ಸಿಂಗಾಪುರ್ ಎನ್ನುವ ತಮಿಳುನಾಡಿನಲ್ಲಿ..

ಅದು ಜಾತಕ ಹೊರಡಿಸಿದ್ದ ಸಮಯ. ನನ್ನ ನಿರ್ಧಾರ ಕೇಳಿದ್ರೋ ಇಲ್ವೋ ನೆನಪಿಲ್ಲ. ಆದರೆ ಮದುವೆಗೆ, ನನ್ನ ವಯಸ್ಸು ಮಾತ್ರ ಅಪ್ಪ ಅಮ್ಮನಿಗೆ ಎಚ್ಚರಿಕೆಯ ಗಂಟೆ ಆಗಿತ್ತು.

ಹೇಳಿ ಕೇಳಿ ನಮ್ಮದು ಮಧ್ಯಮ ವರ್ಗದ ಕುಟುಂಬ. ಆದರೆ ನನ್ನ ಬಳಿ ಅಂತಹ ದೊಡ್ಡ ದೊಡ್ಡ ಷರತ್ತುಗಳು ಇರಲಿಲ್ಲ. ಆ ಸಮಯದಲ್ಲಿ ನಾನು ಇದ್ದಿದ್ದು ಮುತ್ತಿನ ನಗರಿ ಹೈದರಾಬಾದ್ ನಲ್ಲಿ. ಮೂರು ವರ್ಷದ ಕರಾರುಪತ್ರಕ್ಕೆ ಸಹಿ ಹಾಕಿ ‘ಈಟಿವಿ’ ಕನ್ನಡ ವಾಹಿನಿಯಲ್ಲಿ ಕೆಲಸಕ್ಕೆ ಸೇರಿದ್ದೆ.

ಏನೇ ಆಗ್ಲೀ , “ಕೆಲಸ ಬಿಟ್ಟು ಮನೆಯಲ್ಲಿ ಇರು” ಹೇಳುವ ಗಂಡು ಬೇಡ ಅನ್ನುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಮುಖ್ಯ ಕಾರಣ, ಹೆಣ್ಣು ಮಕ್ಕಳು ಯಾವತ್ತೂ ದುಡೀಬೇಕು ಅಂತ ಹೇಳ್ತಿದ್ದ ಅಮ್ಮನ ಮಾತುಗಳು. ಯಾಕೆಂದ್ರೆ ಮದುವೆ ನಂತ್ರ ಕೆಲಸ ಬಿಟ್ಟು ಅಮ್ಮ ಎದುರಿಸಿದ್ದ ಕಷ್ಟಗಳು. ಈ ವಿಚಾರ ಅಷ್ಟೊಂದು ಆಳವಾಗಿ ಅರ್ಥವಾಗಿಲ್ಲಾಂದ್ರು, ಅಮ್ಮ ಹೇಳೋದು ಸತ್ಯ ಅನ್ನೋದನ್ನ ತಲೆಯಲ್ಲಿ ಗಟ್ಟಿ ಮಾಡ್ಕೊಂಡಿದ್ದೆ. ಮೂರು ವರ್ಷ ಮುಗೀತಾ ಬಂದಿದ್ದ ಸಮಯ. ಮದುವೆ ಆದ ಮೇಲೂ ಕೆಲಸ ಮಾಡಬೇಕು. ಇಲ್ಲೇ ಇದ್ದುಬಿಟ್ಟರೆ ಖಂಡಿತಾ ಮನೆಯಲ್ಲಿ ಕೂರಿಸ್ತಾರೆ ಅಂತ ಆಲೋಚಿಸಿ ಬೆಂಗಳೂರಿಗೆ ಬರಲು ನಿರ್ಧರಿಸಿದೆ.

ನನಗೂ – ಈ ಪುಸ್ತಕಗಳಿಗೂ ಆಗೊಮ್ಮೆ- ಈಗೊಮ್ಮೆ ವ್ಯವಹಾರ. ಪರೀಕ್ಷೆಗಳಿಗೆ ನೀಟಾಗಿ ಓದಿದ್ದು ಬಿಟ್ರೆ, ಮತ್ಯಾವ ದೊಡ್ಡ ಮಟ್ಟದ ಹಾಗೂ ದೀರ್ಘ ಇತಿಹಾಸ ಇಲ್ಲ. ಹಾಗಂತ ವಿರೋಧಿ ಏನೂ ಅಲ್ಲ. ಇಷ್ಟವಾದ ಪುಸ್ತಕಗಳ ಹಾಗೂ ಅವುಗಳ ಲೇಖಕರ ಬಗ್ಗೆ ತಿಳಿದುಕೊಂಡಿದ್ದೆ. ‘ಈಟಿವಿ’ ಬಿಡುವ ಸಮಯದಲ್ಲಿ, ಇನ್ನೊಂದು ಖಾಸಗಿ ವಾಹಿನಿ ಜೊತೆ ಸಂದರ್ಶನಕ್ಕೆ ಕುಳಿತಿದ್ದೆ. ಜರ್ನಲಿಸ್ಟ್ ಗಳಿಗೆ ನ್ಯೂಸ್ ಪೇಪರ್ ಓದಿದ್ರೆ ಸಾಕಾಗುತ್ತೆ ಅನ್ನೋದು ನನ್ನ ಲೆಕ್ಕಾಚಾರ ಆಗಿತ್ತು. ಆದರೆ, ಅಲ್ಲಿ ಸಾಹಿತ್ಯ ಪುಸ್ತಕಗಳ ಬಗ್ಗೆಯೇ ಪೂರ್ಣ ವಿವರಣೆ ಕೇಳಿದ್ದು, ಹಾಗೂ ನನ್ನ ಉತ್ತರಗಳು ಆ ಮಟ್ಟಕ್ಕೆ ತಲುಪದ ಕಾರಣ ಕೆಲಸ ಕೈ ತಪ್ಪುವಂತಾಯಿತು.

ಆಗ ನನ್ನ ಕೈ ಹಿಡಿದಿದ್ದು ‘ಟಿವಿ9’ ಕನ್ನಡ. ಅಲ್ಲಿನ ಸಂದರ್ಶನ ಹೇಗಿತ್ತು ಅಂದ್ರೆ,  “ನಾವು ಇಷ್ಟು ಸಂಬಳ ಕೊಡ್ತೀವಿ, ನೀ ದುಡೀಬೇಕು ಅಷ್ಟೇ”..   ರೋಗಿ ಬಯಸಿದ್ದೂ, ವೈದ್ಯರು ಕೊಟ್ಟಿದ್ದು ಒಂದೇ ಅನ್ನುವ ಹಾಗೆ ಆಯಿತು ನ್ನನ್ನ ಪಾಲಿಗೆ.

ಪ್ರಾರಂಭದಲ್ಲಿ ಪ್ರೆಸ್ ಕ್ಲಬ್ ಅಥವಾ ಪ್ರೊಟೆಸ್ಟ್ ಸ್ಟೋರೀಸ್ ಗಳನ್ನು ಹೆಚ್ಚಾಗಿ ಕವರ್ ಮಾಡ್ತಿದ್ದೆ. ಅದರಲ್ಲೂ ಬಹುತೇಕ ಪ್ರತಿಭಟನೆಗಳು, ತಮಿಳರು ಅಥವಾ ತಮಿಳುನಾಡು ವಿರುದ್ಧ. ಬೆಂಗಳೂರಿನ ಕನ್ನಡ ಸಂಘಟನೆಗಳು ಒಂದ ಎರಡಾ. ಅಂಥದ್ದೇ ವರದಿಗಳನ್ನ ಮಾಡಿ ಮಾಡಿ… ನನ್ನ ತಲೆಯೂ ಒಂಥರಾ ಕನ್ನಡ ಸಂಘಟನೆಗಳಾಗಿ ಪರಿವರ್ತನೆಗೊಂಡಿತ್ತು.

ಅದರ ಪ್ರಭಾವ ಎಷ್ಟು ಆಯಿತೆಂದ್ರೆ ನನಗೂ ತಮಿಳರಂದ್ರೆ ಅಷ್ಟಕಷ್ಟೆ ಅನ್ನೋ ರೀತಿಯ ಭಾವನೆ ಬರಲು ಆರಂಭವಾಯಿತು. ಇದನ್ನೇ ತಲೆ ತುಂಬಾ ಹೊತ್ತಿದ್ದ ನಾನು, ಕೊನೆಗೆ ಬಂದು ಸೇರಿರೋದು ತಮಿಳರು ಹೆಚ್ಚಾಗಿ ನೆಲೆಸಿರುವ ಸಿಂಗಾಪುರಕ್ಕೆ. ಇಲ್ಲಿ ಚೈನೀಸ್, ಮಲಯ್, ಇಂಗ್ಲೀಷ್ ಜೊತೆಗೆ ತಮಿಳು ಭಾಷೆಗೂ ಕೂಡ ಪ್ರಾಮುಖ್ಯತೆ ಕೊಡಲಾಗುತ್ತದೆ.

“ತಮಿಳು” ಕೂಡ ಒಂದು ಅಧಿಕೃತ ಭಾಷೆ. ಸಿಂಗಾಪುರದ ಯಾವ ಮೂಲೆಗೂ ಹೋಗಿ, ತಮಿಳು ಭಾಷೆಯಲ್ಲಿ ಬೋರ್ಡ್‌ಗಳು ಸಾಮಾನ್ಯ. ರೈಲು, ಬಸ್ ಹೀಗೆ ಪಬ್ಲಿಕ್ ಸ್ಥಳಗಳಲ್ಲಿ ತಮಿಳಿನಲ್ಲಿ ಬರೆದ ಪದಗಳು ಕಾಣಸಿಗುತ್ತವೆ. ರೈಲು ನಿಲ್ದಾಣ, ರೈಲಿನ ಒಳಗಡೆ ಮಾಡುವ ಕಂಪ್ಯೂಟರೀಕೃತ ಘೋಷಣೆಗಳು ಕೂಡ ತಮಿಳು ಭಾಷೆಯಲ್ಲೂ ಹೇಳಲಾಗುತ್ತದೆ.

ಸಿಂಗಾಪುರದ ಸ್ವಾತಂತ್ರ್ಯದ ದಿನಗಳಲ್ಲಿ ಇಲ್ಲಿನ ಮೂಲ ತಮಿಳಿಗರು ಹೋರಾಡಿದ್ದರು ಎಂದು ಇತಿಹಾಸ ಹೇಳುತ್ತದೆ. ಸಿಕ್ಕಿರುವ ಪುರಾವೆಗಳ ಪ್ರಕಾರ ಸಿಂಗಾಪುರದಲ್ಲಿ ಕೊನೆಯದಾಗಿ 14 ನೇ ಶತಮಾನದಲ್ಲಿ ಪರಮೇಶ್ವರ ಎಂಬ ರಾಜ ಆಡಳಿತ ನಡೆಸಿದ್ದ. ಈತ ಮಲೇಷ್ಯಾದ ಮಲಕ್ಕಾ ಎಂಬ ಪ್ರದೇಶವನ್ನು ಕಂಡು ಹಿಡಿದವನು. ಅದಾದ ಬಳಿಕ 1819–1942 ರವರೆಗೆ ಸಿಂಗಾಪುರ, ಬ್ರಿಟೀಷ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿತ್ತು. 1942–45 ವರೆಗೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನೀಯರಿಂದ ಆಕ್ರಮಿಸಲ್ಪಟ್ಟಿತ್ತು. ತದನಂತರ ಮತ್ತೆ ಬ್ರಿಟೀಷರ ಆಳ್ವಿಕೆಯಲ್ಲಿ ಮಲೇಷ್ಯಾದ ಜೊತೆಗೆ ವಿಲೀನಗೊಳ್ಳುವ ವ್ಯವಸ್ಥೆ ನಡೀತು.

ಸಿಂಗಾಪುರ ಹಾಗೂ ಮಲೇಷ್ಯಾದ ರಾಜಕೀಯ ವ್ಯವಸ್ಥೆಯಲ್ಲಿ ವಿವಾದಗಳು ಹಾಗೂ ಸಾಮಾಜಿಕ ಅಶಾಂತಿಗಳು ಉದ್ಭವಿಸಿದ ಹಿನ್ನಲೆಯಲ್ಲಿ ಸಿಂಗಾಪುರ ಆಗಸ್ಟ್ 9, 1965 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು.

ಸಿಂಗಾಪುರ್ ಮತ್ತು ತಮಿಳು ಜನರಿಗೆ ಸುದೀರ್ಘ ಇತಿಹಾಸವಿದೆ. ಈ ದ್ವೀಪದಲ್ಲಿ ವ್ಯಾಪಾರ ವಹಿವಾಟುಗಳ ಮೊದಲ ಒಪ್ಪಂದ ಕ್ರಿ.ಶ. 1025ರಲ್ಲಿ ತಮಿಳುನಾಡಿನ ಚೋಳ ಸಾಮ್ರಾಜ್ಯದೊಂದಿಗೆ ನಡೆದಿತ್ತು ಸಿಂಗಪುರ್  ಪದ ಸಂಸ್ಕೃತ ಅಥವಾ ತಮಿಳು ಭಾಷೆಯಿಂದ ಬಂದಿದೆ ಎಂದು ಹೇಳಲಾಗುತ್ತದೆ.

ಸಿಂಘ ಎಂದರೆ ಸಿಂಹ ಮತ್ತು ಪೋರ್ ಎಂದರೆ ನಗರ. ಹೀಗಾಗಿ, ಸಿಂಹದ ನಗರ. ತಮಿಳು ಚಕ್ರವರ್ತಿಗಳ ಆಳ್ವಿಕೆಯ ಕಾಲದಲ್ಲಿ ಮಧುರೈ ಸಮೀಪದ ಸಿಂಗಂಪುನರಿ ಎಂಬ ಹೆಸರು ಕೂಡ ಇದಕ್ಕೆ ಪುಷ್ಟಿನೀಡುತ್ತದೆ.

18 ನೇ ಶತಮಾನದಲ್ಲಿ ಸಿಂಗಾಪುರ್ ಮತ್ತು ಭಾರತ ಎರಡೂ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತ್ತು. ಭಾರತದಲ್ಲಿ ತನ್ನ ಆಡಳಿತವನ್ನು ಬೆಂಬಲಿಸಲು ಬ್ರಿಟನ್, ಸಿಂಗಪುರವನ್ನು ಏಷ್ಯಾದ ಪ್ರಧಾನ ವ್ಯಾಪಾರ ಬಂದರಾಗಿ ಬಳಸಿತು. ಇದು ಭಾರತದಿಂದ ವಿಶೇಷವಾಗಿ ದಕ್ಷಿಣದ ವ್ಯಾಪಾರಿಗಳು ಮತ್ತು ಕಾರ್ಮಿಕರ ಪ್ರಯಾಣಕ್ಕೆ ಬೆಂಬಲ ದೊರಕಿದಂತೆ ಮಾಡಿತು.

ಬ್ರಿಟಿಷರು ಒದಗಿಸಿದ ಈ ಅವಕಾಶದಿಂದಾಗಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಂಗಪುರ ದೇಶಕ್ಕೆ ವಲಸೆ  ಬರುವ ಹಾಗೆ ಆಯಿತು. ಈ ಮೂಲಕ ಸಾಂಸ್ಕೃತಿಕ ಗುರುತು ಇಲ್ಲಿ ಹುಟ್ಟಿಕೊಳ್ಳುವಂತೆ ಮಾಡಿತು. ತಮಿಳರು ಮತ್ತು ಸಿಂಗಾಪುರ್ ದೇಶಕ್ಕೆ ಸಾವಿರಕ್ಕೂ ಹೆಚ್ಚು ವರ್ಷಗಳ ಸಂಬಂಧವನ್ನು ಇಲ್ಲಿ ಕಾಣಬಹುದು. ಸಿಂಗಾಪುರದ ಜನಸಂಖ್ಯೆಯಲ್ಲಿ ತಮಿಳರದ್ದು 3ನೇ ಸ್ಥಾನ. ಇಲ್ಲಿನ ಸಂಪುಟದಲ್ಲಿ ತಮಿಳಿಗರಿಗೆ ಪ್ರಾಧಾನ್ಯತೆ ಕೊಡಲಾಗುತ್ತದೆ.

ಕೆಲ ಪ್ರಭಾವಗಳಿಂದಾಗಿ ವಿನಾಕಾರಣ ನಾನು, ತಮಿಳರ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದು ನಿಜ. ಆದರೆ ವಿದೇಶಿ ಜೀವನ, ಇಲ್ಲಿಯವರ ಜೊತೆಗಿನ ಒಡನಾಟ ನನ್ನಲ್ಲಿ  “ನಾವು ಭಾರತೀಯರು” ಅನ್ನೋ ಆಲೋಚನೆಯನ್ನೇ ತುಂಬುವಂತೆ ಮಾಡಿದೆ.

ಕೆಲವೊಂದು ವಿಚಾರಗಳು ಜೀವನದ ಕದ ತಟ್ಟುವ ಬಗೆಯೇ ವಿಶೇಷ. ಸನ್ನಿವೇಶ, ಸಂದರ್ಭಗಳು, ಘಟನೆಗಳು ಬೇರೆ ಬೇರೆ ಆದ್ರೂ ಏನೋ ಒಂದು ಸಂದೇಶ ಮನದಟ್ಟು ಮಾಡುವ ಪ್ರಯತ್ನ ನಡಿತಾನೇ ಇರುತ್ತದೆ. ಅಥವಾ ಅನುಭವಗಳನ್ನು ಮುಂದೊಡ್ಡಿ ಜೀವನದಲ್ಲಿ ಪಾಠ ಕಲಿಯುವಂತೆ ಮಾಡುತ್ತದೆ.  ಆದರೆ ಅವುಗಳನ್ನು ಅರ್ಥ ಮಾಡಿಕೊಳ್ಳುವ  ಹಾಗೂ  ಕಲಿತುಕೊಳ್ಳುವ ಮನಸ್ಸು , ಇಚ್ಛಾಶಕ್ತಿ ಇದ್ದಲ್ಲಿ ಎಲ್ಲಾ ದಾರಿಗಳು ಸುಗಮವಾಗುವುದರಲ್ಲಿ ಸಂಶಯವಿಲ್ಲ.

ಕೊನೆಯದಾಗಿ, ಬಹು ಸಮಯಗಳಿಂದ  “ಕೆಲಸ ಇಲ್ಲ ಪುರುಸೊತ್ತು ಇಲ್” ಅನ್ನುತ್ತಿದ್ದ ನಾನು , ಇದೀಗ  ಪುಸ್ತಕಗಳನ್ನ ಓದಬೇಕೆಂಬ ಹಳೇ ಫೈಲ್ ಮತ್ತೆ ಓಪನ್  ಮಾಡುವಂತೆ ಆಗಿದೆ. ಇಲ್ಲಿ ಲೈಬ್ರರೀಗಳಿಗೆ ಕೊರತೆ ಇಲ್ಲ. ಬೇಕಾದಷ್ಟಿವೆ ಓದೋದಾದ್ರೆ. ಚೈನೀಸ್, ಮಲಯ್, ತಮಿಳು , ಇಂಗ್ಲೀಷ್ … ಇವುಗಳ ಮಧ್ಯೆ ಹಂಗೆ ಏನಾದ್ರೂ ಕನ್ನಡ ಪುಸ್ತಕಗಳು ಸಿಕ್ಕಿದ್ರೆ  ನಿಜಕ್ಕೂ “ಪವಾಡ “. ಈ ಬಾರಿ ಶತಾಯಗತಾಯ ಪುಸ್ತಕ ಓದಿಲ್ಲ ಅಂದ್ರೆ, ಅಂಕಣ ಹೋಗಿ ನ್ಯೂಸ್ ಆಗೋದು ಗ್ಯಾರಂಟಿ…!!!

Leave a Reply