ಇದು ನಾಟಕದ ಹಬ್ಬ.. ITFOK ಅನ್ನೋ ನಾಟ್ಕದ ಹಬ್ಬ

ITFOK ಅನ್ನೋ ನಾಟ್ಕದ ಹಬ್ಬ

ತ್ರಿಶೂರ್! ಕೇರಳದ ಸಾಂಸ್ಕೃತಿಕ ರಾಜಧಾನಿ. ‘ತ್ರಿಶೂರ್ ಪೂರಂ’ ನಿಂದ ಜಗತ್ತಿಗೇ ಹೆಸರಾದ ಊರು. ಸಾವಿರ ವರ್ಷಗಳಿಗೂ ಹಳೆಯದಾದ ‘ವಡಕ್ಕನಾದನ್’ ದೇವಸ್ಥಾನದ ಸುತ್ತ ಕಟ್ಟಿರೋ ಚಂದದ ಪಟ್ಟಣ. ವರ್ಷಕ್ಕೊಮ್ಮೆ ನಡೆಯೋ ‘ತ್ರಿಶೂರ್ ಪೂರಂ’ ವಿಶ್ವದ ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರನ್ನ ಸೆಳೆಯೋ ಹಬ್ಬ.

ಸುಮಾರು ಇಪ್ಪತ್ತು ದೇವಸ್ಥಾನಗಳು ಕೂಡಿ ಮಾಡೋ ಈ ಮೂವತ್ತಾರು ಗಂಟೆಗಳ ‘ಮಹಾ ಹಬ್ಬ’ ದ ಹೈಲೈಟ್ ಅಂದ್ರೆ ಮೆರವಣಿಗೆ ಮತ್ತೆ ಮತಾಪು. ಇನ್ನೂರು ವರ್ಷಗಳಿಗೂ ಹಳೆಯದಾದ ಹಬ್ಬದಂದು ಎಲ್ಲಾ ದೇವರುಗಳೂ ಆನೆ ಹತ್ತಿ ‘ ವಡಕ್ಕನಾಥನ್’ ನನ್ನ ನೊಡೋಕೆ ಬರ್ತವೆ. ಸುಮ್ನೆ ಅಲ್ಲ. ಭಾರೀ ಮೆರವಣೀಗೇ ಜೊತೆ. ಕೇರಳದ ಅದ್ಭುತ ಚಂಡೆ ಮೇಳ, ಪಂಚವಾದ್ಯ. ಎಲ್ಲ ಟೆಂಪಲ್ ಸೇರಿದ್ಮೇಲೇನೆ ಗಮ್ಮತ್ತು.

ಒಂದೇ ಕಡೆ ಸಾಲಾಗಿ ಹದಿನೈದಿಪ್ಪತ್ತು ಆನೆಗಳು, ಅವುಗಳ ಶೃಂಗಾರ. ಬಣ್ನವೇ ಬಣ್ನ. ಚಿನ್ನದ ‘ ನೆತ್ತಿಪಟ್ಟಂ, (ಹಣೆಯ ಮೇಲಿನ ಆಭರಣ) ಗುಲಾಬಿ ಬಣ್ಣದ ಮಾಲೆಗಳು, ಕಾಲಿಗೆ ಬಣ್ಣದ ಹಗ್ಗದಿಂದ ಕಟ್ಟಿದ ಹೊಳೆವ ಗಂಟೆಗಳು, ಆನೆಯ ಮೇಲೆ ನಿಂತವರು ಹಿಡಿಯೋ ಬಣ್ಣದ ‘ ವೆಂಚಾಮರಂ’, ( ಒಂದು ತೆರನಾದ ಚಾಮರ), ಬಣ್ಣಬಣ್ಣದ ಹೊಳೆಯುವ ವೆಲ್ವೆಟ್ ನ ಕೊಡೆಗಳು, ನೂರಾರು ಚಂಡೆಗಳ ಒಂದೇ ಶೃತಿಯ ಪೆಟ್ಟುಗಳು, ತಾಳಕ್ಕೆ ತಕ್ಕ ಹಾಗೆ ಎದ್ದು ನಿಲ್ಲುತ್ತ ಚಾಮರ ಎತ್ತುವ ಜರತಾರೀ ಬಿಳೀ ಲುಂಗಿಯುಟ್ಟ ‘ಆಳು’ಗಳು. ಜೊತೆಗೆ ನಗಾರಿ…. ರಾತ್ರಿಯಾಯ್ತೆಂದರೆ ಗಂಟೆಗಳ ಕಾಲ ಊರನ್ನೇ ಬಣ್ಣದ ಬೆಳಕಲ್ಲಿ ಮೀಯಿಸೋ ಮತಾಪು (ನನಗೆ ಇಷ್ಟವಿಲ್ಲ) ಓ..ಹೋ..ಹೋ ಎನ್ನುವ ಹಾಗೆ! ಅದೊಂದು ಅದ್ಭುತ ತಾಳ ಲೋಕ, ದೃಶ್ಯ ಲೋಕ.

ಇದೇ ತ್ರಿಶೂರ್ ಕೇರಳದ ಸಾಂಸ್ಕೃತಿಕ ರಾಜಧಾನಿ ಕೂಡ. ಕೇರಳ ಸಾಹಿತ್ಯ ಅಕಾಡಮಿ. ಕೇರಳ ಸಂಗೀತ ನಾಡಕ ಅಕಾಡಮಿ ಇಲ್ಲೇ ಇರೋದು. ಪಕ್ಕದಲ್ಲೇ ಸ್ವಲ್ಪ ದೂರದಲ್ಲೇ ಕಥಕ್ಕಳಿಯ ಶಾಲೆ ‘ಕೇರಳ ಕಲಾಮಂಡಲಂ’ ಹಾಗೇನೇ ವರ್ಷವಿಡೀ ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ.

ITFOK ( INTERNATIONAL THEATER FESTIVAL OF KERALA) ಅದು ಶುರುವಾಗಿ ಆಗಲೇ ನಾಲ್ಕು ವರ್ಷಗಳಾಗಿದ್ದರೂ ನಾನು ಆಲುವಾಕ್ಕೆ ಬಂದು ಹಲವು ತಿಂಗಳುಗಳು ಕಳೆದಿದ್ದರೂ ನನಗದರ ಸೂಚನೆಯೂ ದೊರೆತಿರಲಿಲ್ಲ. ಯಾಕೋ ನನ್ನ ರಂಗ ಸಂಗಾತಿ ಉನ್ನಿಕೃಷ್ಣನ್ ಕೂಡ ಹೇಳಿರಲೇ ಇಲ್ಲ. ಒಂದು ದಿನ ನೆಟ್ ನಲ್ಲಿ ಕೇರಳದ ರಂಗಭೂಮಿಯ ಕುರಿತು ತಡಕಾಡುವಾಗ ನಾನದನ್ನ ನೋಡಿದೆ. ನೋಡ್ ನೋಡ್ತಿದ್ ಹಾಗೆ ಫುಲ್ ಖುಶ್! ಇಷ್ಟು ದೊಡ್ಡ ನಾಟ್ಕದ ಹಬ್ಬ ಅದೂ ನನ್ನಿಂದ ಒಂದು ಗಂಟೆ ದೂರದಲ್ಲಿ.

ಯಸ್. ನಿಜಕ್ಕೂ ದೊಡ್ಡ ನಾಟ್ಕದ ಹಬ್ಬವೇ. ದಕ್ಷಿಣ ಭಾರತದ ಬಹು ದೊಡ್ಡ ರಂಗ ಉತ್ಸವ. ಗಾತ್ರದಲ್ಲಿ ದೆಹಲಿಯ ‘ಭಾರತ್ ರಂಗ ಮಹೋತ್ಸವ್’ ಕ್ಕಿಂತ ದೊಡ್ಡದಲ್ಲದಿದ್ದರೂ ಕ್ವಾಲಿಟಿಯಲ್ಲೇನೂ ಕಡಿಮೆಯಿಲ್ಲದ್ದು. ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿ ವರ್ಷವೂ ಒಂದು ‘ಥೀಮ್’ನ ಮೇಲೆ ರೂಪಿತವಾಗಿರೋದು. ಹೊರಗಿನ ಆಡಂಬರಗಳೇನೂ ಇಲ್ಲದೆ, ಸರಳವಾಗಿ, ಇದ್ದ ಹಣವನ್ನೆಲ್ಲ ಬರೇ ನಾಟಕದ ತಂಡಗಳಿಗೇ ಮೀಸಲಾಗಿಟ್ಟು ಜಗತ್ತಿನ ಶ್ರೇಷ್ಠ ನಾಟಕಗಳನ್ನ ತರಿಸಿ ತೋರಿಸೋ ಹಬ್ಬ. ಇಡೀ ಹಬ್ಬ ಥೀಮ್ ಕೇಂದ್ರಿತವಾಗಿರೋದ್ರಿಂದ ಎಲ್ಲ ನಾಟಕಗಳ ಆಂತರ್ಯಗಳ ಒಂದು ಸಮಗ್ರ ಒಳನೋಟವೂ ಇದರಿಂದ ಸಾಧ್ಯವಾಗ್ತದೆ. . ಕೇರಳ ರಂಗಭೂಮಿಯ ಹೆಚ್ಚಿನ ಎಲ್ಲರೂ ಇಲ್ಲಿ ಸೇರ್ತಾರೆ. ನಿರಂತರ ಗುಂಪು ಚರ್ಚೆಗಳು, ಮುಖಾಮುಖಿಗಳು, ಹಾಡುಗಳು, ಜಾನಪದ ಎಲ್ಲ, ಎಲ್ಲ ಮೇಳೈಸುವ ಹಬ್ಬವಿದು.

ನನಗೆ ತುಂಬ ಇಷ್ಟವಾದುದೆಂದ್ರೆ ಇಲ್ಲಿ ಎಲ್ಲ ಪ್ರಕಾರದವ್ರೂ ಒಟ್ಟಿಗೆ ಸೇರೋದು, ಮಾತಾಡೋದು. ಸಾಹಿತಿಗಳು, ಕಲಾವಿದರು, ಸಂಗೀತಗಾರರು ಎಲ್ರೂ ಒಟ್ಟಿಗೆ ಸೇರೋ ತುಂಬ ಅಪರೂಪದ ಉತ್ಸವ. ಹತ್ತು ದಿನಗಳ ಕಾಲ ಆರು ವೇದಿಕೆಗಳಲ್ಲಿ ಈ ಹಬ್ಬ. ಈ ಎಲ್ಲ ವೇದಿಕೆಗಳಿರೋದೂ ಅಕಾಡಮಿಯ ಕ್ಯಾಂಪಸ್ ನಲ್ಲೇ. ಹುಡುಕಿಕೊಂಡು ದೂರ ಹೋಗ್ಬೇಕಿಲ್ಲ. ಓವರ್ ಲ್ಯಾಪ್ ಅತಿ ಕಡಿಮೆ ಇರೋ ಹಾಗೆ ನಾಟ್ಕಗಳ ಸಮಯ ಹೊಂದಿಸಿರ್ತಾರೆ. ಒಟ್ಟೂ ಸೀಟುಗಳ ಕೆಲ ಭಾಗ ಮುಂಗಡ ಬುಕಿಂಗ್. ಮುಂಗಡ ಕಾಯ್ದಿಟ್ಕೊಂಡ್ರೆ ಸುಮಾರು ನಾಲ್ಕು ನಾಟ್ಕಗಳನ್ನ ದಿನಕ್ಕೆ ನೋಡ್ಬಹುದು. ನನಗೆ ತುಂಬಾ ಖುಶಿಯಾದ್ದಂದ್ರೆ ಇಲ್ಲಿ ವಿ.ಐ. ಪಿ ಸಂಸ್ಕೃತಿ ಅನ್ನೋದೇ ಇಲ್ಲ. ಅಕಾಡಮಿ ಚೇರ್ಮನ್ ಕೂಡ ಸಾಲಲ್ಲೇ ನಿಂತು ಒಳಗೆ ಹೋಗ್ಬೇಕು. ಹಾಗೇ ವಿ.ಐ.ಪಿ ಸೀಟ್ ಗಳೂ ಇಲ್ಲ. ಹತ್ತು ದಿನಕ್ಕೆ ಸುಮಾರು ಐವತ್ತು ನಾಟ್ಕಗಳು.

ನಾನು ಹೋದದ್ದು ಏಳನೆಯ ಎಡಿಶನ್. ‘ ಸಂಘರ್ಷ’ ಆ ವರ್ಷ ನಾಟಕೋಟ್ಸವದ ಥೀಮ್. ಪ್ರಭುತ್ವದ ಜೊತೆ ಸಂಘರ್ಷ, ಸಮಾಜದ ಜೊತೆ ಸಂಘರ್ಷ, ಜಾತಿ ಸಂಘರ್ಷ, ವರ್ಗ ಸಂಘರ್ಷ, ನೈತಿಕ ಪೋಲೀಸ್ ಗಿರಿಯ ಜೊತೆಗೆ ಸಂಘರ್ಷ, ಅಸಹಿಷ್ಣುತೆ, ಲಿಂಗ ಆಸಮಾನತೆ, ಹೀಗೆ ಹಲವು ಬೀಜಗಳನ್ನ ಹೊತ್ತ ನಾಟ್ಕಗಳು.

ಈ ಎಡಿಶನ್ ನಲ್ಲಿ ಭಾರತೀಯ ನಾಟ್ಕಗಳ ಜೊತೆ ಲೆಬನಾನ್, ಪ್ಯಾಲೆಸ್ಟೈನ್, ಶ್ರೀಲಂಕಾ, ಸಿಂಗಪೂರ್ ಮತ್ತು ಜಪಾನಿನ ನಾಟ್ಕಗಳಿದ್ವು.

Lucina/ Obedience Training
ಇಲ್ಲಿ ನಾನು ಹೇಳ್ತಿರೋದು ಲೆಬನಾನ್ ನ ಒಂದು ನಾಟ್ಕದ ಕುರಿತು.

ನಾಟ್ಕ ಹೆನ್ರಿಕ್ ಇಬ್ಸನ್ ನ’ Emperor and Galilien’ನಾಟ್ಕದಿಂದ ಪ್ರೇರಿತವಾದ್ದು. ರೋಮ್ ನ ಕೊನೆಯ ಕ್ರಿಶ್ಚಿಯನೇತರ ದೊರೆ ಜೂಲಿಯನ್. ರೋಮ್ ಗೆ ಮೊದಲಿನ ‘ ರೋಮನ್ ಮೌಲ್ಯ’ಗಳನ್ನ ತಿರುಗಿ ತರೋದು ಆತನ ಇಚ್ಛೆ. ಈ ಮಧ್ಯೆ ನಡೆಯುವ ಪ್ರಭುತ್ವ ಮತ್ತು ಧರ್ಮದ ಸಂಘರ್ಷವೇ ನಾಟ್ಕದ ಮೂಲ. ಈ ಕಥೆಯನ್ನ, ದಾರಿ ಕಳೆದುಕೊಂಡು ಹೈರಾಣಾದ ನಾಟ್ಕದ ಕಂಪ್ನಿಯೋಂದರ ಕಥೆಯ ಜೊತೆ ಸಮೀಕರಿಸ್ತಾ ನಾಟ್ಕ ಕಟ್ಟಿದಾರೆ ನಿರ್ದೇಶಕ Junaid Sarieddeen ತುಂಬ ಸರಳವಾದ ರಂಗ ಸಜ್ಜಿಕೆಯನ್ನಿಟ್ಕೊಂಡು ಪುರಾತನ ನಾಟ್ಕವನ್ನ ಬಿಗಿಯಾಗಿ ಕಟ್ಟಿದಾರೆ. ಸಬ್ ಟೈಟಲ್ಸ್ ನೆರವಿಂದ ನಾಟ್ಕ ನೋಡ್ಬೇಕು ಅಷ್ಟೆ.

 

4 comments

  1. Habbada adigeyante Keralada natkada habbada berebere ruchiyada prakaragalannu tilisiddakke dhanyavadagalu

    • ಧನ್ಯವಾದಗಳು ನಿಮ್ಮ ನಿರಂತರ ಪ್ರತಿಕ್ರಿಯೆಗಳಿಗೆ.

  2. ITFOK ನಾಟಕದ ಹಬ್ಬ . ಹೆಸರೆ ತುಂಬಾ ಸೊಗಸಾಗಿದೆ. ಅದರಲ್ಲೂ ಮೆರವಣಿಗೆಯ ವಿವರಣೆ ತುಂಬಾ ಸೊಗಸಾಗಿತ್ತು .ಧನ್ಯವಾದಗಳು.

  3. ಧನ್ಯವಾದಗಳು. ನಿರಂತರ ಪ್ರತಿಕ್ರಿಯೆಗಳಿಗಾಗಿ.

Leave a Reply