ಕಳ್ಳನಿಗೂ ಒಂದು ದೇವಸ್ಥಾನ..

ಯಾವುದೋ ಕೆಲಸದ ನಿಮಿತ್ತ ಕೆಲವು ದಿನ ‘ ‘ಅಲೆಪ್ಪಿ’ ಯಲ್ಲಿ ಉಳಿಯೋ ಪ್ರಸಂಗ ಬಂದಿತ್ತು. ಅಲೆಪ್ಪಿ ದಕ್ಷಿಣ ಕೇರಳದ ತುಂಬ ಸುಂದರವಾದ ಪಟ್ಟಣ. ಪುರಾತನ ಊರು. ಕೇರಳದಲ್ಲಿ ಮೊಟ್ಟ ಮೊದಲು ನಿರ್ಮಿತವಾದ ಊರು. ಚಂದವಷ್ಟೇ ಅಲ್ಲ ಕ್ಲೀನ್ ಕೂಡ. ಪ್ರವಾಸಿಗರಿಗೆ ಅಚ್ಚು ಮೆಚ್ಚಿನ ಜಾಗ. ಕೇರಳದ ಪ್ರಸಿದ್ಧ ಹಿನ್ನೀರು ಹರಿವ ತಾಣ. ನಿರಂತರವಾಗಿ ಪ್ರವಾಸಿಗಳನ್ನ ಹೊತ್ತ ‘ ಬೋಟ್ ಹೌಸ್ ಗಳು ಓಡಾಡೋ ಸ್ಥಳ. ವಿಶ್ವಪ್ರಸಿದ್ಧ ‘ ನೆಹರೂ ಬೋಟ್ ರೇಸ್’ ನಡೆಯೋದು ಇಲ್ಲೇ.

ಒಂದು ರಾತ್ರಿ, ಅಲೆಪ್ಪಿ ಸುತ್ತಾಡಿ ಬಂದು ನಮ್ಮ ಐ. ಬಿ ಯಲ್ಲಿ ಮಲಗಿದ್ದೆ. ನಮ್ಮ ಐ.ಬಿ ಒಂಥರಾ ರೆಸಿಡೆನ್ಷಿಯಲ್ ಏರಿಯಾ ಮಧ್ಯೆ ಇದೆ. ಸುತ್ತ ಮುತ್ತ ದೊಡ್ಡ ದೊಡ್ಡ ಮನೆಗಳು. ರಾತ್ರಿ ಸುಮಾರು ಹೊತ್ತಾಗಿರಬೇಕು, ಜೋರಾಗಿ ನಾಯಿ ಬೊಗಳೋ ಸದ್ದು, ಜನರ ಗಲಾಟೆ. ಕಿಟಕಿ ತೆರೆದು ನೋಡಿದೆ, ಏನೂ ಕಾಣಿಸ್ತಿರಲಿಲ್ಲ. ಬಹುಷ: ಆಚೆ ಕೇರೀಲಿ ಏನೋ ಆಗಿದ್ದಿರಬೇಕು ಅಂದ್ಕೊಂಡು ಕೆಳಗೆ ಬಂದೆ. ನಮ್ ಐ.ಬಿ ಯ ವಾಚಮನ್ನನೂ ಕಾಣ್ತಿರಲಿಲ್ಲ. ಮನೆಗಳ ದೀಪಗಳೆಲ್ಲ ಒಂದೊಂದಾಗಿ ಹತ್ಕೊಳ್ಳೋದಕ್ಕೆ ಸುರುವಾದ್ವು. ಅಲ್ಲಲ್ಲಿ ಜನ ಸೇರೋದಕ್ಕೆ ಸುರುವಾಗಿತ್ತು. ತುಂಬಾ ದೊಡ್ಡದೇ ಏನೋ ಆಗಿರ್ಬೇಕು ಅಂದ್ಕೊಂಡು, ನಿಧಾನಕ್ಕೆ ಹೊರಗ್ಬಂದೆ.

ಗೇಟ್ ತೆರೆದೇ ಇತ್ತು. ಆಚೆ ಕೇರಿಗೆ ಕಾಲಿಟ್ಟೆ. ಒಂದು ಮನೆ ಸುತ್ತಲೂ ತುಂಬಾ ಜನ ಸೇರಿದ್ರು. ಅಲ್ಲಿ ದೊಡ್ಡ ದರೋಡೇನೇ ನಡೆದಿತ್ತು. ಮನೇಲಿದ್ದ ಇಬ್ರನ್ನ ಕಟ್ಟಿ ಹಾಕಿ ಕಳ್ಳರು ಇರೋದನ್ನೆಲ್ಲ ದೋಚ್ಕೊಂಡು ಹೋಗಿದ್ರು. ತಿರುಗಿ ಈ.ಬಿ ಗೆ ಬಂದ್ರೆ, ವಾಚಮನ್ ಬಡಿಗೆ ಹಿಡಿದು ನಿಂತಿದ್ದ. ಕಳ್ಳ ಸಿಕ್ರೆ ಹೊಡೆಯೋನ ಹಾಗೆ. “ಏನಪ್ಪಾ ದೊಡ್ಡ ದರೋಡೇನೇ ಆದ ಆದ ಹಾಗಿದೆ” ಎಂದೆ. ಆತ ಕೊಂಚ ಸಿಡುಕಿನಿಂದ್ಲೇ, ‘ ಇನ್ನೇನು ಯಾರ್ಯಾರದೋ ತಲೆ ಹೊಡೆದ ದುಡ್ಡು, ಮಂದೀ ಹಣ ತಿಂದ್ರೆ, ಅದನ್ನೆತ್ಕೊಂಡು ಹೊಗೋಕೆ ಒಬ್ನಲ್ಲಾ ಒಬ್ಬ ‘ ಕಾಯಂಕುಳಂ ಕೊಚ್ಚುನ್ನಿ’ ಬಂದೇ ಬರ್ತಾನೆ ಅಂದ. ಒಹೋ ಇದ್ಯಾವ್ದೋ ಹೊಸ ವಿಷ್ಯ ಅಂದ್ಕೋತಾ,” ಅವನ್ಯಾರಪ್ಪಾ ‘ಕಾಯಂಕುಳಂ ಕೊಚ್ಚುನ್ನಿ’ ಅಂತ ಕೇಳಿದೆ,” ಹಾಗಂತ ದೇವರಂಥಾ ಕಳ್ಳ ಒಬ್ಬ ಇದ್ನಂತೆ. ಇನ್ನೇನೂ ಗೊತ್ತಿಲ್ಲ, ರಾತ್ರಿಯಾಗಿದೆ ಹೋಗಿ ಮಲಗಿ” ಅಂತ ನನ್ನನ್ನ ಸಾಗಿಹಾಕ್ದ.

ರಾತ್ರಿಯೆಲ್ಲ ಈ ‘ ಕಾಯಂಕುಲಂ ಕೊಚ್ಚುನ್ನಿ’ ನನ್ನನ್ನ ಕಾಡಿದ್ದೇ ಕಾಡಿದ್ದು. ಮರುದಿನ ಆಫೀಸಿಗೆ ಹೋಗ್ತಿದ್ದ ಹಾಗೇ, ರಾತ್ರಿಯ ಘಟೆನೆಯನ್ನೆಲ್ಲ ವಿವರಿಸಿ ‘ಸಂಧ್ಯಾ’ ಳನ್ನ ಕೇಳಿದೆ. ಸಂಧ್ಯಾ ಮೋಹಿನಿಯಾಟ್ಟಂ ಕಲಾವಿದೆ. ಬಹು ದೊಡ್ಡ ಸಾಂಸ್ಕೃತಿಕ ಹಿನ್ನೆಲೆಯ ಹುಡುಗಿ. ಕಲೆ, ಜಾನಪದ ಅಂತ ಸಾಕಷ್ಟು ಓದ್ಕೊಂಡೋಳು. ಆಕೆ ‘ಈ ‘ ದೇವರಂಥ ಕಳ್ಳ’ ನ ಜಾತ್ಕಾನೇ ಬಿಚ್ಚಿಟ್ಲು. ಅವ್ನಿಗೇಂತ ಒಂದು ಟೆಂಪಲ್ ಕೂಡ ಕಟ್ಟಿದಾರೆ ಸರ್ ಅಂತ ಮುಖ ಅರಳಿಸಿದ್ಲು.

‘ಕಾಯಂಕುಳಂ ಕೊಚ್ಚುನ್ನಿ’ ಆ ಭಾಗದ ಒಂದು ದಂತ ಕಥೆ. ಹತ್ತೊಂಭತ್ತನೆಯ ಶತಮಾನದ ಮೊದಲ ಭಾಗದಲ್ಲಿ ಬದುಕಿದ್ದ ಆತ ರಾಬಿನ್ ಹುಡ್ ಶೈಲಿಯ ಕಳ್ಳ.ಶ್ರೀಮಂತರನ್ನ ದೋಚೋನು, ಬಡವರಿಗೆ ಹಂಚೋನು. ಈತನ ಕಥೆ ಸುಮಾರಿಗೆ ನಮ್ ಕನ್ನೇಶ್ವರ ರಾಮನ ಕಥೆಯಂತೆಯೇ ಇದೆ. ಅದೇ ರೀತಿಯ ಕಳ್ಳತನ, ಅದೇ ರೀತಿಯ ಬಲೆಗೆ ಬಿದ್ದಿದ್ದು… ಹೀಗೇ. ಆ ಕಾರಣಕ್ಕೇ ನನ್ನ ಕುತೂಹಲ ಇನ್ನೂ ಹೆಚ್ಚಾದದ್ದು.

ಕೊಚ್ಚುನ್ನಿಯ ಮನೆತನವೇ ಕಳ್ಳರ ಮನೆತನ. ಚಿಕ್ಕಂದಿನಲ್ಲಿ ಕಿತ್ತು ತಿನ್ನೋ ಬಡತನ. ಮಾಪ್ಳೆ ಹುಡುಗ ಕೊಚ್ಚುನ್ನಿ ಬದುಕು ಕಟ್ಟಿಕೊಳ್ಳೋಕೆ ಬ್ರಾಹ್ನಣನೊಬ್ಬನ ಸಹಾಯ ಕೇಳ್ತಾನೆ. ಆತ ‘ದೊಡ್ಡ ಮನೆಯ ದಿನಸಿ ಅಂಗಡೀಲಿ ಕೆಲಸ ಕೊಡಿಸ್ತಾನೆ. ಚುರುಕು ಹುಡುಗ ಸಾಹುಕಾರನ ನಾವೆಯೊಂದನ್ನ ರಕ್ಷಣೆ ಮಾಡೋದ್ರ ಮೂಲಕ ಆತನ ಮನ ಗೆಲ್ತಾನೆ.

ಈ ನಡುವೆ ತನ್ನ ಅಪರಾಧೀ ಹಿನ್ನೆಲೆಯ ಕಾರಣಕ್ಕಾಗಿ ಕಳರಿ ಯುದ್ಧ ತರಬೇತಿಯಿಂದ ವಂಚಿತನಾದ ಆತ ಮರೆಯಲ್ಲೇ ನಿಂತು ಪಟ್ಟುಗಳನ್ನ ಕಲೀತಾನೆ. ಹೀಗಿರೋವಾಗ, ಓಂದು ದಿನ ದೇವರ ಪ್ರಸಾದಕ್ಕೆ ಬೇಕು ಅಂತ ಅನಿವಾರ್ಯವಾಗಿ, ತಾನು ಕಲಿತ ಪಟ್ಟುಗಳನ್ನ ಉಪಯೋಗಿಸಿ, ಅಂಗಡಿಯ ಗೋಡೆ ಹತ್ತಿ, ಹಂಚು ಕಿತ್ತು ಬೆಲ್ಲ ತೆಗೆದುಕೊಡ್ತಾನೆ. ಅದೊಂದು ದೊಡ್ಡ ಸುದ್ದಿಯಾಗ್ತದೆ. ಕೆಲಸ ಕಳೆದುಕೊಳ್ತಾನೆ. ಸರಿ, ಅಂದಿನಿಂದ ಸುರುವಾಗ್ತದೆ ಕಳ್ಳತನ. ಗ್ಯಾಂಗ್ ಕಟ್ತಾನೆ. ಮದುವೇನೂ ಆಗ್ತಾನೆ. ಕದ್ದ ಹಣ ಖರ್ಚು ಮಾಡೋಕೆ ಕುಡಿತ, ಹೆಣ್ಣುಗಳ ಸಹವಾಸ ಶುರುವಾಗ್ತದೆ.’ ಕಾರ್ತಿಯಾನಿ’ ಎನ್ನೋ ಗೆಳತೀನ ಕಟ್ಕೋತಾನೆ. ಅದನ್ನ ಪ್ರತಿಭಟಿಸಿದ ಅತ್ತೇನ ಕೊಂದು ನದಿಗೆ ಎಸೀತಾನೆ.

ಟ್ರಾವಂಕೂರಿನ ದೊರೆ ಸ್ವಾತಿ ತಿರುನಾಳ್ ನಂತರದ ದಿನಗಳವು. ರಾಜ್ಯದ ತುಂಬ ಅರಾಜಕತೆ. ಈ ನಡುವೆ ಈತನ ಉಪಟಳ. ಪ್ರಭುತ್ವಕ್ಕೆ ತಲೆ ಕೆಟ್ಟು ಹೋಗ್ತದೆ. ಏನೇ ಮಾಡಿಯಾದ್ರೂ ಕೊಚ್ಚುನ್ನಿಯನ್ನ ಹಿಡೀಲೇಬೇಕು ಅಂತ ತಹಸೀಲ್ಧಾರನನ್ನ ತಾಕೀತು ಮಾಡ್ತದೆ. ತಹಸೀಲದಾರ ಕೊಚ್ಚುನ್ನಿಯ ಗೆಳತಿ’ ಕಾರ್ತಿಯಾನಿ’ಯನ್ನ ಉಪಯೋಗಿಸ್ತಾನೆ. ಆಕೆಗೆ ಹಣದ ಆಸೆ ತೋರಿಸ್ತಾನೆ. ಆಕೆ ಬಲಿಯಾಗ್ತಾಳೆ. ಹಾಲಿನಲ್ಲಿ ಮದ್ದು ಬೆರೆಸಿ, ಕುಡಿಸಿ, ಆತನನ್ನ ಹಿಡಿಯೋಕೆ ಸಹಾಯ ಮಾಡ್ತಾಳೆ. ಚತುರ ಕೊಚ್ಚುನ್ನಿ ಮಾರ್ಗ ಮಧ್ಯದಲ್ಲೇ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾಗ್ತಾನೆ.

ಈಗ ಗ್ಯಾಂಗ್ ದೊಡ್ಡದಾಗಿದೆ. ಶ್ರೀಮಂತರನ್ನ ದೋಚಿ, ಬಡವರಿಗೆ ಹಂಚುತ್ತ ಕೊಚ್ಚುನ್ನಿ ಹೀರೋ ಆಗಿದ್ದಾನೆ. ಆತನ್ನ ಹಿಡಿಯೋದೇ ದೊಡ್ಡ ಸವಾಲಾಗಿದೆ. ಆದ್ರೆ ಈ ಮಧ್ಯೆ ದಿವಾನಗಿರಿ ಹಿಡಿದ ಮಹಾರಾಷ್ಟ್ರದ ‘ಮಾಧವರಾವ್’ ಅನ್ನೋ ಮನುಷ್ಯ ಕೂಡ ಅಷ್ಟೇ ಚಾಣಾಕ್ಷ. ಆತನ ಗೆಳೆಯರನ್ನೇ ಬಳಸಿಕೊಳ್ತಾನೆ ಆತ. ಮದ್ಯಗೋಷ್ಥಿಯ ಒಂದು ರಾತ್ರಿ ಆತ ನಶೇಲಿದ್ದಾಗ ಮೋಸದಿಂದ ಅವನ್ನ ಹಿಡೀತಾರೆ. ತಿರುವನಂತಪುರದ ಜೈಲಿಗೆ ಅಟ್ತಾರೆ. ಜೀವಾವಧಿ ಶಿಕ್ಷೆಯಾಗ್ತದೆ. ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆತ ಸಾಯ್ತಾನೆ.

ಆದ್ರೆ ಬಡವರ, ಜನಸಾಮಾನ್ಯರ ಮನದಲ್ಲಿ ದೇವನಾಗಿ ಉಳೀತಾನೆ.
ಈಗಲೂ, ಮುಸ್ಲಿಮ್ ವ್ಯಕ್ತಿಯಾಗಿದ್ದ ಆತನ ಹೆಸರಲ್ಲಿ ಚಿಕ್ ‘ದೇವಸ್ಥಾನ’ ಕಟ್ಟಿದಾರೆ. ಜನ ಹೋಗಿ ಕಷ್ಟ ಹೇಳ್ಕೊಳ್ತಾರೆ.

¨ಬಹುಷ: ಕೇರಳದ ಎಲ್ಲ ನಾಟಕ ತಂಡಗಳೂ ‘ಕಾಯಂಕುಳಂ ಕೊಚ್ಚುನ್ನಿ’ ಕಥೇನ ನಾಟ್ಕವಾಗಿಸಿ ಆಡಿವೆ. ನಾನು ಆಲುವಾದಲ್ಲಿ ಇರೋವಾಗ್ಲೇ ಒಂದು ಕಂಪ್ನಿಯ ನಾಟ್ಕ ನೋಡೋ ಅವಕಾಶ ಸಿಕ್ತು. ಅಲೆಪ್ಪಿಯದೇ ಕಂಪ್ನಿ. ಭಯ ಭಕ್ತಿಯಿಂದ್ಲೇ ನಾಟ್ಕ ಆಡಿದ್ರು. ಹಾಡುಗಳು, ಅಭಿನಯ, ಶ್ರೇಷ್ಠ ಮಟ್ಟದ್ದಾಗಿತ್ತು. ರಿಯಲಿಸ್ಟಿಕ್ ಆದ ಸೆಟ್ ಗಳು, ಕಾಸ್ಟ್ಯೂಮ್ ಗಳು ಕಾಲಕ್ಕೆ ನಿಖರವಾಗಿದ್ವು. ಕೇಳಿದ ಕಥೇನ ನೋಡಿದ ಖುಶಿಯಿತ್ತು.

ಅಂದ ಹಾಗೆ ಈ ಕಥೆ 1966 ರಲ್ಲೇ ಸಿನಿಮಾ ಆಗಿ, ನಾಯಕ ನಟ ಸತ್ಯನ್ ಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿದೆ. ಯೇಸುದಾಸ್ ಅದ್ರಲ್ಲಿ ಹಾಡುಗಾರನ ಪಾತ್ರ ಮಾಡಿದಾರೆ!
ಒಂದು ಮೆಗಾ ಫಿಲ್ಮ್. ‘ಕಾಯಂಕುಳಂ ಕೊಚ್ಚುನ್ನಿ’ ಈ ವರ್ಷ ರಿಲೀಸ್ ಆಗ್ತಿದೆ. ನಿವಿನ ಪೌಲಿ, ಮೋಹನ ಲಾಲ್, ಪ್ರಿಯಾ ಆನಂದ್, ಬಾಬು ಎಂಟನಿ ಪಾತ್ರ ಮಾಡ್ತಿದಾರೆ. ನೋಡಿ. ತಪ್ಪಿಸ್ಕೋಬೇಡಿ.

 

3 comments

  1. ಕಳ್ಳನಿಗೂ ಒಂದು ದೇವಸ್ಥಾನ.. ಇದೊಂದು ಸ್ವಾರಸ್ಯಕರವಾದ ಕತೆ .ಕಣ್ಣಿಗೆ ಕಟ್ಟುವಂತೆ ನೀವು ಕತೆಯನ್ನು ವಿವರಿಸಿದ ಪರಿ ತುಂಬಾ ಸೊಗಸಾಗಿತ್ತು .ಧನ್ಯವಾದಗಳು.

Leave a Reply