ಮಾಧವಿಯ ಕೊನೆಗಾಲದ ನಿರಾಳತೆಗೆ ಇನ್ನೂ ಮಾನಿನಿಯರು ಕಾಯಬೇಕಾಗಿದೆ..

ಮಾರಾಟದ ಸರಕಾದ ಮಾಧವಿ

ಆಶಾ ನಮ್ಮ ಗೆಳತಿಯರ ತಂಡದಲ್ಲಿ ಗಟ್ಟಿಗಾತಿ. ನಮ್ಮೆಲ್ಲರಿಗಿಂತ ನಾಲ್ಕು ವರ್ಷ ದೊಡ್ಡವಳಾದ ಅವಳ ಮಾತೆಂದರೆ ನಮಗೆಲ್ಲಾ ವೇದವಾಕ್ಯ.

ಕಾಲೇಜಿನಲ್ಲಿ ಸುಖಾಸುಮ್ಮನೆ ನಮ್ಮನ್ನು ಅಣಕಿಸುವ ಹುಡುಗರ ತಂಡ ಅವಳ ಒಂದೇ ಒಂದು ಕಿಡಿನೋಟಕ್ಕೆ ಬಾಲಮುದುರಿ ಓಡಿಹೋಗುತ್ತಿತ್ತು. ಹೀಗಿರುವ ಆಶಾ ನಮ್ಮೆಲ್ಲರಿಗಿಂತ ಮೊದಲು ಮದುವೆಯಾಗಿ, ಒಂದು ಮಗುವಿನ ತಾಯಿಯೂ ಆದಳು. ಅವಳನ್ನೂ, ಮಗುವನ್ನೂ ನೋಡಲು ನಾವೆಲ್ಲರೂ ಒಟ್ಟಿಗೆ ಅವಳ ತವರಿಗೆ ದಾಳಿಯಿಟ್ಟಿದ್ದೆವು.

ಎಳೆಯ ಬೊಮ್ಮಟೆಯಂತಹ ಮಗುವನ್ನು ಮುದ್ದಿಸುತ್ತ, “ಮಗುವಿನ ಅಪ್ಪ ಬಂದಿದ್ದರೇನು?” ಎಂದು ವಿಚಾರಿಸಿದೆವು. ಅದಕ್ಕವಳು ತಮಾಷೆಯಾಗಿ, “ಬರದೇ ಏನು? ಬಂದಿದ್ದರು. ದೂರದಿಂದಲೇ ದರ್ಶನ ಮಾಡಿ ಹೊರಟರು” ಎಂದು ನಕ್ಕಿದ್ದಳು.

ನಾವೆಲ್ಲ ಅವಳನ್ನು ಕೊಂಚ ಕೆಣಕಬೇಕೆಂದು, “ಯಾಕೆ ಹತ್ತಿರ ಬಿಟ್ಟುಕೊಳ್ಳಲಿಲ್ಲ?” ಎಂದು ಛೇಡಿಸಿದೆವು. ಅದಕ್ಕವಳು, “ಈಗಾಗಿರೋದೇ ಸಾಲದೇನು? ಈ ಮಗರಾಯ ಭೂಮಿಗಿಳಿಯುವಾಗ ಏಳು ಜನುಮಕ್ಕಾಗುವಷ್ಟು ನೋವು ತಿಂದಾಯ್ತು. ಮತ್ತೆ ಅದಕ್ಕೆಲ್ಲ ಅವಕಾಶವಿಲ್ಲ. ಹತ್ತಿರ ಬಂದರೆ ಕುತ್ತಿಗೆ ಒತ್ತಿ ಕೊಲ್ಲುತ್ತೇನೆ ಎಂದಿರುವೆ” ಎಂದು ಮಲಗಿದ್ದಲ್ಲಿಂದಲೇ ತನ್ನ ಪೌರುಷತನವನ್ನು ತೋರಿಸಿದ್ದಳು. ತಮಾಷೆಯೆಂದರೆ ಹಾಗೆಂದ ಆಶಾ ಮತ್ತೆರಡು ವರ್ಷಗಳಲ್ಲೇ ಮುದ್ದಾದ ಹೆಣ್ಣುಮಗುವೊಂದರ ತಾಯಿಯೂ ಆಗಿದ್ದಳು!

ಕುತೂಹಲಕ್ಕೆಬಂತೆ ಅಮ್ಮನಲ್ಲಿ ಕೇಳಿದರೆ ಅಮ್ಮ, “ಹೆರಿಗೆಯ ಸಂಕಟ ಕೂಡಾ ಸ್ಮಶಾನ ವೈರಾಗ್ಯದಂತೆ ಕ್ಷಣಿಕ ಕಣೆ. ಈಗ ನೋಡು, ಹೆಣವನ್ನು ಹೊತ್ತು ಸ್ಮಶಾನಕ್ಕೆ ಹೋಗಿ ಅಲ್ಲಿನ ವಿಧಿವಿಧಾನಗಳನ್ನೆಲ್ಲ ಪೂರೈಸಿ ಬರುತ್ತಾರಲ್ಲ, ಆಗವರೆಲ್ಲರೂ ಹೇಳುತ್ತಿರುತ್ತಾರೆ. ಈ ಬದುಕಿನಲ್ಲಿ ಇನ್ನೇನಿದೆ? ಎಲ್ಲ ಮೂರುದಿನದ ಬಾಳ್ವೆ. ಇರುವವರೆಗೆ ನಾನು, ನನ್ನದು ಎಂಬ ಹೋರಾಟ. ಒಮ್ಮೆ ಉಸಿರು ನಿಂತರೆ ದೇಹವೇ ಕೊರಡು ಅಂತೆಲ್ಲ.

ಮನೆಗೆ ಬಂದು ಸ್ನಾನ ಮಾಡಿ ಊಟಕ್ಕೆ ಕುಳಿತವರು ಸಾರಿಗೇನಾದರೂ ಉಪ್ಪು ಕಡಿಮೆಯಾಗಿದ್ದರೆ ಅಲ್ಲೇ ಶುರುಮಾಡುತ್ತಾರೆ, ‘ಸಾರಿಗೆ ಉಪ್ಪೇ ಇಲ್ಲ. ಹೇಗೆ ಉಣ್ಣೋದು?’ ಅಂತ. ಎಲ್ಲ ನಶ್ವರ ಎಂದವರಿಗೆ ನಾಲಿಗೆ ಮತ್ತೆ ಬದುಕಿನ ರುಚಿಯನ್ನು ಹತ್ತಿಸುತ್ತೆ. ಹಾಗಾಗಿ ಹಡೆದ ಸಂಕಟ ಮರೆತ ಹೆಣ್ಣು ಮತ್ತೆ ಕನ್ಯೆಯಾಗುತ್ತಾಳೆ. ಮತ್ತೆ ಇನ್ನೊಂದು ಹೆತ್ತು ತಾಯಾಗುತ್ತಾಳೆ. ಕನ್ಯೆಯಾಗದೇ ತಾಯಾಗಲು ಸಾಧ್ಯವಿಲ್ಲ” ಎಂದು.

ಆದರೆ ಮಾಧವಿಗೆ ಕನ್ಯೆಯಾಗುವುದು ಮತ್ತು ತಾಯಾಗುವುದರ ನಡುವೆ ಸಾವರಿಸಿಕೊಳ್ಳುವುದಕ್ಕೆ ಸಮಯವೆಂಬುದೇ ಇರಲಿಲ್ಲ. ತಾಯಾಗಿ ಬಾಣಂತನದ ಬೇಗೆ ಕಳಕೊಳ್ಳುವ ಮೊದಲೇ ಅವಳು ಇನ್ನೊಬ್ಬನೊಂದಿಗಿನ ಕೂಟಕ್ಕೆ ತಯಾರಾಗಬೇಕಿತ್ತು. ಯಾಕೆಂದರೆ ಅವಳ ದೇಹ ಅಕ್ಷರಶಃ ಮಾರಾಟವಾಗಿತ್ತು.

ಹಾಗೆಂದು ಮಾಧವಿ ಸಾಮಾನ್ಯ ಹೆಣ್ಣೇನೂ ಅಲ್ಲ. ಮಹಾರಾಜ ಯಯಾತಿಯ ಮಗಳು. ಅನುಪಮ ರೂಪವತಿ. ಅವಳ ರೂಪವೇ ಅವಳ ಚಿಕ್ಕಮ್ಮ ದೇವಯಾನಿಯ ಕಣ್ಣಿಗೆ ಮುಳ್ಳಾಗಿ ಚುಚ್ಚುತ್ತಿತ್ತು. ಹಾಗಾಗಿ ಅವಳು ಮನೆಯಿಂದ ಹೊರಗೆ ಬರುತ್ತಿದ್ದುದೇ ಅಪರೂಪ. ತನಗಾಗಿ ಮೀಸಲಾದ ಅರಮನೆಯಲ್ಲಿ ತನ್ನನ್ನು ಸಾಕಿದ ದಾಸಿಯೊಂದಿಗೆ, ತನ್ನ ಸಖೀ ಪರಿವಾರದೊಂದಿಗೆ ಅವಳಷ್ಟಕ್ಕೇ ಅವಳಿದ್ದಳು. ತಂದೆಯ ಬಗೆಗೂ ಅವಳಿಗೆ ಹೆಚ್ಚೇನೂ ತಿಳಿಯದು. ಅಲ್ಲೆಲ್ಲಿಯೋ ಹುಣ್ಣಿಮೆಯ ಬೆಳದಿಂಗಳಿನ ನದಿವಿಹಾರದಲ್ಲಿ ಚಿಕ್ಕಮ್ಮನೊಂದಿಗೆ ನಾವೆಯಲ್ಲಿ ನೋಡಿದ ನೆನಪು.

ಅಂತಹ ಅಪರೂಪದ ಅಪ್ಪ ಆ ದಿನ ಅವಳನ್ನು ರಾಜಸಭೆಗೆ ಕರೆದಿದ್ದ. ಅವನೊಂದಿಗೆ ಗಾಲವನೆಂಬ ಮುನಿಯೂ ಇದ್ದ. ವಿಶ್ವಾಮಿತ್ರರ ಶಿಷ್ಯನಂತೆ ಆತ. ತನ್ನ ಗುರುಕಾಣಿಕೆಗಾಗಿ ಅವನಿಗೆ ಬೇಕಾದದ್ದು ಎಂಟುನೂರು ಕುದುರೆಗಳು. ಅವೂ ಎಂಥವೆಂದರೆ ಇಡಿಯ ದೇಹ ಬಿಳಿಯಿದ್ದು, ಎಡಗಿವಿ ಮಾತ್ರ ಕಪ್ಪಾಗಿರುವ ಕುದುರೆಗಳು. ವಿಶ್ವಾಮಿತ್ರನಿಗೆ ಅಂತದ್ದೇ ಕುದುರೆ ಬೇಕೆನ್ನಲು ಕಾರಣಗಳೇನೂ ಇರಲಿಲ್ಲ.

ಶಿಷ್ಯನ ಸೊಕ್ಕನ್ನು ಸ್ವಲ್ಪ ಇಳಿಸುವ ಇರಾದೆಯಿತ್ತಷ್ಟೆ. ಈ ಚಿಗುರುಮೀಸೆಯ ಯುವಕ ಗಾಲವನಿಗೋ ಗುರುದಕ್ಷಿಣೆ ಸಲ್ಲಿಸಿ ಗುರುವಿನ ಮನಗೆಲ್ಲುವ ತವಕ! ಹೀಗೆ ಗುರುಶಿಷ್ಯರೀರ್ವರ ಪೈಪೋಟಿ ಗಾಲವನನ್ನು ಯಯಾತಿಯ ಬಳಿಗೆ ಕರೆತಂದಿತ್ತು. ಯಯಾತಿಗೋ ಉಭಯಪೇಚು ಈಗ. ಹೆಸರಿಗೆ ದೊಡ್ಡ ದೊರೆ, ಆದರೆ ಗಾಲವನಿಗೆ ನೀಡಲು ಕುದುರೆಗಳಾಗಲೀ, ಅದನ್ನು ಸಂಪಾದಿಸಬಲ್ಲ ಸಂಪತ್ತಾಗಲೀ ಇಲ್ಲ. ಭಂಡಾರವೆಲ್ಲ ಅವನ ಹುಚ್ಚಾಟಗಳಿಂದಲೇ ಬರಿದಾಗಿದೆ.

ಅವನ ಬಳಿಯಿರುವ ಅಮೂಲ್ಯ ಸಂಪತ್ತೊಂದನ್ನು ಬೊಟ್ಟಿಟ್ಟು ತೋರಿಸಿದ್ದಾಳೆ ದೇವಯಾನಿ. ಅವಳೇ ರಾಜಕುಮಾರಿ ಮಾಧವಿ! ರಾಜ ಬುದ್ದಿಯನ್ನು ವಿವೇಕದ ಕೈಗೆ ಕೊಡದೇ ಮಗಳನ್ನು ಗಾಲವನಿಗೆ ದಾನವಾಗಿ ನೀಡಿದ್ದಾನೆ, ಅದೂ ಕೂಡ ಕುದುರೆಯ ಸಂಪಾದನೆಗಾಗಿ ಅವಳನ್ನು ಬಳಸಬಹುದೆಂಬ ಒಡಂಬಡಿಕೆಯೊಂದಿಗೆ. ಹೇಗಿದೆ ನೋಡಿ ಮೂವರು ಗಂಡಸರ ವ್ಯವಹಾರ ಚಾಕಚಕ್ಯತೆ?

ಮಾಧವಿಯೀಗ ಮಾತಿಲ್ಲದಂತಾಗಿದ್ದಾಳೆ. ಮದುವೆಯ ಪ್ರಾಯಕ್ಕೆ ಬಂದ ತನಗೆ ತಂದೆ ಸ್ವಯಂವರವೇರ್ಪಡಿಸಬಹುದೆಂದು ಕಾಯುತ್ತಿದ್ದವಳಿಗೆ ತಂದೆಯಿಂದ ಸಿಕ್ಕಿದ್ದು ಇಂತಹ ಉಡುಗೊರೆ. ಅವಳು ಗಾಲವನೊಂದಿಗೆ ಕುದುರೆಗಳ ಸಂಪಾದನೆಗಾಗಿ ಹೊರಡುತ್ತಾಳೆ. ಅವಳನ್ನು ಮೊದಲು ಕೊಂಡಿದ್ದು ಅಯೋಧ್ಯೆಯ ದೊರೆ ಹರ್ಯಶ್ವ. ಒಂದು ವರ್ಷದ ಭೋಗದ ಬೆಲೆ ಕೇವಲ ಇನ್ನೂರು ಕುದುರೆಗಳು! ವರ್ಷವೊಂದರಲ್ಲವಳು ಅವನಿಗೆ ಗಂಡು ಸಂತಾನವನ್ನು ಹೆತ್ತುಕೊಡಬೇಕು.

ತನ್ನ ತಂದೆಗಿಂತಲೂ ವಯಸ್ಸಾದ ದೊರೆಯೊಂದಿಗೆ ಪಲ್ಲಂಗವೇರುವಾಗ ಅವಳ ಜೀವ ತಲ್ಲಣಿಸುತ್ತದೆ. ಆದರೆ ಅವಳ ದೇಹವೀಗ ಅವಳ ಸೊತ್ತಲ್ಲ. ಗಾಲವನ ಸಂಪತ್ತು. ಕಣ್ಮುಚ್ಚಿ ಎಲ್ಲವನ್ನೂ ಸಹಿಸುತ್ತಾಳೆ. ಗಂಡುಮಗುವೊಂದನ್ನು  ಹೆತ್ತು ತಾಯಿಯಾಗುತ್ತಾಳೆ. ಆದರೆ ಮಗುವಿಗೆ ಹಾಲುಣಿಸಲು ಬಿಡುವಷ್ಟು ಪುರುಸೊತ್ತು ಗಾಲವನಿಗೆಲ್ಲಿದೆ? ಅವಳನ್ನು ಕರೆದುಕೊಂಡು ಮುಂದಿನ ಕುದುರೆಗಳ ಬೇಟೆಗೆ ಹೊರಟೇಬಿಟ್ಟ. ಬಾಣಂತನದ ಆಯಾಸದಿಂದ ಕಂಗೆಟ್ಟಳು ಮಾಧವಿ. ಜ್ವರಹಿಡಿದು ಕಣ್ಣುಕತ್ತಲೆ ಬಂದು ಬಿದ್ದಳು. ಋಷಿಪತ್ನಿ ವೇದವತಿ ಬೇರುನಾರುಗಳ ಕಷಾಯಗಳಿಂದ ಉಪಚರಿಸಿ ಅವಳ ಎದೆಯ ಹಾಲಿಂಗಿಸಿದಳು. ಬಾಣಂತನದ ಬೇಗೆ ಕಳೆದಳು. ಮಾಧವಿ ಮತ್ತೆ ಕನ್ಯೆಯಾದಳು.

ಗಾಲವ ಬಯಸಿದ್ದೂ ಅದನ್ನೆ. ಮತ್ತೆ ಅವಳನ್ನು ಕಾಶಿಯ ರಾಜ ದಿವೋದಾಸನಿಗೆ ಒಪ್ಪಿಸಿ ಇನ್ನೂ ಇನ್ನೂರು ಕುದುರೆಗಳನ್ನು ಪಡೆದುಕೊಂಡ. ಭೋಜದೇಶದ ದೊರೆ ಉಶೀನರನಿಗೆ ಅವಳನ್ನೊಪ್ಪಿಸಿ ಮತ್ತೆ ಇನ್ನೂರು ಕುದುರೆಗಳನ್ನು ಪಡೆದುಕೊಂಡ. ಮಾಧವಿಗೆ ತಾಯಿಯಾದರೂ ಪುನಃ ಕನ್ಯೆಯಾಗುವ ವರವಿದೆಯೆಂದು ಹೇಳಿ ಅವರನ್ನೆಲ್ಲ ನಂಬಿಸಿದ. ಪುರುಷರಿಗೆ ಬೇಕೆನಿಸಿದಾಗಲೆಲ್ಲ ಹೆಣ್ಣು ಕನ್ಯೆಯಾಗಿಬಿಡುವುದು ಪುರಾಣಗಳಲ್ಲಿ ಸಾಮಾನ್ಯ ತಾನೆ?

ಮಾಧವಿ ತನ್ನೊಳಗೇ ನಗುತ್ತಿದ್ದಳು, “ವೇದವತಿ ಎದೆಯ ಹಾಲಿಂಗಿಸುವ ಉಪಾಯ ತಿಳಿಸದಿದ್ದರೆ ಋಷಿಯ ವರದ ಅಸಲಿಯತ್ತು ಹೊರಬೀಳುತ್ತಿತ್ತು” ಎಂದು. ಅವಳಿಗೀಗ ಮೈಮನಗಳೆಲ್ಲ ಮರಗೆಟ್ಟು ಹೋಗಿವೆ. ಯಾವ ಸಂವೇದನೆಗೂ ದೇಹ ಪ್ರತಿಕ್ರಿಯಿಸದಷ್ಟು ಜಡವಾಗಿದ್ದಾಳೆ ಅವಳು. ನಿಜಕ್ಕೂ ಗಾಲವನೀಗ ಬಸವಳಿದಿದ್ದಾನೆ. ಇನ್ನೂ ಇನ್ನೂರು ಕುದುರೆಗಳನ್ನು ಅವನು ಸಂಪಾದಿಸಲಾರ. ವಿಶ್ವಾಮಿತ್ರನಿಗೆ ಮಾತು ಕೊಡುವಾಗಿನ ಉತ್ಸಾಹ ಈಗ ಅವನಲ್ಲಿ ಉಳಿದಿಲ್ಲ. ಅವನ ಕಾಲುಗಳೀಗ ಹೆಜ್ಜೆ ಕೀಳದಂತಾಗಿವೆ. ಹೆಣ್ಣು ಕಷ್ಟವನ್ನು ಸಹಿಸಿ, ಸಹಿಸಿ ಗಟ್ಟಿಯಾಗುತ್ತಾಳೆ. ಗಂಡು ಅವಳನ್ನು ನೋಯಿಸಿ, ಸೋಯಿಸಿ ಬಳಲುತ್ತಾನೆ. ಅವನು ಮತ್ತೆ ವಿಶ್ವಾಮಿತ್ರನಲ್ಲಿಗೆ ತೆರಳುವ ನಿರ್ಣಯ ಮಾಡಿದ್ದಾನೆ.

ವಿಶ್ವಾಮಿತ್ರ ಮುನಿಯ ಬಗ್ಗೆ ಮಾಧವಿಯೂ ಕೇಳಿದ್ದಾಳೆ. ಕೋಪ ಹೆಚ್ಚಾದರೂ ವಿವೇಕಿ ಅವರು ಎಂದುಕೊಂಡಿದ್ದಾಳೆ. ಶಿಷ್ಯನ ಹುಚ್ಚಾಟಕ್ಕೆ ಅವರು ಖಂಡಿತ ಕಡಿವಾಣ ಹಾಕುವರೆಂಬ ನಂಬಿಕೆ ಅವಳಿಗೆ. ತಾನೇ ಗಾಲವನಿಗಿಂತ ಮುಂದೆ ನಡೆಯುತ್ತಿದ್ದಾಳೆ. ಆದರೆ ಅವಳ ಕನಸಿನ ಹಕ್ಕಿಗೆ ಋಷಿಯ ಮಾತಿನ ಬಾಣದ ಮೊನೆ ತಗುಲುತ್ತದೆ. ಇಂತಹ ರೂಪಸಿಯನ್ನು ನಾಲ್ಕು ವರ್ಷಗಳ ಹಿಂದೆಯೇ ತನಗೊಪ್ಪಿಸಿದ್ದರೆ ಕುದುರೆಗಳನ್ನೇ ಬಯಸುತ್ತಿರಲಿಲ್ಲ ಎಂದು ಅವಳನ್ನು ಆಸೆಗಣ್ಣಿನಿಂದ ನೋಡುತ್ತಾನೆ ವಿಶ್ವಾಮಿತ್ರ. ಇಲ್ಲಿಯೂ ಮಾಧವಿಯ ದೇಹವೇ ಪ್ರಧಾನವಾಗಿ, ಅವಳ ಭಾವಗಳು ಮತ್ತೆ ಜೀವ ಕಳೆದುಕೊಳ್ಳುತ್ತವೆ. ಯಥಾಪ್ರಕಾರ ಋಷಿಯಿಂದಲೂ ಮತ್ತೊಬ್ಬ ಕುಮಾರನನ್ನು ಪಡೆದು ಕುದುರೆಯ ಸಾಲವನ್ನು ತೀರಿಸುತ್ತಾಳೆ ಮಾಧವಿ. ಮತ್ತೀಗ ಅವಳು ಗಾಲವನದೇ ಸೊತ್ತು.

ಗಾಲವ ಈಗವಳನ್ನು ಸರಿಯಾಗಿ ದಿಟ್ಟಿಸುತ್ತಾನೆ. ಅವಳು ಮುದುಕಿಯಂತಾಗಿದ್ದಾಳೆ. “ಮತ್ತೆ ವೇದವತಿಯ ಕಷಾಯ ಕುಡಿದು ಕನ್ಯೆಯಾಗಬಾರದೆ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಮಾಧವಿ ತಣ್ಣಗೆ ನುಡಿಯುತ್ತಾಳೆ, “ನಿನ್ನ ಸಾಲ ತೀರಿತಲ್ಲ ಗಾಲವ.” ಅವಳಿಗೆ ಮತ್ತೆ ಕನ್ಯೆಯಾಗಲು ಮನಸ್ಸಿಲ್ಲ. ಏಕೆಂದರೆ ಕನ್ಯೆಯಾದರೆ ಮತ್ತೆ ತಾಯಿಯಾಗುವ ಅನಿವಾರ್ಯತೆ ಅವಳಿಗೊದಗುವುದೆಂಬ ಸತ್ಯ ಅವಳಿಗೆ ತಿಳಿದಿದೆ. ಗಾಲವನೂ ಗಂಡೇ ತಾನೆ?

ಮುದುಕಿಯಂತಿರುವ ಹೆಣ್ಣು ಯಾರಿಗೆ ತಾನೆ ಬೇಕು? ತಂದೆ ಯಯಾತಿಗೆ ತಂದೊಪ್ಪಿಸಿದ ಗಾಲವ. ದೇವಯಾನಿಯ ಕಣ್ಣಿಗೀಗ ಅವಳ ರೂಪು ಚುಚ್ಚುತ್ತಿಲ್ಲ, ಆದರೆ ಅವಳ ಇರವು ಚುಚ್ಚುತ್ತದೆ. ಸ್ವಯಂವರದ ಏರ್ಪಾಡು ಮಾಡಲು ಹೇಳುತ್ತಾಳೆ. ಮಾಧವಿ ಮನದೊಳಗೇ ನಗುತ್ತಾಳೆ. ನಾಲ್ಕು ಹೆತ್ತವಳಿಗೆ ಸ್ವಯಂವರ! ಯಯಾತಿಯ ಭಂಡಾರವೀಗ ತುಂಬಿದೆ. ಚಿನ್ನಾಭರಣಗಳಿಂದ ಮುಚ್ಚಿದರೆ ದೇಹಕ್ಕಾದ ವಯಸ್ಸು ಕಾಣಿಸದು. ಋಷಿಯ ವರದ ಕಥೆಯಂತೂ ಖಂಡಿತ ನೆರವಿಗೆ ಬರುವುದು. ಸ್ವಯಂವರಕ್ಕೆ ವರಗಳಿಗೇನು ಬರ? ಸಾಲು ಸಾಲು ರಾಜಕುಮಾರರು ರಾಜಸಭೆಯೊಳಗೆ ನೆರೆದಿದ್ದಾರೆ. ಹೂಮಾಲೆ ಹಿಡಿದು ಮಾಧವಿಯನ್ನು ಮಂಟಪಕ್ಕೆ ಕರೆತರಲಾಗಿದೆ. ಹಾರವನ್ನು, ತನ್ನಾಭರಣಗಳನ್ನೂ ಕಳಚುತ್ತಾ ಮಾಧವಿ ನುಡಿಯುತ್ತಾಳೆ.

“ನಾನು ನಾಲ್ಕು ಮಕ್ಕಳ ತಾಯಿ. ಮತ್ತೊಮ್ಮೆ ನಿಮ್ಮೆಲ್ಲರ ಒತ್ತಾಯಕ್ಕೆ ಕನ್ಯೆಯಾಗಲಾರೆ. ನಿಮ್ಮನ್ನು ಮೋಹಿಸಬಲ್ಲ ರೂಪವಾಗಲೀ, ಮನಸ್ಥಿತಿಯಾಗಲೀ ನನ್ನಲ್ಲಿಲ್ಲ. ನಾನು ಒಂಟಿಬದುಕನ್ನೇ ಪ್ರೀತಿಸುತ್ತೇನೆ. ಪುರುಷನನ್ನು ಸಂಗಾತವಿಲ್ಲದೆಯೂ ಹೆಣ್ಣಿಗೆ ಒಂದು ಜೀವನವಿದೆಯೆಂದು ಸಾಬೀತುಪಡಿಸುತ್ತೇನೆ”

ಮಾಧವಿ ತನ್ನೆಲ್ಲ ಅಲಂಕಾರವನ್ನೂ ಬದಿಗಿಟ್ಟು ಕಾಡಿನ ದಾರಿ ಹಿಡಿದಿದ್ದಾಳೆ. ಸ್ವಯಂವರ ಏರ್ಪಡುವ ಮೊದಲೇ ಅದನ್ನು ನಿರಾಕರಿಸಬಹುದಿತ್ತೇನೋ? ಆದರೆ ಅವಳಿಗೆ ಅವಳ ಒಳಗನ್ನು ಪುರುಷವರ್ಗದೆದುರು ತೆರೆದಿಡುವ ಅಗತ್ಯವಿತ್ತು. ಅದಕ್ಕೆಂದೇ ಸ್ವಯಂವರಮಂಟಪವನ್ನವಳು ವೇದಿಕೆಯಾಗಿಸಿಕೊಂಡಿದಾಳೆ. ಮದುವೆಯಾಗಲು ಬಂದ ವರಮಹಾಶಯರು ಪೆಚ್ಚುಮೋರೆ ಹಾಕಿ ಹಿಂದಿರುಗಿದ್ದಾರೆ. ಕನ್ಯಾದಾನದ ಪುಣ್ಯ ಕೈಜಾರಿ ಹೋದುದಕ್ಕೆ ದೇವಯಾನಿ ಮತ್ತು ಯಯಾತಿ ಕೈಕೈಹಿಸುಕಿಕೊಂಡಿದ್ದಾರೆ. ಇವೆಲ್ಲವೂ ಆಗಲೇಬೇಕಿತ್ತು ಅನಿಸಿತು ಮಾಧವಿಗೆ.

ಅವಳಿಗೆ ಒಂದಾದರೂ ಮಗು ಬೇಕಿತ್ತು. ಗಂಡು ಸಂತಾನವೇ ಇಲ್ಲದ ಹರ್ಯಶ್ವನಿಂದ ಅದನ್ನವಳು ಅಪೇಕ್ಷಿಸುವಂತಿರಲಿಲ್ಲ. ದಿವೋದಾಸನ ಹೆಂಡತಿಯಂತೂ ಮಗು ಇವಳ ಹೊಟ್ಟೆಯಲ್ಲಿರುವಾಗಲೇ ತನ್ನ ಮಗುವದು ಎಂಬ ಅಧಿಕಾರ ಸ್ಥಾಪಿಸಿದ್ದಳು. ಆದರೆ ಉಶೀನರನಿಗೆ ಅದಾಗಲೇ ಗಂಡುಮಕ್ಕಳಿದ್ದರು. ನನ್ನೊಂದಿಗಿರುವಾಗಲೇ ಇನ್ನೂ ಕೌಮಾರ್ಯ ದಾಟಿರದ ರಾಜಕುಮಾರಿಯನ್ನು ಮದುವೆಯಾಗಿ ಬಂದಿದ್ದ.

ಅವನಿಗೆ ಹುಟ್ಟಿದ ಮಗುವಾದರೂ ತನಗೆ ಸಿಗಬಹುದೆಂಬ ನಿರೀಕ್ಷೆಯಿತ್ತು ಅವಳಿಗೆ. “ಬೆಳೆವ ಭೂಮಿ ಪೈರಿನ ಒಡೆತನವನ್ನು ಬಯಸಲಾಗದು. ಅದೆಂದಿದ್ದರೂ ಬಿತ್ತಿದವನ ಸೊತ್ತು” ಎಂಬ ದಾಷ್ಟ್ರ್ಯದ ಮಾತನ್ನಾಡಿ ನಿರಾಕರಿಸಿದ್ದಾನೆ ಉಶೀನರ. ಅವರೆಲ್ಲರ ಕಥೆಯಂತಿರಲಿ, ಆಶ್ರಮವಾಸಿ ವಿಶ್ವಾಮಿತ್ರರಿಗೂ ಮಗುವಿನ ಮೋಹವೆ! ತನ್ನ ಮಗನನ್ನು ಸರ್ವಶಾಸ್ತ್ರ ಪರಿಣಿತನಾದ ಮಹಾಋಷಿಯನ್ನಾಗಿಸುವ ಹಂಬಲ ಅವರಿಗೆ. ಮಗುವಿನ ಮೋಹವನ್ನೂ ತೊರೆದಳು ಮಾಧವಿ. ರಾಜ್ಯದ ಸಾಮಾನ್ಯರ ಗೊಡವೆಯಿಲ್ಲ ಅವಳಿಗೆ. ‘ಮಹಾನ್ ತಪಸ್ವಿಯಾಗಲು ದೀಕ್ಷಾಬದ್ಧಳಾಗಿ ತೆರಳಿದಳು ಮಾಧವಿ’ ಎಂದು ಅವರನ್ನೆಲ್ಲ ನಂಬಿಸಲಾಗುತ್ತದೆಯೆಂದು ಅವಳಿಗೆ ಗೊತ್ತು.

ಸುತ್ತಲಿನ ಹಸಿರು ಸೆಳೆಯಿತು ಅವಳನ್ನು. ಭೂಮಾತೆಯ ಸಂಗಾತ ಹಿತವೆನಿಸಿತು ಅವಳಿಗೆ. ಬೇಕೆನಿದಾಗ ಬೇಕಾದ್ದನ್ನು ಬಿತ್ತುತ್ತ, ಭಿತ್ತವೊಂದು ಮೊಳಕೆಯೊಡೆದು ಗಿಡವಾಗಿ, ಹಸಿರಾಗಿ, ಹೂವಾಗಿ, ಹಣ್ಣಾಗಿ ನಳನಳಿಸುವುದನ್ನು ನೋಡಿ ಆನಂದಿಸುತ್ತಾ ಅವಳು ಮೈಮರೆಯುತ್ತಿದ್ದಳು. ತನ್ನ ಸುತ್ತಿದ ಭವದ ಬಂಧನವ ತೊಡೆದ ಪುರಾಣದ ಮೊದಲ ಹೆಣ್ಣಾಗಿ ತನ್ನ ಹೆಜ್ಜೆ ಮೂಡಿಸಿದಳು.

ಆಧುನಿಕತೆ ನಮ್ಮ ಬದುಕಿಗೆ ಬೆಡಗು ಮೂಡಿಸುತ್ತಿರುವಂತೆ, ಹೆಣ್ಣಿಗೆ ಉರುಳಾಗಿಯೂ ಸುತ್ತಿಕೊಂಡಿದೆ. ಸುಖಾಸುಮ್ಮನೆ ಹೆಣ್ಣನ್ನು ಹೊಟ್ಟೆಯೊಳಗೇ ಚಿವುಟಿ ಎಸೆದ ಮೇಲ್ವರ್ಗದ ಗುಂಪಿಂದು ವಧುಗಳ ಬೇಟೆಗಾಗಿ ಎಲ್ಲೆಂದರಲ್ಲಿ ತನ್ನ ಬಲೆಯನ್ನು ಬೀಸುತ್ತಿದೆ.  ಅಂತಹ ಶ್ರೀಮಂತರು ನಮ್ಮಂತವರ ಮನೆಯ ಹೆಣ್ಣನ್ನು ಬಯಸುವುದೆಂದರೆ ಎಂಬ ದಿಗಿಲಿನೊಂದಿಗೆ ಇನ್ನೂ ಹದಿನೆಂಟು ತುಂಬದ ಕುವರಿಯರು ಸುಳ್ಳು ದಾಖಲೆಯೊಂದಿಗೆ ಮಾಧವಿಯರಂತೆ ಮಾರಾಟವಾಗುತ್ತಿದ್ದಾರೆ.

ಪ್ರತಿಷ್ಠೆ, ರಾಜಕೀಯದ ಒಳಸುಳಿ, ವ್ಯವಹಾರದ ನೆಪದಲ್ಲಿಯೂ ಸ್ವಯಂವರಗಳು ನಡೆಯುತ್ತಲೇ ಇವೆ. ಹಣಕ್ಕಾಗಿ ಮಗುವನ್ನು ಹೆತ್ತು ಹೆರವರ ಕೈಗಿಟ್ಟು ಎದೆಹಾಲು ಇಂಗಿಸಿಕೊಳ್ಳುವ ಬಾಡಿಗೆ ತಾಯಂದಿರೂ ಬದುಕಿದ್ದಾರೆ. ನಿರಾಕರಿಸಲಾರದ ಎಷ್ಟೊಂದು ಬಂಧಗಳು ಹೆಣ್ಣಿನ ಸುತ್ತಲೂ. ಬಿಚ್ಚಿ ಹೊರಬಂದರೆ ಕೆಕ್ಕರಿಸುವ ನೋಟಗಳು! ಮಾಧವಿಯ ಕೊನೆಗಾಲದ ನಿರಾಳತೆಗೆ ಇನ್ನೂ ಮಾನಿನಿಯರು ಕಾಯಬೇಕಾಗಿದೆ.

Leave a Reply