ಧೋ ಧೋ ಮಳೆಯಲ್ಲಿ Hemingway

ಎರಡು ಮೂರು ದಿನಗಳಿಂದ ಎಡೆಬಿಡದ ಮಳೆ ನಮ್ಮೂರಲ್ಲಿ.

ಹೊನ್ನಾವರದಂಥ ಊರಲ್ಲೂ ಚಳಿ ಹುಟ್ಟೋ ಹಾಗೆ.

ನಮ್ ಕಡೆ ಅಂತಾರೆ, ‘ ಎರಡು ಬೇಳೆ ಇದ್ದವ ಹೊರಗೆ ಬೀಳೋದಿಲ್ಲ’ ಅಂತ ಅಂಥ ಮಳೆ.

ಎರಡು ಬೇಳೆ ಅಂದ್ರೆ ಹಲಸಿನ ಬೇಳೆ. ಬೇಸಿಗೇಲಿ ಹಲಸಿನ ಹಣ್ಣು ತಿಂದ ಮೇಲೆ ಇರೋ ಸ್ಟಾಕ್. ಹಲಸಿನ ಬೇಳೇನ ಒಲೆಯ ಬೆಂಕೀಲಿ ಸುಡೋದು, ತಿನ್ನೋದು, ಬಾಲ್ಯದಲ್ಲಿ ನಮಗೆಲ್ಲಾ ಒಂದು ಆಟವೇ. ಆಗೆಲ್ಲಾ ತಿಂಗಳುಗಟ್ಟಲೇ ಸೂರ್ಯ ಕಾಣದ ಹಾಗೆ ಮಳೆ. ಬಿಟ್ಟೂ ಬಿಡದ ಹಾಗೆ.

ಬರೇ ನೀರವ ಮೌನದ ನಡುವೆ ಕೇಳೋದು ಎರಡೇ ಶಬ್ದಗಳು. ಮಳೆಯ ‘ಧೋ’ ಅನ್ನೋ ಸೋನೆ, ಕಪ್ಪೆಗಳ ವಟರ್ ವಟರ್. ಇಂಥ ಸಂಜೆಗಳಲ್ಲಿ ನಮಗೆ ಶಾಲೆ ಬಿಟ್ಟು ಬಂದ ಮೇಲೆ ತಿನ್ನೋಕೆ ಸುಲಭವಾಗಿ ಸಿಕ್ತಿದ್ದವು ಈ ‘ಬೇಳೆ’ ಗಳೇ. ಮಳೆಯ ಛಳಿಯಲ್ಲಿ ಅಡುಗೆ ಮನೆಯ ಒಲೆಯೆದುರು ಕುಳಿತು ಒಂದೊಂದೇ ಬೇಳೆ ಒಲೇಲಿ ಹಾಕ್ತಿದ್ರೆ, ಸ್ವಲ್ಪ ಹೊತ್ತಿಗೇ ‘ಡಬ್’ ಶಬ್ದ. ಬೇಳೆಯ ಹೊರಕವಚ ಒಡೆದು ಬೇಳೆ ತಿನ್ನೋಕೆ ರೆಡಿ. ಜೊತೆಗೊಂದಿಷ್ಟು ಬೆಲ್ಲ ಸೇರಿದ್ರೆ ಸಂಜೆಯ ಬಿಸಿ ಬಿಸಿ ತಿಂಡಿ. ಜೊತೆಗೆ ಒಂದೋ ಎರಡೋ ಗೇರು ಬೀಜ ಸಿಕ್ಕಿದ್ರೆ ಅದು ‘ ಲಕ್ಸುರಿ’

ಇವತ್ತು ಸಂಜೆ ‘ಧೋ’ ಅಂತ ಸುರೀತಿರೋ ಮಳೇಲಿ ನನಗೆ

‘ಕಿಝುವನುಂ ಕಡಲುಂ’ ನಾಟ್ಕ ನೆನಪಾಯ್ತು.

ಕೇರಳಕ್ಕೆ ಮುಂಗಾರು ಕಾಲಿಟ್ಟ ಮೊದಲ ದಿನಗಳವು.

ಇದೇ ರೀತಿ ಸಿಕ್ಕಾಪಟ್ಟೆ ಮಳೆ.

ಯಾವ ಛತ್ರೀನೂ ಯಾವ ರೈನ್ ಕೋಟೂ ತಡೆಯಲಾರದ ಮಳೆ.

ಮುಂಜಾನೆ ತಿಂಡಿ ತಿಂತಾ ಕೂತಿರೋವಾಗ ‘ಉಣ್ಣಿ’ ಪ್ರತ್ಯಕ್ಷನಾದ. ಹಲವು ದಿನಗಳಿಂದ ಕಾಣದಿದ್ದ ಮಹಾಶಯ ಕೈಲಿ ಚಟ್ಣಿಯ ಬಕೆಟ್ಟು ಹಿಡಕೊಂದು ಏನೋ ಮಹತ್ವದ ವಿಷಯ ಹೇಳುವವನಂತೆ ಧಾವಿಸಿ ಬರ್ತಿದ್ದ. ಆತನ ಬಾಡಿ ಲ್ಯಾಂಗ್ವೇಜ್ ಹಾಗಿತ್ತು ಅಂದ್ರೆ ಒಂದೇ ಆತ ಕೆಟ್ಟ ಸುದ್ದಿ ಹೊತ್ತು ತಂದಿರ್ತಾನೆ ಅಥವಾ ನಾಟ್ಕದ ಸುದ್ದಿ ತಂದಿರ್ತಾನೆ.

ಮಳೆಗಾಲದ ದಿನಗಳು. ಹೊಟೆಲ್ ನಲ್ಲಿ ಜನಾನೂ ಇರ್ಲಿಲ್ಲ. ಆತ ಬಿಡುವಾಗಿದ್ದ. ಆತನಿಗೆ ಜ್ವರ ಬಂದಿತ್ತು ಅಂತಾನೂ, ಏಳೋಕೆ ಆಗ್ತಿರ್ಲಿಲ್ಲ ಅಂತಾನೂ, ಸಾಹುಕಾರ ತುಂಬಾ ಸಹಾಯ ಮಾಡಿದ ಅಂತಾನೂ ಸಾಹುಕಾರನನ್ನ ಹೊಗಳಿದ.
ಕೊನೇಲಿ, ‘ಸಾರ್ ಇವತ್ತೊಂದು ನಾಟ್ಕ ನೋಡೋಣ ಸಾರ್’ ಅಂತ ಮಾತು ಮುಗಿಸಿದ.


ನಾಟ್ಕ ನೋಡೋದಿರ್ಲಿ, ನಾನು ಹೇಳಿದ್ನಲ್ಲ, ‘ ಎರಡು ಬೇಳೆ ಇದ್ದವ ಹೊರಗೆ ಬೀಳೋದಿಲ್ಲ’ ಅಂತ ಅಂಥ ಮಳೆ.

ನಾನು ಸಾಧ್ಯಾನೇ ಇಲ್ಲ ಅಂದ್ಬಿಟ್ಟೆ. ಆದ್ರೆ ಆತ ಬಿಡೋಕೆ ರೆಡಿ ಇರ್ಲಿಲ್ಲ.

‘ಅವಾರ್ಡ್ ಬಂದ ನಾಟ್ಕ ಸರ್, ನಿಜಕ್ಕೂ ಚೆನ್ನಾಗಿದ್ಯಂತೆ. ನಾನಿದನ್ನ ನಿಮಗೆ ತೋರಿಸದಿದ್ರೆ ಪಾಪ ಬರತ್ತೆ. ‘ಕಿಝುವನುಂ ಕಡಲುಂ, ನಿಮಗೆ ಗೊತ್ತಿದ್ದದ್ದೇ ಕಥೆ ಸಾರ್’ Hemingwayಯ ‘Old Man and the Sea’ ಅಂದ್ಬಿಟ್ಟ. Hemingway ಹೆಸರು ಕೇಳಿದೊಡನೆಯೇ ನನ್ಗೂ ಆಸೆ ಸುರುವಾಯ್ತು.

ಆದ್ರೆ “ಈ ಮಳೇಲಿ ಹೋಗೋದು ಹೇಗಪ್ಪಾ” ಅಂದೆ. ತುಂಬಾ ದೂರ ಇಲ್ಲ ಸಾರ್ ಇಲ್ಲೇ ಇಪ್ಪತ್ತು ಕಿಲೋಮೀಟರ್ ದೂರ, ಬೇಕಾದ್ರೆ ಟ್ಯಾಕ್ಸಿ ಬುಕ್ ಮಾಡ್ತೀನಿ ಅಂತ ನನ್ ಉತ್ತರಕ್ಕೂ ಕಾಯದೇ ಫೋನ್ ಹಚ್ಚೇಬಿಟ್ಟ.

ಸಂಜೆ ಆರು ಘಂಟೆ ಆಗ್ತಿದ್ದಹಾಗೆ ಕಾರಿನೊಂದಿಗೆ ‘ ಉಣ್ಣಿ’ ಹಾಜರ್. ಬಿಟ್ಟೂ ಬಿಡದ ಮಳೆ. ಕಾರು ಡೋರ್ ತೆಗೆದು ಒಳಗೆ ಸೇರಿಕೊಳ್ಳೊದ್ರೊಳ್ಗೆ ಅರ್ಧ ಒದ್ದೆ. ದಾರಿ ಕಾಣದ ಹಾಗೆ ಮಳೆ. ಡ್ರೈವರ್ ಕೂಡ ತುಂಬ ವಯಸ್ಸಾದ ಮುದುಕ. ಮಳೆ ಸೀಳಿಕೊಂಡು ನಿಧಾನ ಹೋಗ್ತಾ ಇದ್ದ ಕಾರು ಗಕ್ಕನೆ ನಿಂತುಬಿಡ್ತು. ಏನಾಯ್ತು ಅಂತ ಡ್ರೈವರನ್ನ ನೋಡಿದ್ರೆ ಆತ ಎದುರು ಕೈ ತೋರಿಸ್ದ.

ಎದುರಿಗಿದ್ದ ಸೇತುವೆ ಮೇಲೆ ನೀರು ತುಂಬಿ ಹರೀತಿತ್ತು. ಸ್ವಲ್ಪ ರಭಸವಾಗೇ ಇತ್ತು. ಕಾರನ್ನ ದಾಟಿಸೋ ಸ್ಥಿತಿ ಇರಲಿಲ್ಲ. ಹತಾಶೆಯಿಂದ ಕೈ ಚೆಲ್ಲಿ ಕುಳಿತ ಆ ಡ್ರೈವರ್ ಮುದುಕ ನನಗೆ Old Man and the Sea ಯ ಮುದುಕನಂತೇ ಕಂಡ. ‘ಉಣ್ಣಿ’ ತಡವಾಗತ್ತೆ ಅಂತ ಚಡಪಡಿಸಹತ್ತಿದ. ಮುದುಕ ಆತನನ್ನ ಸಮಾಧಾನ ಮಾಡ್ತಿದ್ದ. ಅದೃಷ್ಟವೋ ಎಂಬಂತೆ ಸ್ವಲ್ಪ ಹೊತ್ತಿಗೇ ಮಳೆ ಕಡಿಮೆಯಾಯ್ತು. ಸೇತುವೇ ಮೇಲಿನ ನೀರೂ ಇಳೀತು. ಎಷ್ಟೆಲ್ಲ ಕಷ್ಟಪಟ್ಟು ನಾವು ಜಾಗ ಸೇರೋ ಹೊತ್ಗೆ ನಾಟಕದ ಮೂರನೇ ಬೆಲ್ ಹೊಡೀತಿತ್ತು.


ಕಷ್ಟಪಟ್ಟು ಹೋಗಿದ್ದಕ್ಕೆ ಧೋಖಾ ಆಗ್ಲಿಲ್ಲ. ‘ಉಣ್ಣಿ’ ಸರಿಯಾಗೇ ಹೇಳಿದ್ದ. ನಿಜಕ್ಕೂ ಅದೊಂದು ಅದ್ಭುತ ಪ್ರಯೋಗ. ಲೈಟ್ ಡಿಸೈನ್, ಸೌಂಡ್ ಡಿಸೈನ್ ದೃಷ್ಟಿಯಿಂದ ತೀರಾ ತೀರಾ ವಿಶಿಷ್ಟ. ಸೋಲೊಪ್ಪಿಕೊಳ್ಳದ, ಛಲ ಬಿಡದ ಒಂದು ಆಶಾವಾದಿ ಬದುಕಿನ ಕಥೆ ಹೇಳೋಕೆ ತಾಂತ್ರಿಕತೆಯನ್ನ ಪ್ರಭಾವಶಾಲಿಯಾಗಿ ಬಳಸಿಕೊಂಡ ವಿನೂತನ ಪ್ರಯೋಗವಿದು.

ಈ ಥರ ಡಿಸೈನ್ ಮಾಡಿದ ಭಾರತೀಯ ರಂಗಪ್ರಯೋಗವನ್ನು ನಾನಿನ್ನೂ ಕಂಡಿರಲಿಲ್ಲ.

ಈ ನಾಟ್ಕ ಹೆಮ್ಮಿಂಗ್ವೇ ಯ ‘Old Man and the Se’a ಕಾದಂಬರಿಯ ರೂಪಾಂತರ. 1954 ರಲ್ಲಿ ಹೆಮ್ಮಿಂಗ್ವೇಗೆ ‘ನೊಬೆಲ್’ ತಂದುಕೊಟ್ಟ ತುಂಬಾ ತುಂಬಾ ಪ್ರಖ್ಯಾತ ಕಾದಂಬರಿಯಿದು.


ಸ್ಯಾಂಟಿಯಾಗೋ ಮುದುಕ ಮೀನುಗಾರ. ಎಂಭತ್ತು ದಿನಗಳಿಂದ ಆತನಿಗೆ ಮೀನು ಸಿಕ್ಕಿಲ್ಲ. ಅದಕ್ಕಾಗಿಯೇ ‘ದುರಾದೃಷ್ಟದವ’ ಅಂತ ಕರೆಸಿಕೊಳ್ತಿದ್ದವ.

ಅವನಿಗೊಬ್ಬ ಪುಟ್ಟ ಗೆಳೆಯ. ಮೀನು ಹಿಡಿಯೋಕೆ ಈ ಅಜ್ಜನಿಂದ್ಲೇ ಕಲಿತವ. ಆದ್ರೆ ಆ ಪುಟ್ಟನ ಅಪ್ಪ ಈ ಅಜ್ಜನೊಂದಿಗೆ ಹೋಗೋಕೆ ಬಿಡ್ತಿಲ್ಲ. ‘ದುರಾದೃಷ್ಟದವ’ ನೊಡನೆ ಮಗನ್ನ ಕಳಿಸೋಕೆ ಅವನಿಗೆ ಮನಸಿಲ್ಲ. ಆದ್ರೂ ಹುಡುಗ ಅಜ್ಜನ್ನ ಬಿಡಲೊಲ್ಲ. ಮೀನುಗಾರಿಕೆಗೆ ಹೊರಡೋಕೆ ಅಜ್ಜಂಗೆ ಎಲ್ಲ ಸಹಾಯ ಮಾಡ್ತಾನೆ. ಅಜ್ಜ ಒಂಟಿಯಾಗಿ ಹೊರಡ್ತಾನೆ. ದಿನಗಳು ಕಳೀತವೆ. ಮೀನಿನ ಸುಳಿವಿಲ್ಲ. ಸಮುದ್ರ ಮಧ್ಯೆ ಹಾರಾಡೋ ಹಕ್ಕಿಗಳ ಸೂಚನೆ ಹುಡುಕುತ್ತ ಅಜ್ಜ ಕಾಯ್ತಾನೆ.

ಕೊನೆಗೂ ಒಂದು ದಿನ ಅತನ ಗಾಳಕ್ಕೆ ಮೀನು ಬೀಳ್ತದೆ. ಅದಾದ್ರೂ ದೈತ್ಯ ಗಾತ್ರದ ಮೀನು. ಹೋರಾಟ ಸುರುವಾಗೋದೇ ಇಲ್ಲಿ. ಒಂಟಿ ಬಡಪಾಯಿ ಮುದುಕ, ದೈತ್ಯ ಮೀನು. ಹಣಾಹಣಿ ಹೋರಾಟ. ಕೊನೆಗೂ ಛಲವೇ ಗೆಲ್ತದೆ. ಮುದುಕ ತನ್ನ ಹರಿತವಾದ ಚಾಕುವಿನಿಂದ ದೈತ್ಯ ಮೀನನ್ನ ಕೊಂದು, ಜೋಪಾನವಾಗಿ ದೋಣಿಗೆ ಕಟ್ಕೊಂಡು ಸಮಾಧಾನದಿಂದ ತಿರುಗಿ ಹೊರಡ್ತಾನೆ.

ಕಥೆ ಇಲ್ಲಿಗೆ ಮುಗಿಯೋದಿಲ್ಲ. ಕಟ್ಟಿದ್ ಮೀನು ತಿನ್ನೋಕೆ ಶಾರ್ಕ್ ಒಂದು ದೋಣಿಯ ಬೆನ್ನಿಗೆ ಬೀಳ್ತದೆ. ಘಾಟಿ ಮುದುಕ ಅದನ್ನೂ ಕೊಲ್ತಾನೆ. ಈಗ ಒಂದಲ್ಲ ಹತ್ತು ಶಾರ್ಕ್ ಗಳು ಹಿಂದೆ ಬಿದ್ದಿವೆ. ಮತ್ತೆ ಅದೇ ಹೋರಾಟ. ಶಾರ್ಕ್ ಗಳು ಇಡೀ ಮೀನನ್ನ ತಿಂದುಕೊಂಡು ಹೋಗ್ತವೆ. ಹೋರಾಡ್ತಾ, ಹೋರಾಡ್ತಾ ಮುದುಕ ಹೇಳ್ತಾನೆ, “ಮನುಷ್ಯ ಇರೋದು ಸೊಲೋದಕ್ಕಲ್ಲ: ಮನುಷ್ಯನನ್ನ ಸಾಯಿಸ್ಬಹುದು: ಸೋಲಿಸೋಕಾಗಲ್ಲ”

ತೀರ ಕಡಿಮೆ ಮಾತುಗಳು. ಎಲ್ಲ ಮುದುಕ, ಪುಟ್ಟನ ಮೇಲಿನ ಅತನ ಪ್ರೀತಿ, ಬದುಕಿನ ಛಲ ಮತ್ತು ಆಶಾವಾದ ಕೇಂದ್ರಿತ. ಪಪೆಟ್ ಗಳ ಬಳಕೆಯಂತೂ ತೀರ ಅಪರೂಪದ್ದು. ಮೀನು, ಶಾರ್ಕ್ ಗಳ ಜೊತೆಯ ಹೋರಾಟದಲ್ಲಿ ಕಲಾವಿದ ಅವುಗಳನ್ನು ನಿಭಾಯಿಸುವ ರೀತಿ, ಬೆಳಕಿನ ಡಿಸೈನ್ ಮತ್ತು ಇಂಥ ಚಮತ್ಕಾರಗಳ ನಡುವಿನ ನಿಖರವಾದ ಹೊಂದಾಣಿಕೆ ನಾಟಕವನ್ನ ಶ್ರೇಷ್ಥವಾಗಿಸ್ತವೆ.

ಕಾದಂಬರಿಗಿಂತಲೂ ನಾಟಕ ಒಂದು ಕೈ ಹೆಚ್ಚೇ ಆಶಾವಾದಿ. ಕಾದಂಬರಿಗಿಂತ ಭಿನ್ನವಾಗಿ, ನಾಟಕದ ಕೊನೆಯಲ್ಲಿ ಹುಡುಗ ದೋಣಿ ಹತ್ತಿ ಮೀನು ಹಿಡಿಯೋಕೆ ಹೊರಟಿದಾನೆ. ದೂರದಿಂದ ಮುದುಕ ಟೆರೇಸ್ ಹತ್ತಿ ನೋಡ್ತಿದಾನೆ.
ಹುಡುಗ ಅಂತಾನೆ “ಅದೃಷ್ಟಾನಾ? ನೋಡಿ, ಅದೇ ನನ್ನ ಹುಡುಕಿಕೊಂಡು ಬರ್ತದೆ”

3 comments

  1. ಕಣ್ಣಿಗೆ ಕಟ್ಟುವಂತೆ ಇದೆ ಬರಹ. ಮುಂದುವರೆಯಲಿ.

Leave a Reply