ನಿರುತ್ತರದಿಂದ ‘ಕಿ ರಂ ಹೊಸ ಕವಿತೆ’

ಮತ್ತೊಂದು ‘ಕಾಡುವ ಕೀರಂ’ಗೆ ಗೆಳೆಯರು ಸಜ್ಜಾಗುತ್ತಿರುವ ಹೊತ್ತಿನಲ್ಲಿ ಶಿವಪ್ರಸಾದ್ ಪಟ್ಟಣಗೆರೆ ಹಾಗೂ ಗೆಳೆಯರು ಕೂಡಿ ಆರಂಭಿಸಿರುವ ‘ನಿರುತ್ತರ’ ಪ್ರಕಾಶನ ‘ಕಿ ರಂ ಹೊಸ ಕವಿತೆ’ ಕೃತಿಯನ್ನು ಹೊರತಂದಿದೆ.

ಇದಕ್ಕೆ ಪ್ರಕಾಶಕ ಶಿವಪ್ರಸಾದ್ ಬರೆದ ಮಾತು ಇಲ್ಲಿದೆ-

 

ಎಲ್ಲಕ್ಕೂ ಇದೆ ಅರ್ಥ..

ಕಟ್ಟೆ ತುಂಬಿದ ಮೇಲೆ ಒಡೆಯಲೇ ಬೇಕು, ಏಕೆಂದರೆ ಇದು ಮಳೆಗಾಲ. ಕಾಲವೂ ಅಷ್ಟೆ, ಮಣ್ಣೂ ಅಷ್ಟೆ ಯಾವ ಹಿತಕ್ಕೂ, ಬೆಸುಗೆಗೂ ಕಾಯುವುದಿಲ್ಲ ಅದು ತನ್ನತಾನೇ ಬೆಸೆದುಕೊಳ್ಳುತ್ತದೆ. ತೊರೆ ತಗ್ಗಿನೆಡೆಗೆ ಹರಿವ ಹಾಗೆ ಕಾವ್ಯವು ಸದಾ ಆ ಕಾಲದ ಅವಸರ ಹಾಗೂ ಸಾವಧಾನದ ಬೆನ್ನೇರುತ್ತಿರುತ್ತದೆ.

ಕುವೆಂಪು ಹೇಳುವಂತೆ ‘ಮೊಳಕೆಯ ಗೋಳು’ ಯಾರಿಗೂ ಕೇಳಿಸದು. ಈ ಗೋಳು ಪರಿಮಿತಿ ಮತ್ತು ಪರಿಧಿಯನ್ನು ಮೀರಿದ್ದು. ಇದು ಕಾವ್ಯ ಸಾಹಿತ್ಯದ ಪರದೆಗೂ ಬಂದದ್ದೇ ಆದರೂ ಬಂಧವು ಚೌಕಟ್ಟಿಗೆ ಸೇರದೆ ಹೊರಗುಳಿದ ಹಾಗೆ ಎಂದೆನಿಸುತ್ತದೆ. ಕಾಲವೂ ಜರುಗುವಂತೆ ಕವಿತೆಯ ಕಾಲಮಾನವೂ ಜರುಗುತ್ತದೆ. ಹಳತಿನ ವಯೋಮಾನದಂತೆ ಭವಿಷತ್ತು ಯಾವತ್ತೂ ಕವಿತೆಯನ್ನಾಗಲಿ, ಸಬೂಬತ್ತನ್ನಾಗಲಿ ನೀಡದು. ಅದು ಮಣ್ಣಿನೊಳಗೆ ಕಾಯ ಸಮೆದುಹೋಗುವಂತೆ ತನ್ನ ಇರುವಿಕೆಯನ್ನು ಹೊಸ ಕಾಲದ ಚಿಗುರಿನೊಂದಿಗೆ ಬೆಸೆದುಕೊಳ್ಳುತ್ತದೆ.

ಕವಿಯಾದವನು ಈ ಚಲನೆಯನ್ನು ಗ್ರಹಿಸದೆ ಬರೀ ಕಾವ್ಯ ಶಕ್ತಿ ಎಂಬ ಜರೂರತ್ತಿನಲ್ಲಿ ತನ್ನನ್ನೂ ಮತ್ತು ಕವಿತೆಯನ್ನು ಕೇವಲ ಸರಕಿನಂತೆ ತೂರಿ ಅದು ಸಮಾಜದ ಅಕೋಶ ಭಾವಬಿತ್ತಿಯಲ್ಲಿ ಮೇಲ್ಸ್ತರದ ಆಶಯವನ್ನಷ್ಟೆ ಪ್ರಚುರಪಡಿಸುತ್ತಿರುತ್ತದೆ. ಇದು ಕಾವ್ಯದ ತುಡಿತ ಅಲ್ಲ ಕಾಲದ ತುಡಿತ.

ಕವಿತೆಯನ್ನ ಓದಲಾಗದ ಸಮಾಜ ನಿರ್ಮಿತಿಯು ಗ್ಯಾರೇಜಿಗೆ ರಿಪೇರಿಗೆ ಬಿಟ್ಟ ಗಾಡಿಯಂತೆ. ಅದು ಸಮಾಜದ ಅನಾರೋಗ್ಯಕರ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮೊಳಗಿನ ಜನಪದ ಅಥವಾ ದೇಶಿ ಎಂಬುದು ಒಂದು ಲಯ, ಹಾಡು, ಪದ್ಯಕ್ಕೆ ಮುದಗೊಂಡಿರುತ್ತದೆ, ಪದ್ಯವು ಇಂತಹ ಸೆಲೆಯ ಬಣ್ಣ ಕಳೆದುಕೊಂಡಾಗ ಪದ್ಯವು ಆ ಪರಿಮಿತೆಯಲ್ಲಿ ಓದುವ ಶಿಸ್ತೇ ಹಾಳುಮಾಡುತ್ತದೆ. ಕವಿತೆ, ಪದ್ಯ ಎನ್ನುವುದೇ ಬದುಕಿನ ಉಸಿರ್ದಾಣವನ್ನು ನಿಯಂತ್ರಿಸುವಂತದ್ದು ಇದು ಹದಗೆಟ್ಟಾಗ ಮಾತ್ರ ಪದ್ಯದ ಬಹುಮುಖಿ ಕಾರ್ಯಕ್ಷೇತ್ರವೂ ಹದಗೆಡುತ್ತದೆ.

ಇಂದು ಮೇಲ್ಮುಖಗಳೆಲ್ಲ ಮೋಸಮಾಡುವ ಹೊತ್ತು, ಕಾಲದಿಂದ ದುಡಿದ ಬೌದ್ಧಿಕ ಚಹರೆಗಳು ಈಗತಾನೆ ನಾಟಿಗೈದ ಸಸಿಗಳೊಂದಿಗೆ ಸೆಣೆಸುವುದು ಒಂದು ಪ್ರತೀತಿ. ಏರಿಯ ತಕ್ಕುಲೇ ಇಲ್ಲದ ಕಾವ್ಯದ ಎದೆಗೆ, ನೀರು ತುಂಬಿದ ಏರಿಯೊಂದಿಗೆ ಕಾವ್ಯವನ್ನು ಪರಸ್ಪರ ತಂದೊಡ್ಡುವುದು ಇವತ್ತಿನ ರಾಜಕಾರಣ.

ತೇಜಸ್ವಿ ತಮ್ಮ ಗಾಡಿಯ ಕೆಳಗೆ ಮಲಗಿಕೊಂಡು ಗಾಡಿಯನ್ನು ರಿಪೇರಿ ಮಾಡುವ ಒಂದು ಸಂಕೇತವೇ ಸಮಸ್ಯೆಯನ್ನು ನಾವು ಕೆಳಗಿನಿಂದ ಗ್ರಹಿಸಬೇಕೆಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗಿ ಕಾಲವು ಈ ಹೊತ್ತಿನ ಕಾವ್ಯದ ನೈಜ ಕೃಷಿಕರೊಂದಿಗೆ ಮಾತ್ರ ಬದುಕುಳಿವುದು ಸಾಧ್ಯ ಹಾಗೂ ಯುವ ಸಾಧ್ಯತೆಯೊಂದಿಗೆ ಮಾತ್ರ ಅದು ಜೀವಿಸಬಲ್ಲುದು. ತೇಜಸ್ವಿಯವರ ಒಂದು ಪದ್ಯ ಹೀಗೆ ಹೇಳುತ್ತದೆ.

ತುಂಟ ಹುಡುಗನ ಸೊಂಟಾ ಸುತ್ತಿ
ಲ್ಯಾಂಬ್ರೆಟ ವೆಸ್ಪಾ ಬೆನ್ನನು ಹತ್ತಿ
ಕೀಲುಕುದುರಿ ರಾಜಕುಮಾರಿ
ಒಮ್ಮೆಯಾದರೂ ಆದೇನು ! ನರಕಕ್ಕು ಹೋದೇನು ..
(ಲ್ಯಾಬ್ರಟವೆಸ್ಪ)

ಈ ಮೇಲಿನಂತೆ ಗೂಢ ದ್ರವ ಭಾವಸೃಷ್ಠಿಯ ಮೂಲದಲ್ಲಿ ಎಲ್ಲೋ ಅದು ಅಗ್ಗಿಷ್ಟಿಕೆಗಾಗಿ ಕಾದು ಕುಳಿತಿರುತ್ತದೆ. ಸಸ್ಯ ಮಣ್ಣಿಗೆ ಸಿಕ್ಕಿ ಹರಡಿಕೊಳ್ಳುವಂತೆ ಸೃಷ್ಠಿಯು ಯಾವ ಆಸರೆಗೂ ಕಾಯುವುದಿಲ್ಲ. ಹೀಗೆ ಈ ಎಲ್ಲಾ ತೀವ್ರತೆಗಳ ಕಟ್ಟೆ ಸಡಿಲಿಸಿಕೊಂಡು ಪುಸ್ತಕ ಪ್ರಕಟಿಸುವ ತಗಾದೆಗೆ ತೆರೆದುಕೊಂಡಿದ್ದೇ ‘ನಿರುತ್ತರ’ ಪುಸ್ತಕ ಪ್ರಕಾಶನ.

ಕನಸುಗಳನ್ನು ಕಟ್ಟಿಕೊಂಡು ಕನ್ನಡ ಓದಲು ಮೊದಲನೇ ವರ್ಷದ ಎಂ.ಎ. ನಲ್ಲಿ ‘ನಿರುತ್ತರ’ ಎಂಬ ಎ 4 ಕಾಗದದ ಅರ್ಧದಷ್ಟು ಅಳತೆಯ ಒಂದು ಸಣ್ಣ ಮಾಸ ಪತ್ರಿಕೆಯನ್ನು, ಯಾರ ಸಹಾಯವಿಲ್ಲದೆ ಸ್ವಂತ ಖರ್ಚಿನಲ್ಲಿ ಕೆಲ ಕ್ರಾಂತಿಕಾರಿಗಳು ಸೇರಿ ಹೊರತರಲಾಯಿತು.

ಅದು ಬಿಡುಗಡೆಯಾಗದೆ ಇರುದುದರ ಬಗೆಗೆ ಕೆಲರು ಲೇವಡಿ ಮಾಡಿದರು ಆದರೆ ತೊಟ್ಟ ಹಟ ಬಿಡದೆ ಬಸವರಾಜ ಕಲ್ಗುಡಿಯವರ ಮುನ್ನುಡಿಯೊಂದಿಗೆ ನಿರುತ್ತರ ಪತ್ರಿಕೆ ಬಿಡುಗಡೆಯಾಯಿತು. ಮೂಲ ಕಾರ್ಯಕ್ರಮದ ಆಶಯವನ್ನೇ ಮರೆತು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಪತ್ರಿಕೆಯ ಬಗ್ಗೆ ಮಾತನಾಡಿದರು. ಇದು ಅಲ್ಲಿದ್ದ ಕೆಲವರಿಗೆ ಸಿಟ್ಟು ತರಿಸಿತು. ಅದೇ ಕೋಪದಲ್ಲಿ ಕೆಲವಂದಷ್ಟು ಜನ ನನ್ನ ಮೇಲೆ ಎರಗಿದರು. ಆದರೂ ಇವರೆಲ್ಲರ ಮೆಲೂ ನನಗೆ ಪ್ರೀತಿಯಿತ್ತು.

ಕೊನೆಗೆ ಇಡೀ ತರಗತಿಯಲ್ಲಿ ವೈಷಮ್ಯಗಳು ನಿರುತ್ತರದಲ್ಲಿ ಲೇಖನ ಪದ್ಯ ಬರೆದವರ ಇನ್ನಿತರರ ನಡುವಿನ ಸಂಬಂಧಗಳು ಸ್ನೇಹಗಳು ಪರಸ್ಪರ ವಿಭಜಿತಗೊಂಡು ಗುಂಪುಗಾರಿಕೆಗೆ ಎಡೆ ಮಾಡಿಕೊಟ್ಟವು. ನಂತರ ನಿರುತ್ತರ ಪತ್ರಿಕೆಯ ಜವಾಬ್ದಾರಿಯನ್ನು ವಿರೋಧಿಸಿದ ಗೆಳೆಯರಿಗೇ ನೀಡಲಾಯ್ತು ಪ್ರೀತಿಯಿಂದ ಒಪ್ಪಿಕೊಂಡರು ಆದರೆ ಅವರಾರೂ ನಿರುತ್ತರ ಸಂಚಿಕೆ 2 ನ್ನು ತರಲಿಲ್ಲ ಸಂಚಿಕೆ – 1 ಕ್ಕೆ ಅದು ನಿಂತು ಹೋಯಿತು.

ಈ ಕಿಚ್ಚು ಮುಂದೊಂದು ದಿನ ಯಾವುದೋ ಎಡವಿ ಬೀಳುವ ಕಲ್ಲಿಗೆ ಕಾಯುತಿತ್ತು ಆ ಎಡವಿ ಬಿದ್ದ ಕಲ್ಲೇ ಇಂದು ‘ನಿರುತ್ತರ ಪುಸ್ತಕ’ ಎಂಬ ಪ್ರಕಾಶನವನ್ನು ಹುಟ್ಟುಹಾಕುವಂತೆ ಮಾಡಿದೆ.

ಒಂದಷ್ಟು ಯುವಕರನ್ನೇ ಒಟ್ಟುಗೂಡುವಂತೆ ಮಾಡಿದ ತೇಜಸ್ವಿ ಅವರ ಬರೆಹ ಮತ್ತು ಬದುಕು. ಇವೆಲ್ಲವುಗಳ ಹಿಂದಿನ ಶಕ್ತಿ ಶ್ರೀಗುರುವಿನ ಶಕ್ತಿ ದೊಡ್ಡದಿದೆ. ನಾವೆಲ್ಲಾ ಕೇವಲ ಅನಿಮಿಷ ತತಿಗಳಷ್ಟೆ ಆನು ಒಲಿದಂತೆ ಆಡುವೆ ಎನ್ನುವ ಹಾಗೆ ನಮ್ಮ ಅಗೋಚರ ಭಾವದೀಪ್ತಿಯಲ್ಲಿ ಕವಿತೆಯ ದೀಪವನ್ನಿರಿಸಿ ಸದಾ ಉರಿಯುವಂತೆ ಮಾಡಿದ್ದಾರೆ. ಆ ಶ್ರೀಗುರುವು ಗೊತ್ತಿಲ್ಲದಂತೆ ನಮ್ಮನ್ನೆಲ್ಲಾ ಮುನ್ನಡೆಸುತ್ತಿದ್ದಾರೆ.

ಈ ಎಲ್ಲಾ ರಾಜಕಾರಣಗಳ ನಡುವೆ ಇನ್ನೊಂದು ಮಾತು ನಿರುತ್ತರದ ಮುಂದಿದೆ. ಅದೇನೆಂದರೆ ಮೊದಲು ಜಾತಿಯನ್ನ ಹೇಳಲಾಗುತಿತ್ತು, ನಂತರ ಆಚರಿಸಲಾಗುತಿತ್ತು, ಈಗ ಎಲ್ಲರೊಳಗೂ ಇದೆ. ಎಂದೆನಿಸುತ್ತಿದೆ.ಇದು ಕಾಲದ ದುರಂತವೋ, ವ್ಯವಸ್ಥೆ ಎಂಬ ಅಪ್ರಜಾಪ್ರಭುತ್ವದ ಅನಾಗರೀಕತೆಯೋ ಹೇಳಲಸದಳ.

ಈ ಕ್ಲೇಷಗಳನ್ನೆಲ್ಲಾ ಬಗಲಿನಲ್ಲಿ ಕಟ್ಟಿಕೊಂಡು ‘ನಿರುತ್ತರ’ ಎಂಬ ಪುಸ್ತಕ ಪ್ರಕಾಶನವನ್ನು ಪ್ರಾರಂಭಿಸುತ್ತಿದ್ದೇವೆ. ಅದರೊಂದಿಗೆ ಪ್ರತೀ ವರ್ಷ ಉತ್ತಮವಾದ ಕಾದಂಬರಿ ಪ್ರತಿಯನ್ನು ಆಯ್ಕೆಮಾಡಿ ಮುದ್ರಿಸಿ ಆ ಕೃತಿಗೆ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ’ವನ್ನು ನೀಡುತ್ತಿದ್ದೇವೆ. ಈ ಕಾರ್ಯಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಪುಸ್ತಕಗಳನ್ನು ಕೊಂಡು ನಮ್ಮ ಈ ಸಾಧ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತರೆಂಬ ನಂಬಿಕೆ ನನ್ನಲ್ಲಿದೆ.

ಕೆಲವು ಹೇಳಲಾಗದ ಕೈಗಳು ಸಹ ನಮ್ಮೊಂದಿಗಿವೆ. ಈಗ ತಾನೆ ಬೆರಗಿನೊಂದಿಗೆ ಪದ್ಯದ ಹದ ಹಚ್ಚಿಸಿಕೊಂಡಿರುವ ನನ್ನ ಗೆಳೆಯ ಮಹಾಂತೇಶ್ ಆಧುನಿಕ್, ಸಾವಧಾನದಿಂದಲೇ ಸದ್ದಿಲ್ಲದೆ ಕೆಲಸ ನಿರ್ವಹಿಸುವ ದರ್ಶನ್ ಆರಾಧ್ಯ ಇವರುಗಳೇ ಈ ನಿರುತ್ತರವನ್ನು ಮುನ್ನಡೆಸುವ ಪಣತೊಟ್ಟಿದ್ದಾರೆ. ನಮ್ಮ ಈ ಆಶಯಕ್ಕೆ ನಿಮ್ಮೆಲ್ಲರ ಸಹಕಾರವಿರಲಿ.

ವಂದನೆಗಳೊಂದಿಗೆ,.

ಶಿವಪ್ರಸಾದ ಪಟ್ಟಣಗೆರೆ
ಪ್ರಕಾಶಕ
ನಿರುತ್ತರ ಪುಸ್ತಕ
ಬೆಂಗಳೂರು

Leave a Reply