ಬಲು ಕಿಲಾಡಿ ಪದಗಳಿವು ತೂಕಕೆ ನಿಲುಕಲಾರವು..

ಖಾಯಂ ವಿಳಾಸ

 

 

 

ಡಾ.ಲಕ್ಷ್ಮಣ ವಿ ಎ 

 

ತಾಲ್ಲೂಕಾಫೀಸಿನ ಸ್ವರ್ಗದ ಬಾಗಿಲಿನಲಿ
ನಿಂತಿರುವೆ
ಗವಾಕ್ಷಿಯಿಂದ ಗುಮಾಸ್ತ ಕೇಳುತ್ತಾನೆ
“ಖಾಯಂ ವಿಳಾಸ ಖಾಯಂ ವಿಳಾಸ ”

ಇವನ ಮರ್ಜಿ ಕಾದ ಮೇಲಷ್ಟೆ
ಅರ್ಜಿ ವಿಲೇವಾರಿಯಾಗಬೇಕು .

ಆದಿ ಪದ ಬರೆದೆ ಅಂತ್ಯ ಪದ ಬರೆದೆ
ಕೇವಲ ಮಧ್ಯಂತರದ ನಾನು
ಮಧ್ಯ ಪದ ದಾರಿಯಲ್ಲಿ ನಡೆಯುವಾಗಲೆಲ್ಲೊ ಕಳಚಿ ಬಿದ್ದಿದೆ.

ಆಗಲೆ ಸಾಕಷ್ಟು ದಣಿವು
ನಡೆದ ದಾರಿಯನ್ನೊಮ್ಮೆ ನೆನಪಿಸಿಕೊಂಡೆ
ಕಾಡು ಮೇಡು ಬೆಟ್ಟ ಬಯಲು ಬೋಧೀ ವೃಕ್ಷ
ಸಂಜೆ ಸಂತೆ ಕರಗುವ ಹೊತ್ತು
ಬೀದಿ ದೀಪಗಳೂ ಕಂತುವ ಹೊತ್ತು
ಖಾಲೀ ಕಾಲಮ್ಮಿನ ಬಿಟ್ಟಸ್ಠಳ ತುಂಬುವ
ಸೂಕ್ತ ಪದಗಳಿಗಾಗಿ ಯಾವ ಅಂಗಡಿಯಲಿ ಚೌಕಾಸಿ ನಡೆಸಲಿ ?

ಪದಗಳ ಹುಡುಕಲು ಪದಗಳ ಕಳಿಸಿ
ಇನ್ನುಳಿದ ಪದಗಳ ಅಲ್ಪ ವಿರಾಮಗಳಲಿ
ನಿಲ್ಲಿಸಿ

ಬಲು ಕಿಲಾಡಿ ಪದಗಳಿವು
ತೂಕಕೆ ನಿಲುಕಲಾರವು ತಕ್ಕಡಿಯಲಿ ಮೊದಲೆ
ಕೂಡಲಾರವು
ವಂಡರಗಪ್ಪೆಯಂತೆ
ಕೆಲವು ಆಕಳಿಸುತಿವೆ ಕೆಲವು ತೂಕಡಿಸುತಿವೆ
ಇನ್ನುಳಿದ ಪುಂಡ ಪದಗಳು ಸಾರಾಯಿ ಅಂಗಡಿಯಲಿ
ಕುಡಿದು ಗಹಗಹಿಸಿ ನಗುತಿವೆ
ಪದಪಳಗಿಸುವ ಮಂತ್ರ ದಂಡ ಸಿಗದೆ
ವಿಹ್ವಲ ರಾಹುಲ

ನಟ್ಟ ನಡುರಾತ್ರಿ ಎದ್ದು
ಅರಬ್ಬಿ ಸಮುದ್ರವ ಬೊಗಸೆಯಲಿ ಹಿಡಿದು
ದಖನ್ ಪ್ರಸ್ತ ಭೂಮಿಯ ಮೇಲೆ ಹರಿಸಿದ
ದಕ್ಷಿಣದ ಮಳೆ ಮಾರುತಗಳ ತಂದು
ಮರಭೂಮಿಯ ಮೇಲೆ ಸುರಿಸಿದ
ಖಾಲಿ ಬಿದ್ದ ಕಾಮನಬಿಲ್ಲಿಗೆ
ಬಣ್ಣ ಬಳಿಯುವ ಕಾಮಗಾರಿ ಗುತ್ತಿಗೆ ಪಡೆದ
ಖಾಯಂ ವಿಳಾಸದ ಪದಗಳ ಹುಡುಕಿ ಹುಡುಕಿ
ಕೊನೆಗೆ ಸುಸ್ತಾಗಿ ಕಾಲು ನೋವೆಂದು
ಬೋಧಿ ವೃಕ್ಷದ ಕೆಳಗೆ ಕುಳಿತ

ಮನಸು ಕಲ್ಲು ಬಿದ್ದ ಕೊಳ
ಅಲೆಯುಂಗುರಿನ ತಿಳಿನೀರ ಕನ್ನಡಿಯಲಿ
ಚೂರು ಚೂರಾದ ಮುಖ
ಸವೆದ ದಾರಿಯ ಹೆಜ್ಜೆಯ ಜಾಡು ಹಿಡಿದು
ಹಿಂದೆ ನಡೆಯುವೆ
ಅಲ್ಲಲ್ಲಿ ಬಿಡಿ ಬಿಡಿಯಾಗಿ ಬಿದ್ದ ಪದಗಳ
ಪಾದ ಹಿಡಿದು ದೇಹೀ ಎನ್ನುವೆ
ಬೊಗಸೆಯೊಡ್ಡಿ ಬೇಡಿಕೊಳ್ಳುವೆ
ತಥಾಗತ ನೇ
ಖಾಲೀ ಕಾಲಂ ನಲಿ
ನನ್ನ ಖಾಯಂ ವಿಳಾಸ ತುಂಬದೆ
ತಾಲೂಕಾಫೀಸಿನ
ಸ್ವರ್ಗದ ಬಾಗಿಲು ತೆರೆಯುವುದಿಲ್ಲ
ತಂದೆ
ರೇಷನ್ ಕಾರ್ಡು ಸಿಗದೆ ಇಲ್ಲಿ ಮೋಕ್ಷ ಪ್ರಾಪ್ತಿಯಿಲ್ಲ

2 comments

  1. ಖಾಯಂ ವಿಳಾಸದ ಹುಡುಕಾಟ..ಬಹುಶಃ.. ಕಾಲ ನೆಯಾಗಲಾರದೇನೋ..ಚಂದ.

  2. ಖಾಯಂ ಆಗುವ ಖಾತ್ರಿಯಿದ್ದರೆ ಮಾತ್ರ ಖಾಯಂ ವಿಳಾಸ..

Leave a Reply