ಒಂದು ಹಿಡಿ ಬೆಳಕು ಕೊಡಿ ಪ್ಲೀಸ್…

ಕಗ್ಗತ್ತಲೆಯ ಖಂಡದಲ್ಲಿರುವ ಅಂಗೋಲಾದ ಕತ್ತಲೆಯ ಬಗ್ಗೆ ಬರೆಯಲೋ ಬೇಡವೋ ಎಂಬ ತಾಕಲಾಟಗಳ ನಡುವೆಯೇ ಈ ಬಾರಿ ಒಂದಿಷ್ಟು ಬರೆದುಬಿಟ್ಟೆ.

ಅಂಗೋಲಾದಲ್ಲಿದ್ದಷ್ಟು ದಿನ ಕತ್ತಲು ನಮ್ಮನ್ನು ಅಷ್ಟಾಗಿ ಹೆದರಿಸಿರಲಿಲ್ಲ. ಏಕೆಂದರೆ ನಾವೊಂದು ಬೆಚ್ಚನೆಯ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಆರಾಮಾಗಿಯೇ ಇದ್ದೆವು. ಬೆಚ್ಚನೆಯ ಸೂರಿನಲ್ಲಿ ಸುರಕ್ಷಿತವಾಗಿದ್ದವರಿಗೆ ಮಳೆಯೂ ಚಂದ, ಕತ್ತಲೆಯೂ ಚಂದ. ಆದರೆ ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲವಲ್ಲಾ! ಇವುಗಳ ಭೀಕರತೆಯು ಗೊತ್ತಾಗಬೇಕಾದರೆ ಅಪರೂಪಕ್ಕಾದರೂ ಸೂರ್ಯಾಸ್ತದ ನಂತರ ಕುಗ್ರಾಮಗಳ ಕೆಲ ಬೀದಿಗಳಲ್ಲಿ ಒಮ್ಮೆ ಕಾಲಿಡಬೇಕು, ಕುತೂಹಲಕ್ಕಾದರೂ ಕೊಂಚ ಅಡ್ಡಾಡಬೇಕು. ಒಂದಷ್ಟು ನಿಮಿಷಗಳಾದರೂ ಸಾಮಾನ್ಯ ಅಂಗೋಲನ್ನರ ನಿತ್ಯದ ದಿನಚರಿಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕು.

ಮೊಂಗಲೀಮಾ ಬೈರೋ (ಗ್ರಾಮ) ದ ಜನತೆ ತಮ್ಮಲ್ಲಿ ವಿದ್ಯುಚ್ಛಕ್ತಿಯ ಸೌಲಭ್ಯವೇ ಇಲ್ಲವೆಂದು ಹೇಳಿದಾಗ ನನಗೆ ಅಂಥಾ ಅಚ್ಚರಿಯೇನೂ ಆಗಿರಲಿಲ್ಲ. ಭಾರತವೂ ಸೇರಿದಂತೆ ಹಲವು ದೇಶಗಳ ಅಸಂಖ್ಯಾತ ಕುಗ್ರಾಮಗಳಿಗೆ ಬೆಳಕು ವಿದ್ಯುತ್ತಿನ ರೂಪದಲ್ಲಿ ಇನ್ನೂ ತಲುಪಿಲ್ಲ. ಅಂಗೋಲಾಕ್ಕೆ ಬಂದ ಹೊಸದರಲ್ಲಿ ನಮ್ಮ ಪುಟ್ಟ ಕ್ಯಾಂಪಸ್ಸಿಗೆ ಸರಕಾರಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ತೆಗೆದುಕೊಳ್ಳುವುದರ ಬದಲಾಗಿ ಜನರೇಟರ್ ವ್ಯವಸ್ಥೆಯನ್ನು ಯಾಕಪ್ಪಾ ಅಳವಡಿಸಿದ್ದಾರೆ ಎಂದು ನಾನು ಬೆರಗಾಗಿದ್ದೆ. ಅಷ್ಟು ಮನೆಗಳು, ಕಾರ್ಯಾಲಯಗಳು ಮತ್ತು ಇತರೆ ಬೆರಳೆಣಿಕೆಯ ಕಟ್ಟಡಗಳ ಎಲ್ಲಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಈ ಎರಡು ಜನರೇಟರ್ ಗಳು ಸದಾ ಚಟುವಟಿಕೆಯಿಂದಿದ್ದವು. ಅಂಗೋಲಾದಂತಹ ದುಬಾರಿ ದೇಶದಲ್ಲಿ ಸಂಸ್ಥೆಯೊಂದಕ್ಕೆ ಇಂಥವುಗಳನ್ನು ನಿಭಾಯಿಸುವ ಖರ್ಚು ಅದೆಷ್ಟು ದೊಡ್ಡದು ಎಂಬುದನ್ನು ನಾನು ಊಹಿಸಬಲ್ಲೆ.

ಹಾಗೆಂದು ಒಂದಿಷ್ಟು ಉಳಿತಾಯ ಮಾಡೋಣವೆಂದು ಕುಳಿತರೆ ಕೆಲಸವು ಸಂಪೂರ್ಣವಾಗಿ ಬಾಕಿಯಾದೀತು. ಸರಕಾರಿ ವಿದ್ಯುತ್ ಸರಬರಾಜನ್ನು ನಂಬಿಕೊಂಡು ಕೂತರೆ ತಮ್ಮ ಕಾಲ ಮೇಲೆ ತಾವೇ ಚಪ್ಪಡಿಕಲ್ಲು ಎಳೆದುಕೊಂಡ ಹಾಗೆ ಎಂಬುದು ನಮಗೆ ಸೂರು ನೀಡಿರುವ ಬೆಲ್ಜಿಯನ್ ಸಂಸ್ಥೆಗೂ ಸೇರಿದಂತೆ ಎಲ್ಲಾ ವಿದೇಶಿ ಸಂಸ್ಥೆಗಳಿಗೂ ಮನವರಿಕೆಯಾಗಿದೆ. ಹೀಗಾಗಿ ವಿದೇಶೀಯರ ಎಲ್ಲಾ ಪುಟ್ಟ ಘಟಕಗಳಲ್ಲೂ ವಿದ್ಯುತ್ ಸರಬರಾಜಿಗಾಗಿ ಅವರವರದ್ದೇ ಖಾಸಗಿ ವ್ಯವಸ್ಥೆಗಳಿರುವುದು ಸಾಮಾನ್ಯ.

ಹಾಗೆ ನೋಡಿದರೆ ಅಂಗೋಲಾದಲ್ಲಿ ಬೀಡುಬಿಟ್ಟಿರುವ ವಿದೇಶಿ ಕಂಪೆನಿಗಳಲ್ಲಿ ಚೀನೀಯರದ್ದೇ ಸಿಂಹಪಾಲು. ನಂತರ ಈ ಹಿಂದೆ ವಸಾಹತುಗಳನ್ನು ಸ್ಥಾಪಿಸಿ ನೆಲೆಯೂರಿದ್ದ ಪೋರ್ಚುಗಲ್, ಸಾಂಸ್ಕೃತಿಕವಾಗಿ ಹತ್ತಿರದ ಸಂಬಂಧವನ್ನು ಹೊಂದಿರುವ ಬ್ರೆಜಿಲ್ ಮತ್ತು ಬಹುತೇಕ ಆಫ್ರಿಕನ್ನರು ನೆಲೆಯಾಗಲು ಕನಸು ಕಾಣುವ ಪ್ಯಾರಿಸ್… ಹೀಗೆ ಈ ಮೂಲದ ಸಂಸ್ಥೆಗಳು ನಂತರದ ಸ್ಥಾನಗಳಲ್ಲಿ ನಿಲ್ಲುತ್ತವೆ.

ಹೀಗಾಗಿಯೇ ಅಂಗೋಲಾದ ಸರಕಾರಿ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಅದೆಷ್ಟೇ ಲೋಪದೋಷ, ತೀವ್ರ ವ್ಯತ್ಯಯಗಳಿದ್ದರೂ ಈ ವಿದೇಶಿ ಘಟಕಗಳಿಗೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಊರಿಗೂರೇ ಕತ್ತಲಿನಲ್ಲಿದ್ದರೂ ಒಂದು ಮೂಲೆಯಲ್ಲಿ ಮಾತ್ರ ದೀಪಗಳು ಮಿಣಮಿಣ ಬೆಳಗುತ್ತಿದ್ದರೆ ಅದು ವಿದೇಶೀಯರದ್ದೇ ಘಟಕ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು.

ಇನ್ನು ವೀಜ್ ಪ್ರಾಂತ್ಯದ ಇತರ ಭಾಗಗಳಲ್ಲಿ ವಿದ್ಯುತ್ ಸರಬರಾಜಿನ ವ್ಯವಸ್ಥೆಗಳಿದ್ದರೂ ಮೊಂಗಲಿಮಾದಂತಹ ಬೈರೋದ ಜನತೆ ಮಾತ್ರ ಕತ್ತಲಿನಲ್ಲೇ ಬದುಕಬೇಕು. ಹೀಗಾಗಿ ಸೂರ್ಯಾಸ್ತದ ನಂತರ ಅಲ್ಲಿ ಚಿಮಣಿಗಳು, ಪೆಟ್ರೋಮ್ಯಾಕ್ಸ್ ಗಳು, ಇದ್ದಿಲಿನ ದೀಪಗಳು ಬೆಳಗುತ್ತವೆ. ”ಇದ್ದಿಲನ್ನು ಖರೀದಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ನಾವು ಹಣ ಎತ್ತಿಡಬೇಕು. ಆದರೇನು ಮಾಡುವುದು? ಬೆಳಕು ಸ್ವಲ್ಪವಾದರೂ ಬೇಕಲ್ಲವೇ?”, ಎನ್ನುತ್ತಾರೆ ಇಲ್ಲಿಯ ಕೆಲ ಜನರು.

ವಿಚಿತ್ರವೆಂದರೆ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುಚ್ಛಕ್ತಿಯಿದ್ದರೂ ಈ ಒಂದು ಜಾಗದ ಜನರು ಮಾತ್ರ ಇಂದಿಗೂ ಕತ್ತಲಲ್ಲೇ ಇದ್ದಾರೆ. ಇಂಥಾ ಇನ್ನೂ ಅದೆಷ್ಟು ಗ್ರಾಮಗಳಿವೆಯೋ! ಸೋಬಾ (ಸರಪಂಚ್) ರ ಸತತ ಪ್ರಯತ್ನಗಳ ನಂತರವೂ ಇಲ್ಲಿ ಈವರೆಗೆ ಬೆಳಕನ್ನು ತರಲು ಸಾಧ್ಯವಾಗದೇ ಹೋಗಿದ್ದು ನಿಜಕ್ಕೂ ದುರಾದೃಷ್ಟಕರ. ಒಟ್ಟಿನಲ್ಲಿ ಕೆಲ ರಾಜಕೀಯ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಈ ಭಾಗದ ಜನತೆಯು ಮಲತಾಯಿ ಧೋರಣೆಯ ಹೆಜ್ಜೆಗಳಿಗೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

ಮೊಂಗಲಿಮಾದ ಜನತೆಯು ಹೀಗೆ ಕತ್ತಲಲ್ಲಿ ಒದ್ದಾಡುತ್ತಿದ್ದರೆ ಉಳಿದ ಭಾಗಗಳಲ್ಲಿ ನಡೆಯುತ್ತಿರುವ ಕತೆಯೇ ಬೇರೆ. ಅದೆಷ್ಟೋ ಸೋಡಿಯಂ ಲೈಟುಗಳು (ವಿದ್ಯುದ್ದೀಪದ ಕಂಬಿಗಳು) ಬೇರೆ ಕಡೆಗಳಲ್ಲಿ ನಡುಮಧ್ಯಾಹ್ನವೂ ಬೆಳಗುತ್ತಿರುತ್ತದೆ. ವಿದ್ಯುಚ್ಛಕ್ತಿಯು ಹೀಗೆ ವಿನಾಕಾರಣ ಪೋಲಾಗುತ್ತಿರುವ ಬಗ್ಗೆ ಇಲ್ಲಿ ಯಾರಿಗೂ ಕಾಳಜಿಯಿದ್ದಂತಿಲ್ಲ. ಹಗಲುರಾತ್ರಿಗಳ ಪರಿವೆಯಿಲ್ಲವೆಂಬಂತೆ ಉರಿಯುತ್ತಲೇ ಇರುವ ವಿದ್ಯುದ್ದೀಪಗಳಿವು. ಈ ಬಗ್ಗೆ ಕೆಲ ಸೋಬಾರಿಗೆ ಮಾಹಿತಿಯನ್ನು ನೀಡಿದ್ದರೂ ಅಷ್ಟೇನೂ ಪ್ರಯೋಜನವಾಗಿರಲಿಲ್ಲ. ಒಟ್ಟಿನಲ್ಲಿ ಇಲ್ಲದಿರುವವರಿಗೆ ಇಲ್ಲವೆಂಬ ಗೋಳು. ಇದ್ದವರಿಗೆ ತಮ್ಮ ಬಳಿಯಿರುವ ಸಂಪನ್ಮೂಲದ ಮೌಲ್ಯವೇ ತಿಳಿದಿಲ್ಲದ ಪರಿಸ್ಥಿತಿ.

ಎರಡು ವರ್ಷ ಜನರೇಟರ್ ಗಳ ಐಷಾರಾಮದಲ್ಲಿ ಹಾಯಾಗಿದ್ದ ನಮಗೂ ಇದರ ಬಿಸಿ ತಟ್ಟಿದ್ದು ಒಂದು ಜನರೇಟರ್ ಕೈಕೊಟ್ಟಾಗಲೇ. ಇವೆಲ್ಲಾ ಶುರುವಾಗಿದ್ದು ನಮ್ಮ ಘಟಕದ ಮುಖ್ಯಸ್ಥನಾಗಿದ್ದ ಓರ್ವ ಹಿರಿಯ ಬೆಲ್ಜಿಯನ್ ಅಧಿಕಾರಿ ತನ್ನ ದೇಶಕ್ಕೆ ವಾಪಾಸ್ಸಾದ ನಂತರವೇ. ಇವರ ನಿರ್ಗಮನದ ನಂತರ ಅಚ್ಚುಕಟ್ಟಾಗಿದ್ದ ನಮ್ಮ ವಾಸ್ತವ್ಯ ವ್ಯವಸ್ಥೆಯ ಒಂದೊಂದೇ ಅಂಶಗಳು ಬೆನ್ನುಬೆನ್ನಿಗೇ ಕೈಕೊಟ್ಟು ಒಟ್ಟಾರೆಯಾಗಿ ಎಲ್ಲವೂ ದೊಡ್ಡ ಮಟ್ಟದಲ್ಲಿ ಕುಸಿಯುವಂತಾಗಿದ್ದು ವಿಪರ್ಯಾಸದ ಸಂಗತಿ. ಈ ನಿಟ್ಟಿನಲ್ಲಿ ಮೊದಲ ಮತ್ತು ಅತ್ಯಂತ ದೊಡ್ಡ ಹೊಡೆತ ತಿಂದಿದ್ದೇ ನಮ್ಮ ಕ್ಯಾಂಪಸ್ಸಿನ ವಿದ್ಯುತ್ ಸರಬರಾಜು ವ್ಯವಸ್ಥೆ.

ಎರಡು ವರ್ಷಗಳಿಂದ ಹತ್ತು ನಿಮಿಷಗಳ ವಿದ್ಯುತ್ ನಿಲುಗಡೆಯನ್ನೂ ಕಾಣದಿದ್ದ ನಮಗೆ ಮುಂದೆ ನಿತ್ಯವೂ ಒಂದೆರಡು ತಾಸುಗಳ ವಿದ್ಯುತ್ ನಿಲುಗಡೆ ಸಾಮಾನ್ಯವೆಂಬಂತಾಗಿತ್ತು. ಇಲ್ಲಿ ನಮಗೆ ನೀಡಿರುವ ಮನೆಗಳು ಸಂಪೂರ್ಣವಾಗಿ ವಿದ್ಯುಚ್ಛಕ್ತಿಯ ಮೇಲೆ ಅವಲಂಬಿತವಾಗಿರುವುದರಿಂದ ವಿದ್ಯುತ್ ನಿಲುಗಡೆಯಾದಾಗಲೆಲ್ಲಾ ನಮ್ಮ ದಿನಚರಿಯೇ ಅಕ್ಷರಶಃ ಮುಗ್ಗರಿಸಿ ಬೀಳುವುದು ನಿತ್ಯದ ಮಾತಾಗಿಬಿಟ್ಟಿದ್ದವು.

ವೈಫೈ, ಅಡುಗೆಮನೆಯ ಒಲೆಗಳಿಂದ ಹಿಡಿದು ನಲ್ಲಿಯಲ್ಲಿ ಬರುವ ನೀರಿನವರೆಗೂ ಈ ಮನೆಗಳಲ್ಲಿರುವ ಎಲ್ಲಾ ಉಪಕರಣಗಳು ಎಲೆಕ್ಟ್ರಿಕ್ ವ್ಯವಸ್ಥೆಯನ್ನೇ ನಂಬಿಕೊಂಡಿದ್ದಂಥವುಗಳು. ಹೀಗಾಗಿ ಪ್ರತೀಬಾರಿ ಜನರೇಟರ್ ಕೈಕೊಟ್ಟಾಗಲೂ ಕೆಸರಿನಲ್ಲಿ ಚಕ್ರ ಸಿಕ್ಕಿಹಾಕಿಕೊಂಡ ವಾಹನವು ಮುಂದೆ ಸಾಗಲು ಒದ್ದಾಡುವಂತೆ ನಮ್ಮ ದಿನಚರಿಗಳು ಏದುಸಿರುಬಿಟ್ಟವು. ”ಈ ಜನರೇಟರ್ ಅಂಗೋಲಾದಲ್ಲಂತೂ ರಿಪೇರಿಯಾಗುವುದಿಲ್ಲ. ಬೆಲ್ಜಿಯಂನಲ್ಲೇ ಆಗೋದು.

ಹಡಗಿನಲ್ಲಿ ಕಳಿಸಿ, ರಿಪೇರಿ ಮಾಡಿಸಿ, ಮತ್ತೆ ತರಲು ಹಲವು ತಿಂಗಳುಗಳೇ ತಗುಲಬಹುದು”, ಎಂದು ಷರಾ ಬರೆದುಬಿಟ್ಟರು ತಮಗೆ ತಾವೇ ತಜ್ಞರ ಬಿರುದುಗಳನ್ನಿಟ್ಟುಕೊಂಡ ಇಲ್ಲಿಯ ಕೆಲ ಮಹಾಬುದ್ಧಿವಂತರು. ‘ಇದೆಲ್ಲಾ ಆಗುವಂಥದ್ದಲ್ಲ. ಇದು ರಿಪೇರಿಯಾಗಲಾರದು’ ಎಂಬುದಕ್ಕಿಂತಲೂ ‘ನೀವು ಇಲ್ಲಿ ಇರುವಷ್ಟು ದಿನ ಇದರೊಂದಿಗೇನೇ ದಿನತಳ್ಳಬೇಕು’, ಎಂಬುದನ್ನು ಪರೋಕ್ಷವಾಗಿ ಹೇಳುವ ವಿಧಾನವಿದು.

ಈ ಮಧ್ಯೆ ಅಂಗೋಲನ್ ಸರಕಾರದ ಹಿಡಿತದಲ್ಲಿರುವ ತೈಲೋದ್ಯಮ ಸಂಸ್ಥೆಯಾದ ‘ಸೋನಾಂಗೋಲ್’ ನಿಂದ ತೈಲ ಸರಬರಾಜಿನ ವ್ಯವಸ್ಥೆಯಲ್ಲಾದ ಏರುಪೇರುಗಳೂ ಕೂಡ ನಮ್ಮ ಗಾಯಕ್ಕೆ ಬರೆ ಎಳೆದಂತಾಗಿಬಿಟ್ಟವು. ಇದರಿಂದಾಗಿ ಇರುವ ಒಂದು ಜನರೇಟರ್ ನಲ್ಲಿ ನಿಯಮಿತವಾಗಿ ತುಂಬಬೇಕಾಗಿದ್ದ ತೈಲಕ್ಕೂ ಕಲ್ಲುಬಿತ್ತು. ರೋಗಿಯಂತೆ ಕೆಲಸ ಮಾಡುವ ಜನರೇಟರ್ ಮತ್ತು ಅದರ ಚಿಕಿತ್ಸೆಗಾಗಿ ನಿತ್ಯವೂ ಒಂದಿಲ್ಲೊಂದು ಕಾರಣಗಳಿಂದಾಗಿ ಬರುತ್ತಿದ್ದ ಕೆಲ ಕಾರ್ಮಿಕರಿಗಂತೂ ಈ ನೆಪದಲ್ಲಿ ಒಳ್ಳೆಯ ಸಂಪಾದನೆಯಾಯಿತು ಅನ್ನಿ.

ಇದಕ್ಕೆ ಪ್ರತಿಯಾಗಿ ನಮಗೆ ಸಿಕ್ಕಿದ್ದು ಗಸೋಲಿಯೋ ನೂಂತೆ, ಮಾಕಿನ ನೂಂತೆ, ಅಸೆಸೋರಿಯೋಸ್ ನೂಂತೆ (ತೈಲವಿಲ್ಲ, ಯಂತ್ರ ಇಲ್ಲ, ಬಿಡಿಭಾಗಗಳು ಇಲ್ಲ) ಹೀಗೆ ದಂಡಿಯಾಗಿ ನಿತ್ಯವೂ ಕುಂಟುನೆಪದಂತೆ ಸಿಗುತ್ತಿದ್ದ ‘ನೂಂತೆ’ (ಇಲ್ಲ) ಭಾಗ್ಯಗಳು ಮಾತ್ರ. ಅಂತೂ ಮೊಂಗಲಿಮಾದಂತಹ ಕುಗ್ರಾಮಗಳು ವಿದ್ಯುಚ್ಛಕ್ತಿ ಸೌಲಭ್ಯಗಳಿಲ್ಲದೆ ಹೇಗೆ ಬದುಕುತ್ತವೆ ಎಂಬುದನ್ನು ನೆನಪಿಸುವುದಕ್ಕಾಗಿಯೇ ಇರುವಂತೆ ಇಂಥಾ ಘಟನೆಗಳು ನಿರಂತರವಾಗಿ ಕಾಡುತ್ತಾ ನಮ್ಮ ತಾಳ್ಮೆಯನ್ನು ಪಣಕ್ಕೊಡ್ಡಿದ್ದವು.

ಇನ್ನು ವಿದ್ಯುತ್ ನಿಲುಗಡೆಯಾಗುತ್ತಿದ್ದ ದಿನಗಳಂದು ಪೇಟೆಯಲ್ಲಿ ನಡೆಯುತ್ತಿದ್ದ ಕಳ್ಳತನಗಳೂ ಕೂಡ ಹೆಚ್ಚಾಗುತ್ತಿದ್ದಿದ್ದು ನಿರೀಕ್ಷಿತವೇ ಆಗಿತ್ತು. ಕದಿಯುವ ಮಟ್ಟವು ಯಾವ ಹಂತಕ್ಕೆ ಇಳಿದಿತ್ತೆಂದರೆ ನೀರಿನ ಸರಬರಾಜಿಗೆಂದು ಅಳವಡಿಸಲಾಗಿದ್ದ ಮೀಟರ್ ಗಳೂ ಕೂಡ ಬಳಕೆದಾರರ ಮನೆಗಳಿಂದ ಯಥಾವತ್ತಾಗಿ ಕಳವಾಗುತ್ತಿದ್ದವು.

ಹೀಗಾಗಿ ನೀರಿನ ಮೀಟರ್ ಗಳ ಮೇಲೆ ಕಲ್ಲುಗಳ ಅಥವಾ ಹುಲ್ಲಿನ ಕವಚವೊಂದನ್ನೇ ತಯಾರುಗೊಳಿಸಿ ಕಳ್ಳರ ಕಣ್ಣುತಪ್ಪಿಸುವ ಯತ್ನಗಳೂ ಮಾಡಲ್ಪಟ್ಟವು. ಆರ್ಥಿಕವಾಗಿ ಕೊಂಚ ಉತ್ತಮ ಮಟ್ಟದಲ್ಲಿದ್ದವರು ಲೋಹದ ಸರಳುಗಳನ್ನು ಮಾಡಿಸಿ ಮೀಟರ್ ವ್ಯವಸ್ಥೆಯನ್ನು ಬಿಗಿಭದ್ರತೆಯಲ್ಲಿಡುವಂತೆ ಸುರಕ್ಷಿತವಾಗಿಟ್ಟರು. ಇಂಥಾ ಸಮಯಪ್ರಜ್ಞೆಯ ಹೆಜ್ಜೆಗಳು ಇಲ್ಲಿಯ ಜನರ ಪಾಲಿಗೆ ತಕ್ಕಮಟ್ಟಿಗೆ ಕೆಲಸವೂ ಮಾಡಿದ್ದು ಸತ್ಯ. ಅಳವಡಿಸಲಾಗಿದ್ದ ನೂರಾರು ನೀರಿನ ಮೀಟರ್ ಗಳು ಕೆಲವೇ ತಿಂಗಳುಗಳಲ್ಲಿ ಕಳುವಾಗಿದ್ದು ಮತ್ತು ಕಿಡಿಗೇಡಿಗಳಿಂದ ನಾಶಗೊಳಿಸಲ್ಪಟ್ಟಿದ್ದು ವೀಜ್ ನ ಶಾಂತ ಕತ್ತಲರಾತ್ರಿಗಳಲ್ಲಿ ನಡೆಯುವ ತರಹೇವಾರಿ ಅಪರಾಧಗಳಿಗೆ ಸಾಕ್ಷಿ.

ಹೀಗೆ ಮೊಂಗಲಿಮಾದ ಬೀದಿಗಳಲ್ಲಿ ಮಾರಾಟಕ್ಕಿಡಲಾಗಿರುವ ಇದ್ದಿಲುಗಳು ಹೇಳುವ ಮತ್ತು ಹೇಳದಿರುವ ಕತ್ತಲ ಕಥೆಗಳು ಬಹಳಷ್ಟಿವೆ. ಮೀರಾ ನಾಯರ್ ನಿರ್ದೇಶನದ ‘ಕ್ವೀನ್ ಆಫ್ ಕಟ್ವೆ’ ಚಿತ್ರದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತದೆ. ಉಗಾಂಡಾ ರಾಜಧಾನಿಯಾಗಿರುವ ಕಂಪಾಲಾದ ಕಟ್ವೆ ಎಂಬ ಕೊಳಚೆಪ್ರದೇಶದಿಂದ ಹೊರಬರುವ ಫಿಯೋನಾ ಮುಟೇಸಿ ಎಂಬ ಬಾಲಕಿಯೊಬ್ಬಳು ತನ್ನ ಹನ್ನೆರಡನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ಚೆಸ್ ನಲ್ಲಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುವ ಅದ್ಭುತ ಕಥೆಯಿದು.

ಅದು ರಾತ್ರಿಯ ಹೊತ್ತು. ಫಿಯೋನಾ ಭಾರೀ ಏಕಾಗ್ರತೆಯೊಂದಿಗೆ ಕುಳಿತುಕೊಂಡು ಚೆಸ್ ಪುಸ್ತಕವೊಂದನ್ನು ಓದಲು ಪ್ರಯತ್ನಿಸುತ್ತಿದ್ದಾಳೆ. ಅವಳ ತಾಯಿ ಕೂಡ ಅಲ್ಲೇ ಪಕ್ಕದಲ್ಲಿ ಮಲಗಿದ್ದಾಳೆ. ಮಗಳು ಚಾಂಪಿಯನ್ ಆಗಿದ್ದರೂ ರಾತ್ರಿಗಳಲ್ಲಿ ಅಷ್ಟು ಹೊತ್ತು ಓದುತ್ತಾ ಸೀಮೆಎಣ್ಣೆಯನ್ನು ಚಿಮಣಿದೀಪದಲ್ಲಿ ಕರಗಿಸುವುದು ಅವಳಿಗಿಷ್ಟವಿಲ್ಲ. ಹೀಗಾಗಿ “ಅದೆಷ್ಟೇ ಓದ್ತಿ… ಸಾಕು ಮಲಗಿನ್ನು”, ಎಂದು ಗೊಣಗುತ್ತಳೇ ಇದ್ದಾಳೆ ಆಕೆ. ಹಸಿವು, ಬಡತನ, ಅಲೆಮಾರಿ ಜೀವನಗಳಿಂದ ಕಂಗೆಟ್ಟಿರುವ ಆ ತಾಯಿಗೆ ಮಗಳ ಯಶಸ್ಸನ್ನು ಅರಗಿಸಿಕೊಳ್ಳಲೂ ಪುರುಸೊತ್ತಿಲ್ಲ. ಫಿಯೋನಾ ಉಗಾಂಡಾದ ಚಾಂಪಿಯನ್ ಆಗಿರಬಹುದು. ಆದರೆ ಟ್ರೋಫಿಗಳು ಹೊಟ್ಟೆ ತುಂಬಿಸುವುದಿಲ್ಲವಲ್ಲಾ! ಹೀಗಿರುವಾಗ ಅಷ್ಟು ಕಷ್ಟಪಟ್ಟು ಖರೀದಿಸಿ ತಂದ ಸೀಮೆಎಣ್ಣೆಯನ್ನು ಮಗಳು ಒಂದೇ ರಾತ್ರಿಯಲ್ಲಿ ಬಳಸಿ ಮುಗಿಸುವುದನ್ನು ಆಕೆ ಒಪ್ಪಲಾರಳು.

ಮುಂದೆ ಇದೇ ತಾಯಿ ತನ್ನ ಮಗಳು ಒಂದಿಷ್ಟು ಓದಿ, ಒಲ್ಲದ ಮನಸ್ಸಿನಿಂದಲೇ ಮಲಗಿದಾಗ ಸ್ವತಃ ಎದ್ದು ಚಿಮಣಿ ದೀಪವನ್ನು ಉರಿಸಿ ಮುಗುಳ್ನಗುತ್ತಾ ಮಲಗುತ್ತಾಳೆ. ಆ ಕ್ಷಣದಲ್ಲಿ ಆಕೆಯ ಮೊಗದಲ್ಲಿ ಮೂಡುವ ಕಾಂತಿಯನ್ನು, ಆ ಶುಭ್ರ ಮುಗುಳ್ನಗೆಯಲ್ಲಿರುವ ಹೊಳಪನ್ನೊಮ್ಮೆ ನೋಡಬೇಕು. ತಾನು ತನ್ನ ಮಗಳಿಗಾಗಿ ಇಷ್ಟಾದರೂ ಮಾಡಬಲ್ಲೆ ಎಂಬುದು ಅವಳಿಗೆ ಬಹಳ ಸಂತಸದ ಮತ್ತು ಹೆಮ್ಮೆಯ ಸಂಗತಿ. ಇಲ್ಲಿ ಅಂಗೋಲಾದ ಚಿಣ್ಣರ ಕೈಯಲ್ಲಿರುವ ಪುಸ್ತಕಗಳನ್ನು ನೋಡಿದಾಗ ನನಗೆ ಫಿಯೋನಾ ನೆನಪಾಗುತ್ತಾಳೆ.

ಆ ಕತ್ತಲ ರಾತ್ರಿಗಳಲ್ಲಿ, ಇರುವ ಒಂದಿಷ್ಟು ಮಂದ ಬೆಳಕಿನಲ್ಲಿ ಮಕ್ಕಳು ಹೇಗೆ ಓದುತ್ತಿರಬಹುದು, ಹೋಂವರ್ಕ್ ಮಾಡುತ್ತಿರಬಹುದು ಎಂಬುದನ್ನು ಕಲ್ಪಿಸಿಕೊಂಡಾಗಲೆಲ್ಲಾ ದಿಗಿಲಾಗುತ್ತದೆ. ಅಂಗೋಲಾವಾಗಲಿ ಭಾರತವಾಗಲಿ ಅಥವಾ ಇನ್ಯಾವುದೇ ದೇಶಗಳಾಗಲಿ ಸಮಾಜದ ತಳಮಟ್ಟದಲ್ಲಿರುವವರ ಸಂಕಷ್ಟಗಳು ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಮೇಲ್ವರ್ಗದ ಮಂದಿಗೆ ಮನದಟ್ಟಾಗುವುದೇ ಇಲ್ಲವಲ್ಲಾ ಎಂದು ವಿಷಾದವಾಗುತ್ತದೆ.

ಇಲ್ಲಿಯ ಕತ್ತಲೆಯು ನನ್ನ ಅಂಕಣಬರಹವೊಂದಕ್ಕೆ ವಿಷಯವಾಗಿ ಉಪಯೋಗವಾಗಿರಬಹುದು. ಆದರೆ ಸ್ಥಳೀಯ ಅಂಗೋಲನ್ನರಿಗೆ ಇದರಿಂದಾಗಿ ಯಾವ ಪ್ರಯೋಜನವೂ ಇಲ್ಲ. ದೇಶ-ಭಾಷೆ-ಗಡಿಗಳ ಭೇದವಿಲ್ಲದೆ ಬೆಳಕು ಆದಷ್ಟು ಬೇಗ ಇಂತಹ ಭಾಗಗಳನ್ನೂ ತಲುಪಲಿ. ಮುಂದಿನ ಬಾರಿ ಅಂಗೋಲಾಕ್ಕೆ ಬಂದಿಳಿದಾಗಲಾದರೂ ಮೊಂಗಲಿಮಾ ಗ್ರಾಮದ ಮನೆಗಳಲ್ಲಿ ವಿದ್ಯುದ್ದೀಪಗಳ ಬೆಳಕನ್ನು ಕಾಣುವ ಮಹದಾಸೆ ನನ್ನದು.

1 comment

  1. ಬೆಳಕಿನ ಹುಡುಕಾಟ ಭಾರತದಲ್ಲೂ ತುಸು ಹೆಚ್ಚೇ ಇದೆ. ಬೌದ್ಧಿಕ ಮತ್ತು ಮಾನವೀಯತೆ ಬೆಳಕಿಗೆ ಭಾರತ ಕಾದು ಕುಳಿತಿದೆ. ನಿಮ್ಮ ಲೇಖನ ಮತ್ತು ಕಳಕಳಿ ತುಂಬಾ ಇಷ್ಟವಾಯಿತು.

Leave a Reply