ನನ್ನ ಕೇರಳದ ಥಿಯೇಟರ್ ಜರ್ನಿ ಶುರುವಾಯ್ತು..

ಮೊದಲ ನಾಟ್ಕ

ಈ ಬಾರಿ ನಾನು ಹೋಗಬೇಕಿದ್ದದ್ದು ‘ಆಳುವಾ’ ಅನ್ನೋ ಊರಿಗೆ.

“ಆಳುವಾ’, ‘ಆಳುವೆ’, ‘ಆಳವಾಯ್’ ಹೀಗೆ ಹಲವು ಬಗೇಲಿ ಕರೆಸಿಕೊಳ್ಳೋ ಈ ಪುಟ್ಟ ಪಟ್ಟಣ ಕೊಚ್ಚಿಯ ಒಂದು ಭಾಗ. ಪೆರಿಯಾರ್ ನದಿಯ ದಡದ ಮೇಲಿರೋ ಊರು. ಕೇರಳದ ವಾಣಿಜ್ಯ ನಗರಿ, ಎರ್ನಾಕುಲಂ ನ ಹೊರವಲಯ. ಕೇರಳದ ಜೀವನದಿ ಪೆರಿಯಾರ್. ಪಶ್ಚಿಮ ಘಟ್ಟದಲ್ಲಿ  ಹುಟ್ಟಿ ಉದ್ದಾನುದ್ದ ಹರಿಯೋ ಈ ನದಿ, ಅದಕ್ಕೂ ಮುಂಚೆ ಎರಡು ಕವಲಾಗತ್ತೆ. ಒಂದು ಕವಲಿನ ದಡದ ಮೇಲೆ ನಿಂತಿರೋ ಪಟ್ಟಣ ‘ಆಳುವಾ’.

ಇಂಥ ಆಳುವಾನಲ್ಲಿ, ಹೊಸದಾಗಿ ಕೊಂಡ ಸ್ಕೂಟರಿನ ಮೇಲೆ

ನಾನು ಬರ್ತಿರೋವಾಗ ಒಂದು ಸಂಜೆ….

ನನ್ನ ಮನೇ ತಿರುವಿನಲ್ಲಿ ಒಂದು ಹೋರ್ಡಿಂಗ್. ಬಣ್ಣ ಬಣ್ಣದ ಹೋರ್ಡಿಂಗ್ ನ ಮೇಲೆ ನಾನು ಓದಬಲ್ಲ ಒಂದೇ ಒಂದು ಶಬ್ದ ‘ISLAND’.  ಹೋರ್ಡಿಂಗ್ ನೋಡ್ತಿದ್ದ ಹಾಗೆ ನನ್ನಸ್ಕೂಟರು ಛಕ್ಕನೆ ನಿಂತ್ಕೊಂಡ್ತು. ಹೌದು. ಇದು ನಾಟಕದ ಹೋರ್ಡಿಂಗೇ. ಒಂದು ಕ್ಷಣ ಪುಳಕ. ನನ್ನ ಬಯಕೆಗಳ ಗರಿಗೆದರಿಸುತ್ತ ಆ ಹೋರ್ಡಿಂಗ್ ಎದುರಿಗೇ ನಿಂತಿದೆ!

ಆದರೆ ISLAND ಬಿಟ್ರೆ ಇನ್ನೊಂದಕ್ಷರವೂ ಓದೋಕೇ ಬರ್ತಿಲ್ಲ. ಸರಿ, ವಿಚಾರಣೆ ಪ್ರಾರಂಭವಾಯ್ತು.ಸುತ್ತಾ ಮುತ್ತಾ ಕೇಳಿದ್ಮೇಲೆ ಪಕ್ಕದ ಓಣಿಯಲ್ಲೇ ನಾಟ್ಕ ಅಂತಾಯ್ತು. ಚೂರು ಮುಂದೆ ಹೋಗಿ ನೋಡಿದ್ರೆ ಅದು ನಾನಿರೋ ಓಣೀನೇ. ಓಹ್! ನನಗರಿವಿಲ್ಲದಂತೆಯೇ ನಾನು ರಂಗಮಂದಿರವೊಂದರ ಮಡಿಲಿಗೆ ಬಂದು ಬಿದ್ದಿದ್ದೆ.

ಮನೆಗೆ ಹೋಗಿ ನೋಡಿದ್ರೆ, ಕಿಟಕೀಲಿ ರಂಗಮಂದಿರದ ಕೋಳು ಕಾಣ್ತಿದೆ. ನಾನದನ್ನ ಗಮನಿಸಿರಲೇ ಇಲ್ಲ. ಒಂದೊಮ್ಮೆ ಗಮನಿಸಿದರೂ ಅದೊಂದು ಥಿಯೇಟರ್ ಅಂದ್ಕೊಳ್ಳುವ ಹಾಗೆ ಇರಲೂ ಇಲ್ಲ. ಅದೇ T.A.S.S. HALL. ಮುಂದೆ ಆಳುವಾನಲ್ಲಿರೋವರೆಗೂ ನನ್ನ ಮತ್ತು ರಂಗಭೂಮಿಯ ನಡುವೆ ಸೇತುವೆಯಾದ ಹಾಲ್.

TASS HALL. ಅದೇನೂ ಅಂಥ ಅತ್ಯಾಧುನಿಕ ಹಾಲ್ ಆಗಿರಲಿಲ್ಲ. ಒಂಥರಾ ಶೆಡ್ ನಂತಹ ಕಟ್ಟಡ ಅದು.ಪ್ರೇಕ್ಷಕರಿಗೆ ನೋಡಲು ಅನಾನುಕೂಲ ಆಗ್ದಂತೆ  ನೆಟ್ಟಿರೋ ಕೆಲವು ಕಂಭಗಳು, ಮೇಲೆ ಶೀಟ್. ಸದ್ದಾಗದಂತೆ ಸೀಲಿಂಗ್. ಒಂಥರಾ ಕಪ್ಪು ಗೋಡೆಗಳು. ಅಂಥ ಆಕರ್ಷಕ ನೋಟದ ಹಾಲ್ ಏನಲ್ಲ ಅದು.

ಆದರೆ ಸ್ಟೇಜ್ ನ ವಿನ್ಯಾಸ ಅದ್ಭುತವಾಗಿತ್ತು. ಸಾಕಷ್ಟು ವಿಶಾಲವಾದ ಸ್ಟೇಜ್. ಬೇಕಾದಷ್ಟು ವಿಂಗ್ ಸ್ಪೇಸ್. ತುಂಬಾ ತುಂಬಾ ವಿಂಗ್ ಗಳು. ಅತ್ಯಾಧುನಿಕ ಲೈಟು, ಸೌಂಡ್ ಸಿಸ್ಟ್ಂ. ಒಳ್ಳೆಯ ಆಸನಗಳು. ಹೀಗೆ ಒಂದು ಒಳ್ಳೆಯ ರಂಗಾನುಭವಕ್ಕೆ ಬೇಕಾದ ಅಗತ್ಯಗಳೆಲ್ಲ ಇರೋ ಜಾಗ.  ALUVA SANGEET SABHA ಈ ಹಾಲ್ ನ್ನ ನಡೆಸುತ್ತಿತ್ತು.’TASS’ ಅಂದ್ರೆ ಏನು? ಅಂತ ಕೇಳಿದ್ರೆ, ಅದು (A)ಆಳುವಾ(S) ಸಂಗೀತ್ (S)ಸಭಾದ ಹಾಲ್.

ಆದರೆ, ASS HALL ಅಂತ ಹೆಸರಿಟ್ರೆ ಚೆನ್ನಾಗಿರಲ್ಲ ಅಂತ TASS HALL ಇಟ್ಟಿದೀವಿ ಅಂತ ಚೇರಮನ್ ನಾರಾಯಣನ್ ನಗ್ತಿದ್ರು.

ಇದೇ ಹಾಲ್ ನಲ್ಲಿ ನಾನು ಕೇರಳದ

ನನ್ನ ಮೊದಲ ನಾಟಕ ನೋಡಿದೆ.

 ‘ಅಥಾಲ್ ಫ್ಯುಗಾರ್ಡ ನ’ THE ISLAND’ ನನ್ನನ್ನ ಮೊದಲ್ನಿಂದ್ಲೂ  ಕಾಡಿದ ನಾಟಕ. ನಾನು ಭಾಗವಹಿಸಿದ ಮೊದಲ ನಾಟಕಗಳಲ್ಲೊಂದು. ಮಂಗಳೂರಿನ ‘ಆಯನ’ ದಲ್ಲಿ ‘ದ್ವೀಪ’ ಅನ್ನೋ ಹೆಸರಲ್ಲಿ ಈ ನಾಟಕ ಆಡಿದ್ವಿ. ಚಂದ್ರಹಾಸ ಉಳ್ಳಾಲ, ಸುರೇಶ ತಾಳಿತ್ತಬೆಟ್ಟು ಈ ನಾಟಕದ ನಟರು, ಇಬ್ಬರೂ ಅದ್ಭುತ ಸತ್ವದ ನಟರು.

ನನಗೆ ಸಂಗೀತದ ಜವಾಬ್ದಾರಿ ಹೊರಿಸಿದ್ರು. ಆಗ ಈಗಿನ ಥರ ರೆಡಿಮೇಡ್ ಸೌಂಡ್ಸ್ ಸಿಕ್ತಿರಲಿಲ್ಲ. ಶ್ಯಾಂಪ್ರಕಾಶ್ ನ ಹಳೇ ಟೇಪ್ ರಿಕಾರ್ಡರೇ ನಮ್ ರೆಕಾರ್ಡಿಂಗ್ ಟೂಲ್. ಸೋಮೇಶ್ವರ್ ಬೀಚ್ ಗೆ ಹೋಗೋದು, ಕಡಲ ಸೌಂಡ್ ರೆಕಾರ್ಡ್ ಮಾಡೋದು. ರಾತ್ರಿ ಹುಡುಕ್ಕೊಂಡ್ ಹೋಗಿ ಜೀರುಂಡೆಗಳ ಸದ್ದು ಹಿಡಿಯೋದು. ಈ ಓಪನ್ ರೆಕಾರ್ಡಿಂಗ್ ವ್ಯವಹಾರದಲ್ಲಿ ಮೇನ್ ಸೌಂಡ್ ಜೊತೆ  ಬೇಡದ ಬೇರೆಲ್ಲ ಸಪ್ಪಳ ಸೇರ್ಕೊಂಡ್ ಬಿಡ್ತಿತ್ತು. ಮತ್ತೆ ಹೋಗೋದು, ಮತ್ತೆ ಹಿಡಿಯೋದು. ಇದೇ ಕೆಲಸ. ದುಡ್ಡಿಲ್ಲ ಕಾಸಿಲ್ಲದ ಆ ದಿನಗಳಲ್ಲಿ ಅಂಥ ನಾಟಕವೊಂದನ್ನ ಕಟ್ಟಿದ ಅನುಭವ ಮರೆಯಲಾರದ್ದು.

ದಕ್ಷಿಣ ಆಫ್ರಿಕ ಮೂಲದ ‘THE ISLAND’ ಹೋರಾಟಗಾರರ ಜೈಲು ವಾಸದ ಕಥೆ. ವರ್ಣಭೇಧ ವಿರುದ್ಧದ ಹೋರಾಟದೊಂದಿಗೆ ಗುರ್ತಿಸ್ಕೊಂಡು ಪಾಸ್ ಪುಸ್ತಕ ಹರಿದ ವಿನ್ಸ್ಟನ್,  ನಿಷೇಧಿತ ಸಂಘಟನೆಯೊಂದಿಗೆ ಗುರ್ತಿಸ್ಕೊಂಡು ಸೆರೆಯಾದ ಜಾನ್ ಇಬ್ಬರೂ ಈಗ ದ್ವೀಪ ದ ಸೆಲ್ ನಲ್ಲಿದ್ದಾರೆ.

ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನ ಬಿಡುಗಡೆ. ಮಣಭಾರ ಸರಪಳಿ ಹೊತ್ಕೊಂಡು ದಿನವಿಡೀ ಛಡಿಯೇಟು ತಿಂತಾ, ಬಂಡಿಯೆಳೀತಾ ಬದುಕ್ತಿರೋ ಈ ರಾಜಕೀಯ ಕೈದಿಗಳು ‘ಅಂತಿಗೊನೆ’ ನಾಟಕದ ತಯಾರಿ ಮಾಡ್ತಾರೆ. ಹೆಣ್ಣು ಪಾರ್ಟ್ ಮಾಡೋಲ್ಲಂತ ವಿಲ್ಸನ್ ಜಗಳಾಡ್ತಾನೆ. ಅವ್ನನ್ನೆಲ್ಲ ಸಂಭಾಳಿಸಿದ ಮೇಲೆ  ನಾಟಕ ಸುರುವಾಗತ್ತೆ. ನಾಟಕ ಆಗ್ತಿದ್ದ ಹಾಗೆ ಹೋರಾಟದ ಆವಾಹನೆಯಾಗಿಬಿಡತ್ತೆ.ಮತ್ತೆ “ನನ್ನ ನೆಲ, ನನ್ನ ಆತ್ಮಗೌರವ” ಅಂತ ಚೀರ್ತಾನೆ ವಿಲ್ಸನ್. ಸರಿ, ಕೊನೆಯಲ್ಲಿ ಕೋಳ ಹಾಕಿ ಚಾಟಿ ಬೀಸ್ತಾ ಅವ್ರನ್ನ ಮತ್ತೆ ಸೆಲ್ ಗೆ ಎಳ್ಕೊಂಡು ಹೋಗ್ತಾರೆ.

ಅರ್ಧ ಆರಿರೋ ಎರಡು ಮೇಣದ್ ಬತ್ತಿಗಳನ್ನ ರೂಪಕವಾಗಿಟ್ಕೊಂಡು ಸರನ್ ಜಿತ್ ಮತ್ತು ಶ್ಯಾಮ್ ರಾಜಿ ಎನ್ನೋ ಇಬ್ಬರು ಹುಡುಗರು ಈ ನಾಟಕವನ್ನ ಕಟ್ಟಿಕೊಡೋ ರೀತಿ ಅನನ್ಯ. ತುಂಬ ಸತ್ವಯುತವಾದ ಅಭಿನಯವನ್ನ ಬೇಡೋ  ಈ ನಾಟಕದ ತುಂಬ ಅವರ ಮೂಡ್ ಗಳು ಬದಲಾಗ್ತಾ ಹೋಗ್ತವೆ. ಇಬ್ಬರೂ ಅದ್ಭುತ ನಟರು. ಇವರೇ ಮೊದಲು.ನಂತರದ ದಿನಗಳಲ್ಲಿ ಕೇರಳದಲ್ಲಿ ತುಂಬ ಒಳ್ಳೆಯ ನಟರ ಸಮೂಹವನ್ನೇ ಕಂಡೆ.

ನಾಟಕದ ಉತ್ತುಂಗದಲ್ಲಿ ಸ್ವಲ್ಪ ಲೌಡ್ ಅನ್ನಿಸೋ ಅಭಿನಯದ ಮೂಲಕ  ಮತ್ತೆ ಹೋರಾಟದ ದನಿಯೆತ್ತೋ ಈ ಕೈದಿಗಳು ಹೋರಾಟದ ನಿರಂತರೆತೆಗೆ ಸಂಕೇತವಾಗ್ತಾರೆ.

ಇದೇ ನಾಟಕದ ಪ್ಯಾಲಿಸ್ಟೀನಿಯನ್ ಆವೃತ್ತಿಯನ್ನೂ’ITFOK’ ನಲ್ಲಿ ನೋಡಿದೆ. ಆದರೆ ಅಭಿನಯದ ತೀವೃತೆಯ ಕೊರತೆಯಿಂದ್ಲೋ, ಸಬ್ ಟೈಟ್ಲ್ ಗಳ ರಗಳೆಯೊಂದ್ಲೋ ಏನೋ ಆ ನಾಟ್ಕ ಅಷ್ಟೊಂದು ಇಷ್ಟವಾಗ್ಲಿಲ್ಲ. ಆದರೆ ಒಂಥರಾ ವಿಶಿಷ್ಟವಾದ ರಂಗ ಶಿಸ್ತು ಆ ಪ್ರಯೋಗದಲ್ಲಿತ್ತು.

ಹೀಗೆ ‘ದ್ವೀಪ’ ದೊಂದಿಗೆ ನನ್ನ ಕೇರಳದ ಥಿಯೇಟರ್ ಜರ್ನಿ ಶುರುವಾಯ್ತು.

12 comments

  1. ಸೈಡ್ ವಿಂಗ್ಸಿನಿಂದ ಸಿಗೋ ಈ ನೋಟಗಳು….ಆಹಾ

  2. ISLAND (ದ್ವೀಪ) ದಿಂದ ಶುರುವಾದ ನಿಮ್ಮ ಕೇರಳದ ಥಿಯೇಟರ್ ಜರ್ನಿ ಅನೇಕ ತಿರುವುಗಳನ್ನು ಕಾಣುತ್ತಾ ಸರಾಗವಾಗಿ ಸಾಗುತ್ತಿರುವದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ.ಹೀಗೆ ನಿಮ್ಮ ಜರ್ನಿ ಮುಂದೆ ಸಾಗುತ್ತಿರಲಿ ಎಂದು ಆಶಿಸುತ್ತೇನೆ .

Leave a Reply