ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..

ಕಾಜೂರು ಸತೀಶ್

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..
ಎಲ್ಲ ಕಳಕೊಂಡ ಕಾಡು ನಡೆದುಬಂದಿರಬಹುದು ಕಂಬಗಾಲುಗಳಲ್ಲಿ
ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿಹಾಕಿ
ಹಿಂತಿರುಗಿಸುತ್ತಿರಬಹುದು ಯಾರೋ ಮರೆತುಬಂದ ಗರಗಸವನ್ನು.

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ…
ಈ ಧ್ಯಾನಸ್ಥ ಅಮಾಯಕ ಮರಕ್ಕಾಗಿ
ಆಕಾಶ ಭೂಮಿಗಳ ನಡುವೆ ಪೈಪೋಟಿ ಎದ್ದಿರಬಹುದು
ಪಾಪದ ಮರ ಅಹುದಹುದೆಂದು ತಲೆಯಾಡಿಸುತ್ತಿರಬಹುದು ಎರಡೂ ಕಡೆಗೂ.

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..
ಕತ್ತಲಿಗೆ ಕಣ್ಣುಮೊಳೆತು ಬೀದಿಗಿಳಿದಿರಬಹುದು.
ಹೆಣಗಾಡುತಿರಬಹುದು ನಾಳಿನ ಸೂರ್ಯನ ಕಣ್ಣುಮುಚ್ಚಲು
ಮನೆಯಂಗಳಕೆ, ಬಾಗಿಲಿನ ಚಿಲಕಕೆ ದಾರಿ ತೋರುತಲಿರಬಹುದು.

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..
ಉಗುರಿನ ಮೇಲೊಂದು ಗೀಟುಹಾಕುವ ಕಾಲ ಬಂದಿರಬಹುದು
ಮೂಗಿಗೆ ಹುಳಿಹುಳಿ, ಕಿವಿಗೆ ಪರಪರ, ಕಣ್ಣಿಗೆ ಕಿಲಕಿಲ
ಉಣಿಸಲು ಬರುತಿರಬಹುದು.

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..
ಗಂಧ ತೇಗ ಬೀಟೆಗಳೆಲ್ಲ
ತೆರಳಿರಬಹುದು ವಾಯುವಿಹಾರಕ್ಕೆ ಮಂಕುಮಂಕಾಗಿ
ಅವೆಲ್ಲ ಸೇರಿ ಧಣಿಗೆ ಖಾದಿ ಉಡಿಸುತಿರಬಹುದು.

2 comments

Leave a Reply