ನಾಯರ್ ಎರಡು ಮೀಟರ್ ಚಾಯ ಕೊಡಿ…

ರೊಟ್ಟಿ ಹಾಡು

ಕೇರಳ ವಾಸದ ಮೊದಲ ಕಂತಿನಲ್ಲಿ ನನಗೆ ಅಂಥ ರಂಗಾನುಭವವೇನೂ ಆಗಲಿಲ್ಲ. ಅದು ಸಾಧ್ಯವೂ ಇರಲಿಲ್ಲ ಎನ್ನಿ.

‘ತ್ರಿವೇಂದ್ರಂ’ ನ ಟ್ರೇನಿಂಗ್ ಕಾಲೇಜು ದೇಶಕ್ಕೇ ಹೆಸರುವಾಸಿಯಾಗಿತ್ತು. ಅದರ ಕಟ್ಟು ಪಾಡುಗಳಿಗೆ ಮತ್ತು ಕಡಿಮೆ ಮಾರ್ಕು ಕೊಡೋದಕ್ಕೆ. ನಮ್ಮ ಟ್ರೇನಿಂಗ್ ನಲ್ಲಿ ಮಾರ್ಕು ಮುಖ್ಯವಾಗಿತ್ತು. ವರ್ಷಾಂತ್ಯದ ಕೊನೆಗೆ ಒಟ್ಟಾಗುವ ಮಾರ್ಕೇ ಮುಂದಿನ ಇಡಿಯ ಕಾರ್ಯಕಾಲದ ಸೀನಿಯಾರಿಟಿ ಯನ್ನು ನಿರ್ಧರಿಸುತ್ತಿತ್ತು. ವಾರಕ್ಕೆ ನಾಲ್ಕು ಪರೀಕ್ಷೆಗಳು. ಪಿಟ್ಟಾಸಿ ಮಾಸ್ತರುಗಳು. ಹಾಗಾಗಿ ಮಾರ್ಕು ಗಳಿಕೆಯ ಬದುಕಲ್ಲಿ ಬಾಲ ಬಿಚ್ಚುವ ಚಾನ್ಸೇ ಇರಲಿಲ್ಲ.

ಇಂಥ, ಉಸಿರು ಹಿಡಿದ ಬದುಕಿನಲ್ಲಿ ನನಗೆ ಮೊದಲ ಬಾರಿಗೆ ತೀರ ‘ಡ್ರೆಮಾಟಿಕ್’ ಆಗಿ ಕಂಡಿದ್ದು ನಾಯರನ ಅಂಗಡಿಯ ‘ಚಾಯ’. ನಾಯರ್ ಎಂಬ ಒಬ್ಬ ಹಳ್ಳಿಯ ಮನುಷ್ಯ ನಮ್ಮ ಕಾಲೇಜಿನ ಎದುರೇ ‘ತಟ್ಟ ಗಡ’ ಇಟ್ಕೊಂಡಿದ್ದ. ತಟ್ಟ ಗಡ ಎಂದ್ರೆ ತಟ್ಟಿ ಅಂಗಡಿ. ಒಂದು ಗಾಜಿನ ಕಪಾಟಿನಲ್ಲಿ ಒಂದಿಷ್ಟು ತಿಂಡಿಗಳನ್ನ ಇಟ್ಟಿರುತ್ತಿದ್ದ.ತಿಂಡಿ ಕೇಳಿದರೆ ಒಂದು ಅಲ್ಯುಮಿನಿಯಮ್ ತಾಟಿಲ್ಲಿ ಇದ್ದ ಎಲ್ಲಾ ತಿಂಡಿಗಳನ್ನ ತಂದು ಇಡುತ್ತಿದ್ದ. ಈ ತಿಂಡಿಗಳಿಗಿಂತ ನನ್ನನ್ನು ಮೊದಲ ಬಾರಿ ಸೆಳೆದದ್ದು ನಾಯರ್ ನ ‘ಚಾಯ’

ನಮ್ಮೂರಲ್ಲಿ ಟೀ ಶಾಪ್ ಗೆ ಹೋಗಿ ಟೀ ಕೇಳಿದ್ರೆ ಬೆಳಿಗ್ಗೆಯೇ ಮಾಡಿ ಒಂದು ಡ್ರಮ್ ನಲ್ಲಿ ತುಂಬಿಟ್ಟ ಟೀ ಯನ್ನ ಒಂದು ಚಿಕ್ಕ ಸ್ಟೀಲ್ ಲೋಟಕ್ಕೆ ಎರೆಸಿಕೊಂಡು ತಂದಿಟ್ಟಿದ್ದನ್ನೇ ಕಂಡಿದ್ದ ನನಗೆ ನಾಯರ್ ನ ಚಾಯ ಪ್ರಿಪರೇಷನ್ ಹೈಲಿ ಡ್ರೆಮಾಟಿಕ್ ಆಗಿ ಕಂಡಿದ್ದು ಸಹಜವೇ.

ನಮ್ಮೂರಿನಂತೆ ಹಳಸಿದ ಚಾಯ್ ಅಲ್ಲ. ಅವನದು ಫ್ರೆಷ್ ಪ್ರಿಪರೇಷನ್. ಅವನೆದುರು ಸ್ಟೌನ ಮೇಲೊಂದು ತಾಮ್ರದ ಬಾಯ್ಲರು. ಅದರೊಳಗೆ ಸದಾ ಕುದಿಯುವ ನೀರು. ಬಾಯ್ಲರಿನಲ್ಲಿ ಡಿಸೈನರ್ಸ್ ಮಾಡಿದ ರಂಧ್ರದಲ್ಲಿ ಒಂದು ಮಗ್. ಬಾಯ್ಲರಿಗೊಂದು ನಲ್ಲಿ. ಪಕ್ಕದಲ್ಲೇ ಕುದಿಯುವ ಹಾಲು. ಜೊತೆಗೆ ಟೀ ಪುಡಿ ತುಂಬಿದ ಒಂದು ಬಟ್ಟೆಯ ಜಾಳಿಗೆ.

‘ಚಾಯ’ ಎಂದು ಆರ್ಡರ್ ಮಾಡಿದೊಡನೆ ಬಾಯ್ಲರಿನ ಬಿಸಿನೀರು ಮಗ್ ಗೆ ಎರೆಸೋನು, ಅದನ್ನ ಟೀ ಪುಡಿ ತುಂಬಿದ ಜಾಳಿಗೆಗೆ ಸುರೀತಿದ್ದಂತೆ. ಮೊದಲೇ ಸಕ್ಕರೆ ಹಾಕಿಟ್ಟ ಗ್ಲಾಸ್ ಗೆ ಕೆಂಪು ಡಿಕಾಕ್ಷನ್ ಇಳೀತಿತ್ತು. ಅಲ್ಲೇ ಇದ್ದ ಚಮಚದಿಂದ ಕಣ ಕಣ ಸದ್ದು ಮಾಡುತ್ತ ಡಿಕಾಕ್ಷನ್ ನಲ್ಲಿ ಸಕ್ಕರೆ ಕೆರಡಿ ಬಿಸಿ ಹಾಲು ಬೆರೆಸಿದರೆ ಚಾಯ ರೆಡಿ.

ಅವನ ಕೈ ಚಳಕ ಪ್ರಾರಂಭವಾಗೋದು ಈಗ. ಒಂದು ಕೈಲಿ ಗ್ಲಾಸು ಹಿಡಿದು ಇನ್ನೊಂದು ಕೈಲಿ ಮಗ್ ಹಿಡಿದು ಮೇಲೆ ಕೆಳಗೆ, ಮೇಲೆ ಕೆಳಗೆ ಬಗ್ಗಿಸೋಕೆ ಸುರು. ಅದೆಷ್ಟು ಎತ್ತರದಿಂದ ಆತ ಬಗ್ಗಿಸ್ತಿದ್ದ ಎಂದ್ರೆ, ಚಹ ಕುಡಿಯೋಕೆ ಹೋದವರೂ ಭಯದಿಂದ ದೂರ ಸರಿದು ನಿಲ್ಬೇಕಾಗ್ತಿತ್ತು. ಮೇಲೆ, ಕೆಳಗೆ, -ಮೇಲೆ ಕೆಳಗೆ ರೆಡಿಯಾದ ಆ ಚಹಾ ಗ್ಲಾಸು, ಮಗ್ ನ ನಡುವೆ ಸೇತುವೆಯಾಗ್ತಿತ್ತು.

ಹಲವು ಬಾರಿ ಗುರುತ್ವಾಕರ್ಷಣೆಯನ್ನೂ ಮೀರಿದ ಚಹಾದ ಬ್ರಿಜ್ ನಿರ್ಮಾಣವಾಗ್ತಿತ್ತು. ನಂತರದ ದಿನಗಳಲ್ಲಿ ನಾವು, “ನಾಯರ್, ಒಂದು ಚಾಯ ಕೊಡಿ “ ಎನ್ನೋ ಬದಲು “ನಾಯರ್ ಎರಡು ಮೀಟರ್ ಚಾಯ ಕೊಡಿ” ಅನ್ನೋದಕ್ಕೆ ಸುರುಮಾಡಿದೆವು, ಆಗೆಲ್ಲ ನಾಯರ್ ಮುಖದಲ್ಲಿ ಖುಶಿ ಕಾಣ್ತಿತ್ತು.

ಹೀಗಿರುವಾಗ ನಮ್ಮ ಕಾಲೇಜಿನಲ್ಲಿ ಒಂದು ಪ್ರಸಂಗ ಜರುಗಿತು. ಆಗ ತಾನೇ ಸುರುವಾದ ಹೊಸ ಹಾಸ್ಟೆಲ್ ಗೆ ನಾವೆಲ್ಲ ಮೊದಲ ಎಂಟ್ರಿ. ಮೂರ್ನಾಲ್ಕು ಬ್ಯಾಚಿನ ಸುಮಾರು ನೂರೈವತ್ತು ಮಂದಿ. ಹೆಚ್ಚಿನವರೆಲ್ಲ ಕರ್ನಾಟಕದವರೇ. ಅದರಲ್ಲು ಉತ್ತರ ಕರ್ನಾಟಕದವರೇ ಹೆಚ್ಚಿದ್ದರು. ಸಾಲಾಗಿ ಕಟ್ಟಿದ ಹಾಸ್ಟೆಲ್ ಬಾಥ್ ರೂಮ್ ನಲ್ಲಿ ನಾನು ಹಿಂದೀ ಹಾಡುಗಳನ್ನ ಹಾಡೋದನ್ನ ಇವರೆಲ್ಲ ಕೇಳಿಸಿಕೊಂಡಿದ್ದರು. (ನನಗೆ ಮೊದಲಿಂದಲೂ, ಈಗಲೂ ಬಾತ್ ರೂಮ್ ಹೊಕ್ಕಿದೊಡನೆಯೇ ಹಾಡೋ ಚಟ).

ಆಗ ಗುರುರಾಜ ಹೊಸಕೋಟೆಯವರ ಉತ್ತರ ಕರ್ನಾಟಕದ ಹಾಡುಗಳು ತುಂಬ ಪ್ರಸಿದ್ಧವಾಗಿದ್ದವು. ಪ್ರತಿ ದಿನ ಸಂಜೆ ಬೇರೆ ಬೇರೆ ರೂಮುಗಳಲ್ಲಿ ನನ್ನ ಸಂಗೀತ ಕಛೇರಿ. ಅದೇ ಅದೇ ಹಾಡುಗಳು. ‘ ಹಾಡಿದ್ದೇ ಹಾಡೋ ಕಿಸಬಾಯಿ ದಾಸ’ ಎನ್ನೋ ಹಾಗೆ. ಹೀಗೇ ಕಛೇರಿಗಳು ಸಾಗುತ್ತಿದ್ದ ದಿನಗಳಲ್ಲಿ ‘ಹಾಡಿನ ಕಾಂಪಿಟೇಶನ್’ ಬಂತು.

ನಾನು ಹಾಡಬೇಕು ಅಂತ ಇವರೆಲ್ಲ ಹಿಂದೆ ಬಿದ್ದರು. ಉಮೇದಿನಲ್ಲಿ ನಾನೂ ಒಂದು ಹಿಂದೀ ಗಝಲ್ ಹಾಡೋದು ಅಂತ ಪ್ರಾಕ್ಟೀಸ್ ಸುರುಮಾಡಿದೆ. ಆದರೆ ಗೆಳೆಯರ ಯೋಚನೇನೇ ಬೇರೆ ಇತ್ತು. ಗುರುರಾಜ ಹೊಸಕೋಟಿಯವರ ‘ಮಾವ ನಿನ್ನ ಮಗಳ ಹತ್ರ…’ ಹಾಡಬೇಕು ಅಂತ ದುಂಬಾಲು ಬಿದ್ದರು.

ಸರಿ, ಕಾಂಪಿಟೇಶನ್ ಸುರುವಾಯ್ತು. ಕೆಲವೇ ಜನ ಹಾಡುವವರು. ಮಲಯಾಳಮ್, ತಮಿಳು ಹಾಡುಗಳು. ನನ್ನ ಸರದಿ ಬಂದಾಗ ನಾನೂ ಹಾಡಿ ಮುಗಿಸಿದೆ. ಹಾಡು ಮುಗೀತಿದ್ದಂತೆ ಜೋರು ಚಪ್ಪಾಳೆ, ಶಿಳ್ಳೆ. ಆದರೆ ಯಾಕೋ ಬಹುಮಾನ ಮಾತ್ರ ಬರಲೇ ಇಲ್ಲ. ‘ಇದು ಅನ್ಯಾಯ’ ಅಂತ ಗೆಳೆಯರು ಗಲಾಟೆ ಮಾಡಿದರು. ಪ್ರಿನ್ಸಿಪಾಲರು ಕಣ್ಣು ಬಿಟ್ಟೊಡನೆ ತೆಪ್ಪಗಾದರು.

ಇದು ಇಲ್ಲಿಗೇ ಮುಗೀಲಿಲ್ಲ. ಮರುದಿನ ಪ್ರಿನ್ಸಿಪಾಲರಿಂದ ನನಗೆ ಕರೆ ಬಂತು. ಚೇಂಬರ್ ಹೊಕ್ಕಿದರೆ ಎರಡು ಮೂರು ಜನ ಗಂಟು ಮೋರೆ ಹಾಕ್ಕೊಂಡು ಕೂತಿದ್ರು. ಅವರಲ್ಲೊಬ್ರು” ಅದೇನು ನೀವು ನಿನ್ನೆ ಹಾಡಿದ್ದು?” ಅಂತ ಪ್ರಶ್ನೆ ಮಾಡಿದ್ರು. ನಾನು “ಅದು ಉತ್ತರ ಕರ್ನಾಟಕ ಶೈಲಿಯ ಕನ್ನಡ ಹಾಡು” ಅಂದೆ. “ ಅದನ್ನು ಇಂಗ್ಲಿಷ್ ನಲ್ಲಿ ಹೇಳಿ” ಅಂದ್ರು. ನಾನು ಅರ್ಥ ವಿವರಿಸುತ್ತ ಹೋದೆ. ಅನುವಾದ ಮಾಡುತ್ತಿದ್ದಂತೆ ಕುಳಿತವರ ಮುಖದಲ್ಲಿ ನಗೆ ಮೂಡತೊಡಗಿತು. ಹಾಡು ಮುಗೀತಿದ್ದಂತೆ ಒಬ್ಬರ ಮುಖ ಒಬ್ಬರು ನೋಡಿ ನಗೋಕೆ ಸುರು ಮಾಡಿದ್ರು.

ಆದದ್ದು ಇಷ್ಟೆ: ನಾವು ಸೇರಿದ ಹೊಸ ಹಾಸ್ಟೆಲ್ ನಲ್ಲಿ ಆಗ ಮಾತ್ರ ಮೆಸ್ ಪ್ರಾರಂಭವಾಗಿತ್ತು. ಬರೇ ಅನ್ನ, ಸಾರು, ಮಜ್ಜಿಗೆ ಸಿಗ್ತಿತ್ತು. ಉತ್ತರ ಕರ್ನಾಟಕದ ಗೆಳೆಯರಿಗೆ ರೊಟ್ಟಿಯಿಲ್ಲದ ಆ ಊಟ ಮಾಡಲು ಸಾಧ್ಯವೇ ಇರಲಿಲ್ಲ. ಮೆಸ್ ನಲ್ಲಿ ಗಲಾಟೆಯಾಗಿ ವಾರ್ಡನ್, ಪ್ರಿನ್ಸಿಪಾಲ್ ತನಕ ಕಂಪ್ಲೇಂಟ್ ಹೋಗಿ ವಾತವರಣ ಬಿಸಿಯಾಗಿತ್ತು.

ಇಂಥದ್ದರಲ್ಲಿ ಈ ಹಾಡಿನ ಕಾಂಪಿಟೇಶನ್ ಬಂತಲ್ಲ, ನಾನು ಹಾಡಿದ ಹಾಡಲ್ಲಿ ‘ರೊಟ್ಟಿಯಿದ್ದೂ ಇಲ್ಲದಾಂಗ ಆಗೈತಿ’ ಅನ್ನೋ ಸಾಲಿತ್ತು. ನಾನು ಹಾಡುವಾಗ ಅದನ್ನು ತುಸು ಹೆಚ್ಚೇ ಅಭಿನಯಿಸಿ ಹಾಡಿದ್ದೆ ಅನಿಸತ್ತೆ. ಏನೋ ‘ರೊಟ್ಟಿ ರೊಟ್ಟಿ ಅಂತಿದಾನೆ. ಇದೇನೋ ಪ್ರೊಟೆಸ್ಟ್ ಸಾಂಗ್ ಅಂದ್ಕೊಂಡು ಅವರೆಲ್ಲ ಬಿಸಿಯಾಗಿಬಿಟ್ಟಿದ್ದರು. ಅರ್ಥ ತಿಳಿದ ಮೇಲೆ ನಿರುಮ್ಮಳವಾಗಿ ನಕ್ಕಿದ್ದರು.

6 comments

  1. ಬಹಳ ಇಷ್ಟವಾಗುತ್ತಿದೆ ಬರಹ.ಶೈಲಿ..ನಿರೂಪಣೆ ಎಲ್ಲವೂ ಚಂದ

Leave a Reply