ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಅವನ ಪಾಲಿಗೆ ಅತ್ಯಂತ ದುರ್ದಮವಾದ ಕಾರ್ಪಣ್ಯದ ದಿನಗಳೂ ಹೌದು.

ವಿಪರ್ಯಾಸವೆಂದರೆ ಮಂಟೊ ತನ್ನ ಜೀವಮಾನದ ಶ್ರೇಷ್ಠತಮ ಬರವಣಿಗೆ ಸಾಧಿಸಿದ್ದೂ ಈ ಅವಧಿಯಲ್ಲೇ… ತನ್ನನ್ನು ಸುಟ್ಟುಕೊಂಡು ಬೇರೆಯವರಿಗೆ ಬೆಳಕು ಕೊಟ್ಟಂತೆ ಆನ್ನುವುದು ಮಂಟೊ ವಿಷಯದಲ್ಲಿ ಅಲಂಕಾರದ ಮಾತಲ್ಲ….
ನಮ್ಮೆರಡು ಸೋದರ ದೇಶಗಳು ಸ್ವಾತಂತ್ರ್ಯ ಗಳಿಸಿ ಅರ್ಧ ಶತಮಾನಕ್ಕೂ ಮಿಕ್ಕಿ ಕಳೆದುಹೋಗಿದೆ.

ಆದರೆ ಮಂಟೊ ಎಂಬ ಬರಹಗಾರನನ್ನು ಅಲ್ಲಾಡಿಸಿಟ್ಟ ವಿಭಜನೆಯ ಶಾಪವಿನ್ನೂ ನೀಗಿಲ್ಲ. ದುಃಸ್ವಪ್ನ ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ- ಇನ್ನಷ್ಟು ಅಯೋಧ್ಯೆಗಳು, ಗೋಧ್ರಾ- ಗುಜರಾತುಗಳು, ದತ್ತಪೀಠಗಳ ರೂಪದಲ್ಲಿ- ಹಳೇ ಸಿನಿಮಾದ ಅಚ್ಚ ಹೊಸ ಕಾಪಿಗಳಂತೆ….

ಈತ ಮಂಟೊ. ನಮ್ಮ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ನಮಗೆ ತೀರಾ ಅತ್ಯಗತ್ಯನಾದ ಲೇಖಕ. ಆ ಅಸಾಧಾರಣ ಸೃಷ್ಟಿಕರ್ತನ ಧ್ಯಾನದಲ್ಲೇ ನನ್ನ ಪುಸ್ತಕದಾಟ ಮುಗಿಸುತ್ತಿದ್ದೇನೆ.

Leave a Reply