ಅದು ಕಾಡುವ ‘ಕಲಾಮಂಡಲಂ’

                                                                                   ಬಂಡಾಯದ ನೃತ್ಯವೂ, ಕಲಾಗ್ರಾಮವೂ

ನಾನು ಪ್ರತಿ ಬಾರಿ ಊರಿಂದ ಆಲುವಾ ಹೋಗೋವಾಗ್ಲೂ ಸೆಳೀತಿತ್ತು ಆ ಬೋರ್ಡು.
ಊರಲ್ಲಿ ರಾತ್ರಿ ಟ್ರೇನ್ ಹತ್ತಿದ್ರೆ ತಿಂಡಿ ಹೊತ್ತಿಗೆ ಮಹಾ ದೊಡ್ಡ ‘ ಶೋರನೂರು ಜಂಕ್ಷನ್’. ಇನ್ನರ್ಧ ಘಂಟೆ ಪ್ರಯಾಣ ಮಾಡಿದ್ರೆ ತ್ರಿಶೂರು. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಕಾಣೋ ಆ ‘ ಕಮಾನು’ …….’ ಕೇರಳ ಕಲಾಮಂಡಲಂ’

‘ ಕಲಾಮಂಡಲಂ’ ಬಗ್ಗೆ ಮುಂಚೆನೇ ಕೇಳಿದ್ದೆ. ಪ್ರತಿ ಬಾರಿ ಕಮಾನು ದಾಟೋವಾಗ್ಲೂ ಆದಷ್ಟು ಬೇಗ ಕಲಾಮಂಡಲಂಗೆ ಬರ್ಬೇಕು ಅಂದ್ಕೋತಾನೇ ಎದ್ದೆ. ಆದ್ರೆ ಯಾಕೋ ಮುಹೂರ್ತವೇ ಬಂದಿರ್ಲಿಲ್ಲ.’ ಉನ್ನಿಕೃಷ್ಣನ್ ಅನ್ನೋ ಆಸಾಮೀನೂ ಅಂಥ ಆಸಕ್ತಿ ತೋರಿಸ್ತಿರ್ಲಿಲ್ಲ. ನನ್ನನ್ನ ಅಲ್ಲಿಗೆ ಕರ್ಕೊಂಡು ಹೋದದ್ದು ಪಕ್ಕದ್ಮನೆ ಬಾಬು. ಈ ಬಾಬು ಪರಿಚಯವಾದ್ದ್ದೂ ಒಂದು ಇಂಟರೆಸ್ಟಿಂಗ್ ಕಥೆ. ಆಲುವಾ ದಲ್ಲಿ ನಾನಿದ್ದ ಮನೆ ಒಂಥರಾ ಚಿಕ್ಕ ಫ್ಲಾಟ್. ಐದಾರು ಮನೆಗಳ ಒಂದು ಬಿಲ್ಡಿಂಗ್. ನಾನಿದ್ದದ್ದು ಎರಡನೇ ಮಹಡೀಲಿ. ಮೆಟ್ಟಿಲು ಹತ್ತೋ ಜಾಗದಲ್ಲಿ ಒಂದೆರಡು ರೂಮ್ ಗಳಿದ್ವು. ಅಲ್ಲಿ ಕೆಲವು ಹುಡುಗರು ಬಾಡಿಗೆಗಿದ್ವು. ಉಳಿದ ಮನೆಗಳಲ್ಲಿ ಫ್ಯಾಮಿಲಿಗಳಿದ್ವು.

ನಾನು ಗಣೇಶ ಚೌತಿಗಂತ ರಜೆ ಹಾಕಿ ಊರಿಗೆ ಬಂದು ಕೆಲವು ದಿನಗಳಾಗಿದ್ವವು. ಹಿಂದಿರುಗಿ ಹೋಗಿದ್ದು ಹತ್ತಾರು ದಿನಗಳ ನಂತರ. ಒಂದು ದಿನ ಕೆಲಸ ಮುಗಿಸಿ ಹೊರ ಬರುವಾಗ ರಾತ್ರಿಯಾಗಿತ್ತು. ವಾಹನ ಇಳಿದು ಮೆಟ್ಟಿಲು ಹತ್ತುತ್ತಿದ್ದ ಹಾಗೆ ಆ ‘ಸಿಂಗಲ್ ರೂಂ’ ನಿಂದ ಜೋರಾಗಿ ಹಾಡು. ಜೊತೆಗೆ ಒಂದಿಷ್ಟು ಕಂಠಗಳ ಕೋರಸ್. ರೂಂ ನ ಬಾಗಿಲು ಹಾಕಿತ್ತು. ಮೆಟ್ಟಿಲ ಮೇಲೇ ನಿಂತು ಕೆಲ ಹೊತ್ತು ಕೇಳಿದೆ. ಅಂಥ ಹಾಡನ್ನ ನಾನೆಂದೂ ಕೇಳಿರ್ಲಿಲ್ಲ. ಪ್ರಯಾಣ ತುಂಬ ಸುಸ್ತಾಗಿತ್ತು ಮನೆಗೆ ಹೋಗಿ ಮಲಗಿದೆ. ಕುತೂಹಲವಂತೂ ಹಾಗೇ ಇತ್ತು. ಬೆಳಿಗ್ಗೆ ಎದ್ದು ವಾಕ್ ಹೋಗೋ ಹೊತ್ಗೆ ವಾಚಮನ್ ನ್ನ ಕೇಳಿದೆ.

‘ಅವರು ಬಾಬು ಅಂತ ಅಲೆಪ್ಪಿ ಕಡೆಯೋರು. ಯಾವುದೋ ಕಂಪ್ನೀಲಿ ಕೆಲಸ ಮಾಡ್ತಾರೆ. ಒಬ್ರೇ ಇರ್ತಾರೆ. ಮೊನ್ನೆ ಹೊಸದಾಗಿ ಬಾಡಿಗೆ ಬಂದಿದಾರೆ” ಅಂದ. “ತುಂಬಾ ಚೆನ್ನಾಗಿ ಹಾಡ್ತಾರಲ್ಲ” ಎಂದೆ. ‘ಹೌದು ಸರ್, ಬಂದ ದಿನದಿಂದ್ಲೇ ಇಲ್ಲಿ ಪಾನಗೋಷ್ಠಿ. ನಾಲ್ಕಾರು ಗೆಳೆಯರು ಸೇರ್ತಾರೆ. ಏರ್ತಿದ್ದ ಹಾಗೆ ಹಾಡು ಸುರುವಾಗತ್ತೆ” ಎಂದು ನಕ್ಕ. ಆದ್ರೆ ಗಲಾಟೆಯಿಲ್ಲ, ಸಣ್ಣದಾಗಿ ಹಾಡ್ಕೋತಾರೆ, ಯಾರ್ಗೂ ತೊಂದರೆಯಿಲ್ಲ ಅದ್ಕೇ ನಾನೂ ಸುಮ್ನಿದೀನಿ” ಅಂತ ಒಂಚೂರು ಬಿಲ್ಡಪ್ ತಗೊಂಡ. ನನ್ಗೂ ಕುತೂಹಲ ಹೆಚ್ಚಾಯ್ತು. ದಿನಾ ಮೆಟ್ಟಿಲು ಹತ್ತುವಾಗ ರೂಂ ಕಡೆ ಕಿವಿಗೊಡ್ತಿದ್ದೆ. ಸುಮಾರು ದಿನ ಹಾಡೇ ಕೇಳಲಿಲ್ಲ. ಆ ಬಾಬು ಅನ್ನೋ ಮನುಷ್ಯನೂ ಕಾಣ್ಲಿಲ್ಲ.

ಶನಿವಾರದ ಒಂದು ರಾತ್ರಿ ಮತ್ತೆ ಕೇಳಿತು ಹಾಡು.

ಈ ಬಾರಿ ನಾನು ಸ್ವಲ್ಪ ಹೊತ್ತು ನಿಂತೆ. ತುಂಬ ಚೆನ್ನಾಗಿ ಹಾಡು ಕೇಳ್ತಿತ್ತು. ನನಗೆ ಕುತೂಹಲ ತಡೆಯಲಾಗ್ಲಿಲ್ಲ. ಬಾಗಿಲು ತಟ್ಟಿಯೇ ಬಿಟ್ಟೆ. ಥಟ್ಟನೆ ಹಾಡು ನಿಂತಿತು. ಬಾಬು ಬಂದು ಬಾಗಿಲು ತೆಗೆದ್ರು. ನ್ನನ್ನ ನೋಡಿ ಕೊಂಚ ಗಾಬರಿಗೊಂಡ ಹಾಗಿತ್ತು. ನಾನು ನಮಸ್ಕಾರ ಎಂದೆ. ಪ್ರಶ್ನಾರ್ಥಕವಾಗಿ ನೋಡಿದ್ರು. ಒಳಗೆ ಕರೀಲಿಲ್ಲ. ತೆರೆದ ಬಾಗಿಲಿನಿಂದ ಇಣುಕಿ ನೋಡಿದ್ರೆ ಆ ಸೀನ್ ನಾನು ನಿರೀಕ್ಷಿಸಿದಂತೇ ಇತ್ತು. ಕೆಳಗಡೆ ಚಾಪೆ ಹಾಸಿ ಮೂರು ಜನ ಕೂತ್ಕೊಂಡಿದ್ರು. ಅವರೆದುರು ಅರ್ದ ಖಾಲಿಯಾದ ಗ್ಲಾಸ್ ಗಳು. ರೂಂ ತುಂಬ ಸಿಗರೇಟಿನ ದಟ್ಟ ಹೊಗೆ. ನಾನು ಬಾಬು ಅವರಿಗೆ ನನ್ನ ಪರಿಚಯ ಹೇಳ್ಕೊಂಡೆ. ಎರಡೇ ಮಾತಲ್ಲಿ ಆವರು ಹಾಡ್ತಿದ್ದ ಹಾಡು ನನಗಿಷ್ಟವಾಯ್ತು ಅಂತ ಹೇಳ್ದೆ. ಅಂಥ ಪ್ರತಿಕ್ರಿಯೆಯೇನೂ ಬರ್ಲಿಲ್ಲ.’ ಸಾರ್ ಬೆಳಿಗ್ಗೆ ಸಿಗೋಣ್ವಾ?” ಅಂತ ಬಾಗಿಲು ಮುಚ್ಚಿದ್ರು.

ಮರುದಿನ ಬೆಳಿಗ್ಗೆಯಾಗೋದನ್ನೇ ಕಾಯ್ತಿದ್ದೆ. ವಾಕ್ ಗೆ ಕೆಳಗೆ ಹೋಗೋ ಸಮಯ. ಅವರೆಲ್ಲ ಗೇಟ್ ಬಾಗ್ಲಲ್ಲೇ ನಿಂತಿ

 

ದ್ರು. ನಾನು ವಿಶ್ ಮಾಡಿ, ಪರಿಚಯ ಮಾಡ್ಕೊಂಡೆ. ‘ಸಾರಿ ಸರ್ ರಾತ್ರಿ ಸರಿಯಾಗಿ ಮಾತಾಡ್ಲಿಲ್ಲ, ಗೊತ್ತಾಯ್ತಲ್ಲ” ಅಂತ ನಕ್ರು ಬಾಬು. ಗೆಳೆಯರನ್ನೆಲ್ಲ ಬೀಳ್ಕೊಟ್ಟು, ನಾನೂ ಬರ್ತೀನಿ ಸಾರ್ ಅಂತ ನನ್ ಜೊತೆ ವಾಕ್ ಹೊರಟ್ರು. ಸುಮಾರು ಒಂದು ಘಂಟೆ ವಾಕ್, ಮಾತು. ಬಾಬು ಅಲೆಪ್ಪಿ ಕಡೆಯವ್ರು. ಅಂಬಲಪುವಾ ಎನ್ನೋ ಕೃಷ್ಣ ದೇವಸ್ಥಾನದ ಪಕ್ಕ ಅವರ ಮನೆ. ಕಲಾವಿರ ಮನೆತನದವ್ರು. ‘ಓಟ್ಟಂತುಳ್ಳಾಲ್’ ಅನ್ನೋ ಪುರಾತನ ಪ್ರಕಾರದ ಕಲಾವಿದರ ಮನೆಯದು. ಹಾಗೇನೇ ಆ ನೃತ್ಯದ ಹಾಡುಗಳೆಲ್ಲ ಇವರಿಗೆ ಬಾಯಿಪಾಠ. ಅಷ್ಟೇ ಚೆನ್ನಾಗಿ ಹಾಡೋವ್ರು ಕೂಡ. ಮುಂದೆ ಅವ್ರೇ ನನ್ನನ್ನ ಆಂಥದೊಂದು ಪ್ರದರ್ಶನ ತೋರಿಸೋಕೆ, ಕಲಾಮಂಡಲಂ ತೋರಿಸೋಕೆ ಕರ್ಕೊಂಡು ಹೋದ್ರು.

ಸಾಪ್ರದಾಯಿಕ ಕಲೆಗಳ ಬಗ್ಗೆ ಗೊತ್ತಿರೋರ್ಗೆಲ್ಲ ಕಲಾಮಂಡಲಂ ಗೊತ್ತು. ಕೇರಳದ ಸಾಂಪ್ರದಾಯಿಕ ಕಲೆಗಳ ಕಲಿಕೆಗಾಗೇ ಇರೋ ವಿಶ್ವವಿದ್ಯಾಲಯ ಅದು. ಇಂಥದೊಂದು ವಿದ್ಯಾಲಯ ದಕ್ಷಿಣ ಭಾರತದಲ್ಲೇ ಬೇರೆಲ್ಲೂ ಇಲ್ಲ.’ ಭರತಪುವಾ’ ನದೀ ದಡದಲ್ಲಿ ನೂರಾರು ಎಕರೇ ಜಾಗ್ದಲ್ಲಿ ಹರಡಿರೋ ಕಲಾಗ್ರಾಮ. ಮೂವತ್ತರ ದಶಕದಲ್ಲಿ ‘ಲಾಟರಿ’ ಎತ್ತಿ ಹಣ ಕೂಡಿಹಾಕಿ’ ವಲ್ಲತ್ತೂರು ನಾರಾಯಣ ಮೆನನ್ ಅನ್ನೋ ಮಹಾನುಭಾರು ಹುಟ್ಟುಹಾಕಿದ ಸಂಸ್ಥೆ. ಇಪ್ಪತ್ತರ ಶತಮಾನದಲ್ಲಿ ಬ್ರಿಟಿಷರ ಕಾರಣದಿಂದ ಕೇರಳದ ಕ್ಲಾಸಿಕಲ್ ಕಲೆಗಳು ನಶಿಸುವ ಭಯದಲ್ಲಿದ್ದಾಗ ಕಲಾಮಂಡಲಂ ಅವುಗಳನ್ನ ಉಳಿಸಿತು. ಕಥಕ್ಕಳಿ, ಕುಡಿಯಾಟ್ಟಂ, ಮೋಹಿನಿಯಾಟ್ಟಂ ಇಂದಿಗೂ ಅದೇ ಶ್ರೀಮಂತಿಕೆ ಊಳಿಸಿಕೊಂಡಿದ್ರೆ ಅದಕ್ಕೆ ‘ಕಲಾಮಂಡಲಂ’ ಕಾರಣ. ಗುರುಕುಲ ಪರಂಪರೇಲಿ ಇಲ್ಲಿ ನೂರಾರು ವಿದ್ಯಾರ್ಥಿಗಳು ಕಲೀತಾರೆ.

ನಾನು ಅಲ್ಲಿಗೆ ಹೋದಾಗ ನೃತ್ಯ ಮತ್ತು ಚಂಡೆಯ ಕ್ಲಾಸುಗಳು ನಡೀತಿದ್ವು. ಆ ಕಲಿಸೋ ಪರಿಯೇ ನಿಜಕ್ಕೂ ಅಪರೂಪದ್ದು. ಚಂಡೆ ಕಲೀತಿದ್ದವರಂತೂ ಚಿಕ್ ಚಿಕ್ ಮಕ್ಳು. ‘ ಗುರು’ ವಾದರು  ಅವರನ್ನ ತಿದ್ದೋ ಪರಿಯೇ ಬೆರಗು! ನೃತ್ಯದ ಗುರುಗಳಂತೂ ನೆಲದ ಲೆವೆಲ್ ಗೇ ಬಗ್ಗಿ, ಬಗ್ಗಿ, ಪ್ರತಿ ಶಿಷ್ಯರನ್ನ ಕಾಲು ಹಿಡಿದು ತಿದ್ದುತಿದ್ರು. ಇಂಥ ಕಲಿಸುವಿಕೇನ ನಾನೆಲ್ಲೂ ಕಂಡಿಲ್ಲ. ಬಾಲ್ಯದಲ್ಲೇ ಶಾಲೆ ಸೇರಿ, ಇಂಥ ಟ್ರೇನಿಂಗ್ ಪಡೆದು, ಎಷ್ಟೋ ವರ್ಷಗಳ ಕಲಿಕೆಯ ತರುವಾಯ ಪ್ರದರ್ಶನಕ್ಕೆ ಅಣಿಯಾಗುವ ಕಲಾವಿದರ ಪರ್ಫಾರ್ಮೆನ್ಸ್ ಊಹಿಸಿಕೊಳ್ಳಿ! ಅದಕ್ಕೇ ಕಥಕ್ಕಳಿ, ಮೋಹಿನಿಯಾಟ್ಟಂ ಪ್ರದರ್ಶನಗಳೆಲ್ಲ ಉನ್ನತ ದರ್ಜೆಯವೇ.

ಕಲಾಮಂಡಲಂನ ಮಧ್ಯೆ ಪ್ರದರ್ಶನಗಳಿಗಾಗೇ ಇರೋ ‘ಕೂತಂಬಲಂ’. ಕೇರಳದ ವಿಶಿಷ್ಟ ನಾಟ್ಯಗ್ರಹ. ಭರತನ ನಾಟ್ಯಶಾಸ್ತ್ರದ ಲೆಕ್ಕಾಚಾರದ್ದು. ದೊಡ್ಡ ದೊಡ್ಡ ದೇವಸ್ಥಾನಗಳ ಪ್ರಾಂಗಣದಲ್ಲಿ ಕಾಣೋ ಈ ಗೃಹಗಳಿಗೆ ದೇವರ ಗರ್ಭಗುಡಿಯಷ್ಟೇ ಉನ್ನತ ಸ್ಥಾನ. ಅವು ಅವರಿಗೆ ಪವಿತ್ರ. ಹಾಲ್ ನ ಮಧ್ಯೆ ಸುಮಾರು ನಾಲ್ಕು ಮೀಟರ್ ಚಚ್ಚೌಕದ ವೇದಿಕೆ. ಪ್ರದರ್ಶನದ ಹೊತ್ತಿಗೆ ಅದಕ್ಕೆ ಬಾಳೆಗೊನೆ ಹೊತ್ತ ಮರಗಳ, ತೆಂಗು ಗೊಂಚಲುಗಳ, ತೆಂಗುಗರಿಗಳ ಶೃಗಾರ. ವೇದಿಕೆಯ ಮೇಲೆ ‘ ನೀಲವಿಳಕ್ಕು” ನಂದಾದೀಪ. ಅಕ್ಕಿ ತುಂಬಿದ ‘ಫಾರಾ’ ‘ ಮಿಝಾವು’ ವಾದ್ಯಗಳು ಎತ್ತರದ ಆಸನದಲ್ಲಿ ವಾದಕರು ಮತ್ತು ನೃತ್ಯ.

ಕಲಾಮಂಡಲಂ ನೋಡಿದ ದಿನ ಸಂಜೆಯೇ ಅಲ್ಲೇ ಪಕ್ಕ’ ಚೆರ್ತುರ್ತಿ’ ಎನ್ನೋ ಊರಲ್ಲಿ ನಾನು ಮತ್ತು ಬಾಬು ಅವರ ಮನೆತನದ ‘ಓಟ್ಟಂತುಳ್ಳಾಲ್’ ಪ್ರದರ್ಶನ ನೋಡಿದೆವು. ಹದಿನೆಂಟನೆಯ ಶತಮಾನದ ಈ ಪ್ರಕಾರವನ್ನ ಹುಟ್ಟುಹಾಕಿದ್ದು ಕೇರಳದ ಪ್ರಾಚೀನ ಕವಿತ್ರಯರಲ್ಲಿ ಒಬ್ಬರಾದ ‘ ಕುಂಚನ್ ನಂಬಿಯಾರ್’.

ಬಂಡಾಯದ್ದೇ ಪರಂಪರೆಯ ಕೇರಳದಲ್ಲಿ ಈ ನಾಟ್ಯ ಹುಟ್ಟಿದ್ದೂ ಬಂಡಾಯದಲ್ಲೇ. ಅದಕ್ಕೊಂದು ಚಿಕ್ಕ ಕಥೆಯಿದೆ. ‘ಚಾಕ್ಯಾರ್ ಕೂತ್ತು’ ಎನ್ನೋ ಶಾಸ್ತ್ರೀಯ ಪ್ರಕಾರದ ಅಹೋರಾತ್ರಿ ನೃತ್ಯಕ್ಕೆ ಮಿಝಾವು (ಒಂದು ಬಗೆಯ ಚರ್ಮವಾದ್ಯ) ಬಾರಿಸುತ್ತಿದ್ದ ಕವಿ ನಂಬಿಯಾರ್ ಸುಸ್ತಾಗಿ ನಿದ್ದೆಗೆ ಜಾರಿಬಿಡ್ತಾರೆ. ಅದಕ್ಕಾಗಿ ಹುಟ್ಟಿಕೊಂಡ ನಿಂದನೆ ಸೈರಿಸಲಾದೇ ಅವರು ‘ಓಟ್ಟಂತುಳ್ಳಾಲ್’ ಎನ್ನೋ ಕಲಾಪ್ರಕಾರವನ್ನ ಹುಟ್ಟುಹಾಕ್ತಾರೆ. ಹೀಗೆ ಬಂಡಾಯದಿಂದಲೇ ಹುಟ್ಟಿಕೊಂಡ ‘ಓಟ್ಟಂತುಳ್ಳಾಲ್’, ಅಸಾಮಾಜಿಕ ಅನಿಷ್ಟಗಳನ್ನ, ಪ್ರಾದೇಶಿಕ ಪೂರ್ವಾಗ್ರಹಗಳನ್ನ ಪ್ರಶ್ನಿಸೋದಕ್ಕೆ ಸುರು ಮಾಡ್ತದೆ. ಸಿಟ್ಟಿಗೆದ್ದ ದೊರೆ ದೇವಾಲಯದಲ್ಲಿ ‘ಓಟ್ಟಂತುಳ್ಳಾಲ್’ ಪ್ರದರ್ಶನಗಳನ್ನ ಬ್ಯಾನ್ ಮಾಡ್ತಾನೆ. ಸರಿ, ಅದು ಜನಮಾನ್ಯರ ಕಲೆಯಾಗ್ತದೆ.

ಹಸಿರು ಮುಖವರ್ಣಿಕೆಯ, ಬಣ್ಣ ಬಣ್ಣದ ಉಡಿಗೆಯ ಕಲಾವಿದ ನರ್ತಿಸುತ್ತಲೇ ನೃತ್ಯದ ಹಾಡುಗಳನ್ನ ಹಾಡ್ತಾನೆ. ವಾಕ್ಯ ಮುಗಿದಾಕ್ಷಣ ಹಿಂದಿರೋ ಕೋರಸ್ ನವ್ರು ಆ ಹಾಡುಗಳನ್ನ ರಿಪೀಟ್ ಮಾಡ್ತಾರೆ. ಸಾಕಷ್ಟು ಕಸುವು ಬೇಡುವ ನೃತ್ಯವಿದು. ಸೋಲೋ ಮತ್ತು ಗುಂಪಿನ ನೃತ್ಯಗಳಿವೆ. ನಾವು ನೋಡಿದ್ದು ಸೋಲೋ. ಬಾಬುವಿನ ತಮ್ಮ ನೀಡಿದ ಈ ಪ್ರದರ್ಶನ ನನಗಂತೂ ಹೊಸದು. ಒಂದು ಕಲಾಕುಟುಂಬದ ಜೊತೆಗೆ ಒಂದು ದಿನ ಕಳೆದ ಅನುಭವಗಳನ್ನ ಹಂಚಿಕೊಂಡ ತೃಪ್ತಿ.

ಜೊತೆಗೆ ಒಂದು ಬಂಡಾಯದ ನೃತ್ಯ ನೋಡಿದ ಖುಶಿ.

 

 

 

 

4 comments

  1. “ಕಲಾಮಂಡಲಂ ” ಬಗ್ಗೆ ವಿವರಣೆ ನೀಡಿದ್ದು ತುಂಬಾ ಸ್ವಾರಸ್ಯಕರವಾಗಿತ್ತು .ಧನ್ಯವಾದಗಳು.

    • ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹ ಕ್ಕೆ

  2. Keralada Kalamandala Mattu kelavu vishista natrya prakaragala bagge namagalla parichayisidiri.Nirupane tumba saralavagiddu odugarige aptavaguttade.Keralakke hogade Allina kalaprakara tiliyitu.Tumba dhanyavadagalu .

Leave a Reply