ವೆಂಕಟಸುಬ್ಬಯ್ಯನವರ ಕಣ್ಣೀರು ನಿಲ್ಲಲಿಲ್ಲ..

ಪ್ರತಿಭಾ ನಂದಕುಮಾರ

ನನಗೆ ಖಾಲಿ ಅನ್ನಿಸಿದಾಗಲೆಲ್ಲ ಪ್ರೊ ಜಿ ವಿ ಅವರ ಮನೆಗೆ ಹೋಗಿ ಅವರ ಪಾದಗಳಿಗೆ ದೀರ್ಘ ನಮಸ್ಕಾರ ಮಾಡುತ್ತೇನೆ. ಆಗ ಅವರು ತಮ್ಮ ಎರಡೂ ಹಸ್ತಗಳನ್ನು ನನ್ನ ಬೆನ್ನ ಮೇಲಿಟ್ಟು ಹರಸುತ್ತಾರೆ. ಅಸಾಧ್ಯವಾದ ಒಂದು ಚೇತನ ನನ್ನೊಳಗೆ ಹರಿದು ಬರುತ್ತದೆ. ಅದು ಮುಂದೆ ಎಷ್ಟೊ ಕಾಲಗಳ ವರೆಗೆ ಕೆಲಸ ಮಾಡಲು ನನಗೆ ಶಕ್ತಿ ಕೊಡುತ್ತದೆ.

ಹಾಗೆಯೇ ಇವತ್ತು ಹೋಗಿದ್ದೆ. ಮುಂದಿನ ತಿಂಗಳು ಅವರಿಗೆ ನೂರಾ ಆರು. ಇಷ್ಟು ವರ್ಷ ಇರ್ತಿನಿ ಅಂತ ಅಂದುಕೊಂಡೆ ಇರಲಿಲ್ಲ ಅಂದರು.

ನಂತರ ನನ್ನ ಕೆಲಸಗಳ ಬಗ್ಗೆ ವಿವರವಾಗಿ ವಿಚಾರಿಸಿದರು. ಸೂಕ್ತ ಸಲಹೆಗಳನ್ನು ಕೊಟ್ಟರು. ” ನಾನು ಈಗ ಬರಿ ಓದ್ತಾ ಇದ್ದೀನಿ ಬರಿಯಕ್ಕೆ ಆಗಲ್ಲ” ಅಂದರು. ನಾನಂದೆ ” ಹೋದ ಸಲ ಬಂದಾಗ ನೀವು ಮಾಲತಿ ಮಾಧವ ಓದ್ತಾ ಇದ್ರಿ. ಓದೇ ಇರಲಿಲ್ಲ ಅಂದಿದ್ರಿ. ನಿಮ್ಮ ಮಾತು ಕೇಳಿ ನಾನಿನ್ನೂ ಓದಿಲ್ಲ ಅಂತ ನಾಚಿಕೆ ಆಗಿ ಓದಿದೆ” ಅಂದೆ. (ಮಾಲತಿ ಮಾಧವ ದಲ್ಲಿ ಮೊದಲ ಬಾರಿಗೆ ಚಂಡಿ ಪೂಜೆಯ ಪ್ರಸ್ತಾಪ ಬರುತ್ತೆ, ನನ್ನ ಚಾಮುಂಡಿ ಅಧ್ಯಯನಕ್ಕೆ ಅದು ಬೇಕಾಗಿದೆ.)

ಮಾಲತಿ ಮಾಧವ ಅಂತ ಹೇಳಿದ್ದು ಕೇಳಿ ಅವರ ಕಣ್ಣು ಮಂಜಾದವು.

ಅವರು ಒಂದು ಮಾತು ಹಂಚಿಕೊಂಡರು. “ನಮ್ಮ ತಂದೆ ಬಹಳ ದೊಡ್ಡ ವಿದ್ವಾಂಸರು. ಅವರು ಬೇಕಾದಷ್ಟು ಪುಸ್ತಕಗಳನ್ನು ಬರೆದರು. ಮಾಲತಿ ಮಾಧವ ವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಮಾಡಿದ್ರು. ಅದನ್ನ ತಮ್ಮ ಕಪಾಟಿನ ಒಂದು ಕಡೆ ಇಟ್ಟಿದ್ರು. ಅವರು ಸಾಯುವಾಗ ನನಗೆ ‘ಹಸ್ತಪ್ರತಿಯನ್ನ ಕಪಾಟಿನಲ್ಲಿ ಇಟ್ಟಿದ್ದೀನಿ ಅದನ್ನ ಮುದ್ರಣ ಮಾಡಿಸು” ಅಂದ್ರು. ನಾನು ಮಾಡಿಸ್ತೀನಿ ಅಂತ ಮಾತು ಕೊಟ್ಟೆ.

ಅವರು ತೀರಿ ಏಳು ವರ್ಷ ನಾನು ಮನೆಗೆ ಹೋಗಲಿಲ್ಲ. (ಅವರ ಕಣ್ಣಿಂದ ನೀರು ಹರಿಯುತ್ತಿತ್ತು. ನನ್ನ ಗಂಟಲು ಕಟ್ಟಿತ್ತು ) ಆಮೇಲೆ ಹೋದಾಗ ನನ್ನ ತಮ್ಮ ಇದೇನೋ ಹಳೆ ಕಾಗದಗಳೆಲ್ಲ ತುಂಬಿಕೊಂಡಿದೆ ಕಪಾಟಿನಲ್ಲಿ ಅಂತ ಅವರ ಹಸ್ತಪ್ರತಿಗಳನ್ನೆಲ್ಲ ಹಳೇಪೇಪರ್ ಗೆ ಹಾಕಿ ಬಿಟ್ಟಿದ್ದ. ಎಂಥಾ ಪುಸ್ತಕ…..” ಮುಂದೆ ಮಾತಾಡಲು ಅವರಿಗೆ ಆಗಲಿಲ್ಲ. ಕಣ್ಣೀರು ನಿಲ್ಲಲಿಲ್ಲ.

ಸದಾ ಉತ್ಸಾಹ ಸಂಭ್ರಮ ಚೈತನ್ಯ ಗಳ ಮೂರ್ತಿಯಾಗಿ ಕಂಡಿದ್ದ ಗುರುಗಳನ್ನು ಮೊಟ್ಟ ಮೊದಲ ಬಾರಿಗೆ ಆ ಸ್ಥಿತಿಯಲ್ಲಿ ನೋಡಿದ್ದು. ಸ್ವಲ್ಪ ಹೊತ್ತು ಸುಮ್ಮನೆ ಇದ್ದು ನಂತರ ಕಣ್ಣೊರೆಸಿಕೊಂಡು ಸಮಾಧಾನ ಮಾಡಿಕೊಂಡು ಬೇರೆ ಮಾತಾಡಿದರು.

ಅವರಿಗೆ ಸಾಂತ್ವನ ಹೇಳುವ ಧಾರ್ಷ್ಟ್ಯ ನಾನು ಮಾಡಲಿಲ್ಲ.

ಬರುವಾಗ ಮತ್ತೆ ನಮಸ್ಕಾರ ಮಾಡಿದೆ. ನೇರಳೆ ಹಣ್ಣು ಕೊಟ್ಟೆ. “ನೀಲಿ ಹಣ್ಣು… ನೀವೆಲ್ಲ ನನಗೆ ಎಷ್ಟು ವಿಶ್ವಾಸ ತೋರಿಸ್ತೀರಿ” ಅಂದ್ರು. ಒಂದು ಫೋಟೋ ಬೇಕು ನಿಮ್ಮ ಜೊತೆ ಅಂದೆ. ಅನುಮತಿಸಿದರು.

“ಬೇಗ ಚಾಮುಂಡಿ ಪುಸ್ತಕ ಬರಿ. ಅದು ಅಪರೂಪದ ಪುಸ್ತಕ ಆಗುತ್ತೆ. ನೀನು ಮಾಡಬೇಕಾದ ಕೆಲಸ ಅದು” ಅಂದ್ರು.

ಇಷ್ಟು ಚೈತನ್ಯ ತುಂಬಿ ಕೊಂಡ ಮೇಲೆ ಇನ್ನು ಬರೆಯುವುದೇ…..

ಮುಂದಿನ ವರ್ಷಕ್ಕೆ ಸಿದ್ಧವಾಗುತ್ತದೆ.

Leave a Reply