ಎಲ್ಲಿ ಹುಡುಕಲಿ ನಿನ್ನ ?

ಲೇಖಕಿ , ಚಿತ್ರ, ಕಸೂತಿಕಲಾಭಿಜ್ಞೆ  ಶಶಿಕಲಾ ಬಾಯಾರು  ಅವರು, ತಮ್ಮ  ತಮ್ಮನ ಮಗಳು ಅಪೂರ್ವ ಎಂಬ ಅಮೂಲ್ಯ ನಿಧಿಯನ್ನು  ಕಳಕೊಂಡ ನೋವನ್ನು ಇಲ್ಲಿ ಅಕ್ಷರಗಳಲ್ಲಿ ಹರಿಬಿಟ್ಟಿದ್ದಾರೆ.
ಸುರಲೋಕದ ಹೂಮಾಲೆ ಜಾರಿ ಮೈ ಮೇಲೆ ಬಿದ್ದು ಇಲ್ಲವಾದ ಇಂದುಮತಿಯಂತೆ  ಇದ್ದಕ್ಕಿದ್ದಂತೆ ಇಲ್ಲವಾದ ಅಪೂರ್ವಳನ್ನು ಅರಸುವ ಅವರ ಮನದ ನೋವು “ಎಲ್ಲಿ ಹುಡುಕಲಿ ನಿನ್ನ” ಇಲ್ಲಿದೆ. – ಶ್ಯಾಮಲಾ ಮಾಧವ

-ಶಶಿಕಲಾ ಬಾಯಾರು

ಹದಿನೆಂಟರ ಹರೆಯದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ,

ಕಾಲೇಜ್ ಹಾಸ್ಟೆಲಲ್ಲಿ ಕುಸಿದು ಬಿದ್ದು ಸಾವು

– ವರ್ತಮಾನ ಪತ್ರಿಕೆಗಳು, ವಾಟ್ಸಪ್ ಸಂದೇಶಗಳು, ಮಾಧ್ಯಮಗಳಲ್ಲೆಲ್ಲ ಹರಿದಾಡಿದ ಈ ವಾರ್ತೆಯ ದಾರುಣ ಸತ್ಯವನ್ನು ಪರಿಚಿತರಾರೂ ಅರಗಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಕಾರಣವೇ ಕಾಣದ ಮರಣ – ಆಕಸ್ಮಿಕ – ವಿಧಿಯ ವಿಲಕ್ಷಣ ವೈಪರೀತ್ಯ – ವೈದ್ಯಲೋಕಕ್ಕೇ ಪ್ರಶ್ನೆಯಾದ ವಿಸ್ಮಯ!

ಸಾಮಾನ್ಯವಾಗಿ ಮಕ್ಕಳನ್ನು ಕಾಡುವ ಸಣ್ಣಪುಟ್ಟ ತೊಂದರೆಗಳಿಂದಲೂ ಒಂದು ಅಂತರದಲ್ಲಿ ಹೊರಗುಳಿದು, ದೊಡ್ಡದೆನಿಸುವ ಯಾವುದೇ ಅಸ್ವಸ್ಥತೆಯಿಲ್ಲದೆ, ತೊಳೆದ ಮುತ್ತಿನಂತಿದ್ದ ಹುಡುಗಿ ಒಮ್ಮೆಗೇ ಇನ್ನಿಲ್ಲ, ಅಂದರೆ ಹೇಗೆ ಒಪ್ಪಲಿ?

ಯಾವ ಸಣ್ಣ ಸೂಚನೆಯೂ ಇಲ್ಲದೆ ಈ ಸಂಭವ ಆಗಿ ಹೋಗಿದೆ. ಜೊತೆಗಿದ್ದ ಸಹಪಾಠಿಗಳು ನೋಡುತ್ತಿರಬೇಕಾದರೆ, ಸಣ್ಣಗೆ ಉಸಿರು ನಿಂತು ಕುಸಿದ ಪರಿಗೇ ಬೆಚ್ಚಿ ಬಿದ್ದಿದ್ದಾರೆ.

ಎಲ್ಲರೂ ಸೇರಿ ತೀರ ತುರ್ತಾಗಿ ಆಸ್ಪತ್ರೆಗೆ ಒಯ್ದರೂ ಫಲ ಸಿಗಲಿಲ್ಲ. ಕೇಳಿದ ವಾರ್ತೆಗೇ ಎದೆಯೊಡೆದು ಧಾವಿಸಿ ಬಂದ ತಂದೆ, ತಾಯಿ, ಎಷ್ಟು ಮಾತ್ರಕ್ಕೂ ನಿರೀಕ್ಷಿಸಲಾಗದ ಈ ವಾಸ್ತವಕ್ಕೆ ಗದಗುಟ್ಟಿ ನಡುಗಿದ್ದಾರೆ. ಪತ್ರಿಕೆಯಲ್ಲಿ ಕಂಡುಬರುವ ಮಾಮೂಲು ವಾರ್ತೆಗಳಂತೆ ಈಜಲು ಹೋಗಿ ನೀರು ಪಾಲಾಗಲಿಲ್ಲ; ಸೆಲ್ಫಿಯ ಮರುಳಿಗೆ ಉರುಳಿ ಬಲಿಯಾಗಲಿಲ್ಲ. ಹದಿನೆಂಟು ವರ್ಷ ನಿರ್ಮಲ ಆರೋಗ್ಯಕ್ಕೊಂದು ನಿರ್ವಚನದಂತಿದ್ದ ಹುಡುಗಿ ತನಗಾಗಿ ಮಿಡಿಯುವ ಅಸಂಖ್ಯ ಹೃದಯಗಳ ತುಂಬಾ ಶೋಕದ ಮಹಾಪೂರವನ್ನೇ ಹರಿಸಿ ಇಲ್ಲವಾಗಿದ್ದಾಳೆ.

ಆ ದುರಂತ ನಡೆದ ದಿನ ನಡುರಾತ್ರೆಗೆ ಆಸ್ಪತ್ರೆ ಮತ್ತು ಕಾನೂನಿನ ಕಟ್ಟುಪಾಡುಗಳನ್ನೆಲ್ಲ ಮುಗಿಸಿ ಮನೆಗೆ ತಂದ ಮೃತದೇಹವನ್ನು ಕಂಡು ಎದೆ ಬಡಿದು ಅತ್ತ ಮಂದಿ ಅದೆಷ್ಟೋ -ಲೆಕ್ಕ ಇಟ್ಟವರ್ಯಾರು?

ಪ್ರತಿಯೊಬ್ಬರಿಗೂ ತಮ್ಮದೇ ಕರುಳಕುಡಿಯೊಂದು ಕಳಚಿ ಬಿದ್ದಂತಹ ಅಸಾಧ್ಯ ಯಾತನೆ. ಆ ಶಾಂತ, ಸೌಮ್ಯ ಮುಖದಲ್ಲಿ ನಿದ್ದೆಯಾಳದಲ್ಲಿರುವಳೇನೋ ಅನಿಸುವಂತಹ ಜೀವಕಳೆ!


ಕರೆದರೆ ಓಗೊಟ್ಟು ಎದ್ದು ಬರುವಳೇನೋ ಅನ್ನುವ ಭ್ರಮೆಯ ಭಾವ! “ಈ ಸಾವು ನನಗೆ ಬರಬಾರದಿತ್ತೇ? ಈ ಮಗುವನ್ನು ಉಳಿಸಬಾರದಿತ್ತೇ….”ಅನ್ನುವ ದನಿಯೊಂದು ಕಂಡವರೆಲ್ಲರ ಎದೆಯಾಳದಿಂದ ಅದಮ್ಯವಾಗಿ, ಆಕ್ರಂದನವಾಗಿ ಮತ್ತೆ ಮತ್ತೆ ಕೇಳಿ ಬರುತ್ತಿತ್ತು.

ಸದ್ದೇ ಇಲ್ಲದೆ ಹದ್ದಿನಂತೆ ಬಂದು ಎಳೆಯ ಜೀವಚೈತನ್ಯವನ್ನು, ಕೋಮಲ ಕನಸಿನ ಕೂಸು ಮರಿಯನ್ನು ಎಳೆದೊಯ್ದ ಸಾವಿನ ಕ್ರೌರ್ಯಕ್ಕೆ ದೈವವೂ ಅಂಜಿ ದೂರ ನಿಂತಿತೇ? ದೇವನೊಬ್ಬನಿದ್ದರೆ ಹೀಗಾಗಲು ಬಿಡುವನೇ? ಕಾಯಿಲೆಯಿಲ್ಲದ ಈ ಕಟುಕತನಕ್ಕೇನು ಹೆಸರು?

ಹೊತ್ತು, ಹೆತ್ತ, ಸಾಕಿ, ಸಲಹಿದ ಅಮ್ಮ, ಅಪ್ಪ ಅನ್ನುವ ನಿಷ್ಪಾಪಿ ಜೀವಗಳ ನಿರಂತರ ಕಣ್ಣೀರಧಾರೆಯಲ್ಲಿ ಸುತ್ತುನಿಂತ ಕಲ್ಲುಬಂಡೆಗಳೂ ಕರಗಿದವೇ? ಒಣಮಣ್ಣು ಈ ನೀರನ್ನೆಲ್ಲಾ ಹೀರಿ ತನ್ನೊಳಗೇ ಬಚ್ಚಿಟ್ಟಿತೇ?

ನನ್ನ ತಮ್ಮನ ಮಗಳು. ನಮ್ಮೆಲ್ಲರ ಮುದ್ದಿನ ಕಣ್ಮಣಿಯಾಗಿದ್ದವಳು. ಆ ಘೋರ ರಾತ್ರಿಯಿಡೀ ಅವಳ ಬಳಿಯೇ ಕುಳಿತಿದ್ದೆ. ಕೆಳಗೆ ಕೊರೆಯುವ ನೆಲದ ಥಂಡಿ; ಹೊರಗಿನಿಂದ ಬೀಸಿ ಹೊಡೆಯುತ್ತಿದ್ದ ಚಳಿಗಾಳಿ! ಘಾಸಿಗೊಂಡ ಮನಸ್ಸಿನ ಮುಂದುಗಾಣದ ಭ್ರಮಾಲೋಕದಲ್ಲಿ ಕಾಲಗರ್ಭದಲ್ಲಿ ಸೇರಿಕೊಂಡು ನಾವಿಬ್ಬರೂ ಅದೆಲ್ಲೋ ಹೆಪ್ಪುಗಟ್ಟಿ ನಿಂತಿರುವಂತಹ ಅನಿಸಿಕೆ,
ಅನುಭವ ನನಗಾಯ್ತು!


ಚಿಕ್ಕ ವಯಸ್ಸಿಗೆ ಅಕ್ಕರೆಯ ಮಹಾಪೂರ ಹರಿಸಿ ಎತ್ತಿ ಮುದ್ದಾಡಿದ ಕೈಗಳಿಂದಲೇ ಚಟ್ಟವೆತ್ತಿ ಬಿಕ್ಕಳಿಸುತ್ತ ನಡೆದ ಮಾವಂದಿರು. “ಏ ಅಪೂರ್ವ! ಏಳೇ, ಯಾಕೆ ಮಾತಾಡ್ತಿಲ್ಲ?” ಅಂತ ಮತ್ತೆ ಮತ್ತೆ ಹಿಡಿದು, ಕೆನ್ನೆ ಸವರಿ, ಅತ್ತು ಅತ್ತು ಅಂಗಲಾಚುವ ದೃಶ್ಯ ಎದೆ ಹಿಂಡುವಂತಿತ್ತು.

ಇಡಿಯ ಜನ್ಮಕ್ಕಾಗುವ ಅಷ್ಟೂ ಪ್ರೀತಿಯನ್ನು, ಹದಿನೆಂಟರ ಗಡಿಯೊಳಗೇ ಧಾರೆಯೆರೆದು, ಲಾಲಿಸಿ, ಪಾಲಿಸಿದ ಅಪ್ಪ, ಇದೀಗ ಅದೇ ಕೈಗಳಿಂದ ಮಗಳ ಕರ್ಮಾಂತರ ನಡೆಸಬೇಕಾಗಿದೆ. ನಡುಗುವ ಒಡಲಿನಿಂದ, ಒಡೆದುಹೋದ ಹೃದಯದಿಂದ, ಬೆಂದು ಮುದ್ದೆಗಟ್ಟಿದ ಜೀವ, ಭಾವಗಳನ್ನು ಮುಂದಿನ ಕಾರ್ಯಗಳಿಗೆ ಅಣಿಗೊಳಿಸಬೇಕಾಗಿದೆ.

ಹುಟ್ಟಿದಾಗಿಂದ ತಾನೇ ಎಣ್ಣೆಹಚ್ಚಿ, ನೀವಿ, ನೀವಿ, ನವಿರುಕಾಂತಿ ತುಂಬಿದ ನಯನ ಮನೋಹರ, ನಾಜೂಕು ಶರೀರವನ್ನು, ಅದೇ ಅಮ್ಮನೀಗ ತನ್ನ ಥರಗುಟ್ಟುವ ಕೈಗಳಿಂದ ಸವರಿ, ಸವರಿ ಸಂಕಟಪಡುವ, ಅಳುವಿನ ಮಹಾಪೂರದಲ್ಲಿ ಪದೇಪದೇ ಪ್ರಜ್ಞಾಹೀನಳಾಗುವ ಪರಿ ಯಾರೊಬ್ಬರೂ ಕಾಣಬಯಸುವಂತಹುದಲ್ಲ; ಮರೆಯಬಹುದಾದುದೂ ಅಲ್ಲ. ಕಪ್ಪು ನುಣುಪು ಕೂದಲ ಸಿಕ್ಕು ಬಿಡಿಸಿ, ಉದ್ದ ಜಡೆ ಹೆಣೆದ ಆ ಬೆರಳುಗಳೀಗ, ತುತ್ತು ಎತ್ತಲಾರದ ನಿತ್ರಾಣದಲ್ಲಿ ಕಂಪಿಸುತ್ತವೆ.

ಈ ಅನಿರೀಕ್ಷಿತ, ಅನಿವಾರ್ಯ ಬವಣೆಗಳಿಗೆ, ರಾಶಿಬಿದ್ದ ಹೊಣೆಗಳಿಗೆ ಹೌದಾಗಲೇ ಬೇಕಾದ ಅಕ್ಕ ಅಲಕಾ ಎದ್ದು ನಿಲ್ಲಬೇಕಾಗಿದೆ. ತನ್ನದಾದ ಭಾವಕೋಶದ ಬಾಗಿಲುಗಳನ್ನೆಲ್ಲ ಮುಚ್ಚಿ, ಕುಸಿದ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಎಂಬತ್ತಾರರ ಅಜ್ಜಿಯಲ್ಲಿ ಅಳಿದುಳಿದ ಜೀವಶಕ್ತಿಗೆ ಇದು ಮಹಾಪ್ರಹಾರ.

ಬತ್ತಿದ ಕಣ್ಣುಗಳು ತೆರೆಯುವುದಕ್ಕೇ ಅಂಜಿ, ಆಳದಲ್ಲೇ ಉಳಿಯುತ್ತವೆ. ಮೈತುಂಬ ಕಾಣುವ ಸಾವಿರ ಸುಕ್ಕುಗಳಲ್ಲೂ ಈ ಸಾವಿನ ನೋವು ಒತ್ತಿ ನಿಂತಿದೆ. ಮನೆಯ ಗೋಡೆಗಳ ನಡುವೆ ಕವಿದು ಕುಳಿತ ನಿಷ್ಠುರ ನಿಶ್ಶಬ್ದವನ್ನು, ಮರಣದ ಯಾತನೆ ನಿರ್ದಯವಾಗಿ ವ್ಯಾಪಿಸಿ ಸುಳಿಯುತ್ತದೆ. ಹಿತ್ತಿಲ ಗಿಡಮರಗಳನ್ನೆಲ್ಲಾ ಗ್ರಹಣದ ಮಂಕುತೆರೆ ಆವರಿಸಿಕೊಂಡಿದೆ.

ಐದರ ಹರೆಯ ಅಲ್ಲೇ ನಿಂತಂತಹ ಮುತ್ತಿನ ಮೈಕಾಂತಿ ಅವಳದಾಗಿತ್ತು. ಹದಿನೈದರ ಹೊತ್ತಿಗೇ ಮೂವತ್ತರ ಪ್ರಬುಧ್ಧತೆ ನಡವಳಿಕೆಯಲ್ಲಿತ್ತು. ಸ್ವಭಾವದಲ್ಲಿ ಏರು ಪೇರಿಲ್ಲದೆ, ಸಿಟ್ಟು, ಸಿಡುಕು, ಬೇಸರ, ಬೋರು ಯಾವುದಕ್ಕೂ ಅವಕಾಶವೇ ಇಲ್ಲದ ಸಹಜ, ಸೌಮ್ಯ ಪ್ರವೃತ್ತಿಯಿಂದ ಹತ್ತಿರ ಬಂದವರನ್ನೆಲ್ಲಾ ಸೆಳೆದುಕೊಂಡ ಸತ್ಯ ಈಗ ತಬ್ಬಲಿಯಾಗಿದೆ.

ಕಂಡರೆ ಒಂದು ಸ್ಫಟಿಕವೇನೋ ಅನಿಸುವ ಹುಡುಗಿ! ಯಾವಾಗಲೂ ನಿರ್ಮಲ, ನಿರಾಳ, ನಿರ್ವಿಕಾರವಾಗಿಯೇ ಉಳಿದಾಕೆ . ಹೆತ್ತವರ ಈ ಮುದ್ದಿನ ಮೂಟೆಯ ದೊಡ್ಡ ಕಪ್ಪು ಕಣ್ಣುಗಳ ಆಳದಲ್ಲಿ ಸದಾಕಾಲವೂ ಅಡಗಿರುತ್ತಿದ್ದ
ಮೊನಾಲಿಸಾಳಂತಹ ತಿಳಿನಗು! ಮರೆಯಲಾದೀತೇ? ಜತೆಗಿದ್ದರೆ ಒಂದು ಪರಿಮಳವೇ ತಂಗಾಳಿಯಾಗಿ ಆವರಿಸಿ ನಿಂತಂತೆ.

ನಮ್ಮ ತಂದೆ ಪೆರ್ಲ ಕೃಷ್ಣಭಟ್ಟರು ಸಂಸ್ಕøತದಲ್ಲಿ ರಚಿಸಿದ ಸುಮಧುರ ಸಾಹಿತ್ಯದ ಪ್ರಾರ್ಥನಾ ಶ್ಲೋಕಗಳನ್ನು, ಗುರು ಯೋಗೀಶ ಶರ್ಮರ ನಿರ್ದೇಶನದಲ್ಲಿ ಸಭೆಗಳಿಗಾಗಿ ಅವಳು ಹಾಡುತ್ತಿದ್ದರೆ, ಅದೊಂದು ಸ್ಮರಣೀಯ ಸುಖಾನುಭವ! ಕೇಳಿದವರ ಮನತುಂಬುವ ಮರೆಯಲಾಗದ ಅಪೂರ್ವ ಸಂಯೋಗ! ಸ್ವರಭಾವದ ಪರವಶ ಸಂಚಲನ! ತನ್ನ ಸಾವಿನ ಸೂತ್ರದಲ್ಲಿ ಸಾವಿರ ಸಾವಿರ ಮಂದಿಯನ್ನು ಒಂದಾಗಿಸಿ ಕಣ್ಮರೆಯಾದ ಈ ತಾರೆಯನ್ನು ಆಗಸದಗಲದಲ್ಲಿ ಅದೆಲ್ಲಿ ಹುಡುಕಲಿ? ಹೇಗೆ ಗುರುತಿಸಲಿ?

Leave a Reply