ನನ್ನ ಅಧಿಕೃತ ಕುಟುಂಬದ ಬಗ್ಗೆ ಹೇಳಲೋ ಅಥವಾ ಅನಧಿಕೃತ ಕುಟುಂಬಗಳ ಬಗ್ಗೆ ಹೇಳಲೋ?

ಪ್ರಸಾದ್ ನಾಯ್ಕ್

ಆಕೆ ತನ್ನ ತಲೆಯ ಮೇಲಿದ್ದ ನೀರಿನ ದೊಡ್ಡ ಬಕೆಟ್ಟೊಂದನ್ನು ಮೆಲ್ಲನೆ ಕೆಳಗಿಳಿಸಿದಳು.

ಈ ಕ್ರಿಯೆಯಲ್ಲಿ ಬಕೆಟ್ಟಿನಿಂದ ಕೊಂಚ ಹೊರಚೆಲ್ಲಿದ ನೀರು ಆಕೆಯ ಬೆವರಿನೊಂದಿಗೆ ಬೆರೆತು ಆಕೆಯನ್ನು ಮತ್ತಷ್ಟು ತೋಯಿಸಿತು. ನಡೆಯಲು ಹೆಜ್ಜೆಹಾಕಿದರೆ ಅಕ್ಷರಶಃ ಸುಟ್ಟುಬಿಡುವಂತಿರುವ ಮಧ್ಯಾಹ್ನದ ಆ ರಣಬಿಸಿಲಿನಲ್ಲಿ ಆಕೆ ಅದ್ಹೇಗೆ ನೀರನ್ನು ಹೊತ್ತು ತಂದಿದ್ದಳೋ. ಅಂತೂ ಅಂಗಳಕ್ಕೆ ಬಂದು ತಲೆಗೆ ಸುತ್ತಿದ್ದ ಮುಂಡಾಸಿನಂತಿದ್ದ ಬಟ್ಟೆಯನ್ನು ತೆಗೆದು, ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಾ ಸುಧಾರಿಸಿಕೊಂಡಳಾಕೆ. ಆ ಕ್ಷಣದಲ್ಲಿ ಅಂಗೋಲಾದ ನಿರ್ದಯಿ ಬಿಸಿಲು ಅವಳ ಕಪ್ಪು ಮೈಯನ್ನು ಮತ್ತಷ್ಟು ಕಪ್ಪಾಗಿಸಿದಂತೆ ನನಗನ್ನಿಸಿತು.

ನಾವು ಅಂದು ಮನೆಯಂಗಳದಲ್ಲಿ ಕೂತಿದ್ದು ಗಾಳಿಯಾಡಲೆಂದೇ. ಅಂಗೋಲಾದಲ್ಲೆಲ್ಲೂ ಸೀಲಿಂಗ್ ಫ್ಯಾನ್ ಗಳನ್ನು ನಾನು ಕಂಡವನಲ್ಲ. ಕೆಲ ನಿಮಿಷಗಳಲ್ಲೇ ಸದ್ದು ಮಾಡುತ್ತಾ ಅತ್ತಿತ್ತ ಆಡಿಕೊಂಡಿದ್ದ ಇಬ್ಬರು ಮಕ್ಕಳು ನಮ್ಮನ್ನು ಸೇರಿಕೊಂಡರು. ಮತ್ತೋರ್ವ ಹೆಂಗಸೊಬ್ಬಳು ತನ್ನ ಕೈಯಲ್ಲಿರುವ ಹಸುಳೆಯನ್ನು ಈ ತರುಣಿಯ ಕೈಯಲ್ಲಿಟ್ಟು ಅದೇನನ್ನೋ ಗೊಣಗಿ ಹೊರಟುಹೋದಳು. ಬಿಸಿಲ ಧಗೆಗೆ ಹಸುಳೆಯು ಸುಸ್ತಾದಂತೆ ಕಂಡು ತರುಣಿಯ ಕೈಗೆ ಬಂದ ಕೆಲ ನಿಮಿಷಗಳಲ್ಲೇ ಆಕೆಯ ಮಡಿಲಿನಲ್ಲಿ ಸುಖನಿದ್ದೆಗೆ ಜಾರಿಬಿಟ್ಟಿತು ಈ ಮಗು. ಇನ್ನು ಆಕೆಯ ಆದೇಶದ ಮೇರೆಗೆ ಮಗುವೊಂದು ಒಳಕ್ಕೆ ತೆರಳಿ ಒಂದು ಲೋಟ ನೀರಿನೊಂದಿಗೆ ಹೊರಬಂದಿದ್ದೂ ಆಯಿತು. ಹೀಗೆ ಮರುಭೂಮಿಯಂತಾಗಿದ್ದ ಗಂಟಲಿಗೆ ಒಂದಿಷ್ಟು ನೀರುಣಿಸಿ ಆರಾಮಾಗುತ್ತಾ ನನ್ನೊಂದಿಗೆ ಮಾತಾಡಲು ತಯಾರಾದಳು ಆಕೆ.

”ಕ್ಷಮಿಸಿ, ನಿಮ್ಮನ್ನು ಕಾಯಿಸಿಬಿಟ್ಟೆ. ಅದೇನು ಕೇಳುವುದಿದ್ದರೂ ಈಗ ಕೇಳಿ”, ಎಂದು ಮುಗುಳ್ನಗೆಯನ್ನು ಚೆಲ್ಲುತ್ತಾ ಹೇಳಿದಳು ಆಕೆ. ಮೌನವಾಗಿ ಇವೆಲ್ಲವನ್ನೂ ಎವೆಯಿಕ್ಕದೆ ಗಮನಿಸುತ್ತಿದ್ದ ನಾನು ಪ್ರಶ್ನೆಯ ಗಡಿಬಿಡಿಗೆ ಬೀಳದೆ ಆಕೆಯು ಸುಧಾರಿಸಿಕೊಳ್ಳುವಂತೆ ಮತ್ತಷ್ಟು ಸಮಯವನ್ನು ನೀಡಿದೆ. ನನ್ನ ಈ ನಡೆಯಿಂದ ಖುಷಿಯಾದವಳಂತೆ ಕಂಡ ಆಕೆ ಈ ಬಾರಿ ಒಳನಡೆದು ಬಾಳೆಹಣ್ಣು ಮತ್ತು ಹುರಿದ ನೆಲಗಡಲೆಯೊಂದಿಗೆ ಹೊರಬಂದಳು. ಹುರಿದ ನೆಲಗಡಲೆ ಮತ್ತು ಬಾಳೆಹಣ್ಣಿನ ಕಾಂಬೋ ಅಂಗೋಲಾದಲ್ಲಿ ಬಹಳ ಜನಪ್ರಿಯ. ಆ ಕೋಣೆಯಲ್ಲಿದ್ದ ಒಂದೇ ಒಂದು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದ ನನಗೆ ತಿನ್ನಲು ಕಡಲೆಯನ್ನು ಕೊಟ್ಟು, ತಾನೂ ಒಂದಿಷ್ಟು ಇಟ್ಟುಕೊಂಡು ಮಣೆಯಂತಿದ್ದ ಚಿಕ್ಕ ಮರದ ಕೊರಡೊಂದರ ಮೇಲೆ ಕುಳಿತು ಸಂಭಾಷಣೆಗೆ ತಯಾರಾದಳು ಈ ತರುಣಿ.

”ಇವರೆಲ್ಲಾ ನನ್ನದೇ ಮಕ್ಕಳು”, ನಾನು ಪ್ರಶ್ನೆಯನ್ನು ಕೇಳುವ ಮುನ್ನವೇ ಆಕೆಯಿಂದ ಉತ್ತರವು ಬಂದಿತು. ಕೊಂಚ ಸುಸ್ತಾದವಳಂತೆ ಕಂಡರೂ ತಾರುಣ್ಯದಿಂದ ಮಿಂಚುತ್ತಿದ್ದ ಅವಳನ್ನು ಕಂಡು ಈಕೆ ಮೂರು ಮಕ್ಕಳ ತಾಯಿ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಯಿತು ನನಗೆ. ಮೂವರಲ್ಲಿ ದೊಡ್ಡ ಮಗುವಿಗೆ ಆರು ವರ್ಷವಾದರೆ, ಚಿಕ್ಕದು ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಳೆ. ”ಹದಿನಾರನೇ ವಯಸ್ಸಿಗೇ ನಾನು ಮದುವೆಯಾಗಿಬಿಟ್ಟೆ. ಶೀಘ್ರದಲ್ಲೇ ತಾಯಿಯಾದೆ ಕೂಡ. ಈಗ ನನ್ನ ದಿನದ ಬಹುತೇಕ ತಾಸುಗಳು ಮಕ್ಕಳನ್ನು ಆಡಿಸುವುದರಲ್ಲೇ ಕಳೆದುಹೋಗುತ್ತಿವೆ”, ಎಂದಳಾಕೆ. ಇದನ್ನು ಕೇಳಿದ ನಾನು ನನ್ನದೇ ಆದ ಯಾವುದೇ ಅಭಿಪ್ರಾಯವನ್ನೂ ತೋರಗೊಡದೆ ಸುಮ್ಮನೆ ಹೂಂಗುಟ್ಟಿದೆ.

ಆದರೆ ತಾನು ವಿವಾಹಿತೆಯೆಂಬ ಸಾಮಾಜಿಕ ಹಣೆಪಟ್ಟಿಯಾಗಲಿ ಅಥವಾ ಮೂರು ಮಕ್ಕಳ ತಾಯಿಯೆಂಬ ಸತ್ಯವಾಗಲಿ ಅವಳ ಕನಸುಗಳನ್ನು ಕೊಂದಿರಲಿಲ್ಲ. ದಿನದ ಕೆಲಸಗಳನ್ನೆಲ್ಲಾ ಮುಗಿಸಿ ಆಕೆ ಸಂಜೆಯ ಪಾಳಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಬರೆದಿಟ್ಟ ಫ್ರೆಂಚ್ ಮತ್ತು ಇತಿಹಾಸದ ನೋಟ್ಸ್ ಗಳನ್ನು ತೆಗೆದು ನನಗೆ ತೋರಿಸಿದಳು ಆಕೆ. ಕೈಬರಹವು ಪರವಾಗಿಲ್ಲ ಎಂಬಂತಿತ್ತು. ಮನೆ, ಮಕ್ಕಳು, ವ್ಯಾಪಾರ, ವಿಧ್ಯಾಭ್ಯಾಸ ಹೀಗೆ ಎಲ್ಲವನ್ನೂ ಅದ್ಹೇಗೆ ನಿಭಾಯಿಸುತ್ತೀಯಾ ತಾಯಿ ಎಂದು ಕೇಳಿದರೆ ಜೊತೆಯಲ್ಲಿರುವ ಅಮ್ಮ ಮತ್ತು ತಂಗಿಯಿಂದಾಗಿ ಸಹಾಯವೂ ಆಗುತ್ತದೆ ಎನ್ನುತ್ತಿದ್ದಾಳೆ. ಗಂಡನೆನಿಸಿಕೊಂಡವನು ಕೆಲವೇ ತಿಂಗಳುಗಳ ಹಿಂದೆ ದೇಶಾಂತರಕ್ಕೆಂದು ಹೋಗುವವನಂತೆ ಹೇಳದೆ ಕೇಳದೆ ಎಲ್ಲೋ ಹೊರಟುಹೋದನಂತೆ. ಹೀಗೆ ಹೋದವನು ಮತ್ತೆಂದೂ ಬರಲೇ ಇಲ್ಲ. ಬರುವನೆಂಬ ಭರವಸೆಯೂ ಅವಳಿಗಿಲ್ಲ. ಸದ್ಯ ಆ ಪುಟ್ಟ ಮನೆಯಲ್ಲಿರುವುದು ಮೂರು ಮಹಿಳೆಯರು ಮತ್ತು ಮೂರು ಮಕ್ಕಳು ಮಾತ್ರ.

”ನೀವೆಂದೂ ನಿಮ್ಮ ಪತಿಯನ್ನು ಮುಂದೆ ಸಂಪರ್ಕಿಸಲಿಲ್ಲವೇ?”, ಎಂದು ನಾನು ಆಕೆಯಲ್ಲಿ ಕೇಳಿದೆ. ”ಆತ ಮತ್ತೆ ಮರಳಿ ಬರಲಾರ ಎಂಬುದು ನನಗೆ ಚೆನ್ನಾಗಿ ಗೊತ್ತು. ಬಂದರೆ ಮಕ್ಕಳ ಜವಾಬ್ದಾರಿಯು ಅವನ ತಲೆಯ ಮೇಲೆ ಬೀಳುತ್ತದಲ್ಲಾ. ಮೊದಲೇ ಅವನಿಗೆ ಪಕ್ಕದ ಗ್ರಾಮದ ಹೆಂಗಸೊಬ್ಬಳೊಂದಿಗೆ ಸಂಬಂಧವಿತ್ತು. ವಾರದ ನಾಲ್ಕು ದಿನ ಅಲ್ಲೇ ಬಿದ್ದುಕೊಂಡಿರುತ್ತಿದ್ದ. ಆ ದಿನಗಳಲ್ಲಿ ಅಪರೂಪಕ್ಕೆ ಮನೆಗಾದರೂ ಬರುತ್ತಿದ್ದ. ಈಗ ಮತ್ಯಾವುದೋ ಪ್ರಾವಿನ್ಸ್ ಗೆ ಹೊರಟುಹೋಗಿದ್ದಾನಂತೆ. ಆಸಾಮಿಯದ್ದು ಪತ್ತೆಯೇ ಇಲ್ಲ”, ಎಂದು ಉಸಿರಾಡಲೂ ಪುರುಸೊತ್ತಿಲ್ಲದಂತೆ ಹೇಳುತ್ತಾ ಹೋದಳು ಮಹಾತಾಯಿ. ಹೀಗೆ ಹೇಳುವಾಗ ಆಕೆಯ ಕಣ್ಣುಗಳಲ್ಲೊಂದು ವಿಚಿತ್ರ ಖಾಲಿತನ.

ಹೀಗೆ ಅಂದು ತನ್ನ ಬವಣೆಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದಿದ್ದು ಗ್ರಾಸಿಯಾನಾ ಎಂಬಾಕೆ. ಗ್ರಾಸಿಯಾನಾ ಮತ್ತು ಆಕೆಯ ಪತಿಯ ಸಂಬಂಧವು ನಿಜಕ್ಕೂ ಅಷ್ಟು ಕೆಟ್ಟದ್ದಾಗಿಯೇನೂ ಇರಲಿಲ್ಲ. ಇಬ್ಬರ ಆರಂಭದ ದಿನಗಳು ಚೆನ್ನಾಗಿಯೇ ಇದ್ದವು. ಪ್ರೀತಿ, ಆಕರ್ಷಣೆ, ಸುಖ ಹೀಗೆ ಎಲ್ಲವೂ ಇತ್ತು ಅಲ್ಲಿ. ಮನಸ್ಸಿನ ಬೆನ್ನಿಗೇ ದೇಹಗಳ ಮಿಲನವೂ ಆದಾಗ ವಂಶವೃಕ್ಷವು ಮೆಲ್ಲನೆ ಬೆಳೆಯಲಾರಂಭಿಸಿತ್ತು. ಹೀಗೆ ನೋಡನೋಡುತ್ತಲೇ ಆತ ಇಬ್ಬರು ಮಕ್ಕಳನ್ನು ಅವಳಿಗೆ ಕರುಣಿಸಿದ್ದ. ಗಂಡಹೆಂಡಿರ ಪಿಸುಮಾತಷ್ಟೇ ಇದ್ದ ಆ ಪುಟ್ಟಗೂಡಿನಲ್ಲೀಗ ಮಕ್ಕಳ ಕಲರವವು ತುಂಬಿಹೋಗಿತ್ತು.

ಆದರೆ ಮನೆಯ ಯಜಮಾನನೆನಿಸಿಕೊಂಡಿದ್ದ ಈ ಗಂಡು ಬಹುಬೇಗನೇ ಇನ್ಯಾವುದೋ ಹೆಣ್ಣೊಬ್ಬಳ ತೆಕ್ಕೆಗೆ ಬಿದ್ದಿದ್ದ. ಮಕ್ಕಳನ್ನಾಡಿಸುತ್ತಾ ಕೂರುವ ಹೆಂಡತಿಗಿಂತ ಹೊಸದಾಗಿ ಬಂದಾಕೆ ಸುಂದರಿಯಂತೆ ಅವನಿಗೆ ಕಂಡಿರಬೇಕು. ಗ್ರಾಸಿಯಾನಾ ಮತ್ತು ಆತನ ನಡುವಿನ ಸಂಬಂಧದಲ್ಲಿ ಮೊದಲ ಬಿರುಕುಗಳು ಬಂದಿದ್ದೇ ಆವಾಗ. ಈ ಬಗ್ಗೆ ಅವಳು ಗಂಡನೊಂದಿಗೆ ಕಿತ್ತಾಡುತ್ತಾಳೆ ಕೂಡ. ”ತಾನು ಎಲ್ಲಿದಾದರೂ ಹೋಗುವೆ, ಕೇಳಲು ನೀನ್ಯಾರೇ?”, ಎಂದು ಇದರ ಪರಿಣಾಮವಾಗಿ ಅವನಿಂದ ಬೈಸಿಕೊಂಡಿದ್ದೂ, ತಿರುಗಿಬಿದ್ದಾಗ ಒದೆಸಿಕೊಂಡಿದ್ದೂ ಆಯಿತು. ಇಂತಿಪ್ಪ ಗಂಡ ಒಂದು ದಿನ ಯಾವ ಸುಳಿವನ್ನೂ ನೀಡದೆ ಹೊರಟೇಹೋಗಿದ್ದ. ಮೂರನೇ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಮನೆಯ ಇತರ ಕೆಲಸಗಳೆಲ್ಲವನ್ನೂ ಸಂಭಾಳಿಸುತ್ತಿದ್ದ ತುಂಬುಗರ್ಭಿಣಿಯನ್ನು ಹೀಗೆ ನಡುನೀರಿನಲ್ಲಿ ಕೈಬಿಟ್ಟುಹೋಗಿದ್ದ ಈ ಭೂಪ.

ಅಂಗೋಲಾದಲ್ಲಿ ಇಂಥಾ ದೃಶ್ಯಗಳು ನನಗೆ ಹೊಸದೇನಲ್ಲ. ದೊಡ್ಡ ಸಂಖ್ಯೆಯ ಹೆಣ್ಣುಮಕ್ಕಳು ಇಲ್ಲಿ ಪ್ರಾಪ್ತವಯಸ್ಕರಾಗುವ ಮುನ್ನವೇ ಗರ್ಭ ಧರಿಸುತ್ತಾರೆ. ಜೀವನವೇನೆಂಬುದು ಅರ್ಥವಾಗುವ ಮುನ್ನವೇ ಮೋಜಿನ ಗುಂಗಿನಲ್ಲಿರುವ ಯುವಜೋಡಿಗಳು ದೊಡ್ಡ ತಪ್ಪನ್ನು ಮಾಡಿರುತ್ತವೆ. ನಿನ್ನೆಯವರೆಗೂ ಪ್ರೇಯಸಿಯಾಗಿದ್ದ ಹುಡುಗಿ ಇನ್ನೇನು ತನ್ನ ಮಗುವಿಗೆ ಜನ್ಮ ನೀಡಲಿದ್ದಾಳೆ ಎಂಬ ಜ್ಞಾನೋದಯವಾಗುವಷ್ಟರಲ್ಲಿ (ಹೆಚ್ಚಿನ ಪ್ರಕರಣಗಳಲ್ಲಿ) ಆತ ಕಂಗಾಲಾಗಿರುತ್ತಾನೆ. ತಕ್ಷಣವೇ ಸಂಬಂಧದಲ್ಲಿ ಬಿರುಕುಗಳು ಮೂಡುತ್ತವೆ. ಮಗುವನ್ನೇನು ಮಾಡಬೇಕೆಂಬ ಚರ್ಚೆಗಳು ಆರಂಭವಾಗುತ್ತವೆ. ಒಟ್ಟಿನಲ್ಲಿ ಹೆಣ್ಣಿನ ಜೀವನವು ಒಮ್ಮೆಲೇ ನಿಂತಂತಾಗಿ ನಿನ್ನೆಯವರೆಗೂ ಪ್ರೇಮಲೋಕದಲ್ಲಿ ಸ್ವಚ್ಛಂದ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಇವರ ಸಂಬಂಧವನ್ನು ಸಂದರ್ಭವು ತೀವ್ರ ಪರೀಕ್ಷೆಗೊಡ್ಡುತ್ತದೆ.

”ಹೌದು, ನಾನು ಮಾಡಿದ್ದು ತಪ್ಪು. ಆದರೆ ನನ್ನ ಬಳಿ ಬೇರ್ಯಾವ ಆಯ್ಕೆಗಳೂ ಇರಲಿಲ್ಲ. ನಾನು ಆಗಷ್ಟೇ ಹತ್ತನೇ ತರಗತಿಯನ್ನು ಮುಗಿಸಿದ್ದೆ. ಈ ದಿನಗಳಲ್ಲೇ ಅವಳು ಸಿಕ್ಕಿದ್ದಳು. ನನ್ನದೇ ವಯಸ್ಸಿನವಳು.  ಹಾರ್ಮೋನುಗಳು ಬುದ್ಧಿಯನ್ನು ಹೊಸಕಿಹಾಕುವ ಆ ದಿನಗಳಲ್ಲಿ ಏಕಾಂತಗಳನ್ನು ಸೃಷ್ಟಿಸಿಕೊಳ್ಳುವುದು ಮಹಾಸವಾಲೇನೂ ಅಲ್ಲ. ಹೀಗೆ ಎಲ್ಲವೂ ಸರಿಯಾಗಿದ್ದ ಕಾಲದಲ್ಲೇ ಆಕೆಯು ಗರ್ಭಿಣಿಯೆಂಬ ಸುದ್ದಿಯು ಸಿಡಿಲಿನಂತೆ ಬಡಿದಿತ್ತು. ನಾನು ಕಂಗಾಲಾಗಿದ್ದೆ”, ಎನ್ನುತ್ತಾನೆ ತರುಣನೊಬ್ಬ. ಬಾಲಕಿಯ ಮನೆಯವರು ಹುಡುಗನನ್ನು ಕರೆಸಿ ವಿಚಾರಿಸಿದರೆ ”ಈ ಹಾಳುಗರ್ಭವು ನನ್ನದಂತೂ ಅಲ್ಲ” ಎಂದು ಆತ ಕೈಯೆತ್ತುವುದರೊಂದಿಗೆ ಆ ಮನೆಯಲ್ಲಿ ಅಂದು ದೊಡ್ಡ ರಾದ್ಧಾಂತವೇ ನಡೆದುಹೋಯಿತು. ತುರ್ತಿನಲ್ಲೇ ಸರಣಿ ಸಮಾಲೋಚನೆಗಳು ನಡೆದು ನಿಶ್ಚಿತಾರ್ಥದ ದಿನವೂ ನಿಗದಿಯಾಯಿತು. ಮತ್ತಷ್ಟು ದಿನಗಳು ಇಲ್ಲೇ ಇದ್ದರೆ ತನಗೆ ಅಪಾಯ ಎಂಬುದನ್ನು ಅರ್ಥಮಾಡಿಕೊಂಡ ಹುಡುಗ ರಾತ್ರೋರಾತ್ರಿ ಅಲ್ಲಿಂದ ಪರಾರಿಯಾಗಿದ್ದ. ವಿವಾಹ ಪ್ರಸ್ತಾಪವು ಮುರಿದುಬಿದ್ದಿತ್ತು.

ಅವನು ಬರುತ್ತಾನೆಂದು ಅವಳು ನಿರೀಕ್ಷಿಸಿದ್ದು, ಅವನಿಗೆ ಲೆಕ್ಕವಿಲ್ಲದಷ್ಟು ಕರೆ ಮಾಡುತ್ತಾ ಅವನ ದಾರಿ ಕಾದಿದ್ದೇ ಆಯಿತು. ಮುಂದೆ ಗರ್ಭಪಾತವನ್ನು ಮಾಡಿಸದೆ ಬಾಲಕಿಯ ಮನೆಯವರೇ ಆರೈಕೆಯನ್ನು ಮಾಡಿದರು. ಒಂದೆರಡು ವರ್ಷಗಳ ನಂತರ ಪರಾರಿಯಾಗಿದ್ದ ಹುಡುಗ ಗುಟ್ಟಾಗಿ ಅವಳನ್ನು ಸಂಪರ್ಕಿಸಿ ತಪ್ಪೊಪ್ಪಿಕೊಂಡ. ಖರ್ಚಿಗೇನಾದರೂ ಬೇಕಿದ್ದರೆ ನಾನೂ ಸಹಾಯ ಮಾಡುತ್ತೇನೆ ಎಂದು ಹೇಳಿಕೊಂಡ. ಅಂತೂ ಇಬ್ಬರ ನಡುವೆ ಸಂಧಾನವಾಯಿತು. ಈಗ ಆ ಮಗುವಿಗೆ ಏಳರ ಪ್ರಾಯ. ಆಕೆ ಮತ್ತೊಬ್ಬನನ್ನು ವಿವಾಹವಾಗಿ ಅವರದ್ದೇ ಹೊಸ ಕುಟುಂಬವೊಂದು ರೂಪುಗೊಂಡಿದೆ. ಅದೃಷ್ಟವಶಾತ್ ಈ ಮಗುವನ್ನು ಆಕೆಯ ಗಂಡ ಒಪ್ಪಿಕೊಂಡಿದ್ದಾನೆ. “ಈ ಮಗು ನನ್ನದಲ್ಲ ಎನ್ನುವುದು ನನ್ನ ಪಲಾಯನವಾದವಷ್ಟೇ ಆಗಿತ್ತು. ನನ್ನಿಂದ ಇಂತಹ ಕೀಳುಮಾತುಗಳನ್ನು ಕೇಳಿದ ಬಾಲಕಿಯ ಹೆತ್ತವರು ಸಿಡಿದೆದ್ದಿದ್ದರು. ಇನ್ನೂ ಅಲ್ಲಿದ್ದರೆ ಪ್ರಾಣಕ್ಕೇ ಅಪಾಯವೆಂದು ಯೋಚಿಸಿ ಅಲ್ಲಿಂದ ಕಾಲ್ಕಿತ್ತೆ”, ಎನ್ನುತ್ತಾನೆ ಈ ತರುಣ.

ಇಂತಹ ಸಾಕಷ್ಟು ಪ್ರಕರಣಗಳನ್ನು ಇಲ್ಲಿ ಕಂಡು ಬೆರಗಾದವನು ನಾನು. ಹೀಗಾಗಿಯೇ ಇಲ್ಲಿ ಬೆಂಕಿಪೊಟ್ಟಣದಂತಹ ಚಿಕ್ಕ ಮನೆಯಲ್ಲೂ ಮನೆತುಂಬಾ ಮಕ್ಕಳು. ಒಂದು ಪಕ್ಷ ಇಲ್ಲಿ ವೈದ್ಯಕೀಯ ವ್ಯವಸ್ಥೆಗಳು ಚೆನ್ನಾಗಿರುತ್ತಿದ್ದರೆ ಅಂಗೋಲನ್ನರು ಜನಸಂಖ್ಯೆಯಲ್ಲಿ ಭಾರತವನ್ನೂ ಮೀರಿಸುತ್ತಿದ್ದರೇನೋ. ದೇಹಸುಖದ ರುಚಿಯನ್ನು ಬಹುಬೇಗನೇ ಕಾಣುವ ಇಲ್ಲಿಯ ತರುಣ-ತರುಣಿಯರಲ್ಲಿ ಕೊನೆಗೂ ಇದರ ಹೆಣಭಾರವನ್ನು ಹೊತ್ತುಕೊಳ್ಳಬೇಕಾದವಳು ಮಾತ್ರ ಹೆಣ್ಣು. ಒಂದಿಷ್ಟು ಓದಿ ಜೀವನಕ್ಕೊಂದು ಉತ್ತಮ ನೆಲೆಯನ್ನು ಮಾಡಿಕೊಳ್ಳುವ ಹೊತ್ತಿನಲ್ಲೇ ಆಕೆ ಪ್ರೀತಿ-ಪ್ರೇಮ, ಗಂಡ, ಮಕ್ಕಳು, ಕುಟುಂಬವೆಂಬ ಹೊರಬರಲಾಗದ ಚಕ್ರವ್ಯೂಹದಲ್ಲಿ ಸಿಲುಕಿರುತ್ತಾಳೆ. ಇಂತಹ ಸಂದರ್ಭಗಳಲ್ಲಿ ಗಂಡನಾದವನು ಹತ್ತಿರವಿದ್ದರೆ ಆಕೆಗೆ ಒಂದಿಷ್ಟು ಆಧಾರವಾದರೂ ಆಗಬಲ್ಲ. ಇನ್ನು ಅವನೇನಾದರೂ ಬಿಟ್ಟುಹೋದರೆ ಅಥವಾ ಬೇಜವಾಬ್ದಾರನಂತೆ ವರ್ತಿಸತೊಡಗಿದರೆ ದುಡಿಯುವುದು, ಮನೆ-ಮಕ್ಕಳನ್ನು ಸಂಭಾಳಿಸುವುದು… ಹೀಗೆ ಎಲ್ಲವನ್ನೂ ಅವಳೇ ಏಕಾಂಗಿಯಾಗಿ ಮಾಡಬೇಕು. ಇವೆಲ್ಲವನ್ನು ಮಾಡಲು ಶಕ್ತಳಲ್ಲದಿದ್ದರೆ ಮನೆಯವರದ್ದೋ, ಸಂಬಂಧಿಕರದ್ದೋ ಹಂಗಿನಲ್ಲಿ ಬಾಳಬೇಕು.    

ಇಲ್ಲಿಯ ಕಾನೂನಿನ ಪ್ರಕಾರ ಬಹುಪತ್ನಿತ್ವವೆಂಬುದು ಅಪರಾಧ. ಆದರೆ ಸಾಮಾಜಿಕವಾಗಿ ಬಹುಪತ್ನಿತ್ವವನ್ನು ಧಾರಾಳವಾಗಿಯೇ ಇಲ್ಲಿ ಒಪ್ಪಿಕೊಳ್ಳಲಾಗಿದೆ. ಹೀಗಾಗಿ ದೇಹಸುಖದ ವಿಚಾರದಲ್ಲಿ  ನಿಸ್ಸಂದೇಹವಾಗಿಯೂ ಅಂಗೋಲನ್ ಗಂಡಸರಿಗೆ ಕೊಂಚ ಹೆಚ್ಚೇ ಸ್ವಾತಂತ್ರ್ಯವು ಸಿಕ್ಕಿದಂತಾಗಿದೆ. ಇಲ್ಲಿಯ ಹಲವು ಸ್ಥಳೀಯ ಮಹಿಳೆಯರು ತಮ್ಮ ಗಂಡಂದಿರು ಇಂತಹ ಸಂಬಂಧಗಳನ್ನಿಟ್ಟುಕೊಳ್ಳುವ ಬಗ್ಗೆ ಒಪ್ಪಿಕೊಂಡಿದ್ದರು. ಆದರೆ ಈ ಬಗ್ಗೆ ಅವರಿಗೇನೂ ಅಭ್ಯಂತರವಿಲ್ಲ ಎಂಬುದು ಮಾತ್ರ ಸುಳ್ಳು. ಗೃಹದೌರ್ಜನ್ಯದಂತಹ ಅಂಶಗಳಿಗೆ ಹೆದರಿ ಅಥವಾ ಹೀಗೆ ಹಾದಿ ತಪ್ಪಿದರೂ ಮನೆಯ ಒಂದಿಷ್ಟು ಖರ್ಚನ್ನು ನೋಡಿಕೊಳ್ಳುತ್ತಾನೆ ಎಂಬ ಆಶ್ವಾಸನೆಗೆ ಮಣಿದು ಇವರುಗಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಗಂಡಸು ಎಲ್ಲೆಲ್ಲಿ ಏನೇನು ಮಾಡುತ್ತಾನೆ ಎಂಬುದನ್ನು ದಿನವಿಡೀ ಕುಳಿತು ಕಾವಲು ಕಾಯುವುದು ಕಷ್ಟವೇ. ಹೆಣ್ಣು ತನ್ನೆಲ್ಲಾ ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟರೆ ಮನೆಯ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.  

ಕಳೆದ ಬಾರಿ ಯಾವುದೋ ಮಾತುಕತೆಗೆಂದು ನಮ್ಮಲ್ಲಿಗೆ ಬಂದಿದ್ದ ಹಿರಿಯ ಅಂಗೋಲನ್ ಅಧಿಕಾರಿಯೊಬ್ಬರು ತನ್ನೊಂದಿಗೆ ತನ್ನ ಅರ್ಧಕ್ಕಿಂತಲೂ ಕಮ್ಮಿ ವಯಸ್ಸಿನ ತರುಣಿಯೊಬ್ಬಳನ್ನು ಕರೆದುಕೊಂಡು ಬಂದಿದ್ದರು. ಆತ ಮೊಮ್ಮಕ್ಕಳಿರುವ ಮನುಷ್ಯ. ಆಕೆ ಇಪ್ಪತ್ತು ಚಿಲ್ಲರೆ ವಯಸ್ಸಿನ ತರುಣಿ. ಇಬ್ಬರೂ ಹರೆಯದ ಪ್ರೇಮಿಗಳಂತೆ ಒಬ್ಬರಿಗೊಬ್ಬರು ಅಂಟಿಕೊಂಡೇ, ಚೇಷ್ಟೆಗಳನ್ನು ಮಾಡುತ್ತಲೇ ಕಾಲಕಳೆಯುತ್ತಿದ್ದರು. ”ನಮ್ಮಲ್ಲಿ ಇವೆಲ್ಲಾ ನಡೆಯುತ್ತಿರುತ್ತವೆ ಬಿಡಿ”, ಎಂದು ಅಂದು ನನ್ನ ಕಿವಿಯಲ್ಲಿ ಒಬ್ಬ ಪಿಸುಗುಟ್ಟಿದ್ದ. ಎಲ್ಲರೂ ಹೀಗೆಯೇ ಅನ್ನುವುದು ಸತ್ಯಕ್ಕೆ ದೂರವಾದರೂ ಬಹುಪಾಲು ಅಂಗೋಲನ್ನರು ಹೀಗೆ ಹಲವು ಸಂಗಾತಿಗಳನ್ನು ಮುಕ್ತವಾಗಿ ಅಥವಾ ರಹಸ್ಯವಾಗಿ ಇಟ್ಟುಕೊಂಡೇ ಬಂದಿರುವವರು. ಸಮರ್ಥಿಸಿಕೊಳ್ಳಲು ಮೋಜು, ಸುಖ, ಉಡಾಫೆಗಳೆಂಬ ಎಂಥದ್ದೇ ಫಿಲಾಸಫಿಗಳನ್ನು ಇವರುಗಳು ಮುಂದಿಟ್ಟರೂ ಅಸುರಕ್ಷಿತ ಲೈಂಗಿಕತೆಯನ್ನು ಮತ್ತು ಏಡ್ಸ್ ಸೇರಿದಂತೆ ಹೆಚ್ಚುತ್ತಿರುವ ಲೈಂಗಿಕ ಖಾಯಿಲೆಗಳನ್ನು ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಗಿಡಮೂಲಿಕೆಗಳು, ಬೇರು, ಪ್ರಾಣಿಯ ಉಗುರು, ಪಕ್ಷಿಯ ಕಾಲು, ಸರೀಸೃಪವೊಂದರ ಒಣಗಿದ ಚರ್ಮ ಹೀಗೆ ಚಿತ್ರವಿಚಿತ್ರ ವಸ್ತುಗಳನ್ನೊಳಗೊಂಡ ಅಂಗೋಲನ್ನರ ಸಾಂಪ್ರದಾಯಿಕ ಔಷಧಿಗಳ ಲೋಕದಲ್ಲಿ ಇಂದಿಗೂ ಬಹುಬೇಡಿಕೆಯಲ್ಲಿರುವ ಉತ್ಪನ್ನಗಳೆಂದರೆ ಕಾಮೋತ್ತೇಜಕ ಔಷಧಿಗಳೇ.

ಒಮ್ಮೆ ನಮ್ಮಲ್ಲಿಗೆ ಬಂದಿದ್ದ ಸಮಾಜಶಾಸ್ತ್ರಜ್ಞರೊಂದಿಗೆ ಸ್ಥಳೀಯರನ್ನು ಮಾತನಾಡಿಸಲು ಹೊರಟಿದ್ದ ನಾವು ಓರ್ವ ವೃದ್ಧನೊಬ್ಬನ ಬಳಿ ಕುಳಿತಿದ್ದೆವು. ಬೋಳುತಲೆಯವನಾಗಿದ್ದು, ದೊಗಲೆ ಅಂಗಿಯನ್ನು ಧರಿಸಿದ್ದ ಆತ ನಡೆದಾಡಲು ಬಹಳ ಕಷ್ಟಪಡುತ್ತಿದ್ದ. ಆತನ ಮಾತುಗಳನ್ನು ಸರಿಯಾಗಿ ಕೇಳಬೇಕೆಂದಿದ್ದರೆ ಬಹಳಷ್ಟು ಹತ್ತಿರಕ್ಕೆ ಬಂದು ನಾವು ನಮ್ಮ ಕಿವಿಗಳನ್ನು ನಿಮಿರಬೇಕಾಗಿತ್ತು. ಆತ ತಡಕಾಡುವುದನ್ನು ನೋಡಿದರೆ ಅವನಿಗೆ ದೃಷ್ಟಿದೋಷದ ಸಮಸ್ಯೆಯೂ ಇದೆ ಎಂಬುದನ್ನು ಖಚಿತವಾಗಿ ಹೇಳಬಹುದಿತ್ತು. ಅಂಗೋಲಾದಲ್ಲಿ ನಡೆದ ಆಂತರಿಕ ಯುದ್ಧದ ಬಗ್ಗೆ ಮಾತನಾಡಿದ ನಂತರ ನಿಮ್ಮ ಕುಟುಂಬದ ಬಗ್ಗೆ ಒಂದಿಷ್ಟು ಹೇಳಿ ಎಂದರೆ ”ನನಗೆ ಇಪ್ಪತ್ತೆರಡು ಮಕ್ಕಳಿದ್ದಾರೆ. ನನ್ನ ಅಧಿಕೃತ ಕುಟುಂಬದ ಬಗ್ಗೆ ಹೇಳಲೋ ಅಥವಾ ಅನಧಿಕೃತ ಕುಟುಂಬಗಳ ಬಗ್ಗೆ ಹೇಳಲೋ?”, ಅಂದುಬಿಟ್ಟ ಆತ.

ಈ ವೃದ್ಧ ಸತ್ಯ ಹೇಳುತ್ತಿದ್ದಾನೋ ಅಥವಾ ಸುಮ್ಮನೆ ಜಂಭ ಕೊಚ್ಚಿಕೊಳ್ಳುತ್ತಿದ್ದಾನೋ ಎನ್ನುವಂತೆ ಈ ಮಾತಿಗೆ ನಾವು ಮುಖಮುಖ ನೋಡಿಕೊಂಡೆವು.

Leave a Reply