ಅವತ್ತು ಬೆಸಗರಹಳ್ಳಿ ರಾಮಣ್ಣ..

 

 

 

 

 

ಕೇಶವರೆಡ್ಡಿ ಹಂದ್ರಾಳ 

 

ನಾನು 1998 ರಿಂದ 2000 ರವರೆಗೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಕ್ಯಾತನಹಳ್ಳಿ ರಾಮಣ್ಣ ಮತ್ತು ‘ದೇವದಾಸು’ ಕಾದಂಬರಿಯನ್ನು ಕನ್ನಡೀಕರಿಸಿದ್ದ ಖ್ಯಾತ ಕಥೆಗಾರ ವೀರಭದ್ರ ಆತ್ಮೀಯರಾಗಿದ್ದರು.

ಎರಡು ತಿಂಗಳಿಗೋ ಮೂರು ತಿಂಗಳಿಗೋ ಒಮ್ಮೆ ಸೇರಿ ದ್ರವರಾಕ್ಷಸಿಯನ್ನು ಕರುಳಿಗಿಳಿಸಿಕೊಳ್ಳುತ್ತಾ ಒಂದಿಷ್ಟೊತ್ತು ನೆನಪುಗಳೊಂದಿಗೆ ಸರಸಕ್ಕಿಳಿಯುತ್ತಿದ್ದೆವು. ಆ ಸಂದರ್ಭದಲ್ಲಿ ಎಪ್ಪತ್ತೈದು ವಯಸ್ಸಾಗಿದ್ದ ನಮ್ಮಪ್ಪ ಲಂಗ್ಸ್ ಕೈಕೊಟ್ಟು ಬೆಂಗಳೂರಿನ ಮಾರ್ಥಾಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದ.

ಅದಾದ ತಿಂಗಳಿಗೆ ನಾವು ಮೂವರು ಸೇರಿದ್ದೆವು. ಆ ವೇಳೆಗಾಗಲೇ ಬೆಸಗರಹಳ್ಳಿ ರಾಮಣ್ಣ ಮರಣಹೊಂದಿ ಒಂದೂವರೆ ವರ್ಷದ ಮೇಲಾಗಿತ್ತು. ಕ್ಯಾತನಹಳ್ಳಿ ಮತ್ತು ಬೆಸಗರಹಳ್ಳಿ ಆತ್ಮೀಯ ಸ್ನೇಹಿತರಾಗಿದ್ದವರು.

ಅಂದು ನಾನು ಬಿಯರ್ ಕುಡಿಯುತ್ತಾ ನಮ್ಮಪ್ಪನನ್ನು ನೆನಪಿಸಿಕೊಂಡು ಸ್ವಲ್ಪ ಭಾವುಕನಾಗಿದ್ದೆ .

ಆಗ ನನ್ನ ಪಕ್ಕದಲ್ಲಿ ಕುಳಿತಿದ್ದ ಕ್ಯಾತನಹಳ್ಳಿ ರಾಮಣ್ಣ ಮುಖದ ಬಳಿ ಮುಖ ತಂದು “ಸಾರ್ ಬಹಳ ದಿನದಿಂದ ನಿಮಗೊಂದು ವಿಷಯ ಹೇಳ್ಬೇಕು ಅಂತಿದ್ದೆ. ನಿಮ್ಮಪ್ಪನ ಬಗ್ಗೆ ಹೇಳ್ತಿರೋವಾಗ ನೆನಪಾಯ್ತು ನೋಡಿ. ನಮ್ಮ ಬೆಸಗರಹಳ್ಳಿ ರಾಮಣ್ಣ ಮಗ ಅಣ್ಣಾದೊರೆ ಸತ್ತೋದ್ಮೇಲೆ ತುಂಬಾ ಮಂಕಾಗಿಬಿಟ್ಟಿದ್ರು. ಒಂದ್ಸಾರಿ ಮಂಡ್ಯದಲ್ಲೊಂದು ಫಂಕ್ಷನ್ ಗೆ ಬಂದಿದ್ರು. ದೊಗಳೆ ದೊಗ಼ಳೆ ಆಗಿರೋ ಶರ್ಟ್ ಹಾಕ್ಕೊಂಡು ಒಂಥರಾ ತಿರುಗಾಡ್ತಿದ್ರು. ಡ್ರೆಸ್ ವಿಷಯದಲ್ಲಿ ಸದಾ ಶಿಸ್ತಾಗಿರ್ತಿದ್ದ ರಾಮಣ್ಣನ್ನ ಆ ಥರ ನೋಡಿ ಆಶ್ಚರ್ಯ, ನೋವು ಎರಡೂ ಆಗಿತ್ತು ನನಗೆ. ಆಮೇಲೆ ಗೊತ್ತಾಯ್ತು. ಅವೊತ್ತು ರಾಮಣ್ಣ ಹಾಕಿದ್ದ ಮೇಲಂಗಿ ಅಣ್ಣಾದೊರೆದಂತೆ…”

ಮಾತನಾಡುತ್ತಾ ಕ್ಯಾತನಳ್ಳಿರಾಮಣ್ಣನವರ ಗಂಟಲು ಕಟ್ಟಿ ಕಣ್ಣಲ್ಲಿ ನೀರು ಬಂದಿತ್ತು.ನನ್ನ ಕಣ್ಣುಗಳೂ ತೇವಗೊಂಡಿದ್ದವು. ಜಗದೀಶ್ ಕೊಪ್ಪ, ರಾಮಣ್ಣ, ಸ್ವಾಮಿ ಆನಂದ್, ಕೋಟಗಾನಹಳ್ಳಿ ರಾಮಯ್ಯ, ಹುಲಿಚಂದ್ರಶೇಖರ್, ಅಪ್ಪಗೆರೆ ಮುಂತಾದ ಗೆಳೆಯರು ಭಾವುಕರಾದಾಗ ಕಣ್ಣುಗಳಲ್ಲಿ ನೀರು ಕೆಡವಿಕೊಂಡಿರುವುದನ್ನು ಅನೇಕ ಸಾರಿ ನೋಡಿದ್ದೇನೆ.

ಇಷ್ಟಕ್ಕೂ ನಾನೇನು ಕಡಿಮೆಯಿಲ್ಲ. ಸಿನಿಮಾ ಸೀನುಗಳನ್ನೂ ಕಂಡು ಕಣ್ಣಲ್ಲಿ ನೀರಾಕುವ ನನ್ನ ನೋಡಿ ಹೆಂಡತಿ ಮಕ್ಕಳು ಸಂತೈಸಿ ತಮಾಷೆ ಮಾಡುವುದೂ ಉಂಟು..!

ಕರುಳಿಗೂ ಕಣ್ಣೀರಿಗೂ ಬಿಡಿಸಲಾರದ ನಂಟಂತೆ.

ಆಹಾರವನ್ನು ರಕ್ತವನ್ನಾಗಿ ಪರಿವರ್ತಿಸಿ ದೇಹದ ಎಲ್ಲಾ ಅಂಗಗಳಿಗೂ ಚೈತನ್ಯವನ್ನು ತುಂಬುವ ಕರುಳು ನಿಜಕ್ಕೂ ಒಂದು ಅದ್ಭುತ ಅನನ್ಯವಾದ ಯಂತ್ರವೇ ಸರಿ…

Leave a Reply