ಆ ‘ತೊತ್ತೋ ಚಾನ್’ ಕಿಟಕಿಯಲ್ಲಿ ನಿಂತಳು..

   

 “ಇದೇನೋ ಮಂಡಿಯ ಮೇಲೆ ಇಷ್ಟೊಂದು ದೊಡ್ಡ ಗಾಯ ಆಗಿದೆ? ಹೇಗಾಯ್ತು?” ನಾನು ಹೌಹಾರಿ ಕೇಳಿದೆ.

ಪ್ರತಿ ರಾತ್ರಿ ಕಾಲಿಗೆ ಒಂದಿಷ್ಟು ಕೊಬ್ಬರಿ ಎಣ್ಣೆ ಸವರಿ, ಚಿಕ್ಕದೊಂದು ಕಥೆ ಹೇಳಿ ಮಲಗಿಸುತ್ತೇನೆ. ಆ ದಿನ  ಕಾಲಿಗೆ ಎಣ್ಣೆ ಹಚ್ಚುವಾಗ ಕಾಲಿನ ಗಾಯ ನೋಡಿ ಕಂಗಾಲಾಗಿದ್ದೆ. ಮಂಡಿಯ ಮೇಲೆ ಅಷ್ಟು ದೊಡ್ಡ ಗಾಯವಾಗಿದ್ದರೂ ಮೊದಲಿನಂತೆ ಅಳದೇ, ಮನೆಗೆ ಬಂದ ತಕ್ಷಣ ವರದಿ ಒಪ್ಪಿಸದೇ ಸುಮ್ಮನಿರುವ ಮಗನನ್ನು ಕಂಡು ನನಗೆ ಆಶ್ಚರ್ಯ.

“ಯಾಕೋ ಮೊದಲೇ ಹೇಳಲಿಲ್ಲ? ಶಾಲೆಲಿ ಟೀಚರ್ ರಿಗೆ ಆದರೂ ಹೇಳಿದೆಯಾ? ಔಷಧ ಹಾಕಿದರಾ?” ನಾನು ಗಡಬಡಿಸಿ ಕೇಳುತ್ತಿದ್ದರೆ ಮಗರಾಯ  ಅದೇನೂ ದೊಡ್ಡ ವಿಷಯ ಅಲ್ಲೆಂಬಂತೆ “ಎಲ್ಲಿ? ಏನು ಗಾಯ ಆಗಿದೆ? “ ಕೇಳಿದ್ದ. ಗಾಯದಿಂದ ಹೊರಬಂದ ರಕ್ತ ಅಲ್ಲೇ ಹೆಪ್ಪುಗಟ್ಟಿತ್ತು. ಗಾಯಕ್ಕೆ ಯಾವ ಪ್ರಥಮ ಚಿಕಿತ್ಸೆಯನ್ನೂ ಮಾಡಿದಂತಿರಲಿಲ್ಲ. ಮುಖ್ಯವಾಗಿ ಆ ಗಾಯದ ಬಗ್ಗೆ ಮಗನಿಗೆ ಗೊತ್ತೇ ಇರಲಿಲ್ಲ. “ಕಬ್ಬಡ್ಡಿ ಆಡುವಾಗ ರೈಡಿಂಗ್ ಮಾಡಿದಾಗ ಬಿದ್ದಿದ್ದೆ. ಆಗ ಗಾಯವಾಗಿತ್ತೇನೋ…….” ನಿರಾಳವಾಗಿ ಉತ್ತರಿಸಿದ್ದ.

ಮತ್ತೆ ಗಾಯ ತೊಳೆದು ನೋಡಿದಾಗ, ಗಾಯ ಅಷ್ಟೊಂದು ಆಳವಾಗಿಲ್ಲ ಎಂಬ ಸಮಾಧಾನದೊಂದಿಗೆ ಔಷಧ ಹಾಕಿ ಮಲಗಿಸಿದ್ದೆ. “ಥೇಟ್ ಮಾವನ ಹಾಗೆ, ಗಾಯ ಆದ್ರೂ ಗೊತ್ತಾಗೋದಿಲ್ಲ.” ಎಂದು ರೇಗಿ “ಅಮ್ಮ ಕಥೆ ಹೇಳು” ಎಂದು ಒತ್ತಾಯಿಸಿದರೂ, ಕೇಳಿಸದವಳಂತೆ ಸುಮ್ಮನಾಗಿದ್ದೆ.

ನನ್ನಣ್ಣನೂ ಹಾಗೇ. ಆತ ಏಳನೆ ತರಗತಿಯಲ್ಲಿದ್ದಾಗ ಇದ್ದಿರಬಹುದು. ನಾನಾಗ ಒಂದನೇ ತರಗತಿಯಲ್ಲಿದ್ದ ನೆನಪು. ಅಂಗಿ ಹರಿದುಕೊಂಡು ಬಂದಿದ್ದಾನೆ ಎಂದು ರೇಗುತ್ತಿದ್ದ ಅಮ್ಮ ಒಮ್ಮೆಲೆ ಹೌಹಾರಿದ್ದಳು. ಅಣ್ಣನ ಬೆನ್ನಿನ ಮೇಲೆ ದೊಡ್ಡ ಗಾಯವಾಗಿತ್ತು. ಆದರೆ ಅವನಿಗೆ ಗಾಯ ಹೇಗಾಯ್ತು…. ಯಾವಾಗ ಆಯ್ತು ಎಂಬುದೇ ಗೊತ್ತಿರಲಿಲ್ಲ. ಈಗ ಮಗ ಕೂಡ ಮಾವನ ಹಾಗೆಯೇ ಮಂಡಿಯ ಮೇಲಾದ ಗಾಯ ಯಾವಾಗ ಆಗಿದ್ದು ಎಂದು ನನ್ನನ್ನೇ ಪ್ರಶ್ನಿಸುತ್ತ ತಾನು ಮಾವನ ಪ್ರತಿರೂಪ ಎಂಬುದನ್ನು ನಿರೂಪಿಸಿದ್ದ. ಆತ ಮಲಗಿದ್ದಾನೆ ಎಂದುಕೊಂಡ ನನ್ನ ಗೊಣಗಾಟ ಮುಂದುವರೆದಿತ್ತು. “ಸ್ವಲ್ಪಾನೂ ಮೈಮೇಲೆ ಪ್ರಜ್ಞೆ ಇರೋದಿಲ್ಲ. ಮಾವನ ಹಾಗೆ  ಮಾಡ್ತಾನೆ. ಏನೂ ಅರ್ಥ ಆಗೋದಿಲ್ಲ”

“ಅಮ್ಮ. ಮಾವನಿಗೆ ಹೇಳಬೇಡ. ನನಗೆ ಎಲ್ಲ ಗೊತ್ತು. ನೀನೆಷ್ಟು ಸಲ ಅಂಗಿ ಹರಿದು ಕೊಂಡು ಗಾಯ ಮಾಡ್ಕೊಂಡು ಬಂದಿರಲಿಲ್ಲ ಹೇಳು? ಅಮ್ಮಮ್ಮ  ನನಗೆ ಎಲ್ಲ ಹೇಳಿದ್ದಾಳೆ.” ಹೊದಿಕೆಯ ಅಡಿಯಿಂದ ಸಣ್ಣಗೆ ಬಂದ ಧ್ವನಿ ನನ್ನ ಬಾಯಿ ಮುಚ್ಚಿಸಿತ್ತು.

ತೀರಾ ಒಳ್ಳೆಯ, ಒಂದಿಷ್ಟೂ  ತುಂಟತನ ಮಾಡದ, ಯುನಿಫಾರ್ಮನ್ನು ಸ್ವಲ್ಪವೂ ಕೊಳೆ ಆಗದಂತೆ ಸ್ವಚ್ಛವಾಗಿ ಇಟ್ಟುಕೊಳ್ಳುವ ಅಣ್ಣನೇ  ಆಡುವ ಭರದಲ್ಲಿ ತನಗೇ ಗೊತ್ತಾಗದಂತೆ ಅಂಗಿ ಹರಿದುಕೊಂಡು, ಗಾಯ ಮಾಡಿಕೊಂಡು ಬರುತ್ತಾನೆಂದರೆ, ನನ್ನಿಂದಾಗಿಯೇ ನಮ್ಮ ಶಾಲೆ ಖೋಖೋದಲ್ಲಿ ಜಿಲ್ಲಾ ಮಟ್ಟದಲ್ಲೂ ಗೆದ್ದು, ರಾಜ್ಯಮಟ್ಟದಲ್ಲೂ ಆಡುತ್ತದೆ ಎಂಬ ವಿಪರೀತದ ಭ್ರಮೆಯಲ್ಲಿ ಇಡೀ ದಿನ ಆಟದ ಮೈದಾನದಲ್ಲೇ ಕಾಲ ಕಳೆಯುವ ನಾನು ಇನ್ನು ಅದೆಷ್ಟು ಗಾಯ ಮಾಡಿಕೊಂಡಿರಬಹುದೆಂದು ನೀವೇ ಯೋಚಿಸಿ.

ಒಂದೇ ಒಂದು ಸಲ ನೀವು ವಿ ಗಾಯತ್ರಿಯವರು ಕನ್ನಡಕ್ಕೆ ಅನುವಾದಿಸಿರುವ ಜಪಾನಿನ ತೆತ್ಸುಕೊ ಕುರೊಯಾನಾಗಿ ಬರೆದಿರುವ ತ್ತೊತ್ತೋ-ಚಾನ್ ಓದಿ ನೋಡಿ. ಈಗ ಮೇಲೆ ನಾನು ಹೇಳಿದಂತೆ ನಿಮ್ಮ ಬಾಲ್ಯದ, ಶಾಲೆಗೆ ಹೋಗುವಾಗಿನ ಎಲ್ಲಾ ಘಟನೆಗಳು ಗಿರಕಿ ಹೊಡೆದಂತೆ ನಿಮ್ಮ ಕಣ್ಣ ಮುಂದೆ ಬರದಿದ್ದರೆ ನಾನು ಈ ವಾರ  “ತೊತ್ತೊ-ಚಾನ್’ ಎಂಬ ಪುಸ್ತಕವನ್ನು ನಿಮಗೆ ರೆಕಮಂಡ್ ಮಾಡಿದ್ದಕ್ಕಾಗಿ ನಿಮ್ಮ ಮುಂದೆ ಮಂಡಿಯೂರಿ ಕುಳಿತು ಕ್ಷಮೆ ಯಾಚಿಸುತ್ತೇನೆ. ಆದರೆ ಅಂತಹ ಪ್ರಮೆಯ ಎಂದಿಗೂ ಬರಲಾರದು ಎಂಬ ದೃಢ ವಿಶ್ವಾಸ ನನ್ನಲ್ಲಿದೆ.

‘ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ’ ಎಂಬ ಅಡಿ ಬರೆಹ ಹೊತ್ತ ಪುಸ್ತಕ ಓದುತ್ತ ಹೋದಂತೆ ನಮ್ಮೊಳಗೂ ಪುಟ್ಟ ಮಗುವೊಂದು ಮಿಸುಗಾಡತೊಡಗುತ್ತದೆ. ಆಕೆ ಒಂದನೆಯ ತರಗತಿಯ ಬಾಲಕಿ. ಬೀದಿ ಬದಿಯಲ್ಲಿ ಹೋಗುವ ಸಂಗೀತಗಾರರನ್ನು ನೋಡುತ್ತ ಮಾತನಾಡಿಸುವುದೆಂದರೆ ಅವಳಿಗೆ ಅದೆಷ್ಟು ಖುಷಿಯೆಂದರೆ ತರಗತಿ ನಡೆಯುವಾಗಲೂ ಆಕೆ ಕಿಟಕಿಯ ಬದಿಯೇ ನಿಂತಿರುತ್ತಿದ್ದಳು. ಒಂದು ಸಂಗೀತಗಾರರ ಗುಂಪು ಹೋಯಿತು, ನಿನ್ನ ಜಾಗಕ್ಕೆ ಬಂದು ಕುಳಿತುಕೊ ಎಂದೇನಾದರೂ ಅವಳ ಶಿಕ್ಷಕರು ಹೇಳಿದರೆ ಆಕೆ “ಮತ್ತೊಂದು ಬ್ಯಾಂಡ್ ಸೆಟ್  ಬರಬಹುದು.ಅವರು ಹೋದದ್ದನ್ನು ಯಾರೂ ಗಮನಿಸದೇ ಹೋದರೆ ಅದೆಷ್ಟು ಅನ್ಯಾಯ” ಎಂದು ಪ್ರಶ್ನಿಸಿ ನಮ್ಮೊಳಗೆ ಒಂದು ವಿಚಿತ್ರ ಸಂವೇದನೆಯನ್ನೇ ಹುಟ್ಟುಹಾಕಿ ಬಿಡುತ್ತಾಳೆ. “ಹೊಸ ಶಾಲೆಯ ಹತ್ತಿರವೂ ಬೀದಿ ಸಂಗೀತಗಾರರು ಬರುತ್ತಾರೇನಮ್ಮಾ?’ ಎಂಬ ಅವಳ ಪ್ರಶ್ನೆ ತನಗೆ ಇಷ್ಟವಾದುದನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂಬ ನನ್ನದೇ ಮಾತನ್ನು ಧ್ವನಿಸುತ್ತಿದ್ದಾಳೇನೋ ಅನ್ನಿಸಿದ್ದು ಸುಳ್ಳಲ್ಲ.

ಬೆಳಗಿನ ಮೂರನೆಯ ಅವಧಿ. ಎಂಟನೆಯ ತರಗತಿಯ ನನಗೆ ಗಣಿತದ ತರಗತಿ. “ಯಾರ್ಯಾರು ಹೋಂ ವರ್ಕ ಮಾಡ್ಕೊಂಡು ಬರಲಿಲ್ವೋ ಅವರೆಲ್ಲ ಕ್ಲಾಸ್ ನಿಂದ ಹೊರಗೆ ನಡೀರಿ..” ಎನ್ನುತ್ತ ಗಣಿತದ ಎಂ ಜಿ ಭಟ್ ಸರ್  ಕ್ಲಾಸ್ ಗೆ ಬರುತ್ತಿದ್ದರು. ನನಗೋ ವಾರದಲ್ಲಿ ಎರಡು ಮೂರು ದಿನವಾದರೂ ಒಂದು ಅಂಕೆ ತಪ್ಪಿದರೂ, ಒಂದು ಚಿಹ್ನೆ ತಪ್ಪಿದರೂ ತಲೆ ಮೇಲೆ ಕುಕ್ಕಿಸಿಕೊಳ್ಳುವ ಆ ತರಗತಿಯಿಂದ ಹೊರಗೆ ಹೋಗಬೇಕೆನಿಸುತ್ತಿತ್ತು. ತೆಪ್ಪಗೆ ಮಾತನಾಡದೇ ಹೊರಹೋಗುತ್ತಿದ್ದೆ. ಅತ್ತ ಶಿಕ್ಷಕರು ಗಣಿತದ ಪ್ರಮೆಯಗಳನ್ನು ಹೇಳಿಕೊಡುವುದರಲ್ಲಿ ತಲ್ಲೀನವಾದಾಗ ಇತ್ತ ನಾನು ಆಟದ ಮೈದಾನಕ್ಕೆ ಹೊರಟು ಬಿಡುತ್ತಿದ್ದೆ. ಯಾಕೆಂದರೆ ಅದೇ ಅವಧಿಯಲ್ಲಿ ಹತ್ತನೆ ತರಗತಿಯವರಿಗೆ ಗೇಮ್ಸ್ ತರಗತಿ ಇರುತ್ತಿತ್ತು. ಹುಡುಗಿಯರು ನನ್ನಿಷ್ಟದ ವಾಲಿಬಾಲ್ ಆಡುತ್ತಿದ್ದರು. ಎಂಟನೆ ತರಗತಿಯವರಿಗೆ ವಾಲಿಬಾಲ್ ಆಟ ಬೇಡ ಎಂಬುದು ನಮ್ಮ ದೈಹಿಕ ಶಿಕ್ಷಕರಾದ ಜಿ ವಿ ಹೆಗಡೆಯವರ ಅಭಿಮತವಾಗಿತ್ತು. ಕೈ ಮೇಲೆ ಬಾಲ್ ಬಿದ್ದರೆ ಅತ್ತೇ ಬಿಡುವ ಎಳೆ ಹುಡುಗಿಯರನ್ನು ನಿಭಾಯಿಸುವುದು ಕಷ್ಟೆಂಬುದು ಅವರ ಯೋಚನೆ. ಆದರೆ ನಾನೋ ಹತ್ತನೆಯ ತರಗತಿಯ ಹುಡುಗಿಯರ ಜೊತೆ ಸೇರಿ ವಾಲಿಬಾಲ್ ಆಡುತ್ತಿದ್ದೆ. ತಮ್ಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಮಗಳು ಎಂಬ ಕಾರಣಕ್ಕೋ ಅಥವಾ ತಮ್ಮ ಪ್ರೀತಿಯ ನಾಗವೇಣಿ ಅಕ್ಕೋರ ಮಗಳು ಎಂಬ ಮುಲಾಜಿಗೋ ಅಂತೂ ಆ ದೊಡ್ಡ ಹುಡುಗಿಯರು ಬದಲು ಮಾತನಾಡದೇ ನನ್ನನ್ನು ತಮ್ಮ ಆಟದಲ್ಲಿ ಸೇರಿಸಿಕೊಳ್ಳುತ್ತಿದ್ದರು. ಸುಮಾರು ಒಂದು ತಿಂಗಳು  ವಾರದಲ್ಲಿ ಒಂದೆರಡು ದಿನ ನಾನು ಈ ಕಳ್ಳಾಟ ಮಾಡಿದ್ದಿರಬಹುದು. ಮನೆಯಲ್ಲಿ ಅಪ್ಪನ ಬಳಿ ಗಣಿತ ಅರ್ಥ ಆಗಲಿಲ್ಲ ಎಂದು ಹೇಳಿಸಿಕೊಳ್ಳುತ್ತಿದ್ದುದರಿಂದ ನನಗೆ ಮುಂದಿನ ತರಗತಿ ಅಷ್ಟೊಂದು ಕಷ್ಟವೆನಿಸುತ್ತಿರಲಿಲ್ಲ.

ಅದೊಂದು ದಿನ ನಮ್ಮ ಮುಖ್ಯೋಪಾಧ್ಯಾಯರಾದ ಶ್ರಿ ಆರ್ ಜಿ ಪಂಡಿತರು ಆಡುತ್ತಿದ್ದ  ನನ್ನನ್ನು ನೋಡಿ “ಎಂಟನೆ ತರಗತಿಗೆ ಯಾರ ಕ್ಲಾಸ್…?” ಎಂದು ವಿಚಾರಿಸಿ ಪ್ಯೂನ್ ಜೂಜೆಯನ್ನು ಕಳಿಸಿ ನನ್ನನ್ನು ತಮ್ಮ ರೂಮಿಗೆ ಕರೆಯಿಸಿಕೊಂಡರು.

ಗಣಿತ ಕ್ಲಾಸ ಬಿಟ್ಟು ಹೊರಗೆ ಆಟ ಆಡ್ತಿರೋದ್ಯಾಕೆ?

ಸರ್ ನನ್ನನ್ನು ಕ್ಲಾಸಿಂದ ಹೊರಗೆ ಹಾಕಿದರು.

ಯಾಕೆ?

ಗೊತ್ತಿಲ್ಲ.

ನೀನು ಕೇಳಲಿಲ್ವಾ?

ಇಲ್ಲ.

ಇದೇನೆಂದೇ ಅರ್ಥ ಆಗದ ಪಂಡಿತ್ ಸರ್ ನನ್ನನ್ನೂ ಕರೆದುಕೊಂಡು ಕ್ಲಾಸ್ ಗೆ ಬಂದರು. ಹೊರಗಡೆ ಮತ್ತೂ ನಾಲ್ಕಾರು ವಿದ್ಯಾರ್ಥಿಗಳು ನಿಂತಿದ್ದರು. ಮುಖ್ಯೋಪಾಧ್ಯಾಯರಿಗೆ ಬೇಸರ. ಮಕ್ಕಳನ್ನು ಹೊರ ಹಾಕಿದರೆ ಅವರು ಆ ತರಗತಿಯಲ್ಲಿ ಕಲಿಸಿದ್ದನ್ನು ಕಲಿಯೋದಾದರೂ ಹೇಗೆ ಎಂಬ ಆತಂಕ.

‘ಭಟ್ಟರೆ, ಈ ಮಕ್ಕಳ್ಯಾಕೆ ಹೊರಗೆ ನಿಂತಿದ್ದಾರೆ?’

‘ಹೋಂವರ್ಕ ಮಾಡಲಿಲ್ಲ ಅಂತಾ ಹೊರ ಹಾಕಿದ್ದೆ.’

‘ಹೊ ರಹಾಕಿದರೆ ಇವತ್ತಿನ ಪಾಠ ಹೇಗೆ ಕಲಿತಾರೆ?’  ಮುಖ್ಯೋಪಾಧ್ಯಾಯರು ಒಂದಿಷ್ಟು ಕೋಪದಲ್ಲಿ ಪ್ರಶ್ನಿಸಿದರು. “ಅದಾದರೂ ಹೊಗಲಿ, ಹೊರ ಹಾಕಿದ ಮೇಲೆ ಮಕ್ಕಳು ಏನು ಮಾಡ್ತಾರೆ ಅಂತಾನಾದ್ರೂ ನೋಡಬಾರದಾ? ಕೆರೆಮನೆ ಮಾಸ್ತರ್ ಮಗಳು ಗ್ರೌಂಡ್ ನಲ್ಲಿ ವಾಲಿಬಾಲ್ ಆಡ್ತಿದ್ದಾಳೆ. ಗಮನಿಸಬಾರದಾ?” ಎನ್ನುತ್ತ ನನ್ನನ್ನು ಹಾಗೂ ಹೊರಗೆ ನಿಂತಿದ್ದ ಇತರ ಮಕ್ಕಳನ್ನು ಒಳಹೋಗಲು ಹೇಳಿದರು. ಒಳ ಹೋದದ್ದೇ ಗಣಿತದ ಸರ್ ಎಲ್ಲರೂ ಬೇಂಚ್ ಮೇಲೆ ನಿಲ್ಲಿ ಎಂದಾಗ “ನನ್ನ ಹೋಂವರ್ಕ ಆಗಿದೆ ಸರ್” ಎಂದು ಕುಳಿತುಕೊಂಡಿದ್ದೆ. ಅವರ ತರಗತಿಯನ್ನು ತಪ್ಪಿಸಿಕೊಳ್ಳಲೆಂದು ಹೋಂವರ್ಕ ಆಗಿಲ್ಲ ಎಂದು ಸುಳ್ಳು ಹೇಳಿದ್ದೇನೆಂದು ಅರ್ಥವಾದ ನಂತರ  ಸರ್ ಎಷ್ಟು ಕೋಪಗೊಂಡಿದ್ದರೆಂದರೆ ಮಾರನೆಯ ದಿನ ನಾನು ಅಪ್ಪನನ್ನು ಕರೆದುಕೊಂಡು ಶಾಲೆಗೆ ಹೋಗಬೇಕಾಯಿತು. ಬೈಯ್ಯದ, ಹೊಡೆಯದ ಆದರೆ ಕಣ್ಣಲ್ಲೇ ಕೆಂಡದಂತಹ ಕೋಪ ತೋರಿಸುವ ಅಪ್ಪ ನನ್ನ ಎಡವಟ್ಟುತನಕ್ಕೆ ಶಿಕ್ಷಕರೆದುರು ನಗಲೂ ಆಗದೇ ಮನೆಗೆ ಬಂದು ಅಮ್ಮನೆದುರು ಮನಸಾರೆ ನಕ್ಕಿದ್ದರು. ‘ನಿಮ್ಮ ಮುದ್ದಿನಿಂದಲೇ ಹೀಗಾಗಿದ್ದು’ ಅಮ್ಮ ರೇಗಿದರೆ, ‘ನಾನೇನಾದರೂ ಹೀಗೆ ಮಾಡಿದ್ದರೆ ವಾಯರ್ ನಿಂದ ಏಟು ಬೀಳುತ್ತಿತ್ತು.’ ಅಣ್ಣ ಗೊಣಗಿದ್ದ, “ಒಂದಿಷ್ಟು ದಿನ, ನಂತರ ಅವಳೇ ಸರಿಯಾಗ್ತಾಳೆ. ಈ ಆಟ ಅವಳಿಗೇ ಬೇಸರ ಬರುತ್ತದೆ”. ಅಪ್ಪ ನಗುತ್ತಲೇ ಹೇಳಿದ್ದರು.

ಇಲ್ಲಿ ತೊತ್ತೋ-ಚಾನ್ ಕೂಡ ಹಾಗೆಯೇ. ಡೆಸ್ಕ್ ನ್ನು ತೆಗೆದು ಹಾಕುವ ಖುಷಿಯಲ್ಲಿ ಇಡೀ ದಿನ ಅದೇ ಕೆಲಸ ಮಾಡುತ್ತಿದ್ದಳು. ಆದರೆ ಅದು ಇಡೀ ತರಗತಿಗೆ ತೊಂದರೆ ಕೊಡುತ್ತಿದೆ ಎಂದು ಅವಳ ವರ್ಗ ಶಿಕ್ಷಕಿ, ಅವಳ ಅವಾಂತರಗಳನ್ನೆಲ್ಲ ಪಟ್ಟಿ ಮಾಡಿದ್ದಳು. ಶಾಲೆಯ ಕಿಟಕಿಯ ಹೊರಗಿರುವ ಗುಬ್ಬಚ್ಚಿಯೊಂದಿಗೆ ಮಾತನಾಡುವುದು, ಚಿತ್ರ ಬಿಡಿಸುವ ಉಮ್ಮೇದಿಯಲ್ಲಿ  ಡೆಸ್ಕಿನ ಮೇಲೆಲ್ಲ ಕ್ರೇಯಾನ್ಸ್ ನಿಂದ ಬಣ್ಣ ಮಾಡಿದ್ದು ಹೀಗೆ ಮುಗ್ಧ ಮಗುವಿನ ಸಹಜ ತುಂಟಾಟಗಳೇ ಅವಳನ್ನು ಶಾಲೆಯಿಂದ ಹೊರಹಾಕಲು ಬೇಕಾದ ಘೋರ ಅಪರಾಧವನ್ನಾಗಿಸಲಾಗಿತ್ತು. ಆದರೆ ಅವಳನ್ನು ಆ ಶಾಲೆಯಿಂದ ಹೊರಹಾಕಿದ್ದು ಎಷ್ಟು ಒಳ್ಳೆಯದಾಯಿತೆಂದರೆ ತೊತ್ತೋ-ಚಾನ್ ಗೆ ತೊಮೊಯೆಯಂತಹ ಅದ್ಭುತ ಶಾಲೆಯಲ್ಲಿ ಕಲಿಯುವ ಅದೃಷ್ಟ ಒದಗಿ ಬಂದಿತ್ತು.

ತೊಮೊಯೆ ಎಂತಹ ಅದ್ಭುತ ಶಾಲೆಯಾಗಿತ್ತೆಂದರೆ ಆ ಶಾಲೆಯಲ್ಲಿ ಕಲಿತ ಯಾವ ಮಗುವು ತನ್ನ ಜೀವನದ ಪ್ರತಿ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳದೇ ಇರಲು ಸಾಧ್ಯವೇ ಇರಲಿಲ್ಲ. ಈಗಂತೂ ಮಗುವನ್ನು ಶಾಲೆಗೆ ಹಾಕಬೇಕೆಂದರೆ ಮಗುವಷ್ಟೇ ಅಲ್ಲ, ಅದರ ಅಪ್ಪ ಅಮ್ಮನೂ ವಿಶ್ವಕೋಶವನ್ನೇ ಅರೆದು ಕುಡಿಯಬೇಕಾದ ಸನ್ನಿವೇಶ ಇರುವಾಗ ಮಗವನ್ನು ಮಾತನಾಡಲು ಹೇಳಿ ನಾಲ್ಕುಗಂಟೆಗಳ ಕಾಲ ಪುಟ್ಟ ಮಗುವಿನ ಮಾತಿಗೆ ಕಿವಿಯಾದ ಮುಖ್ಯೋಪಾಧ್ಯಾಯರಾದ ಕೊಬಾಯಾಶಿ ಸಧ್ಯದ ಪರಿಸ್ಥಿತಿಯಲ್ಲಿ ಪ್ರಸ್ತುತ ಎನ್ನಿಸಿಕೊಳ್ಳುತ್ತಾರೆ.

ನನ್ನ ಮಗ ಚಿಕ್ಕವನಿರುವಾಗ ಎಷ್ಟು ಪ್ರಶ್ನೆ ಕೇಳುತ್ತಿದ್ದ  ಎಂದರೆ ನಾನು ಉತ್ತರಿಸುವಷ್ಟು ಉತ್ತರಿಸಿ ಕೊನೆಗೆ ಏನಾದರೂ ಹೇಳಿ ಆತನ ಬಾಯಿ ಮುಚ್ಚಿಸುತ್ತಿದ್ದೆ. ಬೆಳ್ತಂಗಡಿಯಿಂದ ಅಂಕೋಲಾಕ್ಕೆ  ಬರುವ ಆ ಸುದೀರ್ಘ ಸಮಯ ನನ್ನ ಪಾಲಿಗೆ ಪ್ರಶ್ನೆಗಳ ಕೋಟೆಯಲ್ಲಿ ಸಿಲುಕಿಕೊಂಡಂತೆ ಎನ್ನಿಸುತ್ತಿತ್ತು. ಹೀಗಿರುವಾಗ ಪುಟ್ಟ ಮಗುವಿನ ಮಾತನ್ನು ಎಡಬಿಡದೇ ನಾಲ್ಕುಗಂಟೆ ಕೇಳಿದ ಕೊಬಾಯಾಶಿಯವರಂತಹ ಪ್ರೇಮಮಯಿ ಶಿಕ್ಷಕರಿದ್ದರೆ ಮಾತ್ರ ಶಾಲೆ ಎಂಬುದು ಕಟ್ಟು ಹಾಕಿದ ಜೈಲಿನಂತಾಗದೇ ಖುಷಿ ನೀಡುವ ಕೇಂದ್ರವಾಗುತ್ತದೆ.

ಶಿಕ್ಷಕರ ವಾತ್ಸಲ್ಯದ ಬಗ್ಗೆ ಹೇಳುವಾಗಲೆಲ್ಲ ನನಗೆ ನೆನಪಾಗುವುದು ನನ್ನ ಮಗನ ಕಲ್ಪನಾ ಮಿಸ್. ಒಂದು ದಿನ ನಾನು ಶಾಲೆಯಲ್ಲಿರುವಾಗಲೇ ಮಗನ  ಶಾಲೆಯಿಂದ ಫೋನ್ ಬಂತು. “ಸುಪ್ರಿತ್ ಗೆ ಜೋರು ಜ್ವರ. ಬಂದು ಕರೆದುಕೊಂಡು ಹೋಗಿ.” ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಒಪ್ಪಿಗೆ ಪಡೆದು ಮಗನ ಶಾಲೆಗೆ ಬಂದರೆ  ಆತ ಎಲ್ಲೂ ಕಾಣುತ್ತಿಲ್ಲ. ಅವನ ವರ್ಗ ಶಿಕ್ಷಕಿ ನೆಲದ ಮೇಲೆ ಕುಳಿತು ಮಕ್ಕಳಿಗೆ ಯಾವುದೋ ಕಥೆ ಹೇಳುತ್ತಿದ್ದಾರೆ. ನನ್ನನ್ನು ಕಂಡವರೇ ‘ಬನ್ನಿ ಮೇಡಂ’ ಎಂದು ಕುಳಿತಲ್ಲಿಂದಲೇ ಹೇಳಿದರು. “ಸುಪ್ರಿತ್ ಎಲ್ಲಿ?” ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೇ ಎಂಬ ಆತಂಕ ನನಗೆ. ತಮ್ಮ ಸೆರಗನ್ನು ಹೊದಿಸಿ  ಮಡಿಲಲ್ಲಿ ಮಲಗಿಸಿಕೊಂಡ ಮಗನನ್ನು ತೋರಿಸಿದಾಗಲೇ ನನಗೆ ಸಮಾಧಾನವಾಗಿದ್ದು. “ಚಳಿ ಚಳಿ ಎನ್ನುತ್ತಿದ್ದ. ಹೊದೆಸುವುದಕ್ಕೆ ಏನೂ ಇರಲಿಲ್ಲ. ಅದಕ್ಕೆ ಸೆರಗನ್ನೇ ಹೊದೆಸಿದೆ’ ಎಂದಿದ್ದರು. ನನಗಾಗ ಅವರೊಳಗೊಂದು ಅದ್ಭುತವಾದ ತಾಯಿಯ ದರ್ಶನವಾಗಿತ್ತು.

ಆ ಶಾಲೆಯಲ್ಲಿ ಚಿಕ್ಕಮಕ್ಕಳಿಗೆ ಹನ್ನೊಂದು ಗಂಟೆಯ ಸುಮಾರಿಗೆ ಒಂದಿಷ್ಟು ತಿಂಡಿ ತಿನ್ನಬಹುದಿತ್ತು. ಮನೆಯಲ್ಲೇ ಮಾಡಿದ ದೋಸೆ, ಇಡ್ಲಿ, ಕಾಳಿ ತಿಂಡಿ ತನ್ನಿ. ಹೊಟೇಲ್ ತಿಂಡಿ ಬೇಡ ಎಂದೇ ಹೇಳುತ್ತಿದ್ದರು. ಅವರು ಅಂತಹ ಪ್ರೀತಿ ತೋರಿಸುವುದರಿಂದಲೇ ಒಂದು ದಿನ ನನ್ನ ಮಗ ಮಿಸ್, ಜಾಮ್ ಖಾಲಿ ಆಯ್ತು, ಜಾಮ್ ಹಾಕಿ ಎಂದಿದ್ದ. ಥೇಟ್ ನನ್ನ ಬಳಿ ಹಠ ಹಿಡಿದಂತೆ. ಈಗಲೂ ಕಲ್ಪನಾ ಮಿಸ್ ಎಂದರೆ ನನ್ನ ಇಬ್ಬರೂ ಮಕ್ಕಳಿಗೆ ಅದೇನೋ ಮಮತೆ. ಇಂತಹ ಶಿಕ್ಷಕರು ಜೀವಮಾನವಿಡೀ ಮಕ್ಕಳ ನೆನಪಿನಲ್ಲಿ ಉಳಿಯುತ್ತಾರೆ ಕೊಬಾಯಾಶಿಯವರಂತೆ.

ಹೀಗಾಗಿಯೇ ತೊಮೊಯೆದಲ್ಲಿನ ಸ್ವಲ್ಪ ನೆಲದ್ದು, ಸ್ವಲ್ಪ ಜಲದ್ದು ಇರುವ ಮಧ್ಯಾಹ್ನದ ಊಟ, ಕುಹೋನಬುತ್ಸು ದೇವಸ್ಥಾನಕ್ಕೆ ಹೋಗುವ ವಾಕಿಂಗ್, ಬಿಸಿ ನೀರಿನ ಬುಗ್ಗೆಯ ಪ್ರವಾಸ ಅಥವಾ ಶಾಲೆಯ ಸಭಾಂಗಣದಲ್ಲೇ ನಿರ್ಮಿಸಿದ ಕ್ಯಾಂಪ್ ಟೆಂಟ್ , ಸಂಗೀತದ ವ್ಯಾಯಾಮ ಎಲ್ಲವೂ ಈ ಮಕ್ಕಳಿಗೆ ಹೊಸ ಅನುಭವದ ತಿಜೋರಿಯನ್ನೇ ಅವರೆದುರಿಗೆ ತೆರೆದಿಟ್ಟಿತ್ತು.

ಮಕ್ಕಳ ಪ್ರತಿ ನಾಡಿ ಮಿಡಿತವನ್ನು ಅರಿತಿದ್ದ ಕೊಬಾಯಾಶಿಯವರು ತಮ್ಮ ಸಂಪರ್ಕಕ್ಕೆ ಬಂದ ಮಕ್ಕಳನ್ನು ಚಿನ್ನವನ್ನಾಗಿಸುವ ಸ್ಪರ್ಶಮಣಿ ಇದ್ದಂತೆ. ಹೀಗಾಗಿಯೇ ಯಾಸುಕಿ ಯಾಮಾಮೋತೊ ಮತ್ತು ತಾಕಾಹಾಶಿಯಂತಹ  ಅಂಗವಿಕಲರಲ್ಲಿ ಆತ್ಮವಿಶ್ವಾಸ ತುಂಬಿ ಅವರೂ ಕೂಡ ಸಾಮಾನ್ಯರಂತೆ ಇರಲು ಅನುವು ಮಾಡಿಕೊಡುತ್ತಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅವರಿಗೆ ಅನುಕೂಲವಾಗುವಂತಹ ಆಟಗಳನ್ನೇ ಕ್ರೀಡಾಕೂಟದಲ್ಲಿ ಆಯೋಜಿಸುತ್ತಿದ್ದರು.

ನಮ್ಮ ಶಾಲೆಗೆ ಈ ವರ್ಷ ಒಬ್ಬ ಹುಡುಗ ಬಂದಿದ್ದಾನೆ. ಕೈ ಕಾಲು, ತಲೆ, ಕುತ್ತಿಗೆ, ಬೆರಳುಗಳು  ಕೊನೆಗೆ ಆತನ ದವಡೆ ಕೂಡ ಅಲ್ಲಾಡುತ್ತಲೇ ಇರುತ್ತದೆ. ಮೊದಲನೇ ದಿನ ಆತ ಪ್ರಾರ್ಥನೆಗೆ ನಿಂತಾಗ ಇವನೇನೋ ತಮಾಷೆ ಮಾಡುತ್ತಿದ್ದಾನೆ ಎಂದೇ ನಾನು ಭಾವಿಸಿದ್ದೆ. ಪ್ರಾರ್ಥನೆ ಮುಗಿದ ತಕ್ಷಣ  ಕ್ಷೀರ ಭಾಗ್ಯದ ಹಾಲನ್ನು ಕುಡಿಯಲು ಓಡುತ್ತಿದ್ದವನನ್ನು ತಡೆದು ಕರೆದುಕೊಂಡು ಬರಲು ತಿಳಿಸಿದೆ. ಆತ ಹತ್ತಿರ ಬಂದಾಗಲೇ ಗೊತ್ತಾಗಿದ್ದು ಆತನಿಗೆ ಏನೋ ತೊಂದರೆ ಇದೆ ಎನ್ನುವುದು. ರಾಷ್ಟ್ರಗೀತೆ ಹಾಡುವಾಗ ನೆಟ್ಟಗೆ ನಿಲ್ಲೋಕಾಗೋದಿಲ್ವಾ ಎಂದು ಬೈಯ್ಯಲು ಬಾಯಿ ತೆಗೆದವಳು ಯಾಕೆ ಹೀಗೆ, ಯಾವಾಗಿನಿಂದ ಹೀಗೆ ಎಂದೆಲ್ಲ ವಿಚಾರಿಸಿದೆ. ಚಿಕ್ಕಂದಿನಿಂದಲೇ ಈ ತೊಂದರೆ ಅನುಭವಿಸುತ್ತಿರುವ ಈ ಹುಡುಗನ ಪಾಡು ಏನಿರಬಹುದು ಎಂದು ಯೋಚಿಸಿದಾಗ ಭಯವಾಗಿದ್ದು ಸುಳ್ಳಲ್ಲ. ಆದರೆ ಕೊಬಾಯಾಶಿಯವರು ಇಂತಹ ಮಕ್ಕಳನ್ನು ಅದೆಷ್ಟು ಆಪ್ಯಾಯತೆಯಿಂದ ಕಾಣುತ್ತಿದ್ದರು ಎಂಬುದನ್ನು ತೆತ್ಸುಕೊ ಕುರೊಯಾನಗಿ ಹೇಳಿದ್ದಾರೆ.

ಪುಸ್ತಕದಲ್ಲಿ ಒಂದು ಕಡೆ ತೆತ್ಸುಕೊ ಕುರೊಯಾನಾಗಿ ತಾವು ಯಾಸುಕಿ-ಚಾನ್ ನ್ನು ತಮ್ಮ ಮರ ಹತ್ತಿಸಿದ ಸಾಹಸದ ಕಥೆ ಹೇಳುತ್ತಾರೆ. ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ಶಾಲೆಯ ಹಿಂದಿದ್ದ ಬೇಣದ ಒಂದೊಂದು ಮರವನ್ನು ನಮ್ಮದೆಂದು ಗಟ್ಟಿ ಮಾಡಿಕೊಂಡಿದ್ದೆವು. ನನ್ನ ಪಾಲಿಗೆ ಒಂದು ಗೇರು ಗಿಡ ಬಂದಿತ್ತು. ಅಕ್ಟೋಬರ್ ರಜೆಯ ನಂತರ ದಿನಕ್ಕೆ ಒಮ್ಮೆಯಾದರೂ ಆ ಮರವನ್ನು ಹತ್ತದಿದ್ದರೆ ನಮಗೆ ಸಮಾಧಾನವೇ ಇರುತ್ತಿರಲಿಲ್ಲ.

ನಾನು ನಾಲ್ಕನೆ ತರಗತಿಯಲ್ಲಿದ್ದಾಗ ಒಂದು ದಿನ ವಾರ್ಷಿಕ ಪರೀಕ್ಷೆಯನ್ನೂ ಮುಗಿಸಿ ಬೆಟ್ಟ ಬ್ಯಾಣ ತಿರುಗುತ್ತಿದ್ದ ಸಂದರ್ಭದಲ್ಲಿ ನಮ್ಮ ಕ್ಲಾಸಿನ ಜಗದೀಶನ ಮರ ಹತ್ತಲು ಹೋಗಿದ್ದೆ. ಅದೊಂದು ಮಾವಿನ ಮರ. ಬೇಗನೇ ಅಡ್ಡ ರೆಂಬೆಗಳೇನೂ ಸಿಗದ ದಪ್ಪವಾದ, ನೀಳವಾದ ಮರ. ಜಗದೀಶನೇನೋ ಸರಸರನೆ ಮರ ಹತ್ತಿ ಬಿಟ್ಟಿದ್ದ. ಆದರೆ ನಾನು  ಮೇಲೆ ಹತ್ತುವಷ್ಟರಲ್ಲಿ ಒದ್ದಾಡಿ ಹೋಗಿದ್ದೆ. ಎತ್ತರದ ಮರದಿಂದ ಸುತ್ತಲೂ ನೋಡುವ ಕುಂಟು ಆಸೆಗೆ ಒಳಗಾಗಿ ಇಳಿಯಲೂ ಒದ್ದಾಡುವಂತಹ ಮರವನ್ನು ಹತ್ತಿಯಾಗಿತ್ತು. ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಸ್ನೇಹಿತರು “ಹೆಡ್ ಮಾಸ್ತರ್ ಬಂದ್ರು’ ಎಂದು ಪಿಸುಗುಟ್ಟುತ್ತ ಮರ ಇಳಿದು ತುಂಬಾ ಸಂಪನ್ನರಂತೆ ಕುಳಿತಿದ್ದರು. ನಾನೋ ಅವರ ಹೆಡ್ ಮಾಸ್ತರ್ ಆಗಿದ್ದ ನನ್ನ ಅಪ್ಪ ನಾನು ಮರ ಹತ್ತಿದ್ದನ್ನೇನಾದರೂ ನೋಡಿದರೆ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆಂದು ಮೇಲಿಂದಲೇ ಕೆಳಗೆ ಹಾರಿಬಿಟ್ಟಿದ್ದೆ. ಮನೆಯಲ್ಲಿ ಒಂದಿಷ್ಟೂ ಬೈಯ್ಯದ ನನ್ನಪ್ಪ ಶಾಲೆಯಲ್ಲಿ ಮಾತ್ರ ನನ್ನ ತರಗತಿಯ ಯಾವ ಮಕ್ಕಳು ತಪ್ಪು ಮಾಡಿದರೂ ಮೊದಲು ನನಗೇ ಹೊಡೆಯುತ್ತಿದ್ದರು.

ಕೆಳಗೆ ಹಾರಿದ ರಭಸಕ್ಕೆ ಅಡ್ಡಾದಿಡ್ಡ ಬಿದ್ದು ಅಲ್ಲೆಲ್ಲೋ ಇದ್ದ ಗಾಜಿನ ಚೂರು ಎಡಗಾಲಿನ ಪಾದಕ್ಕೆ ಮೇಲ್ಬಾಗದಿಂದ ಚುಚ್ಚಿತ್ತು. ಚುಚ್ಚಿದ ನೋವು ಒಂದೆಡೆ, ಧಾರಾಕಾರವಾಗಿ ಹರಿಯುವ ರಕ್ತ ಇನ್ನೊಂದೆಡೆ, ಮತ್ತೊಂದು ಕಡೆ ನಮ್ಮ  ಬಳಿಯೇ ಬರುತ್ತಿದ್ದ ಅಪ್ಪ. ಹೀಗಾಗಿ ಮುಖದಲ್ಲಿ ಒಂದಿಷ್ಟೂ ನೋವನ್ನು ಕಾಣಿಸದಂತೆ ಸುಮ್ಮನೆ ಕುಳಿತು ಬಿಟ್ಟಿದ್ದೆ. ನಾವೇನೂ ತುಂಟತನ ಮಾಡುತ್ತಿಲ್ಲ ಎಂದು ಕನ್ಫರ್ಮ್ ಮಾಡಿಕೊಂಡಂತೆ ಅಪ್ಪ ಅಲ್ಲಿಂದ ಹೊರಟಾಗ ನನ್ನ ಅಳು ನಿಧಾನಕ್ಕೆ ಹೆಚ್ಚಾಗುತ್ತಿತ್ತು.

ಗೆಳತಿಯರಂತೂ ಮುಟ್ಟಿದರೆ ಮುನಿ, ಲಂಟಾನಾ, ಪಾರ್ಥೇನಿಯಂ ಹೀಗೆ ಏನೇನೋ ಸೊಪ್ಪಿನ ರಸ ಹಿಂಡಿ ರಕ್ತ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿರುವ ಆಸ್ಪತ್ರೆಗೆ ಹಿಂಬಾಗಿಲಿನಿಂದ ಹೋಗಿ, ಡಾಕ್ಟರ್ ರಿಗೆ ಹೇಳದೇ ಕಂಪೌಂಡರ್ ಜನಾರ್ಧನನ ಬಳಿಯೇ ಔಷಧ ಹಾಕಿಸಿಕೊಳ್ಳೋಣ ಎಂದರೆ ಗಾಯದ ಆಳ ನೋಡಿ ಆತ ಡಾಕ್ಟರ್ ರನ್ನು ಕರೆದು ಬಿಟ್ಟಿದ್ದ. ಡಾಕ್ಟರ್ ತಕ್ಷಣ ಅಪ್ಪನನ್ನು ಕರೆಯಿಸಿ “ಸರ್, ಗಾಜು ಚುಚ್ಚಿದ್ದು, ಜೋಪಾನವಾಗಿ ನೋಡಿಕೊಳ್ಳಿ” ಎಂದಿದ್ದರು.

ಒಂದೂ ಮಾತನಾಡದೆ ಅಪ್ಪ ಆ ದಿನ ತಾನೇ ಊ ಟ ಮಾಡದೆ ನನ್ನ ಶಿಕ್ಷೆಯನ್ನು ತಾನು ಅನುಭವಿಸಿದ್ದು ನನಗೀಗಲೂ ನಿನ್ನೆ ಮೊನ್ನೆ ನಡೆದ ಘಟನೆಯೋ ಎಂಬಂತೆ ನೆನಪಿದೆ. ಈಗಲೂ ಎಡಗಾಲಿನ ಪಾದದ ಮೇಲ್ಭಾಗದಲ್ಲಿರುವ ಗಾಯದ ಗುರುತು ನನಗೆ ಇದನ್ನು ಆಗಾಗ ನೆನಪಿಸುತ್ತಲೇ ಇರುತ್ತದೆ. ತೊತ್ತೊ-ಚಾನ ಯಾಸುಕಿ-ಚಾನ್ ನನ್ನು ಮರ ಹತ್ತಿಸುವ ಸಾಹಸವನ್ನು ಓದಿದಾಗ ನನಗೆ ಮತ್ತದೇ ಘಟನೆ ನೆನಪಾಗಿ ಚಿಕ್ಕವರಿರುವಾಗ ಅಪ್ಪ ಅಮ್ಮನಿಗೆ ಹೇಳದೇ ಮಾಡುವ ಅದೆಷ್ಟು ತುಂಟತನಗಳು ಇರುತ್ತವಲ್ಲ ಎನ್ನಿಸಿ, ಈಗ ನಮ್ಮ ಮಕ್ಕಳಿಗೆ ಮಾತ್ರ  ವಿಪರೀತದ ಕಟ್ಟುಪಾಡು ಹಾಕುತ್ತಿರುವ ಕುರಿತು ನಾಚಿಕೆಯಾಯ್ತು.

ಯಾವುದನ್ನೂ ಮಾಡಬೇಡ ಎನ್ನುವ ನಿಷೇಧದ ಮಾತು ಕೊಬಾಯಾಶಿಯವರ ಬಾಯಿಂದ ಬರುತ್ತಲೇ ಇರಲಿಲ್ಲ.ತನ್ನ ಪ್ರೀತಿಯ ಪರ್ಸ ಕಕ್ಕಸು ಗುಂಡಿಯಲ್ಲಿ ಬಿತ್ತು ಎನ್ನುವ ಕಾರಣಕ್ಕಾಗಿ ಇಡೀ ಕಕ್ಕಸು ಗುಂಡಿಯನ್ನು ಎತ್ತಿ ಮೇಲೆ ಹಾಕಿದರು ಮತ್ತೆ ಒಳಗೆ ತುಂಬಿಸುತ್ತೀಯಲ್ಲವೇ ಎಂದಷ್ಟೇ ಕೇಳಿದ ಮುಖ್ಯೋಪಾಧ್ಯಾಯರು, ಒಂದು ಅದ್ಭುತ ಪಾಠವನ್ನೇ ಅವಳಿಗೆ ಕಲಿಸಿದ್ದರು. ಹೀಗಾಗಿಯೇ ಬಿಸಿ ನೀರಿನ ಬುಗ್ಗೆ ನೋಡಲು ಹೋದ ತೊತ್ತೋ-ಚಾನ್ ಳನ್ನು ಹೊರಹಾಕಿದ ಹಿಂದಿನ ಶಾಲೆಯ ಶಿಕ್ಷಕಿ ನೋಡಿದ್ದರೆ ಅವಳಲ್ಲವೇ ಅಲ್ಲ ಎನ್ನುವಷ್ಟು  ವಿಧೇಯಳಾಗಿದ್ದಳು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಯುದ್ಧ ಕಾಲದಲ್ಲಿ ಬಾಂಬ್ ಗೆ ಆಹುತಿಯಾದ ತೊಮೊಯೆ ಒಂದು ಸುಂದರ ನೆನಪು. ಮಕ್ಕಳ  ಒಳಗನ್ನು ಸಂಪೂರ್ಣವಾಗಿ ಅರಳಿಸುವ ಅಂತಹುದ್ದೊಂದು ಶಾಲೆ ಎಲ್ಲಡೆಯೂ ಬೇಕು. ಅಥವಾ ಎಲ್ಲಾ ಶಾಲೆಗಳೂ ಇಂತಹುದ್ದೇ ಶಾಲೆಗಳಾಗಬೇಕು. ಶಾಂತಿನಿಕೇತನವನ್ನು ಸ್ಥಾಪಿಸಿದಾಗ ರವೀಂದ್ರನಾಥ ಟಾಗೋರರ ಮನದಲ್ಲಿದ್ದದ್ದೂ ಇಂತಹುದ್ದೇ ಒಂದು ಅದ್ಭುತ ವಿಚಾರ.

ಜಡೆ ಹಾಕಿಕೊಂಡು ಬಂದ ತೊತ್ತೋ-ಚಾನ್ ಜಡೆಯನ್ನು ಓಯಿ ಎಳೆದಾಗ ಕೊಬಾಯಾಶಿಯವರು ಹೆಣ್ಣಿನ ಜೊತೆ ನಯವಾಗಿ ನಡೆದುಕೊಂಡು ಒಳ್ಳೆಯವನಾಗಿರಬೇಕು ಎಂದ ಮಾತು ಅದೆಷ್ಟು ಅರ್ಥಪೂರ್ಣ. ಜಗತ್ತಿನ ಎಲ್ಲಾ ಶಿಕ್ಷಕರೂ ತಮ್ಮಲ್ಲಿರುವ ಗಂಡು ಮಕ್ಕಳಿಗೆ ಇಂತಹುದ್ದೊಂದು ವಿವೇಕವನ್ನು ಬಾಲ್ಯದಲ್ಲೇ ತುಂಬಿದರೆ ಅದೆಷ್ಟೋ ಸ್ತ್ರೀಯರ ಪಾಲಿಗೆ ಈ ಜಗತ್ತು ನಂದನವನವಾಗುತ್ತಿತ್ತು ಎಂಬ ಆಸೆ ನನ್ನಲ್ಲಿ.

ಬಿ-29 ಎಂಬ ಯುದ್ಧ ವಿಮಾನವು  ತೊಮೊಯೆ ಮೇಲೆ ಬಾಂಬ ದಾಳಿ ನಡೆಸಿ ಅದನ್ನು ನಾಶ ಮಾಡಿದಾಗ ಅಲ್ಲಿಯೇ ನಿಂತು ನೋಡುತ್ತಿದ್ದ ಕೊಬಾಯಾಶಿಯವರು “ಮುಂದೆ ನಾವು ಎಂತಹ ಶಾಲೆಯನ್ನು ಕಟ್ಟೋಣ….?” ಎಂದು ಕೇಳುತ್ತ ತಮ್ಮ ನೋವು ನುಂಗಿ  ಮಕ್ಕಳನ್ನು ಹುರಿದುಂಬಿಸುವ ದೃಶ್ಯಕಾವ್ಯ ಎಂದೆಂದಿಗೂ ಓದುಗರ ಮನಸ್ಸಿನಿಂದ ಮರೆಯಾಗಲು ಸಾಧ್ಯವಿಲ್ಲ.

ಬದುಕಿನಲ್ಲಿ ಯಾವತ್ತಿಗೂ ಸಕಾರಾತ್ಮಕ ಆಲೋಚನೆಯನ್ನೇ ಮಾಡಬೇಕು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತ ಗುರು ಕೊಬಾಯಾಶಿಯವರ ಕನಸಿನ ಶಾಲೆಯ ಬಗ್ಗೆ ತಿಳಿದುಕೊಳ್ಳುತ್ತ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವುದಕ್ಕಾದರೂ ಒಮ್ಮೆ ಈ ಪುಸ್ತಕವನ್ನು ಓದಲೇಬೇಕು. ಎಲ್ಲಿಯೂ ಬೋರ್ ಹೊಡೆಸದ, ಓದಲು ಪ್ರಾರಂಭಿಸಿದರೆ ಮಧ್ಯೆ ಕೆಳಗಿಡಲು ಮನಸ್ಸೇ ಬಾರದ ಈ ಪುಸ್ತಕವನ್ನು ಒಂದು ಸಲ ಓದಿ ಮಡಿಚಿಟ್ಟರೆ ಸಾಲದು, ಪ್ರತಿಯೊಬ್ಬರೂ ಅದನ್ನು ತಮ್ಮ ಮನೆಯ ಸಂಗ್ರಹ ಯೋಗ್ಯ ಅಮೂಲ್ಯ ವಸ್ತುಗಳ ಜೊತೆ ಜೋಪಾನವಾಗಿಡಬೇಕು.

ಬರೀ ಚಿನ್ನ ಇಡುವ ಕಪಾಟಿನಲ್ಲಿ ರತ್ನದಂತೆ ಮುಚ್ಚಿಟ್ಟರೆ ಸಾಲದು, ಈ ಪುಸ್ತಕದಲ್ಲಿ ಓದಿದ್ದನ್ನು ನಮಗೆ ಸಾಧ್ಯವಾದ ಮಟ್ಟಿಗೆ ನಮ್ಮ ಜೀವನದಲ್ಲಿ ಅನುಷ್ಟಾನಗೊಳಿಸುವ ಪ್ರಯತ್ನ ಮಾಡಬೇಕಾದುದು  ಯುದ್ಧೋತ್ಸಾಹದ, ಆಧುನಿಕ ತಂತ್ರಜ್ಞಾನದ ಅಡಿಯಾಳಾಗಿರುವ ಈ ಕಾಲಘಟ್ಟದ ತುರ್ತು ಅಗತ್ಯವಾಗಿದೆ.

16 comments

 1. ತೊತ್ತೋಜಾನ್ ನನ್ನ ಅತಿ ಇಷ್ಟದ ಪುಸ್ತಕ….

 2. ತೊತ್ತೊಚಾನ್ ಮತ್ತು ನಿಮ್ನ ಅನುಭವ ಎರಡೂ ಮಧುರವಾಗಿ ಮೂಡಿ ಬಂದಿದೆ.
  ನಮ್ಮ ಬಾಲ್ಯದ ನೆನಪುಗಳ ಜತೆ ನಮ್ಮ ಮಕ್ಕಳ ಹೆಗಲ ಮೇಲೆ ಕೈ ಇರಿಸುವಂತ ಸೇತುವೆಯಾಗಿದೆ

 3. ಮೇಡಂ, ನೀವು ಸಂಪಖಂಡ ಹೈಸ್ಕೂಲ್ ನಲ್ಲಿ ಓದಿದ್ದಾ? ಎಂ ಜಿ ಭಟ್ಟರ ಗಣಿತ ಕ್ಲಾಸು!! ಓಹ್…..

  • ನೀವೂ ಕೂಡ ಅಲ್ಲಿಯೇ ಓದಿದ್ದಾ? ಯಾವ ವರ್ಷ?ನೀವಿದ್ದಾಗ ಕುದುರೆ ಲಾಯ, ತಟ್ಟಿ . ಕ್ಲಾಸ್ ಇತ್ತಾ?

  • ನಾನು ಓದಿದ್ದು 1997, 1998 & 1999.
   ತಟ್ಟಿ ಕ್ಲಾಸ್ ಇತ್ತು, ಸಂಸ್ಕೃತ ಮತ್ತೆ ಥರ್ಡ್ ಲ್ಯಾಂಗ್ವೇಜ್ ಕನ್ನಡ ಕ್ಲಾಸ್ ಅಲ್ಲೇ ತಗಳ್ತಾ ಇದ್ರು.
   ಪಂಡಿತರು ರಿಟೈರ್ ಆಗಿದ್ರು, ಎಸ್ ಜಿ ಹೆಗಡೆಯವರು ಹೆಡ್ ಮಾಸ್ಟರ್ ಆಗಿದ್ರು.
   ಎಂ ಜಿ ಭಟ್ಟರ ಗಣಿತ ಕ್ಲಾಸ್ ಮಾತ್ರ ನಮಗೂ ಇತ್ತು 🙁 🙁

 4. ತುಂಬಾ ಅದ್ಭುತ ವಿಮರ್ಶೆ. Booking ನಾವು ಕೊಂಡುಕೊಳ್ಳಬೇಕು ಆ ತರ ಇರುತ್ತೆ ನಿಮ್ಮ ರೆಕಮೆಂಡ್.

 5. ತೊತ್ತೋ-ಚಾನ್ ನ ಬಾಲ್ಯ ಮತ್ತು ನಿಮ್ಮ ಬಾಲ್ಯದ ಕುರಿತು ಓದುತ್ತಲೇ ನನ್ನ ಬಾಲ್ಯವೂ ನೆನಪಾಯಿತು ಮ್ಯಾಮ್. ಎಲ್ಲವೂ ಎಷ್ಟು ಚೆನ್ನ, ಬಾಲ್ಯವೇ ಬಹಳ ಸೊಗಸು – ಬಾಲ್ಯದಲ್ಲೇ ಇರಬೇಕಾಗಿತ್ತು ಅನ್ನುಸ್ತು ಮ್ಯಾಮ್. ಥ್ಯಾಂಕ್ಯೂ ಮ್ಯಾಮ್.

 6. ತೊತ್ತೋ-ಚಾನ್ ಓದಿದ್ದೆ,ಆದರೆ ಈಗ ಅದನ್ನ ನಿಜವಾದ ಅರ್ಥದಲ್ಲಿ ಗ್ರಹಿಸಿದೆ.ನನ್ನ ಬಾಲ್ಯದ ಅದ್ಬುತ ದಿನಗಳನ್ನು ಮತ್ತೆ ಚಿಗುರಿಸಿದಿರಿ,ತುಂಬಾ ಧನ್ಯವಾದಗಳು ನಿಮಗೆ.ಒಳ್ಳೆಯ ಪುಸ್ತಕ.

 7. ಶ್ರೀದೇವಿ ಮೇಡಂ .‌‌.ಈ ವಾರದ ಅವಧಿಯಲ್ಲಿ ನಿಮ್ಮ ಶ್ರೀದೇವಿ ರೆಕಮೆಂಡ್ಸ ಅಂಕಣ ಬರಹ ತುಂಬಾ ಚೆನ್ನಾಗಿದೆ… ನಿಜಕ್ಕೂ ತೊತ್ತೋ ಚಾನ್ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ… ನಿಮಗೆ ಅಭಿನಂದನೆಗಳು

 8. Article ಓದುವಾಗ ನನ್ನ ಶಾಲಾ ದಿನಗಳಲ್ಲಿ ಸಂಚರಿಸಿದಂತೆನಿಸಿತು….ಪುಸ್ತಕವನ್ನಂತೂ ಓದಲೇಬೇಕು

 9. Article ಓದುವಾಗ ನನ್ನ ಶಾಲಾ ದಿನಗಳಲ್ಲಿ ಸಂಚರಿಸಿದಂತೆನಿಸಿತು….ಪುಸ್ತಕವನ್ನಂತೂ ಓದಲೇಬೇಕು

 10. ತೊತ್ತೋ ಚಾನ್-ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ ಎಂಬ ಅಡಿಬರಹದ ಪುಸ್ತಕದ ಓದು ನಿಜಕ್ಕೂ ಪ್ರಸ್ತತವಾಗಿದೆ ಶ್ರೀ ದೇವಿ ಮೇಡಮ್. “ಕಿಟಕಿ ಬಳಿ ನಿಂತ ಪುಟ್ಟ ಹುಡುಗಿ ” ಎಂಬ ದೃಶ್ಯವೇ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಕುತೂಹಲಕ್ಕೆ ಕನ್ನಡಿ ಅದು. ಬಾಲ್ಯದ ಸಹಜ ತುಂಟಾಟಗಳಿಂದಲೇ ಶಾಲೆಯಿಂದ ಹೊರಬಿದ್ದು, ಕೊಬಾಯಾಶಿಯಂತಹ ಮಾಂತ್ರಿಕ ಸ್ಪರ್ಶದ ಮುಖ್ಯೋಪಾಧ್ಯಾಯರ ಜತೆಗೆ ನಿಸರ್ಗದ ಮಡಿಲಲ್ಲಿ ಕಲಿಯುವ ವಾತಾವರಣದ ಬಗೆಗೆ ನೆನೆದರೇನೆ ಖುಷಿ ಆಗುತ್ತದೆ. ನಿಜ ಮೇಡಮ್ ರವೀಂದ್ರನಾಥ ಟ್ಯಾಗೋರ್ ಕನಸಿನ ಶಾಲೆಯು ಇದೆ ಆಗಿತ್ತು. ನಿಮ್ಮ ಮಕ್ಕಳನ್ನು ತಾಯ್ತನದಲ್ಲಿ ಕಂಡ ಕಲ್ಪನಾ ಮಿಸ್, ಕೊಬಾಯಾಶಿಯಂತಹ ಶಿಕ್ಷಕರು, ಬಾಲ್ಯದಲ್ಲಿ ಬಿದ್ದು ಎದ್ದು ಸುಳ್ಳಾದರೂ ಹೇಳಿ ತನಗಿಷ್ಟದಂತೆ ಬದುಕಿದ ಸರಳ ಮುಗ್ಧ ಮನಸ್ಸಿನ ಕಾಲ…ಎಲ್ಲವೂ ಏಕಕಾಲದಲ್ಲಿ ಬಾಲ್ಯಕ್ಕೆ ಕರೆದೊಯ್ದು ಶಾಲೆಯ ದಿನಗಳನ್ನು ತಂದು ನಿಲ್ಲಿಸಿದವು.
  ಈ ಪುಸ್ತಕದ ಓದು ಶಿಸ್ತಿನ ಸಿಪಾಯಿಗಳಾದ ಶಿಕ್ಷಕರನ್ನು
  ವಾತ್ಸಲ್ಯಮಯಿಗಳನ್ನಾಗಿ, ನಿಯಮಧಾರಿಗಳಾದ ಪೋಷಕರನ್ನು ಮಕ್ಕಳ ಮನಸ್ಸನ್ನು ಅರಿತು ನಡೆಯುವವರನ್ನಾಗಿಯು, ಶಿಕ್ಷಣ ತಜ್ಞರು ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಕೊಂಚವಾದರೂ ಚಿಂತಿಸುವ ಹಾಗೆ ಮಾಡುವುದರಲ್ಲಿ ಎರಡು ಮಾತಿಲ್ಲ.
  ಧನ್ಯವಾದಗಳು ಶ್ರೀದೇವಿ ಮೇಡಮ್ ..ಇಂತಹ ಉತ್ತಮವಿಚಾರಗಳ ಪುಸ್ತಕದ ಪರಿಚಯಕ್ಕೆ.

 11. ಶ್ರೀದೇವಿ ಮೇಡಮ್ “ತೊತ್ತೊ-ಚಾನ್” ಪುಸ್ತಕದ ವಿಶ್ಲೇಷಣೆ ತುಂಬಾ ಹೃದ್ಯವಾಗಿ ಮಾಡಿದ್ದೀರಿ. ಬಹಳ ಇಷ್ಟವಾಯಿತು. ನಿಮಗೆ ಅನಂತ ಧನ್ಯವಾದಗಳು

 12. ತೊತೊ ಚಾನ್ಗೆ‌ ಮತ್ತಷ್ಡು ಸವಿ ಬೆರೆಸಿದ್ದೀರಿ.ಎಲ್ಲರೂ ಓದಬೇಕಾದ ಪುಸ್ತಕ. ನಾನಂತು ಮತ್ತೆ ಮತ್ತೆ ಓದುತ್ತಾ ಇರುತ್ತೇನೆ.ಖುಷಿ.ಅಭಿನಂದನೆಗಳು.

Leave a Reply