ಅರ್ಧ ಕೋಟಿಯ ‘ ಮ್ಯಾಕ್‍ಬೆತ್’ ನಾಟ್ಕ

ಈ ಬಾರಿ ತಪಿಸಿಕೊಳ್ಳೋದು ಸಾಧ್ಯವೇ ಇರಲಿಲ್ಲ. ಉನ್ನಿಕೃಷ್ಣನ್ ಅಂಥಾ ಆಫರ್ ಇಟ್ಟುಬಿಟ್ಟಿದ್ದ.

ಭೆಟ್ಟಿಯಾದ ದಿನದಿಂದ್ಲೂ ತಮ್ಮ ಮನೆಗೆ ಹೋಗೋಣ ಅಂತ ಉನ್ನಿಕೃಷ್ಣನ್ ಗಂಟುಬಿದ್ದಿದ್ದ. ಶನಿವಾರ ಬಂದ ಕೂಡ್ಲೇ ಆತನ ರಗಳೆ ಶುರುವಾಗ್ತಿತ್ತು. ನನಗೂ ಸಮಯವಾಗ್ದೇ ಮುಂದೂಡ್ತಾನೇ ಬಂದಿದ್ದೆ. ಈ ಮಧ್ಯೆ ಅವನ ಮನೆಯ ಮದುವೆಗೂ ಕರೆದಿದ್ದ. ಹೋಗಲಾಗಿರಲಿಲ್ಲ. ನಾನು ಆ ಕಡೆ ಹೋದಾಗ ಅವನಿಗೆ ರಜವಿರ್ತಿರಲಿಲ್ಲ. ಹಾಗೆ ಹೀಗೆ ಅಂತ ಮುಂದುಹೋಗ್ತಾನೇ ಇತ್ತು. ಆದ್ರೆ ಈ ಬಾರಿಯ ಅವನ ಆಫರ್ ಬಿಡೋಹಾಗೇ ಇರ್ಲಿಲ್ಲ. ಒಂಥರಾ ಡಬಲ್ ಧಮಾಕಾ ಆಫರ್ ಅದು. ಒಂದು, ಅವನೂರಿನ ಜಾತ್ರೆಯ ಮೆರವಣಿಗೆ ತೋರಿಸೋದು, ಇನ್ನೊಂದು ಮತ್ತು ಮುಖ್ಯವಾದ್ದು, ಮಲಯಾಳಮ್ ಪ್ರೊಫೆಷನಲ್ ರಂಗಭೂಮಿಯ ಇತಿಹಾಸ ಪ್ರಸಿದ್ಧ ನಾಟ್ಕ-‘ಮ್ಯಾಕ್‍ಬೆತ್’ ಗೆ ಕರ್ಕೊಂಡು ಹೋಗೋದು.

ಸಂಗಾತಿ ‘ ಉಣ್ಣಿ’ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಎನ್ನೋ ಊರಿನವ. ಕೇರಳದ ಹಿನ್ನೀರಿನಲ್ಲಿರೋ ಕೊಟ್ಟಾರಕ್ಕರ ಪ್ರಸಿದ್ಧವಾಗಿರೋದು ಅಲ್ಲಿರೋ ಗಣಪತಿ ದೇವಸ್ಥಾನದಿಂದ. ಶತ ಶತಮಾನಗಳಷ್ಟು ಹಳೆಯದಾಗಿರೋ ಕೇರಳದ ಸಾಂಪ್ರದಾಯಿಕ ವಾಸ್ತು ಶೈಲಿಯ ಈ ದೇವಸ್ಥಾನ ಕೇರಳಕ್ಕೇ ಪ್ರಸಿದ್ಧ. ನಮ್ ಕಡೆಯಿಂದ ಅಯ್ಯಪ್ಪ ದರ್ಶನಕ್ಕೆ ಹೋಗೋ ಮಂದಿ ತಪ್ಪದೇ ಹೊಕ್ಕಿ ಹೋಗೋ ದೇವಸ್ಥಾನ ಅದು. ಅಲ್ಲಿ ವರ್ಷಕ್ಕೊಂದು ‘ ಕೊಟ್ಟಾರಕ್ಕರ ಹಬ್ಬ’ ಹಬ್ಬದ ಕೊನೇ ದಿನ ಸಂಭ್ರಮದ ಮೆರವಣಿಗೆ. ಒಂಥರಾ ‘ ತ್ರಿಷೂರ್ ಪೂರಂ’ ಮೆರವಣಿಗೆಯಷ್ಟೇ ಫೇಮಸ್. ಸಾಲು ಸಾಲು ಆನೆಗಳು, ಬಣ್ಣ ಬಣ್ಣದ ಛತ್ರಿಗಳು. ನೂರಾರು ಚಂಡೆಗಳು, ವೇಷಗಳು. ಡಾನ್ಸ್ ಹೀಗೆ ತೀರಾ ತೀರಾ ಡ್ರೆಮಾಟಿಕ್. ಲಕ್ಷಾಂತರ ಮಂದಿ ಸೇರೋ ಹಬ್ಬ.

ಆಲುವಾದಿಂದ ಕೊಟ್ಟಾರಕ್ಕರ ತುಂಬ ದೂರ ಇಲ್ದಿದ್ರೂ ಕೇರಳದ ಕಿರಿದಾದ ರಸ್ತೆಗಳಲ್ಲಿ ಪ್ರಯಾಣದ ಅವಧಿ ತುಂಬ ಹೆಚ್ಚು. ಮೆರವಣಿಗೆಯ ಹಿಂದಿನ ದಿನ ಬೆಳಿಗ್ಗೆ ಬೆಳಿಗ್ಗೆ ಹೊರಟ್ರೂ ನಾವು ಅವನ ಮನೆ ಸೇರಿದ್ದು ಊಟದ ಹೊತ್ತಿಗೇ. ಕೊಟ್ಟಾರಕ್ಕರದ ಕಿರಿದಾದ ಓಣಿಯಲ್ಲಿ ಅವನ ಮನೆ. ಹಳೇ ಕಾಲದ ತೊಟ್ಟಿ ಮನೆ ತರದ ಮನೆ. ಆದ್ರೆ ತುಂಬಾ ತುಂಬಾ ಚೆನ್ನಾಗಿ ಇಟ್ಕೊಂಡ ಮನೆ. ಪಕ್ಕದಲ್ಲೇ ಚಿಕ್ಕ ತೋಟ. ಬಾಳೆ ಮರಗಳು. ತೋಟದ ಮಧ್ಯೆ ಒಂದು ಚಿಕ್ಕ ಕೆರೆ. ಅದರ ಪಕ್ಕ ಚಿಕ್ಕ ಗುತ್ತ ಒಂಥರಾ ಮಾದರಿಯ ಕೇರಳದ ಹಳ್ಳಿ ಮನೆ. ತುಂಬ ಆಪ್ತವಾದ ವಾತಾವರಣ. ತುಂಬ ಪ್ರೀತಿಸೋ ಜನ. ಶರ್ಕರ ಉಪ್ಪೇರಿ, ಕಿಚಡಿ, ಪಚಡಿ,ಅವಿಲ್, ರಸಂ…ಎಲೆ ತುಂಬಾ ಬಡಿಸಿದ ಕೇರಳದ ಸಾಂಪ್ರದಾಯಿಕ ‘ಓಣ ಸದ್ಯ’ ದಂಥ ಊಟ. ‘ಉನ್ನಿಕೃಷ್ಣನ್ ನ ಮನೆಯಆತಿಥ್ಯ ಮರೆಯಲಾರದ್ದು. ನಿಜಕ್ಕೂ ಹಬ್ಬವೇ.

ಸಂಜೆಯಾಗ್ತಿದ್ದಂತೆ ನಾಟ್ಕಕ್ಕೆ ಹೋಗೋ ಗಡಿಬಿಡಿ ಸುರುವಾಯ್ತು. ಸಿಕ್ಕಾಪಟ್ಟೆ ಜನಪ್ರಿಯ ನಾಟ್ಕ ಅದು. ನಾನು ಹಿಂದೆಯೇ ಈ ಕೇರಳದ ಪ್ರೊಫೆಷನಲ್ ರಂಗಭೂಮಿಯ ಕುರಿತು ಹೇಳಿದ್ದೆ. ಸಮಕಾಲೀನ ಪ್ರೇಕ್ಷಕರ ಅವಜ್ಞೆಯ ನಡುವೇನೂ ಜನಗಳ ನಡುವೆ ತುಂಬ ಹೆಸರಿರೋರು ಅವ್ರು. ಅದ್ಕೇ ಸಾಕಷ್ಟು ರಿಸ್ಕ್ ಕೂಡ ತಗೊಂಡು ನಾಟ್ಕ ಆಡ್ತಾರೆ. ‘ ‘ಪಥೇರ್ ಪಾಂಚಾಲಿ’ ಯಂಥ ಸಿನಿಮಾನೂ ನಾಟಕವಾಗಿಸಿ ಆಡಿದಾರೆ ಅಂದ್ರೆ ನೀವೇ ಊಹಿಸಿ.

‘ ಮ್ಯಾಕ್‍ಬೆತ್’ ಬಹು ದೊಡ್ಡ ಪ್ರೊಡಕ್ಷನ್. ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚದ್ದು. ‘ ಕಾಳಿದಾಸ ಕಲಾ ಕೇಂದ್ರ’ ಅನ್ನೋ ಕಂಪನಿಯ ಈ ನಾಟಕದ ನಿರ್ದೇಶಕರು ರಾಜೇಂದ್ರನ್. “ಈ ನಾಟಕ ಜಗತ್ತಿನ ಇನ್ನಷ್ಟು ಶ್ರೇಷ್ಠ ಕೃತಿಗಳು ಮಲಯಾಳಂ ರಂಗಭೂಮಿಗೆ ಬರೋದಕ್ಕೆ ಸ್ಪೂರ್ತಿಯಾಗಬಹುದು” ಅನ್ನೋದು ಈ ನಾಟ್ಕದ ನಟ, ನಿರ್ಮಾಪಕ ಮುಕೇಶ್ ರ ಅಂಬೋಣ.

ಯಸ್. ನಿಜಕ್ಕೂ ಅದೊಂದು ‘ ಅದ್ಭುತ’ ಎನ್ನಬಹುದಾದ ಪ್ರಯೋಗವೇ. ತೀರ ಸಂಯಮದ ನಟನೆಯಲ್ಲಿ, ಮಾತುಗಳನ್ನ ನಿರ್ವಹಿಸೋ ಕ್ರಮದಲ್ಲಿ ನಾನು ಕಂಡ ಬೇರೆಲ್ಲ ಮಲಯಾಳಂ ಪ್ರೊಫೆಷನಲ್ ನಾಟ್ಕಗಳಿಗಿಂತ ತೀರ ಭಿನ್ನವಾಗಿತ್ತು ಇದು. ತುಂಬಾ ಲ್ಯಾವಿಶ್ ಎನ್ನಬಹುದಾದ ಸೆಟ್ ಗಳು. ಅಥೆಂಟಿಕ್ ವೇಷಭೂಷಣಗಳು. ಖ್ಯಾತ ಕವಿ ಓ.ವಿ. ಎನ್ ಕುರುಪ್ ಬರೆದ ಪದ್ಯಗಳು. ಡಿಫರೆಂಟ್ ಅನ್ನಬಹುದಾದ ಟ್ಯೂನ್ ಗಳು. ಒಟ್ಟಾರೆ ಮೂರು ಘಂಟೆಗಳ ಮಹಾನ್ನಾಟಕ.

‘ ಬರ್ನಮ್ ವನ’ ದಿಂದ ಮೊದಲುಗೊಂಡು, ಬೇರೆ ಬೇರೆ ಭಾಷೆಗಳಲ್ಲಿ, ‘ ಮ್ಯಾಕ್ ಬೆತ್’ ನಾಟಕ, ಸಿನಿಮಾಗಳನ್ನ ನೋಡಿದ್ದೆ ನಾನು. ಆದರೆ ಈ ನಾಟಕದ ಕೆಲವು ಸನ್ನಿವೇಷಗಳು ತುಂಬ ಕ್ಯಾಚಿ ಆಗಿದ್ದವು. ಒಬ್ಬ ಒಳ್ಳೇ ನಿರ್ದೇಶಕ ಅವುಗಳ ಹಿಂದೆ ಕೆಲಸ ಮಾಡಿದ್ದ. ಬೇರೆಯೇ ತೆರನಾದ ಕೋನದಲ್ಲಿ ಬೀಳೋ ನೇರಳೆಯ ಬೆಳಕಲ್ಲಿ ಜಕ್ಕಿಣಿಯರನ್ನ ತರುವ ಚತುರತೆ, ರಾಜ ಡಂಕನ್ ನ ಕೊಲೆ ಮಾಡೋ ಹಿಂದಿನ ಸಂಗೀತ, ಬ್ಯಾಂಕೋ ನ ಕೊಲೆಯ ಸಂಚಿನ ರಾತ್ರಿ, ಲೇಡಿ ಮ್ಯಾಕ್ ಬೆತ್ ಳ ರಕ್ತದ ಕೈಗಳ ಸೀನ್ ನ ಮಿರರ್ ಎಫೆಕ್ಟ್, ಮ್ಯಾಕ್ಡಫ್ ನ ಸೈನ್ಯದ ಸಾಲು ಸಾಲು ಸೈನಿಕರ ಎಫೆಕ್ಟ್, ಎಕ್ಕಕ್ಕಿಂತ…ಇದ್ದಕ್ಕಿದ್ದ ಹಾಗೆ ಎದ್ದು ಬರೋ ಬರ್ನಂ ವನ. ಎಲ್ಲವನ್ನೂ ಮೀರಿಸೋ ಅದ್ಭುತ ಅಭಿನಯ.

ಹೌದು. ನಾನು ಆ ದಿನ ಹೋಗ್ದಿದ್ರೆ ಒಂದು ‘ಐತಿಹಾಸಿಕ’ ಎನ್ನಬಹುದಾದ ನಾಟ್ಕವನ್ನ ಕಳ್ಕೊಳ್ತಿದ್ದೆ. ಮರುದಿನವೂ ನಾಟಕದ ಗುಂಗು. ಈ  ನಾಟ್ಕದ ಗುಂಗಿನಲ್ಲಿ ಮರುದಿನ ನೋಡಿದ ಮಹಾ ಮೆರವಣಿಗೆಯೂ ಸಪ್ಪೆಯಾಗಿಹೋಗಿತ್ತು.

ಲೇಖನ ಬರೆಯೋ ಹೊತ್ತಿಗೆ, ಅಭಯ ಸಿಂಹ ರ ‘ ಪಡ್ಡಾಯಿ’ ತುಳು ಸಿನಿಮಾ ಸದ್ದು ಮಾಡ್ತಿದೆ. ತುಂಬಾ ಒಳ್ಳೆಯ ಮಾತುಗಳು ಕೇಳ್ತಿವೆ. ಇದೂ ‘ ಮ್ಯಾಕ್ ಬೆತ್’ ಆಧರಿಸಿದ ಚಿತ್ರವೇ. ಗೆಳೆಯ ಚಂದ್ರಹಾಸ ಉಳ್ಳಾಲ, ಪ್ರಭಾಕರ್ ಕಾಫಿಕಾಡ್ ಅಭಿನಯಿಸಿದ್ದಾರೆ. ಅದ್ಕೇ ಒಂದಿಷ್ಟು ಜಾಸ್ತಿ ಖುಶಿ. ನೋಡ್ಲೆಬೇಕಾದ ಸಿನಿಮಾ.

ಮಲಯಾಳಂ ನಲ್ಲೂ ‘ ಮ್ಯಾಕ್ ಬೆತ್’ ಆಧರಿಸಿದ ಭಾರೀ ಚಿತ್ರವೊಂದು ಬರ್ತಿದೆ. ‘ ವೀರಂ’. ಸಾಧ್ಯವಾದ್ರೆ ನೋಡಿ. ಪ್ರೊಮೋ ಅಂತೂ ಜೋರಾಗಿದೆ.

 

2 comments

  1. Tamma nirupane ella rangasatkarige pattadandide.Malayali rangabhumiya mattandu majalannu parichayisiddiri.Dhanyavadagalu.

Leave a Reply