ತುರ್ತು ಪರಿಸ್ಥಿತಿಯ ರಿಪೋರ್ಟ್ ನನ್ನ ಕೈನಲ್ಲಿತ್ತು..

ಎಂ ಎನ್ ವಿಜಯೇಂದ್ರ 

1975ರ ಜೂನ್ 25 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ತಿತಿ ಕುರಿತು ನನ್ನ ಬಹುಕಾಲದ ಮಿತ್ರ, ಇಂದಿನ ಪ್ರಸಾರ ಭಾರತಿ ಅಧ್ಯಕ್ಷರಾದ ಅರಕಲಗೂಡು ಸೂರ್ಯಪ್ರಕಾಶ್ ಅವರು ಬರೆದಿರುವ ಕೃತಿಯ ಅನುವಾದವನ್ನು ನನ್ನ ಮತ್ತೊಬ್ಬ ಗೆಳೆಯ ಉಮಾಪತಿ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿಸಿದ್ದಾರೆ.

ಆ ವೇಳೇಗಾಗಲೇ ಅವೆನ್ಯೂ ರಸ್ತೆಯ ಫುಟ್ಪಾತಿನ ಮೇಲೆ ಕುಳಿತು ಜಾಬ್ ಟೈಪಿಂಗ್ ಮಾಡುತ್ತಾ ಹಲವಾರು ಸಂಘಟನೆಗಳೊಂದಿಗೆ ಪತ್ರಿಕೆಗಳೊಂದಿಗೆ ಸಕ್ರಿಯವಾಗಿ ದುಡಿಯುತ್ತ ನಾನು ನನ್ನ ಓರಗೆಯ ಹಲವಾರು ಗೆಳೆಯರು ಹೇಗೆ ಎಮರ್ಜೆನ್ಸಿಗೆ ಸ್ಪಂದಿಸಿದ್ದವು?ಹೇಗೆ ಹೋರಾಟ ಮಾಡಿದ್ದೆವು. [ಈ ಹೋರಾಟಕ್ಕೆ ನಾವು ಯಾವ ಬೆಲೆ ತೆರಬೇಕಾಯಿತು] ಎಂಬ ಬಗ್ಗೆ ಪ್ರತ್ಯೇಕವಾಗಿ ಬರೆಯುವ ಮನಸ್ಸು ಇದೆ. ಎಂದೇ ಅದನ್ನಿಲ್ಲಿ ಬರೆಯುತ್ತಿಲ್ಲ.

ನಾನು ಬರೆಯಹೊರಟಿರುವುದು ತುರ್ತು ಪರಿಸ್ಥಿತಿಯ ನಂತರದ ಘಟನೆಗಳ ಬಗ್ಗೆ. 19 ತಿಂಗಳ ತರುವಾಯ ಎಮರ್ಜೆನ್ಸಿ ಅಂತ್ಯಗೊಳಿಸಿ ಚುನಾವಣೆ ನಡೆಸಿದ ಇಂದಿರಾಗಾಂಧಿ ಅವರ ಕಾಂಗ್ರೆಸ್ ಪಕ್ಷ ಕಂಡುಕೇಳರಿಯದ ರೀತಿಯಲ್ಲಿ ಸೋಲು ಅನುಭವಿಸಿತು. ನೂತನ ಮೊರಾರ್ಜಿ ಸರಕಾರ ಎಮರ್ಜೆನ್ಸಿ ಅತಿರೇಕಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸಲು ಸುಪ್ರಿಂಕೋರ್ಟ್ ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಷಾ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಿತು.

ಆಯೋಗ ನೂರಕ್ಕೂ ಹೆಚ್ಚು ಸಿಟ್ಟಿಂಗ್ ಗಳನ್ನು ನಡೆಸಿ ಅಧಿಕಾರ ಯಂತ್ರ ದುರುಪಯೋಗ, ಮಾದ್ಯಮದ ಮೇಲೆ ಹಲ್ಲೆ, ನಸ್ಭಂದಿಯ ಹೆಸರಿನಲ್ಲಿ ಮಾನವ ಹಕ್ಕುಗಳ ದಮನ, ಮೀಸಾ ದುರ್ಬಳಕೆ, ತುರಕ್ಮನ್ ಗೇಟ್ ದುರಂತ ಹೀಗೆ 40000ಕ್ಕೂ ಹೆಚ್ಚು ದೂರುಗಳ ಬಗ್ಗೆ ತನಿಖೆ ನಡೆಸಿ 520 ಕ್ಕೂ ಹೆಚ್ಚು ಪುಟಗಳ ಮೂರು ಪ್ರತ್ಯೇಕ ವರದಿಗಳನ್ನು ಸಿಲ್ಲಿಸಿತು.

ಆ ವರದಿಯನ್ನು ಎಲ್ಲಾ ಭಾಷೆಗಳಲ್ಲಿ ಅನುವಾದಿಸಿ ಮುದ್ರಿಸಬೇಕೆಂಬ ಜರೂರು ಆದೇಶ ಬೆಂಗಳೂರಿನ ಪಿ.ಐ.ಬಿ. ಕಛೇರಿಗೂ ತಲುಪಿತು. ಅನುವಾದದ ಮೂಲ ಗುತ್ತಿಗೆ ಯಾರಿಗೆ ಸಿಕ್ಕಿತ್ತೋ ಈಗ ನೆನಪಾಗುತ್ತಿಲ್ಲ. ಗೆಳೆಯ ಯಗಟಿ ಕೃಷ್ಣಮೂರ್ತಿ ಅವೆನ್ಯೂ ರಸ್ತೆಯಲ್ಲಿದ್ದ ನನ್ನ ಬಳಿ ಬಂದು ಷಾ ಅಯೋಗದ ಮೂರೂ ವರದಿಗಳನ್ನು ನನ್ನ ಕೈಗಿತ್ತು ಇದನ್ನು ಬಹಳ ತುರ್ತಿನಲ್ಲಿ ಅನುವಾದಿಸಿಕೊಡುವಂತೆ ಕೇಳಿಕೊಂಡ .[ನಾನು ಆ ವೇಳೆಗಾಗಲೆ ಅನುವಾದವನ್ನು ಉಪವೃತ್ತಿಯನ್ನಾಗಿಸಿಕೊಂಡಿದ್ದೆ.]

ನಾನೂ ಅಷ್ಠೇ ತುರ್ತಿನಲ್ಲಿ ಹಗಲೂರಾತ್ರಿ ಕುಳಿತು ಅನುವಾದದ ಜವಾಬ್ದಾರಿ ಪೂರೈಸಿದೆ. ಅವೆನ್ಯೂ ರಸ್ತೆಯಲ್ಲಿಯೇ ಇದ್ದ ಶೆಟ್ಟರ ಅಂಗಡಿಯಲ್ಲಿ ಕನ್ನಡ ಜಾಬ್ ಟೈಪಿಂಗ್ ಮಾಡುತ್ತಿದ್ದ ಜವರಪ್ಪ [ಇವರು ಇಂದಿಗೂ ನನ್ನ ಆತ್ಮೀಯ ಗೆಳೆಯರು, ಈಗ ಸಹೋದ್ಯೋಗಿಯೂ ಅಗಿದ್ದಾರೆ] ಅವರು ಕನ್ನಡ ಪ್ರತಿ ಮಾಡಿಕೊಟ್ಟರು. ಕನ್ನಡ ಅವತರಣಿಕೆ ಅತಿ ಶೀಘ್ರದಲ್ಲಿ ಮುದ್ರಣಗೊಂಡೂ ಆಯಿತು.

ಆ ವೇಳೆಗಾಗಲೇ ರಾಷ್ಟ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳು ಕಾಣಲಾರಂಭಿಸಿದ್ದವು. ಮೊರಾರ್ಜಿ ದೇಸಾಯಿ ವಿರುದ್ದ ಭಿನ್ನಮತ ಬಿಸಿ ಶುರುವಾಗಿತ್ತು. ರಾಯ್ಬರೇಲಿಯಲ್ಲಿ ಹೀನಾಯ ಸೋಲು ಕಂಡಿದ್ದ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರಿನಿಂದ ಮರು ಆಯ್ಕೆ ಬಯಸಿ ಉಪ ಚುನಾವಣೆಗೆ ಸ್ಪರ್ಧಿಸಿದರು. ಅವರ ವಿರುದ್ದ ಪ್ರಚಾರ ಮಾಡಲು ಹಲವು ಪ್ರಗತಿಪರ ಸಂಘಟನೆಗಳು, ವಿಚಾರವಾದಿಗಳು ಮುಂದೆ ಬಂದರು.

ಅದೇತಾನೆ ದೆಹಲಿಯ ಎನ್.ಎಸ್.ಡಿ.ಯಲ್ಲಿ ತರಬೇತು ಪಡೆದು ಬಂದಿದ್ದ ಪ್ರಸನ್ನ ಅವರ ಪತ್ನಿ ಮಾಲತಿ, ಸುರೇಂದ್ರ, ಜನ್ನಿ, ಚಲಮ್, ಎನ್.ಕೆ.ಮೋಹನರಾಮ, ಶಶಿಧರ ಅಡಪ, ಸಿ.ಜಿ. ಕೃಷ್ಣಸ್ವಾಮಿ,ಶಾಂತ ಇನ್ನೂ ಹಲವಾರು ಗೆಳೆಯರು ಒಂದುಗೂಡಿ [ಮುಂದೆ ಇದೇ ತಂಡ ಸಮುದಾಯವಾಗಿ ಅಧಿಕೃತವಾಗಿ ಬೆಳೆಯಿತು] ಸಿದ್ದಲಿಂಗಯ್ಯ ರಚಿಸಿದ ಎರಡು ಬೀದಿ (ಬೆಲ್ಚಿ- ಪತ್ರೆ ಸಂಗಪ್ಪನ ಕಗ್ಗೊಲೆ) ನಾಟಕಗಳನ್ನಾಡಲು ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದೆವು.

ಆ ವೇಳೆಗಾಗಲೇ ನನ್ನ ಮದುವೆಯಾಗಿತ್ತು. ಮನೆಯಲ್ಲಿ ತುಂಬು ಬಸುರಿ ನನ್ನ ಪತ್ನಿ. ಕುಳಿತು ಉಣ್ಣುವಂತಹ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. [ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ] ನನಗಾಗ ಸಂದಿಗ್ಧ ಪರಿಸ್ಥಿತಿ ಯಲ್ಲಿ ನೆನಪಾಗಿದ್ದು ನಾನು ಎಂದೋ ಅನುವಾದ ಮಾಡಿದ್ದ ಷಾ ವಿಚಾರಣಾ ಅಯೋಗದ ವರದಿ.

ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಪುಸ್ತಕ ಪ್ರಕಟಗೊಂಡರೂ ಸಂಭಾವನೆ ಕೈಸೇರಿರಲಿಲ್ಲ. ತಕ್ಷಣವೇ ಗೆಳೆಯ ಯಗಟಿಯನ್ನು ಸಂಪರ್ಕಿಸಿದೆ. “ನೀನು ಚಿಕ್ಕಮಗಳೂರಿಗೆ ಹೋಗು. ನಿನ್ನ ಮನೆಗೆ ಹಣ ತಲುಪಿಸುವುದು ನನ್ನ ಹೊಣೆಗಾರಿಕೆ” ಎಂದು ಮಾತು ಕೊಟ್ಟ. ನಾನು ನಿಶ್ಚಿಂತೆಯಾಗಿ ತಂಡದಲ್ಲಿ ಸೇರ್ಪಡೆಯಾಗಿ ಇಂದಿರಾ ವಿರುದ್ದ ಪ್ರಚಾರ ಕ್ಕೆ ಹೊರಟೆವು.

ಯಗಟಿ ಕೊಟ್ಟ ಮಾತಿನಂತೆ ನನ್ನ ಮನೆ ಹುಡುಕಿಕೊಂಡು ಹೋಗಿ ಹಣ ನೀಡಿದ. ಹೀಗೆ ಕೊಟ್ಟ ಸಂಭಾವನೆ ಎಷ್ಟೆಂದು ಈಗ ಮರೆತಿದ್ದೇನೆ. ಆದರೆ ಅದು ನನ್ನ ಪತ್ನಿಯ ಹೆರಿಗೆಗೆ, ತದನಂತರದ ಬಾಣಂತನಕ್ಕೆ ಸಾಕಾಗುವಷ್ಟಾಯಿತು. [ಯಗಟಿ ಇಂದು ನಮ್ಮೊಂದಿಗಿಲ್ಲ]

ಅದಾದ ಕೆಲವೇ ಕಾಲದಲ್ಲಿ ಜನತಾ ಸರಕಾರ ಕುಸಿದು ಬಿತ್ತು. ಮರಳಿ ಲೋಕಸಭೆಗೆ ಚುನಾವಣೆ ನಡೆದು ಇಂದಿರಾ ಕಾಂಗ್ರೆಸ್ ಪಕ್ಷ ಅತ್ಯಂತ ಹೆಚ್ಚಿನ ಬಹುಮತ ಪಡೆದು ಅದಿಕಾರಕ್ಕೆ ಬಂದಿತು. ತಕ್ಷಣ ಅದು ಮಾಡಿದ ಕೆಲಸ ಜನತಾ ಆಡಳಿತ ಕಾಲದಲ್ಲಿ ನಡೆದ ಷಾ ವಿಚಾರಣ ಆಯೋಗದ ವರದಿಗಳ ಪ್ರತಿಗಳನ್ನು ತರಿಸಿ ನಾಶಪಡಿಸಿದ್ದು.

ಬೆಂಗಳೂರು ಕೇಂದ್ರ ಸಮಾಚಾರ ಇಲಾಖೆ ಕಛೇರಿಯಲ್ಲಿದ್ದ ನಾನು ಅನುವಾದಿಸಿದ ಕನ್ನಡ ಆವೃತ್ತಿಗೂ ಅದೇ ಗತಿಯಾಯಿತು. ಇದೇ ಒಂದು ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿತು. ತಮಿಳ್ನಾಡಿನ ಸಂಸದರಾದ ಇರಾಚೆಳಿಯನ್ ಮುಂದೆ ಸಾಕಷ್ಟು ಹೋರಾಟ ನಡೆಸಿ ಷಾ ಆಯೋಗದ ಪ್ರತಿಯನ್ನು ದೊರಕಿಸಿಕೊಂಡರು ಹಾಗು “ಷಾ ಕಮೀಷನ್ ರಿಪೋರ್ಟ್- ಲಾಸ್ಟ್ ಅಂಡ್ ರಿಗೈನ್ಡ್” ಎಂಬ ಪುಸ್ತಕ ಬರೆದು ಖ್ಯಾತಿ ಪಡೆದರು.

[ನಾನು ಷಾ ವಿಚಾರಣಾ ಆಯೋಗ ಅನುವಾದಿತ ಪ್ರತಿಯನ್ನು ಈಗಲೂ ಹೊಂದಿದ್ದೇನೆ. ಆದರೆ ನನ್ನ ಪುಸ್ತಕರಾಶಿ ಯಲ್ಲಿ ಅದು ತಕ್ಷಣಕ್ಕೆ ಸಿಗುತ್ತಿಲ್ಲ. ಯಾರಾದರೂ ಗೆಳೆಯರು ಅದನ್ನು ಇನ್ನೂ ಇಟ್ಟುಕೊಂಡಿದ್ದರೆ ನನಗೆ ಪ್ರತಿ ನೀಡಲು ಸಾದ್ಯವೇ]

1 comment

  1. ವಿಜಯೇಂದ್ರ ಸರ್ ..
    ನಿಮ್ಮ ಇಂತಹ ಅನುಭವಗಳು ಆಗಾಗ ನೆನಪಾಗುತ್ತವೆ.
    ಸೂರ್ಯಪ್ರಕಾಶ್ ಅವರು ಪ್ರಸಾರ ಭಾರತಿಯ ಚೇರ್ ಮನ್. ಗಮನಿಸಿರಿ.

    ನೂತನ ದೋಶೆಟ್ಟಿ

Leave a Reply