ನಾನು ಗಾಂಧಿ ಆಗ್ತೀನಿ ಅಂದೆ ; ನಾನೇ‌ ಕಸ್ತೂರಬಾ ಅಂದಳು

“ನಾನು ಗಾಂಧಿ ಆಗ್ತೀನಿ ಅಂದೆ ; ನಾನೇ‌ ಕಸ್ತೂರಬಾ ಅಂದಳು”

ಕದ್ದು ಕೊಟ್ಟ ಗಿಫ್ಟು ನಡುರಾತ್ರಿಯಲ್ಲಿ ನರ್ತಿಸಿಬಿಟ್ಟರೆ ?

” The course of love never did run smooth ” ( ಪ್ರೀತಿಸುವ ದಿನಗಳು ಯಾವುದೇ ಅಡತಡೆಗಳಿಲ್ಲದೆ ಮೃದುವಾಗಿ ಚಲಿಸುವಂತವಲ್ಲ) ಎಂಬ ವಿಲಿಯಂ ಶೇಕ್ಸ್‌ಪಿಯರ್ ನ ” Midsummer’s Night Dream ” ನಾಟಕದ ಒಂದು ಡೈಲಾಗ್  ಪ್ರೀತಿಗೆ ಅದೆಷ್ಟು ಹೊಂದಿಕೊಳ್ಳುತ್ತದೆ ಎಂಬುದನ್ನು ನಿಖರವಾಗಿ ಹೇಳಿಬಿಡಬಹುದು.

ಹಾಗೆ ನೋಡಿದರೆ ಶೇಕ್ಸ್‌ಪಿಯರ್ ಕಾಲಕ್ಕೂ , ಈ ಕಾಲದ ಪ್ರೇಮಿಗಳಿಗೂ ಎದುರಾಗುವ ಕಷ್ಟಗಳು ಅವವೇ ಅಲ್ಲದೆ ಈಗಿನ ಸಂವಹನ ಮಾಧ್ಯಮ ಇನ್ನೂ ವೈವಿಧ್ಯಮಯವಾಗಿರುವುದರಿಂದ ಪ್ರೇಮಿಗಳಿಗೆ ಹೊಸ ಹೊಸ ಸಮಸ್ಯೆಗಳು ಕೂಡ ಎದುರಾಗಬಹುದು.

ಉದಾಹರಣೆಗೆ ಹತ್ತು ವರ್ಷಗಳ ಹಿಂದೆ ಪದವಿಯನ್ನೋ‌,ಸ್ನಾತಕೋತ್ತರ ಪದವಿಯನ್ನೋ ಓದುವಾಗ ಕಾಲೇಜಿಗೆ ಹಾಜರಾಗದಿದ್ದಲ್ಲಿ ನಮ್ಮ ಪೋಷಕರಿಗೇನು ಅದು ತಿಳಿಯುತ್ತಿರಲಿಲ್ಲ. ಕಾಲೇಜಿನ ಸಮಯಕ್ಕೆ ಹೊಂದುವಂತೆ ಮನೆಗೆ ವಾಪಾಸ್ಸಾದರೆ ಮುಗಿಯಿತಿತ್ತು.‌

ಆದರೆ ಈಗ ಹಾಗಿಲ್ಲ, ವಿದ್ಯಾರ್ಥಿ ತರಗತಿಗೆ ಗೈರಾಗಿರುವ ಬಗ್ಗೆ ಪೋಷಕರ ಮೊಬೈಲಿಗೆ ತಕ್ಷಣ ಮೆಸೇಜ್ ತಲುಪಿಬಿಡುತ್ತದೆ. ಆ ಸಂಜೆ ಮನೆಯವರನ್ನು ಎದುರಿಸಲು ಆ ವಿದ್ಯಾರ್ಥಿ ಹರಸಾಹಸ ಪಡಲೇಬೇಕು. ಇದು ಒಂದು ಸಣ್ಣ ಉದಾಹರಣೆಯಷ್ಟೇ. ಮಾಡರ್ನ್ ಟೆಕ್ನಾಲಜಿ ತಂದಿಟ್ಟಿರುವ ಇಂಥ ಅನೇಕ ಸಂದಿಗ್ಧಗಳಲ್ಲಿ ಬಾಧಿತರಾಗಿರುವವರಲ್ಲಿ ಪ್ರೇಮಿಗಳ ಸಮೂಹವೂ ಇದೆ ಎಂಬುದರಲ್ಲಿ ಸಂಶಯವಿಲ್ಲ.

ನಾನು ಪ್ರೀತಿಸುವ ದಿನಗಳಲ್ಲಿ ಕೂಡ ಶೇಕ್ಸ್‌ಪಿಯರ್ ನ ಈ ವಾಕ್ಯ ಜಾರಿಯಲ್ಲಿತ್ತು ಬಿಡಿ. ಪ್ರೇಮ ನಿವೇದನೆಯಾದ ದಿನವೇ, ಪರಸ್ಪರರು ಒಪ್ಪಿಕೊಂಡ ದಿನವೇ ಅದನ್ನು ಇಬ್ಬರೂ ಪ್ರೇಮಿಗಳು ತಂತಮ್ಮ ಮನೆಯಲ್ಲಿ ಹೋಗಿ‌ ಹೇಳಿಬಿಡುವಂಥ ದಿನಗಳು ಇನ್ನೂ ಬಂದಿರಲಿಲ್ಲ ಮತ್ತು ಅವು ಯಾವತ್ತೂ ಬರುವುದಿಲ್ಲ ಎಂಬ ಭಯಂಕರ ಭರವಸೆ ನನಗಿದೆ.

ಹಾಗಾಗಿ ಎಲ್ಲ ಪ್ರೇಮ ವ್ಯವಹಾರಗಳು ಕದ್ದು ಮುಚ್ಚಿಯೇ ನಡೆಯಬೇಕಿತ್ತು. ಅದು ಶಿವಮೊಗ್ಗದ ಗಾಂಧಿ ಪಾರ್ಕಿನಲ್ಲಿ ತಾಸುಗಟ್ಟಲೇ ಕೂತು ಹರಟುವುದಾಗಲಿ , ನೆಹರು ರಸ್ತೆಯ ಇಕ್ಕೆಲಗಳಲ್ಲಿ ವಿಂಡೋ‌ ಶಾಪಿಂಗ್ ಮಾಡುವುದಾಗಲಿ, ಗೋಪಿ‌ ಸರ್ಕಲ್ ನಲ್ಲಿರುವ  ಪಂಚತಾರದಲ್ಲಿ ಕೂತು ಜ್ಯೂಸ್ ಕುಡಿಯುತ್ತಾ ವೃಥಾ ಕಾಲಕಳೆಯುವುದಾಗಲೀ, ಕಾಲೇಜ್ ಮುಗಿದಮೇಲೆ ಅವಳೊಂದಿಗೆ ಮಿಷನ್ ಕಾಂಪೌಂಡ್ ನಲ್ಲಿ ಮಾತಾಡುತ್ತಾ ನಡೆದು ಹೋಗುವುದಾಗಲೀ- ಎಲ್ಲವನ್ನೂ ಕದ್ದು ಮುಚ್ಚಿಯೇ ಮಾಡಬೇಕಿತ್ತು. ಮತ್ತು ಹಾಗೆ ಕದ್ದು ಮುಚ್ಚಿ ಮಾಡುವ ಪ್ರೇಮಸಲ್ಲಾಪದಲ್ಲಿ ಅದೇನೋ ಒಂಥರ ಖುಷಿ ಇರ್ತಿತ್ತು ಅನ್ನಿ.

ಹೀಗಿರುವಾಗ ಒಮ್ಮೆ ನಡೆದ ಈ ಘಟನೆಯನ್ನು ನೆನೆದರೆ ಈಗಲೂ ಆಶ್ಚರ್ಯ, ಭಯ, ನಗು ಮತ್ತು ಸಂತೋಷ ಒಟ್ಟೊಟ್ಟಿಗೇ‌ ಆಗಿಬಿಡುತ್ತವೆ.

‘ಪ್ರೇಮ’ ಎಂಬ ಅವಳನ್ನು ನಾನು ಪ್ರೀತಿಸಲು ಆರಂಭಿಸಿದ್ದು ಯಾವಾಗೆಂದು ನೀವು ಕೇಳಿದರೆ ನಿರ್ಧಿಷ್ಟವಾದ ದಿನಾಂಕ ಹೇಳಲಾರೆ. ಆದರೆ ಐದನೇ ತರಗತಿಯಿಂದ ವಸತಿ ಶಾಲೆಯಲ್ಲಿ ಜೊತೆಗಿದ್ದ ಸಲುಗೆ, ಆಪ್ತತೆ, ತುಂಟಾಟಗಳು, ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ನಡುವೆ ಅಂಥದ್ದೊಂದು ಆಪ್ಯಾಯಮಾನವಾದ ಬಂಧವನ್ನು ಹುಟ್ಟಿಸಿದ್ದವು.

ಕೆಲವೊಮ್ಮೆ ಮುಂದೆ ಆಗಲಿರುವ ಯಾವುದೋ ಒಂದು ಘಟನೆಗೆ ಪೂರಕವೆಂಬಂತೆ ಕೆಲವು ಸಂದರ್ಭಗಳು ಕೂಡಿಬಂದಿರುತ್ತವೆ ಎಂಬುದನ್ನು ನಂಬುವಂತೆ ಮಾಡಿದ ಒಂದು ಘಟನೆಯೂ ನಾವು ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುವಾಗ ನಡೆದಿತ್ತು .

ಗಾಜನೂರಿನ ಮೊರಾರ್ಜಿ ವಸತಿ ಶಾಲೆಗೆ ನಾವೆಲ್ಲ ಬಂದು ಸೇರಿಕೊಂಡು ಅದಾಗಲೇ ಒಂದು ವರ್ಷ ಕಳೆದಿತ್ತು. ಅಲ್ಲಿ ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯ Study Hours ಎಂದು ನಿಗದಿತ ಸಮಯವಿತ್ತು. ಹೀಗೆ ಒಂದು ಸಂಜೆ ಓದುವ ಸಮಯದಲ್ಲಿ  ಕರೆಂಟ್ ಹೋಯ್ತು.

ನಮ್ಮ ವಾರ್ಡನ್ ಗೆ ಅದೆಂಥಾ ಕಾಳಜಿಯೋ ನಮ್ಮ ಬಗ್ಗೆ , ನಾವೆಲ್ಲರೂ ಓದುತ್ತಿದ್ದ MP Hall ( ಮಲ್ಟಿ ಪರ್ಪಸ್ ಹಾಲ್ ಎಂಬರ್ಥದಲ್ಲಿ ಅದನ್ನು ಕರೆಯುತ್ತಿದ್ದೆವು) ಗೆ  ಗ್ಯಾಸ್ ಲೈಟ್ ತಂದಿಟ್ಟು ಓದಲು ಹೇಳಿದರು. ಆದರೆ ಯಾರೂ ಅಷ್ಟೊಂದು ಸೀರಿಯಸ್ಸಾಗಿ ಓದಲು ಕೂರದೆ ತಂತಮ್ಮ ಸ್ನೇಹಿತರ ಗುಂಪುಗಳಲ್ಲಿ ಕೂತು ಮಾತು ಆರಂಭಿಸಿದರು.

ಇಂಥದ್ದೇ ಒಂದು ಗುಂಪಿನಲ್ಲಿ ನಾನು, ಚಂದ್ರು‌, ಸಂತೋಷ್, ಪ್ರೇಮ, ನಿವೇದಿತ, ಮಾಲಿನಿ, ಇಂದಿರಾ ಮತ್ತೆ ಕೆಲವರು ಇದ್ದೆವು. ಆ ವಯಸ್ಸಿನ ಮಾಮೂಲಿ ಪ್ರಶ್ನೆಯಾದ ” ಏಯ್ ದೊಡ್ಡವನಾದ್ಮೇಲೆ ನೀನು ಏನಾಗ್ತೀಯಾ ?” ಎಂಬ ಪ್ರಶ್ನೆಯನ್ನು ಯಾರೋ ಕೇಳಿದರು.

ಸರಿ ,ಅಲ್ಲಿಂದ ಶುರುವಾಯ್ತು ಪ್ರತಿಯೊಬ್ಬರೂ  ತಾವೇನಾಗಬೇಕೆಂದುಕೊಂಡಿದ್ದರೋ‌ ಅದನ್ನೆಲ್ಲ ಹೇಳುತ್ತಾ ಹೋದರು. ನನ್ನ ಸರದಿ ಬಂತು. ಆ ಕಾಲಕ್ಕೆ ನಮಗೆ ಗೊತ್ತಿದ್ದ ಒಂದೇ ಆದರ್ಶಮಯ ವ್ಯಕ್ತಿತ್ವ ಮಹಾತ್ಮ ಗಾಂಧಿಯಲ್ಲವೆ ? ಹಾಗಾಗಿ ನಾನು, “ನಾನು ದೊಡ್ಡವನಾದ್ಮೇಲೆ ಮಹಾತ್ಮ ಗಾಂಧಿ ಆಗ್ತೀನಿ” ಎಂದೆ. ತತ್ ಕ್ಷಣ ಗುಂಪಿನಲ್ಲಿದ್ದ ಪ್ರೇಮ , “ಹಾಗಾದ್ರೆ ನಾನು ಕಸ್ತೂರಬಾ ಆಗ್ತೀನಿ” ಎಂದು ತೀರ ಸಹಜವೆಂಬಂತೆ ಹೇಳಿಬಿಟ್ಟದ್ದಳು.

ಅಷ್ಟು ಸಾಕಾಗಿತ್ತು ಉಳಿದೆಲ್ಲ ಗೆಳೆಯರಿಗೆ. ಇಬ್ಬರನ್ನೂ ರೇಗಿಸಲು ಶುರುವಿಟ್ಟುಕೊಂಡರು.‌ ಈ ಕಾರಣಕ್ಕಾಗಿ ನಾನು ಸಂತೋಷನ ಮೇಲೆ ಕೆಲ‌ದಿನಗಳ ಕಾಲ ಸಿಟ್ಟುಮಾಡಿಕೊಂಡಿದ್ದೆ. ಇದರ ಬಗ್ಗೆ ಕೇಳಿದರೆ ಈಗಲೂ ಈ‌ ಘಟನೆಯೇ ನಡೆದಿಲ್ಲ ನೀನು ಕತೆ ಕಟ್ಟಿ ಹೇಳುತ್ತೀಯಾ ಎನ್ನುತ್ತಾಳೆ ಪ್ರೇಮ. ಇದಕ್ಕಾಗಿ ನಾನು ಇತ್ತೀಚಿಗೆ ಈ ಘಟನೆಯ ಸಾಕ್ಷಿದಾರಳಾಗಿದ್ದ ನಮ್ಮಿಬ್ಬರ ಸ್ನೇಹಿತೆ ನಿವೇದಿತ ಮನೆಗೆ ಬಂದಾಗ ಮತ್ತೊಮ್ಮೆ ಹೇಳಿಸಬೇಕಾಯಿತು. ಸಾಲದ್ದಕ್ಕೆ‌ ಇನ್ನೊಬ್ಬ ಸಾಕ್ಷಿದಾರನಾಗಿದ್ದ ಗೆಳೆಯ ಸಂತೋಷ ಕೆನಡಾದಿಂದ ಕಳಿಸಿದ್ದ ಆಡಿಯೋ ಕ್ಲಿಪ್ ನ್ನು ಕೇಳಿಸಬೇಕಾಯಿತು.‌

ಅದ್ಯಾವ ಹುರುಪಿನಲ್ಲಿ ಅವಳು ಅಂದು ಹಾಗೆ ಹೇಳಿದ್ದಳೋ ಮುಂದೆ ನಾವಿಬ್ಬರೂ ಪ್ರೇಮಿಗಳಾದೆವು ಮತ್ತು ಬಾಳಸಂಗಾತಿಗಳೂ ಆದೆವು.

ಛೇ, ಕ್ಷಮಿಸಿ. ನಾನು ನಿಜವಾಗಿಯೂ ಹೇಳಹೊರಟಿದ್ದು ಪ್ರೇಮ ವ್ಯವಹಾರದಲ್ಲಿದ್ದ ದಿನಗಳಲ್ಲಿ ನಡೆದ ಆ ‘ಭಯಾನಕ ಘಟನೆ’ಯ ಬಗ್ಗೆ. ಅದ್ಯಾಕೋ‌ ಈ ಉಪ-ಸಂಗತಿ ಸಕಾರಾಣವಾಗಿ, ಸಮಯೋಚಿತವಾಗಿ ಇಲ್ಲಿ ಬಂದುಬಿಟ್ಟಿತಷ್ಟೆ.

ಒಂದೇ ಊರಲ್ಲಿದ್ದರೂ ನಮ್ಮ ಪ್ರೇಮ ವ್ಯವಹಾರ ಹೆಚ್ಚಾಗಿ ನಡೆಯುತ್ತಿದ್ದುದು ಪತ್ರಗಳ ಮೂಲಕ. ಆಗಿನ್ನು ನಮ್ಮಿಬರ ಬಳಿಯೂ ಮೊಬೈಲ್ ಇರಲಿಲ್ಲವಾದ್ದರಿಂದ ಪತ್ರಗಳು ನಮ್ಮ ಪ್ರೇಮ ಸಂಸಾರದ ಏಕಮಾತ್ರ ಮಾಧ್ಯಮಗಳಾಗಿದ್ದವು.

ಪ್ರತಿ ಬಾರಿ ಭೇಟಿಯಾದಾಗಲೂ ನಾನವಳಿಗೊಂದು ಪತ್ರ ಕೊಡಬೇಕು. ಅವಳು ನನಗೊಂದು ಪತ್ರ ಕೊಡಬೇಕು.‌ ಅದನ್ನು ಮನೆಗೆ ವಾಪಾಸ್ಸಾದ ಮೇಲೇ ಅವಳು ಓದಿ ಜೋಪಾನವಾಗಿ ಇಟ್ಟುಕೊಳ್ಳಬೇಕು. ನಾನು ಅವಳಿಗೆ ಬರೆದ ಪತ್ರಗಳನ್ನು ಆಕೆ ತನ್ನ ಕಾಲೇಜ್ ಬ್ಯಾಗ್ ನಲ್ಲಿ ರಹಸ್ಯವಾಗಿಟ್ಟುಕೊಂಡು ಮುಂದಿನ ಬಾರಿ ನಾನು ಸಿಕ್ಕಾಗ  ಆಕೆಯ ಪತ್ರದೊಂದಿಗೆ ನನ್ನ ಹಳೆಯ ಪತ್ರಗಳನ್ನೂ ಹಿಂತಿರುಗಿಸುತ್ತಿದ್ದಳು. (ಅವುಗಳನ್ನು ಓದಿದ ಮೇಲೆ ಹರಿದು ಹಾಕು ಎಂದು ನಾನು ಹೇಳುತ್ತಿದ್ದೆನಾದರೂ ಆಕೆ ಭಾವನಾತ್ಮಕವಾಗಿ ನನ್ನನ್ನು ಕಟ್ಟಿಹಾಕಿ ಅದು ಸಾಧ್ಯವಿಲ್ಲವೆಂದು ಹೀಗೆ ನಾನು ಬರೆದ ಪತ್ರಗಳನ್ನು ಮತ್ತೆ ನನಗೇ ಹಿಂತಿರುಗಿಸುತ್ತಿದ್ದಳು. ನಾನು ಹಾಸ್ಟೆಲ್ ನಲ್ಲಿದ್ದುದರಿಂದ ನನ್ನ ಬಳಿ ಆ ಪತ್ರಗಳಿರುವುದು ಸೇಫ್ ಎಂಬುದು ಅವಳ ಲೆಕ್ಕಾಚಾರವಾಗಿತ್ತು.)

ಇಂತಹ ಪತ್ರ ವಿನಿಮಯಗಳು ನಮ್ಮ ನಡುವೆ ವಾರಕ್ಕೊಮ್ಮೆ ನಡೆಯುತ್ತಲೇ ಇದ್ದವು. ನಾನು ಪ್ರತಿ ಪತ್ರದಲ್ಲೂ ಆಕೆಗೊಂದು ಕತೆ ಬರೆಯುತ್ತಿದ್ದೆ. ಅತೀ ಬುದ್ಧಿವಂತಕೆಯಿಂದ ಬರೆಯುತ್ತಿದ್ದ ನನಗೆ  ಮನಸ್ಸಿಗೆ ನಾಟುವಂತೆ ಪತ್ರ ಬರೆಯೋ, ಮೆದುಳಿಗೆ ಬೇಡ’ ಎಂದು ಆಕೆ ಹೇಳುತ್ತಿದ್ದುದೂ ಉಂಟು. ಪ್ರೇಮ ಪತ್ರಗಳ ವಿಷಯಕ್ಕೆ ಬಂದರೆ ಆಕೆ ನನಗಿಂತ ಒಂದು ಕೈ ಮೇಲೇಯೇ. ಪ್ರತೀ ಪತ್ರದಲ್ಲೂ ಭಾವ ತೀವ್ರತೆಯನ್ನು ತುಂಬುತ್ತಿದ್ದಳು. ‘ನನ್ನ ಕಣ್ಣ ಈಜುವ ಮೀನು ನೀನು ‘ ‘ ಪ್ರೀತಿಯಿಂದಲೇ ಪ್ರಾಣ ತಿನ್ನುವ ಈಡಿಯಟ್ ನೀನು’ ಎಂಬಂತ ಸಾಲುಗಳನ್ನು ಆಕೆ ಮಾತ್ರ ಬರೆಯಲು ಸಾಧ್ಯ.

ಪತ್ರಗಳ ಜೊತೆ ತೀರ ವಿರಳವಾಗಿ ಗಿಫ್ಟ್ ಕೊಡೋ ಅಭ್ಯಾಸವೂ ನಮ್ಮಲ್ಲಿತ್ತು. ಏನಾದರೂ Surprise Gift ಕೊಡಬೇಕೆಂಬುದು ನನ್ನ ಹಂಬಲ. ಒಮ್ಮೆ ಪತ್ರದ ಜೊತೆ ಒಂದು Wooden Jewel Box ನ್ನು ಗಿಫ್ಟ್ ಪ್ಯಾಕ್ ಮಾಡಿಸಿ ಅವಳಿಗೆ ಕೊಟ್ಟೆ. ಏನದು‌ ಎಂದು ಅವಳೆಷ್ಟು ಬಾರಿ ಕೇಳಿದರೂ ನಾನು ಹೇಳಲಿಲ್ಲ. ಸಾಮಾನ್ಯವಾಗಿ ನಾನು ಕೊಟ್ಟ ಪತ್ರಗಳನ್ನು ಆಕೆ‌ ಓದುವುದು ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ. ಅಂದರೆ ಸರಿ‌ಸುಮಾರು ನಡು ರಾತ್ರಿಯಲ್ಲಿ ಓದುತ್ತಾ ಕೂರುವ ನೆಪದಲ್ಲಿ ಎಲ್ಲರೂ ಮಲಗಿದ್ದನ್ನು ಖಾತರಿಪಡಿಸಿಕೊಂಡು ನಡು ರಾತ್ರಿಯ ನೀರವತೆಯಲ್ಲಿ ಆ ಪತ್ರಗಳನ್ನು ಓದುತ್ತಿದ್ದಳು.

ಆ ದಿನವೂ ಹಾಗೆಯೇ ಆಯಿತಂತೆ ನಾನು ಕೊಟ್ಟ ಪತ್ರವನ್ನು ಓದಿಯಾದ ಮೇಲೆ ಆ ದಿನ ಕೊಟ್ಟ ಗಿಫ್ಟ್ ನ್ನು ನಿಧಾನಕ್ಕೆ ತೆಗೆದಿದ್ದಾಳೆ. ಅದನ್ನು ಓಪನ್ ಮಾಡುತ್ತಿದ್ದಂತಯೇ ಅದು ಜೋರಾಗಿ ಮ್ಯೂಸಿಕಲ್ ಸೌಂಡ್ ಮಾಡಲು ಶುರುವಿಟ್ಟುಕೊಂಡುಬಿಟ್ಟಿದೆ. ಎಲ್ಲರೂ ಮಲಗಿರುವ ಆ ರಾತ್ರಿಯಲ್ಲಿ ಹೀಗೆ ಆ ಗಿಫ್ಟು ಮಾಡಿದ ಅವಾಂತರದಿಂದ ಎಚ್ಚರಗೊಂಡ ಅವರ ಅಮ್ಮನಿಗೆ ಅದೇನೋ ಸಬೂಬು ಹೇಳಿ ಬಚಾವಾಗಿದ್ದಾಳೆ.

ಆದರೂ ಯಾವ ಕಾರಣಕ್ಕೂ ನಮ್ಮ ಪ್ರೀತಿಯ ವಿಷಯ ಆ ದಿನಗಳಲ್ಲಿ ಹೊರಬರದಂತೆ ಎಚ್ಚರಿಕೆ ವಹಿಸುತ್ತಿರುವಾಗ ಇದೊಂದು ದೊಡ್ಡ ಅಪಾಯದಂತೆಯೇ ಭಾಸವಾಗಿದ್ದು ನಿಜ. ಹೀಗೆ ಕದ್ದು ಮುಚ್ಚಿ ಕೊಟ್ಟ ಗಿಫ್ಟ್ ನಡುರಾತ್ರಿಯಲ್ಲಿ ಅನುರಣಿಸಿದರೆ ಏನು ಮಾಡುವುದು ಅಲ್ಲವೆ ? ಪತ್ರಗಳನ್ನೇ ಹ್ಯಾಂಡ್ ಪೋಸ್ಟ್ ನಲ್ಲಿ ಕೊಟ್ಟು ಸೇಫ್ ಆಗಿರುತ್ತಿದ್ದ ನಾವು ಇಂತಹ ಯಾವುದಾದರೂ ಯಡವಟ್ಟಿನಿಂದ ಎಲ್ಲಿ ಮನೆಯವರಿಗೆ ವಿಷಯ ತಿಳಿದುಬಿಡುತ್ತದೋ ಎಂಬ ಕಾರಣಕ್ಕೆ‌ ಆ ನಂತರದ ಅನೇಕ ವರ್ಷಗಳ ಕಾಲ ತುಂಬಾ ಜಾಗರೂಕತೆಯಿಂದ ನಡೆದುಕೊಂಡೆವು.

ಈಗೆಲ್ಲ ಪ್ರೀತಿ ಹಿಂದೆಂದಿಗಿಂತಲೂ ಹೆಚ್ಚು ಸಾಮಾನ್ಯವೂ, (common occurrence) ಸಾಂಕ್ರಾಮಿಕವೂ ಆಗಿದೆ ಎಂದುಕೊಂಡರೂ ಪ್ರೇಮಿಗಳ ಪಾಲಿಗೆ ಕದ್ದು ಮುಚ್ಚಿ ಮಾಡಬೇಕಾದ ಇಂತಹ ಅನೇಕ ಪ್ರಸಂಗಗಳು ಎದುರಾಗುತ್ತಲೇ ಇರುತ್ತವೆ. ಆಗೆಲ್ಲ ಮೊದಲು ಉಲ್ಲೇಖಿಸಿದ ಶೇಕ್ಸ್‌ಪಿಯರ್ ನ ಆ ಸಾಲು ನನಗೆ ನೆನಪಾಗುತ್ತದೆ.

ಆ ದಿನ ಸರ್ಪ್ರೈಸ್ ಗಿಫ್ಟ್ ಕೊಟ್ಟು ಬೈಸಿಕೊಂಡಿದ್ದ ನಾನು ಈ ವರ್ಷದ ಅವಳ ಬರ್ತಡೇಗೂ ಹಾಗೇ ಮಾಡಲು ಹೋಗಿ ಮತ್ತೆ ಬೈಸಿಕೊಂಡೆ. ಅಲ್ಲದೆ ನನಗೆ, ಅಂಗಡಿಯಲ್ಲಿ ಇನ್ನೊಬ್ಬರ ಹೆಂಡತಿಯನ್ನು ತೋರಿಸಿ‌ ಇವರ ಹಾಗೇ ಇದ್ದಾರೆ, ಇವರಿಗೆ ಸರಿ ಹೊಂದುವಂಥ ಡ್ರೆಸ್ ಕೊಡಿ’ ಎಂದು ನಮ್ಮ ಹೆಂಡತಿಗೆ ಬಟ್ಟೆ ಕೊಂಡುಕೊಳ್ಳಬಾರದೆಂಬ ಜ್ಞಾನೋದಯವೂ ಆಗಿದೆ.

ಆರನೇ ತರಗತಿಯಲ್ಲಿ ಓದುವವರನ್ನು ನೀವು ಚಿಕ್ಕ ಮಕ್ಕಳು ಎಂದು ಕರೆಯೋದಾದರೆ, ಆ ಚಿಕ್ಕ ಹುಡುಗಿ‌ ಪ್ರೇಮ ಮುಗ್ಧತೆಯಿಂದ ಹೇಳಿದ್ದು ನಿಜವಾಗಿದೆ. ನಾನೆಂಬ ಗಾಂಧಿಗೆ ಅವಳು ಕಸ್ತೂರಬಾ ಆಗಿ ಈಗ ಎಷ್ಟೋ‌ ವರ್ಷಗಳು ಕಳೆದಿವೆ.

ಮನಸಾರೆ ಮೆಚ್ಚಿದವರ ಜೊತೆಯೇ ಜೀವನ ಪೂರ್ತಿ‌ ಇರುವುದು ಎಷ್ಟು ಫಾರ್ಚ್ಯೂನೇಟ್ ಅಂಡ್ ಫ್ಯಾಸಿನೇಟ್ ಆಗಿರುತ್ತದೆಂಬುದನ್ನು ಹೇಳಲು ಹೋದರೆ ಮತ್ತೊಂದು ಬೋರಿಂಗ್ ಲವ್ ಅಫೇರ್ ವಿಷಯ ಹೇಳಬೇಕಾದೀತು‌ ಎಂಬ ಕಾರಣಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ.‌

ಹೀಗೆ ಪ್ರೀತಿಯ ದಿನಗಳನ್ನು ಆಗಾಗ ಪೋಸ್ಟ್ ಮಾರ್ಟಮ್ ಮಾಡುತ್ತಲೇ ಇರಲು ಯಾವ ಕ್ರೈಂ ಕೇಸು ಇರಬೇಕೆಂದಿಲ್ಲ. ನಿಮ್ಮ ಮನಸ್ಸಿನ ಮಾರ್ಚರಿಯ ಬಾಗಿಲು‌‌ ತೆರೆದು ನೋಡಿ. ಅಲ್ಲಿಯೂ ಮರಣೋತ್ತರ ಪರೀಕ್ಷೆಗೆ ಅವಕಾಶವಿದ್ದೇ ಇರುತ್ತದೆ.

6 comments

  1. ಬರಹ ಅದ್ಭುತ.. ಪ್ರೇಮಿಸಿದವರನ್ನೇ ವಿವಾಹವಾಗಿರುವುದಂತು ಅತ್ಯದ್ಭುತ..

  2. “ಮನಸಾರೆ ಮೆಚ್ಚಿದವರ ಜೊತೆಯೇ ಜೀವನ ಪೂರ್ತಿ‌ ಇರುವುದು ಎಷ್ಟು ಫಾರ್ಚ್ಯೂನೇಟ್ ಅಂಡ್ ಫ್ಯಾಸಿನೇಟ್ ಆಗಿರುತ್ತದೆಂಬುದನ್ನು ಹೇಳಲು ಹೋದರೆ ಮತ್ತೊಂದು ಬೋರಿಂಗ್ ಲವ್ ಅಫೇರ್ ವಿಷಯ ಹೇಳಬೇಕಾದೀತು‌ ..”

    Hahaha….:)

    ಸೊಗಸಾದ ನಿರೂಪಣೆ. ಅಭಿನಂದನೆ .

  3. ಎದೆಯೊಳಗೆ ಹರಿವ ಅಂತರ್ಗತ ನದಿಯಂತೆ ಕಾಣದೇ ಜುಳುಗುಟ್ಟವ ಈ ಪ್ರೇಮ ಪ್ರಕರಣಗಳ ಮೊದ ಮೊದಲ ತಲ್ಲಣಗಳನ್ನ ಮರು ಸೃಷ್ಠಿಸುತ್ತದೆ ಶಿವು. . . .ನಿನ್ನ ಬರಹಗಳು .

Leave a Reply