ವಸೂಲಾಗದ ಒಂದು ರೂಪಾಯಿ!

‘ಹೇ , ಒಂದು ರೂಪಾಯಿ ಛೇಂಜ್ ಇದೆಯಾ ?’
ಎಂದು ಆತ ಕೇಳಿದ.‌
ಅನಾಮತ್ತಾಗಿ ಕಿಸೆಗೆ ಕೈ ಹಾಕಿ, ತೆಗೆದುಕೊಡುವಷ್ಟರಲ್ಲಿದ್ದಾಗ ಅವನು ಈ ಹಿಂದೆ ಯಾವುದೋ ಟ್ರೈನಿಂಗ್ ಗೆಂದು ಬಂದಾಗ ನಡೆದ ಆ ಘಟನೆ ನೆನಪಾಯಿತು. ಅದೊಂದು ಕ್ಷುಲ್ಲಕ ವಿಷಯ ಎಂಬುದು ನನಗೂ ಗೊತ್ತು . ಆದರೂ ನಿಮಗೆ ಹೇಳಿಬಿಡುತ್ತೇನೆ.

*        *         *           *          *         *
ಆವತ್ತೂ ಹೀಗೇ ಕೇಳಿದ್ದ ‘ ಹೇ , ಒಂದು ರೂಪಾಯಿ ಛೇಂಜ್ ಇದೆಯಾ ?’ ಎಂದು.
ತಕ್ಷಣ ತಗೆದುಕೊಟ್ಟಿದ್ದೆ‌ .
ಅವನು ಆ ದಿನ ಒಂದು ರೂಪಾಯಿ ಕೇಳಿದ್ದು ಮೆಜೆಸ್ಟಿಕ್ ನಲ್ಲಿ ಬಸ್ ಇಳಿದಾಗ ತೂಕ ನೋಡಿಕೊಳ್ಳುವ ಯಂತ್ರಕ್ಕೆ ಹಾಕಲೆಂದು.

ಒಂದು ರೂಪಾಯಿ ಕೊಟ್ಟಾಗ ನನಗೂ ಏನೂ ಅನ್ನಿಸಿರಲಿಲ್ಲ.
ಪಾಪ, ಅವನ ಬಳಿ ನಿಜಕ್ಕೂ ಒಂದು ರೂಪಾಯಿ ಚಿಲ್ಲರೆ ಇದ್ದಿರಲಿಲ್ಲ !

ಅದಾದ ಮೇಲೆ ನಾವು ಮನೆಗೆ ಹೋಗುವ ಮೊದಲೇ ಟೀ ಕುಡಿಯಲೆಂದು ಹೋಟೆಲ್ ಗೆ ಹೋದಾಗ ಅವನೇ ಬಿಲ್ ಕೊಟ್ಟ . ಅವನು ಕೊಟ್ಟ ೨೦ ರೂಪಾಯಿಯ ನೋಟಿಗೆ ಚಿಲ್ಲರೆಯಾಗಿ ಕ್ಯಾಷಿಯರ್ ಎರಡು ರೂಪಾಯಿಯ ಒಂದು ಕಾಯಿನ್ ನ್ನೂ, ಮತ್ತೆ ತಲಾ ಒಂದು ರೂಪಾಯಿಯ ಎರಡು ಕಾಯಿನ್ ಗಳನ್ನೂ ವಾಪಾಸ್ ಕೊಟ್ಟಾಗ , ನಾನು ನನ್ನ ಒಂದು ರೂಪಾಯಿ ಹಿಂದಿರುಗಿಸುತ್ತಾನೆ ಎಂದುಕೊಂಡೆ. ಆದರೆ ಅವನು ಹಾಗೆ ಮಾಡದೆ, ಆ ಎರಡೂ ಕಾಯಿನ್ ಗಳನ್ನು ತನ್ನ ಪ್ಯಾಂಟಿನ ಕಿಸೆಗೆ ಹಾಕಿಕೊಂಡ.

‘ ಮನೆಗೆ ಹೋದಮೇಲೆ ಕೊಟ್ಟಾನು’ ಎಂಬ ಸ್ವಯಂ ಸಮಾಧಾನದಿಂದ ಸುಮ್ಮನಾದೆ.

ಮನೆಗೆ ಬಂದು ಆತ ಫ್ರೆಶ್ ಅಪ್ ಆಗುವ ಸಮಯದಲ್ಲಿ ಮನೆ ಮುಂದೆ ತರಕಾರಿ ಗಾಡಿಯವನು ಬಂದ. ತಿಂಡಿಗೆಂದು ತರಕಾರಿ ಕೊಂಡಾಗ ನಲವತ್ತೊಂದು ರೂಪಾಯಿ ಆಯ್ತು. ಅವನಿಗೆ ಐವತ್ತು ರೂಪಾಯಿ ನೋಟು ಕೊಟ್ಟಾಗ, ಆತ ‘ಒಂದು ರೂಪಾಯಿ ಕೊಡಿ. ಹತ್ತು ರೂ.ವಾಪಾಸ್ ಕೊಡ್ತೀನಿ’ ಎಂದ. ಅದು ಮನೆಯೊಳಗಿದ್ದ ನನ್ನ ಗೆಳೆಯನಿಗೇನು ಕೇಳದೇ ಇರಲಿಲ್ಲ. ನಾನು ಒಂದು ರೂಪಾಯಿಗಾಗಿ ಮನೆಯೊಳಗೆ ಬಂದು ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ‘ಒಂದು ರೂಪಾಯಿ ಇಲ್ಲ, ಇನ್ನೊಮ್ಮೆ ಬಂದಾಗ ಕೊಡ್ತೀನಿ’ ಎಂದದ್ದನ್ನ ಮುಗ್ಧವಾಗಿ ನಂಬಿದ‌ ತರಕಾರಿಯವ ಹತ್ತು ರೂಪಾಯಿ ಚಿಲ್ಲರೆ ಕೊಟ್ಟು ಹೋದ.

ಒಂದು ರೂಪಾಯಿಗಾಗಿ ಇಷ್ಟೆಲ್ಲ ಸರ್ಕಸ್ ನಡೀತಿರೋದನ್ನ ಗಮನಿಸಿಯೂ , ಔದಾಸೀನ್ಯನಾಗಿದ್ದ ಗೆಳೆಯನ ಮೇಲೆ ಸಣ್ಣಗೆ ಕೋಪ ಬಂತಾದರೂ ತೋರಿಸಲಾದೀತೆ ?

‘ಅವನು ನನಗೆ ಒಂದು ರೂಪಾಯಿ ಕೊಡಲಿಲ್ಲವಲ್ಲ’ ಎಂಬ ಬೇಸರಕ್ಕಿಂತ , ಅವನು ನನಗೆ ಒಂದು ರೂಪಾಯಿ ಕೊಡಬೇಕು, ಸಾಲವಾಗಿ ಪಡೆದಿದ್ದೇನೆ‌ ಎಂಬುದನ್ನೇ ಮರೆತುಬಿಟ್ಟಿದ್ದರೆ ಎಂದು ನೆನೆದಾಗ ದಿಗಿಲಾಯಿತು.

ಯಕಃಶ್ಚಿತ್  ಒಂದು ರೂಪಾಯಿಗಾಗಿ ಗೆಳೆಯನ ಮೇಲೆ ಅನುಮಾನಪಟ್ಟ ಪಾಪಪ್ರಜ್ಞೆಯೊಂದಿಗೇ ಅವನೊಟ್ಟಿಗೆ ತಿಂಡಿ ತಿಂದದ್ದಾಯಿತು. ಇದಾದ ನಂತರ ನಾನು ಕೆಲಸಕ್ಕೆ ಹೊರಟೆ, ಅವನು ಟ್ರೈನಿಂಗ್ ಗೆ ಹೊರಟ. ನನ್ನ ಆಫೀಸು ಇಂದಿರಾ ನಗರದಲ್ಲಿದ್ದು, ಅವನಿಗೆ ಎಮ್.ಜಿ. ರೋಡಿನಲ್ಲಿ ಟ್ರೈನಿಂಗ್ ಇದ್ದುದರಿಂದ ಇಬ್ಬರೂ ಜೊತೆಯಲ್ಲಿಯೇ ಮೆಟ್ರೋಗೆ ಹೋಗುವ ಅವಕಾಶ ಬಂತು.

ವಿಜಯನಗರದ ಮೆಟ್ರೋ ಸ್ಟೇಷನ್ ನಲ್ಲಿ ಟಿಕೆಟ್ ಕೌಂಟರ್ ನಲ್ಲಿ ಅವನು ಎಮ್.ಜಿ.ರಸ್ತೆ ಗೆ ಟಿಕೆಟ್ ಪಡೆದಾಗಲೂ, ಆತನಿಗೆ ಸಣ್ಣ ಗಾತ್ರದ ಎರಡು‌ ಹೊಸ ಒಂದು ರೂಪಾಯಿ ಕಾಯಿನ್ ಗಳನ್ನು ಆಫೀಸ್ ಅಸಿಸ್ಟೆಂಟ್ ಚಿಲ್ಲರೆಯಾಗಿ ಕೊಟ್ಟಿದ್ದನ್ನು ನೋಡಿದೆ. ಇದರಲ್ಲಿಯಾದರೂ ನನ್ನ ಒಂದು ರೂಪಾಯಿ ಹಿಂತಿರುಗೀತು ಎಂದುಕೊಂಡರೆ, ‘ಈ ಹೊಸ ಒಂದು ರೂಪಾಯಿಯ ಕಾಯಿನ್ ಗಳನ್ನ ಎಷ್ಟು ಸಣ್ಣದಾಗಿ ಮಾಡಿದಾರೆ ಅಲ್ವೆನೋ‌? ಪರ್ಸ್ ಒಳಗೆ ಸಲೀಸಾಗಿ ಇಟ್ಕೋಬೋದು. ಅಂಡಿಗೆ ಒತ್ತೋದು ಇಲ್ಲ’ ಅಂದವನು ಪ್ಯಾಂಟಿನ ಕಿಸೆಗೆ ಪರ್ಸ್ ತುರುಕಿದ. ‘See you at 5pm ಮಗಾ’ ಎಂದು ಅವನು ಎಮ್.ಜಿ.ರಸ್ತೆಯಲ್ಲಿ ಇಳಿದು ಹೋದ.

ಆಫೀಸಿನಲ್ಲಿ  ಕ್ರೆಡಿಟ್‌ ಕಾರ್ಡ್ ಪ್ರೊಸೆಸ್ ನ ಪ್ರಾಜೆಕ್ಟ್ ಆಗಿರುವುದರಿಂದ, ಅಮೇರಿಕನ್ ಕಸ್ಟಮರ್ ಗಳು ಈ ಹಿಂದೆ ಬೇರೆ ಬೇರೆ  ಬ್ಯಾಂಕ್ ಗಳಲ್ಲಿ  ಪಡೆದ ಸಾಲವನ್ನು ಸರಿಯಾಗಿ ತೀರಿಸದೆ ಎಷ್ಟು ಬಾರಿ defaulter (ಬಾಕಿದಾರ) ಆಗಿದ್ದಾರೆಂಬುದರ ಆಧಾರದಲ್ಲಿ, Equifax ಮತ್ತು Experian ಎಂಬ ಕ್ರೆಡಿಟ್ ಬ್ಯುರೋ ಗಳಲ್ಲಿ ಅವರ ಸಾಲ ಮರುಪಾವತಿಯ ವರ್ತನೆ (Credit History) ಯನ್ನು ವಿಶ್ಲೇಷಿಸಿ, ಕಾರ್ಡ್ ಗಳನ್ನು ಅಪ್ರೂವ್ ಮಾಡುವ ಅಥವಾ ತಿರಸ್ಕರಿಸುವ ಕೆಲಸ ನನ್ನದು‌. ಆ ದಿನ ನನ್ನ ಬಿನ್ ಗೆ ಬಂದ ಎಲ್ಲಾ ಅಪ್ಲಿಕೇಷನ್ ಗಳ ಕ್ರೆಡಿಟ್ ಹಿಸ್ಟರಿಯೂ ಕಳಪೆಯಿದ್ದು ಮಾತ್ರ ಕಾಕತಾಳೀಯವೇ ಸರಿ. ಹಾಗಾಗಿ ನಾನು ಒಂದೇ ಒಂದು ಕ್ರೆಡಿಟ್ ಕಾರ್ಡನ್ನೂ ಆ ದಿನ ಅಪ್ರೂವ್ ಮಾಡಲೇ ಇಲ್ಲ .

ಲಾಗ್ ಔಟ್ ಮಾಡುವಾಗ, ಸಾಲ ವಾಪಸ್ಸು ಕೊಡುವುದರಲ್ಲಿ ಅಮೇರಿಕನ್ನರೂ ಹೀಗೇನಾ ಅಂದುಕೊಳ್ಳುವಷ್ಟರಲ್ಲಿ ನನ್ನ ಗೆಳೆಯನ ಕಾಲ್ ಬಂತು.  “ನಂದು ಕೆಲ್ಸ್ ಮುಗಿತು. ನೀನು ಎಮ್.ಜಿ.ರೋಡ್ ಸ್ಟಾಪ್ ನಲ್ಲೇ ಇಳ್ಕೊಂಡ್ ಬಿಡು. ನಾನ್ ಕಾಯ್ತಾ ಇರ್ತೀನಿ, Indian Coffee House ನಲ್ಲಿ ಏನಾದರೂ ತಿಂದು, ಒಳ್ಳೆ ಕಾಫಿ ಕುಡಿದು ಹೋಗೋಣ” ಎಂದು ಹೇಳಿದವನು ನನ್ನ ಉತ್ತರಕ್ಕೂ ಕಾಯದೆ ಕಾಲ್ ಕಟ್ ಮಾಡಿಬಿಟ್ಟ.

ಹೀಗೆ ಅಧಿಕಾರಯುತವಾಗಿ ಒತ್ತಡ ಹೇರುವಂಥ ಪ್ರೀತಿ ಮತ್ತು ಸ್ನೇಹ ನಮ್ಮಿಬ್ಬರ ಮಧ್ಯೆ‌ ಇತ್ತು ಎಂಬುದನ್ನು ನಾನಿಲ್ಲಿ ಪ್ರಸ್ತಾಪಿಸಲೇಬೇಕು. ನಮಗೆಲ್ಲರಿಗೂ ‘No’ ಹೇಳಲಾಗದಂಥ ಕೆಲವರು ಸ್ನೇಹಿತರು ಇದ್ದೇ ಇರುತ್ತಾರೆ ಎನ್ನಿ. ಅವರು ಒಂದು ರೂಪಾಯಿಯನ್ನಾದರೂ ಕೇಳಬಹುದು‌ ಇಲ್ಲವೇ ದಿಢೀರನೆ ಪ್ರವಾಸಕ್ಕೆ ಹೊರಟು ‘ ನು ಬರ್ಬೇಕು‌ ಅಷ್ಟೇ’ ಎಂದೂ ಹೇಳಬಹುದು.‌

ಅದು ಹಾಗೇ ಆಯಿತು. ಕಾಫಿ ಹೌಸ್ ನಲ್ಲಿ ಏನೋ ತಿಂದು (ಕೆಲವೊಮ್ಮೆ ಘಟನೆಗಳನ್ನು ಇಡಿಯಾಗಿ ನೆನಪಿಟ್ಟುಕೊಳ್ಳಬಹುದಲ್ಲದೆ , ಬಿಡಿಬಿಡಿಯಾಗಿ ಅಲ್ಲ) ಕಾಫಿ ಕುಡಿದಾದ ಮೇಲೆ ನಾನು ಬಿಲ್ ಕೊಡಲು ಹೋದರೆ ಆತ ಬಿಡದೇ ೫೦೦ ರ ನೋಟು ಇಟ್ಟುಬಿಟ್ಟಿದ್ದ. ಸಪ್ಲೇಯರ್ ತಂದುಕೊಟ್ಟ  ಚಿಲ್ಲರೆಯಲ್ಲಿ ಒಂದು ರೂಪಾಯಿಯ ಐದು ನಾಣ್ಯಗಳನ್ನು ನೋಡಿ ನಾನು ಮತ್ತೆ ಆಶಾಭಾವ ಹೊಂದಿದೆ. ಆದರೆ ಅವನು ಹತ್ತು ರೂಪಾಯಿಯ ನೋಟನ್ನು ಟಿಪ್ಸ್ ಆಗಿ ಇಟ್ಟವನು ಉಳಿದ ಹಣದೊಂದಿಗೆ ಒಂದು ರೂಪಾಯಿಯ ಐದೂ ನಾಣ್ಯಗಳನ್ನು ಪರ್ಸ್ ಗೆ ಹಾಕಿಕೊಂಡ. ಅಲ್ಲಿಗೆ ನಾನು  ನನ್ನ ಒಂದು ರೂಪಾಯಿ ಹಿಂತಿರುಗುತ್ತದೆ ಎಂಬ ಆಸೆಗೆ ಎಳ್ಳುನೀರು ಬಿಡುವುದು ಒಳಿತು ಎಂದುಕೊಂಡೆ.

ನಂತರ ಅಲ್ಲೇ ಸುತ್ತಮುತ್ತಲ ರಸ್ತೆಗಳಲ್ಲಿ ಓಡಾಡುತ್ತಾ , ಕೊನೆಯಲ್ಲಿ ಸೆಂಟ್ರಲ್ ಮಾಲ್ ಗೆ ಹೋಗಿ, ಅವನೊಂದಿಷ್ಟು ಬಟ್ಟೆ ಕೊಂಡರೂ ಅಲ್ಲಿ ಅವನು ಕಾರ್ಡ್ ಸ್ವೈಪ್ ಮಾಡಿದ್ದರಿಂದಾಗಿ ಅಲ್ಲೆಲ್ಲೂ ‘ಆ ಒಂದು ರೂಪಾಯಿ’ ಯ ನೆನಪಾಗಲಿಲ್ಲ. ಅಲ್ಲಿಂದ ವಾಪಾಸ್ಸು ಬರುವಾಗ ಓಲಾ ಕ್ಯಾಬ್ ನಲ್ಲಿ ಬಂದು, ಓಲಾ ಮನಿ ಯನ್ನು ಬಳಸಿದ್ದರಿಂದ ನಾವಿಬ್ಬರೂ ಕಿಸೆಯಿಂದ ಹಣ ಹೊರಗೆ ತಗೆಯಲೇ ಇಲ್ಲ.

ಒಂದು ದಿನದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಈ ನನ್ನ ಗೆಳೆಯ ರಾತ್ರಿ ಊರಿಗೆ ಹೊರಟು ನಿಂತ. ಅವನನ್ನು ಬೀಳ್ಕೊಡಲು ಮೆಜೆಸ್ಟಿಕ್ ಗೆ ಬಂದಾಗ ರಾತ್ರಿ ಹನ್ನೊಂದು ಘಂಟೆ.

ಸೈಕಲ್ ಮೇಲೆ ಇಟ್ಟುಕೊಂಡು ಟೀ ಮತ್ತು ಬನ್ ಮಾರುತ್ತಿದ್ದವನು ಮೂರ್ನಾಲ್ಕು ಸರಿ ಕೇಳಿದನೆಂಬ ಮಾತ್ರಕ್ಕೆ ‘ಟೀ ಕುಡಿಯೋಣ ದೋಸ್ತಾ ‘ ಎಂದವನು ಅದರ ದುಡ್ಡು ಕೊಡುವಾಗ ಮತ್ತೊಮ್ಮೆ ‘ಆ ಒಂದು ರೂಪಾಯಿಯ ನಾಣ್ಯ’ ಕಣ್ಣಿಗೆ ಬಿತ್ತು.

ಇದು ಇವನಿಗಿರುವ ಕೊನೆಯ ಅವಕಾಶ, ನನ್ನ ಒಂದು ರೂಪಾಯಿ ವಾಪಾಸ್ಸು ಕೊಟ್ಟೇ ಬಸ್ಸೇರುತ್ತಾನೆ ಎಂದೆಣಿಸುತ್ತಿದ್ದೆ. ಆದರೆ ಅವನೋ ಈ ‘ನಿಕೃಷ್ಟ ಮೊತ್ತದ ಸಾಲ’ ದ ಪರಿವೆಯೇ ಇಲ್ಲದಂತೆ ಟೀ ಮಾರುವವನಿಗೆ ದುಡ್ಡು ಕೊಟ್ಟು ಪರ್ಸಿನಿಂದ ಕೆಳಗೆ ಬಿದ್ದ ಒಂದು ರೂಪಾಯಿಯನ್ನು ಎತ್ತಿ ಜೋಪಾನವಾಗಿ ತನ್ನ ಪರ್ಸಿನೊಳಗೆ ಇಟ್ಟುಕೊಂಡ.

‘ನೀ ಹೊರಡು, ಲೇಟಾಗುತ್ತೆ . ಮುಂದಿನ ಬಾರಿ ನೀ ಶಿವಮೊಗ್ಗಕ್ಕೆ  ಬಂದಾಗ ನೀನು ಭಾಳ ಇಷ್ಟಪಡೋ ಮೀನಾಕ್ಷಿ ಭವನದ ಪಡ್ಡು ತಿನ್ನೋಣ ‘ ಎಂದ. ‘ಹಾಗೇ ಆಗಲಿ ಕಣೋ’ ಎಂದು ಹೇಳಿದ್ದೆನೋ ಇಲ್ಲವೋ ಸರಿಯಾಗಿ ನೆನಪಿಲ್ಲ.‌

ಮನೆಗೆ ಬಂದು ಮಲಗಿದವನು ಆ ರಾತ್ರಿ ತುಂಬಾ ದೀರ್ಘವಾಗಿ ಈ ವಿಷಯದ ಬಗ್ಗೆ ಆಲೋಚಿಸಿದೆ. ಒಂದು ರೂಪಾಯಿಯನ್ನು ಅವನು ಸಾಲ ಎಂದು ಪರಿಗಣಿಸಲಿಲ್ಲವೆ ?

ಐವತ್ತೋ, ನೂರೋ, ಐನೋರೋ, ಸಾವಿರವೋ‌, ಲಕ್ಷವೋ ಆದರೆ ಮುಲಾಜಿಲ್ಲದೆ, ನಿರ್ಭಿಡೆಯಿಂದ ವಾಪಸ್ಸು ಕೊಡು ಎಂದು ತಾಕೀತು ಮಾಡಬಹುದು. ಆದರೆ ಈ ಒಂದು ರೂಪಾಯಿಯನ್ನು ವಾಪಸ್ಸು ಕೇಳಲು ಮನಸ್ಸಾದರೂ ಹೇಗೆ ಬರುತ್ತದೆ ? ಅದನ್ನು ಅವನೇ ತಿಳಿದು ಕೊಡಬೇಕಿತ್ತು ಅಲ್ಲವೆ ಎಂದು ಅವನ ಮೇಲೊಂದು ಸಾತ್ವಿಕ ಸಿಟ್ಟು ಮಾಡಿಕೊಂಡೇ , ‘Happy Journey. Message me once you reach Shimoga’ ಎಂದು ಮೆಸೇಜ್ ಮಾಡಿ ಮಲಗಿದ್ದೆ.

*          *           *          *           *           *

ಈಗ ನೋಡಿದರೆ ಮತ್ತೆ ‘ಅದೇ ಒಂದು ರೂಪಾಯಿ ಕೊಡು’ ಎಂದು ಕೇಳುತ್ತಿದ್ದಾನೆ.‌ ಹಳೆಯ ಸಾಲ ಇರುವಾಗ ಯಾರಾದರೂ ಹೊಸ ಸಾಲ ಕೊಡುತ್ತಾರೆಯೇ ನೀವೇ ಹೇಳಿ. ಅದೂ ಅಲ್ಲದೆ ಅವನು ನನಗೆ ಸಾಲ ಹಿಂತಿರುಗಿಸಿಲ್ಲ ಎಂಬುದಕ್ಕಿಂತ, ನನಗೆ ಅವನು ಒಂದು ರೂಪಾಯಿ ಕೊಡಬೇಕು ಎಂಬುದನ್ನು ಮರೆತೇಬಿಟ್ಟಿದ್ದಾನಲ್ಲ ಆ ವಿಚಾರ ಬೇಸರ ತರಿಸುತ್ತದೆ. ಅದನ್ನು ಕೇಳಿದರೆ ನಾನೆಲ್ಲಿ ‘ ಕ್ಷುಲ್ಲಕ ವ್ಯಕ್ತಿ’ ಯಾಗಿಬಿಡುತ್ತೇನೋ ಎಂಬ ಕಾರಣಕ್ಕೆ ನಾನು ಸುಮ್ಮನಾಗಿದ್ದೇನೆ. ಆ ಒಂದು ರೂಪಾಯಿ ವಾಪಾಸ್ಸು ಕೊಡಲು ಹೋದರೆ ತಾನೆಲ್ಲಿ ‘ಕ್ಷುಲ್ಲಕ ‘ ಆಗಿಬಿಡುತ್ತೇನೋ ಎಂದು ಅವನು ಸುಮ್ಮನಿರಬಹುದು.

ಆದರೆ ಯಾರಾದರೂ ಒಬ್ಬರು ಪ್ರಸ್ತಾಪಿಸದ ಹೊರತು ಈ  ‘ಒಂದು ರೂಪಾಯಿ’ ಎಂಬುದು ಯಾವ ಕಾರಣಕ್ಕೂ ವಸೂಲಾಗುವುಂಥದ್ದಲ್ಲ. ಹಾಗೆಯೇ ಯಾರೊಬ್ಬರೂ ಪ್ರಸ್ತಾಪಿಸುವಷ್ಟು ಮುಖ್ಯ ವಿಷಯವೂ ಇದಲ್ಲ. ಹೀಗೆ ಮರುಪಾವತಿಯಾಗದೆ ಉಳಿದ ಎಷ್ಟೋ ‘ಒಂದು ರೂಪಾಯಿ’ ಗಳು ನಮ್ಮ-ನಿಮ್ಮ ನಡುವಿರಬಹುದು. ಅವುಗಳ ಲೆಕ್ಕ ಮಾಡಲು ಯಾರಿಗೂ ಪುರಸೊತ್ತಿಲ್ಲ ಮತ್ತು ಸಂಬಂಧಗಳನ್ನು ಹದಗೆಡಿಸುವಷ್ಟು ದೊಡ್ಡ ವಿಷಯವೂ ಇದಾಗಿರದ ಕಾರಣ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿಲೇ ಇರಬಹುದು.

ಕ್ಷಮಿಸಿ. ಇಷ್ಟು ದಿನ ನನ್ನ ಗೆಳೆಯನಿಗೂ ಹೇಳದ ಈ ವಿಷಯವನ್ನು ಇಂದು ಜಗಜ್ಜಾಹೀರು ಮಾಡಿದ್ದೇನೆ. ಇಲ್ಲಿರುವ ಒಂದು ರೂಪಾಯಿ ನಿಮ್ಮಲ್ಲಿಯೂ ಕೆಲವರಿಗೆ ಸಂಬಂಧಪಟ್ಟಿರಬಹುದು. ಬದಲಾದ ಕಾಲದ ಮೌಲ್ಯಗಳೊಂದಿಗೆ ಹಣದ ಮೌಲ್ಯವೂ ಬದಲಾಗಿರುವುದರಿಂದ ಈಗ ಆ ಒಂದು ರೂಪಾಯಿಯ ಸ್ಥಾನಕ್ಕೆ ಐದು ಅಥವಾ ಹತ್ತು ರೂಪಾಯಿ ಬಂದಿರಬಹುದು. ಆದರೆ ಆ ಸ್ನೇಹಿತನೋ , ಸಂಬಂಧಿಕನೋ ಇನ್ನೂ ನಮ್ಮವನಾಗಿದ್ದಾನಾ ಎಂಬುದು ಮುಖ್ಯ .

ಅಂದಹಾಗೆ ಎರಡನೆಯ ಬಾರಿ ಒಂದು ರೂಪಾಯಿ ಕೊಡೆಂದು  ಹಗುರವಾಗಿ ಕೇಳಿದ ಆ ಗೆಳೆಯನಿಗೆ ನಾನು ಒಂದು ರೂಪಾಯಿ ಕೊಟ್ಟೆನೋ , ಇಲ್ಲವೋ ಎಂಬುದು ನನ್ನ ಖಾಸಗಿ ವಿಷಯ. ನಿಮಗದನ್ನು ಹೇಳಲೇಬೇಕೆಂದಿಲ್ಲ. ಆದರೆ ನಿಮ್ಮ ಮನಸ್ಸಿನ ಕನ್ನಡಿಗದು ಈಗಾಗಲೇ ಕಾಣಿಸಿರುತ್ತದೆ .

“ಹಣದ ವಿಷಯದಲ್ಲಿ ಈ ಜಗತ್ತಿನಲ್ಲಿ ಯಾರದ್ದೂ ತೀರ ಭಿನ್ನವಾದ, ಖಾಸಗಿಯಾದ ವ್ಯಕ್ತಿತ್ವವಿರುವುದಿಲ್ಲ” ಎಂಬುದನ್ನು ಹೇಳಲು ಈ ಅತ್ಯಲ್ಪ ಮತ್ತು ಅಮುಖ್ಯ ದೃಷ್ಟಾಂತವನ್ನು ವಿವರಿಸಬೇಕಾಯಿತು.

ನಿಮಗೆ ಗೊತ್ತಿರಲಿ ಅಂತ ಹೇಳ್ತೇನೆ. ಆ ತರಕಾರಿ ಗಾಡಿಯವನಿಗೆ ನಾನು ಕೊಡಬೇಕಾದ ಒಂದು ರೂಪಾಯಿಯನ್ನು ನಾನಿನ್ನೂ ಕೊಟ್ಟಿಲ್ಲ. ಅದಾದಮೇಲೆ ಸಾಕಷ್ಟು ಬಾರಿ ಅವನ ಬಳಿ ತರಕಾರಿ ಕೊಂಡಿದ್ದೇನೆ. ಅವನೂ ಅದರ ಬಗ್ಗೆ ನನ್ನ ಹತ್ತಿರ ಕೇಳಿಲ್ಲ. ಥೇಟ್ ನನ್ನ ಥರವೇ.

*            *            *              *           *            *

ಈ ವಾರಾಂತ್ಯ  ಶಿವಮೊಗ್ಗಕ್ಕೆ ಹೋಗುವುದಿದೆ. ಮೀನಾಕ್ಷಿಭವ‌ನದ ಪಡ್ಡು ಸಿಗೋದು ಖಚಿತವಿದೆ. ಆದರೆ ‘ಆ ಒಂದು ರೂಪಾಯಿಯ’ ಬಗ್ಗೆ ನನಗೆ ಯಾವುದೇ ಭರವಸೆಯಿಲ್ಲ

1 comment

Leave a Reply