ನನ್ನ ಕ್ಯೂಬಾ  ಹಾಗೂ ಕರುಣಾನಿಧಿ 

ಜಿ ಎನ್ ಮೋಹನ್ 

ನಾನು ‘ಈಟಿವಿ’ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ದಿನಗಳು. ರಾಮೋಜಿ ಫಿಲಂ ಸಿಟಿಯಲ್ಲಿದ್ದೆ. ನನ್ನ ಲ್ಯಾಂಡ್ ಲೈನ್ ಗೆ ಫೋನ್ ಕರೆ. ರಿಸೀವ್ ಮಾಡಿದಾಗ ಆ ಕಡೆಯಿಂದ ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ಫೋನ್ ಮಾಡುತ್ತಿದ್ದೇವೆ ಎಂದರು. ನಾನು ರಾಮೋಜಿ ರಾವ್ ಅವರಿಗೆ ಹೋಗಬೇಕಿದ್ದ ಕರೆ ನನಗೆ ಬಂದು ಬಿಟ್ಟಿದೆ ಎಂದುಕೊಂಡೆ. ‘ನೀವು ಮೋಹನ್ ತಾನೇ..?’ ಎಂದಾಗ ಅಚ್ಚರಿ.

‘ಮುಖ್ಯಮಂತ್ರಿಗಳು ನಿಮ್ಮ ಕ್ಯೂಬಾ ಪ್ರವಾಸ ಕಥನ ಓದಿದ್ದಾರೆ. ಅವರಿಗೆ ತುಂಬಾ ಇಷ್ಟವಾಗಿದೆಯಂತೆ ಎಂದು ತಿಳಿಸಲು ನಮಗೆ ಸೂಚನೆ ನನೀಡಿದ್ದಾರೆ’ ಎಂದರು. ನಾನು ಅಚ್ಚರಿಯ ಸರಮಾಲೆಯಿಂದ ಇನ್ನೂ ಬಿಡಿಸಿಕೊಂಡಿರಲಿಲ್ಲ ಆ ಕಡೆಯ ದನಿ ‘ಮುಖ್ಯಮಂತ್ರಿಗಳು ನಿಮ್ಮ ಪುಸ್ತಕ ಓದಿ ಒಂದು ಕವಿತೆ ಬರೆದಿದ್ದಾರೆ. ಅದನ್ನು ನಿಮ್ಮ ವಿಳಾಸಕ್ಕೆ ಕಳಿಸುತ್ತೇವೆ’ ಎಂದರು. ನಾನು ಮೂರ್ಛೆ ಬೀಳುವುದೊಂದೇ ಬಾಕಿ. ಎಲ್ಲಿಯ ಕ್ಯೂಬಾ, ಎಲ್ಲಿಯ ಕರುಣಾನಿಧಿ, ಎಲ್ಲಿಯ ನಾನು..? ಅನಿಸಿತ್ತು.

ನನ್ನ ಕ್ಯೂಬಾ ಪ್ರವಾಸ ಕಥನ ‘ನನ್ನೊಳಗಿನ ಹಾಡು ಕ್ಯೂಬಾ’ ಓದಿದ ಅಜ್ಜ ೮೦ ರ ಆಸುಪಾಸಿನಲ್ಲಿದ್ದ ಬೃಹಸ್ಪತಿ ಅವರು ಅದನ್ನು ಸ್ವಯಂಸ್ಫೂರ್ತಿಯಿಂದ ತಮಿಳಿಗೆ ಅನುವಾದಿಸಿದ್ದರು. ಅಷ್ಟೇ ಅಲ್ಲ ಅದನ್ನು ತಮಿಳುನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶಕರಾದ ‘ಪಾವೈ ಪ್ರಕಾಶನ’ಕ್ಕೆ ಕಳಿಸಿದ್ದರು. ಅದು ಶರವೇಗದಲ್ಲಿ ಮುದ್ರಿತವಾಗಿ ಬಂದಿತ್ತು. ಆ ಪ್ರಕಾಶನಕ್ಕೂ ಕರುಣಾನಿಧಿ ಅವರಿಗೂ ಒಳ್ಳೆಯ ನಂಟು. ಅಲ್ಲಿಂದ ಸಾಕಷ್ಟು ಪುಸ್ತಕಗಳನ್ನು ಆ ವಯಸ್ಸಿನಲ್ಲೂ ಕರುಣಾನಿಧಿ ಅವರು ತರಿಸಿ ಓದುತ್ತಿದ್ದರು. ಹಾಗೆ ಅಚಾನಕ್ಕಾಗಿ ಅವರ ಕೈಗೆ ಸಿಕ್ಕಿದ್ದು ನನ್ನ ಕ್ಯೂಬಾ ಕೃತಿ.

ಆಮೇಲೆ ನಡೆದದ್ದು ಇಷ್ಟು. ಈ ಮಧ್ಯೆ ಸಿ ದ್ವಾರಕಾನಾಥ್ ಅವರನ್ನು ಬಜೆಟ್ ಚರ್ಚೆಗೆಂದು ಫಿಲಂ ಸಿಟಿಗೆ ಕರೆಸಿಕೊಂಡಿದ್ದೆ. ನಾನು ಅವರಿಗೆ ಈ ಪ್ರಸಂಗ ಹೇಳಿದೆ. ಅವರು ಆ ಕವಿತೆ ಕೊಡಿ ಅನುವಾದಿಸಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸುತ್ತೇನೆ ಎಂದರು.

ನನ್ನ ಬಳಿ ಕವಿತೆ ಎಲ್ಲಿತ್ತು? ಅದು ರಾಮೋಜಿ ಫಿಲಂ ಸಿಟಿ ಎನ್ನುವ ಅನಂತ ಸಾಗರದಲ್ಲಿ ನನಗೆ ತಲುಪದೇ ಹೋಯ್ತೋ ಅಥವಾ ಮುಖ್ಯಮಂತ್ರಿಗಳ ಸಿಬ್ಬಂದಿಗಳು ನನಗೆ ಕಳಿಸಲೇ ಇಲ್ಲವೋ.. ಅಂತೂ ಕರುಣಾನಿಧಿ ಅವರ ಜೊತೆಗೆ ನಾನು, ಕ್ಯೂಬಾ ಎರಡೂ ಎರಡು ಹೆಜ್ಜೆ ಹಾಕಿದ್ದೆವು ಎನ್ನುವುದು ಈಗ, ಈ ಹೊತ್ತಲ್ಲಿ ಸವಿ ಸವಿ ನೆನಪು.

4 comments

  1. ಚೆಂದದ ನೆನಪು …
    ತಮಿಳು ನಾಡಿನ ರಾಜಕೀಯದ ಎರಡು ಪ್ರಬಲ ತಲೆಗಳು ಇಲ್ಲವಾದವು…

  2. ಆ ನೆನಪಾದರೂ ಏನು ಅನಿರೀಕ್ಷಿತ..ಅವಿಸ್ಮರಣೀಯ..

  3. ನನ್ನ “ಜೇನ್ ಏರ್” ಕೈ ಸೇರದೆ ಕಾಣೆಯಾಗಿ ಹೋದಂತೆ ?
    ಹಾಗಾದರಿದು ಹೊಸತಲ್ಲ.. ಆದರೆ ಕರುಣಾನಿಧಿ ಅವರ ಕವನ ಕಳೆದುದು ನಿಜಕ್ಕೂ ಬೇಸರ. ಮೋಹನ ಮಾಯಾಜಾಲ!

Leave a Reply