ಮಲಗುಂಡಿಗಳಲ್ಲಿನ ಸಾವು ಒಂದು ಪ್ರಾಯೋಜಿತ ಹತ್ಯೆ

ಎನ್ ರವಿಕುಮಾರ್

ಹೊಟ್ಟೆ-ಬಟ್ಟೆಗಾಗಿ ದುಡಿಯುವ ಸಮುದಾಯವನ್ನು ಮಲಗುಂಡಿಗಳಿಗಿಳಿಸಿ (ಮ್ಯಾನ್‌ಹೋಲ್) ನಡೆಯುತ್ತಿರುವ ಹತ್ಯೆ ಇನ್ನೂ ನಿಂತಿಲ್ಲ.

ಶಿವಮೊಗ್ಗ ನಗರದಲ್ಲಿ ೨೦ ಅಡಿ ಆಳದ ಒಳಚರಂಡಿಯ ಮಲಗುಂಡಿಗಿಳಿದ ಇಬ್ಬರು ಕೂಲಿ ಕಾರ್ಮಿಕರು (೦೬/೮/೨೦೧೮) ಮಿಸುಕಾಡದೆ ಜೀವ ಬಿಟ್ಟಿದ್ದಾರೆ.

ಆಳದ ಮಲಗುಂಡಿಯಲ್ಲಿ ಉಸಿರು ತೇಗುತ್ತಾ ಜೀವ ಬಿಡುತ್ತಿದ್ದ ೧೭ ವರ್ಷದ ತನ್ನ ಮಗ (ಅಂಜನಿ)ಯನ್ನು ಕಾಪಾಡಲು ಕೈಚಾಚಿದ ತಂದೆಗೆ ಕೊನೆಗೂ ಆ ಮಗನನ್ನು ಜೀವಂತವಾಗಿ ಉಳಿಸಿಕೊಳ್ಳಲು ಆಗಲಿಲ್ಲ.

ಹೊಸದಾಗಿ ಕಟ್ಟಿದ ಮಲಗುಂಡಿಯನ್ನು ಸರ್ವಿಸ್ ಥ್ರೂ ಮಾಡಲಾಗಿತ್ತು. ಊರಜನರ ಮಲ- ಮೂತ್ರಗಳು ಸರಾಗವಾಗಿ ಒಳಚರಂಡಿಯಲ್ಲಿ ಹರಿದು ಹೋಗುತ್ತಿದೆಯಾ ಎಂದು ಪರೀಕ್ಷೆ ನಡೆಸಿದ್ದ ಒಳಚರಂಡಿ ಇಲಾಖೆಯ ಗುತ್ತಿಗೆದಾರ, ಅಧಿಕಾರಿಗಳ ಹೊಣೆಗೇಡಿತನಕ್ಕೆ ಮಲಗುಂಡಿಗಿಳಿದ ವೆಂಕಟೇಶ, ಅಂಜನಿ ಎಂಬ ಕಾರ್ಮಿಕರು ಜೀವ ಬಿಟ್ಟಿದ್ದಾರೆ. ಇದೊಂದು ಆಕಸ್ಮಿಕ ಸಾವು ಅಲ್ಲ. ವ್ಯವಸ್ಥಿತ ಹತ್ಯೆ.

ಸಫಾಯಿ ಕರ್ಮಚಾರಿ ಆಂದೋಲನ ಸಮಿತಿಯ ನಡೆಸಿದ ಸರ್ವೆಯಲ್ಲಿ ಕಳೆದ ೧೦ ವರ್ಷದಲ್ಲಿ ದೇಶದಲ್ಲಿ ೧೩೪೦ ಜನ ಕಾರ್ಮಿಕರು ಮಲಗುಂಡಿಗಳಲ್ಲಿ ಜೀವ ಬಿಟ್ಟಿದ್ದಾರೆ.

ಅದರ ಪಟ್ಟಿಗೆ ವೆಂಕಟೇಶ, ಅಂಜಿನಿ ಅವರೂ ಸೇರ‍್ಪಡೆಗೊಂಡು ಸಾವಿನ ಸಂಖ್ಯೆ ಏರಿಕೆಯಾಯಿತು.

ಕಳೆದ ಜನವರಿಯಲ್ಲಿ ದೇಶದ ನಗರಾಭಿವೃದ್ದಿ ಸಚಿವ ಹರ್‌ದೀಪ್‌ಸಿಂಗ್‌ಪುರಿ ಅವರು ರಾಜ್ಯಸಭೆಯಲ್ಲಿ ದೇಶಾದಾದ್ಯಂತ ಮಲಗುಂಡಿಗಳಲ್ಲಿ ಸತ್ತವರ ಅಂಕಿಅಂಶ ನೀಡಿದ್ದರು. ೧೯೯೩ ಜಾರಿಗೊಂಡ ಒಣಮಲ ಹೊರುವ ಪದ್ದತಿ ನಿಷೇಧ ಕಾಯ್ದೆಯ ನಂತರ ಮಲಗುಂಡಿಗಳಲ್ಲಿ ಸಾವುಕಂಡವರ ಸಂಖ್ಯೆ ಕೇವಲ ೩೨೩ ಎಂದು ದಾಖಲೆ ನೀಡಿದ್ದರು.

ಅದರಲ್ಲಿ ಕರ್ನಾಟಕದಲ್ಲೇ ೫೩ ಜನ ಸಾವು ಕಂಡಿದ್ದಾರೆ.

೧೯೯೩ ರ ನಂತರ ೨೦೧೩ ರಲ್ಲಿ ಅದರ ವಿಸ್ತರಣಾ ರೂಪವಾಗಿ “Prohibition of Employment as Manual Scavengers and their Rehabilitation Rules, 2013” (“entering sewer lines without safety gears should be made a crime even in emergency situations,” the Bench added a caveat: “For each such death, compensation of Rs. 10 lakhs should be given to the family of the deceased.”) ಕಾಯಿದೆ ಜಾರಿಗೆ ಬಂದಿದ್ದು, ಒಳಚರಂಡಿ ಸ್ವಚ್ಚಗೊಳಿಸುವಾಗ ಸುರಕ್ಷತಾ ಕ್ರಮವನ್ನುಕೈಗೊಳ್ಳಬೇಕು, ಮತ್ತು ಮಲಗುಂಡಿಗಳಲ್ಲಿ ಮನುಷ್ಯರನ್ನು ಇಳಿಸುವುದು ಕಡ್ಡಾಯವಾಗಿ ನಿಷೇಧವಾಗಿದ್ದರೂ ದೇಶದಾದ್ಯಂತೆ ಮಲಗುಂಡಿಗಿಳಿದು ಸಾವು ಕಾಣುತ್ತಿರುವ ಘಟನೆಗಳು ನಡೆಯುತ್ತಲೆ ಇವೆ.

ಮಲಗುಂಡಿಗಳಿಗೆ ಇಳಿಯಲೇಬೇಕಾದ ಅನಿವಾರ‍್ಯತೆ ಬಂದರೆ ಅಗತ್ಯ ಜೀವರಕ್ಷಕ ಉಪಕರಣಗಳನ್ನು ಬಳಸಿಕೊಳ್ಳಬೇಕು. ಆಕ್ಸಿಜನ್ ಸಿಲಿಂಡರ್, ಗಮ್ ಬೂಟ್, ಮಾಸ್ಕ್ ಗ್ಲೌಸ್ ಗಳನ್ನು ಕಾರ್ಮಿಕನಿಗೆ ಒದಗಿಸಬೇಕು. ಎಂಬ ನಿಯಮಗಳಿದ್ದರೂ ಅದ್ಯಾವುದು ಸಂಬಂಧಪಟ್ಟ ಇಲಾಖೆಗಳಲ್ಲಿ, ಏಜೆನ್ಸಿಗಳಲ್ಲಿ ಪಾಲನೆ ಆಗುತ್ತಿಲ್ಲ. ಬಡವರ ಬದುಕುನ್ನು ಸದಾ ಬಲಿಪೀಠಕ್ಕೆ ವೊಡ್ಡುವ ಪ್ರಾಯೋಜಿತ ಕೊಲೆಗಳು ನಡೆಯುತ್ತಲೆ ಇವೆ. ಹೀಗೆ ಮೃತಪಟ್ಟ ಕೂಲಿಕಾರ್ಮಿಕರ ಕುಟುಂಬಕ್ಕೆ ಸರ್ಕಾರಗಳು ಸುಪ್ರೀಂಕೋರ್ಟ್ ನ ತೀರ್ಪಿನಂತೆ ೧೦ ಲಕ್ಷ.ರೂಗಳ ಪರಿಹಾರವನ್ನು ಕೊಡಬಹುದು ಆದರೆ ಇಂತಹ ಘಟನೆಗಳನ್ನು ತಡೆಯಲು ಸರ್ಕಾರಗಳು ಗಮನ ಹರಿಸುತ್ತಿಲ್ಲ.

ಮನುಷ್ಯರ ಮಲ-ಮೂತ್ರಗಳನ್ನೆ ಮನುಷ್ಯರು ಬಾಚಿ-ಬಳಿಯಬೇಕೆಂಬ ಅಮಾನವೀಯ ಸ್ಥಿತಿಯ ಹಿಂದೆ ಅಡಗಿರುವುದು ಶ್ರೇಣಿಕೃತ ಜಾತಿ ಜಾತಿವ್ಯವಸ್ಥೆಯ ನಿರ್ಮಾತೃಗಳಿದ್ದಾರೆ. ಇಡೀ ದೇಶದಲ್ಲೇ ಒಂದು ನಿರ್ಧಿಷ್ಟ ಸಮುದಾಯವನ್ನು ಇಂತಹ ಕೆಲಸಕ್ಕೆ ಮೀಸಲಿರಿಸಿ ಬಳಸಿಕೊಳ್ಳುತ್ತಾ, ಕೊಲೆಗೈಯುತ್ತಾ ಬರಲಾಗುತ್ತಿದೆ. ಆಧುನಿಕ ಭಾರತದಲ್ಲಿ ತಂತ್ರಜ್ಞಾನ ದ ಆವಿಷ್ಕಾರ ನಡೆದಿದ್ದರೂ ಮನುಷ್ಯರನ್ನು ಮಲಗುಂಡಿಗಿಳಿಸುವ ನಿರ್ಮಾನುಷ ಮನೋಸ್ಥಿತಿ ಬದಲಾಗಿಲ್ಲ.

ಇತ್ತೀಚೆಗೆ ರಾಜ್ಯಸರ್ಕಾರವು ಸಿಂಗಾಪುರದಲ್ಲಿನ ಸ್ವಚ್ಚತಾ ವ್ಯವಸ್ಥೆಯ ಬಗ್ಗೆ ಅಧ್ಯಯನಕ್ಕೆಂದು ಪೌರಕಾರ್ಮಿಕರನ್ನು ಕಳುಹಿಸುತ್ತಿದೆ. ಸಿಂಗಾಪುರದಲ್ಲಿ ಸ್ವಚ್ಚತೆಗೆ ಮಾನವರಹಿತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದನ್ನು ಎಷ್ಟರ ಮಟ್ಟಿಗೆ ರಾಜ್ಯಸರ್ಕಾರ ಅಳವಡಿಸಿಕೊಂಡಿದೆ ಎಂಬುದಕ್ಕೆ ಉತ್ತರವಿಲ್ಲ. ಸರ್ಕಾರದ ಪೌರಡಳಿತ ಇಲಾಖೆಗಳಲ್ಲೆ ಖಾಯಂ ನೌಕರರಿಗೆ ಅಗತ್ಯ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಇನ್ನೂ ಗುತ್ತಿಗೆ ಕಾರ್ಮಿಕರು, ಕೂಲಿ ಕಾರ್ಮಿಕರ ಪಾಡೇನು ಎಂಬುದನ್ನು ಯೋಚಿಸಬೇಕಾಗಿದೆ. ೨೦೧೧ರ ಸಾಮಾಜೋಆರ್ಥಿಕ ಸೆನ್ಸಸ್ ಪ್ರಕಾರ ದೇಶದಲ್ಲಿ ೭.೯೪.೦೦೦ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಇದ್ದಾರೆ. ಆದರೆ ಇದನ್ನು ಸಫಾಯಿಕರ್ಮಚಾರಿ ಆಂದೋಲ ನಿರಾಕರಿಸುತ್ತದೆ. ಇದಕ್ಕೂ ಹೆಚ್ಚಿನ ಜನ ದೇಶದಲ್ಲಿ ಮಲಗುಂಡಿಗಳ ಸ್ವಚ್ಛತಾ ಕೆಲಸವನ್ನೆ ಅವಲಂಬಿಸಿ ಬದುಕುತ್ತಿದ್ದಾರೆ ಎಂದು ಹೇಳುತ್ತದೆ.

ಮಲಗುಂಡಿಗಳಲ್ಲಿ ಸಾವುಗಳ ಸಂಭವಿಸಿದಾಗ ಪ್ರಭುತ್ವ ಪರಿಹಾರ ಕೊಟ್ಟು ಕೈತೊಳೆದುಕೊಂಡರೆ , ನಾಗರೀಕ ಸಮಾಜವೂ ದಿವ್ಯ ಮೌನ ವಹಿಸುತ್ತದೆ. ಸಂವೇದನಾ ರಹಿತವಾಗಿ ಮತ್ತದೆ ಎಂದಿನಂತೆ ತಮ್ಮ ಮನೆಯ ಕಕ್ಕಸ್ಸು ಗುಂಡಿಗಳ ಭರ್ತಿಯಾಗಿವೆ ಬನ್ನಿ ಎಂದು ಕರೆಯುತ್ತದೆ. ಡಿಜಿಟಲ್ ಇಂಡಿಯಾದಲ್ಲಿ ಕಕ್ಕಸ್ಸು ಗುಂಡಿ ಕ್ಲೀನ್ ಮಾಡಲು ಮನುಷ್ಯರೇ ಇಳಿಯಬೇಕಾದ ಸ್ಥಿತಿ ಇದೆ.

ರಸ್ತೆ ಬದಿ,ಬಯಲಿನ ಕಕ್ಕಸ್ಸು -ಕಸ ನಿಷೇಧಿಸುವ ನಿಟ್ಟಿನಲ್ಲಿ ಆಂದೋಲನವೇ ನಡೆದಿದೆ. ಅದೊಂದು ದೇಶಪ್ರೇಮದ ಸಂಕೇತವಾಗಿಯೂ ವಿಜೃಂಭಿಸುತ್ತಿದೆ. ಅವರು ಗರಿ ಗರಿ ಬಿಳಿಬಟ್ಟೆ ತೊಟ್ಟು ಮುಖಕ್ಕೆ ಪರದೆ, ಕೈ ಕಾಲುಗಳಿಗೆ ಕವಚಗಳನ್ನು ತೊಟ್ಟು ರಾಜಬೀದಿಯ ಕಡ್ಡಿ-ಕಸವನ್ನು ಆಯ್ದು ಮಾಧ್ಯಮಗಳ ಪೆನ್ನು, ಕ್ಯಾಮರಾಗಳಿಗೆ ಮುಖವೊಡ್ಡಿತ್ತಿದ್ದರೆ, ಇತ್ತ ಕನಿಷ್ಠ ಅಂಗಿಯೂ ಇಲ್ಲದೆ ಮಲಗುಂಡಿಗಿಳಿದ ವೆಂಕಟೇಶ, ಅಂಜನಿಯಂತ ನಿರ್ಗತಿಕ ಪ್ರಜೆಗಳು ಆಳದ ಮಲಗುಂಡಿಯಲ್ಲಿ ಹೆಣವಾಗಿ ತೇಲುತ್ತಿದ್ದಾರೆ.

3 comments

  1. ತಲೆತಗ್ಗಿಸುವವರೆಗೆ ಇಂತಹವು ನಡೆಯುತ್ತ ಲೇ ಇರುತ್ತ ವೆ.ಕಾರಣರಾದವರ ತಲೆದಂಡವೇ ಪರಿಹಾರ.

  2. ಮೊತ್ತ ಮೊದಲ ಬಾರಿಗೆ ನಿಮ್ಮ ಅಂಕಣ ಇಷ್ಟವಾಯಿತು. ನಿಮ್ಮ ಅಂಕಣದಲ್ಲಿ ಇಂತಹಾ ಮಾನವ ಪರ ಕಾಳಜಿಯುಳ್ಳ ವಸ್ತುಗಳನ್ನು ಸದಾ ನಿರೀಕ್ಷಿತ್ತೇನೆ-ಅಂದರೆ ಅಂತಹಾ ಸಂದರ್ಭಗಳು ಕಡಿಮೆಯಾಗಲಿ ಎಂದು ಕೂಡಾ ಪ್ರಾರ್ಥಿಸುತ್ತೇನೆ!

Leave a Reply