ಮಾಟ ಮಂತ್ರ ಮಾಡೋರ ರಾಜ್ಯದಲ್ಲಿ ನಡೆದೇ ಹೋಯ್ತು’ರೈಲು ನಾಟಕ’

‘ಪ್ರಮೋಷನ್ ಕೊಟ್ಟಿದೀವಿ. ಕೇರಳದ ಕೊಚ್ಚಿಗೆ ಹೊಗಿ ರಿಪೋರ್ಟ್ ಮಡ್ಕೊಳ್ಳಿ’ ಅಂತ ಒಂದು ಪತ್ರ ಕೈಗೆ ಬಂದಾಗ ಒಂಥರಾ ಮಿಶ್ರ ಭಾವ.

ಇದುವರೆಗೂ ಶಿರಸಿ, ಕುಮಟಾ ಅಂತ ತಿರುಗ್ತಾ, ಮನೆ ಊಟ ಮಾಡ್ತಾ, ನಾಟ್ಕ ಗೀಟ್ಕ ಅಂತ ಓಡಾಡಿಕೊಂಡು ಮಕ್ಕಳ ಜೊತೆ ಅಡಿಕೊಂಡು ಇದ್ದವನಿಗೆ, ಇದೆಲ್ಲಾ ಬಿಟ್ಟು ಅಲ್ಲಿಗೆ ಹೋಗೋದಾ? ಅನ್ನೋ ವಿಷಾದ ಒಂದಾದರೆ, ಸಾಂಸ್ಕೃತಿಕವಾಗಿ ಶ್ರೀಮಂತವಗಿರೋ ಕೇರಳದಲ್ಲಿ ಒಂದೆರಡು ವರ್ಷ ಇದ್ದು ಒಂದಿಷ್ಟು ಅನುಭವ ಗಳಿಸಬಹುದಲ್ಲ ಅನ್ನೋ ಖುಶಿ.

ಒಟ್ಟಾರೆ ಒಂಥರಾ ಡೈಲಮಾ. ತಕ್ಕಡಿ ಮೇಲೆ, ಕೆಳಗೆ ತೂಗಿಕೊಳ್ತಾ ಕೊನೆಗೆ ಕೇರಳದ ಕಡೆಗೇ ಹೆಚ್ಚು ಭಾರವಾಗಿ, ‘ ಸರಿ, ಹೊರಡೋದೇ’ ಅಂತ ನಿರ್ಧಾರವಾಯ್ತು..

ಹಾಗಂತ ಕೇರಳದ ವಾಸ ನನಗೆ ಹೊಸದೇನೂ ಆಗಿರಲಿಲ್ಲ. ಮೂವತ್ತು ವರ್ಷಗಳ ಹಿಂದೆಯೇ ಒಂದು ವರ್ಷ ಅಲ್ಲಿದ್ದೆ. ಅಗಿನ್ನೂ ಕಾಲೇಜಿನಿಂದ ಹೊರಬಂದ ದಿನಗಳು. ಆಗಿನ
‘ ಅಂಚೆ ಮತ್ತು ತಂತಿ ಇಲಾಖೆ’ಯಲ್ಲಿ ಕಿರಿಯ ಎಂಜಿನಿಯರ್ ಅಂತ ಕೆಲಸ ಸಿಕ್ಕಿದ ಮೇಲೆ ಒಂದು ವರ್ಷ ತರಬೇತಿಗಾಗಿ ತ್ರಿವೇಂದ್ರಂಗೆ ಹೋಗ್ಬೇಕಾಗಿ ಬಂತು.

ಆಗ ತುಂಬ ತಳಮಳ. ಅಮ್ಮನಿಗೋ ತುಂಬ ಭಯ. ‘ಮಾಟ, ಮಂತ್ರ ಮಾಡೋರ ರಾಜ್ಯ ಅದು’ ಅಂತ ಆಕೆಗೆ ಯಾರೋ ಹೇಳ್ಬಿಟ್ಟಿದ್ರು. ‘ ಸಾಧ್ಯವೇ ಇಲ್ಲ: ಹೋಗೋದೇ ಬೇಡ ಅಂತ ಕೂತ್ಬಿಟ್ರು. ಒಪ್ಪಿಸೋದಕ್ಕೆ ಸಾಕು ಸಾಕಾಯ್ತು.

ನಾನೋ, ಹೊನ್ನಾವರದಂಥ ಸಣ್ಣ ಊರಿನವ. ಆ ಊರಲ್ಲಿ ಹೊರ ಜಗತ್ತನ್ನ ಕಂಡವರೂ ಕಡಿಮೆ. ಅಲ್ಲಿಲ್ಲಿ ಕೇಳಿದ ಮೇಲೆ, ಮಂಗಳೂರಿಂದ ಸಂಜೆ ‘ಮಲಬಾರ್ ಎಕ್ಸಪ್ರೆಸ್’ ಅನ್ನೋ ರೈಲು ಹೊರಡುತ್ತೆ ಅಂತಲೂ ಬೆಳಿಗ್ಗೆ ತ್ರಿವೇಂಡ್ರಂ ತಲುಪುತ್ತೆ ಅಂತಲೂ ಮಾಹಿತಿ ಸಿಕ್ತು.

ರಿಸರ್ವೇಷನ್  ಅದು ಇದು ಏನೂ ಇರಲಿಲ್ಲ.ಒಂದು ಬ್ಯಾಗ್ ಬಟ್ಟೆ ತುಂಬಿಕೊಂಡು ಹೊರಟಾಯ್ತು. ಮಂಗಳೂರು ರೇಲ್ವೆ ಸ್ಟೇಷನ್ ನಲ್ಲಿ ಏನೂ ಗೊತ್ತಾಗ್ತಿರಲಿಲ್ಲ. ಅಲ್ಲೇ ಓಡಾಡಿಕೊಂಡಿದ್ದ ಕೆಂಪಂಗಿ ಕೂಲಿಯನ್ನ ಕೇಳಿ ನನ್ನ ಕಷ್ಟ ಹೇಳ್ಕೊಂಡೆ. ಆತ, “ ನೀವೇನೂ ಚಿಂತೆ ಮಾಡ್ಬೇಡಿ, ನಾನು ಸೀಟು ಹಿಡೀತೀನಿ” ಅಂತ ಧೈರ್ಯ ತುಂಬಿದ. ಜೊತೆಗೆ, ಹತ್ತು ರೂಪಾಯಿ ಚಾರ್ಜ್ ಆಗತ್ತೆ ಅಂತಲೂ ಸೇರಿಸಿದ. ನಾನು ಮರುಮಾತಿಲ್ಲದೇ ಒಪ್ಕೊಂಡೆ. ರೈಲು ಪ್ಲಾಟ್ ಫಾರ್ಮ್ ಗೆ ಬಂದು ನಿಲ್ತಿದ್ದ ಹಾಗೆ ನುಗ್ಗಿದ ಅಸಾಮಿ ಜನರಲ್ ಬೋಗಿಯೊಂದರಲ್ಲಿ ಸೀಟಿನ ಮೇಲೆ ಟವೆಲ್ ಹಾಕಿ ಕುಳಿತುಬಿಟ್ಟ. ಹತ್ತು ರೂಪಾಯಿ ಕೊಟ್ಟ ಮೇಲೇ ಸೀಟು ಬಿಟ್ಟುಕೊಟ್ಟ. ಕೂತ ಮೇಲೆ ಆಚೀಚೆ ನೋಡ್ತೀನಿ, ಬೋಗೀಲಿ ಜನವೇ ಇಲ್ಲ. ಬಿಡಿ ಬಿಡಿಯಾಗಿ ಕೆಲವೇ ಜನ ಮಾತ್ರ. ನನ್ನ ಹತ್ತು ರೂಪಾಯಿ ಸುಮ್ಮನೇ ಕೈಬಿಟ್ಟುಹೋಗಿತ್ತು!

ರೈಲು ಹೊರಡುತ್ತಿದ್ದಂತೆ, ಓಡುತ್ತ ಬಂದ ಅಸಾಮಿಯೊಬ್ಬ ರೈಲು ಹತ್ತಿದ. ನನ್ನೆದುರು ಸೀಟಿನಲ್ಲಿಯೇ ಕುಳಿತುಕೊಂಡ. ನೋಡಲು ‘ಬಾವಾಜಿ’ ಯಂತಿದ್ದ. ಈ ‘ಬಾವಾಜಿ’ ಗಳೆಂದರೆ ಕೇರಳ ಕಡೆಯವರು. ಚಿಕ್ಕಂದಿನಲ್ಲಿ ನಾವು ಇದ್ದ ಭಾಡಿಗೆಯ ಮನೆಯೆದುರು ಯಾವಾಗಲೂ ಬರುತ್ತಿದ್ದರು. ನಾವು ಬಾಡಿಗೆಗೆ ಇದ್ದದ್ದು ಒಂದು ದೇವಸ್ಥಾನದ ಪಕ್ಕದಲ್ಲಿ. ಮನೆಯೆದುರು ಚಿಕ್ಕ ಛಡಿಯಿತ್ತು. ಇವರೆಲ್ಲ ಅಲ್ಲಿ ಬಂದು ರೆಸ್ಟ್ ಮಾಡುತ್ತಿದ್ದರು.

ಉದ್ದ ಗಡ್ಡ ಬಿಟ್ಟು, ಜಡೆ ಕಟ್ಟಿ ಒಂದು ಚಿಕ್ಕ ಕೇಸರಿ ಲುಂಗಿ ಕಟ್ಟಿಕೊಂಡಿರುತ್ತಿದ್ದರು. ಬಗಲಿಗೊಂದು ಜೋಳಿಗೆ. ಬೆಳಿಗ್ಗೆ ಎದ್ದು ಬೇಡಲು ಹೊರಟರೆ ಸಂಜೆ ಬರುತ್ತಿದ್ದರು. ಅವರ ಅಡುಗೆ ರೀತಿಯೇ ನಮ್ಮಲ್ಲಿಕುತೂಹಲ ಹುಟ್ಟಿಸುತ್ತಿತ್ತು.ಬೇಡಿ ತಂದ ಅಕ್ಕಿ, ತರಕಾರಿ, ಬೆಲ್ಲ ಎಲ್ಲ ಸೇರಿಸಿ ಮೂರು ಕಲ್ಲು ಹೂಡಿದ ಒಲೆಯ ಮೇಲೆ ಇಟ್ಟು ಬೇಯಿಸುತ್ತಿದ್ದರು. ಅನ್ನ, ಹುಳಿ, ತಂಬುಳಿ ಎಲ್ಲ ಬೇರೆ ಬೇರೆ ಮಾಡಿ ಊಟ ಮಾಡುವ ನಮಗೆ ಇವರ ಊಟ ವಿಚಿತ್ರ ಅನಿಸುತ್ತಿತ್ತು. ಕೆಲವರು ಮೌನಿಗಳಾದರೆ ಕೆಲವರು ಹರಕು ಮುರುಕು ಕನ್ನಡ ಮಾತನಾಡುತ್ತಿದ್ದರು. ತುಂಬ ಸಭ್ಯರು.

ನನ್ನೆದುರು ಕುಳಿತವನು ಸುಮಾರಾಗಿ ಹಾಗೇ ಇದ್ದ. ಬಗಲಲ್ಲಿನ ಜೋಳಿಗೆಯಿಂದ ಇಡ್ಲಿಯಂತಹುದೇನನ್ನೋ ತೆಗೆದು ತಿಂದು ನೀರು ಕುಡಿದ. ದಣಿವಾರಿಸಿಕೊಂಡು ನಕ್ಕ. ನಾನೂ ನಕ್ಕು ‘ನಮಸ್ಕಾರ’ ಅಂದೆ. ಮಲೆಯಾಳಿಯಲ್ಲಿ ಏನನ್ನೋ ಕೇಳತೊಡಗಿದ. ನಾನು ಕೈಸನ್ನೆ ಬಾಯಿಸನ್ನೆಯಲ್ಲಿ ‘ನನಗೆ ಭಾಷೆ ಬರಲ್ಲ’ ಅನ್ನೋದನ್ನ ಅವನಿಗೆ ಹೇಳುವದರಲ್ಲಿ ಯಶಸ್ವಿಯಾದೆ. ಆತನೂ ಸುಮ್ಮನಾದ.

ಸ್ವಲ್ಪ ಹೊತ್ತಾಗಿರಬೇಕು ರೈಲು ಅದ್ಯಾವುದೋ ದೇವಸ್ಥಾನದ ಹತ್ತಿರ ಪಾಸಾಯ್ತು. ಇವ ದೇವರಿಗೆ ಕೈ ಮುಗಿದವನೇ ಕೈ ಮೇಲೇರಿಸಿ ಹೂಂಕರಿಸತೊಡಗಿದ. ನನ್ನ ಮುಖದ ಹತ್ತಿರ ಕೈ ತಂದು ಜಾದೂಗಾರರಂತೆ ಬೆರಳು ತಿರುಗಿಸತೊಡಗಿದ. ನನಗೆ ಬಾಲ್ಯದಲ್ಲಿ ಓದಿದ ಎನ್. ನರಸಿಂಹಯ್ಯನವರ ‘ಮಲಯಾಳ ಮಾಂತ್ರಿಕ’ ಕಾದಂಬರಿಯೂ, ಅಮ್ಮನ ‘ಮಾಟ, ಮಂತ್ರ ಮಾಡೋರ ರಾಜ್ಯ’ವೂ ಏಕಕಾಲದಲ್ಲಿ ನೆನಪಾದವು.

ಕಾಲೇಜು ದಿನಗಳಲ್ಲಿ ಜಿ ಎಸ್ ಅವಧಾನಿ, ಆರ್.ವಿ. ಭಂಡಾರಿ ಸರ್ ಜೊತೆ ತಿರುಗುತ್ತ ಒಂದಿಷ್ಟು ಓದಿಕೊಂಡಿದ್ದ ನನಗೆ ಇವುಗಳಲ್ಲಿ ನಂಬಿಕೆಯಿರಲಿಲ್ಲವಾದರೂ ಆ ಧಡೂತಿಯ ಆವೇಶ ಹೆಚ್ಚಾಗಿ ಏನಾದರೂ ಮಾಡಿಬಿಟ್ಟರೆ ಅಂತ ಭಯ ಸುರುವಾಯ್ತು. ನಿಧಾನ ಪಕ್ಕದ ಸೀಟಿಗೆ ಹೋಗಿ ಕುಳಿತೆ. ಆತ ಅಲ್ಲೂ ಬಂದು ಸುರುವಿಟ್ಟುಕೊಂಡ. ನನಗೆ ಈಗ ನಿಜಕ್ಕೂ ಭಯವಾಗಿತ್ತು. ಬೋಗಿಯಲ್ಲಿ ಜನವೂ ಇರಲಿಲ್ಲ. ಈ ಮನುಷ್ಯ ನನ್ನನ್ನು ಏಳೋಕೂ ಬಿಡ್ತಿರಲಿಲ್ಲ.

ಇವನ ಜೋರಾದ ಹೂಂಕಾರ ಕೇಳಿ, ದೂರದಲ್ಲಿದ್ದ ಎರಡು ಮೂರು ಜನ ಪ್ರಯಾಣಿಕರು ಓಡಿ ಬಂದರು. ನನ್ನ ಭಯ ನೋಡಿ ಪಾಪ ಅನಿಸಿರಬೇಕು. ಮಲಯಾಳಂನಲ್ಲಿ ಏನೋ ಬೈಯೋದಕ್ಕೆ ಸುರುಮಾಡಿದರು. ಅವರಲ್ಲೊಬ್ಬ ಅವನಿಗೆ ಎರಡು ಬಾರಿಸಿದ. ಬೈರಾಗಿ ಥಟ್ಟನೆ ಶಾಂತನಾದ. ಮುಂದಿನ ಸ್ಟೇಷನ್ ನಲ್ಲಿ ಆತ ಇಳಿಯುವವರೆಗೂ ನನ್ನ ಜೊತೆಗಿದ್ದ ಅವರು ಆತ ಇಳಿದ ಮೇಲೆ ತಮ್ಮ ಸೀಟುಗಳಿಗೆ ಹೋದರು. ನಾನು ನಿಟ್ಟುಸಿರುಬಿಟ್ಟೆ

ಹೀಗೆ ನನ್ನ ಮೊದಲ ಟ್ರಿಪ್ ನಲ್ಲೇ ‘ ಮಲಯಾಳ ರಂಗಭೂಮಿ’ ಯ ಸ್ಯಾಂಪಲ್ಲೊಂದನ್ನ ನೋಡಿದೆ. ವಿಚಿತ್ರವಾದ ‘ ರೈಲು ರಂಗಭೂಮಿ’ ಯೊಂದರ ಪರಿಚಯ ನನಗಾಗಿತ್ತು.

 

10 comments

  1. .ವಿಷಯ ಭಯಾನಕವಾಗದ್ದರೂ ಮನೋಸ್ಥೈರ್ಯದಿಂದ ಎದುರಿಸಿದ ಪರಿ ತುಂಬ ಶ್ಲಾಘನೀಯ.ಹೀಗೇ‌ ಧೈರ್ಯದಿಂದ ಮುಂದೆ ಸಾಗಿರಿ.ಜೀವನದಲ್ಲಿ ಒಳ್ಳೆಯದಾಗುತ್ತದೆ.
    ಒಳ್ಳೆಯ ಬರಹ.

  2. ಸುಂದರ ನಿರೂಪಣೆ.ಕುತೂಹಲಕಾರಿಯಾಗಿದೆ.

  3. ಆರಂಭದಲ್ಲಿಯೇ ಅತ್ಯಂತ ಕುತೂಹಲ ಹುಟ್ಟಿಸಿದ ಈ ಯಾತ್ರೆ, ಮುಂದೆ ಇನ್ನೂ ಹೆಚ್ಚಿನ ಕುತೂಹಲದ ಘಟನೆಗಳು ನಡೆಯುವುದರ ಮುನ್ಸೂಚನೆಯಾಗಿ ಕಾಣಿಸ್ತಾ ಇದೆ… ಹೀಗೆಯೇ ಕುತೂಹಲ ಮೂಡಿಸುವ ಆಕರ್ಷಕ ನಿರೂಪಣೆ ಮುಂದುವರಿಯಲಿ…

  4. ಆರಂಭ ಚನ್ನಾಗಿದೆ. ಓದುವ ಕುತೂಹಲ ಉಂಟಾಗಿದೆ.ಇನ್ನೊಂದು ಕಂತಿಗೆ ಕಾಯ್ತಾ ಇರ್ತೇನೆ.ವಂದನೆಗಳು.

Leave a Reply