ಥೂ ಪೋಲಿ.. ಸುರತದಲ್ಲಿ ಪರಿಣಿತಿಯುಳ್ಳವಳು..

ಹೆಣ್ಣೂ,ಅವಳ ಬಣ್ಣನೆಯೂ, ಪ್ರಾದೇಶಿಕತೆಯೂ…

ಈ ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಸ್ಮಯಗಳಿದ್ದರೂ, ಆ ಎಲ್ಲಾ ವಿಸ್ಮಯಗಳನ್ನು ಮೀರಿದ್ದು ಗಂಡಿಗೆ ಯಾವುದೆಂದರೆ ಹೆಣ್ಣು ಹಾಗೂ ಅವಳ ಅಂಗಸೌಷ್ಟವ.

ಹೆಣ್ಣಿನ ಈ ಆಕರ್ಷಣೆಯೇ ಗಂಡನ್ನು ಪುರಾಣದ ಕಾಲದಿಂದಲೂ ಕಾಡುತ್ತಾ, ಕಾಡಿಸುತ್ತಾ, ಅಸಹಾಯಕನಾಗಿಸುತ್ತಾ ಬಂದಿದೆ.

ಹೆಣ್ಣಿನ ಮೈಯ ಈ ಚೆಲುವಿಗೆ ಸೋತ ಗಂಡು ಅದರಿಂದ ಬಿಡಿಸಿಕೊಳ್ಳಲು ಏನೆಲ್ಲಾ ಪ್ರಯತ್ನಗಳನ್ನು, ನೀತಿ ಧರ್ಮಗಳನ್ನು ರೂಪಿಸಿದರೂ, ಅವಳ ಚೆಲುವಿನ ಮುಂದೆ ಅವುಗಳು ಅಂಗಾತ ಬಿದ್ದ ಜಿರಲೆಯಂತೆ ಆಗಿವೆ.

ಹೀಗೆ ಅಸಹಾಯಕನಾದ ಗಂಡು ತನ್ನ ಹತೋಟಿಗೆ, ಕಲ್ಪನೆಗೆ ನಿಲುಕದ ಹೆಣ್ಣಿನ ಬಗೆಗೆ ತತ್ವಜ್ಞಾನಿಯಾದ, ಸಂತನಾದ, ಕವಿಯಾದ. ಕೊನೆಗೆ ಅವಳನ್ನು,ಅವಳ ಸೌಂದರ್ಯವನ್ನು ವರ್ಣಿಸುತ್ತಲೇ ತನ್ನದೇ ಆದ ರೀತಿಯಲ್ಲಿ ಅವಳನ್ನು ಕಂಡು, ಕಂಡರಿಸಿದ್ದಾನೆ.

ನಮ್ಮ ಕನ್ನಡ ಕವಿಗಳಂತೂ, ಅದರಲ್ಲೂ ಹಳಗನ್ನಡ ಕವಿಗಳು ಹೆಣ್ಣನ್ನು ತಮ್ಮದೇ ಆದ ರೀತಿಯಲ್ಲಿ, ಶೈಲಿಯಲ್ಲಿ ಕಂಡರಿಸಿ ಕೊಟ್ಟಿದ್ದಾರೆ.

ಆದಿಕವಿ ಪಂಪನಂತು ಹೆಣ್ಣನ್ನು “ಸಾರಮನಂಗ ಜಂಗಮಲತಾ ಲಲಿತಾಂಗಿಯರಲ್ತೆ ಸಂಸಾರಂ” ಎಂದು ಹೇಳಿ ಈ ಸಂಸಾರದ ಸಾರವೇ ಹೆಣ್ಣು ಎನ್ನುತ್ತಾನೆ.

ಮುಂದುವರೆದು ಪ್ರತಿಯೊಂದು ಹೆಣ್ಣೂ ಅನನ್ಯವಾದವಳು, ಅವಳು ವ್ಯಕ್ತಿತ್ವ ಮತ್ತು ಚೆಲುವು ಪ್ರಾದೇಶಿಕವಾದದ್ದು ಎಂದು ಹೇಳುತ್ತಾ ಕೇರಳ, ಮಲಯ, ಮತ್ತು ಆಂಧ್ರ ಪ್ರದೇಶದ ಹೆಣ್ಣಿನ ಚೆಲುವನ್ನು ವರ್ಣಿಸುತ್ತಾನೆ.

ಹದಿನೈದನೇ ಶತಮಾನದ ಕವಿ ಕಲ್ಲರಸನು ಇನ್ನೂ ಮುಂದುವರೆದು ಹೆಣ್ಣಿನ ಅಂದ, ಅವಳ ಪ್ರೇಮ,ಕಾಮ ಇವೆಲ್ಲವೂ ಪ್ರಾದೇಶಿಕವಾದವೂ ಎಂಬ ಕುತೂಹಲಕಾರಿ ಅಂಶಗಳನ್ನು ನಮ್ಮ ಮುಂದಿಡುತ್ತಾನೆ.

ಅವನು ಸುಮಾರು ಇಪ್ಪತ್ತು ದೇಶಗಳ (ಪ್ರಾದೇಶಿಕ) ಹೆಣ್ಣಿನ ಅಂಗಸೌಷ್ಟವ, ಅವಳ ಪ್ರೇಮ ಮತ್ತು ಕಾಮದ ಬಗೆಗಳನ್ನು ವರ್ಣಿಸುತ್ತಾನೆ.

ಅವನು ನೀಡುವ ವಿವರಗಳು ಮತ್ತು ಅವುಗಳ ಅಥೆಂಟಿಸಿಟಿಯನ್ನು ಇವತ್ತಿನ ಸಂದರ್ಭದಲ್ಲಿ ನಿಂತು ನೋಡಿದರೆ ಕೆಲವು ವಸ್ತುನಿಷ್ಟವಾದದ್ದೂ ಇನ್ನೂ ಕೆಲವು ಊಹಾತ್ಮಕವಾದವು ಎಂಬುದು ಕಂಡುಬರುತ್ತದೆ. ಆದರೆ ಆತ ಕಟ್ಟಿಕೊಡುವ ಹೆಣ್ಣಿನ ಪ್ರಾದೇಶಿಕ ವೈಶಿಷ್ಟ್ಯತೆ ಇವತ್ತಿನ ಮಟ್ಟಿಗೆ ತುಂಬಾ ಕುತೂಹಲಕಾರಿಯಾದದ್ದು.

ಇಲ್ಲಿ ಕೆಲವು ಪ್ರದೇಶಗಳ ಹೆಣ್ಣಿನ ವರ್ಣನೆಗಳನ್ನಷ್ಟೆ ವಿವರವಾಗಿ ನೋಡಬಹುದು.

ಮೊದಲಿಗೆ ಅವತ್ತಿನ ಕಾಲದ ಕನ್ನಡ ನಾಡಿನ ಹೆಣ್ಣಿನ ವರ್ಣನೆ ಹೀಗಿದೆ.
“ವರವಚನೆ ಭಾವೆ ಸಿಂ
ಗರಕಾರ್ತಿ ರೂಪವತಿ
ಸುರತಪ್ರವೀಣೆ ವೈಶಿಕವಿಹಾರೆ
ಗರುವೆ ವಿಹಿತ ಗುಣಜ್ಞೆ
ಸರಸೆ ಪಟುಕರಣೆ ಪಂ
ಕರುಹಮುಖಿಯವಳೆ ಕನ್ನಡತಿ ಕೇಳ”.

(ಮಾತಿನಲಿಜಾಣೆ, ಸುಂದರಿ, ಅಲಂಕಾರಿಣಿ, ರೂಪವತಿ, ಸುರತದಲ್ಲಿ ಪರಿಣಿತಿಯುಳ್ಳವಳು, ಬೆಡಗುಳ್ಳವಳು, ಉತ್ತಮಳು, ಔಚಿತ್ಯ ಜ್ಞಾನವುಳ್ಳವಳು, ರಸಿಕಳು, ಉದ್ದೀಪಿಸುವ ಮೈಯವಳು ಅಥವಾ ಕ್ರಿಯಾಶೀಲಳು, ಯಾರೆಂದರೆ ಅವಳೆ ಕನ್ನಡತಿ)

2) ಮಹಾರಾಷ್ಟ್ರದ ಹೆಣ್ಣಿನ ವರ್ಣನೆ.

ಪಿರಿದುಂಬ ಬೆಟ್ಟಿತಾ
ಗಿರೆ ನುಡಿವ ತವೆ ರತಿಯೊ
ಳುರವಣಿಪ ಚೌಷಷ್ಟಿಕಲೆಯನರಿವ
ಸರಳಾಂಗುಲಿಯ ಘನೋ
ದರದ ನವಪಲ್ಲವಾ
ಧರದವಳೆ ಕೇಳ್ ಮಹಾರಾಷ್ಟ್ರದವಳ

(ಹೆಚ್ಚು ಊಟಮಾಡುವ, ಕಠಿಣವಾಗಿ ಮಾತನಾಡುವ, ಸುರತದಲ್ಲಿ ಉತ್ಸಾಹ ತೋರುವ, ಅರವತ್ತನಾಲ್ಕು ಕಲೆಗಳನ್ನೂ ಬಲ್ಲ, ನೇರ ಬೆರಳುಗಳುಳ್ಳ, ದೊಡ್ಡ ಹೊಟ್ಟೆಯ, ಹೊಸ ಚಿಗುರಿನಂತಹ ತುಟಿಯುಳ್ಳವಳು ಮರಾಠಿ ಹೆಣ್ಣು.

3) ಕಾಶ್ಮೀರ ಹೆಣ್ಣಿನ ವರ್ಣನೆ.

ಲಲಿತಕಾಯದ ತೋರ
ಮೊಲೆಯ ಮೃದುಪದದ ಚಂ
ಚಲನೇತ್ರದೊಗೆವ ಮೃಗಮದಗಂಧದ
ಒಲಿದು ಒಲ್ಲದುದನರಿ
ದೊಲೆದು ಮುಂಕೊಂಡು ಮಿಗೆ
ಉಲಿವಳಂತವಳೆ ಕಾಶ್ಮೀರದವಳು

(ಸುಂದರ ದೇಹದ, ತೋರ ಸ್ತನದ, ಮೆಲು ನಡೆಯ, ಚಂಚಲಗಣ್ಣಿನ, ಸುಂಗಂಧ ಸೂಸುವ ಮೈಯ ವಾಸನೆಯ, ಇನಿಯನ ಬೇಕು ಬೇಡಗಳ ತಿಳಿದು, ಅವುಗಳ ಮೊದಲೆ ನೀಡುವ, ವಿಶೇಷ ಮಾತುಗಾರ್ತಿ ಕಾಶ್ಮೀರದಹೆಣ್ಣು.

4. ಕೇರಳದ ಹೆಣ್ಣಿನ ವರ್ಣನೆ.

ಮಡಲಿರಿವ ಕುಂತಳದ
ಕುಡುತೆಗಂಗಳ ಪೊಕ್ಕು
ಳೆಡೆಗಾಣಲುಡುವ ಮೊಲೆದೆರೆದು ನಡೆವ
ಕಡು ಕೂರ್ತಗುಳ್ಳುದಂ
ಕೊಡುವ ಪುರುಷಾಯುತದೊ
ಳಡಸಿ ನೆರೆವಳೆ ಕೇಳ್ ಮಲಯಾಳತಿ.

(ಸೊಂಪುಗೂದಲ, ಬೊಗಸೆ ಕಣ್ಣಿನ, ಕುಚ ಹೊಕ್ಕಳು ಕಾಣುವಂತೆ ಬಟ್ಟೆಧರಿಸಿ ನಡೆಯುವ, ತಾನು ಕೂಡುವ ಪುರುಷರ ಬಿಗಿಯಾಗಿ ಅಪ್ಪಿ, ಪ್ರೀತಿಸುವ ಹೆಣ್ಣೆ ಮಲೆಯಾಳತಿ)

5. ಉತ್ತರಕನ್ನಡದ ( ಹೈವ ನಾಡಿನ) ಹೆಣ್ಣಿನ ವರ್ಣನೆ.

ಕೋವಣಂಗಟ್ಟುವ ಮ
ನೋವೃತ್ತಿಯಿಂದಿರ್ಪ
ಭಾವಭವಕೇಳಿಯೊಳ್ ಕಿರಿದೆನಿಸುವ
ಆವಗಂ ತಣ್ಣೀರ
ಮೀವ ನಿರ್ಲಜ್ಜೆಯವ
ಳೇ ವನಿತೆ ಹೈವನಾಡವಳೆನಿಪಳು

(ತನ್ನ ಮಾನಕೇಂದ್ರವ ಮರೆಮಾಡಿಕೊಳ್ಳುವ ಮನೋಧರ್ಮದ, ವ್ಯಾವಹಾರಿಕವಾಗಲಿ, ಭಾವನಾತ್ಮಕವಾಗಿಯಾಗಲಿ, ವಿನೋದ ಮನವಿಲ್ಲದ, ಯಾವಾಗಲೂ ತಣ್ಣೀರಲ್ಲೆ ಸ್ನಾನಮಾಡುವ, ನಾಚಿಕೆ ತೊರೆದ ಹೆಣ್ಣು ಹೈವ ನಾಡವಳು).

6.ತುಳು ನಾಡಿನ ಹೆಣ್ಣು .

ಒಳಗುದೋರದ ನುಡಿಯು
ಬಳಕೆಯುಪಚಾರಂಗ
ಳಳಿಮನದ ತನ್ನಿಚ್ಛೆಯಿಂ ಪುರುಷನ
ಬಳಿಗೊಂಬ ಮುಳಿವ ಕಳ
ವಳಿಪ ಪೇರೊಡಲ ಚಾ
ಪಳದವಳೆ ತುಳುವದೇಶದವಳಬಲೆ

( ಮನಬಿಚ್ಚಿ ಮಾತನಾಡದ, ಬಾಯಿಮಾತಿನ ಉಪಚಾರದ, ಸಣ್ಣ ಮನಸ್ಸಿನ, ತನ್ನಿಚ್ಚೆಯಿಂದ ಪುರುಷನ ಬಳಿಗೆ ಹೋಗುವ, ಕೋಪಿಸಿಕೊಳ್ಳುವ, ಆತುರಪಡುವ, ದೊಡ್ಡ ದೇಹದ, ಚಂಚಲ ಸ್ವಭಾವದ ಹೆಣ್ಣು ತುಳುನಾಡವಳು.)

7.ಪಾಂಡ್ಯದೇಶದ ಹೆಣ್ಣಿನ ವರ್ಣನೆ.

ಪೊಳೆವ ಕಣ್ ನಗೆಮೊಗಂ
ಜಲಜಾನನಂ ನೀಳ್ದ
ನಳಿತೋಳಸಿಯ ಯೋನಿ ತನುತರಂಗಂ
ಸೆಳೆನಡು ರತಿಪ್ರೀತಿ
ಬಳೆದ ಜಘನಂ ತೋರ್ಪ
ವಳೆ ಪಾಂಡ್ಯದೇಶದವಳಿಚ್ಛೆಗಾರ್ತಿ.

(ಹೊಳೆವ ಕಣ್ಣಿನ, ತಾವರೆಯ ನಗು ಮೊಗದ, ಕೋಮಲವಾದ ಉದ್ದ ತೋಳಿನ, ಚಿಕ್ಕ ಯೋನಿಯ, ಸೆಳೆ ಸೊಂಟದ, ತುಂಬು ನಿತಂಬವ, ಸುರತ ಪ್ರೀತಿಯ ತೋರುವ ಹೆಣ್ಣು ಪಾಂಡ್ಯಳು.

8. ಕೊಂಕಣ ನಾಡಿನ ಹೆಣ್ಣಿನ ವರ್ಣನೆ.

ಸವಿಯನೆಸೆಗದ ನುಡಿಯ
ಪವಣುದೋರದ ನಡೆಯ
ತವೆ ಮೋಹಿಸದ ಭಾವದ ಪ್ರೌಢೆಯ
ಕವಲುಮನದತಿರತದ
ಕುವಲಯಾಂಬಕದ ಸೌ
ಷ್ಟವದವಳೆ ಕೊಂಕಣತಿ ಕೋಮಲಾಂಗಿ.

(ನೀರಸ ಮಾತಿನ, ವಿಚಿತ್ರ ನಡಿಗೆಯ, ಮೋಹ ತರಿಸದ ಭಾವವುಳ್ಳ, ಕವಲು ಮನಸಿನ, ಅತಿಸುರತಾಸಕ್ತಿಯ, ನೀಲಿಕಣ್ಣಿನ, ಸೊಗಸು ದೇಹದ ಸುಂದರಿಯೇ ಕೊಂಕಣತಿ.)

9.ವಿಂದ್ಯ ದೇಶದ ಹೆಣ್ಣು.

ಚಲನಯನೆ ಮೃದುಗಾತ್ರೆ
ಕಲಶಕುಚೆ ಲುಬ್ಧೆ ಶುಚಿ
ಜಲರುಹಾನನೆ ಸೊಬಗೆ ಸುರತನಿರತೆ
ವಿಲಸಿತಾಕಾರೆ ನಿ
ರ್ಮಲಚಿತ್ತೆ ಸತ್ಯೆಯೆನೆ
ಸಲೆ ತೋರ್ಪವಳೆ ವಿಂಧ್ಯದೇಶದವಳು

(ಚಂಚಲಕಣ್ಣ, ಮಧ್ಯಮ ದೇಹಿ, ಕಲಶದಂತಹ ಕುಚ, ಕಮಲದಂತ ಮೊಗದ ಸೊಬಗನ್ನುಳ್ಳ, ಸದಾ ಸುರತಪ್ರಿಯೆ, ಸ್ವಚ್ಛ ಮನಸ್ಸಿನ, ದಿಟ ನುಡಿಯುವ ಹೆಣ್ಣು ವಿಂಧ್ಯನಾಡವಳು.)

10.ವೆಂಗಿ ನಾಡ ಹೆಣ್ಣು.

ಲಲಿತಾಂಗಿ ಭೃಂಗಕುಂ
ತಳೆ ಕುಂದರದನೆ ಚಂ
ಚಲನೇತ್ರೆ ಚತುರೆ ರತಿತಂತ್ರಕುಶಲೆ
ಚಲೆ ಮಿತಾಶನೆ ಧೂರ್ತೆ
ಕಲಹಲಂಪಟೆಯೆನಿಪ
ಲಲನೆಯವಳೇ ವೆಂಗಿನಾಡ ಹೆಣ್ಣು.

( ಚೆಲುವಿನ ಮೈಯ, ದುಂಬಿಗೂದಲಿನ, ಬಾಡದ ಮೊಗದ, ಚಂಚಲಗಣ್ಣಿನ, ರತಿತಂತ್ರಕುಶಲೆ, ಮಿತಾಹಾರಿ, ಕಾಮಾಸಕ್ತೆ, ಜಗಳಗಂಟಿ ವೆಂಗಿನಾಡ ಹೆಣ್ಣು.

11.ಕೊಡಗಿನ ಹೆಣ್ಣು.

ಪಿಂದೆ ನಿರಿದೆಗೆದುಡುವ
ಕುಂದು ಹೆಚ್ಚರಿಯದಿಹ
ಮಂದಬುದ್ದಿಯ ಕಠಿಣವಾದ ಮೆಯ್ಯ
ನಿಂದಿಸುವ ನಿರ್ಲಜ್ಜೆ
ಯಿಂದ ರತಿಗೆಯ್ವಳವ
ಳಿಂದಿಂದಿರಾಲಕಿಯೇ ಕೇಳ್ ಕೊಡಗಿತಿ.

( ಹಿಂದೆ ನಿರಿಗೆ ತೆಗೆದು ಸೀರೆ ಉಡುವ, ಗಂಡಿನಲಿ ಲೋಪ ಹುಡುಕದ, ಮಂದಬುದ್ದಿಯ, ಒರಟು ದೇಹದ, ನಿಂದಿಸುವ, ಸುರತದಲ್ಲಿ ಸಹಜವಾಗಿರುವ ಹೆಣ್ಣೇ ಕೊಡಗಿತಿ).

ಇನ್ನುಳಿದ ದೇಶಂಗ
ಳಂ ನಡೆಯೊಳೋಜೆಯೊಳು
ಬಿನ್ನಣದೊಳೀವುದರೊಳುಂಬುದರೊಳು
ಚೆನ್ನಿನೊಳು ಸುರತದೊಳು
ಮನ್ನಣೆಯೊಳರ್ತಿಯೊಳು
ಮುನ್ನೂಹಿಸುವುದು ಅರುವಿನುರುವ ತೆರದಿಂ.

ಇನ್ನು ಉಳಿದ ದೇಶಗಳ ಹೆಣ್ಣ ನಡತೆ, ಅವರ ಪ್ರೇಮ ಕಾಮದ ಕ್ರಮ, ಬಿನ್ನಾಣಗಳನ್ನು,ರೀತಿಗಳನ್ನು ಅವರ ಆಹಾರ ಕ್ರಮ ಸತ್ಕಾರ ಕ್ರಮಗಳನ್ನು ಪ್ರೀತಿಯಿಂದ ಅರಿತು, ಕೆಲವನ್ನು ಊಹಿಸಿ ತಿಳಿಯಬಹುದು.

Leave a Reply