ಆಫ್ರಿಕಾದ ಕವಿಯೂ.. ಸಾವಿನ ಮನೆಯ ಹಾಡುಗಾರನೂ..

‘ನೋಡೋ ನಿನ್ನ ಫ್ರೆಂಡ್ ನನಗೆ ಫೇಸ್ಬುಕ್ ನಲ್ಲಿ ಮೆಸೇಜ್ ಮಾಡುತ್ತಿದ್ದಾನೆ, ಅದು ಏನೇನೋ ಹೇಳುತ್ತಿದ್ದಾನೆ’ ಎಂದು ಅವಳು ಹೇಳಿದಾಗ ನನಗೆ ಮುಜುಗರವಾಯಿತು. ಅವನನ್ನ ಅವಳಿಗೆ ಪರಿಚಯಿಸಿದ್ದೇ ತಪ್ಪಾಗಿದೆ ಎನಿಸಿತು. ಸಿಟ್ಟು ಬಂತು.

ಈ ಎಲ್ಲವನ್ನು ನನಗೆ ಹೇಳುವ ಮೂಲಕ ಅವಳು ಅವನನ್ನು ದೂರುತ್ತಿದ್ದಾಳೋ ಅಥವಾ ನನಗೂ ಈ ಬೆಳವಣಿಗೆಗಳು ತಿಳಿದಿರಲಿ ಎಂದು ಕೇವಲ ವಿಷಯ ತಿಳಿಸುತ್ತಿದ್ದಾಳೋ ಎನ್ನುವುದು ಅರ್ಥವಾಗದೆ ಕ್ಷಣಕಾಲ ತಡವರಿಸಬೇಕಾಯ್ತು. ಕಡೆಗೆ ಸಾವರಿಸಿಕೊಂಡು ‘ಇರು, ನಾನು ಅವನಿಗೆ ಹೇಳ್ತೀನಿ’ ಎಂದು ಸಮಾಧಾನಿಸಿದೆ. ತಕ್ಷಣವೇ ಇವನಿಗೆ “Why are you sending messages to her? Don’t do that.”  ಎಂದು ಮೆಸೇಜ್ ಮಾಡಿ ಅವಳನ್ನ ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು ಎನ್ನುವಂತೆ ನಡೆದುಕೊಂಡಿದ್ದೆ.

ಎಷ್ಟೋ ಹೊತ್ತಿನ ನಂತರ ಅದು ಕೆದಕಲು ಆರಂಭವಾಯಿತು. ಅವನು ಅವಳಿಗೆ ಏನು ಮೆಸೇಜ್ ಮಾಡಿರಬಹುದು? ಕೇವಲ ಎರಡು ದಿನಗಳ ಹಿಂದಷ್ಟೇ ಅವನು ಅವಳನ್ನ ಮೊದಲ ಸಾರಿ ನೋಡಿದ್ದು. ಇಬ್ಬರು ಮಾತನಾಡಿದ್ದು ಕೇವಲ ಒಂದು ತಾಸು. ಅದರ ನಡುವೆ ಜಾರಿಯಾದ ನಗು, ಮೌನ, ಮತ್ತೆಲ್ಲೋ ನೋಡುತ್ತ ಕಳೆದುಹೋದ ಸಮಯ, ಎದುರಾದವರೊಂದಿಗೆ ದಾಟಿಸಿದ ಮಾತುಗಳು, ಒಟ್ಟಿಗೆ ಊಟ ಮಾಡಿದ್ದು, ಜೋರು ಮಳೆಗೆ ಹೆದರಿ ಇದ್ದ ಹೊಟೇಲ್ ನಲ್ಲೇ ಊಟದ ನಂತರ ಮೊಬೈಲ್ ಹಿಡಿದು ಎದುರಿದ್ದವರೊಂದಿಗೆ ಮಾತುಗಳು ಖಾಲಿಯಾಗಿವೆ ಎನ್ನುವಂತೆ ಇನ್ನೆಲ್ಲೋ ಇದ್ದವರ ಯೋಗಕ್ಷೇಮವನ್ನ ಫೇಸ್ಬುಕ್ ನಲ್ಲಿ ವಿಚಾರಮಾಡುತ್ತ ಮೂವರೂ ಮುಳುಗಿಹೋಗಿದ್ದು, ಆ ಎಲ್ಲವನ್ನ ಕಳೆದ ಒಂದು ತಾಸಿನಿಂದ ವ್ಯವಕಲನ ಮಾಡಿದರೆ ಅವರಿಬ್ಬರ ನಡುವೆ ಉಳಿಯುವುದು ಕೇವಲ ಕೆಲವು ನಿಮಿಷಗಳು ಮಾತ್ರ.

ಕೇವಲ ನಿಮಿಷಗಳನ್ನು ಮಾತ್ರ ಕಳೆದ ಅವನು ಅವಳೊಂದಿಗೆ ಹೇಳಿಕೊಳ್ಳಬಹುದಾದ ಮಾತುಗಳು ಏನಿರಬಹುದು? ಅವಳೊಂದಿಗೆ ನಾನು ಈ ಎಲ್ಲವನ್ನ ಹೇಳಿಕೊಳ್ಳಬಹುದು ಎನ್ನುವ ಖಚಿತತೆಯಾದರೂ ಅವನಿಗೆ ಬಂದಿದ್ದಾರು ಎಲ್ಲಿಂದ? ಹೇಗೆ?

ಅವಳನ್ನ ಕೇಳಿದೆ. ಅವನು ಏನು ಮೆಜೇಜ್ ಮಾಡಿದ್ದಾನೆ Anything wrong?. ಅವಳು ತಕ್ಷಣವೇ, ” ಛೇ ಇಲ್ಲ, ಇಲ್ಲ, ಹಾಗಲ್ಲ ಅವನಿಗೆ ಏನೋ ಒಂಟಿತನವಂತೆ ಕಣೋ” I will manage ಎಂದು ಹೇಳಿ ಸುಮ್ಮನಾದಳು. ನಾನು ಹೆಚ್ಚು ರಾಡಿಮಾಡಲಿಲ್ಲ.

ಯಾಕೋ ಸಣ್ಣದಾಗಿ ನಗು ಬಂತು. ಬೆಂಗಳೂರಿನಂತ ಮಹಾನಗರದಲ್ಲಿ ಒಂಟಿತನದ ದೊಡ್ಡ ಪರದೆಯಂತ ಆಕಾಶವನ್ನ ಸೀಳುತ್ತ ಕಳೆದ ಎರಡು ವರ್ಷಗಳಲ್ಲಿ ನನ್ನ ಎಷ್ಟು ದಿನಗಳು ಕಳೆದು ಹೋಗಿರಬಹುದು? ಈಗ ಸಣ್ಣದಾಗಿ ನಗುವಷ್ಟು ಚೈತನ್ಯವನ್ನ ಬೆಂಗಳೂರೇ ನೀಡಿದೆ. ನಿಜ, ಆದರೆ ಈ ಮೊದಲು?

ನಾನು ಒಬ್ಬನೇ ಬದುಕಿ ತೋರಿಸುತ್ತೇನೆ ಎನ್ನುವಂತಹ ಉದ್ದಟತನದ, ಭರವಸೆಯ ಹಾಗೂ ಹುಂಬತನದ ಮಾತುಗಳನ್ನು ನಮಗೆ ನಾವೇ ಆರೋಪಿಸಿಕೊಂಡು ಅಥವಾ ಮತ್ತೊಬ್ಬರ ಎದುರಿಗೆ ತಮ್ಮನ್ನು ತಾವು ಸಾಭೀತು ಮಾಡಿಕೊಳ್ಳಲು ಬಂದ ಎಷ್ಟು ಜನರು ಈ ಬೆಂಗಳೂರಿನಲ್ಲಿ ಇಷ್ಟದ ಕೆಲಸ, ಒಳ್ಳೆಯ ಸಂಬಳದ ನಡುವೆಯೂ ಒಂಟಿತನದ ಆಕಾಶವನ್ನ ದಿನನಿತ್ಯವೂ ಸೀಳುತ್ತ ನರಳುತ್ತಿಲ್ಲ!

ಇಂತಹ ರಾತ್ರಿಗಳನ್ನ ಒಬ್ಬನೇ ದಾಟುವುದಕ್ಕಾಗಿ ಪರಿತಪಿಸುತಿರುವಾಗಲೇ ಬೆಂಗಳೂರು ನನಗೆ ತೀರಾ ಹತ್ತಿರ ಎನಿಸಿದ್ದು. ಅಂತಹದೊಂದು ಒಂಟಿತನವನ್ನ ದಾಟುವುದಕ್ಕೆ ಈಗಲೂ ಪ್ರಯೋಗಗಳು ಅವಿರತ ನಡೆಯುತ್ತಲೇ ಇವೆ.

ಈಗ ಯಾರು ಇರದೇ ಇದ್ದರು ನಾನು ಏನನ್ನಾದರು ಬರೆಯುತ್ತ, ಕಾವ್ಯಗಳನ್ನೋ, ಕತೆಗಳನ್ನೋ ಓದುತ್ತಾ ಕೂತು ಬಿಡುತ್ತೇನೆ. ಲ್ಯಾಪ್ ಟಾಪ್ ನಲ್ಲಿ ಸಿನೆಮಾ ನೋಡುತ್ತೇನೆ. ಎಲ್ಲಿಯೋ ಒಂಟಿಯಾಗಿ ನಡೆದು ಬರಲು ಚಪ್ಪಲಿ ಮೆಟ್ಟು ಹೊರಟು ಬಿಡುತ್ತೇನೆ. ಹಿಂದಿರುಗಿ ಬರುವಾಗ, ಎಲ್ಲೋ ರಸ್ತೆ ಬದಿಯ ಫಾಸ್ಟ್ ಫುಡ್ ನಲ್ಲಿ ದೋಸೆ ತಿಂದು ರೂಮಿಗೆ ವಾಪಸ್ಸಾಗಿಬಿಡುತ್ತೇನೆ. ಸಣ್ಣನಿದ್ರೆ‌, ಧ್ಯಾನ,  ಸಾಧ್ಯವಾದವರೊಂದಿಗೆ ಒಂದಿಷ್ಟು ಮಾತು, ಇಷ್ಟೇ‌‌.  ಅದೊಂದು ನನ್ನ ಖಾಸಗಿಲೋಕ. ಅಲ್ಲಿ ಎಲ್ಲವೂ ನನ್ನ ನಿರ್ಧಾರಗಳು. ಅಲ್ಲಿ ನಿರ್ಬಂಧಗಳಿಲ್ಲ ಸೋಂಕಿಲ್ಲ.

ಆದರೆ ಅಂತಹದೊಂದು ಖಾಸಗಿಲೋಕ ಸೃಷ್ಠಿಯಾಗುವುದಕ್ಕೆ ನನ್ನ ಸಾವಿರಾರು ದಿನಗಳ ವ್ಯಯವಾಗಿದೆಯಲ್ಲ. ನಾನು ದಿನಗಳನ್ನು ಬಂಡವಾಳವನ್ನಾಗಿ ಹಾಕಿದ್ದೇನೆ ಎನ್ನುವುದಕ್ಕಿಂತ ಅಂತಹದೊಂದು ಖಾಸಗಿಲೋಕದ ಪ್ರವೇಶ ಸಾಧ್ಯವಾಗಿದ್ದು ಒಂಟಿತನದೊಂದಿಗೆ ಸಾಧಿಸಲು ಯತ್ನಿಸಿದ ಒಡನಾಡದಿಂದ ಎನ್ನುವುದು ನನ್ನ ನಂಬಿಕೆ. ಹುಲಿಯನ್ನು ಹಿಡಿದು ಪಳಗಿಸಿದಂತೆ ನಮ್ಮೊಳಗನ್ನ ನಾವು ಹಿಡಿದು ಪಳಗಿಸಿಕೊಳ್ಳದಿದ್ದರೆ ಹೇಗೆ?

“ನಿನ್ನ ಒಂಟಿತನವನ್ನ ದಿವ್ಯ ಏಕಾಂತವನ್ನಾಗಿಸಿಕೊಳ್ಳಬೇಕು” ಎಂದು ಕವಿ ರೈನರ್ ಮಾರಿಯಾ ರಿಲ್ಕ್ ಬರೆದ ಪತ್ರ ತನ್ನ ಶಿಷ್ಯ ಕಾಪ್ಪಸ್ ಗೆ ಮಾತ್ರವಲ್ಲ ಅದು ನನಗೂ ಹೌದು ಎನಿಸಿದ್ದು ಇದೇ ಬೆಂಗಳೂರಿನಲ್ಲಿ.

ಮೈಸೂರಿನ ಸರಸ್ವತಿಪುರಂ ಪಾರ್ಕ್ ನಲ್ಲಿ ಕೂತು ಆ ಪತ್ರವನ್ನ ಓದಿದಾಗ ಅದೊಂದು ಸಾಹಿತ್ಯ ಕೃತಿಯಾಗಿಯಷ್ಟೇ ಕಂಡಿತ್ತು. ಆದರೆ ತುಂಬು ಒಂಟಿತನವನ್ನ ಎದೆಯಲ್ಲಿಟ್ಟುಕೊಂಡು ಅದೇ ಪತ್ರವನ್ನ ತೆರೆದು ಬೆಂಗಳೂರಿನ ಸಿಕ್ಕ ಸಿಕ್ಕ ಜಾಗಗಳಲ್ಲಿ ಮತ್ತೆ ಮತ್ತೆ ಓದಿದಾಗ ಅದು ಧ್ವನಿಸಿದ ಮಾತುಗಳು ಭಿನ್ನವಾಗಿ ಕೇಳುತ್ತಿದ್ದವು. ಓದಿದ ಪತ್ರ ಹಾಗೂ ಓದಿದ್ದ ನಾನು ಇಬ್ಬರೂ ಬದಲಾಗಿಲ್ಲ. ಆದರೂ ಪತ್ರ ಧ್ವನಿಸುವ ಅರ್ಥಗಳು ಮಾತ್ರ ವಿಭಿನ್ನವಾಗಿದ್ದವು. ಅದು ಏಕೆ?  ಹಾಗಾದರೆ ನಿಜಕ್ಕೂ ಬದಲಾಗಿರುವುದು ಏನು? ಅನುಭವವಾ? ಜಾಗವ? ನಾನಾ? ಅಥವಾ ಪತ್ರದ ಒಳಾರ್ಥವಾ?

ಬೆಂಗಳೂರಿನಲ್ಲಿ ಮನುಷ್ಯ, ಪುಸ್ತಕಗಳು ಮಾತ್ರವಲ್ಲ, ಎಲ್ಲವೂ ಒಂದೊಂದು ಪಾಠವನ್ನು ಕಲಿಸುತ್ತವೆ. ಒಳಗಣ್ಣಿನಿಂದ ಕಾಣಬೇಕು ಅಷ್ಟೇ.

“ಸಂದೀಪಾ ದುಡಿಯುವವರನ್ನ ಬೆಂಗಳೂರು ಯಾವತ್ತೂ ಉಪವಾಸ ಹಾಕುವುದಿಲ್ಲ ಕಣೋ” ಎಂದು ಎಷ್ಟೋ ವರ್ಷಗಳ ಹಿಂದೆ ಯೋಗೇಶ ಹೇಳಿದ ಮಾತುಗಳು ನನಗೆ ಸತ್ಯ ಎನಿಸುವುದಕ್ಕೆ ಬೆಂಗಳೂರಿಗೆ ಬಂದ ಮೊದಲ ವಾರ ಸಾಕಾಗಿತ್ತು.

ಆದರೆ ಪ್ಯಾರಿಸ್ ನಗರವನ್ನ ಮೊದಲ ಬಾರಿಗೆ ನೋಡಿದ ಆಫ್ರಿಕಾದ ಕವಿಯೊಬ್ಬ ಎಲ್ಲಾ ಮಹಾನಗರಗಳ ಆಳದಲ್ಲಿ ಒಂದು ವಿಚಿತ್ರ ಮೌನವಿದೆ ಎಂದು ಹೇಳಿದನ್ನು ಕಂಡುಕೊಳ್ಳಲು ನನಗೆ ಇಂದಿಗೂ ಸಾಧ್ಯವಾಗಿಲ್ಲ.

ಬೆಂಗಳೂರಿಗೆ ಬಂದ ಹೊಸತು. ಮಾತನಾಡಲು ಯಾರೂ ಇರಲಿಲ್ಲ. ಒಬ್ಬನೇ ಇರುತ್ತಿದ್ದೆ. ನೋಡಿದ, ಮಾತನಾಡಿದ ಎಲ್ಲವೂ ಹೊಸತು ಮತ್ತು ಹೊಸಬರು. ಗಾಂಧಿ ಬಜಾರಿನಲ್ಲಿ ಹೂ ಮಾರುವ ಮುದುಕಿಯಿಂದ ಮೆಜೆಸ್ಟಿಕ್ ನಲ್ಲಿ ತಮ್ಮನ್ನೇ ತಾವು ಒಂದಿಷ್ಟು ಕಾಲ ಅಡವಿಟ್ಟುಕೊಳ್ಳುವ ಹೆಂಗಸರ ತನಕ ಎಲ್ಲವೂ ಹೊಸತು. ಅಲ್ಲೆಲ್ಲಾ ಭಯ, ಕುತೂಹಲ, ಜೀವನಪ್ರೀತಿ ರೇಜಿಗೆಗಳಷ್ಟೇ ತುಂಬಿಹೋಗಿರುತ್ತಿದ್ದವು. ಅಂತಹ ಘಳಿಗೆಯಲ್ಲಿ ಮೌನವನ್ನ ಸಾಧಿಸುವುದು ನನಗೆ ಸಾಧ್ಯವಾಯಿತು.

ಯೋಗೇಶನ ಮಾತುಗಳನ್ನು ಸಂಧಿಸುವುದಕ್ಕೆ ಅಷ್ಟು ಪ್ರಮಾಣದ ಮೌನ ಸಾಕಿರಬಹುದು ! ಆದರೆ ಆಫ್ರೀಕಾದ ಕವಿ ಹೇಳಿದ ಮಾತುಗಳನ್ನು ಕಂಡುಕೊಳ್ಳುಲು ಬೇಕಾದ ಮೌನದ ಪ್ರಮಾಣವನ್ನ ಸಾಧಿಸುವುದು ಸಾಧ್ಯವಾಗಿಲ್ಲ. ಈಗ ನಾನು ಬೆಂಗಳೂರಿಗೆ ಒಂದಿಷ್ಟು ಪರಿಚಿತ. ಸಾಕು ಎನಿಸುವಷ್ಟು ಕೆಲಸವಿದೆ. ಸಾಕಷ್ಟು ಗೆಳೆಯರಿದ್ದಾರೆ.  ಕೊನೆಗಾಣದ ಹರಟೆ ಕೊಚ್ಚುವ ಅವರೆಲ್ಲರ ನಡುವೆ ಮೌನವಾಗಿರುವುದೇ ದುಸ್ತರ ಇನ್ನು ಒಂಟಿತನವನ್ನ ಸಾಧಿಸುವುದಾದರೂ ಹೇಗೆ?

ಈ ಕಾರಣಕ್ಕಾದರೂ ಆಗಾಗ ಬೆಂಗಳೂರಿನ  ಆಳಕ್ಕಿಳಿಯುವುದು ಒಳ್ಳೆಯದು. ಹಾಗೆ ಆಳಕ್ಕಿಳಿದಷ್ಟು ಒಂಟಿಯಾಗುತ್ತ, ಮೌನವಾಗುತ್ತ ದೊರೆಯುವ ಏಕಾಂತದಲ್ಲಿ ಉಳಿದುಹೋದರೆ ನಮ್ಮನ್ನು ನಾವೇ ಹುಡುಕಿಕೊಳ್ಳುವ, ಕಂಡುಕೊಳ್ಳುವ ಅವಕಾಶವನ್ನ ಬೆಂಗಳೂರು ಸದ್ದಿಲ್ಲದೆ ನಮಗೆ ದಯಪಾಲಿಸುತ್ತದೆ. ಅದು ಮಹಾನಗರಗಳ ಸದ್ಗುಣ. ಅಂತಹದೊಂದು ಕ್ರಿಯೆಗೆ ನೋಯುತ್ತಲೇ ಒಳಗಾಗಿಬಿಡಬೇಕು.

ಸಾವಿರಾರು ಪುಟಗಳ ಖಂಡಕಾವ್ಯಗಳು ತೋರಲು ಸಾಧ್ಯವಾಗದ ಸಹಜ ಹಾಗೂ ಪಕ್ವ ಜಗತ್ತನ್ನ ಸಣ್ಣ ಕವಿತೆ ಅಥವಾ ಹಾಯ್ಕುಗಳು ನಮ್ಮ ಎದುರು ತೆರೆದಿಡುತ್ತವೆ. “ನೋಡು ಮಾರಾಯ ಬದುಕು ಇರುವುದು ಇಷ್ಟು ಮಾತ್ರ. ನೀನೇ ಇಲ್ಲದನ್ನ ಕಲ್ಪಿಸಿಕೊಂಡು ಮತ್ತೆ ಯಾವುದೋ ಇಲ್ಲದಕ್ಕೆ ನರಳುತ್ತಿರುವವನು” ಎಂದು ಮೋಕ್ಷಕ್ಕೆ ದಾರಿ ತೋರಿದಂತೆ ಗೋಚರವಾಗುತ್ತದಲ್ಲ ಅಂತಹ ಅನೂಹ್ಯ ಘಳಿಗೆ ಸಾಧ್ಯವಾಗುವುದು ಮೌನದಿಂದ. ಒಂಟಿತನದಿಂದ. ಏಕಾಂತದಿಂದ ಮಾತ್ರ.

ಸಿಮೆಂಟು ಮೂಟೆಗಳನ್ನು ಹೊತ್ತ ಬೆನ್ನು
ತುಸು ತುಸುವೇ ಬಾಗಿ
ನೆಲಕ್ಕೆ ಹತ್ತಿರವಾದಾಗ
ಯಾರದೋ ಮನೆಯ ಮಹಡಿ
ತುಸು ತುಸುವೇ ಮೇಲಕ್ಕೇಳುತ್ತದೆ.

– ಡಾ ಸಿ ರವೀಂದ್ರನಾಥ್

ಈ ಪುಟಾಣಿ ಪದ್ಯ ತೆರೆದಿಡುತ್ತಿರುವ ಬದುಕಿನ ಅರ್ಥ ವಿಸ್ತಾರವಾದದ್ದು.

ಅದೇ ಸಿಮೆಂಟು, ಕಬ್ಬಿಣ, ಕೂಲಿ, ಮರಳು, ಇಟ್ಟಿಗೆ ಎಂದು ವರ್ಷಾನುಗಟ್ಟಲೆ ಬಡಿದಾಡಿದ, ಕೆಲಸದವರೊಂದಿಗೆ ಸದಾ ಕಿರುಚಾಡಿದ ಮನೆಯನ್ನು ಕಟ್ಟಲು‌ ಬಡಿದಾಡಿದ ಅದೇ ಮಾಲೀಕ ಸಾಧಿಸಿದ್ದು ಕೇವಲ ಸದ್ದು ಮಾತ್ರ. ಅವನಿಗೆ ಮೌನ ಸಾಧ್ಯವಾಗಿಲ್ಲ. ಒಳಗಣ್ಣು ತೆರೆಯುವ ಅವಕಾಶವಾಗಿಲ್ಲ. ಮೌನ, ಒಂಟಿತನ, ಏಕಾಂತವನ್ನ ಸಾಧಿಸದ ಅವನಿಗೆ ಕಾಣುವುದು ಕೇವಲ ಸಿಮೆಂಟು ಮೂಟೆ ಮಾತ್ರ ಅದನ್ನು ಹೊತ್ತ ಅಸ್ಥಿಪಂಜರದಂತ ಬೆನ್ನಲ್ಲ.

ಸದಾ ದೊಡ್ಡ ದೊಡ್ಡ ಮಾತುಗಳನ್ನಾಡುತ್ತ, ಮೇಧಾವಿಯಂತೆ ತರ್ಕಿಸುತ್ತ ಕೂರುವವರು ಬದುಕನ್ನ ಚೊಕ್ಕಟವಾಗಿ ಬದುಕಬಹುದಷ್ಟೇ. ಆದರೆ ಅನುಭವಿಸಲಾಗುವುದಿಲ್ಲ. ಖಂಡಕಾವ್ಯಗಳಂತೆ ಮಾತಿನ ಸರಕಾಗುವುದಕ್ಕಿಂದ, ಸಹವಾಸ ಮಾಡಿದವರಿಗಷ್ಟೇ ಗುಟ್ಟು ಬಿಟ್ಟುಕೊಡುವ ಕವಿತೆಯಂತೆಯೋ ಹಾಯ್ಕಿನಂತೆಯೋ ಬದುಕಿಬಿಡುವುದು ಒಳ್ಳೆಯದಲ್ಲವಾ?

ನಿನ್ನ ಬಗ್ಗೆ ಎಲ್ಲವೂ ಗೊತ್ತಿದೆ ಮಾರಾಯ ಸುಮ್ಮನೇ ಮಾತಾಡಬೇಡ ಎನಿಸಿಕೊಳ್ಳುವವನ ನಡುವೆ, ಅವನೊಂದು ನಿಗೂಢ ಮಾರಾಯ. ಪಾಪದವನು ಅದು ಏನು ಮಾಡುತ್ತಾನೊ ಏನೋ ಒಂದೂ ತಿಳಿಯುತ್ತಿಲ್ಲ ಎನಿಸಿಕೊಳ್ಳುವುದು ನಿಜವಾಗಿಯೂ ಕಷ್ಟವಾದದ್ದು. ಅದೊಂದು ಸತ್ಯದ ಜೀವನದರ್ಶನ. ಅಂತಹವರ ಎದೆಯಲ್ಲಿ ಕವಿತೆಯಂತ ಮೌನವಿರುತ್ತದೆ. ಏಕಾಂತವಿರುತ್ತದೆ. ಒಂಟಿತನವಿರುತ್ತದೆ.

ಬೆಂಗಳೂರಿನಲ್ಲಿ ಎಲ್ಲವೂ ಮತ್ತು ಎಲ್ಲರೂ ಪಠ್ಯಗಳೇ. ಎಲ್ಲವೂ ಒಂದೊಂದು ಪಾಠ ಮಾಡುತ್ತವೆ. ಮನುಷ್ಯರು ಬೇಕಾದರೆ ನಮಗೆ ಏಕೆ ಬೇಕು, ಅದು ಅವರ ಕೆಲಸ, ಸುಮ್ಮನೇ ಅವರಿವರ ಉಸಾಬರಿ ನನಗೆ ಏಕೆ ಎನ್ನುವಂತಹ ಕ್ಯಾಲುಕಲೇಟಿವ್ ಆದ ಬದುಕಿನ ಶೈಲಿಯಿಂದ ಹೇಳಲೇ ಬೇಕಾದ ಅನಿವಾರ್ಯ ಮಾತುಗಳನ್ನೂ ಹೇಳದೆ ನುಣುಚಿಕೊಳ್ಳಬಹುದು. ಅದರೆ ವಸ್ತು ಹಾಗೂ ಸ್ಥಿತಿಗಳು ಹಾಗಲ್ಲ. ಅವು ಎದುರಿದ್ದವರೊಂದಿಗೆ ಚೌಕಾಸಿ ಮಾಡದೆ,  ಕಪಾಳಕ್ಕೆ ಫಟೀರನೆ ಹೊಡೆದಂತೆ ಹೇಳುವುದನ್ನು ಹೇಳಿಯೇ ತೀರುತ್ತವೆ. ನಾವು ಆಗೆಲ್ಲ, ನೋವಿನ ವಿಚಾರ ಮಾಡದೆ, ಸಿಟ್ಟಾಗದೆ, ಅವು ಹೇಳಿದ ಪಾಠಗಳ ತಾತ್ಪರ್ಯಗಳನ್ನು ಮಾತ್ರ ಅರ್ಥೈಸಿಕೊಂಡರೆ ಬದುಕನ್ನು ಅರ್ಧ ಗೆದ್ದಂತೆ.

“A thing which you get so easily it will never stay with you so long ” ಎಂದು ಕಿವಿ ಹಿಡಿದು ಹೇಳಿಕೊಟ್ಟ ಶೈಲಾ ಮೇಡಮ್ ಮಾತಿನಂತೆ ಚೇತನ್ ಭಗತ್ ಕಾದಂಬರಿಯ ಪಾತ್ರವೊಂದು ” God may not offer the same twice” ಎನ್ನುವ ಮಾತು ಸಾಕಷ್ಟು ಸಾರಿ ಸತ್ಯ‌ ಎನಿಸಿದೆ. ಕೆಲವೊಮ್ಮೆ ಧಿಕ್ಕರಿಸಿ ನಡೆದುಬಿಡುತ್ತೇವೆ. ಎಷ್ಟೋ ದಿನಗಳ ನಂತರ ಹಿಂದಿರುಗಬೇಕು ಎನಿಸುತ್ತದೆ. ತಿರಸ್ಕರಿಸಿದ್ದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನಿಸುತ್ತದೆ. ಆದರೆ ಬದುಕು ಬಹುದೂರ ಸಾಗಿರುತ್ತದೆ.

ಅದೊಂದು ಕ್ಷಣ ನಾನು ಕಾಯಬೇಕಿತ್ತು. ಮತ್ತಾರಿಗೋ ನಾನು ಅದನ್ನ ಆಯ್ದುಕೊಂಡೆ. ದುಡುಕಿದೆ ಎನ್ನುವ ಮಾತುಗಳ ಬದುಕಿನುದ್ದಕ್ಕೂ ಸಮರ್ಥನೆಯೊಳಗೆ ಮುಳುಗಿಸಿ ಉಸಿರುಗಟ್ಟಿಸಿಬಿಡುತ್ತವೆ. ತಾಳ್ಮೆ ಎನ್ನುವುದು ಈ ಕಾರಣಕ್ಕೆ ಮುಖ್ಯ.

ಜೀ ವಾಹಿನಿಯ ನಿರ್ದೇಶಕ ಶರಣಣ್ಣ ಹೇಳಿದ ಮಾತುಗಳು, ಯಾವುದೋ ಕಾರಣಗಳಿಗೆ ಪದೆ ಪದೇ ನೆನಪಾದವು. ಈ ಆಲೋಚನೆ ಇಷ್ಟು ಕಾಲ ಎಲ್ಲಿ ಅಡಗಿತ್ತು ಎನಿಸಿತು.

ಇತ್ತೀಚಿಗೆ ಅವರ ಗೆಳೆಯನ ತಂದೆ ತೀರಿಹೋಗಿದ್ದಾರೆ. ಶೂಟಿಂಗ್ ನಡೆಯುತ್ತಿದೆ. ಅರ್ಧಕ್ಕೆ ಬಿಟ್ಟು ಹೋಗಲಾಗುವುದಿಲ್ಲ. ಎಪಿಸೋಡ್ ಬೇಕು. ಕೊನೆಗೆ ಶೂಟಿಂಗ್ ಮುಗಿಸಿ ಗೆಳೆಯನ ಮನೆಯ ಹತ್ತಿರ ಬಂದಿದ್ದಾರೆ. ಒಂದಿಷ್ಟು ಜನರು ತಮ್ಮ ಪಾಡಿಗೆ ಮನೆಯವರಿಗೆ ಆದಷ್ಟು ಸಾಂತ್ವನ ಹೇಳುತ್ತಿದ್ದರೆ ಮತ್ತೊಂದಿಷ್ಟು ಜನರು ಕಡೆಯ ಬಾರಿ ಮುಖ ನೋಡುವವರು ಮುಖ ನೋಡುತ್ತ‌,  ಸಂಸ್ಕಾರಕ್ಕೆ ಬೇಕಾದ ಕಾರ್ಯಗಳನ್ನು ಅಣಿಗೊಳಿಸಿಕೊಳ್ಳುತ್ತ ಮುಳುಗಿದ್ದಾರೆ. ಶರಣಣ್ಣ ಮಾತ್ರ ಮೂಲೆಯೊಂದರಲ್ಲಿ ಕೂತು ತಮ್ಮ ಪಾಡಿಗೆ ತಾವು ಎನ್ನುವಂತೆ ಸಾವಿನ ಪದಗಳನ್ನು ತನ್ಮಯವಾಗಿ ಹಾಡುತ್ತಿದ್ದವರ ಬಳಿ ಹೋಗಿದ್ದಾನೆ.

ಕೇವಲ ಐಟಿ, ಮಾಧ್ಯಮ, ಸಿನೆಮಾ, ಕೂಲಿ ಕೆಲಸ ಸೇರಿದಂತೆ ಅದು ಯಾವುದೋ ಕಾರಣಗಳಿಗೆ ಬೆಂಗಳೂರಿನ ತೆಕ್ಕೆಗೆ ಬೀಳುವವರ ಸಂಖ್ಯೆ ಕಡಿಮೆಯಲ್ಲವಲ್ಲ!

ಬೆಂಗಳೂರಿಗೆ ದಿನಂಪ್ರತಿ ಸಾವಿರಾರು ಜನರು ಬರುತ್ತಾರೆ. ಈ ಎಲ್ಲರ‌ ನಡುವೆಯೇ ಯಾವತ್ತಿಗೂ ಎಣಿಸದ ಸಾವಿನ ಮನೆಯ ಹಾಡುಗಾರರು ಬದುಕ ಹುಡುಕಿ ಬೆಂಗಳೂರಿಗೆ‌ ಬಂದಿರುವುದನ್ನ ಕಂಡಿದ್ದು ಅಣ್ಣನಿಗೆ ದಿಗಿಲಾಗಿದೆ. ಅವರ ಸ್ವರ್ಗಾರೋಹಣದ
ಹಾಡುಗಳೆಲ್ಲಾ ಖಾಲಿಯಾಗಿ ಶವ ಸ್ಮಶಾನದ ಕಡೆಗೆ ಮುಖ ಮಾಡಿದ ಮೇಲೆ ಸಾವಿನ ಮನೆಯ ಹಾಡುಗಾರರೊಂದಿಗೆ ಮಾತಿಗಿಳಿದ್ದಾನೆ ಶರಣ್ಣಣ್ಣ.

ನೀವು ಇಷ್ಟೇ ಜನ ಇರೋದಾ?

ಇಲ್ಲ ಸರ್, ಬೆಂಗಳೂರಿನಲ್ಲಿ ನಮ್ಮದು ಒಂದು ಕೇರಿಯೇ ಇದೆ. ನಮ್ಮವರದು ಮೂವತ್ತು ಮನೆಗಳಿವೆ. ಪ್ರತಿ ಮನೆಯಲ್ಲೂ ಕನಿಷ್ಠ ಇಬ್ಬರಾದರೂ ಸಾವಿನ ಮನೆಯಲ್ಲಿ ಹಾಡುವ ಕೆಲಸ ಮಾಡುತ್ತೇವೆ, ಎಂದಿದ್ದಾನೆ ಹಾಡುಗಾರಲ್ಲಿ ಒಬ್ಬ.

ಕೆಲಸ! ಅಂದರೆ ನಿಮ್ಮ ದಿನನಿತ್ಯದ ದುಡಿಮೆ ಇದು? ಅಣ್ಣನಿಗೆ ಗಾಬರಿಯಾಗಿದೆ.

ಹೌದು ಸರ್, ಇದೇ ನಮ್ಮ ಕೆಲಸ. ನಮ್ಮೂರಿನ ಕಡೆ ಏನು ಮಾಡೋದು. ಜಮೀನಿದೆ, ಆದರೆ ಮಳೆ ಇಲ್ಲ. ಅದೂ ಅಲ್ಲದೇ ಜನರೆಲ್ಲಾ ಅಲ್ಲಿ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಇನ್ನು ನಾವು ಸಾವಿನ ಪದ ಹಾಡುವುದು ಎಲ್ಲಿ. ನಮಗೆ ಅಕ್ಷರ ತಿಳಿದಿಲ್ಲ. ಗೊತ್ತಿರುವ ವಿದ್ಯೆ ಇದೊಂದೆ. ಅದಕ್ಕೆ ಇಲ್ಲಿಯಾದರೂ ಬದುಕುವ ಎಂದು ನಾವು ಬೆಂಗಳೂರಿಗೆ ಬಂದುಬಿಟ್ಟಿದ್ದೇವೆ. “ಇಲ್ಲೂ ಕೆಲಸ ಡಲ್ಲೂ” ಸರ್ ಎಂದು ನೋವಿನಿಂದ ಸಾವಿನ ಮನೆಯ ಹಾಡುಗಾರ ಅವನ ಪಾಡನ್ನು ಅವನದೇ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ.

ಇವನಿಗೆ ಅಚ್ಚರಿಯಾಗಿದೆ. ಅರೇ ಸಾವು ಕೂಡ ನಿರರ್ಥಕವಲ್ಲ. ಸತ್ತವನ ಮೂಲಕ ಇದ್ದವರಿಗೂ ಬದುಕಿನ ನಿಜವಾದ ಅರ್ಥವನ್ನ ಮನವರಿಕೆಯಾಗುವಂತೆ ಈ ಸಾವಿನ ಮನೆಯ ಹಾಡುಗಾರ ಹಾಡುತ್ತಾನೆ. ಅದು ಅವನ ದುಡಿಮೆ. ಅವನ ಕಾಯಕ. ಅದು ಕೂಡ ಅವನ ಪ್ರಾಮಾಣಿಕ ಬದುಕು. ಒಬ್ಬನ ಸಾವಿನಿಂದ ಅವನ ಮನೆಯವರ ನೋವಿನಿಂದ ಮತ್ತೊಬ್ಬ ಬದುಕುತ್ತಿದ್ದಾನೆ.

ಅವನ ಸಾವಿನಿಂದಾಗಿ ಇವನಿಗೆ ದುಡಿಮೆಯಾಗುತ್ತಿದೆ. ಬದುಕು ಸಾಗುತ್ತಿದೆ. ಸತ್ತವನಿಂದಾಗಿ ಇವನಿಗೆ ಸಾವಿನ ಹಾಡು ಹಾಡುವ ಅವಕಾಶ. ಅದರಿಂದ ಒಂದಿಷ್ಟು ದುಡಿಮೆ. ಅದೇ ಹಣದಿಂದ ಇವನ ಮಕ್ಕಳು ಸ್ಕೂಲ್‌ನಲ್ಲಿದ್ದಾರೆ. ಇದ್ದದ್ದರಲ್ಲೇ ಚಂದದ ಬಟ್ಟೆಗಳನ್ನು ಕೊಂಡುಕೊಳ್ಳುತ್ತಾರೆ. ಹೆಂಡತಿ ರುಚಿಯಾಗಿ ಅಡಿಗೆ ಮಾಡುತ್ತಾಳೆ. ಊರಿಗೂ ಆಗಾಗ ಹೋಗಬಹದು. ಕಾಸು ಕೂಡಿಡಬಹುದು. ದಿನವೂ ನೆಮ್ಮದಿಯ ನಿದ್ರೆಯಾಗುತ್ತಿದೆ. ಮನೆಯವರ ನಗುವಲ್ಲಿ ಇವನು ನೆಮ್ಮದಿ ಕಾಣುತ್ತಿದ್ದಾನೆ.

ಹಾಗಾದರೆ ಇವನು ಸಾವಿನ ಮನೆಯ ಹಾಡು ಹಾಡುವ ಸತ್ತವರ ಮನೆಯವರ ನೋವು, ದುಃಖದ ಕತೆ ಏನು? ಅದರ ಕುರಿತು ಇವನು ಆಲೋಚನೆ ಮಾಡುವುದಿಲ್ಲವೇ? ಮಾಡುವುದಕ್ಕೆ ಸಾಧ್ಯವಿಲ್ಲವೇ? ಅಥವಾ ಮಾಡಬಾರದೆ?

ಸಾವಿನಲ್ಲಿ ಜತೆಯಾಗದ ಇವನು, ಕಳೆದುಹೋದ ಹತ್ತಿರದವರಿಗೆ ಸಮಾಧಾನ ಮಾಡಿರಬಹುದೇ? ಅಥವಾ ಸತ್ತು ಹೋದವನ ಹೆಂಡತಿಗೆ, ಮಕ್ಕಳಿಗೆ ಹೋಗಲಿ ಬಿಡವ್ವ ಅವನ ಋಣ ಇದ್ದದ್ದು ಅಷ್ಟೇ ಎಂದು ಅವರ ಬೆನ್ನು ನೇವರಿಸಿ ಸಮಾಧಾನ ಮಾಡಿರಬಹುದೇ?

ಸಾವನ್ನು ಜೀರ್ಣಿಸಿಕೊಳಲಾರದೆ ನರಳುವ ಅವರ‌ ನೋವಿನಲ್ಲೇ ಅನ್ನ ಕಂಡುಕೊಳ್ಳುವ ಅವನ ಬದುಕು ಯಾವ ರೀತಿಯದು ? ಅದು ಕ್ರೌರ್ಯವಾ? ಜೀವನ ಶೈಲಿಯ? ವೃತ್ತಿಯಾ? ಮುಗ್ದತೆಯಾ? ಅಥವಾ ಯಾರೋ ಬರೆದ ಶಾಸ್ತ್ರದ ಪಾಲುದಾರಿಕೆಯಾ?

ಯಾರಾದರೂ ಅವನ ಮನೆಯ ಎದುರು ನಿಂತು “ಅಲ್ಲೊಂದು ಸಾವಾಗಿದೆ, ನೀನು ಬರಬೇಕು. ಬಂದು ಹಾಡಬೇಕು ” ಎಂದಾಗ ಸಾವಿನ ಮನೆಯ ಹಾಡುಗಾರನಿಗೆ ದುಃಖವಾಗುವುದಿಲ್ಲವೇ? ಅವನ ಮೊದಲು ಪ್ರತಿಕ್ರಿಯೆ ಏನಿರಬಹುದು?

ಅವೆಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಂತೆ ಸಾಲಾಗಿ ನಿಂತಿವೆ ನನ್ನೊಳಗೆ.  ಉತ್ತರಗಳನ್ನು ಸಂಧಿಸುವುದು ಮಾತ್ರ ಸಾಧ್ಯವಾಗುತ್ತಿಲ್ಲ.

ತಮ್ಮ ಬದುಕಿಗಾಗಿ ಬೆಂಗಳೂರಿನಲ್ಲಿರುವ ಒಂದು ಕೇರಿಯ ತುಂಬೆಲ್ಲಾ ಹರಡಿಕೊಂಡಿರುವ ಸಾವಿನ ಮನೆಯ ಹಾಡುಗಾರರು ಸಾವಿನ ಸುದ್ದಿಯಲ್ಲೂ‌ ವಿಚಲಿತರಾಗದೇ ನಿರ್ಲಿಪ್ತವಾಗಿ ಉಳಿಯುತ್ತಾರೆ, ದಿನವೂ ಒಬ್ಬರ ಸಾವನ್ನು ಬಯಸುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುವುದು ಹೇಗೆ? ಅಥವಾ ಅವರ ಆಳದಲ್ಲಿ ಹೀಗೆ ಬದುಕುತ್ತಿರುವುದಕ್ಕೆ ಅಥವಾ “ಇಲ್ಲೂ ಕೆಲಸ ಡಲ್ಲೂ” ಸರ್ ಎನ್ನುತ್ತ ಸಾವನ್ನು ಮತ್ತೊಬ್ಬರಿಗಾಗಿ ಆಹ್ವಾನಿಸುವ ಸಾವಿನ ಮನೆಯ ಹಾಡುಗಾರರ ಎದೆಯ ಆಳದಲ್ಲಿ ಪಾಪಪ್ರಜ್ಞೆ, ನೋವು ನಿಜಕ್ಕೂ ಮಡುಗಟ್ಟಿದೆಯಾ?

ನಿಜವಾಗಲೂ ಆಫ್ರಿಕಾದ ಕವಿ ಗುರುತಿಸಿದ ಮಹಾನಗರಗಳ ವಿಚಿತ್ರ ಮೌನವಿರುವುದು ಇಲ್ಲಿ ಎನಿಸುತ್ತಿದೆ. ಅಂತಹ ಮೌನವನ್ನ ಸಂಧಿಸಲು ಅಗಾಧವಾದ ಒಂಟಿತನವನ್ನ ನಾವು ವರ್ಷಾನುಗಟ್ಟಲೆ ಒಳಗೇ ಪಳಗಿಸಿಕೊಳ್ಳಬೇಕು. ಇಲ್ಲವಾದರೆ ಅದು ಮಾತುಗಳ ಗೋಜಲಿನ ನಡುವೆ ಓತಪ್ರೋತವಾಗಿ ಹರಿದು ಶಾಂತವಾದ ಬದುಕಿನ ನದಿಯನ್ನು ಅಲೆ ಎಬ್ಬಿಸಿ ರಾಡಿಯಾಗಿಸಿಬಿಡುತ್ತದೆ‌. ನಮ್ಮ ಒಳಗಿನ ನದಿಯ ಕನ್ನಡಿಯಲ್ಲಿ ನಮ್ಮದೇ ಬಿಂಬಗಳು ಕಾಣುವುದಿಲ್ಲ. ಕೇವಲ ಯಾರೋ ಎಸೆದ ಕಲ್ಲುಗಳು ಎಬ್ಬಿಸಿದ ತರಂಗಗಳಷ್ಟೇ ಮೂಡುತ್ತ ಎಲ್ಲವೂ ಅಸ್ಪಷ್ಟವಾಗಿ ಕಾಣತೊಡಗುತ್ತವೆ.

ರೈನರ್ ಮಾರಿಯಾ ರಿಲ್ಕ್ ತನ್ನ ಶಿಷ್ಯ ಕಾಪ್ಪಸ್ ಗೆ  “ನಿನ್ನ ಒಂಟಿತನವನ್ನ ಶುದ್ಧ ಏಕಾಂತವನ್ನಾಗಿಸಿಕೊಳ್ಳಬೇಕು” ಎಂದು ಹೇಳಿದ್ದು ಇದೇ ಅರ್ಥದಲ್ಲಿ ಎನಿಸುತ್ತದೆ. ಅಂತಹ ಮೌನ ಮತ್ತು ಏಕಾಂತದಲ್ಲಿ ಮಾತ್ರ ಮನುಷ್ಯ ಯಾವುದನ್ನೂ ಧಿಕ್ಕರಿಸದಂತೆ ಎಲ್ಲವನ್ನೂ ಒಳಗೊಳ್ಳುವ, ಒಪ್ಪಿಕೊಳ್ಳುವ ಸಹಜತೆಯನ್ನು ಕಾಣಲು ಸಾಧ್ಯ.‌

ಏಕೆಂದರೆ ಸಮುದ್ರದ ಮೇಲ್ಪದರದಲ್ಲಿ ಕಾಣುವುದು ಕೇವಲ ನೊರೆ ಮಾತ್ರ ಮುತ್ತು ಬೇಕಾದವರು ಯಾವತ್ತಿಗೂ ಆಳಕ್ಕಿಳಿಯಬೇಕು. ಅಂತಹ ಆಳಕ್ಕಿಳಿಯಲು ಒಂದೂ ದೀರ್ಘವಾದ ಪ್ರಮಾಣಿಕತೆ, ಒಂಟಿತನ, ಮೌನ, ಏಕಾಂತಗಳನ್ನು ಪಳಗಿಸಿಟ್ಟುಕೊಂಡಿರಬೇಕು.

ಪ್ರೀತಿ, ಮದುವೆ, ಸಂಬಂಧ, ಸ್ನೇಹ, ವಿರಸ ಎಲ್ಲವನ್ನು ವ್ಯಕ್ತಿತ್ವಗಳ ಆಳಕ್ಕಿಳಿದು ಪರೀಕ್ಷಿಸಿಕೊಳ್ಳಬೇಕು.  ಮೇಲ್ಪದರದಲ್ಲಿ ಕಂಡುಕೊಂಡರೆ ಕೇವಲ ಸಮುದ್ರ ಅಲೆಗೆ ವಾವ್ ಎಂದು ಹುಬ್ಬೇರಿಸಿ, ಪ್ರಕೃತಿ ಸೌಂದರ್ಯ ಅನುಭವಿಸಿದೆ ಎನ್ನುವ ಸವಕಲು ಮಾತನ್ನಾಡಿ ಕೆಲವೊಮ್ಮೆ ಸಮುದ್ರದ ನೊರೆಯ ವಾಸನೆಗೆ ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಆದರೆ ಆಳಕ್ಕಿಳಯದೇ ಏನೂ ದೊರೆಯುವುದಿಲ್ಲ‌‌. ಎಲ್ಲದಕ್ಕೂ ಅದೊಂದು ಕಾಲಾವಾಧಿ, ಪ್ರಮಾಣಿಕತೆಯ ಅಗತ್ಯವಿದೆ. ನಾನು ಇರುವುದೇ ಹೀಗೇ ಎನ್ನುತ್ತ ನಾವು ಇದ್ದಂತಯೇ ಉಳಿದು ಹೋಗಿಬಿಡಬಹುದು ಆದರೆ ಕಾಲ ನಿರಂತರವಾಗಿ ಬದಲಾಗುತ್ತದೆ. ಎನ್ನುವ ಎಚ್ಚರವಿರಬೇಕು.

ಇದರ ಅರಿವಿದ್ದವರು ಮಾತ್ರ ಮತ್ತೊಬ್ಬರ ಎದುರು ತಮ್ಮನ್ನು ತಾವು ಕವಿತೆಯಂತೆ ತೆರೆದಿಟ್ಟುಕೊಳ್ಳಬಹುದು. ಅಲ್ಲಿ ಮಾತ್ರವೇ ಸಾವಿನ ಮನೆಯ ಹಾಡುಗಾರರು ಒಬ್ಬರ ಸಾವನ್ನು ದುಡಿಮೆಯಾಗಿಸಿಕೊಂಡಿದ್ದಾರೆ ಎನ್ನುವಂತಹ ಅಹಿತವಾದ ಬದುಕಿನ ಅಸಲಿಯತ್ತನ್ನ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ.

7 comments

 1. ತುಂಬ ಚೆನ್ನಾಗಿದೆ ಈಶಾನ್ಯ ….
  ಬಿಡಿಸಿದಷ್ಟೂ ನಿಗೂಢವಾಗುತ್ತ, ನಿಗೂಢವಾದಷ್ಟೂ ಬಿಡಿಸಬೇಕೆನ್ನುವ ತಹತಹ ಹುಟ್ಟಿಸುತ್ತ ಓದಿಸಿ ಕೊಳ್ಳುತ್ತದೆ

 2. ಈಶಾನ್ಯ ಅವರ ಅಭಿಮಾನಿ ಆಗಿಬಿಟ್ಟೆ ನಾನು. ಈ ಬರಹದಲ್ಲಿ ಅವರು ಎಷ್ಟು ಚಂದದ ವಿಷಯವನ್ನು ವಿವರಿಸಿದ್ದಾರೆ. ಅವರ ಬರವಣಿಗೆ ಪ್ರಬುದ್ಧವಾದ ನೆಲೆಗೊಂಡಿದೆ.
  ಅವರು ಕೋಟ್ ಮಾಡುವ ಪದ್ಯದ ಸಾಲಗಳು ಅವರ ಅಧ್ಯಯನದ ವಿಸ್ತಾರವನ್ನು ಓದುಗರಿಗೆ ಪರಿಚಯಿಸಿ ಓದನ್ನು ಗಂಭೀರವಾಗಿ ಸಾಗುವಂತೆ ಮಾಡುತ್ತವೆ. ಚಂದದ ಬರಹ ಓದಿಸಿದ್ದಕ್ಕೆ ತುಂಬಾ ಧನ್ಯವಾದಗಳು

 3. “ಮೌನ ಮತ್ತು ಏಕಾಂತದಲ್ಲಿ ಮಾತ್ರ ಮನುಷ್ಯ ಯಾವುದನ್ನೂ ಧಿಕ್ಕರಿಸದಂತೆ ಎಲ್ಲವನ್ನೂ ಒಳಗೊಳ್ಳುವ, ಒಪ್ಪಿಕೊಳ್ಳುವ ಸಹಜತೆಯನ್ನು ಕಾಣಲು ಸಾಧ್ಯ” ಎಂಬ ಮಾತು ಯೋಚನೆಗೀಡು ಮಾಡುತ್ತದೆ.
  ಮನುಷ್ಯನ ಏಕಾಕಿತನವನ್ನು ಮಾಹಾನಗರಗಳ ನಿಬಿಡತೆಯಲ್ಲಿ ಅರಿಯುವ ಈ ಬರಹ ಮನಸ್ಸನ್ನು ಗಾಢವಾಗಿ ತಟ್ಟಿತು.

 4. ಹುಟ್ಟಿನೊಂದಿಗೇ
  ಜೊತೆಯಾದ ಸಾವು;
  ಒಂಟಿ ಎಂಬುದು ಇಲ್ಲಿ ಬರಿ ಭ್ರಮೆ
  ಅಷ್ಟೇ

 5. ಕಡಲ ಆಳ ಕೆದಕಿದಂತೆ ವಿಷಯದ ಆಳ ಕೆದಕಿ ಬರೆದಿದ್ದೀರಿ.ಒಂಟಿತನ ಖಾಲಿ ಎನಿಸಬಹುದು.ಆದರೆ ವ್ಯಕ್ತಿ ಮಾತನಾಡಿಕೊಳ್ಳುವುದು,ತನ್ಮಯತೆ ಹುಟ್ಟಿಕೊಳ್ಳುವುದು ಏಕಾಂತದಲ್ಲೆ,ನಿಮ್ಮ ಅಂಕಣಗಳು ಒಂದಂಕ್ಕಿಂತ ಒಂದು ಚೆನ್ನಾಗಿರುತ್ತದೆ.ಅಭಿನಂಧನೆಗಳು.

Leave a Reply