ನನಗೊಬ್ಬ ರಂಗ ಸಂಗಾತಿ ಸಿಕ್ಕಿದ..

‘ಐಲ್ಯಾಂಡ್’ ನಾಟಕ ದ ನಂತರ ನನ್ನ ಮನೆ ರೂಟೂ ಬzಲಾಯ್ತು.

ಚೂರು ದೂರ ಆದ್ರೂ ಪರವಾಗಿಲ್ಲ ಅಂತ ಹಾಲ್ ನ ಎದುರಿಗಿಂದ್ಲೇ ಸ್ಕೂಟ್ರು ಓಡತೊಡಗ್ತು. ದಿನಾ ಸಂಜೆ ಹಾಲ್ ಕಡೆ ಒಂದು ಇಣುಕು. ‘ಏನಾದ್ರೂ ಇದೆಯಾ’ ಅಂತ ಕುತೂಹಲ.

ಸುಮಾರು ದಿನಗಳಾದವು. ಯಾವ ಚಟುವಟಿಕೆ ಲಕ್ಷಣಗಳೂ ತೋರ್ತಿರ್ಲಿಲ್ಲ. ಈ ಮಧ್ಯೆ ಎರ್ನಾಕುಲಂ ನಲ್ಲಿ ‘ಕೇರಳ ಮೆಟ್ರೋ’ ಕಾಮಗಾರಿ ಸುರುವಾಯ್ತು. ನಾನೂ ‘ ಬ್ಯುಸಿ’ ಆಗ್ಬಿಟ್ಟೆ.ದಿನಾ ಅಲ್ಲಿಗೇ ಓಡಾಟ, ಮೀಟಿಂಗು…..

ಇಂಥ ದಿನಗಳಲ್ಲಿ ನನಗೆ ಸಿಕ್ಕವನೇ ‘ ಉಣ್ಣಿ’ ಉರ್ಫ್ ‘ಉನ್ನಿಕೃಷ್ಣನ್. ಈತನ ಭೆಟ್ಟಿಯೂ ಓಂಥರಾ ಅಚಾನಕ್ಕೇ. ನಾನು ತಿಂಡಿಗೆ ಹೋಗ್ತಿರೋ ಹೋಟ್ಲಿನ ಮಲಯಾಳಂ ಪೇಪರ್ ನಲ್ಲಿ ಒಂದಿನ ಒಂದು ನಾಟಕದ ಜಾಹೀರಾತು ಕಣ್ಣಿಗೆ ಬಿತ್ತು. ನನಗೆ ಹರುಕು ಮುರುಕು ಮಲಯಾಳಂ ಮಾತಡೋಕೆ ಬರ್ತಿತ್ತು ಹೊರತು ಓದೋಕೆ ಬರ್ತಿರ್ಲಿಲ್ಲ.

ಗಲ್ಲೀ ಮೇಲೆ ಕೂತ ಆಸಾಮಿನ ಕೇಳ್ದೆ. ಆತ “ನಿಮಗೆ ಸರಿಯಾದ ವ್ಯಕ್ತೀನೇ ತೋರಿಸ್ತೀನಿ” ಅಂದೋನೇ ‘ ಉಣ್ಣೀ’ ಅಂತ ಕೂಗ್ದ. ನನಗೂ ಇದೊಂಥರಾ ವಿಚಿತ್ರ ಹೆಸ್ರಲ್ಲಪ್ಪಾ, ಇವನೆಂಥ ಅಸಾಮಿಯೋ ಎನ್ನೋ ಕುತೂಹಲ. ಸ್ವಲ್ಪ ಹೊತ್ನಲ್ಲೇ ಕುರುಚಲು ಗಡ್ಡದ, ಬಿಳೀ ಲುಂಗಿ ಉಟ್ಕೊಂಡು, ಕೆಂಪಂಗಿ ಹಾಕ್ಕೊಂಡ ‘ಉಣ್ಣಿ’ ಪ್ರತ್ಯಕ್ಷನಾದ. ‘ಪರವೂರು ಉನ್ನಿಕೃಷ್ಣನ್’ ಸಾಹುಕಾರನ ಬಾಯಲ್ಲಿ ‘ಉಣ್ಣಿ’ ಯಾಗಿಬಿಟ್ಟಿದ್ದ.

ಓ.. ಈತ ನಾನು ದಿನಾ ನೋಡೋ ಆಸಾಮೀನೇ. ಅದೇ ಹೋಟೆಲ್ ನಲ್ಲಿ ವೇಟರ್. ‘ ನೋಡಿಲ್ಲಿ, ಕರ್ನಾಟದೋರು, ನಿಂತರಾನೆ ನಾಟಕದ ಹುಚ್ಚು ಅನ್ಸತ್ತೆ’ ಅಂತ ಪರಿಚಯ ಮಾಡಿಸ್ದ.

‘ಉಣ್ಣಿ’ ಥಟ್ಟನೆ ಖುಶಿಯಾಗ್ಬಿಟ್ಟ. “ಸಾರ್ ನಾನೂ ಮೈಸೂರಲ್ಲಿದ್ದೆ ಸಾರ್” ಅಂತ ಸುರು ಮಾಡೇ ಬಿಟ್ಟ. ಮೈಸೂರನ್ನ ಕಂಡಾಪಟ್ಟೆ ಹೊಗಳಿದ. ”ನೀವೆಲ್ಲಿಯವರು ಸಾರ್” ಅಂತ ಫೂರ್ವಾಪರನೆಲ್ಲ ವಿಚಾರಿಸ್ಕೊಂಡ. ”ಓ ಮುರಡೇಶ್ವರ, ಕೊಲ್ಲೂರು.. ಎಂಥ ಜಾಗಗಳು ಸರ್ ಅವು” ಅಂತ ಸರ್ಟಿಫಿಕೇಟ್ ಕೊಟ್ಟ.

“ನನಗೂ ನಾಟಕದ ಹುಚ್ಚು ಸರ್, ಎಲ್ಲೆ ಇದ್ರೂ ಓಡ್ತೀನಿ. ನಾನೂ ತುಂಬಾ ನಾಟಕಗಳಲ್ಲಿ ಪಾತ್ರ ಮಾಡಿದ್ದೆ” ಅಂತ ಸುದ್ದಿ ಸುರುಮಾಡಿದ. ಸರ್, ನೀವೇನೂ ಚಿಂತೆ ಮಾಡ್ಬೇಡಿ, ಇಲ್ಲಿ ಪಕ್ದಲ್ಲಿ ಎಲ್ಲೇ ನಾಟ್ಕ ಇದ್ರೂ ಕರ್ಕೊಂಡ್ ಹೋಗ್ತೀನಿ” ಅಂತ ಆಶ್ವಾಸನೇನೂ ಕೊಟ್ಟ. “ಇವತ್ ಸಂನೇ ನಾಟ್ಕ ಇದೆ ಹೋಗೋಣ” ಅಂತ ಫಿಕ್ಸ್ ಮಾಡಿಯೂ ಬಿಟ್ಟ.

ನನಗಂತೂ ಸಿಕ್ಕಾಪಟ್ಟೆ ಖುಶಿಯಾಗಿತ್ತು. ನನಗೊಬ್ಬ ‘ರಂಗಸ್ನೇಹಿತ’ ದೊರಕ್ಬಿಟ್ಟಿದ್ದ. ಮುಂದೆ ನಾನು ಆಲುವಾದಲ್ಲಿ ಇರೋವರೆಗೂ ಅವನೇ ನನ್ನ ‘ ರಂಗಭೂಮಿ ಇನ್ಫಾರ್ಮರ್’. ರಂಗ ಸಂಗಾತಿ.

ನಾನು, ಉಣ್ಣಿ ನೋಡಿದ ಮೊದಲ ನಾಟಕ ‘ಸಾವಿತ್ರಿಕುಟ್ಟಿ’ ಕೇರಳದ ಪ್ರತಿಷ್ಠಿತ ಅಮೆಚೂರ್ ತಂಡ ‘ಅಭಿನಯ’ದ ನಿರ್ಮಾಣ. ಒಂದು ಸೋಲೋ. ಹೆಸರಾಂತ ನಿರ್ದೇಶಕ ರಘೋತ್ತಮನ್ ಈ ನಾಟಕದ ನಿರ್ದೇಶಕ. ಸ್ಮಿತಾ ಅಂಬು ‘ಸಾವಿತ್ರಿಕುಟ್ಟಿ’.
ಭೌತಿಕ ಬದುಕಿನೊಂದಿಗೆ ಹೆಣಗ್ತಾ, ದಿನಾ ನೋವು ಅನುಭವಿಸ್ತಾ, ನಿರಂತರ ಒತ್ತಡದಿಂದ ಗಲಿಬಿಲಿಗೊಳ್ತಾ, ಮತ್ತು ಆ ಕಾರಣಕ್ಕೇ ‘ಮಳ್ಳಿ’ ಅನಿಸಿಕೊಳ್ತಿರೋ ಹೆಣ್ಣೊಬ್ಬಳ ಒಂದು ದಿನದ ಕಥೆಯಿದು. ಇಂಥ ಒತ್ತಡದ ಬದುಕಿನಲ್ಲೇ ತನ್ನನ್ನು ಸಂಭಾಳಿಸಿಕೊಳ್ತಾ ತಾನೇ ಸಾಂತ್ವನ ಹೇಳಿಕೊಳ್ಳೋ ಆಕೆ ಮನೆಯ ಎಲ್ಲರ ಕೆಲಸಕ್ಕೂ ಬೇಕಾಗಿ, ಯಾರಿಗೂ ಬೇಡದವಳಾಗಿಬಿಡೋ ದುರಂತದ ದಿನಚರಿ ಇದು.

ಇಂಥ ಒಂದು ಸಂಕೀರ್ಣ ಪಾತ್ರವನ್ನ ನಟಿ ಸ್ಮಿತಾ ಅಂಬು ತುಂಬ ಸಂಯಮದಿಂದ ಮತ್ತು ಅಷ್ಟೇ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದ್ರು.
ಸರಿಸುಮಾರು ಇದೇ ವಸ್ತುವಿನ ನಾಟಕಗಳನ್ನ ‘ರಂಗಾಯಣ’ ದಲ್ಲಿ ನೋಡಿದ ನೆನಪು.

ದಾರಿಯೋ ಫೋ ನ ಸ್ವಗತವನ್ನಾಧರಿಸಿ ಲಕ್ಷ್ಮಿ ಚಂದ್ರಶೇಖರ್ ‘ಎದ್ದೇಳು’ ಅನ್ನೋ ಚಿಕ್ಕ ಸೋಲೋ ಮಾಡಿದ್ರು, ಪರಂಪರೆ ಮತ್ತು ಆಧುನಿಕ ಬದುಕಿನೊಂದಿಗೆ ತಾಕಲಾಡೋ ಹೆಣ್ಣಿನ ದಿನಚರಿ ಅದು. ಇಲ್ಲಿಯೂ ಕೂಡ ಹಾಸ್ಯದ ಕೋಟಿಂಗ್ ಇಟ್‍ಕೊಂಡು ’ಫೋ’ ದುರಂತದ ಗುಳಿಗೆ ಕೊಡ್ತಾನೆ.

ಬೆಳಿಗ್ಗೆ ಬೇಗನೇ ಎದ್ದು ಉಸಿರುಹಿಡಿದುಕೊಂಡು ಚಕ ಚಕನೆ, ಗಡಿಬಿಡಿ ಮಾಡ್ತಾ, ಮುಂಜಾನೆಯ ಕೆಲಸಗಳು, ಮಕ್ಮಳನ್ನ ಶಾಲೆಗೆ ಕಳಿಸೋ, ತಾನು ಆಫೀಸಿಗೆ ಹೋಗೋ ಸಿದ್ಧತೆ ಮಾಡೋ ಹೆಣ್ಣು ಮಗಳು ಇನ್ನೇನು ಕೆಲಸಕ್ಕೆ ಹೊರಡ್ಬೇಕು ಅನ್ನೋವಾಗ ಗೊತ್ತಾಗತ್ತೆ, ಅದು sunday.

ರೂಪಾ ಗಂಗೂಲಿ ಕೂಡ ಹಿಂದಿಯಲ್ಲಿ ಅದೇ ನಾಟ್ಕ ಮಾಡಿದ್ರು.

ಆಂದ ಹಾಗೆ ಈ ‘ ಸಾವಿತ್ರಿ ಕುಟ್ಟಿ’ ಸ್ಮಿತಾ ಅಂಬು, ನೀನಾಸಂ ನಲ್ಲಿ ಕಲಿತ ಹುಡುಗಿ. ಎರಡು ವರ್ಷ ‘ತಿರುಗಾಟ’ ದಲ್ಲಿದ್ದೋಳು. ಒಂದು ಅದ್ಭುತ ಪ್ರತಿಭೆ.

9 comments

    • ನನ್ನ ಕೇರಳ ವಾಸದ ರಂಗಾನುಭವಗಳ ಕುರಿತು ಬರೀತಿದೀನಿ. ಪ್ರತಿ ವಾರ.

  1. ಬಹಳ ಚನ್ನಾಗಿ ಬರ್ತಿದೆ ಕೈರಳಿ..ಕುತೂಹಲ ಹೆಚ್ಚಾಗ್ತಿದೆ

Leave a Reply