ಮೆಸೇಜಿನ ತುದಿಗೊಂದು ಲಜ್ಜೆಗೆಟ್ಟ ಗೋಗರೆತ..

  ಪುನರ್ವಸು ಪ್ರಶಾಂತ್

ತುಂಬ ಪ್ರೀತಿಯಿಂದ
ಸಾಕಿಟ್ಟುಕೊಂಡಿದ್ದ ನನ್ನ ನಗೆಯ
ಮುಗುಳೊಂದು ಅವನ ಮೊಬೈಲಿನ
ಗ್ಯಾಲರಿಯೊಳಗೆ
ಒಂದಷ್ಟು ಸಂಖ್ಯೆಗಳ
ಪಾಸ್ವರ್ಡಿನ ಬೀಗದ ಹಿಂದೆ
ಬಂಧಿಯಾಗಿತ್ತು,
ಬಹುಶಃ ಅವನ ತುಟಿಯ ಹಿಂದಿನ
ನಗುವೂ ಹೆಂಡತಿಯ
ಇಷಾರೆಯ ಹಿಂದೆ….

ಎಲ್ಲಿದ್ದೀ ಸಿಗಬಹುದಾ ಇವತ್ತಾದರೂ
ಎರಡು ವರ್ಷದ ಅದೇ
ಹಳೆಯ ಅಪೀಲಿಗೆ
ಥೇಟು ಗೋಗರೆತದಂಥದ್ದೇ
ಬಣ್ಣ ತೀಡಿ ಕೇಳಿದ್ದೆ,..

ಬಹುಶಃ ಆಗಲಾರದೇನೋ
ದಿನಾ ನನ್ನ ದನಿ ತೂರಿಸಿಕೊಳ್ಳುತ್ತಿದ್ದ
ಮೈಕಿನ ಗಂಟಲು ಕಟ್ಟಿದೆ,
ಹಾಡದೇ ಹೇಗಿರಲಿ,
ಮತ್ತೆ ಮೆಸೇಜು ಮಾಡಬೇಡ
ಮನೆಗೆ ಹೋಗುವ ವೇಳೆಗೆ
ಹೊಸ ಪಾಸ್ವರ್ಡು ಇಟ್ಟಿರಬೇಕು
ನಿನ್ನ ಹೆಸರಿಂದು
ಈ ಸಲವಾದರೂ ಅವಳಿಗೆ
ಅನುಮಾನ ಬರದಿರಲಿ ಎಂದು
ಹುಳ್ಳಗೆ ನಕ್ಕ,,,
ಅದು ವ್ಯಂಗ್ಯವೋ ಮತ್ತೊಂದೋ
ತಲೆಗೇರಲಿಲ್ಲ…

ಮಧ್ಯ ರಾತ್ರಿಯ ಕಿವಿ
ಗಡಚಿಕ್ಕುವಂತೆ ಅವನ ಮೊಬೈಲಿನ
ಮೂಲೆಗೆ ನನ್ನ ಹೆಸರಿನದೊಂದು
ಮಿಸ್ಕಾಲು ಕಾಲು
ಮುರಿದುಕೊಂಡು ಹೋಗಿ
ಬೀಳುತ್ತದೆ,
ಹಣೆ ಚಚ್ಚಿಕೊಳ್ಳುತ್ತಾನವನು
ಈ ಹಾಳು ಮೊಬೈಲಿಗೆ ಸಾವಾದರೂ
ಬರಬಾರದಿತ್ತೇ!!!!

ಮತ್ತದೇ ಬೇಡವಾದರೂ
ಬೇಕೆನಿಸುವ ಹೆಸರಿನ ಫೋನು
ಕೈಯಲ್ಲಿದ್ದ ಚಾಕ್ಪೀಸು
ಸದ್ದಾಗದಂತೆ ಮುರಿದು
ಮೂಲೆ ಸೇರುತ್ತದೆ,
ಅವನೆಲ್ಲ ತಾಳ್ಮೆ ಇಲ್ಲಿ
ನನ್ನ ಉಸಿರುಗಟ್ಟಿಸುತ್ತದೆ
ನನ್ನದೆಂದುಕೊಂಡ ಖಾಸಾ
ಮುನಿಸೊಂದು
ಅವನ ಮೂಗಿನ ತುದಿಗೆ….

ಕಿವುಡು ಮೊಬೈಲಿನ
ಎದೆಗೊಂದು ಒದೆ ಕೊಟ್ಟಂಥ
ಸಣ್ಣ ಸದ್ದಿನ
ಮೆಸೇಜಿನ ತುದಿಗೊಂದು
ಲಜ್ಜೆಗೆಟ್ಟ ಗೋಗರೆತ
ಇವತ್ತಾದರೂ ಸಿಗಬಹುದಲ್ಲ,
ಇವತ್ತು ಅವಳು ಹುಟ್ಟಿದ ದಿನ
ಬರಲಿಕ್ಕಾಗದು,
ನನ್ನ ಗೋಗರೆತ ಚಿಟಪಟನೆ
ಒದ್ದಾಡಿ ಪ್ರಾಣ
ಬಿಟ್ಟ ಸದ್ದು ಮತ್ತೊಂದು
ನನ್ನ ನಿಟ್ಟುಸಿರಿನದ್ದು…

 

3 comments

  1. ತುಡಿತವನ್ನ ಅದ್ಭುವನ್ನಾಗಿ ಕವಿತೆಯನ್ನಾಗಿಸಿದ್ದೀರಿ.. ಚೆಂದವಿದೆ ಕವಿತೆ..

Leave a Reply