ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ

ನೆನಪು 20
ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ

ಕೇವಲ ನನ್ನದು ಮಾತ್ರವಲ್ಲ, ಜಿಲ್ಲೆಯ ಹಲವರ ಪುಸ್ತಕಗಳನ್ನು ಮುದ್ರಿಸಬೇಕು ಎನ್ನುವ ಬಯಕೆ ಆತನದು. ವರ್ಷಕ್ಕೆ ಒಂದೋ ಎರಡೋ ಪುಸ್ತಕ ಮುದ್ರಿಸಿದರೆ ಸಾಲದು; ನಾಲ್ಕಾರು ಭಾಷಣ ಮಾಡಿದರೆ ಸಾಲದು. ನಮ್ಮ ಆಲೋಚನೆ ಇನ್ನಷ್ಟು ಹೆಚ್ಚು ಜನರಿಗೆ ತಲುಪಬೇಕಾಗಿದೆ. ತಲುಪಿಸುವುದು ಹೇಗೆ ಎನ್ನುವುದೇ ಆತನ ಚಿಂತೆ.

ಹಾಗಾಗಿ ಒಂದು ಪತ್ರಿಕೆ ಮಾಡಿದರೆ ಹೇಗೆ ಎನ್ನುವ ಆಲೋಚನೆ ಕೂಡ ಅವನ ಮನಸ್ಸಿನಲ್ಲಿ ಆಗಾಗ ಸುಳಿಯುತ್ತಿತ್ತು. ರಾಜ್ಯದಲ್ಲಿ ಪ್ರಗತಿಪರರು ಯಾರೇ ಪತ್ರಿಕೆ ಮಾಡಿದರೂ ಆತ ಖುಷಿ ಪಡುತ್ತಿದ್ದ ಮತ್ತು ಅದಕ್ಕೆ ತನ್ನೆಲ್ಲಾ ಕಷ್ಟಗಳ ನಡುವೆ ಚಂದಾ ನೀಡುತ್ತಿದ್ದ.

ಪತ್ರಿಕೆ ಮಾಡುವ ಆಲೋಚನೆ ಕ್ರಿಯಾ ರೂಪಕ್ಕೆ ಇಳಿದದ್ದು ಗಣಪತಿಗೆ ಒಂದು ನೌಕರಿ ಕೊಡಿಸಬೇಕೆನ್ನುವ ಸಂದರ್ಭದಲ್ಲಿ. ಬಿ. ಗಣಪತಿ ನಮ್ಮೂರಿನವನು. ಈಗ ಬೆಂಗಳೂರಿನಲ್ಲಿ ಒಂದು ಪತ್ರಿಕೆಯಲ್ಲಿ ಇದ್ದಾನೆ. ಆತ ಒಂದು ಸಾಂಪ್ರದಾಯಿಕ ಕುಟುಂಬದಿಂದ ಬಂದವನು. ಬಡತನ, ಹಸಿವು ಹಾಸಿ ಹೊದೆಯುವಷ್ಟಿತ್ತು ಆತನ ಕುಟುಂಬಕ್ಕೆ.

ನಾನು ಹುಟ್ಟುವ ಮೊದಲು ಅಣ್ಣ ಬೋಳ್ಗೆರೆ ಮಾವನ (ಬಿ. ಗಣಪತಿಯ ಅಜ್ಜ) ಮನೆಯ ಕೀಬ್ಳಲ್ಲಿ ಒಂದು ಸಣ್ಣ ಕೋಲಿಯಲ್ಲಿ ಸಂಸಾರ ನಡೆಸುತ್ತಿದ್ದನಂತೆ. ನನ್ನ ಅಜ್ಜ ತೀರಿಕೊಂಡ ನಂತರ ಅಜ್ಜಿ (ಅಣ್ಣನ ಆಯಿ) ಇಬ್ಬರು ಮಕ್ಕಳನ್ನು ಕರೆದುಕೊಂಡು ಕುಮಟಾದ ಹೆಗಡೆಯಿಂದ ಬೊಳ್ಗೆರೆಗೆ ಬಂದಳು. ಆಗ ಬೋಳ್ಗೆರೆ ಮಾವ ನಮ್ಮನೆ ಪಕ್ಕದಲ್ಲಿಯೇ ಉಳಿ ಎಂದು ಈ ಜಾಗ ಕೊಟ್ಟಿದ್ದನಂತೆ. ಹಾಗಾಗಿ ಮೊದಲಿನಿಂದಲೂ ನಮ್ಮ ಮನೆಗೂ ಗಣಪತಿ ಕುಟುಂಬಕ್ಕೂ ತೀರಾ ಆತ್ಮೀಯ ಸಂಬಂಧ. ಅಣ್ಣನ ಸಂಪರ್ಕಕ್ಕೆ ಬಂದು ವೈಚಾರಿಕವಾಗಿ ಬೆಳೆದವರಲ್ಲಿ ಗಣಪತಿ ಕೂಡ ಒಬ್ಬ.

ಪಿಯುಸಿ ಓದುವಾಗಲೇ ಆತ ಬರೆಯುವುದು.. ಓದುವುದನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಂಡಿದ್ದ. ನಮ್ಮೂರಿನ ಭರವಸೆಯ ಹುಡುಗರಲ್ಲಿ ಒಬ್ಬನಾದ ಈತ ಅಣ್ಣನ ಆತ್ಮೀಯ ವಲಯದ ಸದಸ್ಯನಾಗಿದ್ದ. ಒಂದು ರೀತಿಯಲ್ಲಿ ನಮ್ಮ ಮನೆಮಂದಿಯಂತೆ ಇದ್ದ.

ಗಣಪತಿಯೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಮುಂದುವರೆಸಲಾಗದೆ, ಬೇರೆ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತ, ಮದುವೆ ಮುಂಜಿಗಳಲ್ಲಿ ಪಂಚವಾದ್ಯ ಮಾಡುತ್ತಾ ಬದುಕಿಗೊಂದು ಭದ್ರತೆಗಾಗಿ ಹಂಬಲಿಸುತ್ತಿದ್ದ. ಆ ದಿನಗಳಲ್ಲಿ ಅಣ್ಣ ಮತ್ತು ಅವನು ಆಗಾಗ ಎಂಬಂತೆ ಭೇಟಿ ಆಗಿ ಸಾಹಿತ್ಯ- ಸಂಘಟನೆ ಇತ್ಯಾದಿಗಳ ಬಗ್ಗೆ ಚರ್ಚಿಸುತ್ತಿದ್ದರು. ನಂತರ ಆತ ಸಿಪಿಎಡ್ ಕೂಡ ಮಾಡಿಕೊಂಡ.

ಗಣಪತಿಗೂ ಬದುಕಿಗೊಂದು ಉದ್ಯೋಗಬೇಕು; ಏನಾದರೂ ಉದ್ಯೋಗವನ್ನು ಕೊಡಿಸುವ ಜವಾಬ್ದಾರಿಯನ್ನು ನನ್ನ ಅಣ್ಣ ಕುಪ್ಪನ ಮನೆಯ ಅಣ್ಣನಿಂದ (ಗಣಪತಿಯ ತಂದೆಯನ್ನು ನಾವು ಹಾಗೆ ಕರೆಯುವುದು) ವಹಿಸಿಕೊಂಡಿದ್ದ. ಇದರೊಂದಿಗೆ, ಅಣ್ಣನಿಗೂ ಪುಸ್ತಕ ಪ್ರಕಟಿಸುವ, ಪತ್ರಿಕೆ ಹೊರತರುವ ಉತ್ಸಾಹ. ಇಬ್ಬರೂ ಸೇರಿ ಒಂದು ಮುದ್ರಣಾಲಯ ಮಾಡುವುದೆಂದು ತೀರ್ಮಾನಿಸಿದರು.

ಆದರೆ ಹಣ ಎಲ್ಲಿ?

ಅಣ್ಣನಿಗೆ ತಿಂಗಳ ಸಂಬಳ ಬರುತ್ತಿದ್ದರೂ ತಿಂಗಳ ಕೊನೆಗೆ ತತ್ವಾರ. ಗಣಪತಿಗೆ ಮನೆಯಲ್ಲಿಯೂ ಇಲ್ಲ ಹಣ ಇಲ್ಲ, ಈ ಕಡೆ ನೌಕರಿ ಕೂಡ ಇಲ್ಲ. ಆದರೂ ಇಬ್ಬರೂ ಸೇರಿ ಒಂದು ಘನ ನಿರ್ಣಯಕ್ಕೆ ಬಂದರು.

ಆಗ ಕರ್ನಾಟಕ ಸರ್ಕಾರವು ಯುವ ಜನರಿಗೆ ಉದ್ಯೋಗ ಕೊಡಲಾಗದೆ ಕೈ ಕಟ್ಟಿಕುಳಿತಿತ್ತು. ಸರ್ಕಾರಿ ಉದ್ಯೋಗ ಇಲ್ಲ. ದೊಡ್ಡ ಕಂಪನಿ-ಕಾರ್ಖಾನೆಯ ಸ್ಥಾಪನೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಡಿಗ್ರಿ ಮುಗಿಸಿದ ಯುವ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಒಂದಿಷ್ಟು ಸಾಲ ಕೊಡುವ ಯೋಜನೆ ಜಾರಿಗೆ ತಂದಿತು. ಯಾವುದೇ ಪದವಿ ಮುಗಿದ ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರವನ್ನು ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ಪಡೆಯಬಹುದು. ಕಂತಿನ ಮೇಲೆ ಸಾಲ ತೀರಿಸಬೇಕು. ಬಹುಶಃ ಹೀಗೆ ಸಾಲ ತೆಗೆದವರನ್ನು ಸರ್ಕಾರಿ ನೌಕರಿಗೆ ನಂತರ ಪರಿಗಣಿಸುತ್ತಿರಲಿಲ್ಲ.

ಅಣ್ಣನಿಗೆ ಸರ್ಕಾರಿ ನೌಕರಿ ಆಗಿರುವುದರಿಂದ ಸಾಲ ತೆಗೆಯಲಾರ. ಗಣಪತಿಗೆ ಡಿಗ್ರಿ ಆಗಿಲ್ಲದಿರುವುದರಿಂದ ಸಾಲ ಸಿಗುವುದಿಲ್ಲ. ಮುಂದೇನು? ಎನ್ನುವ ಪ್ರಶ್ನೆ ಇವರನ್ನು ಕಾಡಿತು.

ಆ ಸಂದರ್ಭದಲ್ಲಿ ನನ್ನ ಅಕ್ಕ ಮಾಧವಿಯ ಡಿಗ್ರಿ ಮುಗಿದು ಕುಮಟಾದಲ್ಲಿ ಬಿ.ಇಡ್ ಮಾಡುತ್ತಿದ್ದಳು. ಬಿ.ಎ ಪ್ರಮಾಣಪತ್ರವೂ ಬಂದಿತ್ತು. ಹಾಗಾಗಿ ಅಣ್ಣ ಮಾಧವಿಯ ಹೆಸರಿನಲ್ಲಿಯೇ ಸಾಲ ಮಾಡಿ ಒಂದು ಮುದ್ರಣಾಲಯ ಪ್ರಾರಂಭಿಸಲು ನಿರ್ಧರಿಸಿದ. ಹೇಗೂ ಮುದ್ರಣಾಲಯ ನೋಡಿಕೊಳ್ಳಲು ಗಣಪತಿ ಇದ್ದಾನೆ. ಬ್ಯಾಂಕಿನಲ್ಲಿ ಸಾಲಕ್ಕೂ ಅರ್ಜಿ ಸಲ್ಲಿಸಿದ.

ಈ ಸಂಗತಿ ಹೇಗೋ ನನ್ನ ಅಕ್ಕನಿಗೆ (ತಾಯಿ) ತಿಳಿದು ಚಿಂತಿತಳಾದಳು. ಮಗಳ ಪ್ರಮಾಣ ಪತ್ರದ ಮೇಲೆ ಸಾಲ ತೆಗೆದು ಮುದ್ರಣಾಲಯ ಮಾಡಿ ಕೊನೆಗೆ ಸಾಲ ತೀರಿಸಲಾಗದೇ ಮಗಳಿಗೆ ನೌಕರಿ ಮಾಡಲಾಗದಿದ್ದರೆ ಎನ್ನುವ ಭಯ ಅವಳನ್ನು ಕಾಡಿತು. ನನ್ನ ಇನ್ನೊಬ್ಬ ಮಾವನಿಂದ ಈ ಸುದ್ದಿ ಮಾಧವಿ ಕಿವಿಗೂ ಬಿತ್ತು. ಮಾಧವಿಯಲ್ಲಿಯೂ ಆತಂಕ ಮೂಡಿ ಅಣ್ಣನಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುವುದು ಹೇಗೆ? ಸಾಲ ತೆಗೆಯುವುದು ಬೇಡವೆಂದರೆ ಅಣ್ಣನ ತೀರ್ಮಾನವನ್ನು ವಿರೋಧಿಸಿದಂತಾಗುವುದಿಲ್ಲವೇ? ಎನ್ನುವ ಗೊಂದಲಕ್ಕೆ ಬಹುಶಃ ಒಳಗಾಗಿರಬೇಕು.

ಆದರೂ ಅಂತಿಮವಾಗಿ ಇಬ್ಬರೂ ಸೇರಿ ಅಣ್ಣನ ಮೇಲೆ ಒತ್ತಡ ಹೇರಿ (ಕಣ್ಣೀರಿನ ಮೂಲಕ ಇರಬೇಕು, ಸರಿಯಾಗಿ ಗೊತ್ತಿಲ್ಲ.) ಸಾಲ ಮಾಡುವುದನ್ನು ನಿಲ್ಲಿಸಿದರು.

ಅಲ್ಲಿಂದ ಮುಂದೆ ಪ್ರೆಸ್ ಮಾಡುವ ಆತನ ಯೋಜನೆ ನಿಂತಿತು. ಈ ಘಟನೆ ಆತನನ್ನು ದೊಡ್ಡ ಸಾಲಗಾರನಾಗುವುದರಿಂದ ಬಚಾವು ಮಾಡಿತು.

ಆದರೆ ಗಣಪತಿ ಮುಂದೆ ‘ಮುಂಗಾರು’ವಿನ ಮೂಲಕ ಪತ್ರಿಕೆಯ ಪಯಣ ಮುಂದುವರಿಸಿದ. ಮಾಧವಿ ಎರಡು ವರ್ಷದ ನಂತರ ನೌಕರಿ ಸೇರಿದಳು.

ಕನ್ನಡದ ಸಿನೆಮಾದಂತೆ ಎಲ್ಲಾ ಸುಖಾಂತ್ಯವಾಯಿತು.

Leave a Reply