6 ಪೇಪರ್ ಗೆ ಇಳಿಸುವಾಗ ನನ್ನ ಕಣ್ಣಲ್ಲಿ ನೀರು..

ವಿಜಯೇಂದ್ರ 

ವೃತ್ತಪತ್ರಿಕೆಗಳನ್ನು ಓದುವ ಹುಚ್ಚು ನನಗೆ ಅಂಟಿಸಿದ್ದು ನನ್ನ ಸೋದರಮಾವ‌.

ನನಗೆ ತಿಳಿದಾಗಿನಿಂದ ಪತ್ರಿಕೆ ಓದುವುದನ್ನು ಹವ್ಯಾಸ ಮಾಡಿಕೊಂಡಿದ್ದೇನೆ. ಪ್ರೈಮರಿ ಶಾಲೆಯಲ್ಲಿದ್ದಾಗ ನಮ್ಮೂರಿನ ಅಂಚೆಕಚೇರಿಗೆ ಬರುತ್ತಿದ್ದ ಏಕಮಾತ್ರ ಪತ್ರಿಕೆ ಪ್ರಜಾವಾಣಿ.

ದಿನಂಪ್ರತಿ ಪೋಸ್ಟ್ ಬ್ಯಾಗ್ ಬರುವ ಮೊದಲೆ ನಾನು ಅಲ್ಲಿ ಹೋಗಿ ನಾನೇ ಪೊಸ್ಟ್ ಬ್ಯಾಗ್ ಓಪನ್ ಮಾಡಿ ಪತ್ರಿಕೆಯನ್ನು ಆಮೂಲಾಗ್ರ ಓದಿ ನಂತರವೇ ಅದನ್ನು ಮಾಲೀಕರ ಮನೆಗೆ ಖುದ್ದಾಗಿ ಒಯ್ದು ಕೊಟ್ಟುಬರುತ್ತಿದ್ದೆ.

ಪಿಯುಸಿ ಫೇಲಾಗಿ ಕೆಲದಿನಗಳ ಕಾಲ‌ ಮತ್ತೆ ಹಳ್ಳಿ ಸೇರಿದಾಗ ದಿನಾಲು ನಾಲ್ಕು ಕಿಲೋಮಿಟರಗಳು ನಡೆದು ಬಂಗಾರಪೇಟೆಯಲ್ಲಿ ದೊಡ್ಡಪ್ಪನ ಗೆಳೆಯ ಸುಬ್ಬರಾಯಪ್ಪನವರ ಹೂವಿನ ಅಂಗಡಿಯಲ್ಲಿ ಬರುತ್ತಿದ್ದ ಪತ್ರಿಕೆ ಓದಿ ಬರುತ್ತಿದ್ದೆ.

೧೯೬೭ ಮೇ ೨೭ ರಂದು ನೆಹರು ಸತ್ತಾಗ ಆ ಸಾವಿನ ಸುದ್ದಿ ಹೊತ್ತ ಪತ್ರಿಕೆಯನ್ನು ದೇವರ ಮಂದಾಸನದಲ್ಲಿ ಇರಿಸಿ ಪೂಜಿಸಿದ್ದೆ.

ಬೆಂಗಳೂರಿಗೆ ವಲಸೆ ಬಂದಮೇಲೆ ಓದಿನ ವ್ಯಾಪ್ತಿ ಒಂದು ಪತ್ರಿಕೆಯಿಂದ ಹಲವು ಪತ್ರಿಕೆಗಳಿಗೆ ಹಿಗ್ಗಿತು. ಅದರೆ ಕಾಸು ಕೊಟ್ಟು ಓದದೆ ಅವೆನ್ಯೂ ರಸ್ತೆಯಲ್ಲಿ ನನ್ನ ಟೈಪಿಂಗ್ ಅಂಗಡಿಯ ಎದುರು ಇದ್ದ ಶೆಟ್ಟಿಯವರ ಅಂಗಡಿಯಲ್ಲಿ ಮಾರಲು ನೇತುಹಾಕಿದ್ದ ಪತ್ರಿಕೆಗಳನ್ನು ಒಂದೊಂದಾಗಿ ಬಿಡಿಸಿಕೊಂಡು ಒದಿ ಮುಗಿಸಿ ಹಿಂತಿರುಗಿಸುತ್ತಿದ್ದೆ. ಅಯ್ಯರ್ ಹೋಟೆಲಿನ ಅರ್ಧ ಲೊಟ ಕಾಫಿಯಷ್ಟೇ ಇದಕ್ಕೆ ಖರ್ಚಾಗುತ್ತಿತ್ತು.

೧೯೮೨ ರಲ್ಲಿ ನಾನು Times of Deccan  ಸೇರಿದ ನಂತರ ಸಂಪಾದಕರು (ಟಿಜೆಎಸ್ ಜಾರ್ಜ್) ಪ್ರತಿ ಪತ್ರಕರ್ತನೂ ಒಂದಕ್ಕಿಂತ ಹೆಚ್ಚು ಪತ್ರಿಕೆಗಳನ್ನು ಕಡ್ಡಾಯ ವಿಧಿಸಿ ನಮಗೆ ಮೂರು ಪತ್ರಿಕೆಗಳಿಗೆ ಚಂದಾ ಹಣವನ್ನು ಕಚೇರಿಯಿಂದಲೇ ಕೊಡಿಸುವ ವ್ಯವಸ್ಥೆ ಮಾಡಿದ್ದರು. ಕೆಲವರು ಸಹೋದ್ಯೋಗಿಗಳು ಸುಳ್ಳು ವೋಚರ್ ಗಳನ್ನು ನೀಡಿ ಹಣ ಪಡೆಯುತ್ತಿದ್ದರೂ ನಾನು ಮಾತ್ರ ಅಂದು ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಕನ್ನಡ- ಇಂಗ್ಲಿಷ್ ಪತ್ರಿಕೆ ಗಳನ್ನು ಓದಲು ನನ್ನ ಸ್ವಂತ ಹಣ ಖರ್ಚುಮಾಡುತ್ತಿದ್ದೆ.

ಪತ್ರಿಕಾ ವೃತ್ತಿ ತೊರೆದು ಸರಕಾರಿ  ಹುದ್ದೆಗೆ ಎಡತಾಕಿದಾಗಲೂ ನಾನು ಸಂಬಳ ಸಾರಿಗೆ ಸೌಲಭ್ಯಗಳನ್ನು ಪಡೆಯುವ ಕಡೆಗೆ ಗಮನ ನೀಡದೆ ನಾನು ಪತ್ರಿಕೆಗಳ ಚಂದಾ, ಮನೆಯಲ್ಲಿ ಹೊಂದಿದ್ದ ಪೋನ್ ವೆಚ್ಚ ಸರಕಾರವೇ ಭರಿಸಬೇಕು ಎಂಬ ಏಕಮಾತ್ರ ಕಂಡೀಷನ್ ಪೂರೈಕೆಗೆ ಆದ್ಯಗಮನ ನೀಡುತ್ತಿದ್ದೆ.

ಹೀಗಾಗಿ ಕಳೆದ ನಾಲ್ಕು ದಶಕಗಳಿಂದಲೂ ದಿನದ ಮೊದಲನೆಯ ಕೆಲಸ ಕನಿಷ್ಠ ಒಂದೂವರೆ  ಘಂಟೆ ಕಾಲ ಪತ್ರಿಕಾ ಪಠಣಕ್ಕಾಗಿ ವ್ಯಯಿಸುವುದು ಸಾಮಾನ್ಯ ರೂಡಿಯಾಗಿಬಿಟ್ಟಿದೆ.

ಕೇವಲ‌ ಓದುವುದು ಮಾತ್ರವಲ್ಲ ನನಗೆ ಬೇಕಾದ ವರದಿಗಳನ್ನು ಕತ್ತರಿಸಿ ಕಚೇರಿಗೆ ಕೊಂಡೊಯ್ದು ಜೆರಾಕ್ಸ್ ಮಾಡಿಸಿ ಒಂದು ಸೆಟ್ ಧಣಿಯ ಅವಗಾಹನೆಗೆ ಅರ್ಪಿಸಿ, ಪತ್ರಿಕಾ ತುಣುಕುಗಳನ್ನು ವಿಷಯವಾರು ವಿಂಗಡಿಸಿ ಮೊದಲೇ ಸಿದ್ದಪಡಿಸಿಟ್ಟ ಫೊಲ್ಡರ್ ಗಳಲ್ಲಿ ಇಡುತ್ತಿದ್ದೆ. ಇದರಿಂದಾಗಿ ವಿಷಯ ಸಂಗ್ರಹಣೆಯಲ್ಲಿ ನಾನು ನನ್ನ‌ಸಮಕಾಲೀನರಿಗಿಂತ ಮುಂದಿದ್ದೆ. ಇಂದಿನ ಇಂಟರ್ನೆಟ್ ಯುಗ ಬರುವ ಮೊದಲು ನನ್ನ ಕ್ಲಿಪ್ಪಿಂಗ್ ಸಂಗ್ರಹಕ್ಕೆ ಬಾರಿ ಬೆಲೆ ಇತ್ತು. ಹಳೆಯ ಮಾಹಿತಿಯನ್ನು ನಾನು ನನ್ನ ಓರಗೆಯ ಪತ್ರಕರ್ತರ ಜೊತೆ ನೂರಾರು ಬಾರಿ ಹಂಚಿಕೊಂಡಿದ್ದೇನೆ.

ಇತ್ತೀಚಿನ‌ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಅಗಿರುವ ಬೂಮ್ ನಿಂದಾಗಿ ನಾನು ದಿನಾಲು ಕನಿಷ್ಟ ೨೦-೨೪ ದಿನಪತ್ರಿಕೆಗಳನ್ನು ಓದುತ್ತಿದ್ದೆ. ೧೬ ಪತ್ರಿಕೆಗಳನ್ನು ಮನೆಯಲ್ಲಿ ಓದಿದರೆ ಉಳಿದ ಪತ್ರಿಕೆ ಗಳು ಕಚೇರಿಯಲ್ಲಿ ಓದಲು ಸಿಗುತ್ತಿದ್ದವು.

ಇದೀಗಷ್ಟೇ ನಾನು ನನ್ನ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದೇನೆ. ಆದರೆ ಇನ್ನು  ಮುಂದೆ ನನ್ನ ಮನೆಗೆ ಬರುವ ಪತ್ರಿಕೆಗಳಿಗೆ ನಾನೇ ಹಣ ಭರಿಸಬೇಕು. ಏಕೆಂದರೆ ಇನ್ನು ಮುಂದೆ ಸರ್ಕಾರದ ಖರ್ಚಿನಲ್ಲಿ ಪತ್ರಿಕೆಗಳನ್ನು ಓದುವಂತಿಲ್ಲ.

ಹೇಗಿದ್ದರೂ ಈಗ ಎಲ್ಲಾ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಉಚಿತವಾಗಿ ಒದುತ್ತೀರಲ್ಲ? ಮನೆಗೆ ತರಿಸುವ ಪತ್ತಿಕೆಗಳ ಹೊರೆಯನ್ನು (ಅದು ನಿಜಕ್ಕೂ ಒಂದು ಹೊರೆಯೇ ಸೈ. ಪತ್ರಿಕೆಗಳನ್ನು ಒಟ್ಟಿಗೆ ಸೇರಿಸಿ ಪ್ಲಾಸ್ಟಿಕ್ ದಾರದಲ್ಲಿ ಬಿಗಿದು – ಮಳೆಯ ದಿನಗಳಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಡೆಲಿವರಿ ಮಾಡುತ್ತಾರೆ) ಕಡಿಮೆ ಮಾಡಬಾರದೇ ಎಂದು ನನ್ನ ಪತ್ನಿ ಸಲಹೆ ಮಾಡಿದಳು.

ಏಕೆಂದರೆ ಅಂಗಾಂಗಹೀನಗೊಂಡ ಈ ಪತ್ರಿಕೆಗಳನ್ನು ರದ್ದಿ ಕಾಗದದವನೂ ಮೂಸಿ ನೋಡುವುದಿಲ್ಲ. ಅಂದರೆ ರದ್ದಿಯಾಗಲೂ ಅಯೋಗ್ಯವಾಗಿರುತ್ತದೆ. ಪ್ರತಿ ತಿಂಗಳು ಸಂಗ್ರಹವಾಗುವ, ಯಾವ ಹಳೇ ಪೇಪರ್ ಅಂಗಡಿಗಳು, ಗಾಡಿಯವನು ಸುಲಭವಾಗಿ ಕೊಳ್ಳಲು ಬಯಸದ ರದ್ದಿ ವಿಲೇವಾರಿಯ ಹೊಣೆ ಅವರದೆ ತಲೆಬೇನೆ.

ಕಡೆಗೂ ಅಳೆದು ಸುರಿದು ಪೇಪರ್ ಸಂತೋಷ್ ಗೆ ಮಾಮೂಲಿ ನೀಡುತ್ತಿದ್ದ ಪತ್ರಿಕೆಗಳನ್ನು ಕಡಿತ ಮಾಡಿ ಕೇವಲ ಆರು ಪೇಪರ್ ಗಳನ್ನು (ಮೂರು ಇಂಗ್ಲೀಷ್- ಮೂರು ಕನ್ನಡ) ಹಾಕುವಂತೆ ಹೇಳುತ್ತಿದ್ದಾಗ ಯಾಕೋ ನನ್ನ ಕಣ್ಣಲ್ಲಿ ನೀರು ಮಡುಗಟ್ಟಿ ನಿಂತಿತ್ತು.

2 comments

  1. ಚೆನ್ನಾಗಿದೆ…ಒಂದು ತಪ್ಪು ಬಹುಶಃ ಟೈಪಿಂಗ್ನಿಂದ ಆಗಿರಬಹುದು…ನೆಹರು ಗತಿಸಿದ್ದು ಮೇ ೨೭, ೧೯೬೪ರಂದು….
    – ಮ ಶ್ರೀ ಮುರಳಿ ಕೃಷ್ಣ

Leave a Reply