ಕ್ಲೀನ್.. ಕ್ಲೀನ್.. ಕ್ಲೀನ್..

ಸಮೃದ್ಧವಾಗಿ ಬೆಳೆದಿದ್ದಸಸ್ಯ ರಾಶಿ. ಫುಟ್ ಪಾತ್ ಉದ್ದಕ್ಕೂ ಬೃಹತ್ ಆಕಾರದ ಮರಗಳು. ಇವುಗಳ ಅಡಿಯಲ್ಲಿ ನೆಲೆಸಿದ್ದ ಅದೆಷ್ಟೋ ಸಣ್ಣ ಪುಟ್ಟ ಅಂಗಡಿಗಳು. ಅಪರಾಹ್ನದ ವೇಳೆ ಬೀಸುತ್ತಿದ್ದ ತಣ್ಣನೆಯ ಗಾಳಿ. ಚಿಲ್ ಎನಿಸುತ್ತಿದ್ದ ಸುಂದರ ಸಂಜೆಗಳು.. ಇದು ಮೆಟ್ರೋ ರೈಲು ಬರೋ ಹಿಂದಿನ ನಮ್ಮ ಬೆಂಗಳೂರು.

ನನ್ನ ಮತ್ತು ಮಗಳು ಸ್ತುತಿಯ ಪಾರ್ಕ್ ಪಯಣ. ಮುಸ್ಸಂಜೆ  ಆಗೋದೇ ತಡ, ಮಗಳಿಗೆ ಪಾರ್ಕ್ ಗೆ  ಹೋಗೋ ಸಂಭ್ರಮ. ಶೂ, ಸಾಕ್ಸ್, ಚಳಿಗೆ ಟೋಪಿ , ಸ್ವೆಟರ್  ಹಾಕಿ ಪುಟ್ಟ ಪುಟ್ಟ ಹೆಜ್ಜೆ ಇಡ್ತಾ ಉದ್ಯಾನವನ ತಲುಪಿ ಆಡೋದೆ ಒಂದು ಖುಷಿ. ಬೆಳಗ್ಗೆ ಮತ್ತು ಸಂಜೆ ಮಾತ್ರ ತೆರೆಯುವ ಪಾಲಿಕೆ ಉದ್ಯಾನವನದಲ್ಲಿ ಒಂದಿಷ್ಟು ಮಂದಿ  ನಡಿಗೆ , ವ್ಯಾಯಾಮ ಮಾಡಿದ್ರೆ, ಮತ್ತೊಂದಷ್ಟು ಮಂದಿ ಹರಟೆ ಹೊಡಿಯೋರು.

Google ನ್ನೇ ಮೀರಿಸುವ ಚರ್ಚೆಗಳು. ಮಗಳನ್ನುಒಂದು ರೌಂಡ್ ಆಡಿಸಿ ಬರೋಷ್ಟರಲ್ಲಿ ತಲೆ ತುಂಬಾ ಕೇಳಿಸಿಕೊಂಡ ಅದೆಷ್ಟೋ ವಿಚಾರಗಳು. ಅದರಲ್ಲೂ ಮನೆ ಮನೆ ಕಥೆಗಳಂತೂ ಕೇಳೋದೇ ಬೇಡ. ಅತ್ತ ಕಡೆ ತಮ್ಮ ದಿನಗಳನ್ನು ಮರೆಯದ, ಇತ್ತ ವೇಗವಾಗಿ ಓಡುವ ಜಗತ್ತಿಗೂ ಹೊಂದಿಕೊಳ್ಳದ ಮನಸ್ಥಿತಿಗಳು ಇಲ್ಲಿ ನೂರಾರು.

ಇಂತಹದ್ದೇ ಚಿತ್ರಣಕ್ಕೆ ನಮ್ಮ ಬೆಂಗಳೂರು ನಗರ ಕೂಡ ಹೊರತಾಗಿಲ್ಲ. ಒಂಥರಾ ಹಳೆಯೂ ಅಲ್ಲದ – ಹೊಸತನ್ನು ಮೈಗೂಡಿಸದ ಮನೋಭಾವ. ಅಭಿವೃದ್ಧಿ ಮಂತ್ರ ಬರೀ ಮಾತಿಗೆ ಸೀಮಿತ. ಅದರಲ್ಲೂ ಸ್ವಚ್ಛತೆ ಬಗ್ಗೆ ಕೇಳೋದೇ ಬೇಡ. ಖಾಲಿ ಜಾಗ ಸಿಗೋದೆ ತಡ ರಾತ್ರಿ – ಬೆಳಗಾಗೋಷ್ಟರಲ್ಲಿ ಏನಿಲ್ಲಾಂದ್ರು ಕಸದ ರಾಶಿ ಮಾತ್ರ ಪ್ರತ್ಯಕ್ಷವಾಗುತ್ತೆ.  ನಮ್ಮದೇ ರಾಜ್ಯ. ನಮ್ಮದೇ ಕಾನೂನು. ಹೇಳೋರು ಇಲ್ಲ- ಕೇಳೋರು ಇಲ್ಲ

ಆದರೆ ಸಂದರ್ಭ, ಸನ್ನಿವೇಶ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡ ಕಡೆ ಮಾತ್ರ ಬದಲಾವಣೆ ಸಾಧ್ಯ. ಇದು ನೂರಕ್ಕೆ ನೂರರಷ್ಟು ಸತ್ಯ. ಈ ಮಾತಿಗೆ ಸಿಂಗಾಪುರ ದೇಶ ಉತ್ತಮ ಉದಾಹರಣೆ. ನಂಬಿಕೆ, ವಿಶ್ವಾಸವಿದ್ದಲ್ಲಿ ಮಾತ್ರ “ನಾಯಕ” ಎನಿಸಿಕೊಂಡವನ ಕೆಲಸ ಸಾರ್ಥಕ ಆದೀತು.

ನಂಬ್ತಿರೋ ಬಿಡ್ತೀರೊ ಇಡೀ ದೇಶಕ್ಕೆ ದೇಶವೇ ಇಲ್ಲಿ ” ಕ್ಲೀನ್ “.  ಕಸ, ಕಡ್ಡಿ, ಗಲೀಜು ಇಲ್ವೇ ಇಲ್ಲ. ೧೦ -೨೦ ಹೆಜ್ಜೆಗಳಿಗೂ ಒಂದು ಕಸದ ತೊಟ್ಟಿ.  ಪಾರ್ಕ್, ವಸತಿ ಸಮುಚ್ಚಯಗಳ ಸುತ್ತಮುತ್ತ ಹರಡುವ ಒಣಗಿದ ಎಲೆಗಳನ್ನು ಪ್ರತಿ ದಿನ ಗುಡಿಸಿ ಸ್ವಚ್ಛ ಮಾಡಲಾಗುತ್ತದೆ. ಇಲ್ಲಿನ ಮನೆಗಳ ಎಲ್ಲಾಕಾರಿಡಾರ್ ಗಳು (ಅದೆಷ್ಟೇ ಮಹಡಿಗಳು ಇರಲಿ),   ಉದ್ಯಾನವನಗಳ ಸುತ್ತಮುತ್ತ,  ಗಲ್ಲಿ ಗಲ್ಲಿಗಳ ಫುಟ್ ಪಾತ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ನೀರು ಹಾಕಿ ತೊಳೆಯಲಾಗುತ್ತದೆ. ಬೆಳೆದ ಹುಲ್ಲುಕಡ್ಡಿಗಳು ಕೂಡ ವಾರಕ್ಕೊಮ್ಮೆ ಟ್ರಿಮ್ ಆಗ್ತವೆ. ಸೊಳ್ಳೆ ನಿಯಂತ್ರಣಕ್ಕೆ ಪ್ರತಿ ತಿಂಗಳು ಔಷಧಿಯುಕ್ತ ಹೊಗೆಯನ್ನ ಹೊಗೆಯಂತ್ರದ ಮೂಲಕ ಗಿಡಗಳ ನಡುವೆ, ಸಂದುಗಳಲ್ಲಿ, ಮಳೆ ನೀರು ನಿಲ್ಲಬಹುದಾದ ಜಾಗಗಳಲ್ಲಿ ಪಸರಿಸಲಾಗುತ್ತದೆ. ಹೇಳ್ತಾ ಹೋದ್ರೆ ಪಟ್ಟಿ ಬೆಳೀತಾನೇ ಹೋಗುತ್ತದೆ. ಇವೆಲ್ಲಾ ಪ್ರತಿ ತಿಂಗಳು ತಪ್ಪದೆ ನಡೆಯುವ ಕೆಲಸಗಳು.

ಗಾತ್ರದಲ್ಲಿ ಇದು ತುಂಬಾ ಪುಟ್ಟ ದೇಶ. ಭೂಪಟದಲ್ಲಿ ಒಂದು ಸಣ್ಣ ಚುಕ್ಕೆ. ಆದರೆ ಅಭಿವೃದ್ಧಿ ಹೊಂದಿದ ದೇಶ. ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಕಾನೂನಿಗೆ ಮಾತ್ರ ತಲೆ ಬಾಗ್ತಾನೆ. ಟ್ರೈನ್ ಸ್ಟೇಶನ್ ಎಂಟ್ರೀ ಆದ ಮೇಲೆ ತಿನ್ನೋದು ಬಿಡಿ ನೀರು ಕುಡಿಯೋ ಹಾಗಿಲ್ಲ. (ಎಮರ್ಜೆನ್ಸೀ ಹೊರತು ಪಡಿಸಿ),  ಹಾಗೆ ಏನಾದ್ರೂ ತಿನ್ನೋದು, ಪಾನೀಯಗಳನ್ನು ಕುಡಿಯೋದು ಮಾಡಿದ್ದಲ್ಲಿ ೫೦೦ ಡಾಲರ್,  ಸಿಗರೇಟು ಸೇವನೆಗೆ ೧,೦೦೦ ಡಾಲರ್  ದಂಡ ಕಟ್ಟಬೇಕು.

ಟ್ಯಾಕ್ಸೀ ನಲ್ಲೂ ಅದೇ ನಿಯಮ. ಚಾಲಕ ಹೊರತು ಪಡಿಸಿ, ಟ್ಯಾಕ್ಸೀಗಳಲ್ಲಿ ನಾಲ್ವರಿಗೆ ಮಾತ್ರ ಅವಕಾಶ. ಬಿಲ್ ನಲ್ಲಿ ತೋರಿಸಿದಷ್ಟು ಹಣ ಬಿಟ್ರೆ , ಯಾರಿಗೂ ಲಂಚ ಕೊಡೊ ಹಾಗಿಲ್ಲ. ಇನ್ನೂ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಮೊದಲ ಬಾರಿ ಸಿಕ್ಕಿ ಬಿಳೋರು ೧ooo ಸಾವಿರ ಡಾಲರ್ ದಂಡ ಕಟ್ಟಿದ್ರೆ, ಎರಡಕ್ಕಿಂತ ಹೆಚ್ಚು ಬಾರಿ ಸಿಕ್ಕಿ ಬಿದ್ದಲ್ಲಿ ೫ ,೦೦೦ ಡಾಲರ್ ಜೊತೆಗೆ ಜೈಲುವಾಸ ಗ್ಯಾರಂಟಿ.

ಎಲ್ಲೇ ತಿರುಗಾಡಿ, ಆಕ್ಟೋಪಸ್ ತರ ನೂರಾರು ಕ್ಯಾಮರಗಳು ನಿಮ್ಮನ್ನೇ ಗುರ್ರ್  ಅಂತಿರುತ್ತವೆ. ಯಾವ ರಸ್ತೆಯಲ್ಲೂ ನಿಮಗೆ ಟ್ರ್ಯಾಫಿಕ್ ಪೋಲೀಸರು ಕಣ್ಣಿಗೆ ಬೀಳೋದಿಲ್ಲ. ಅದರ ಅಗತ್ಯನೇ ಇಲ್ಲ. ಇಲ್ಲಿ ರೂಲ್ಸ್ ಅಂದ್ರೆ ರೂಲ್ಸ್. ಯಾವುದಕ್ಕೂ ಚೌಕಾಸಿ ಇಲ್ಲ.

ಇದು  ಹೇಗೆ ಸಾಧ್ಯ ಆಯಿತು. ಇದರ ಹಿಂದೆ ಇರೋ ರಹಸ್ಯವಾದರೂ ಏನು.  ಹೇಳ್ತೇನೆ ಕೇಳಿ.

ಸ್ಲಮ್ ನಿಂದ “Eco city”  ಗೆ ಕಾರಣರಾದವರು ದೇಶದ ಪ್ರಬಲ ನಾಯಕ ಎಂದೇ ಖ್ಯಾತಿಯ “ಲೀ ಕ್ವಾನ್ ಯ್ಯೂ”. ಇವರ ಜೊತೆ ಕೈ ಜೋಡಿಸಿದವರು ಗೋಹ್ ಕೆಂಗ್ ಸ್ವೀ, ಲಿಮ್ ಕಿಮ್ ಸ್ಯಾನ್, ಎಸ್  ರಾಜರತ್ನಂ, ತೋ ಚಿನ್ ಚೈ ಮತ್ತು ದೇವನ್ ನಾಯರ್.

ಸ್ವಾತಂತ್ಯ ಸಿಕ್ಕಿದ ಆರಂಭಿಕ ವರ್ಷಗಳಲ್ಲಿ ಪ್ರಜೆಗಳ ಯೋಗಕ್ಷೇಮದ ದೃಷ್ಟಿಯಿಂದ “ಸ್ವಚ್ಛ” ಹಾಗೂ “ಗ್ರೀನ್ ಸಿಟಿ”  ಯೋಜನೆ ರೂಪಿಸಿದರು. ಈ ಮೂಲಕ ಅಭಿವೃದ್ಧಿ ಮಂತ್ರವನ್ನ ಎಲ್ಲೆಡೆ ಸಾರಿದರು. ಕೊಳಗೇರಿ, ಪೇವ್ಮೆಂಟ್, ಹಾಗೂ ಬೀದಿಗಳಲ್ಲಿ ವಾಸಿಸುತ್ತಿದ್ದ ಜನರ ಸಲುವಾಗಿ, ವಸತಿ, ಆರೋಗ್ಯ ಮತ್ತು ಪರಿಸರ ದ ಬಗ್ಗೆ ಗಮನ ಹರಿಸಲಾಯಿತು. ಲೀ ಕ್ವಾನ್ ಯೂ ಅವರು 1963 ರಲ್ಲಿ ಮರ ನೆಡುವ ಅಭಿಯಾನ ಹಾಗೂ 1968 ರಲ್ಲಿ “ಕೀಪ್ ಸಿಂಗಾಪುರ ಕ್ಲೀನ್” ಎಂಬ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಮಧ್ಯೆ, ಕೈಗಾರೀಕರಣದಿಂದ ಉಂಟಾಗುವ ಜಲ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ 1971 ರಲ್ಲಿ Anti Pollusion Unit (APU) ಸ್ಥಾಪಿಸಲಾಯಿತು. ಮೋಟಾರ್ ವಾಹನಗಳಿಂದ ಆಗುವ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನನ್ನು ಜಾರಿಗೆ ತರಲಾಯಿತು. ವಿಶೇಷ ಅಂದ್ರೆ, ಇವತ್ತಿಗೂ ಈ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಹೊಗೆ ಉಗುಳುವ ವಾಹನಗಳು ಇಲ್ಲಿ ರಸ್ತೆಗೆ ಇಳಿಯುವ ಹಾಗಿಲ್ಲ. ಟ್ರ್ಯಾಫಿಕ್ ಸಿಗ್ನಲ್ ಹೊರತು ಪಡಿಸಿ,  ಉಳಿದ ಯಾವುದೇ ಪ್ರದೇಶಗಳಲ್ಲಿ ಎಂಜಿನ್ ಆನ್ ಮಾಡಿಟ್ಟು ತಮ್ಮ ವಾಹನಗಳನ್ನು ನಿಲ್ಲಿಸುವ ಹಾಗೆ ಇಲ್ಲ.

1965 ರಲ್ಲಿ ದೇಶವು ಸ್ವಾತಂತ್ರ್ಯವನ್ನು ಪಡೆದಾಗ ನೀರಿನ ಪೂರೈಕೆಗೆ ಮಲೇಶಿಯಾವನ್ನು ಅವಲಂಬಿಸಿತ್ತು. ಕ್ರಮೇಣ ರಾಜಕೀಯ ಭಿನ್ನಾಬಿಪ್ರಾಯಗಳು ತಲೆದೋರಿದ ಕಾರಣ ಲೀ ಅವರ ನಾಯಕತ್ವದಲ್ಲಿ ಸಿಂಗಾಪುರದ ಜಲ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು 1971 ರಲ್ಲಿ ಜಲ ಯೋಜನಾ ಘಟಕವನ್ನು ಸ್ಥಾಪಿಸಲಾಯಿತು. ಈ ಮೂಲಕ ನೀರಿನ ಸ್ವಚ್ಚತಾ ಕಾರ್ಯ ಹಾಗೂ ದೇಶಕ್ಕೆ ಬೇಕಾದ ಹೆಚ್ಚುವರಿ ನೀರಿನ ಸಂಗ್ರಹ ವ್ಯವಸ್ಥೆಯನ್ನು ಮಾಡಲಾಯಿತು.

ಇನ್ನೊಂದು ‘ಬ್ರೇಕಿಂಗ್ ನ್ಯೂಸ್’ ನಿಮಗೆ ಹೇಳಲೇ ಬೇಕು. ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಬ್ಯಾನ್ ಮಾಡಲಾಗಿದೆ. ಲೀ ಕ್ವಾನ್ ಯೂ ಅವರ ನೇತೃತ್ವದಲ್ಲಿಈ ಕಾನೂನು ಜಾರಿಗೆ ಬಂದಿರೋದು 1992 ರಲ್ಲಿ. ಲಿಫ್ಟ್ ಬಟನ್, ಕೀಹೋಲ್ಸ್, ಬಸ್‌ಗಳಲ್ಲಿ, ಫುಟ್ ಪಾತ್ ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅದರಲ್ಲೂ ರೈಲುಗಳ ಸೆನ್ಸಾರ್ ಡೋರ್ ಗಳಲ್ಲಿ ಅಂಟಿಸಿ, ಅದೆಷ್ಟೋ ರೈಲು ಸೇವೆಯಲ್ಲೂ ಅಡ್ಡಿ ಆತಂಕಗಳು ನಿರ್ಮಾಣಗೊಂಡಿತ್ತು ಎಂಬ ವರದಿಯೂ ಇದೆ. ಇವುಗಳ ಕ್ಲೀನಿಂಗ್ ಕೂಡ ಅಷ್ಟೇ ದೊಡ್ಡ ಸಮಸ್ಯೆ ಆದ ಕಾರಣ, ಇಡೀ ದೇಶದಲ್ಲೇ  ಚೂಯಿಂಗ್ ಗಮ್ ನಿಷೇಧಿಸಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದ, ದಂತ ಅಥವಾ ನಿಕೋಟಿನ್ ಚೂಯಿಂಗ್  ಗಮ್ ಗಳನ್ನು ಉಪಯೋಗಿಸಲು ವಿನಾಯಿತಿ ನೀಡಲಾಗಿದೆ. ಅದು ಕೂಡ ವೈದ್ಯರು ಅಥವಾ ನೋಂದಾಯಿತ ಔಷಧಿಕಾರರಿಂದ ಮಾತ್ರ ಖರೀದಿಸಬಹುದಾಗಿದೆ.

ಸ್ವಚ್ಛ ನಗರ ಅಭಿಯಾನವನ್ನು ಮುಂದುವರಿಸುವ ಸಲುವಾಗಿ ಈಗಲೂ ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಬಿಸಾಕಬೇಕಿದ್ದ ವಸ್ತುಗಳನ್ನು, ತಿಂದು ಉಳಿದ ಆಹಾರಗಳನ್ನು ತಾವೇ ಸ್ವಚ್ಚಗೊಳಿಸುವಂತಹ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ.

ಒಟ್ಟಿನಲ್ಲಿ, ವಿವಾದ, ಟೀಕೆಗಳನ್ನು ಎದುರಿಸುತ್ತಾ ಸಿಂಗಾಪುರ ದೇಶವನ್ನು ಈ ಮಟ್ಟಕ್ಕೆ ತಲುಪುವಂತೆ ಮಾಡಿರುವುದು ಅದ್ಭುತ ವಿಚಾರ. ಬುಡ ಮಟ್ಟದಿಂದ  ನೆಲ, ಗಾಳಿ,  ನೀರು ಈ  ಮೂರು ವಲಯಗಳನ್ನು” ಅಭಿವೃದ್ದಿ” ಎಂಬ ಹಂತಕ್ಕೆ ತಲುಪಿಸೋದು ತಮಾಷೆಯ ಸಂಗತಿ ಅಲ್ವೇ ಅಲ್ಲ. ಅದರ ಹಿಂದೆ ಪಟ್ಟ ಶ್ರಮ, ತೊಡಗಿಸಿಕೊಳ್ಳುವ ಗುಣ, ದೇಶದ ಮೇಲಿನ ಪ್ರೀತಿ ಹಾಗೂ ಜನರ ವಿಶ್ವಾಸ ಗಳಿಸುವ ಪರಿ  ನಿಜಕ್ಕೂ ಗ್ರೇಟ್. ಕಷ್ಟಪಟ್ಟು ದುಡಿದ ಮಹಾನ್ ವ್ಯಕ್ತಿಗಳು. ಕಲಿಯೋದು ತುಂಬಾ ಇದೆ ಇವರಿಂದ…..

Leave a Reply