ಕಾರ್ಲ್ ಮಾರ್ಕ್ಸ್ ಬರೆದ ಪ್ರೇಮ ಕವಿತೆಗಳು

ಕಾರ್ಲ್  ಮಾರ್ಕ್ಸ್  ಬರೆದ ಕವನಗಳು  ಅತ್ಯಂತ ನಿಗೂಢ ಮತ್ತು ಯಾತನೆಯಿಂದ ಕೂಡಿದವು.

ಎಳೆಯ ವಯಸ್ಸಿನಲ್ಲಿ ಅವನು  ತನ್ನ ಹೆಂಡತಿ ಜೆನ್ನಿ ವಾನ್ ವೆಸ್ಟ್ ಫಾಲೆನ್ ಗೆ ಬರೆದ ಪ್ರೇಮ ಕವನಗಳು ಐದು ಸಂಪುಟಗಳಷ್ಟು.

ಆದರೂ ತಮ್ಮ ಇಳಿವಯಸ್ಸಿನಲ್ಲಿ ಅವುಗಳ ಬಗ್ಗೆ ಇಬ್ಬರೂ ಆಡಿಕೊಂಡು ನಗುತ್ತಿದ್ದರು ಎಂದು ಅವರ ಮಗಳು ಜೆನ್ನಿ ಎಲೆನಾರ್ಹೇಳಿಕೊಂಡಿದ್ದಾಳೆ. ಮಾರ್ಕ್ಸ್ ನ ಆತ್ಮಹತ್ಯೆಯ ಕವನಗಳು ಹೆಚ್ಚುಸಂಖ್ಯೆಯಲ್ಲಿವೆ.

ಮಾರ್ಕ್ಸ್ ಸತ್ತ ನಂತರ ನೂರಾ ಮೂವತ್ತು ವರ್ಷಗಳಲ್ಲಿ ಅವನ ಉಜ್ವಲ ಚಿಂತನೆಗಳನ್ನು ತಾರಾಮಾರಾ ಟೀಕಿಸಿ ಬೇಕಾದಷ್ಟು ಲೇಖನಗಳು ಪ್ರಕಟವಾಗಿವೆ. ಈ ಟೀಕೆಗಳಿಗೆಲ್ಲ ಹೆಚ್ಚಿನ ಮಟ್ಟಿಗೆ ಆಧಾರವಾ ಗಿ ಮಾರ್ಕ್ಸ್ ನ ಕವನದ ಸಾಲುಗಳನ್ನೇ  ಉಧೃತಗೊಳಿಸುವುದು ಕುತೂಹಲಕಾರಿ ಸಂಗತಿ.

ಮಾರ್ಕ್ಸ್ ಸೈತಾನನ ಅನುಯಾಯಿ ಎಂದು ಗುರುತಿಸಿ ಸೈತಾನನಿಗೆ ಆತ್ಮಹತ್ಯೆ ಪ್ರಿಯವಾದದು ಏಕೆಂದರೆ ಅದು ನಿಶ್ಚಿತವಾಗಿ ಆತ್ಮವನ್ನು ಖಂಡಿಸುತ್ತದೆ ಎಂದು ಹೇಳಲಾಗಿದೆ. ಮಾರ್ಕ್ಸ್ ಆತ್ಮಹತ್ಯೆಯ ಬಗ್ಗೆಯೇ ಒಂದು ಪುಸ್ತಕವನ್ನೂ ಸಹ ಬರೆದಿದ್ದಾನೆ.

ಕಾರ್ಲ್  ಮಾರ್ಕ್ಸ್ ನ ಕವನಗಳ ಅನುವಾದ ಇಲ್ಲಿವೆ.

ಪ್ರತಿಭಾ ನಂದಕುಮಾರ್

 

ಕಾವ್ಯ

ಸೃಷ್ಟಿಕರ್ತನದಂತಹ ಜ್ವಾಲೆಗಳು ಹರಿದು ಬಂದವು

ತೊರೆಯಂತೆ ಒಂದೊಮ್ಮೆ ನಿನ್ನೆದೆಯಿಂದ ನನ್ನೆಡೆಗೆ

ಪರಸ್ಪರ ಘಟ್ಟಿಸಿ ಚಿಮ್ಮಿದವು ಎತ್ತರೆತ್ತರಕ್ಕೆ

ನಾನವನ್ನು ನನ್ನೆದೆಯೊಳಗಿಟ್ಟು ಪೋಷಿಸಿದೆ

ಮೇಲೆ ನಿನ್ನಾಕೃತಿಯು ವಾಯುದೇವನ ಛಲದಂತೆ ಬೀಸಿತು

ಬಳಸಿ ಒಲವಿನ ರೆಕ್ಕೆಯನ್ನು ಕಾಪಿಟ್ಟುಕೊಂಡೆ ನನ್ನೊಳಗಿನ ಬೆಂಕಿ.

 

ಬೆಳಕು ಕಾಣಿಸಿತು ನನಗೆ ಸದ್ದು ಕೇಳಿಸಿತು

ಸ್ವರ್ಗ ದೂರದೂರಕ್ಕೂ ಬೀಸಿ ಗುಡಿಸಿತು

ಮೇಲೆದ್ದು ಮತ್ತೆ ಕುಸಿದು

ಮುಳುಗುತ್ತಾ ಮತ್ತೆ ಇನ್ನಷ್ಟು ಎತ್ತರಕ್ಕೆ ಚಿಮ್ಮುತ್ತಾ

ನಂತರ ಒಳಗಿನ ಅಲ್ಲೋಲ ಕಲ್ಲೋಲ ಶಾಂತವಾಗಿ

ನೋವು ಮತ್ತು ಹಿಗ್ಗು ಸಂಗೀತವಾಗಿ ಅಪ್ಪಿಕೊಂಡೆ ನಾನದನ್ನು.

 

ಮೃದುವಾದ ಆಕೃತಿಗಳನ್ನು ಬಾಚಿ ತಬ್ಬಿಕೊಂಡು

ಆತ್ಮ ಕಾದು ನಿಂತಿದೆ ಮಂತ್ರಗಳ ಸರಪಳಿಯಲ್ಲಿ ಬಂಧಿಯಾಗಿ

ಹೊರಟವು ನನ್ನಿಂದ ಪ್ರತೀಕಗಳು ತೇಲಿ

ನಿನ್ನ ಪ್ರೀತಿಯಿಂದ ಇನ್ನಷ್ಟು ಜ್ವಲಿ ಸಿ.

ಒಮ್ಮೆ ಚೇತನ ಮುಕ್ತಗೊಂಡಿತೆಂದರೆ ಪ್ ರೀತಿಯ ಅಂಗಗಳು

ಮತ್ತೆ ಮಿನುಗುತ್ತಿವೆ ಅವರ ದೇವರ ಎದೆಯಾಳದಲ್ಲಿ.

 

***

ಮೂಲ: ಕಾರ್ಲ್ ಮಾರ್ಕ್ಸ್ POETRY
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಕತ್ತಲ ಪ್ರೇಮ

ತಲ್ಲಣಗೊಂಡು ಭರಸೆಳೆದು ಅಪ್ಪಿಕೊಂಡ
ಗಾಢವಾಗಿ ಅವಳ ಕಣ್ಣುಗಳನ್ನೇ ದಿಟ್ಟಿಸಿದ
“ನೋವು ನಿನ್ನನ್ನೆಷ್ಟು ಉರಿಸುತ್ತದೆ  ಚಿನ್ನಾ
ಮತ್ತೆ ನನ್ನ ಉಸಿರು ಕಂಡು ನಿಟ್ಟುಸಿರಿಡುವೆ”

“ಒಹ್, ಕುಡಿದುಬಿಟ್ಟೆ ಇಡಿಯಾಗಿ ನೀ ನು ನನ್ನ ಆತ್ಮವನ್ನು
ನಿನ್ನ ಕಳೆಗೆ ನಿಜವಾಗಿ ಕಾರಣ ನಾನು
ನನ್ನೊಡವೆಯೇ, ಇನ್ನಷ್ಟು ಕಂಗೊಳಿಸು
ಹೊಳೆಹೊಳೆ, ಯೌವನದ ಬಿಸಿರಕ್ತವೇ.”

“ಮುದ್ದು, ನಿನ್ನ ಮುಖವೆಷ್ಟು ಬಿಳಿಚಿಕೊಂಡಿದೆ
ನಿನ್ನ ಮಾತೆಷ್ಟು ವಿಚಿತ್ರ, ಆಶ್ಚರ್ಯ
ನೋಡು, ಸಂಗೀತದ ಅನುಗ್ರಹದಿಂದ ಸಮೃದ್ಧವಾದ
ಉದಾತ್ತವಾದ ಜಾರುವ ಜಗತ್ತುಗಳಿವೆ”

“ಹಾರುತ್ತಾ, ನನ್ನವನೇ, ಹಾರುತ್ತಾ
ಹೊಳೆಯುತ್ತಾ, ತಾರೆಗಳು, ಹೊಳೆಯುತ್ತಾ
ನಾವಿಬ್ಬರೂ ಒಟ್ಟಿಗೇ ಸ್ವರ್ಗಕ್ಕೆ ಸಾಗೋಣಾ
ನಮ್ಮಿಬ್ಬರ ಆತ್ಮಗಳನ್ನು ಬೆಸೆದು”

ಅವನ ತಗ್ಗು ಧ್ವನಿ ಅಸ್ಪಷ್ಟ,
ಹತಾಶೆಯಲ್ಲಿ ನೋಡಿದ ಅತ್ತಿತ್ತ.
ಸಿಡಿಯುವ ಜ್ವಾಲೆಯ ನೋಟಗಳನ್ನು
ಎಸೆದವು ಅವನ ಗುಳಿಬಿದ್ದ ಕಣ್ಣುಗಳು

“ನೀನು ಕುಡಿದಿರುವೆ ವಿಷ, ನಲ್ಲೆ,
ನನ್ನೊಂದಿಗೆ ನೀನೂ ಸಾಗಬೇಕು ದೂರ
ಮೇಲೆ ಆಕಾಶದಲ್ಲಿ ಕಾರ್ಮುಗಿಲು
ಇನ್ನು ನನಗೆ ಕಾಣಿಸುತ್ತಿಲ್ಲ ಹಗಲು”

ನಡುಗುತ್ತ ಅವಳನ್ನು ಇನ್ನಷ್ಟು ಭರಸೆಳೆದ
ತಿಣುಕುತ್ತಿತ್ತು ಎದೆಯೊಳಗೆ ಸಾವು.
ತಿವಿಯಿತು ನೋವು ಅವಳ ಆಳ ಅಂತರಾತ್ಮವನ್ನು
ಶಾಶ್ವತವಾಗಿ ಮುಚ್ಚಿ ಅವಳ ಕಣ್ಣು ಗಳನ್ನು.

***

ಮೂಲ: ಕಾರ್ಲ್ ಮಾರ್ಕ್ಸ್ Nocturnal Love
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಕಾರ್ಲ್ ಮಾರ್ಕ್ಸ್ ನ ಪ್ರಾರಂಭಿಕ ಪ್ರೇಮ ಕವನಗಳು

 

ಜಾಗೃತಿ 

-೧-

ನಿನ್ನ ಮಿಂಚು ಕಣ್ಣುಗಳು ತೆರೆದಾಗ

ಕಂಪಿಸುತ್ತಾ ಭಾವಾವೇಶದಲ್ಲಿ

ಶ್ರುತಿ ತಪ್ಪಿದ ತಂತಿ ನಾದದಂತೆ

ಚಿಂತಿಸುತ್ತಾ, ನಿಷ್ಕ್ರಿಯಗೊಳ್ಳುತ್ತಾ

ವಾದ್ಯಕ್ಕೆ ಕಟ್ಟುಬಿದ್ದು

ಅತಿ ಪವಿತ್ರ ರಾತ್ರಿಯ ಮುಸುಕಿನಲ್ಲಿ

ಆರೋಹಣಗೊಳ್ಳುತ್ತಾ

ಮೇಲೆ ನಭದಲ್ಲಿ ಮಿನುಗುತ್ತಾ

ಚಿರ ತಾರೆಗಳಂತೆ

ಒಲವಿಂದ ಅಂತರಂಗದೊಳಗೆ.

-೨-

ಕುಸಿಯುವೆ ನೀನು ಕಂಪಿಸುತ್ತಾ

ಎದೆ ಏರಿಳಿಯುತ್ತಾ

ಕಾಣುವೆ

ಅಂತ್ಯವಿಲ್ಲದ ಚಿರ ಜಗತ್ತುಗಳನ್ನು

ನಿನ್ನ ಮೇಲೆ ಮತ್ತು ನಿನ್ನ ಕೆಳಗೆ

ಅಪ್ರಾಪ್ಯ, ಅನಂತ

ನರ್ತನ ಸಾಲುಗಳಲ್ಲಿ ತೇಲುತ್ತಾ

ಪ್ರಕ್ಷುಬ್ಧ, ಶಾಶ್ವತ

ಒಂದು ಅಣು ನೀನು

ವಿಶ್ವದ ಮೂಲಕ ಜಾರಿ

ಪತನಗೊಳ್ಳುವೆ.

-3-

ನಿನ್ನ ಜಾಗೃತಿ

ಅನಂತ ಉದಯ.

ನಿನ್ನ ಉದಯ

ಅನಂತ ಪತನ.

-4-

ನಿನ್ನ ಆತ್ಮದ

ಜ್ವಾಲೆಯ ತರಂಗಗಳು

ತನ್ನದೇ ತಳವನ್ನು ಬಡಿದಾಗ

ಮರಳಿ ಎದೆಯೊಳಗೆ

ಹೊಮ್ಮುತ್ತದೆ ಬಂಧನವಿಲ್ಲದ

ಸ್ಫೂರ್ತಿ ಪ್ರೇರೇಪಿತ

ಮಧುರ ಮಾಂತ್ರಿಕ ನಾದ ಹೊತ್ತೊಯ್ದ

ಆತ್ಮದ ರಾಕ್ಷಸೀ ಪ್ರಪಾತದಿಂದ ಎದ್ದ

ಆತ್ಮದ ರಹಸ್ಯ.

-5-

ನಿನ್ನ ಪತನವೇ

ನಿನ್ನ ಅನಂತ ಉದಯ

ನಿನ್ನ ಅನಂತ ಉದಯ ಸಾಧ್ಯವಾಗುವುದು

ಕಂಪಿಸುವ ತುಟಿಗಳ

ಈಥರಿನ ಕೆಂಪು

ಜ್ವಲಿಸುವ ಚಿರಂತನ

ದೇವತೆಯ ಪ್ರೇಮ ಚುಂಬನದಿಂದ.

***

ಮೂಲ: ಕಾರ್ಲ್ ಮಾರ್ಕ್ಸ್ 
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

1 comment

  1. “ಒಮ್ಮೆ ಚೇತನ ಮುಕ್ತಗೊಂಡಿತೆಂದರೆ ಪ್ ರೀತಿಯ ಅಂಗಗಳು” this should be – ಒಮ್ಮೆ ಚೇತನ ಮುಕ್ತಗೊಂಡಿತೆಂದರೆ ಪ್ರೀತಿಯ ಅಂಗಗಳು

Leave a Reply