ಅವಳು ಬಿಡಿಸಿದ ರಂಗೋಲಿಯದು ಒಂದೊಂದು ಕಥೆ..

ವಿಜಯಾ ಕುಲಕಣಿ೯

ಗೋಡೆಗಂಟಿದ ಚಿತ್ತಾರದ ಚೆಲುವೆಲ್ಲ

ಅವಳು ಬಿಡಿಸಿದ ರಂಗೋಲಿಯದು

ಒಂದೊಂದೂ ಚಿತ್ತಾರಕ್ಕೂ ಒಂದೊಂದು ಕಥೆ,

ಬಳೆಗಳ ನಾದದಲ್ಲಿ ಮೂಡಿದ ರಂಗು,

ಕಣ್ಣ ಕಾಡಿಗೆಯಲ್ಲಿ ತೀಡಿದ ಗುಂಗು,

 

ದೃಷ್ಟಿ ತಾಗದಿರಲೆಂದು ಅವಳು

ಒತ್ತಿದ ಕೈಬೆರಳಚ್ಚು, ಕಥೆ ಮೂಡಿದಾಗಲೆಲ್ಲ

ಅವಳು ಮುಂಗುರಳ ತೀಡಿ,

ಸೀರೆ ಸೆರಗ ನಡುಬಳ್ಳಿಗೆ

ಗಂಟು ಸಿಕ್ಕಿಸಿ, ಅವಳು ಚಿತ್ತಾರ ಬರೆಯುವ ಭಂಗಿ ನೋಡಿದಾಗೊಮ್ಮೆ

ಅವನು ಭಗ್ನಪ್ರೇಮಿಯಂತೆ ಮತ್ತೆ ಮತ್ತೆ

ಅದೇ ಚೆಲುವಿಗೆ ಸೋತ ದೇವದಾಸನಂತಾಗಿರುವ,

 

ಅವಳು  ಪರರ ಅಂಗಳದ ಪಾರಿಜಾತ ಹೂವು

ಮುಡಿಯಬೇಕೆಂದರೆ ಬೇಲಿ ದಾಟಲೇಬೇಕು

ಪಾರಿಜಾತಕ್ಕೆ ತನ್ನ ಸ್ನಿಗ್ಧ ಸೌಂದಯ೯ದ ಅರಿವಿಲ್ಲ

ಅವನು ಮೋಹಿತನಾಗಿರುವುದು ಅರಿವಿಲ್ಲ

ಅದು ಎಷ್ಟೆಂದರೂ ಪ್ರಕೃತಿ ನಿಯಮ।, ಚಿಗುರಬೇಕು

ಮೊಗ್ಗಾಗಬೇಕು, ಅರಳಬೇಕು, ಸುಗಂಧ

ಭರಿತವಾಗಿರಬೇಕು, ದೇವರ ಮುಡಿ ಸೇರಬೇಕು

ಅವನಿಗೆ ಇದ್ಯಾವುದರ ಅರಿವಿಲ್ಲ

ಅವಳು ತನ್ನ ಸ್ವತ್ತೆಂದು ಮೋಹಿಸಿದವ

ಅವಳ ಚೆಲುವಿಗೆಲ್ಲ ತಾನೇ ಒಡೆಯನೆಂದು

ಬೀಗಿದವ, ಇವಳು ಮಾತ್ರ ಅಮಾಯಕಳು

ಚಿತ್ತಾರ ಬಿಡಿಸುವುದರಲ್ಲಿ ಲೀನಳು

 

ಅರಿವಿರಲಾರದ ಕಥೆಯೊಂದ ಬಿಡಿಸಿದ್ದಳು

ಅವಳು ಬಿಡಿಸಿದ ಕಥೆಗೆ ಇವನು ನಾಯಕನಾಗಿದ್ದ

ಬೀಗಿದ, ಮೋಹಿಸಿದ, ಪ್ರೀತಿಸಿದ, ಬಯಸಿದ

ಪರರ ಅಂಗಳದ ಪಾರಿಜಾತ ಹೂವಿನ

ಕಲ್ಪನೆಯಲ್ಲಿ… ಅವನು

ಜೀವಂತ ಸಮಾಧಿಯಾಗಿದ್ದ ❤

6 comments

  1. ಬಳೆಯ ನಾದದಲ್ಲಿ, ಕಣ್ಣಿನ ಕಾಡಿಗೆಯಲ್ಲಿ – ಅದ್ಭುತ ಸಾಲುಗಳು… ಮನಕ್ಕೊಪ್ಪಿದ ಪರಿಕಲ್ಪನೆ..

Leave a Reply