ಗೆ, ನಾಗಶ್ರೀ ಶ್ರೀರಕ್ಷಾ..

ನಾನು ತಪ್ಪದೇ ಆ ಒಂದು ಪದ್ಯ, ಕತೆ ಮತ್ತು ಈ ಲೇಖನ ಬರೆದದ್ದಕ್ಕೆ ಕ್ಷಮೆ ಕೇಳುತ್ತೇನೆ.

ಗೆ,
ನಾಗಶ್ರೀ ಶ್ರೀರಕ್ಷಾ

ಕಳೆದ ಮೂರು ದಿನಗಳಿಂದ ಅದು ಏನೇನೋ ನೆನಪುಗಳು ಒಂದರ ಹಿಂದೆ ಮತ್ತೊಂದರಂತೆ ಬೆನ್ನತ್ತಿ ಬರುತ್ತಲೇ ಇವೆ. ಆ ಯಾವ ನೆನಪುಗಳು ನನ್ನನ್ನು ನೆಮ್ಮದಿಯಾಗಿರಲು ಬಿಡುವಂತೆ ಕಾಣುತ್ತಿಲ್ಲ. ಆದಷ್ಟು ಆ ಎಲ್ಲಾ ನೆನಪುಗಳಿಂದ ತಪ್ಪಿಸಿಕೊಂಡು ಗಡಿಪಾರಾಗುವ ಉಮೇದೊಂದು ಒಳಗಿನಿಂದಲೇ ತಿದಿಯಂತೆ ಒತ್ತುತ್ತಲೇ ಇದೆ. ಆದರೆ ಪ್ರಯತ್ನದ ಒಂದಿಷ್ಟು ಮುಲಾಜನ್ನೂ ಕೂಡ ತೋರಿಸಲಾಗದ ನಾನು ಅಸಹಾಯಕ ಸ್ಥಿತಿಯನ್ನು ತಲುಪಿಬಿಟ್ಟಿದ್ದೇನೆ.

ಹಳೆಯ ನೆನಪುಗಳು ದಾಕ್ಷಿಣ್ಯವಿಲ್ಲದೇ ಕಿತ್ತು ತಿನ್ನುತ್ತಲೆ ಇವೆ. ಈ ನಡುರಾತ್ರಿಯಲ್ಲಿ ಏನಾದರೂ ಬರೆದು ಹಗುರಾಗಬಹುದು ಎನ್ನುವ ಆಲೋಚನೆ ಗಾಢವಾಗಿ ಬೆನ್ನಿಗಂಟಿಕೊಂಡಿದೆ ಎನ್ನುವುದನ್ನು ಮಾತ್ರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಏನಾದರೂ ಬರೆದು ಹಗುರಾದರೆ, ಮುಂದೆ ತೆವಳಿಕೊಂಡಾದರೂ ಸರಿಯೇ ಉಳಿದುಬಿಡಬಹುದು ಎನ್ನುವ ಹಸಿಯಾದ ನಂಬಿಕೆಯೊಂದು ಟಿಸಿಲೊಡೆಯುತ್ತಿದೆ. ಏನನ್ನೂ ಬರೆಯದೆ ಈ ರಾತ್ರಿ ಸರಿದು ಹೋದರೆ, ಖಂಡಿತವಾಗಿಯೂ ನಾನು ಇದೇ ರಾತ್ರಿಯೊಳಗೆ ಸತ್ತುಹೋಗಬಹದು. ಬರೆಯದೇ ಬದುಕುವುದಾದರೂ ಹೇಗೆ?

ನನಗಿನ್ನೂ ನೆನಪಿದೆ..

ಮೈಸೂರಿನ ರಾಮಸ್ವಾಮಿ ಸರ್ಕಲ್ ಹತ್ತಿರವಿರುವ ಸ್ಟೂಡೆಂಡ್ ಫೆಡರೇಷನ್ ಆಫ್ ಇಂಡಿಯಾದ ಕಚೇರಿಯಿಂದ ಆಗಷ್ಟೇ ಹೊರಗೆ ಬಂದು ನಿಂತಿದ್ದೆ. ಆಫೀಸ್‍ನ ಒಳಗಿದ್ದ ಸ್ಟಾಲಿನ್, ಲೆನಿನ್, ಮಾರ್ಕ್ಸ್, ಎಂಗೆಲ್ಸ್ ಪುಸ್ತಕಗಳು ಅದೆಷ್ಟು ಸೆಳೆದು ನಿಲ್ಲಿಸಿಬಿಟ್ಟಿದ್ದವು ಎಂದರೆ ಬರೀ ಸಾಹಿತ್ಯವನ್ನು ಮಾತ್ರ ಓದಬೇಕು ಎಂದುಕೊಂಡಿದ್ದ ನನಗೆ ಅದೊಂದು ಕಡು ಪಾಪದಂತೆ ಕಂಡುಬಿಟ್ಟಿತ್ತು. ಆವತ್ತು ಅದು ಯಾರೋ ಒಂದಿಷ್ಟು ಜನ ನನ್ನನ್ನು ಎಸ್‍ಎಫ್‍ಐ ಕಚೇರಿಗೆ ಕರೆದುಕೊಂಡು ಹೋದರು. ಅದಾಗಲೇ ಒಂದಿಷ್ಟು ಹುಡುಗ ಹುಡಗಿಯರು ನಿರಾಶ್ರಿತರ ಬಿಡಾರದಂತೆ ಕಾಣುತ್ತಿದ್ದ ರೂಮಿನೊಳಗೆ ಸೇರಿಕೊಂಡು ಗದ್ದಲವೆಬ್ಬಿಸುತ್ತಿದ್ದರು. ಗೋಡೆಯ ಒಂದು ಮೂಲೆಯಲ್ಲಿ ತಣ್ಣಗೆ ಉರಿಯುತ್ತಿದ್ದ ಕೆಂಪು ಬಣ್ಣದ ಜೀರೋ ಕ್ಯಾಂಡಲ್ ಬಲ್ಪ್ ರೂಮಿನೊಳಗಿದ್ದವರ ತಣ್ಣನೆಯ ಆಕ್ರೋಶದ ಪ್ರತೀಕದಂತೆ ಗೋಚರಿಸಿಬಿಟ್ಟಿತ್ತು.

ಅಲ್ಲಿ ಅದಾಗಲೇ ಮಾತುಗಳು ಸಣ್ಣ ಹೆಜ್ಜೆಗಳಿಂದ ಆರಂಭವಾಗಿ ದೇಶದ ಹಿರಿಮೆಯ ಹೆಸರಿನಲ್ಲಿ ಪದಕ್ಕಾಗಿ ಓಡುವ ಒಲಿಂಪಿಕ್ಸ್ ಕ್ರೀಡಾಪಟುಗಳಂತೆ ಒಂದೇ ಸಮ ಓಡುತ್ತಿದ್ದವು. ಗಾಂಧಿ, ನೆಹರು, ಮುಸೋಲನಿ, ಹಿಟ್ಲರ್ ಎನ್ನುವ ಹೆಸರುಗಳು ಪದೇ ಪದೇ ಉಚ್ಚಾರವಾಗುತ್ತಿದ್ದವು. ಇದಕ್ಕಿದಂತೆ ಈಗ ನನ್ನ ಸರದಿ ಎನ್ನುವಂತೆ ಸಣ್ಣಗಿನ ಕೃಶಕಾಯದ ಮನುಷ್ಯರೊಬ್ಬರು ಗುಂಪಿನ ನಡುವಿನಿಂದಲೇ ಎದ್ದು ನಿಂತು ರಷ್ಯಾ ಹಾಗೂ ಫ್ರಾನ್ಸ್ ಕ್ರಾಂತಿಯ ಕುರಿತು ಒಂದು ತಾಸು ನಿರಂತರವಾಗಿ ಮಾತನಾಡಿದ್ದರು.

ಅವರು ಮೈಸೂರಿನ ಕುಕ್ಕರಹಳ್ಳಿಯವರಂತೆ, ಒಂದು ಕಾಲದಲ್ಲಿ ಟೀಚರ್ ಆಗಿದ್ದರು, ಅಸಮಾನತೆ ಜಾತಿ ಹೀಗೇ ಯಾವುದೋ ಕಾರಣಗಳಿಗೆ ಕೆಲಸ ತೊರೆದು ಈಗ ಕಮ್ಯುನಿಷ್ಟರಾಗಿದ್ದಾರೆ, ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ ಎಂದು ಅಲ್ಲಿದ್ದ ಒಂದಿಷ್ಟು ಹುಡುಗರು ಹೆಮ್ಮೆಯಿಂದ ಹೇಳಿಕೊಂಡರು. ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುತ್ತಿದ್ದ ನಾನು ಏನು ನಡೆಯುತ್ತಿದೆ ಎನ್ನುವದನ್ನು ಗ್ರಹಿಸುವುದಕ್ಕೂ ಹೆಣಗಾಡುತ್ತಿದ್ದೆ.

ಕುಕ್ಕರಹಳ್ಳಿಯ ಕಮ್ಯುನಿಷ್ಟರು ಮಾತಾಡುವಾಗ ಜಾತಿ, ಸಂಘರ್ಷ, ಬಡತನ, ಅನಕ್ಷರತೆ, ದೇಶ, ಗಡಿ ಬಿಕ್ಕಟ್ಟು ಹೀಗೆ ಎಲ್ಲವನ್ನೂ ಎಳೆದು ತಂದು ಮಾತಿನ ಮಧ್ಯೆ ನುಸುಳಿಬಿಡುತ್ತಿದ್ದರು. ಅವರ ಪ್ರತಿ ಮಾತಿಗೂ ಉದಾರಹಣೆಗಳು ಮಾತ್ರ ನೇರವಾಗಿ ಇತಿಹಾಸದ ಗೋರಿಗಳಿಂದಲೆ ಎದ್ದು ಬರುತ್ತಿದ್ದವು. ಅವರು ಹೇಳಿದ ಯಾವುದು ನನಗೆ ಹೊಸದಾಗಿರಲಿಲ್ಲ. ಆದರೆ ಅದರ ರೂಪಗಳು ಮಾತ್ರ ಮತ್ತೊಂದು ಬಗೆಯದಾಗಿದ್ದವೂ ಅಷ್ಟೇ. ಅವರು ಹೇಳಿದ ಎಲ್ಲವನ್ನೂ ಕೂಡ ನಾನು ನನ್ನದೇ ಮಿತಿಯೊಳಗೆ ಕಂಡು ಅನುಭವಿಸಿದವನಾಗಿದ್ದೆ. ಯಾಕೋ ಅವರ ಮಾತುಗಳನ್ನು ಪೂರ್ತಿಯಾಗಿ ಕೇಳುವ ವ್ಯವದಾನವಾಗಲಿಲ್ಲ, ಎದ್ದು ಹೊರಗೆ ಬಂದು ಖಾಲಿಯಾಗಿ ನಿಂತುಬಿಟ್ಟೆ.

ಹಾಗೇ ಒಬ್ಬನೇ ಖಾಲಿ ರಸ್ತೆಗಳನ್ನು ದಿಟ್ಟಿಸುತ್ತಿದ್ದಾಗ ಅದೇ ಮೊದಲು ನೀವು ಮೊದಲು ನನಗೆ ಫೋನ್ ಮಾಡಿದ್ದು.

‘ಹಲೋ ನಾನು, ನಾಗಶ್ರೀ ಶ್ರೀರಕ್ಷಾ ಅಂತ, ಇದು ಸಂದೀಪ್ ಈಶಾನ್ಯ ಅಲ್ವಾ?’ ಎಂದು ಕೇಳಿದ್ದಿರಿ, ನಿಮಗೆ ನೆನಪಿದೆಯಾ? ಅದು 2016ರ ಎಪ್ರಿಲ್ ತಿಂಗಳು. ಇದು ಯಾರು ಎನ್ನುವಂತೆ ಮುಜುಗರದಿಂದ ಮಾತು ಆರಂಭಿಸಿದ್ದರೂ ನನ್ನೊಳಗಿನ ಮುಜುಗರ ಬಹಳ ಸಮಯ ನಿಲ್ಲಲಿಲ್ಲ. ನವಕರ್ನಾಟಕ ಮಳಿಗೆಯ ಎದುರಿನ ರಸ್ತೆಯಲ್ಲಿದ್ದಾಗ ಆರಂಭವಾದ ನಮ್ಮಿಬ್ಬರ ನಡುವಿನ ಮಾತುಗಳು ಖಾಲಿಯಾಗುವ ಹೊತ್ತಿಗೆ ಮನೆಯನ್ನು ನಡೆದೇ ತಲುಪಿಬಿಟ್ಟಿದ್ದೆ.

ಆ ಮೊದಲ ಏಪ್ರಿಲ್ ನಂತರ ಮತ್ತೆ ಎರಡು ಎಪ್ರಿಲ್ ತಿಂಗಳುಗಳು ಎನ್ನುವಂತೆ ನಮ್ಮನ್ನು ತುಳಿದು ಹೊರಟುಹೋಗಿವೆ. ನಮ್ಮಿಬ್ಬರ ನಡುವೆ ಗೆಳೆತನ, ಪ್ರೀತಿ, ಅಕ್ಕರೆ, ಕಾಳಜಿ, ಸಿಟ್ಟು, ಹಠ, ಕೋಪ, ಕ್ಷಮೆ, ಸೆಡುವು, ಎಂದಾದರೂ ಸರಿ ಒಮ್ಮೆಯಾದರೂ ಎದುರು ನಿಂತು ಮಾತನಾಡಬೇಕು ಎನ್ನುವ ಭಾವನೆಗಳಿಂದ ಆರಂಭವಾಗಿ, ಬಿಡು ಮಾರಾಯ ಮೋರೆ ನೋಡಿ ಹಲ್ಲು ಕಿಸಿಯುವದರಲ್ಲಿ ಏನಿದೆ, ಹೀಗೆ ಬದುಕುನುದ್ದಕ್ಕೂ ಪರಿಚಿತ ಅಪರಿಚಿತರಾಗಿ ಉಳಿದುಬಿಡುವ ಎನ್ನುವಂತ ಉತ್ಕೃಷ್ಟ ಆಧ್ಯಾತ್ಮದಂತ ಮಾತುಗಳು ಸಾಕಷ್ಟು ಬಾರಿ ಬಂದು ಕಳೆದೂ ಹೋಗಿವೆ.

ಇಬ್ಬರು ಒಂದು ದಿನವೂ ಬಿಡದಂತೆ ಮಾತನಾಡಿದ್ದೇವೆ. ಇನ್ನು ಮಾತಿನ ಅಗತ್ಯವೇನು ಎನ್ನುವಂತೆ ತಿಂಗಳುಗಳ ಕಾಲ ಮೌನವಾಗಿ ಉಳಿದೂ ಹೋಗಿದ್ದೇವೆ. ಈಗ ಅದೆಲ್ಲವೂ ಒಂದರ ಹಿಂದೆ ಮತ್ತೊಂದಂತೆ ನೆನಪಾಗುತ್ತಿದೆ.

ನನ್ನ ಅದೆಷ್ಟು ಬದಲಾವಣೆಗೆ ಕಾರಣವಾದವರು ನೀವು! ನೆನೆದರೆ ಅಬ್ಬಾ! ಎನಿಸುತ್ತದೆ. ಒಣಗಲು ಹರವಿದ್ದ ಹಸಿ ಬಟ್ಟೆಯೊಂದು ಉರಿಬಿಸಿಲಿನಲ್ಲೂ ಹಸಿಯಾಗಿಯೇ ಉಳಿದುಹೋಗುವ ಹಠವನ್ನ ಪ್ರದರ್ಶಿಸಿದಂತೆ ಇಷ್ಟು ಕಾಲದ ನಂತರವೂ ನೆನಪುಗಳು ಹಸಿಯಾಗಿಯೇ ಉಳಿದುಹೋಗಿವೆ. ಹೇಳುವುದಕ್ಕೆ ನಾನು ಉಳಿಸಿಕೊಂಡಿರುವುದು ಏನೆಲ್ಲಾ ಇದೆ ಎನಿಸುತ್ತಿದೆ.

ಕೇಂದ್ರ ಸರ್ಕಾರದ ವಿರುದ್ದ ನಾವು ಒಂದಿಷ್ಟು ಹುಡುಗರು ಯಾವುದೋ ಕಾರಣಕ್ಕೆ ಮೈಸೂರಿನಲ್ಲಿ ಜಾಥಾ ಮಾಡಬೇಕು ಎಂದು ನಿರ್ಧರಿಸಿಕೊಂಡಿದ್ದೆವು. ಮೈಸೂರಿನ ಮಹಾರಾಜ ಹಾಸ್ಟೆಲ್‍ನಲ್ಲಿ ಇಡೀ ರಾತ್ರಿ ಕುಳಿತು ನಾವು ಹುಡುಗರು ಜಾಥಾದ ರೂಪುರೇಶೆಗಳನ್ನು ಸಿದ್ದಮಾಡಿಕೊಂಡಿದ್ದೆವು. ಜಾಥಾ ಹೊರಡುವಾಗ ಪತ್ರಿಕೆಯವರು ಅಥವಾ ಸಾರ್ವಜನಿಕರು ನಮ್ಮ ಪ್ರಶ್ನಿಸಿದರೆ ಅದಕ್ಕೆ ಸರಿಯಾಗಿ ಉತ್ತರಿಸಬೇಕು ಎನ್ನುವ ಕಾರಣಕ್ಕೆ ವಿಚಾರಗಳ ಕುರಿತು ಇನ್ನಷ್ಟು ಮತ್ತಷ್ಟು ಎನ್ನುವಂತೆ ಸ್ಪಷ್ಟ ಮಾಡಿಕೊಂಡಿದ್ದೆವು.

ನಮ್ಮದೇ ಮತ್ತೊಂದು ಗುಂಪು ಗೋಂದು ಕುದಿಸುತ್ತ, ಪೋಸ್ಟರ್‍ ಗಳನ್ನು ವಿಂಗಡಿಸುತ್ತ, ಬ್ಯಾನರ್‍ ಗಳನ್ನು ಅಣಿಗೊಳಿಸುತ್ತ, ಭಿತ್ತಿಪತ್ರಗಳನ್ನು ಕೈ ಬರವಣಿಗೆಯಲ್ಲಿ ಮಾಡುತ್ತ ನಿರತವಾಗಿತ್ತು. ನಾಳೆಯ ಜಾಥಾಕ್ಕೆ ಬೇಕಾದ ಎಲ್ಲವನ್ನೂ ತಯಾರಿ ಮಾಡಿಕೊಂಡಿದ್ದೆವು. ಕಾಲೇಜಿನಲ್ಲಿ ನಡೆಯುತ್ತಿದ್ದ ಇಂಟರ್‍ನಲ್ ಎಕ್ಸಾಂ ನನಗೆ ಬೇಡವಾಗಿತ್ತು. ಇಂಟರ್‍ನಲ್ ಅಷ್ಟೊಂದು ಮುಖ್ಯವಲ್ಲ, ಮೇನ್ಸ್ ಬರೆದರೆ ಸಾಕು ಎಂದು ಒಂದಿಷ್ಟು ಹುಡುಗರನ್ನು ಜಾಥಾಕ್ಕೆ ಸೇರಿಸಿಕೊಳ್ಳಲು ಯತ್ನಿಸಿದ್ದೆ.

ಮೈಸೂರಿನ ಒಂದಿಷ್ಟು ಬೀದಿಗಳ ಗೋಡೆಗಳಿಗೆ ಗೋಂದಿನಿಂದ ಪೋಸ್ಟರ್ ಬಳಿದು, ಬ್ಯಾನರ್‍ ಗಳನ್ನು ಮಾನಸ ಗಂಗೋತ್ರಿ, ಮಹಾರಾಜ ಕಾಲೇಜಿನ ಕ್ಯಾಂಪಸ್‍ನಲ್ಲಿ ಕಟ್ಟಿ ಬಂದಿದ್ದೂ ಆಗಿತ್ತು. ನಾಳೆ ಜಾಥಾ ಎಲ್ಲಿಂದ ಹೊರಟು ಎಲ್ಲಿಗೆ ಕೊನೆಯಾಗಬೇಕು, ಅಂತಿಮವಾಗಿ ಭಾಷಣ ಮಾಡುವವರು ಯಾರು. ಅವರು ಜನರಿಗೆ ಹೇಳಬೇಕಾದ ಮಾತುಗಳು ಯಾವುವು ಎನ್ನುವುದನ್ನು ನಿರ್ಧರಿಸಿಕೊಳ್ಳಬೇಕಿತ್ತು. ಆ ಗೊಂದಲದಲ್ಲಿ ನಿಮ್ಮೊಂದಿಗೆ ನಾನು ಎರಡು ದಿನಗಳು ಮಾತನಾಡಿರಲಿಲ್ಲ. ನೀವು ಒಂದಿಷ್ಟು ಸಾರಿ ಫೋನ್ ಮಾಡಿದ್ದರೂ ನಾನು ಆ ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ ಅದೊಂದು ರಾತ್ರಿ ಇನ್ನಿಲ್ಲದಂತೆ ನಿಮ್ಮೊಂದಿಗೆ ಮಾತನಾಡಬೇಕು ಎಂದು ಇದ್ದಕ್ಕಿಂದತೆ ಅನಿಸಿಹೋಗಿತ್ತು. ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ ನನಗೆ ಜಾಥಾದ ಕುರಿತೂ ನಿಮ್ಮೊಂದಿಗೆ ಹೇಳಬೇಕು ಎನಿಸಿತು.

ಅದೇ ದಿನ ರಾತ್ರಿ ನಾವು ಮಾಡುತ್ತಿರುವುದು ಅದೊಂದು ಬದಲಾವಣೆಯ ರೂಪಕ ಎನ್ನುವ ದಾಟಿಯಲ್ಲಿ ಒಂದು ವಾರದಿಂದ ಅವಿರತವಾಗಿ ಮಾಡಿದ್ದ ಎಲ್ಲವನ್ನೂ ಹೇಳಿಕೊಂಡೆ. ನೀವು ಮಾತ್ರ ನಿರ್ಲಿಪ್ತವಾಗಿ, ಇಂಟರ್‍ನಲ್ ಟೆಸ್ಟ್ ಇದೆ ಎಂದು ಹೇಳಿದ್ದೆಯಲ್ಲಾ, ಹೇಗಾಯ್ತು? ಎಂದಷ್ಟೇ ಕೇಳಿದಿರಿ. ನಾನು ಭಯದಿಂದ ಉತ್ತರಿಸಲಿಲ್ಲ. ಮರುಕ್ಷಣವೇ ನಿಮ್ಮ ಮನೆಯಲ್ಲಿ ಏನು ಅಡಿಗೆ? ಎಂದು ಪ್ರಶ್ನಿಸಿದಿರಿ. ವಾರದಿಂದ ಮನೆಯ ಮುಖವನ್ನೇ ನೋಡದ ನಾನು ಅಮ್ಮ ಮಾಡಿದ್ದ ಅಡಿಗೆಯ ಬಗ್ಗೆ ಹೇಳಲು ತಡವರಿಸಿದೆ. ನೀವು ಜೋರಾಗಿ ನಗೆಯಾಡಿದಿರಿ. ಮೊದಲು ನಿನ್ನ ಮನೆಯನ್ನು ಸರಿಯಾಗಿ ಗಮನಿಸು ಮಾರಾಯ, ನಿನ್ನ ಹೋರಾಟಗಳು ಬೀದಿಯಲ್ಲಿ ಅಲ್ಲ, ಮನೆಯಿಂದ ಆರಂಭಿಸು ಎಂದು ಹೇಳಿ ಮತ್ತೊಂದು ದಿಕ್ಕಿನ ಮಾತಿಗೆ ಹೊರಳಿಕೊಂಡಿರಿ. ಆದರೆ ನಿಮ್ಮ ಆವತ್ತಿನ ಮಾತುಗಳು ಉಳಿದುಹೋದವು. ಆ ಮಾತುಗಳು ಈಗಲೂ ನೆನಪಿದೆ. ಹಸಿ ನೆಲದ ಮೇಲೆ ಮೂಡಿದ ಹೆಜ್ಜೆಗಳು ನೆಲ ಒಣಗಿದ ಮೇಲೆ ಇನ್ನಷ್ಟು ಬಲವಾಗಿ ಉಳಿದುಹೋಗುವಂತೆ ನಿಮ್ಮ ವ್ಯಂಗ್ಯದ ನಗುವೂ ಉಳಿದುಹೋಗಿದೆ.

ಓದಿನ ಹುಚ್ಚು ಹತ್ತಿಸಿಕೊಂಡ ನಾನು, ರಾಕೇಶ ಮತ್ತು ಭೃಂಗೇಶನೊಂದಿಗೆ ನಾವು ಓದಿದ ಲೇಖಕರ ಮನೆ ಮತ್ತು ಅವರ ಕತೆಗಳಲ್ಲಿ ಬರುವ ಊರುಗಳನ್ನು ಹುಡುಕಿ ಹೊರಟಿದ್ದು ನಿಮ್ಮ ದೆಸೆಯಿಂದ ಅಲ್ಲವೇ? ಅನಂತಮೂರ್ತಿಯವರ ಕತೆಗಳಲ್ಲಿ ಬರುವ ಊರುಗಳನ್ನು ಶಿವಮೊಗ್ಗದ ಮ್ಯಾಪ್ ಹಿಡಿದು ನಾನು ಹುಡುಕುತ್ತಿದ್ದರೆ, ಭೃಂಗೇಶ ಪ್ಯಾಪಿಲಾನ್ ಬಗ್ಗೆ ರಸ್ತೆಯುದ್ದಕ್ಕೂ ಮಾತನಾಡುತ್ತಿದ್ದ. ರಾಕೇಶ ಮಾತ್ರ ರೂಪಶ್ರೀ ಕಲ್ಲಿಗನೂರು ಬರೆದ ಪದ್ಯಗಳನ್ನು ಓದುತ್ತ ನನಗೂ ನಿಮಗೂ ಸಂಬಂಧವೇ ಇಲ್ಲ ಎನ್ನುವಂತೆ ದಾರಿ ಸಾಗಿಸುತ್ತಿದ್ದ.

ಆಗುಂಬೆಯ ಕಸ್ತೂರಕ್ಕನ ಹೊಟೇಲನ್ನು ತೋರಿಸಿದ್ದು, ನಾವು ನೋಡುವ ಮೊದಲೇ ಮೂಡಿಗೆರೆಯ ತೇಜಸ್ವಿಯವರ ಮನೆಯ ಮುಂದಿನ ಗೇಟು ಹಳದಿ ಬಣ್ಣದ್ದು ಕಣ್ರೋ ಎಂದು ಹೇಳಿ ಗುರುತು ಮೂಡಿಸಿದ್ದು, ಕರ್ವಾಲೋ ಕಾದಂಬರಿಯ ಬಿರಿಯಾನಿ ಕರಿಯಪ್ಪನ ಮಗಳು ಈ ಊರಿನಲ್ಲಿ ಇನ್ನೂ ಇದ್ದಾಳಂತೆ ಎಂದು ನಮಗೆ ಯಾರೋ ಹೇಳಿದ್ದನ್ನೂ ನಿಮಗೆ ಹೇಳಿದಕ್ಕೆ ನಿಮಗೆ ಮರಳು ಮಾರಾಯ ಎಂದಿದ್ದ ಮಾತುಗಳು ಮೆಲ್ಲಗೆ ಹೆಗಲೇರಿ ಸದ್ದಿಲ್ಲದೇ ಕುಳಿತುಕೊಳ್ಳುತ್ತಿವೆ.

ಚಿಕ್ಕಮಗಳೂರಿನ ಕಾಫಿತೋಟ, ಉಡುಪಿಯ ಸಣ್ಣ ಮೌನದ ಕುರಿತು ಹೇಳಿದ್ದೂ ನೀವೇ. ಉಡುಪಿಗೆ ಹೋದರೆ ನಮ್ಮೂರಿಗೆ ಹೋಗಿ ಬನ್ನಿ ಎಂದು ಹೇಳಿದರೂ ನಾವು ನಿಮ್ಮ ಮಾತನ್ನು ನಾಪಾಸು ಮಾಡುವ ಕಠಿಣ ಮೇಷ್ಟ್ರರಂತೆ ಅಷ್ಟೇನೂ ಯೋಚಿಸದೆ ಸೀದಾ ಸಮುದ್ರದ ಎದುರು ಇಡೀ ಕಳೆದುಬಿಟ್ಟಿದ್ದೇವು.

ಕೆಲವೊಮ್ಮೆ ನಿಮ್ಮ ಮಾತನ್ನು ಅನುಮೋದಿಸಲಾಗದೆ, ನಾವು ಮೂವರೇ ತೀರ್ಮಾನಿಸಿಕೊಂಡು, ಯಾವುದೋ ದೇವಸ್ಥಾನಗಳ ಅಂಗಳ, ಮಸೀದಿ, ಶಿವಮೊಗ್ಗ, ದಕ್ಷಿಣ ಕನ್ನಡದ ರೈಲ್ವೆ ಸ್ಟೇಷನ್ನು ಮತ್ತೆ ಯಾರದೋ ಮನೆಗಳಲ್ಲಿ ಮಲಗಿದ್ದೆವು. ಮೈಸೂರಿಗೆ ಹೊರಡುವ ಹಿಂದಿನ ದಿನ ಉಪ್ಪಿನಂಗಡಿಯಲ್ಲಿ ತೀರಾ ಹೊಟ್ಟೆ ಹಸಿವಾಗಿತ್ತು. ಏನು ಮಾಡುವುದು ಎಂದು ದಾರಿ ತೋರದೆ ನಿಂತು ಕಂಗಾಲಾಗಿದ್ದ ನಮಗೆ ಹತ್ತಿರದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಬ್ರಾಹ್ಮಣರ ಮನೆಯೊಂದರ ಶ್ರಾದ್ಧ ಅಶರೀರವಾಣಿಯೊಂದರ ಕರೆಯಂತೆ ಕಂಡುಬಿಟ್ಟಿತ್ತು.

ನಾವು ಮೂವರು ಊಟ ಮುಗಿಸಿ ಮೈಸೂರು ಕಡೆಗೆ ಕೊಳೆತುಂಬಿ ಮಾಸಲು ಬಟ್ಟೆಗಳೊಂದಿಗೆ ಮುಖ ಮಾಡುವ ಮೊದಲು ನಿಮಗೆ ಹೇಳಿದಕ್ಕೆ, ಅನ್ನ ಎಂದರೆ ಕೇವಲ ಅನ್ನ ಎಂದಷ್ಟೇ ಹೇಳಿದ್ದಿರಿ. ನಾವು ಹುಂಬರಂತೆ ಊರೂರು ತಿರುಗುವಾಗ ನಮಗೆ ಅದೃಶ್ಯ ಗಡಿಯಾರದಂತೆ ನಮ್ಮ ಮುಂದಿನ ನಡೆಯನ್ನು ದೂರದ ಬೆಂಗಳೂರಿನಲ್ಲಿ ಕುಳಿತು ನಿರ್ಧರಿಸಿದ್ದು ನೀವೇ ಅಲ್ಲವೇ?

ಅದೊಂದು ಬಾರಿ ನೀವು ‘ಏಲಾವನ’ ಹೆಸರಿನಲ್ಲಿ ‘ಅವಧಿ’ಗೆ ಅಂಕಣ ಬರೆಯುತ್ತೇನೆ ಕಣೋ, ಓದಿ ಹೇಳಬೇಕು ಎಂದು ಹೇಳಿದಕ್ಕೆ ನಾನು ಖುಷಿಯಾಗಿದ್ದೆ. ಆ ನಂತರ ಪ್ರತಿವಾರ ನಾನು ಮತ್ತು ಭೃಂಗೇಶ ನಿಮ್ಮ ಅಂಕಣಗಳನ್ನು ಓದಲು ಕಾಯುತ್ತಿದ್ದೇವು. ಹೀಗೆ ಓದುವಾಗಲೇ ಅದು ನಡೆದು ಹೋಗಿತ್ತು.

ಅದೊಂದು ವಾರ ನಿಮ್ಮ ಕಾಲೇಜು ದಿನಗಳಲ್ಲಿ ಜೀವನ್‍ರಾಮ್ ಸುಳ್ಯ ಅವರೊಂದಿಗೆ ರಂಗಭೂಮಿಯಲ್ಲಿದ್ದ ದಿನಗಳ ಬಗ್ಗೆ ಬರೆದಿದ್ದಿರಿ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನಾಟಕದಲ್ಲಿ ನೀವು ಪಾತ್ರಧಾರಿಯಾಗಿದ್ದನ್ನು ಕುರಿತು ಹೇಳುತ್ತ ಮತ್ತೆ ಏನ್ನನ್ನೋ ಹೇಳುವ ಧಾಟಿಯ ಬರವಣಿಗೆಗೆ ಅದು. ಆ ಬರಹಕ್ಕೆ ಧಾರವಾಡದ ರಂಗಕರ್ಮಿಯೊಬ್ಬರು ಕುಹಕವಾಡಿ ಜಗಳ ಮಾಡಿದ್ದರು. ನಾನು ನಿಮಗೆ ತಿಳಿಯದಂತೆ ಅವರೊಂದಿಗೆ ಫೇಸ್‍ಬುಕ್‍ನಲ್ಲಿ ಜಗಳವಾಡಿದ್ದೆ. ಆದರೆ ಆ ಕುರಿತು ನಾನು ನಿಮ್ಮೊಂದಿಗೆ ಹೇಳಿಕೊಂಡಿರಲಿಲ್ಲ. ನೀವಾಗೇ ಅವರ ಬಗ್ಗೆ ಕೇಳಿದಕ್ಕೆ ನಿಮ್ಮಿಂದ ಯಾವ ಉತ್ಪ್ರೇಕ್ಷೆಯನ್ನೂ ಬಯಸದ ನಾನು, ಇಲ್ಲಾ ಅವರೊಂದಿಗೆ ನಾನು ಜಗಳ ಮಾಡಿಲ್ಲ ಎನ್ನುವ ಅದೊಂದು ಸುಳ್ಳನ್ನು ಅನಿವಾರ್ಯವಾಗಿ ಹೇಳಬೇಕಾಯ್ತು. ಬಹುಶಃ ಅದು ನಮ್ಮಿಬ್ಬರ ನಡುವಿನ ಮೊದಲ ಕಂದಕಕ್ಕೆ ದಾರಿ ಎನಿಸುತ್ತದೆ. ಆ ಸುಳ್ಳಿನ ನಂತರ ನೀವು ನನ್ನೊಂದಿಗೆ ಮೊದಲಿನಷ್ಟು ಅಕ್ಕರೆಯಿಂದ ಮಾತನಾಡಲಿಲ್ಲ.

ಮೊದಲು ಈ ಪುಸ್ತಕಗಳನ್ನು ಬಿಡು ಮಾರಾಯ, ಬದುಕುವುದನ್ನೇ ಕಲಿತಿಲ್ಲ ನೀನು, ಅನುಭವ ಇರುವುದು ಮುಖ್ಯ ಬರೆಯುವವನಿಗೆ, ಮೊದಲು ಕೆಲಸ, ಊಟ, ನಿದ್ರೆ ಆ ನಂತರ ನಿನ್ನ ಹೋರಾಟಗಳು ಎನ್ನುವ ನಿಮ್ಮ ನಿತ್ಯದ ಪರಿಪಾಠ ಮುಂದುವರೆದಿತ್ತು. ದಿನದ ಮಾತುಕತೆಗಳು ಮೊದಲಿನಷ್ಟು ಗಾಢವಾಗಿರಲಿಲ್ಲ. ಗೋಡೆಗೆ ಬಳಿದ ಬಣ್ಣಗಳು ಕಾಲಕ್ಕೆ ಒಳಗಾಗಿ ಪಕಳೆಗಳಾಗುವಂತೆ ಬಿಡಿಸಿಕೊಳ್ಳುತ್ತಿತ್ತು. ಆವತ್ತು ನಾನು ಅದೊಂದು ಸುಳ್ಳು ಹೇಳುವುದಕ್ಕೆ ಕಾರಣ ಇಷ್ಟೇ, ನೀವು ಅವರನ್ನ ಮತ್ತೆ ಮಾತನಾಡಿಸಿ ರಗಳೆ ಮಾಡಿಕೊಳ್ಳಬಹುದು ಎನ್ನುವ ಆತಂಕವಿತ್ತು ನನಗೆ. ಸುಳ್ಳು ಹೇಳುವ ಯಾವ ಉದ್ದೇಶವೂ ಇರಲಿಲ್ಲ. ಈಗಲೂ ನನಗೆ ಸುಳ್ಳು ಹೇಳುವುದು ಸಲೀಸಲ್ಲ.

ಮತ್ತೊಂದನ್ನು ಹೇಳಿಬಿಡುತ್ತೇನೆ. ನಾನು ಬೆಂಗಳೂರಿಗೆ ಬಂದ ಹೊಸದು. ನಾವಿಬ್ಬರು ಮಾತುಕತೆಗಳನ್ನು ನಿಲ್ಲಿಸಿಬಿಟ್ಟಿದ್ದೆವು. ಜೆ,ಪಿ ನಗರದ ಪಿಜಿಯಲ್ಲಿ ಉಳಿದುಕೊಂಡಿದ್ದ ನನಗೆ ಅದೊಂದು ಮಧ್ಯಾಹ್ನ ಏನಾದರೂ ಬರೆಯಬೇಕು ಎಂದು ಬಾಧಿಸಿತು. ಲ್ಯಾಪ್ ಹಿಡಿದು ಬರೆಯುತ್ತ ಹೋದೆ. ಅದು ಕೇವಲ ಮಾತುಗಳಾಗಿ, ಲೇಖನವಾಗಿ ಕಡೆಗೆ ಕತೆಯಾಗಿತ್ತು. ಆಗಲೇ ನಾನು ಬರೆದ ಕತೆಯಲ್ಲಿ ಬರುವ ಅದೊಂದು ಪಾತ್ರ ನಿಮ್ಮನ್ನೆ ಹೋಲುತ್ತಿದೆ ಎಂದು ಜೋರು ದನಿಯಲ್ಲಿ ನನ್ನೊಂದಿಗೆ ಸದ್ದು ಮಾಡಿಬಿಟ್ಟಿದ್ದಿರಿ ನೀವು. ಕೇವಲ ಶಾಂತ ಸ್ವಭಾವ ನಿಮ್ಮ ಮಾತುಗಳನ್ನು ಮಾತ್ರ ಕೇಳಿದ್ದ ನನಗೆ ನಿಮ್ಮ ಜೋರು ದನಿಯ ಲಯವನ್ನ ಹಿಡಿಯಲು ಆಗಲಿಲ್ಲ. ಸುಮ್ಮನೇ ಮೌನವಾಗಿಬಿಟ್ಟೆ. ನಿಮ್ಮ ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ಯಾಕೋ ಬರೆಯುವುದು ಓದುವುದು ಅನಗತ್ಯ ಎನಿಸಿತು. ಬರೆದ ಕತೆಯನ್ನು ನಾನೇ ಓದಿದೆ. ತಿದ್ದಬೇಕು ಎನಿಸಲಿಲ್ಲ. ಕತೆ ಹಾಗೇ ಉಳಿದುಹೋದಂತೆ ನೀವು ದೂರವೇ ಉಳಿದುಹೋದಿರಿ.

ಇತ್ತೀಚಿಗೆ ಅದೊಂದು ಸಂಕಟದಿಂದ ಹೊರಗೆ ಬರಲು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಕಾಡಿನಲ್ಲಿ ಕುಳಿತಿದ್ದೆ. ಸುತ್ತಲೂ ಬೌದ್ಧ ಸನ್ಯಾಸಿಗಳು ಅಚ್ಚ ಬಿಳಿಯ ತೊಡುಗೆಗಳಿಂದ ಮುಚ್ಚಿ ಹೋಗಿದ್ದರು. ಇಡೀ ವಾರ ಒಂದೇ ಒಂದು ಮಾತನ್ನೂ ಆಡದೇ ಕೇವಲ ಹಣ್ಣು ತರಕಾರಿ ತಿನ್ನುತ್ತ ಬಳಲಿದ್ದೆ. ಬದುಕನ್ನು ದೋಸೆ ತಿರುವಿದಂತೆ ಮತ್ತೊಂದು ಮಗ್ಗುಲಿಗೆ ತಿರುಗಿಸಿಕೊಳ್ಳುವ ಪ್ರಯತ್ನದಲ್ಲಿದ್ದೆ. ಬಹುಶಃ ನೀವು ನನ್ನೊಂದಿಗೆ ಮೊದಲಿನಂತೆ ಈಗಲೂ ಉಳಿದುಹೋಗಿದ್ದರೆ ನಾನು ಆ ಕಾಡಿನಲ್ಲಿ ಇಡೀ ವಾರ ಹಸಿವಿನಿಂದ ಇರಬೇಕಾಗಿರಲಿಲ್ಲ ಎನಿಸುತ್ತದೆ. ನಿಮ್ಮ ಮಾತುಗಳು ನನ್ನನ್ನು ಅದೊಂದು ನಿರ್ಧಿಷ್ಟ ರೇಖೆಯವರೆಗೆ ತಂದು ನಿಲ್ಲಿಸಿ ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳುವಂತೆ ಮಾಡುವ ಚೈತನ್ಯವನ್ನ ಉಳಿಸಿಕೊಂಡಿದ್ದವು ಅಥವಾ ನಿಮ್ಮ ಮೇಲೆ ನನಗೆ ಅದೊಂದು ಪ್ರಾಮಾಣಿಕ ಭರವಸೆ ಇತ್ತು.

ಹೀಗೆ ಅದು ಯಾವುದೋ ನಿರ್ವಾತ ಘಳಿಗೆಯಲ್ಲಿ ಜತೆಯಾಗಿ ನಿಂತು, ಕಿವಿ ಹಿಂಡಿದ ನೀವು ಇದ್ದಕ್ಕಿಂತದಂತೆ ಸಾವಿನ ಕೈ ಹಿಡಿದು ಅವರಸದಲ್ಲಿ ಎದ್ದು ಹೋಗಿದ್ದು ನನಗೇಕೋ ಸರಿ ಕಾಣಲಿಲ್ಲ. ಬೆಂಗಳೂರಿಗೆ ಬಾ ಮಾರಾಯ ಒಮ್ಮೆ ಸಿಗುವ ಎಂದಿದ್ದ ನೀವು ನಾನು ಇಲ್ಲಿಗೆ ಬಂದು ಎರಡು ವರ್ಷವಾದರೂ ಒಮ್ಮೆಯೂ ಕಾಣಲೇ ಇಲ್ಲ. ಅಷ್ಟೊಂದು ಸಿಟ್ಟಿನ ನೀವು ಕಳೆದ ಮೂರು ತಿಂಗಳಿನ ಹಿಂದೆ ಫೋನ್ ಮಾಡಿದಾಗ ಮಾತ್ರ ಬದುಕಿನಲ್ಲಿ ಅನುಭವಿಸಲು ಏನೊಂದು ಉಳಿದಿಲ್ಲ ಎನ್ನುವ ಸಂತನಂತೆ ಮಾತನಾಡಿದ್ದನ್ನು ನೆನಪಿಸಿಕೊಂಡು ಜೋರು ಅಳು ಬಂತು. ಈಗ ಈ ನಡುರಾತ್ರಿ ಏನೇನೋ ಬರೆಯುತ್ತ ಮತ್ತೂ ಅಳುತ್ತಿದ್ದೇನೆ.

ಈಗಲೂ ಮೊದಲ ದಿನದಂತೆ, ಹಲೋ ನಾನು ನಾಗಶ್ರೀ ಶ್ರೀರಕ್ಷಾ ಅಂತ, ಸಂದೀಪ್ ಈಶಾನ್ಯ ಅಲ್ವಾ? ಎಂದು ಕೇಳುವ ದನಿಯನ್ನು ಕೇಳಬೇಕು ಎನಿಸುತ್ತಿದೆ. ಆದರೆ ಕೊರಳಿನಿಂದ ಹೊರಡುವ ಗಾಳಿಗೆ ಸದ್ದಿನ ಪೋಷಾಕು ತೊಡಿಸುವ ನಿಮ್ಮ ದೇಹ ಬೆಂಕಿಗೆ ಆಹುತಿಯಾಗಿದೆ ಎರಡು ರಾತ್ರಿಗಳೇ ಕಳೆದುಹೋಗಿವೆ. ತುಂಬು ತುರುಬಿನ ಸದಾ ಕಿಚಾಯಿಸುವ, ಸಿಟ್ಟಾಗುವ, ಈಗಲ್ಲಾ ಕಣೋ ಬದುಕೋದು ಎಂದು ಹೇಳುವ ನೀವು ನನಗೆ ಸುಳ್ಳು ಹೇಳಿದ್ದೀರಿ ನೆನಪಿರಲಿ. ನೀವು ಮೊದಲಿನಂತೆ ಆರಾಮ್ ಇಲ್ಲಾ ಎನಿಸುತ್ತದೆ ಎಂದಿದ್ದಕ್ಕೆ, ಹಾಗೇನೂ ಇಲ್ಲಾ ಮಾರಾಯ ಸಣ್ಣ ಜ್ವರ ಅಷ್ಟೇ ಎಂದು ನನ್ನನ್ನು ಸಮಾಧಾನ ಮಾಡಿದ್ದೀರಿ.

ಎಲ್ಲವನ್ನೂ ಬಲ್ಲವರಂತೆ ಮಾತನಾಡುತ್ತಿದ್ದ ನೀವು ನಿಮ್ಮ ಪದ್ಯಗಳ ಪುಸ್ತಕ ಪ್ರಕಟಿಸಿದಾಗ ಮತ್ತೆ ಫೋನ್‍ನಲ್ಲಿ ಮಾತನಾಡಿದ್ದೇ ಕಡೆಯಾಯ್ತು. ಲೋ ಹುಡುಗ ನಿನಗೆ ನಾನೇ ಪುಸ್ತಕ ತಲುಪಿಸುತ್ತೇನೆ ಎಂದು ಹೇಳಿದ್ದ ಮಾತನ್ನ ನೀವು ಉಳಿಸಿಕೊಂಡಿಲ್ಲ. ನೀವು ಕಳುಹಿಸಿದ ಪುಸ್ತಕ ನನ್ನನ್ನು ಇಂದಿಗೂ ತಲುಪಿಲ್ಲ. ಆದರೆ ನನ್ನ ತಕರಾರು ಇರುವುದು ಅದಕ್ಕಲ್ಲಾ. ಕಡೆಯದಾಗಿ ನೀವು ನನ್ನ ಸಮಾಧಾನಕ್ಕೆಂದು ಹೇಳಿದ ಸುಳ್ಳು ಮತ್ತು ನಿಮ್ಮ ಪುಸ್ತಕದಲ್ಲಿ ನೀವು ಬರೆದಿರುವ ನಿಮ್ಮದೇ ಮಾತುಗಳ ಬಗ್ಗೆ.

ಯಾರೋ ನನ್ನ ಗಲ್ಲ ಹಿಡಿದು ಈ ನಿಜಗಳನೆಲ್ಲಾ ಅರಹುತ್ತಿದ್ದಾರೆ. ಬದುಕಲು ಬೇಕಾಗಿರುವ ಭ್ರಮೆಗಳೆಲ್ಲಾ ನನ್ನನ್ನು ಸೋಲಿಸಿ ಒಣಗಿಸುತ್ತಿವೆ. ನನ್ನನ್ನೂ ಕೇಳದೆಯೇ ಒಂದು ದಿನ ಇಲ್ಲಿಂದ ಮೆತ್ತಗೆ ಕಳುಹಿಸುವ ಹುನ್ನಾರದಲ್ಲಿಯೂ ಇರುವಂತಿದೆ.

ಯಾರೋ ಗಡುವು ನೀಡುತ್ತಿರುವಂತೆ ಎತ್ತರದಲ್ಲಿ ಕುಳಿತಿದ್ದಾರೆ. ನಾನು ತಳದಲ್ಲಿ ನನ್ನಷ್ಟಕ್ಕೆ ಸುಮ್ಮನೇ ವಿಸ್ತರಿಸಿಕೊಳ್ಳುತ್ತಿದ್ದೇನೆ.

ಅದೊಂದು ಪಾರಿವಾಳ ಇಷ್ಟವಾಗಿತ್ತು. ಇಲ್ಲೇ ಇರು ಹೋಗಬೇಡಾ ಎಂದರೆ ರಪ್ಪನೆ ಹಾರಿ ಹೋಗುತ್ತಿತ್ತು. ಇದು ಸತ್ತು ಹೋದರೆ ಎನು ಮಾಡುವುದು ಎಂದು ಗಾಬರಿಯಾಗಿ ಅದನ್ನು ಕೈಯಿಂದ ಹಾರಿ ಹೋಗು, ಬರಬೇಡ ಎನ್ನುತ್ತಿದ್ದೆ. ಒಂದು ದಿನ ಹೀಗೆ ಹೋದ ಹಕ್ಕಿ ಮರಳಿ ಬರಲಿಲ್ಲ. ನಾನು ಅಳುತ್ತಿದ್ದೆ, ಕುಸಿಯುತ್ತಿದ್ದೆ. ಕೊನೆಗೆ ಒಂದು ದಿನ, ಪರವಾಗಿಲ್ಲ ಅದು ನನ್ನ ಕಣ್ಣಮುಂದೆ ಸಾಯಲಿಲ್ಲವಲ್ಲಾ ಎಂದು ಸುಮ್ಮನಾಗಿದ್ದೆ.

ನಿಮ್ಮನ್ನು ಸೋಲಿಸುವ ಹುನ್ನಾರದಲ್ಲಿ ಕುಳಿತಿದ್ದವನು ಕಾದಿಟ್ಟುಕೊಳ್ಳದ ತಾಳ್ಮೆಗೆಟ್ಟ ಅವನ ಮೇಲೆ ಸಿಟ್ಟಾಗಬೇಕಷ್ಟೇ. ನಿಮ್ಮ ಎತ್ತರದಲ್ಲಿ ಕುಳಿತಿದ್ದವನು ಅಲ್ಲಿಯೇ ಉಳಿದುಹೋಗಿದ್ದರೆ ನೀವು ಇನ್ನಷ್ಟು ಬದುಕನ್ನು ವಿಸ್ತರಿಸಿಕೊಳ್ಳುವ ಅವಕಾಶವಿರುತ್ತಿತ್ತು. ಆದರೆ ನೀವು ಬಿಡುಗಡೆಗೊಳಿಸಿದ ಪಾರಿವಾಳದಂತೆ ಸಾವನ್ನು ಜತೆಯಾಗಿಸಿಕೊಂಡು ಹಾರಿಹೋಗಿದಕ್ಕೆ ದೂರವಾಗಿದ್ದಾಗಲೇ ಕಳೆದುಹೋಗಿದ್ದಕ್ಕೆ ಸಮಾಧಾನವಾಗಬೇಕಾ ಅಥವಾ ಮುಂದೊಂದು ದಿನ ಬಂದು ನನ್ನ ನೆತ್ತಿಯನ್ನು ಸವರಬಹುದು ಎಂದು ಕಾದಿದ್ದ ನನಗೆ ನೀವು ಬರುವುದೇ ಇಲ್ಲಾ ಮರುಳು ಹುಡುಗ ಹೋಗು, ಯಾರನ್ನೂ ಕಾರಬೇಡ ಎಂದು ಅನಿರೀಕ್ಷಿತ ಸಂದೇಶ ರವಾನಿಸಿದಕ್ಕೆ ಸಿಟ್ಟಾಗಬೇಕಾ?

ಕೆಲವು ದಿನಗಳ ಹಿಂದೆ ನನ್ನ ರೂಮಿಗೆ ಬಂದಿದ್ದು ರಾಕೇಶ, ಕೇಳಿದರೆ ನಾನು ಕೊಡುವುದಿಲ್ಲ ಎಂದು ನನ್ನ ಕಪಾಟಿನಲ್ಲಿದ್ದ ನಿಮ್ಮ ಪುಸ್ತಕವನ್ನ ಕದ್ದು ತೆಗೆದುಕೊಂಡು ಹೋಗಿದ್ದ. ನಾನು ಅದೊಂದು ಸಾರಿ ನಿಮ್ಮ ನೆನಪಾದಾಗ ನಿಮ್ಮ ಪದ್ಯಗಳನ್ನು ಓದಬೇಕು ಎನಿಸಿ ಇಡೀ ರೂಮನ್ನು ಹುಚ್ಚನಂತೆ ಹುಡುಕಿದ್ದೆ, ಜತೆ ಇದ್ದ ಅಣ್ಣನೊಂದಿಗೆ ಸಿಡುಕಿದ್ದೆ. ಪುಸ್ತಕ ಮಾತ್ರ ಸಿಕ್ಕಿರಲಿಲ್ಲ. ನಿನ್ನೆ ಇದ್ದಕ್ಕಿಂತದಂತೆ ರಾಕೇಶನಿಗೆ ಫೋನ್ ಮಾಡಿ, ಲೋ ನಿನ್ನ ಹತ್ತಿರ ನಾಗಶ್ರೀ ಅವರ ಪುಸ್ತಕ ಇದ್ದರೆ ತಂದುಕೊಡು ಓದಿ ಕೊಡ್ತೀನಿ ಎಂದು ಕೇಳಿಕೊಂಡೆ. ಏನನ್ನೂ ಮಾತನಾಡz ಅವನು ಮಧ್ಯಾಹ್ನದ ಹೊತ್ತಿಗೆ ಪುಸ್ತಕವನ್ನ ನನ್ನ ಆಫೀಸ್ ಡೆಸ್ಕ್‍ನಲ್ಲಿ ಇರಿಸಿ ಹೊರಟುಹೋಗಿದ್ದ. ನೋಡಿದ ತಕ್ಷಣ ಸಿಟ್ಟು ಬಂತು. ಅರೇ ಇದು ನನ್ನ ಪುಸ್ತಕ ಅಲ್ಲವಾ ಎನಿಸಿತು. ಫೋನ್ ಮಾಡಿ ಅವನ ಮೇಲೆ ಕಿರುಚಬೇಕು ಎನಿಸಲಿಲ್ಲ. ಹೊಗಲಿ ಬಿಡು ಈಗಾಲಾದರೂ ಪುಸ್ತಕ ಸಿಕ್ಕಿತಲ್ಲಾ ಎಂದು ಸಮಾಧಾನವಾಯ್ತು.

ನಿಮ್ಮನ್ನು ಈಗ ಸಾವು ಕೂಡ ಸುಳಿವನ್ನೇ ಕೊಡದೆ ಹೊತ್ತು ಹೋಗಿದೆ. ಮುಂದೊಂದು ದಿನ ನಾನು ರೇಜಿಗೆಯಾಗಿ ನಿಮ್ಮನ್ನು ಕರೆದುಕೊಂಡು ಹೋದವನನ್ನು ದಯನೀಯವಾಗಿ ಕೇಳಿದರೆ ರಾಕೇಶ ಪುಸ್ತಕ ಮರಳಿಸಿದಂತೆ ನಿಮ್ಮನ್ನು ಮರಳಿಸಬಹುದಾ ಎಂದು ಆಲೋಚಿಸುತ್ತಿದ್ದೇನೆ. ಅವನು ನಿಮ್ಮನ್ನು ಮರಳಿಸದೇ ಹೋದರು ಸರಿಯೇ, ಮುಂದೊಂದು ದಿನ ನನಗೂ ಸಾವು ಎನ್ನುವುದು ಬಂದೇ ತಿರುತ್ತದೆ. ಆಗ ಅಚಾನಕ್ ಆಗಿ ಸ್ವರ್ಗದಲ್ಲೋ ನರಕದಲ್ಲೋ ಅಥವಾ ಮತ್ತೆಲ್ಲೋ ಭೇಟಿಯಾಗುವ ಅವಕಾಶ ದೊರೆತರೆ ಸಿಟ್ಟಾಗಬೇಡಿ. ಆಗ ಹೇಳುವುದಕ್ಕೆ ಉಳಿಸಿಕೊಂಡಿರುವ ಎಲ್ಲವನ್ನೂ ಹೇಳಿಬಿಡುತ್ತೇನೆ. ನಾನು ನಿಮ್ಮನ್ನು ಈಗಲೂ ಅದೇ ಧಾಟಿಯಲ್ಲಿ ಪ್ರೀತಿಸುತ್ತೇನೆ, ಹಿರಿಯರು ಎಂದು ಗೌರವಿಸುತ್ತೇನೆ. ಮತ್ತೆ ತಪ್ಪದೆ ಆವತ್ತು ಅದೊಂದು ಕತೆ, ಕವಿತೆ ಮತ್ತು ಈ ಲೇಖನ ಬರೆದದ್ದಕ್ಕೆ ತಪ್ಪದೇ ಕ್ಷಮೆ ಕೋರುತ್ತೇನೆ. ಕ್ಷಮಿಸಿಬಿಡಿ ಅಷ್ಟೇ.

ಅಕ್ಕರೆಯಿಂದ,

7 comments

  1. ಸಂದೀಪ… ನಿನ್ನ ಪದ್ಯದ ಹೊರತಾಗಿ ಓದಿದ ಮೊದಲ ಬರಹ,

  2. ಬಹಳ ಸಂಕಟಕ್ಕೀಡು ಮಾಡಿದ ಭಾವನೆಗಳು. ನಾಗಶ್ರೀ ಎಂಬ ನಕ್ಷತ್ರ ಹೀಗೆ ಕಣ್ಣೀರಾಗಿ ಮಿನುಗುತ್ತಿದೆ ಎಲ್ಲರೆದೆಯ ಬಾನಬಯಲಲಿ. ಅವರೊಂದಿಗೆ ಅಷ್ಟು ಕಾಲ ಒಡನಾಟ ಸಿಕ್ಕ ಧನ್ಯತೆ ನಿಮ್ಮದು.

Leave a Reply