ನಿನ್ನೆದೆಯ ಮೇಲಿನ ಕೂದಲನ್ನು ಎಣಿಸುತ್ತ..

ಮತ್ತೇನೂ ಆಸೆಯಿಲ್ಲ

ಶ್ರೀದೇವಿ ಕೆರೆಮನೆ

ಹೆಚ್ಚೇನೂ ಆಸೆಯಿಲ್ಲ ನನಗೆ
ನನ್ನೆರಡೂ ಕೈಗಳನು
ನಿನ್ನ ಹೆಗಲ ಮೇಲೆ ಬಿಸಾಡಿ
ತರಗುಟ್ಟುವ ನಿನ್ನ ಕೈಗಳು
ನನ್ನ ಸೊಂಟ ಬಳಸುವಾಗ
ಉಂಗುಷ್ಟದ ತುದಿಗೆ
ದೇಹದ ಸಮತೋಲನ ಕಾಯ್ದುಕೊಳ್ಳುತ್ತ
ಅಚ್ಚರಿಯಿಂದ ಬಾಗಿದ
ನಿನ್ನೆರಡು ಹುಬ್ಬುಗಳ ನಡುವೆ
ಊರ ಬೇಕು ಒಮ್ಮೆಯಾದರೂ
ಕಂಪಿಸುವ ನನ್ನ ಬಿಸಿ ತುಟಿಯನ್ನು
ಸಂಭ್ರಮಿಸಬೇಕು ನಿಧಾನಕ್ಕೆ ತೆರೆವ
ನಿನ್ನ ಕಣ್ಣುಗಳಲ್ಲಿ ಕಾಮನಬಿಲ್ಲಿನ
ಅಷ್ಟೂ ಬಣ್ಣಗಳು ಓಕುಳಿಯಾಡುವುದನ್ನು

ಮತ್ತೇನೂ ಬೇಕು ಅನ್ನಿಸುತ್ತಿಲ್ಲ ನನಗೆ
ನಿನ್ನೆದೆಯ ಮೇಲಿನ ಕೂದಲನ್ನು ಎಣಿಸುತ್ತ
ಕೇಳಿಸಿಕೊಳ್ಳಬೇಕು ಹೃದಯದ ಬಡಿತವನ್ನೊಮ್ಮೆ
ನೆನಪಿಸಿಕೊಳ್ಳಬೇಕು ನನ್ನದೇ ಹೆಸರೇನೆಂಬುದನ್ನು
ನಿನ್ನೆದೆಯ ವೀಣೆಯ ಆಲಾಪದಿಂದ
ನುಚ್ಚು ನೂರಾಗಬೇಕು ಕ್ಷಣ ಕ್ಷಣಕ್ಕೂ
ಬಿಗಿಯಾಗುವ ನಿನ್ನ ಬಾಹುಗಳ ನಡುವೆ

ಬೇರೇನೂ ಕೇಳಬೇಕೆನಿಸುತ್ತಿಲ್ಲ ನನಗೆ
ಅಂಟಿಸಬೇಕು ನನ್ನ ಹುಬ್ಬಿನ ಮೇಲೆ
ಸಾಲಾಗಿ ಮುತ್ತುಗಟ್ಟಿದ ಬೆವರ ಹನಿಯನ್ನು
ಒಂದೇ ಒಂದು ಸಲ ನಿನ್ನ ಬುಜಕ್ಕೆ
ಪೊದೆ ಮೀಸೆಯ ಅಡಿಯಲ್ಲಿ ಕಂಡೂ ಕಾಣದಂತೆ
ನಿನ್ನ ತುಟಿಯಂಚು ಬಿರಿದು
ನಿಟ್ಟುಸಿರ ಸೂಸುವುದನ್ನೊಮ್ಮೆ ಕಿವಿ ತುಂಬಿಕೊಳ್ಳಬೇಕು

ಮತ್ತೇನೂ ಬಯಕೆಯಿಲ್ಲ ನನಗೆ
ಮೂಡಿಸಬೇಕು ಕಡಲಂಚಿನ ಮರಳಿನಲ್ಲಿ
ಮೂಡುವ ನಿನ್ನ ಹೆಜ್ಜೆ ಗುರುತಿನ ಮೇಲೆ
ನನ್ನದೂ ಒಂದು ಹೆಜ್ಜೆ ಗುರುತು
ಮೆಲ್ಲಗೆ ನಿನ್ನ ಕೈ ಹಿಡಿದು
ಬದುಕಿನ ಹಾದಿಯನ್ನೆಲ್ಲ
ಹೀಗೇ ಸುಮ್ಮನೆ ಸವೆಸಿ ಬಿಡಬೇಕು

12 comments

 1. ಕವನ ತುಂಬಾ ಚನ್ನಾಗಿದೆ‌.

 2. ಸೊಗಸಾಗಿ ಬರೆಯುತ್ತೀರಿ
  ಸಂಗಾತಿ ಸ್ವಗತಲಹರಿ ಇದಕ್ಕೆ ಭಿನ್ನತೆ ಹೊಂದಿರಲು ಸಾಧ್ಯವಿಲ್ಲ
  ನಿಮ್ಮ ಕವಿತೆ ನನಗೊಂದು ನಶೆ
  ಅಭಿನಂದನೆಗಳು

 3. ವಾವ್ ಕಲ್ಪ‌ನೆಯ ಕಡಲಲ್ಲಿ ಸುಂದರ ಸಾಲುಗಳ ಸಂಗಮದ ಮಿಲನ ಸಾಗಲಿ ಪಯಣ

 4. ಶ್ರೀದೇವಿ ಮೇಡಂ….ನಿಮ್ಮ ಕವನ ತುಂಬಾ ಚೆನ್ನಾಗಿದೆ ನನಗೆ ನಿಮ್ಮ ಕವನ ತುಂಬಾ ಇಷ್ಠ ಆಯಿತು..ನಿಜಕ್ಕೂ ನಿಮ್ಮ ಬರವಣಿಗೆ ಸೂಪರ…ನಿಮಗೆ ಅಭಿನಂದನೆಗಳು.

 5. ಅಬ್ಬಬ್ಬಾ.. ಮತ್ತೇನು ಆಸೆಯಿಲ್ಲಾ..
  ಕವಿತೆಗೆ ಮಾಂತ್ರಿಕ ಶಕ್ತಿ ಇದೆ ಎಂಬುದನ್ನು ಈ ಕವಿತೆ ತೋರುತ್ತದೆ..ದಾಂಪತ್ಯದ ಸಹಜ ಆಸೆ, ಬಯಕೆಯನ್ನು ಸರಮಾಲೆಯಾಗಿಸಿ ತೊಡಿಸಿದ ಕಾವ್ಯ ಶೈಲಿಗೆ ಏನೆನ್ನಲಿ.. ಓದಿದೊಡನೆ ಮನವು ಕುಣಿದಾಡಿತು.
  ಕವಿತೆಯ ಆ ಮಾಂತ್ರಿಕ ಶಕ್ತಿಗೆ ಸಲಾಮ್.. ಓದಿಸುವ ಶ್ರೀ ಅವರಿಗೂ ಧನ್ಯವಾದಗಳು..

 6. ಮನಸ್ಸಿಗೆ ನೇರವಾಗಿ ಮುಟ್ಟುವಂತಿದೇ ನಿಮ್ಮ ಕವನ.

 7. ಹೇಗೆ ಮರೆಯಲಿ ಈ ಕವಿತೆಯನ್ನು , ಕವಿತೆಯಲ್ಲಿ ನನ್ನನ್ನು ನಾನೆ ಮರೆಯುವಂತಿದೆ, ನಿಮ್ಮ ಅಕ್ಷ್ರರದ ಸರಮಾಲೆ ಷೋಡಶಿಯ ಕೋರಳಲ್ಲಿನ ಮುತ್ತಿನ ಹಾರದಂತಿದೆ.

  ನಿಮ್ಮ ಕವನಗಳ ಹಿಂದಿರುವ ???????? ಅಕ್ಷರಕ್ಕೆ ಶಕ್ತಿ ಯಾವುದು ?

Leave a Reply