ನಾನು ಮಾತ್ರ ಬೇಸ್ತು ಬಿದ್ದಿದ್ದೆ..

ವಿಜಯೇಂದ್ರ 

ಶೃಂಗೇರಿ ಮೂಲದ ಗಣೇಶ್ ರಾಜ್ ಎನ್ನುವವರು ಅಂದು ಕಾಂಗ್ರೇಸ್ ಪಕ್ಷದ ಓರ್ವ ಗಮನಾರ್ಹ ಕಾರ್ಯಕರ್ತರಾಗಿದ್ದರು‌. ನೆಹರೂ ಕುಟುಂಬಕ್ಕೆ ಸಾಮೀಪ್ಯ ಸಾಧಿಸಿದ್ದರು. ಸಂಜಯ್ ವಿಚಾರ ಮಂಚ ಹೆಸರಿನ ಸಂಘಟನೆಯ ರಾಜ್ಯ ಪ್ರವರ್ತಕರೂ ಅಗಿದ್ದರು.

ಗಾಂಧಿನಗರದಲ್ಲಿ ಅಂದಿನ ಐಬಿಹೆಚ್ ಪ್ರಕಾಶನದ ಎದುರು ಸುಸಜ್ಜಿತ ಕಚೇರಿ ಹೊಂದಿದ್ದ ಗಣೇಶ್ ರಾಜ್ ಹಲವಾರು ಪತ್ರಿಕೆಗಳನ್ನು ನಡೆಸುತ್ತಿದ್ದರು. ಹತ್ತಾರು ಕನ್ನಡ- ಇಂಗ್ಲೀಷ್ ಟೈಟಲ್‌ಗಳನ್ನು ಗುಡ್ಡೆಹಾಕಿಟ್ಟುಕೊಂಡಿದ್ದರು (ಈ ಟೈಟಲ್ ಗಳು ಅದರ ಹಿಂದಿದ್ದ ಅಂದಿನ ನ್ಯೂಸ್ ಪ್ರಿಂಟ್ ವ್ಯವಹಾರಗಳ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ)

ಇಂತಹ ಗಣೇಶ್ ರಾಜ್ ಗೆ ಬರಲಿರುವ AICC ಅಧಿವೇಶನ ಸಂದರ್ಭದಲ್ಲಿ ತಮ್ಮ ತುತ್ತೂರಿ ಊದಬಲ್ಲ ಇಂಗ್ಲೀಷ್ ಹೊತ್ತಗೆಯೊಂದರ  ಅವಶ್ಯಕತೆಯಾಯಿತು. ಗೆಳೆಯರೊಬ್ಬರು ನನ್ನನ್ನು ಅವರ ಬಳಿಗೆ ಕೊಂಡೊಯ್ದು ಡೀಲ್ ಕುದುರಿಸಿದರು.

ಸಂದರ್ಭಕ್ಕೆ ತಕ್ಕಂತೆ ಗಣೇಶ್ ರಾಜ್ ಅವರನ್ನು ಬಿಂಬಿಸುವ ಜೊತೆಗೆ ನೆಹರೂ ವಂಶದ ಕುಡಿಯೊಂದರ ರಾಜಕಾರಣ ಪ್ರವೇಶಕ್ಕೆ ಸೂಕ್ತ ವೇದಿಕೆ ನಿರ್ಮಿಸಿಕೊಡುವಂತಹ ಪತ್ರಿಕೆ ಸಿದ್ದಪಡಿಸುವುದು ನ‌ನ್ನ ಹೊಣೆಗಾರಿಕೆಯಾಗಿತ್ತು. ಈ ಕೆಲಸ ಮಾಡಿಕೊಡಲು ನನಗೆ ಅವರು ಕೊಡಲು ಒಪ್ಪಿಕೊಂಡ ಸಂಭಾವನೆಯ ಮೊತ್ತ ಆ ಕಾಲಕ್ಕೆ ಅತಿ ಹೆಚ್ಚೇ ಎನ್ನಿಸುವಂತಿತ್ತು.

ಕೆಲಸದ ಜವಾಬ್ದಾರಿ ವಹಿಸಿಕೊಂಡ ನನಗೆ ಅವರ ಕಚೇರಿಯಲ್ಲಿ ಒಂದು ಪ್ರತ್ಯೇಕ ಕ್ಯಾಬಿನ್ ನೀಡಲಾಯಿತು ಬೇಕು ಬೇಡಗಳಿಗೆ ಸ್ಪಂದಿಸಲು ಒಬ್ಬ ಸಹಾಯಕನ ನೇಮಕವಾಯಿತು.

ಆರಂಭದ ದಿನ ಬೆಳಗ್ಗೆ ಎಂಟು ಗಂಟೆಗೆ ಕಚೇರಿಗೆ ತೆರಳಿ ಸಂಜೆ ಐದರ ತನಕ ಕೆಲಸದಲ್ಲಿ ತೊಡಗಿ ನಂತರ ಪ್ರೆಸ್ ಕ್ಲಬ್ ಕಡೆಗೆ ಹೊರಡುವ ಮುನ್ನ ಕಚೇರಿಯಲ್ಲಿಯೇ ಇದ್ದ ಗಣೇಶ್ ರಾಜ್ ಅವರನ್ನು ನೊಡಲು ಅವರ ಚೇಂಬರ್ ಗೆ ಹೊರಟೆ. ಬನ್ನಿ ವಿಜಯೇಂದ್ರ ಟೀ ಕುಡಿಯಿರಿ ಎಂದು ಟೀ ಕುಡಿಸಿದರು.

ಪ್ರೆಸ್ ಕ್ಲಬ್ ಕಡೆಗೆ ಹೊರಟಿರೇನೊ ಖರ್ಚಿಗಿರಲಿ ಎನ್ನುತ್ತಾ ಮೇಜಿನ‌ಖಾನೆಯಿಂದ ಕೈಗೆ ಸಿಕ್ಕಷ್ಟು ನೋಟುಗಳನ್ನು ಎತ್ತಿ ನನ್ನ ಕೈಗಿಟ್ಟರು. ನಾನದನ್ನು ನಿರೀಕ್ಷೆ ಮಾಡಿರಲಿಲ್ಲ. ಅವರನ್ನು ವಂದಿಸಿದವನೆ ಸೀದಾ ಪ್ರಸ್ ಕ್ಲಬ್‌ಗೆ ಬಂದು ಮೊದಲ‌ ದಿನವೆ ನನ್ನ ಕೆಲಸ ಮೆಚ್ಚಿ ಬೋನಸ್ ನೀಡಿದ ಗಣೇಶ್ ರಾಜ್ ಅವರ ಹೃದಯವಂತಿಕೆಯನ್ನು ಎಲ್ಲರ ಮುಂದೆ ವಾಚಾಮಗೋಚರ ಹೊಗಳಿ  ಕಾರ್ಡ್ ರೂಮ್‌ ನ ಎಲ್ಲ ಗೆಳೆಯರಿಗೂ ಪಾನೀಯ ಪೂರೈಸಿದ ನಂತರವೂ ಮನೆಗೆ ಒಯ್ಯಲು ಒಂದಿಷ್ಟು ಹಣ ಉಳಿದಿತ್ತು.

ಇದೇ ಪ್ರಸಂಗಗಳು ಮರುದಿನವೂ, ಆನಂತರವೂ ಮರುಕಳಿಸಿತ್ತು. ಹೊರಡುವ ಸಂದರ್ಭದಲ್ಲಿ ಗಣೇಶರಾಜ್ ಕಚೇರಿಗೆ ಎಡತಾಕುವುದು ಅವರು ಟೀ ಕುಡಿಸಿ ಕೈ ತುಂಬಾ ಹಣ ನೀಡುವುದು. ನಾನು ಸೀದಾ ಪ್ರೆಸ್ ಕ್ಲಬ್‌ಗೆ ಹೋಗಿ ಅವರ ಈ ಬಕ್ಷೀಸನ್ನು ಅದರ ಹಿಂದಿನ ಅವರ ಉದಾತ್ತ ಮನಸ್ಸನ್ನು ಕ್ಲಬ್ ನಲ್ಲಿ ಗೆಳೆಯರ ಮುಂದೆ ಹೊಗಳುವುದು  ಕೊಟ್ಟ ಬಕ್ಷೀಸು ಖಾಲಿಯಾಗುವ ತನಕ ಗುಂಡು ಹಾಕಿ, ಹಾಕಿಸಿ ಮನೆಗೆ  ಹೋಗುವುದು.

ಕಡೆಗೊಂದು ದಿನ ಕೆಲಸ ಪೂರೈಸಿತು. ಸಂಧರ್ಭಕ್ಕೆ ತಕ್ಕಂತೆ, ಅವರ ಆಶಯಕ್ಕೆ ತಕ್ಕಂತೆ ಸಂಚಿಕೆ ಸಿದ್ದವಾಯಿತು. ಮೊದಲೇ ಮಾತನಾಡಿದ ಸಂಬಾವನೆಯನ್ನು ಕೇಳಿ ಪಡೆಯಲು ಗಣೇಶ್ ರಾಜ್ ಚೇಂಬರ್ ಗೆ ತೆರಳಿದೆ.

ಎಂದಿನಂತೆ ಟೀ ಆಯ್ತು. ಗಣೇಶ್ ರಾಜ್ ಅವರ ಕಾರ್ಯದರ್ಶಿಯನ್ನು ಕರೆದರು. “ಸೌಭಾಗ್ಯ ವಿಜಯೇಂದ್ರ ಅವರಿಗೆ ಇನ್ನೆಷ್ಟು ಹಣ ಕೊಡಬೇಕು ಲೆಕ್ಕ ನೋಡಿ ಹೇಳಮ್ಮ.‌”

ಅಕೆ ನನಗೆ ಕೊಡಲಾಗಿರುವ ಹಣದ ಒಂದು ದೊಡ್ಡ ಸ್ಲಿಪ್ ತಂದು ತೋರಿಸಿ, ಇನ್ನು ಇಷ್ಟು ಬಾಕಿ ಇದೆ ಎಂದರು. ಇವರು ಅಷ್ಟು ಪುಡಿಕೆ ನೋಟುಗಳನ್ನು ಎತ್ತಿ ನನ್ನ ಕೈಗಿಟ್ಟರು.

ಅವರು ದಿನಾಲು ನೀಡುತಿದ್ದ ಹಣ (ನಾನು ಬಕ್ಷೀಸು ಎಂದು ಬಾವಿಸಿ ದುಂದು ವೆಚ್ಚ ಮಾಡಿದ್ದ ಹಣ) ನನ್ನ ಸಂಭಾವನೆಯ ಭಾಗವಾಗಿತ್ತು.

ಎಲ್ಲವು ಸರಿಯಿತ್ತು.
ನಾನು ಮಾತ್ರ ಬೇಸ್ತು ಬಿದ್ದಿದ್ದೆ.

Leave a Reply