ನಡುವೆ ಬೇರೊಂದು…!

ಅನಿತಾ ಪಿ ತಾಕೊಡೆ

ಅರ್ಥವಾಗಲಿಲ್ಲ
ನನಗೆ ನೀನು ನಿನಗೆ ನಾನಷ್ಟೆ
ಪ್ರಪಂಚವೂ ಒಂದೇ ಎಂದು
ಆವತ್ತೇ ಹೇಳಿಕೊಂಡಿದ್ದೀವಲ್ಲಾ
ನಡುವೆ ಬೇರೊಂದು…!
ಅದು ಹೇಗೆ ಕೂಡಿತೋ ಅರ್ಥವಾಗಲಿಲ್ಲ

ಒಂದಾದ ಮೇಲೊಂದರಂತೆ
ದುಂಬಾಲು ಬಿದ್ದು ಬೆನ್ನು ಬಿಡದೆ
ಉರಿಯೆಬ್ಬಿಸಿದ ಕರಿಹೊಗೆಗೋ
ಆಯ ತಪ್ಪಿ ಬಿದ್ದ ಮಾತನು
ಅಲ್ಲೇ ಬಿಟ್ಟು ತೆರೆಯೆಳೆದು
ಹೇಗೆ ಹೊಸತು ಬರೆಯಲಿ ಅರ್ಥವಾಗಲಿಲ್ಲ

ಖುಷಿಯಲ್ಲಿರುವಷ್ಟು ಹೊತ್ತು
ಹಂಬಲಿಕೆಗೆ ಸ್ವರ್ಗದ ಹೋಲಿಕೆಯನ್ನು
ನಾವೂ ಮಾಡದಿರಲಿಲ್ಲ
ದಿನ ತಿರುಗಿದಂತೆ ನರಕದ ಆಭಾಸ,
ಅಗಲುವ ಆವೇಶದೊಂದಿಗೆ
ಯಾಕೆ ಭಾಸವಾಗುವುದೋ ಅರ್ಥವಾಗಲಿಲ್ಲ

ಹತ್ತಿರವಾದಷ್ಟು ಹೆಚ್ಚು ಸಲುಗೆಯು ಮೊಳೆದು,

ಒಂದಿಷ್ಟು ವಾದ ಕಡೆಯಲಿ ಮುನಿಸು
ಹೃದಯಕೊಲ್ಲದ ಪದಗಳಿಗೆ, ವ್ಯಂಗ್ಯದ ಲೇಪ
ಬರೀ ನನ್ನಲ್ಲಷ್ಟೆ ಅಲ್ಲ,
ನಿನ್ನಲ್ಲೂ ಇದ್ದೀತಲ್ವೆ…!
ಮೌನವಾಗಿ ಕರಗಿಸಿ ಬಿಟ್ಟಿದ್ದೆ

ಎಳೆ ಚಿಗುರನೂ ಬಿಗಿಯಾಗಿ ಹಿಡಿದು ಎತ್ತಿ ತೋರಿಸುವ ನೀನು

ಒಳಗೊಳಗೆ ನಲುಗುವ ನಾನು
ಎಲ್ಲೋ ಕಳೆದು ಹೋದಂತೆ
ಏಕಾಂತದೊಳು ಏಕಾಂಗಿಯಾಗಿರದೆ…!

ಹುಡುಕುತಿದ್ದೇನೆ
ಮುದ್ದು ಮಾತಿನ ಮುಗ್ಧ ಭಾವಗಳ
ಎಳೆ ಬಾಲೆಯನು
ಒಂದಷ್ಟು ಹೊತ್ತು ಅವಳ ಜೊತೆ ಕೂತು ಮಾತು
ಅಲ್ಲಾದರೂ ಸಿಕ್ಕೀತೇನೋ ಉತ್ತರ…!
ಬಿಡದೆ ಕಾಡುವ ಅರ್ಥವಾಗದ ಮಾತುಗಳಿಗೆ.
ಇಲ್ಲವೆಂದರೂ ಎದೆ ತಿಳಿಯಾಗದಿರುವುದೇ
ಅವಳೊಡನೆ ಬೆರೆತು ಮನಸಾರೆ ನಕ್ಕ ಮೇಲೆ.

 

2 comments

Leave a Reply