‘ಮುತ್ತು’ ಕೊಡಲು ಸಾಧ್ಯವಾಗದ ನಗರದ ಒಂದು ದಿನ !!!

ಒಂದು ದಿನಕ್ಕೆ ಈ ನಗರದಲ್ಲಿ ವಿನಿಮಯವಾಗುವ ಮುತ್ತುಗಳ ಬಗ್ಗೆ ಅಥೆಂಟಿಕೇಟ್ ಅಗಿ ಹೇಳಬಲ್ಲವರಿದ್ದಾರೆಯೇ?
ಲಕ್ಷಾಂತರ ಜನರಿರುವ ಈ ನಗರದಲ್ಲಿ ಸಹಸ್ರಾರು ಮುತ್ತುಗಳ ಕೊಡು-ಕೊಳ್ಳುವಿಕೆಯಂತೂ ಪ್ರತಿದಿನ ನಡೆದೇ ತೀರುತ್ತದೆ. ಥಟ್ಟೆಂದು ವಾಟ್ಸಾಪ್ ನ ಎಮೋಜಿಗಳ ಮೂಲಕ, ಬೀಳ್ಕೊಡುವ ಗೆಳೆಯರ ನಡುವಿನ ಕೈ ಮೇಲೆ, ಕುಚುಕು ಗೆಳತಿಯರು ತಬ್ಬಿಕೊಂಡಾಗ ಭುಜದ ಮೇಲೆ, ದೂರದಲ್ಲಿರುವ ಇನಿಯನ ಸಮೀಪ ಸಾಧ್ಯವಾಗಾದಾದಾಗ ಫ್ಲೈಯಿಂಗ್ ಕಿಸ್ ಎಂಬುದು ಗಾಳಿಯಲ್ಲೋ, ಆಗ ತಾನೆ ಪ್ರೇಮದಲ್ಲಿ ಸಿಲುಕಿದ ಪ್ರೇಮಿಗಳು ಸಾರ್ವಜನಿಕ ಸ್ಥಳಗಳ ಬಗ್ಗೆ ಭಯ ಹೊಂದಿರುವುದರಿಂದ  ಸೈಬರ್ ಸೆಂಟರ್ ನಲ್ಲೋ, ಆಫೀಸಿನಲ್ಲಿ ಸಣ್ಣಗೆ ನಡೆಯುತ್ತಿರುವ ಅಫೇರ್ ನ ಭಾಗವಾದವರು ಗ್ರೌಂಡ್ ಫ್ಲೋರ್ ನಿಂದ ಥರ್ಡ್ ಫ್ಲೋರ್ ಗೆ ಬಂದು ತಲುಪುವ ಸ್ವಲ್ಪ ಸಮಯದಲ್ಲಿ ಲಿಫ್ಟ್ ನಲ್ಲೋ, ಬೈಕಿನ ಹಿಂದೆ ಕೂತವ ಬ್ರೇಕ್ ನ ನೆಪದಲ್ಲಿ ಕುತ್ತಿಗೆ ಹಿಂಬದಿಯಲ್ಲೋ , ಮುದ್ದಾದ ಕಂದನಿಗೆ ಅದರಮ್ಮ ನೀಡುವ ಸಾಸಿರ ಸಿಹಿಮುತ್ತುಗಳು – ಹೀಗೆ ಹಂಚಲ್ಪಡುವ ಮುತ್ತಿನ ಮತ್ತು, ಗಮ್ಮತ್ತುಗಳ ಲೆಕ್ಕ ಇಟ್ಟವರ್ಯಾರಿದ್ದಾರೆ ?
ಇಷ್ಟೊಂದು ಮುತ್ತುಗಳ ವಿನಿಮಯ ಸಲೀಸಾಗಿಯೇ ನಡೆಯುವ ಈ ನಗರದಿಂದ ಇಂಥದ್ದೂ ಒಂದು ಘಟನೆ  ವರದಿಯಾಗಿದೆ ಎಂಬುದೇ ಪ್ಯಾಥೆಟಿಕ್.
‘ಅವನು’ ಎಂಬ ಆತ ‘ಅವಳು’ ಎಂಬ ಆಕೆಗೆ ಒಂದು ಮತ್ತು ಕೊಡಬೇಕೆಂದುಕೊಂಡನಾದರೂ ಅದು ಸಾಧ್ಯವಾಯಿತಾ ?
ಇಲ್ಲ ಎನ್ನುತ್ತವೆ ನಂಬಲರ್ಹ ಮೂಲಗಳು.
ವರದಿಯ ಪ್ರಕಾರ ಅವನು ಬಹಳ ದಿನಗಳ ಹಿಂದೆಯೇ ಆಕೆಗೆ ‘ಆ ಮುತ್ತು’ ಕೊಡಬೇಕಿತ್ತಂತೆ. ಹಾಗಾಗಿಯೇ ಆ ದಿನ ಬೆಳಗ್ಗೆ ಎದ್ದವನೇ ಇನ್ನೂ ಫ್ರೆಷ್ ಆಗದೆಯೇ ನೇರವಾಗಿ ಅಡುಗೆ ಮನೆಗೆ ಹೋದನಂತೆ. ತರಕಾರಿ ಹೆಚ್ಚುತ್ತಿದ್ದ ಅವಳನ್ನು ಹಿಂಬದಿಯಿಂದ ತಬ್ಬಿ,ಇನ್ನೇನು ಮುತ್ತು ಒತ್ತುವುದರಲ್ಲಿದ್ದನಂತೆ ಅಷ್ಟರಲ್ಲಿ ಪೇಪರ್ ಹಾಕುವ ಹುಡುಗ ಡೋರ್ ಬೆಲ್ ಮಾಡಿ ಬಿಲ್ ಕೇಳಿದನಂತೆ. ಮುನಿಸು ಮಾಡಿಕೊಂಡು ಬಂದು ಪೇಪರ್ ಬಿಲ್ ಪಾವತಿಸಿ ಹಿಂದಿರುಗಿ ಹೋಗುವಷ್ಟರಲ್ಲಿ ಆಕೆ ಒಂದೆಡೆ ನಿಲ್ಲಲಾರದಷ್ಟು ಅಡುಗೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಕಾರಣ ನಿರಾಶೆಯಿಂದ ಹಿಂದಿರುಗಿ ಬಂದವ; ‘ಸ್ನಾನ ಮಾಡಿದಮೇಲೆ ಕೆಲಸಕ್ಕೆ ಹೊರಡುವ ಮುನ್ನ ಕೊಟ್ಟರಾಯ್ತು’ ಎಂದು ಸಮಜಾಯಿಷಿ ಕೊಟ್ಟುಕೊಂಡ.
ಸ್ನಾನ- ತಿಂಡಿ ಮುಗಿಸಿ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡವನು ಬ್ಯಾಗು ಹೆಗಲಿಗೇರಿಸಿ ಶೂ ಹಾಕಿಕೊಳ್ಳುವ ಮೊದಲು ಅವಳಿದ್ದಲ್ಲಿಗೆ ಉತ್ಸಾಹಭರಿತನಾಗಿ ಹೋಗಿ ಅವಳ ಗ್ರೀನ್ ಸಿಗ್ನಲ್ ಗಾಗಿ ಹಾತೊರೆಯುತ್ತಿದ್ದನಷ್ಟೇ. ಅಷ್ಟರಲ್ಲಿ ಅವನ ನಂಬರ್ ಗೆ ಕ್ಯಾಬ್ ಡ್ರೈವರ್ ನ ಕಾಲ್ ಬಂತು ; ‘ಸರ್. ನೀವು ಯಾವಾಗಲೂ ಹೀಗೆ ಲೇಟ್ ಮಾಡಿದ್ರೆ ಬಿಟ್ಟು ಹೋಗ್ಬೇಕಾಗುತ್ತೆ. ನಾವು ಕಾಲ್ ಮಾಡೋಕೆ ಮುಂಚೆ ನೀವು ಲ್ಯಾಂಡ್ ಮಾರ್ಕ್ ನಲ್ಲಿ ಇರ್ಬೇಕು. ಇಲ್ಲ ಅಂದ್ರೆ ನಾನು ಟ್ರಾನ್ಸ್‌ಪೋರ್ಟ್ ಮ್ಯಾನೇಜರ್ ಗೆ ಕಂಪ್ಲೇಂಟ್ ಮಾಡಬೇಕಾಗುತ್ತೆ’ ಅಂದ. ಮುತ್ತು ನುಂಗಿದ ಮ್ಯಾನೇಜರ್ ನ ಮನಸ್ಸಲ್ಲೇ ಶಪಿಸಿಕೊಂಡು, ಪೇಪರ್ ಓದುತ್ತಿದ್ದವಳಿಗೆ ‘ಬಾಯ್ ಡಿಯರ್’ ಎಂದು ಕೈಯಲ್ಲಿ ಶೂ ಹಿಡಿದೇ ಕ್ಯಾಬ್ ಕಡೆ ಓಡಿದ.
‘ಹಾಲು ಜೇನು’ ಸಿನಿಮಾದ ರಾಜ್ ಕುಮಾರ್ ನಂತೆ ಪದೇ ಪದೇ ಆಫೀಸಿನಿಂದ ಕಾಲ್ ಮಾಡುವ ಜಾಯಮಾನವೇನೂ ಈ ‘ಅವನ’ದ್ದಾಗಿರಲಿಲ್ಲ. ಆಕೆಯೂ ಅದನ್ನೇನು ನಿರೀಕ್ಷಿಸುತ್ತಿರಲಿಲ್ಲ. ಆದರೆ ಬದುಕಲ್ಲಿ ಸ್ವಲ್ಪ ರೊಮ್ಯಾಂಟಿಸಿಸಮ್ ಇಲ್ಲದಿದ್ದರೆ ಹೇಗೆ ?   ಪ್ರತಿದಿನದಂತೆ ಮಧ್ಯಾಹ್ನ ಕಾಲ್ ಮಾಡಿದವನು ಕುಶಲೋಪರಿ ವಿಚಾರಿಸಿದನಲ್ಲದೆ ಮುತ್ತಿನ ಬಗ್ಗೆ ಮುಗ್ದವಾಗಿಯೇ ಉಳಿದ. ಸುಮ್ಮನೆ ಜಾರಿ ಹೋಗುವ ಸಂಜೆಯನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳೋಣವೆಂದು ನಿರ್ಧರಿಸಿ ಆಫೀಸಿನ ಕ್ಯಾಬ್ ಗಾಗಿ ಕಾಯದೆ ಬೇಗ ಮನೆ ಸೇರಿದ.
ಸರಿಯಾಗಿ ಅವನು ಮನೆ ತಲುಪಿದ ಸಂದರ್ಭದಲ್ಲಿ ಅವಳು ಇದ್ದಿದ್ದರೆ ‘ಮುತ್ತಿನ ಹಾರ’ ದ ಸಮರ್ಪಣೆ ಆಗಿಬಿಟ್ಟಿರುತ್ತಿತ್ತೇನೋ, ಆದರಾಕೆ, ಇವನ ಅಕಾಲಿಕ ಆಗಮನದ ನಿರೀಕ್ಷೆಯಲ್ಲಿರದ ಕಾರಣ Eye Brow ಮತ್ತು Hair straightening ಮಾಡಿಸಿಕೊಂಡು ಬರಲು ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಇವನ ಬಳಿ ಇದ್ದ ಮತ್ತೊಂದು ಕೀ ನ ಸಹಾಯದಿಂದ ಭಾರವಾದ ಮತ್ತು ಬೇಡವಾದ ಹೆಜ್ಜೆಗಳನ್ನು ಮನೆಯೊಳಗಿಟ್ಟ.
ಡೈನಿಂಗ್ ಟೇಬಲ್ ಮೇಲೆ ಆಕೆ ಮಕಾಡೆ ಮಲಗಿಸಿಟ್ಟಿದ್ದ ಯಾವುದೋ ಪುಸ್ತಕವನ್ನು ನೋಡಿಯೂ ನೋಡದಂತೆ ಉಳಿದ. ಬ್ಯೂಟಿ ಪಾರ್ಲರ್ ನಿಂದ ಹಿಂದಿರುಗುವ ತನ್ನ ಬ್ಯೂಟಿಗೆ ಹೇಗೆ ಮುತ್ತೊತ್ತುವುದು ಎಂದು ರಿಸರ್ಚ್ ಮಾಡತೊಡಗಿದ. ಗೂಗಲ್ ನಲ್ಲಿ Different Types of kisses ಎಂದು ಶೋಧಿಸಿದ. French Kiss ಬಗ್ಗೆ ಓದಿ ಪುಳಕಿತನಾದ. ಇವತ್ತು Passionate French Kiss ನ್ನೇ ಪ್ರಯೋಗಿಸಬೇಕೆಂದು ಅದರ ರೂಪು ರೇಷೆಗಳ ಬಗ್ಗೆ , ಡುರೇಷನ್ ಬಗ್ಗೆ , ಅಡ್ಡ ಪರಿಣಾಮಗಳ ಬಗ್ಗೆ ವಿಕಿಪೀಡಿಯ ಏನು ಹೇಳುತ್ತದೆಂದು ಜಾಲಾಡಿದ. Disease Risks from French Kiss ಎಂಬ ಟ್ಯಾಬ್ ನ ಬಗ್ಗೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ. The best way to Kiss ಎಂಬ ಅನೇಕ ವೀಡಿಯೋಗಳನ್ನು ನೋಡಿ ರೋಮಾಂಚಿತನಾದ. ಒಂದು ಸಣ್ಣ ನಿದ್ದೆ ಮಾಡಿ ಏಳೋಣ ಎಂದು ಕಣ್ಮುಚ್ಚಿದವ ಕಣ್ಬಿಟ್ಟಾಗ ರಾತ್ರಿ ಎಂಟಾಗಿತ್ತು.
ಅವಳಾಗಲೇ ಟಿವಿ ಯಲ್ಲಿ Love Aaajkal ಚಾನಲ್ ನ ರೆಟ್ರೋ ಸಾಂಗ್ ಗಳನ್ನು ಕೇಳುತ್ತ ರಾತ್ರಿಯ ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದಳು. ಆ ಹಾಡುಗಳಿಂದ ಅವಳ ಮೂಡ್ ಅರಿತ ಅವನು ಮತ್ತೆ ಅಡುಗೆ‌ಮನೆಯ ಬಳಿ ಹೋಗುತ್ತಿದ್ದಂತೆಯೇ ಯಾವುದೋ ಫೋನ್ ಕಾಲ್ ಬಂತು. ‘Why haven’t you sent the Daily Report ?’ ಎಂದು ಮ್ಯಾನೇಜರ್ ಅರಚಿದಾಗಲೇ ಅವನಿಗೆ ತಿಳಿದಿದ್ದು ಅವಸರವಾಗಿ ಮುತ್ತಿನ ಬೆಂಬತ್ತಿ ಹೊರಡುವಾಗ ತಾನದನ್ನು ಮರೆತೇಬಿಟ್ಟಿದ್ದೇನೆಂಬುದು. ‘ I want it to be sent ASAP’ ( As Early As Possible ) ಎಂದ ಮ್ಯಾನೇಜರ್ ಹೇಗೆ ಕಾಲ್ ಕಟ್ ಮಾಡಿದನೆಂದರೆ ಅಡುಗೆ ಮನೆಯ ಹಾದಿ ಮರೆತು ಸೋಫಾ ಮೇಲಿದ್ದ ಲ್ಯಾಪ್ ಟಾಪ್ ತೆಗೆದು ವರ್ಕ್ ಫ್ರಮ್ ಹೋಮ್ ಮಾಡಬೇಕಾದ ‘ಕರ್ಮ’ ಅವನದಾಯಿತು.
ಲ್ಯಾಪ್ ಟಾಪ್ ಮಡಚಿ ಇಡುವಷ್ಟರಲ್ಲಿ ಊಟದ ಸಮಯವಾದ್ದರಿಂದ ಕ್ಷಣಕಾಲ ಮುತ್ತಿನ ಮಾತು ಮರೆತು ನ್ಯೂಸ್ ಚಾನೆಲ್ ಗಳ ಪ್ಯಾನೆಲ್ ಡಿಸ್ಕಷನ್ ಕಡೆ ಗಮನ ಹರಿಸಿದರೆ ಅಲ್ಲಿ ಚರ್ಚೆಯಾಗುತ್ತಿದ್ದ ವಿಷಯ ಇನ್ನೂ ಹಸ್ಯಾಸ್ಪದವಾಗಿತ್ತು . ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪಿಕೊಳ್ಳುವುದು, ಚುಂಬಿಸುವುದು, ಕೈಕೈ ಹಿಡಿದು ನಡೆದಾಡುವುದು , ಲಲ್ಲೆಗರೆಯುವುದು ಇವೇ ಮುಂತಾದ ವರ್ತನೆಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಿ,ಶಿಕ್ಷಿಸುವಂತಾಗಬೇಕು ಇಲ್ಲದಿದ್ದರೆ ನಮ್ಮ ಸಂಸ್ಕೃತಿ ನಾಶವಾಗಿ ಹೋಗುತ್ತದೆ ಎಂದು ಯಾರೋ ಒಬ್ಬ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ( PIL) ಸಲ್ಲಿಸಿದ್ದರ ಬಗ್ಗೆ, ಅದು ಎಷ್ಟು ಸರಿ ಎಂಬುದರ ಬಗ್ಗೆ ಪ್ಯಾನಲಿಸ್ಟ್ ಗಳು ತರಹೇವಾರಿ ಮಾತಾಡುತ್ತಿದ್ದರು .
ಅಲ್ಲ, Nuclear Family ಆಗಿರುವ ನನ್ನ ಮನೆಯೊಳಗೇ ನನಗೆ ಮುತ್ತು ಕೊಡಲು ಸಾಧ್ಯವಾಗುತ್ತಿಲ್ಲ ಹಾಗಿರುವಾಗ ಇವರಿಗೆಲ್ಲ ಏನಾಗಿದೆ ಎಂದು ಯೋಚಿಸುತ್ತಲೇ ತನ್ನ ಸ್ಥಿತಿಗೆ ಮುಮ್ಮಲ ಮರುಗುತ್ತ ಊಟ ಮುಗಿಸಿದ. ಇಡೀ ದಿನ ಈಡೇರದ ಆಸೆ ರಾತ್ರಿಯಲ್ಲಿ ಸುಲಭವಾಗಿ ಕೈಗೂಡೀತು ಎಂಬ ಆಶಾಭಾವದಿಂದಲೇ ಸಿಂಕ್ ನಲ್ಲಿ ಕೈ ತೊಳೆಯುವಾಗ ಅವಳತ್ತ ನೋಡಿದ . ಆಕೆ ಕಿರುನಗೆ ಬೀರಿದಳು. ಅವನೂ ತುಂಟ ನಗೆ ಹೊಮ್ಮಿಸಿದ.
ಕೈ ತೊಳೆದು ಬಂದವನು ಒಂದು ಸಣ್ಣ ವಾಕ್ ಮಾಡೋಣ ಎಂದುಕೊಂಡು ಟೆರೇಸ್ ಮೇಲೆ ಓಡಾಡುತ್ತಿದ್ದಾಗ ಊರಿನಿಂದ ಅಪ್ಪನ ಕಾಲ್ ಬಂತು. ರಿಸೀವ್ ಮಾಡುತ್ತಿದ್ದಂತೆಯೇ ಊರಲ್ಲಿ ದಾಯಾದಿಗಳ ಜೊತೆ ಇದ್ದ ೩೬ ಗುಂಟೆ ಜಮೀನಿನ ವ್ಯಾಜ್ಯದ ಎಲ್ಲ ವಿವರಗಳನ್ನು ಅಪ್ಪ ವಿವರಿಸುತ್ತಲೇ ಹೋದರು. ಕೇಸು ಎಲ್ಲಿಯವರೆಗೆ ಬಂದಿದೆ , ಲಾಯರ್ ಏನು ಹೇಳ್ತಿದಾರೆ ಮತ್ತು ಎಷ್ಟು ದುಡ್ಡು ಕೇಳ್ತಿದಾರೆ ಎಂಬುದರಿಂದ ಹಿಡಿದು ದಾಯಾದಿಗಳ ಲಾಯರ್ ಯಾವ ಯಾವ ಪಾಯಿಂಟ್ ಇಡ್ತಿದಾನೆ ಕೋರ್ಟ್ ನಲ್ಲಿ ಎಂಬುದನ್ನೆಲ್ಲ ವಿಷದಪಡಿಸುತ್ತಾ ಹೋದರು ಅದಕ್ಕೆ ಇವನೂ ಪ್ರತಿತಂತ್ರಗಳನ್ನು ಕಾಲ್ ನಲ್ಲಿಯೇ ಸೂಚಿಸುತ್ತಾ ಹೋದ.
ದೀರ್ಘಕಾಲ ನಡೆದ ಈ ಫೋನ್  ಸಂಭಾಷಣೆಯನ್ನು ಮುಗಿಸಿ, ಟೆರೇಸ್ ನಿಂದ ಮನೆಯೊಳಗೆ ಬಂದು ನೋಡಿದರೆ ‘ಅವಳು’ ಅದಾಗಲೇ ಮಲಗಿಯಾಗಿತ್ತು. ಕೇವಲ ಒಂದು ಮುತ್ತಿಗೋಸ್ಕರ, ಮಲಗಿ ಸುಖ ನಿದ್ರೆಯಲ್ಲಿದ್ದವಳನ್ನು ಎಬ್ಬಿಸುವ ಕಠೋರತನ ವನ್ನು ಆ ‘ಅವನು’ , ಆ ‘ಅವಳ’ ಮೇಲೆ ತೋರಿಸಲಿಲ್ಲ. ಮಲಗುವ ಮುನ್ನ ನೀರು ಕುಡಿಯಲೆಂದು ಆ ಅವನು ಅಡುಗೆ ಮನೆಗೆ ಹೋಗಿ ಹಿಂತಿರುಗುವಾಗ ಡೈನಿಂಗ್ ಟೇಬಲ್ ಮೇಲೆ ಮಕಾಡೆ ಮಡಚಿಟ್ಟಿದ್ದ  ಆ ಪುಸ್ತಕವನ್ನು  ಕೈಗೆತ್ತಿಕೊಂಡು ನೋಡಿದರೆ, ಸರಿಯಾಗಿ ಪುಸ್ತಕದ ಮಧ್ಯದ ಪುಟದಲ್ಲಿದ್ದ Pablo Neruda ನ ಕವಿತೆಯೊಂದರ ಆ ಸಾಲುಗಳನ್ನು ಆಕೆ ಪೆನ್ಸಿಲ್ ನಲ್ಲಿ ಅಂಡರ್ ಲೈನ್ ಮಾಡಿಟ್ಟಿದ್ದಳು. ಆ ಸಾಲುಗಳು ಹೀಗಿದ್ದವು ;
“this foot worked with its shoes,
it hardly had time
to be naked in love or in sleep
one foot walked, both feet walked
until the whole man stopped “
ಅವನಿಗೆ ಕಾವ್ಯ ಅಷ್ಟಾಗಿ ರುಚಿಸುವುದಿಲ್ಲ . ಹಾಗಾಗಿ, ಈ ಸಾಲುಗಳ ಅರ್ಥವೇನು ? ಅವಳ್ಯಾಕೆ ಇವುಗಳನ್ನು ವಿಶೇಷವೆಂದು ಪರಿಗಣಿಸಿರಬಹುದು ಎಂಬುದನ್ನು ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಆ ಸಾಲುಗಳ ಅನ್ವರ್ಥನಾಮವೇ ‘ಅವನು’ ಎಂಬಂತೆ ಅವಳ ಪಕ್ಕದಲ್ಲಿ ಸದ್ದಿಲ್ಲದೆ ಹೋಗಿ ಮಲಗಿದ .
ಮರುದಿನ ಅಂತ ಮಹತ್ವದ್ದೇನೂ ಘಟಿಸಲಿಲ್ಲ . ಅವನು ಇದುವರೆಗೂ ಆ ಕವಿತೆಯ ಸಾಲುಗಳ ಅರ್ಥವೇನೆಂದು ಅವಳ ಬಳಿ ಕೇಳುವ ಗೋಜಿಗೆ ಹೋಗಿಲ್ಲ . ಮತ್ತೆ ಅವಳು ಕೂಡ ಇವನು ಬರುವ ಸಮಯಕ್ಕೆ ಬ್ಯೂಟಿ ಪಾರ್ಲರ್ ಗೆ ಎಂದೂ ಹೋಗಿಲ್ಲ. ಅವರ ನಡುವೆ ನೂರಾರು ಪರಿಶುದ್ಧ ಮುತ್ತುಗಳ ವಿನಿಮಯ ಅದಾದಮೇಲೆ ಆಗಿವೆ . ಆದರೆ ಮುತ್ತು ಕೊಡಲು ಸಾಧ್ಯವಾಗದ ಆ ಒಂದು ದಿನವನ್ನು ಮಾತ್ರ ಅವರೆಂದೂ ಕ್ಷಮಿಸಲು ಮನಸ್ಸು ಮಾಡಿಲ್ಲ . ಕಾರಣ ಇಷ್ಟೇ ಈ ದಿನದ ಮುತ್ತನ್ನು ಇನ್ಯಾವತ್ತೋ ಕೊಡುವುದು ಕಾನೂನುಬಾಹಿರ ಎಂದು ಯಾರೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿಲ್ಲ.
ಈ ನಡುವೆ , ಒಟ್ಟಾರೆ ಈ  ನಗರದಲ್ಲಿ ನಡೆಯುವ ಮುತ್ತಿನ ವಿನಿಮಯಗಳ ಮೇಲೆ ಯಾವುದೇ ಸರ್ಕಾರ ತೆರಿಗೆ ವಿಧಿಸಲು ಯೋಚಿಸಿಲ್ಲ ಎಂಬುದು ಸಮಾಧಾನಕರ ಸಂಗತಿ !

4 thoughts on “‘ಮುತ್ತು’ ಕೊಡಲು ಸಾಧ್ಯವಾಗದ ನಗರದ ಒಂದು ದಿನ !!!”

Leave a Reply