ಅಂಗೋಲಾದ ಕತ್ತಲ ಕೂಪಗಳಲ್ಲಿ..

ದೀಪ… ಒಂದೇ ಒಂದು ದೀಪ…

ನಾನಂದು ಕಾಯುತ್ತಿದ್ದಿದ್ದು ಒಂದಿಷ್ಟು ಬೆಳಕಿಗಾಗಿ ಮಾತ್ರ. ನಮ್ಮ ಕಾರಿನ ಜೋಡಿ ಹೆಡ್ ಲೈಟ್ ಗಳ ಪ್ರಖರ ಬೆಳಕನ್ನು ಹೊರತುಪಡಿಸಿದರೆ ಬೇರೆಲ್ಲೂ ಬೆಳಕಿನ ಸುಳಿವೇ ಇಲ್ಲ. ಚಂದಿರನ ಬೆಳಕಿದ್ದರೆ ಸ್ವಲ್ಪವಾದರೂ ವಾಸಿ ಅನ್ನಿಸುತ್ತಿತ್ತೇನೋ. ಆದರೆ ದುರಾದೃಷ್ಟವೆಂಬಂತೆ ಅದೂ ಇರಲಿಲ್ಲ. ಅಂಥಾ ಕಾರ್ಗತ್ತಲೆಯ, ಕೊನೆಮೊದಲಿಲ್ಲವೆಂಬಂತೆ ಭಾಸವಾಗುತ್ತಿದ್ದ ರಸ್ತೆಯಲ್ಲಿ ನಮ್ಮ ವಾಹನವು ಅಂದು ಭರದಿಂದ ಸಾಗುತ್ತಿತ್ತು.

ಅಂಗೋಲಾದಲ್ಲಿ ನಗರದಿಂದ ಸಾಕಷ್ಟು ದೂರವಿರುವ, ಕುಗ್ರಾಮದಂತಹ ಪ್ರದೇಶಗಳಲ್ಲಿ ಕತ್ತಲಾದ ನಂತರ ಡ್ರೈವ್ ಮಾಡುವುದೆಂದರೆ ನಮ್ಮದೂ ಸೇರಿದಂತೆ ದಾರಿಹೋಕರ ಮತ್ತು ಇತರ ಪ್ರಯಾಣಿಕರ ಪ್ರಾಣದ ಜವಾಬ್ದಾರಿಯೂ ನಮ್ಮ ಮೇಲಿರುವಂತೆ ನನಗೆ ಹಲವು ಬಾರಿ ಅನ್ನಿಸುವುದಿದೆ. ಅದೆಷ್ಟೋ ಬಾರಿ ಹೆಡ್ ಲೈಟುಗಳಿಲ್ಲದೆ ಸವಾರಿ ಮಾಡುತ್ತಿರುವ ಬೈಕು ಸವಾರರನ್ನು, ಕೆಲ ಕಾರುಗಳನ್ನು ಇಲ್ಲಿ ನಾನು ನೋಡಿದ್ದೇನೆ. ಘಂಟೆಗೆ ನೂರು-ನೂರಾ ಮೂವತ್ತು ಕಿಲೋಮೀಟರುಗಳ ವೇಗದಲ್ಲಿ ಚಲಿಸುವ ವಾಹನಗಳು ಆಗೊಮ್ಮೆ ಈಗೊಮ್ಮೆ ಇಂತಹ ವಾಹನಗಳನ್ನು ಧುತ್ತನೆ ಕಂಡು ಕೊಂಚ ಗಾಬರಿಯಾಗುತ್ತವೆ. ಇನ್ನು ಅಂಕುಡೊಂಕುಗಳ ರಸ್ತೆಗಳಲ್ಲಂತೂ ಇವುಗಳು ಮತ್ತಷ್ಟು ಅಪಾಯಕಾರಿ. ಹಗಲಿನಲ್ಲೇ ಅಂಕುಡೊಂಕಿನ ರಸ್ತೆಗಳಲ್ಲಿ ವಾಹನ ಚಲಾಯಿಸುವವರಿಗೆ ಸವಾಲೆಸೆಯುವಂತೆ ಮೆರೆಯುತ್ತಿರುತ್ತವೆ ಎತ್ತರೆತ್ತರಕ್ಕೆ ಬೆಳೆದಿರುವ ಪೊದೆಗಳು. ಇನ್ನು ರಾತ್ರಿಯ ಅವಧಿಯಲ್ಲಿ ಇವುಗಳ ಪರಿಣಾಮವು ಅದೆಷ್ಟಿರಬಹುದು ಎಂಬುದನ್ನು ನೀವೇ ಊಹಿಸಿ. ಹೀಗೆ ಅಂಗೋಲಾದ ಬೀದಿಗಳಲ್ಲಿ ರಾತ್ರಿಯ ಪ್ರಯಾಣವೆಂದರೆ ಯಾವ ದುಸ್ಸಾಹಸಕ್ಕೂ ಕಮ್ಮಿಯಿಲ್ಲ.

ಇನ್ನು ಇವುಗಳು ಸಾಲದ್ದೆಂಬಂತೆ ರಸ್ತೆಯ ಬದಿಯಲ್ಲಿ ಮಲಗಿಕೊಂಡೋ, ಆಡಿಕೊಂಡೋ ಅಡ್ಡಾಡುತ್ತಿರುವ ಬೇಜವಾಬ್ದಾರಿ ಮಂದಿಗಳ ಸುರಕ್ಷತೆಯ ಜವಾಬ್ದಾರಿಯೂ ಈ ಹೊತ್ತಿನಲ್ಲಿ ನಮ್ಮ ಮೇಲೆಯೇ. ಅಂಗೋಲಾಕ್ಕೆ ಬಂದ ಹೊಸದರಲ್ಲಿ ಇಂಥಾ ಕೆಲ ಮೂರ್ಖರನ್ನು ಕಂಡು ನಾನು ದಂಗಾಗಿದ್ದೆ. ಅದೇನು ಹುಚ್ಚು ಸಾಹಸವೋ ಅಥವಾ ಉಡಾಫೆ ಮನೋಭಾವವೋ ಎಂಬುದನ್ನು ಇವರುಗಳೇ ಹೇಳಬೇಕು. ವಾಹನಗಳು ನಮಗೆ ಢಿಕ್ಕಿ ಹೊಡೆಯುವುದಿಲ್ಲವೆಂಬ ಬಗ್ಗೆ ಅದೆಂಥಾ ಭಂಡಧೈರ್ಯ ಈ ಆಸಾಮಿಗಳಿಗೆ! ತಮ್ಮಂತೆಯೇ ವೇಗವಾಗಿ ಚಲಿಸುತ್ತಿರುವ ಬೇರೆ ವಾಹನಗಳು, ಬೆಳೆದಿರುವ ಪೊದೆಗಳು, ಹೆದರಿಸುವ ಗುಂಡಿಗಳು ಇತ್ಯಾದಿಗಳೊಂದಿಗೆ ಈಗಾಗಲೇ ಸೆಣಸಾಡುತ್ತಿರುವ ವಾಹನಗಳ ಚಾಲಕರು ಈಗ ಇವರುಗಳನ್ನೂ ಸಂಭಾಳಿಸಬೇಕು.

ಹೀಗೆ ನಾನು ಈ ಬಗ್ಗೆ ಅಚ್ಚರಿಪಡುವುದಕ್ಕೂ ಒಮ್ಮೆ ಒಂದು ಘಟನೆಯು ನಡೆಯುವುದಕ್ಕೂ ಸರಿಹೋಯಿತು. ಇಬ್ಬರು ತರುಣರು ಇಂಥದ್ದೊಂದು ರಸ್ತೆಯ ಬದಿಯಲ್ಲಿ ತಮ್ಮ ಬೈಕನ್ನು ನಿಲ್ಲಿಸಿ ಅದರ ಮೇಲೆಯೇ ಕೂತು ಹರಟೆ ಹೊಡೆಯುತ್ತಿದ್ದರು. ಪಾದಚಾರಿಗಳ ಮಾರ್ಗದಲ್ಲಿ ಪೊದೆಗಳದ್ದೇ ಸಾಮ್ರಾಜ್ಯವಾಗಿರುವುದರಿಂದ ಅಲ್ಲಿ ರಸ್ತೆಯೊಂದನ್ನು ಬಿಟ್ಟು ಬೇರೇನೂ ಇರಲಿಲ್ಲ. ಹೀಗಾಗಿ ಬೈಕು ಮತ್ತು ಸವಾರರು ರಸ್ತೆಯ ಮೇಲೆಯೇ ಮೈಮರೆತಿದ್ದರು ಎನ್ನಬಹುದು. ಇತ್ತ ನಾವೆಲ್ಲರೂ ನೋಡನೋಡುತ್ತಿದ್ದಂತೆಯೇ ವೇಗವಾಗಿ ಸಾಗುತ್ತಿದ್ದ ಧಡೂತಿ ಕಾರೊಂದರ ಪಾಶ್ರ್ವಗನ್ನಡಿಯು ಆಕಸ್ಮಿಕವಾಗಿ ಬೈಕಿಗೆ ತಗುಲಿ ಅದನ್ನು ಪೊದೆಗಳಾಚೆಗೆ ತಳ್ಳಿಬಿಟ್ಟಿತು. ಮೇಲೆ ಕೂತು ಆರಾಮಾಗಿದ್ದ ಈರ್ವರು ಧಡಾರನೆ ಬೈಕಿನೊಂದಿಗೇ ಬಿದ್ದರು. ಆದರೆ ಆಗಲೇ ಸಾಕಷ್ಟು ವೇಗದಲ್ಲಿದ್ದ ಕಾರಿನವನಿಗೆ ಇನ್ನು ವಾಹನವನ್ನು ನಿಲ್ಲಿಸಿ ಆಗುವಂಥದ್ದೇನೂ ಇಲ್ಲ ಎಂದನ್ನಿಸಿರಬೇಕು. ಆತ ವಾಹನವನ್ನು ನಿಲ್ಲಿಸದೆ ಹೋಗೇಬಿಟ್ಟ. ಗಾಯಗಳಾಗುವಷ್ಟು ದೊಡ್ಡ ಹೊಡೆತವೇನೂ ಆಗಿಲ್ಲದೆ ಮತ್ತು ರಸ್ತೆಯಾಚೆಗೆ ರಾಶಿಹಾಕಿದ ಹುಲ್ಲಿನಂತೆ ಬೆಳೆದುಕೊಂಡಿದ್ದ ಪೊದೆಗಳಿಂದಾಗಿ ಬಿದ್ದ ವೇಗದಲ್ಲೇ ಇವರಿಬ್ಬರೂ ಎದ್ದಿದ್ದೂ ಆಯಿತು. ಒಟ್ಟಾರೆಯಾಗಿ ಇಂಥಾ ವಿಚಿತ್ರ ಮೋಜಿನ ಉದ್ದೇಶವಾದರೂ ಏನು ಎಂಬುದು ಮಾತ್ರ ನನಗೆ ಅರ್ಥವಾಗದ ಸಂಗತಿ. ಎಲ್ಲೆಲ್ಲೂ ಹಬ್ಬಿರುವ ಕಾಡು ಸುತ್ತಲಿರುವಾಗ, ಮರದ ನೆರಳಿಗೆ, ಖಾಲಿಜಾಗಗಳಿಗೆ ಕಮ್ಮಿಯಿಲ್ಲದಿರುವಾಗ ಟಾರು ರಸ್ತೆಯನ್ನೇ ಹಾಸಿಗೆಯನ್ನಾಗಿಸುವ ಇವರ ವಿಲಕ್ಷಣ ಖಯಾಲಿಗೆ ಏನನ್ನಬೇಕೋ ನಾಕಾಣೆ.

ಇಂಥದ್ದೇ ಮತ್ತೊಂದು ಬಗೆಯ ವೈಚಿತ್ರ್ಯವೂ ಇಂಥಾ ರಸ್ತೆಗಳಲ್ಲಿ ನನಗೆ ಕಾಣಸಿಗುತ್ತಿದ್ದ ದಿನಗಳಿವೆ. ಎಂದಿನಂತೆ ತಾಸಿಗೆ ನೂರು ಚಿಲ್ಲರೆ ಕಿಲೋಮೀಟರುಗಳ ವೇಗದಲ್ಲಿ ಚಲಿಸುತ್ತಿರುವ ನಮ್ಮ ವಾಹನವನ್ನು ಕೆಲ ತರುಣರ ಗುಂಪೊಂದು ನಿಲ್ಲಿಸುತ್ತದೆ. ಎಲ್ಲರ ಕೈಯಲ್ಲೂ ಹಾರೆ, ಪಿಕ್ಕಾಸುಗಳಿವೆ. ರಸ್ತೆಯ ಆ ಭಾಗದಲ್ಲಿದ್ದ ಬೆರಳೆಣಿಕೆಯ ಗುಂಡಿಗಳನ್ನು ತೋರಿಸಿ ನಾವಿಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎನ್ನುತ್ತಾ ಏನಾದರೂ ಕೊಡಿ ಎಂದು ಕಾಸಿಗೆ ಕೈಚಾಚುತ್ತಾರೆ ಈ ಹುಡುಗರು. ಒಂದಿಷ್ಟು ಜಲ್ಲಿಗಳನ್ನು ತುಂಬಿದರೆ ನಿಮಿಷಗಳಲ್ಲಿ ತುಂಬಬಹುದಾದ, ಗುಂಡಿಗಳೆನ್ನಲೂ ಲಾಯಕ್ಕಲ್ಲದ ಒಂದೆರಡು ಗುಂಡಿಗಳನ್ನು ತೋರಿಸಿ ನಾಲ್ಕೈದು ಮಂದಿ ಹಾರೆ, ಪಿಕ್ಕಾಸುಗಳನ್ನು ಹಿಡಿದು ಕೆಲಸ ಮಾಡುತ್ತಿದ್ದಾರೆಂಬ ನಾಟಕವನ್ನು ತೋರಿಸುವ ಇವರುಗಳ ವಿಧಾನವೇ ಹಾಸ್ಯಾಸ್ಪದ. ಇದು ನಿರ್ಜನ ಪರಿಸರದ ಲಾಭವನ್ನು ಪಡೆದು ಅಮಾಯಕರಿಂದ ಕಾಸು ಕೀಳಲು ಕೆಲ ಪುಂಡರು ಮಾಡುತ್ತಿರುವ ಚಿಲ್ಲರೆತನದ ಕೆಲಸ ಎಂದು ಅಲ್ಲಿ ಸಂಚರಿಸುತ್ತಿರುವ ಯಾವ ಹೊಸಬನಿಗಾದರೂ ಸ್ಪಷ್ಟವಾಗಿ ಅರ್ಥವಾಗಬಲ್ಲಂಥದ್ದು. ಇನ್ನು ವಾಹನ ಚಾಲಕರು ಹಣವನ್ನು ಕೊಡಲು ನಿರಾಕರಿಸಿದರೆ ಅಥವಾ ನಿಮ್ಮನ್ನು ಈ ಕೆಲಸ ಮಾಡಲು ಯಾರಿಲ್ಲಿ ನೇಮಿಸಿದ್ದು ಎಂದೆಲ್ಲಾ ವಿಚಾರಿಸತೊಡಗಿದರೆ ಭಯಂಕರ ವಾಗ್ವಾದಗಳನ್ನು ನಡೆಸುವ ಮತ್ತು ಈ ಮೂಲಕ ಅವರನ್ನು ಹೆದರಿಸಿ ಕಾಸು ಕೀಳುವ ಯತ್ನಗಳೂ ಕೂಡ ಈ ಪುಂಡರಿಂದ ಸರಾಗವಾಗಿ ನಡೆಯುತ್ತಿದ್ದವು.     

ಮಾರ್ಗದುದ್ದಕ್ಕೂ ಹೀಗೆ ಕಾಸು ಕೀಳುವ ಗಿರಾಕಿಗಳೇ ಸಿಕ್ಕರೆ ಇವರಿಗಾಗಿಯೇ ಒಂದು ‘ಕಪ್ಪು ಹಣದ ನಿಧಿ’ಯನ್ನು ಆರಂಭಿಸುವುದು ಅನಿವಾರ್ಯ ಎಂಬ ಅಸಾಧ್ಯ ಸ್ಥಿತಿಗೆ ನಾನು ಬಂದಿದ್ದೂ ಆಯಿತು. ಪ್ರತೀಬಾರಿಯೂ ಪೋಲೀಸರಿಗೂ ವಂಚಕರಿಗೂ ವಿನಾಕಾರಣ ಹಫ್ತಾ ನೀಡಬೇಕಾದ ಸ್ಥಿತಿಯು ಬಲು ರೇಜಿಗೆಯದ್ದು. ”ನೀವು ವಾಹನವನ್ನು ನಿಲ್ಲಿಸಿದರೆ ತಾನೇ ಅವರು ನಿಮ್ಮೊಂದಿಗೆ ಕಾಸು ಕೀಳುವುದು, ವಾದ ಮಾಡುವುದು. ಈ ಬಾರಿ ಅದೇನೇ ಆದರೂ ನಿಲ್ಲಿಸಲೇಬೇಡಿ”, ಎಂದೆ ನಾನು. ಪುಂಡರ ವಿರುದ್ಧದ ನನ್ನ ಈ ಉಗ್ರ ಪ್ರತಿರೋಧ ಎಲ್ಲರಿಗೂ ಒಪ್ಪಿಗೆಯಾಗದಿದ್ದರೂ ಒಮ್ಮೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲವೆಂಬ ಮಾತುಗಳೂ ಕೇಳಿಬಂದವು. ಮುಂದಿನ ಬಾರಿ ಹೋಗುವಾಗ ದೂರದಿಂದ ಬರುತ್ತಿದ್ದ ನಮ್ಮ ವಾಹನವನ್ನು ಕಂಡಂತೆಯೇ ಗುದ್ದಲಿಗಳನ್ನು ಹಿಡಿದುಕೊಂಡ ಮೂವರು ಚಾಮರವನ್ನು ಬೀಸುವವರಂತೆ ಕೈಗಳನ್ನು ಮೇಲಕ್ಕೆ ಕೆಳಕ್ಕೆ ಆಡಿಸುತ್ತಾ ವೇಗವನ್ನು ಕಡಿಮೆ ಮಾಡಬೇಕೆಂದೂ, ನಿಲ್ಲಿಸಬೇಕೆಂದೂ ಸಂಜ್ಞೆಯನ್ನು ಮಾಡಿದರು. ಇನ್ನು ಮೂವರು ಭಾರೀ ಏಕಾಗ್ರತೆಯಿಂದ ಕೆಲಸ ಮಾಡುವವರಂತೆ ಅವರ ಹಿಂದೆ ನಟಿಸುತ್ತಿದ್ದರು. ಈ ಬಾರಿ ನಾವು ವೇಗವನ್ನು ಕಮ್ಮಿ ಮಾಡಿದ್ದು ಹೌದಾದರೂ ವಾಹನವನ್ನು ನಿಲ್ಲಿಸುವ ಗೋಜಿಗಂತೂ ಹೋಗಲಿಲ್ಲ. ರಸ್ತೆಗಡ್ಡಲಾಗಿ ಭಾರೀ ಆತ್ಮವಿಶ್ವಾಸದಿಂದ ನಿಂತಿದ್ದ ತರುಣರನ್ನು ತಮ್ಮೆಡೆಗೇ ನುಗ್ಗಿ ಬರುತ್ತಿದ್ದ, ನಿಲ್ಲುವ ಸೂಚನೆಗಳೇ ಕಾಣದಿದ್ದ ನಮ್ಮ ವಾಹನವು ಬೆಚ್ಚಿಬೀಳಿಸಿದ್ದಂತೂ ಹೌದು. ತೀರಾ ಹತ್ತಿರಕ್ಕೆ ಬರುತ್ತಿದ್ದು ಇವರು ಯಾವ ಕಾರಣಕ್ಕೂ ನಿಲ್ಲಿಸಲಾರರು ಎಂಬ ಅರಿವಾಗುತ್ತಿದ್ದಂತೆಯೇ ಪಕ್ಕಕ್ಕೆ ಸರಿದು ತಮ್ಮ ಪ್ರಾಣಗಳನ್ನು ಉಳಿಸಿಕೊಂಡರು ಈ ರಸ್ತೆವೀರರು.

ಈ ಘಟನೆಯ ನಂತರ ನಾವು ಮುಂದೆಂದೂ ಅವರನ್ನು ನೋಡಲಿಲ್ಲ. ನಮ್ಮ ಈ ಹೆಜ್ಜೆಯೇ ಇದಕ್ಕೆ ಕಾರಣವೆಂದು ನಾನು ಖಚಿತವಾಗಿ ಹೇಳಲಾರೆ. ಆದರೆ ಈ ಪುಂಡರಿಂದ ಬೇಸತ್ತ ಪ್ರಯಾಣಿಕರು ಇವರುಗಳಿಗೆ ಏನಾದರೊಂದು ಬಗೆಯ ತಕ್ಕ ಶಾಸ್ತಿಯನ್ನು ಮಾಡಿರಬಹುದು ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಲುವಾಂಡಾದಲ್ಲಿ ಕತ್ತಲಾದ ನಂತರ ನಡೆಯುವ ಮತ್ತು ವರದಿಯಾಗುವ ಅಸಂಖ್ಯಾತ ಗಂಭೀರ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ಇವುಗಳೆಲ್ಲಾ ಚಿಲ್ಲರೆ ಎಂದು ಕಡೆಗಣಿಸುವುದು ಸುಲಭ. ಆದರೆ ಇಲ್ಲಿ ಜಮೆಯಾಗಬಹುದಾದ ಒಟ್ಟು ಮೊತ್ತವನ್ನು ಅಂದಾಜು ಲೆಕ್ಕಹಾಕಿದರೆ ಮರೆತುಬಿಡುವಷ್ಟು ಸರಳ ಅಪರಾಧವೂ ಇದಲ್ಲ. ಅಲ್ಲದೆ ಕೆಲ ತಿಂಗಳುಗಳ ತರುವಾಯ ವಿಷಯವು ತಣ್ಣಗಾದ ನಂತರ ಇಂಥಾ ವಂಚಕರ ಗುಂಪುಗಳು ಮತ್ತೊಮ್ಮೆ ಅಲ್ಲಲ್ಲಿ ತಲೆಯೆತ್ತಿದರೂ ಅಚ್ಚರಿಯೇನಿಲ್ಲ.   

ಇದು ಹಗಲಿನ ಪ್ರಯಾಣಗಳ ಕಥೆಯಾಯಿತು. ಈಗ ಮತ್ತೊಮ್ಮೆ ರಾತ್ರಿಯ ಪ್ರಯಾಣಗಳಿಗೆ ಮರಳಿ ಬರೋಣ. ಇಂಥದ್ದೇ ರಾತ್ರಿಯ ಪ್ರಯಾಣವೊಂದರಲ್ಲಿ ಒಮ್ಮೆ ಪೋಲೀಸನೊಬ್ಬ ಕೈ ಅಡ್ಡ ಹಾಕಿ ನಮ್ಮ ವಾಹನವನ್ನು ನಿಲ್ಲಿಸಿ ”ಈತ ನಮ್ಮವ… ಇವನನ್ನು ಅಲ್ಲಿಯವರೆಗೆ ಬಿಟ್ಟುಬಿಡಿ” ಎನ್ನುತ್ತಾ ಡ್ರಾಪ್ ಕೇಳುತ್ತಿದ್ದ. ಪೋಲೀಸಪ್ಪ ಹೀಗೆ ನಮ್ಮ ಕಡೆ ತಳ್ಳುತ್ತಿದ್ದ ಆ ವ್ಯಕ್ತಿಯು ನೋಡಲು ವಿಚಿತ್ರವಾಗಿದ್ದು ಆ ಕತ್ತಲಿನಲ್ಲಿ ಮತ್ತಷ್ಟು ಅಸ್ಪಷ್ಟವಾಗಿ ಕಾಣುತ್ತಾ ನಿಗೂಢತೆಯೇ ಮೈವೆತ್ತಂತಿದ್ದ. ಪೋಲೀಸನ ಸೂಚನೆಯಂತೆ ಆತನನ್ನು ತಲುಪಿಸುವಲ್ಲಿಗೆ ತಲುಪಿಸುವ ಬಗ್ಗೆ ನನ್ನ ಚಾಲಕ ಮತ್ತು ದುಭಾಷಿಗೆ ಅಭ್ಯಂತರವೇನೂ ಇಲ್ಲದಿದ್ದರೂ ಆತನ ಚೀಲಗಳಲ್ಲೇನಿದೆ ಎಂಬ ಬಗ್ಗೆ ಅರಿವಿಲ್ಲದ ನಾನು ಸಹಜವಾಗಿಯೇ ಅಸಮಾಧಾನಗೊಂಡಿದ್ದೆ. ಅಪರಿಚಿತರನ್ನು ಹೀಗೆ ಖಾಸಗಿ ವಾಹನಗಳಲ್ಲಿ ಕೂರಿಸುವುದು ಒಂದು ರೀತಿಯಲ್ಲಿ ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ. ಆದರೆ ಪೋಲೀಸರೇ ಹೀಗೆ ಗೊತ್ತುಗುರಿಯಿಲ್ಲದವರನ್ನು ಖಾಸಗಿ ವಾಹನಗಳಲ್ಲಿ ತುಂಬಿಸಿ ಕಳಿಸಿಕೊಡುವ ಸಂದರ್ಭಗಳಲ್ಲಿ ಒಪ್ಪಿಕೊಳ್ಳಲೂ ಆಗದೆ, ಬಿಡಲೂ ಆಗದಿರುವಂತಹ ಇಕ್ಕಟ್ಟಿನ ಪರಿಸ್ಥಿತಿ ಮಾತ್ರ ನಮ್ಮಂತಹ ಪ್ರಯಾಣಿಕರದ್ದು.

ಇನ್ನು ರಾತ್ರಿಯ ಪಯಣಗಳಲ್ಲಿ ನಾನು ಬರೆಯಲು ಕುಳಿತರೆ ಮಾತ್ರ ಎಲ್ಲರಿಗೂ ತೊಂದರೆಯೇ. ಅದು ಲ್ಯಾಪ್ ಟ್ಯಾಪ್ ಅನ್ನು ಬಳಸುತ್ತಿರುವ ನನಗೆಷ್ಟು ಸತ್ಯವೋ ಎಡಬದಿಯಲ್ಲಿ ಡ್ರೈವ್ ಮಾಡುವ ಅಗುಸ್ಟೋನಿಗೂ ಅಷ್ಟೇ ಸತ್ಯ. ಹೀಗಾಗಿ ಆ ಕತ್ತಲೆಯಲ್ಲಿ ಕಣ್ಣುಕುಕ್ಕುವ ಲ್ಯಾಪ್ ಟ್ಯಾಪ್ ಬೆಳಕು ನನ್ನನ್ನೂ, ನನ್ನ ಎಡಭಾಗದಲ್ಲಿ ಕುಳಿತು ಗಾಡಿ ಓಡಿಸುತ್ತಿರುವ ಆಗುಸ್ಟೋನನ್ನೂ ವಿಚಲಿತಗೊಳಿಸುತ್ತದೆ. ”ಇಡೀ ದಿನ ಎಂಥದ್ದದು ಕುಟುಕುಟು ಕುಟುಕುಟು ಕುಟ್ಟುವುದು? ಈಗಲಾದರೂ ಸ್ವಲ್ಪ ಬ್ರೇಕ್ ತಗೊಳ್ರೀ… ಇದರ ಬೆಳಕಿನಿಂದ ನಿಮ್ಮ ಕಡೆಗಿನ ಕನ್ನಡಿಯಲ್ಲಿ ಏನೇನೂ ಕಾಣುತ್ತಿಲ್ಲ ನನಗೆ”, ಅನ್ನುತ್ತಾನೆ ಆತ. ಇಷ್ಟೆಲ್ಲಾ ಆದರೂ ತೆವಳಿ ತೆವಳಿ ಸುರಂಗದ ಅಂತಿಮಭಾಗದತ್ತ ಬರುವಷ್ಟರಲ್ಲಿ ಭರವಸೆಯ ಬೆಳಕೊಂದು ಕಾಣುವಂತೆ ವೀಜ್ ನ ಹೃದಯಭಾಗದಲ್ಲಿ ಮಿಂಚುತ್ತಿರುವ ಮಿಣಮಿಣ ದೀಪಗಳು ದೂರದಿಂದಲೇ ನಮ್ಮನ್ನು ಸ್ವಾಗತಿಸುತ್ತವೆ. ಇದು ವೀಜ್ ನಿಂದ ಲುವಾಂಡಾದತ್ತ ಹೋದರೂ ಸತ್ಯ. ಮಹಾನಗರಿಯ ಝಗಮಗ ಬೆಳಕು ಇಷ್ಟು ತಾಸುಗಳ ಕತ್ತಲಿನ ನೀರವತೆಯನ್ನು ಮರೆಸುವಂತೆ ನಮ್ಮನ್ನು ಅಪ್ಪಿಕೊಳ್ಳಲು ಲವಲವಿಕೆಯಿಂದ ತಯಾರಾಗಿರುತ್ತದೆ. ಮನಸ್ಸು ಒಂದು ಕ್ಷಣ ಹಾಯೆನ್ನಿಸುತ್ತದೆ.

ಸಂಜೆ ಏಳರ ನಂತರದ ವೀಜ್ ನ ಹೃದಯಭಾಗದಲ್ಲಿ ಅಡ್ಡಾಡುವುದು ತೀರಾ ಅಪರೂಪವಾದರೂ ಇದು ನನ್ನಿಷ್ಟದ ಕೆಲಸಗಳಲ್ಲೊಂದು. ಇನ್ನು ಇಲ್ಲಿರುವ ವಿಶೇಷವಾದ ವೃತ್ತವೊಂದರ ಬಗ್ಗೆಯೂ ಹೇಳಬೇಕು. ನಾಲ್ಕೈದು ರಸ್ತೆಗಳು ಕೂಡುವ ಒಂದು ವೃತ್ತವೇ ಆ ವೇಳೆಯಲ್ಲಿ ಪುಟ್ಟ ಪಾರ್ಕಿನಂತೆ ಬದಲಾಗಿ ಸಾಕಷ್ಟು ಜನ ನಿತ್ಯವೂ ಅಲ್ಲಿ ಸೇರುತ್ತಾರೆ. ಅಲ್ಲೇ ನಿಂತು-ನಡೆದು, ಆಡಿ-ಓಡಿ, ಎದ್ದು-ಬಿದ್ದು ಕಸರತ್ತುಗಳನ್ನು ಮಾಡುತ್ತಾರೆ. ರಾತ್ರಿಯ ನಂತರ ಜನಜಂಗುಳಿ, ವಾಹನಗಳ ಭರಾಟೆ ಇತ್ಯಾದಿಗಳು ಗಣನೀಯವಾಗಿ ಕಡಿಮೆಯಾಗುವುದರಿಂದ ಅದೇ ಇವರಿಗೆಲ್ಲಾ ಪ್ರಶಸ್ತವಾದ ಹೊತ್ತು. ಇವರೆಲ್ಲರಿಗೂ ಒಂದು ತೆರೆದ ಜಿಮ್.

ಹಾಗೆ ನೋಡಿದರೆ ಅದು ಯಾವ ರೀತಿಯಲ್ಲೂ ಇಂಥಾ ಚಟುವಟಿಕೆಗಳಿಗಾಗಿ ಇರುವ ಜಾಗವಲ್ಲ. ಸುತ್ತಲೂ ಇರುವ ಸರಕಾರಿ ಕಟ್ಟಡಗಳಿಗೆ ಅನುಕೂಲವಾಗುವಂತೆ ಆ ವೃತ್ತವನ್ನೇ ಒಂದಿಷ್ಟು ಅಗಲಿಸಿ ಮಟ್ಟಸವಾಗಿ ಸಿಮೆಂಟಿನ ನೆಲವನ್ನು ಮಾಡಿಸಿ ಅದನ್ನು ಪಾರ್ಕಿಂಗ್ ಸ್ಥಳವಾಗಿ ಬಳಸಲಾಗುತ್ತಿದೆಯಷ್ಟೇ. ಆದರೆ ಯಾರೋ ಒಬ್ಬಿಬ್ಬರು ಅಲ್ಲಿ ಜಾಗಿಂಗ್ ಮಾಡಲೋ, ಕಸರತ್ತು ಮಾಡಲೋ ಬರಲಾರಂಭಿಸಿ ಈ ರೂಢಿಯನ್ನು ಹುಟ್ಟುಹಾಕಿದರೋ ಏನೋ. ಅಂತೂ ಸದ್ಯ ಈ ಸ್ಥಳವು ಸೂರ್ಯಾಸ್ತದ ನಂತರದ ಮಿನಿವಿಹಾರಕ್ಕಾಗಿಯೇ ಮೀಸಲಿಟ್ಟಂತಿದೆ. ವೀಜ್ ನಲ್ಲಿ ಸಾಂಸ್ಕøತಿಕ ಉತ್ಸವಗಳಾದಾಗ ನರ್ತಕರು ಗುಂಪಿನಲ್ಲಿ ಬಂದು ನರ್ತಿಸುವುದು, ವಿಶೇಷ ದಿನಗಳಂದು ಬಗೆಬಗೆಯ ಪ್ರದರ್ಶನಗಳನ್ನು ಆಯೋಜಿಸುವುದು, ವ್ಯಾಲೆಂಟೈನ್ಸ್ ಋತುವಿನಲ್ಲಿ ಉಡುಗೊರೆಗಳ ಮುದ್ದಾದ ಮಳಿಗೆಗಳು ತೆರೆಯುವುದೂ ಕೂಡ ಈ ಜಾಗದಲ್ಲೇ.   

ಹೀಗೆ ಹಗಲೋ ರಾತ್ರಿಯೋ… ಅಂಗೋಲಾದ ರಸ್ತೆಗಳ ಬಗ್ಗೆ ಬರೆಯಲು ಕುಳಿತರೆ ಅದೇ ಒಂದು ದಾಖಲೆಯಾಗುವಂಥರಷ್ಟಿದೆ. ರಸ್ತೆಪ್ರಯಾಣವೆಂಬುದು ದೇಹದ ಕಸುವನ್ನು ನಿರ್ದಯವಾಗಿ ಹಿಂಡಿಹಿಪ್ಪೆ ಮಾಡಿಬಿಟ್ಟರೂ ವೀಜ್-ಅಂಗೋಲಾದ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ರಸ್ತೆಯು ನನಗೆ ಪ್ರತೀಬಾರಿಯೂ ಹೊಸದೆಂಬಂತೆ ಕಾಣುವುದು ಈ ಕಾರಣಗಳಿಂದಾಗಿಯೇ. ಎಲ್ಲಾ ಕುಗ್ರಾಮಗಳಂತೆ, ಪೇಟೆಗಳಂತೆ, ಮಹಾನಗರಗಳಂತೆ ಇಲ್ಲೂ ಹೊಸದೊಂದು ಲೋಕವು ಕತ್ತಲಾದ ನಂತರ ಸದ್ದಿಲ್ಲದೆ ಎದ್ದುನಿಲ್ಲುತ್ತದೆ. ತನ್ನದೇ ಆದ ರೀತಿಯಲ್ಲಿ ಅಟ್ಟಹಾಸವನ್ನೂ ಮಾಡುತ್ತದೆ. ಈ ನಿಟ್ಟಿನಲ್ಲಿ ವೀಜ್ ಆಗಲಿ, ಲುವಾಂಡಾವಾಗಲಿ ಜಗತ್ತಿನ ಯಾವುದೇ ಇತರ ಸ್ಥಳಗಳಿಗಿಂತ ಅಷ್ಟೇನೂ ಭಿನ್ನವಲ್ಲ.

ಇದಕ್ಕೇನೇ ಹೇಳೋದು. ಕಣ್ಣೆದುರಿಗಿರುವ ದೃಶ್ಯವು ಒಂದೇ ಇರಬಹುದು. ಆದರೆ ನೋಡುವವರ ನೋಟ, ಒಳನೋಟಗಳು ಮಾತ್ರ ವಿಭಿನ್ನ. ಸುಮ್ಮನೆ ನೋಡುವವರಿಗೆ ಏನೇನೂ ಕಾಣದಿರಬಹುದು. ಆದರೆ ಸೂಕ್ಷ್ಮವಾಗಿ ಗಮನಿಸುವವರಿಗೆ ಮಾತ್ರ ಈ ಕತ್ತಲಕೂಪಗಳಲ್ಲಿ ಹೊಸದೊಂದು ಲೋಕವೇ ತೆರೆದುಕೊಂಡರೆ ಅಚ್ಚರಿಯಿಲ್ಲ.

Leave a Reply