ಅಡುಗೆ ಮನೆಯಿಂದ ರಂಗಭೂಮಿಗೆ..

ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್

ನಾನು ಬರೋದನ್ನೇ ಕಾಯ್ತಿತ್ತೇನೋ ಎನ್ನೋ ಹಾಗೆ, ನಾನು ಆಲುವಾಕ್ಕೆ ಹಾಜರಾದ ದಿನವೇ ‘ ಕೊಚ್ಚಿ ಮೆಟ್ರೋ’ ಕೆಲಸ ಶುರುವಾಯ್ತು. ಈ ಮೆಟ್ರೋ ಕೆಲಸ ಅಂದ್ರೆ ನಮ್ಮ ಕೇಬಲ್ ಗಳಿಗೆ ಮರಣಶಾಸನವೇ. ಗಾಜಿನ ನೂಲಿನಂಥ ಓ.ಎಫ್.ಸಿ ಕೇಬಲ್ ಗಳು ದೈತ್ಯ ಯಂತ್ರಗಳ ಹೊಡೆತಕ್ಕೆ ಪರ ಪರ ಹರಿದು ಹೋಗ್ತವೆ. ಕ್ಷಣಕ್ಕೆ ಹರಿದುಹೋಗೋ ಕೇಬಲ್ ಜೋಡಿಸೋಕೆ ದಿನಗಟ್ಲೇ ಬೇಕು. ಹಗಲೂ ರಾತ್ರಿ ಅವುಗಳನ್ನ ಜೋಡಿಸೋದೇ ಕೆಲಸ. ನಮ್ಮ ಆಫಿಸರ್ ಗಳು ರಾತ್ರಿಯೆಲ್ಲಾ ಕೆಲಸ ಮಾಡೋ ಹೊತ್ತಿಗೆ ಮಾರಲ್ ಸಪೋರ್ಟ್ ಗಾಗಿ ನಾನೂ ಹೋಗ್ತಿದ್ದೆ. ಅವರ ಜೊತೆ ಕೆಲಸಕ್ಕೆ. ರಾತ್ರಿಯೆಲ್ಲ ಕೆಲಸ. ಜೊತೆಗೆ ಜಾಗರಣೆ. ಹಾಡು, ಚರ್ಚೆ, ಸುದ್ದಿ.

ನನ್ನ ಕಾರ್ ಗೆ ಜಾನ್ಸನ್ ಅಂತ ಒಬ್ಬ ಡ್ರೈವರ್. ಪಕ್ಕಾ ಕಮ್ಯುನಿಸ್ಟ್. ಸಾಕಷ್ಟು ಓದಿಕೊಂಡಿದ್ದ. ಸಾಮಾಜಿಕ ಸಂಘಟನೆಗಳಲ್ಲಿ ಕೆಲಸ ಮಾಡ್ತಿದ್ದ. ತುಂಬ ಚರ್ಚೆ ಮಾಡ್ತಿದ್ದ.

ಹೀಗೇ ಒಂದು ರಾತ್ರಿ ಚರ್ಚೆಯ ಹೊತ್ತಿಗೆ, ‘ವ್ಯವಸ್ಥೆಯ ಒಳಗಿದ್ಕೊಂಡೇ ಸುಧಾರಣೆ ಮಾಡ್ಬೇಕು’ ಅಂತ ವಾದ ಮಂಡಿಸ್ತಾ, ‘ಭಟ್ಟಾದ್ರಿಪಾಡ್’ ಹೆಸರು ಹೇಳ್ದ. ನಂಬೂದ್ರಿ ಸಮುದಾಯದ ಅನಿಷ್ಟ ಸಂಪ್ರದಾಯದ ಕೋಟೆಯನ್ನ ಒಡೆದ, ವಿಧವಾ ವಿವಾಹ ವನ್ನ ಪ್ರೋತ್ಸಾಹಿಸಿದ ಭಟ್ಟಾದ್ರಿಪಾಡ್ ರ ‘ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್’ ನಾಟ್ಕ ನೀವು ನೋಡ್ಲೇಬೇಕು ಸರ್, ಅಂತ ತಲೆಯೊಳಗೆ ಹುಳ ಬಿಟ್ಟ.

ನನಗೂ ಆಸಕ್ತಿ ಕೆರಳ್ತು. ಈ ಭಟ್ಟಾದ್ರಿಪಾಡ್ ಗೂ ನಮ್ಮ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ದ ಸೂರಿ ವೆಂಕಟ್ರಮಣ ಶಾಸ್ತ್ರಿಗಳಿಗೂ ಎಲ್ಲೋ ಒಂದ್ಕಡೆ ಸಾಮ್ಯ ಇದೆ ಅಂತ ಅನಿಸೋದಕ್ಕೆ ಶುರುವಾಯ್ತು. ಸೂರಿ ಶಾಸ್ತ್ರಿಗಳು ಶತಮಾನಗಳ ಹಿಂದೆಯೇ ಆಗ ಹವ್ಯಕಲ್ಲಿದ್ದ ಕನ್ಯಾವಿಕ್ರಯ ಪದ್ಧತಿಯ ವಿರುದ್ಧ ದನಿಯೆತ್ತಿದವ್ರು. ‘ಹವ್ಯಕ ಹಿತೇಚ್ಛು’ ಅಂದುಕೊಳ್ಳುತ್ತಲೇ ಆ ಕಾಲದ ಅನಿಷ್ಟಗಳನ್ನ ಕಟುವಾಗಿ ವಿಮರ್ಶಿಸ್ತಾ, ವಿಧವಾ ವಿವಾಹದ ಪರ ಮಾತಾಡ್ತಾ, ತನ್ನ ನಾಟಕದಲ್ಲಿ ಮಠಗಳನ್ನೂ ಟೀಕಿಸಿದವ್ರು.

ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ ‘ ಇಗ್ಗಪ್ಪ ಹೆಗಡೆ..’ ತನ್ನ ಬಂಡಾಯದ ಗುಣಗಳಿಗಾಗಿಯೋ ಏನೋ ಆಗ ತುಂಬ ಪ್ರದರ್ಶನಗಳನ್ನು ಕಾಣಲಿಲ್ಲವಾದೂ, ಇತ್ತೀಚೆಗೆ ಕೆಲವು ಪ್ರದರ್ಶನಗಳು ನಡೆದಿದ್ವು. ನಾವೆಲ್ಲ ಸೇರಿ ಶಿರಸಿಯ ಬಾಳೇಗದ್ದೆ ಅನ್ನೋ ಹಳ್ಳೀಲಿ ಮೂರು ದಿನ ಆ ನಾಟ್ಕದ ಶತಮಾನೋತ್ಸವ ಆಚರಿಸಿದ್ದು ಒಂದು ಒಳ್ಳೇ ನೆನಪು.

1896 ರಲ್ಲಿ ಹುಟ್ಟಿದ ಭಟ್ಟಾದ್ರಿಪಾಡ್ ನೇರವಾಗಿ ಸುಧಾರಣೆಗೇ ಕೈ ಹಚ್ಚಿದರು. ವಿಧವಾ ವಿವಾಹ, ಅಂತರ್ಜಾತೀಯ ವಿವಾಹಗಳನ್ನ ಮಾಡಿಸ್ತಾನೇ ಇಡಿಯ ನಂಬೂದರಿ ಸಮುದಾಯದ ಮೂಡನಂಬಿಕೆಗಳ ಬುಡ ಹಿಡಿದು ಅಲ್ಲಾಡಿಸಿದವ್ರು. ಕೇರಳದ ಪ್ರಗತಿಪರ ರಂಗ ಚಳುವಳಿಯನ್ನ ಹುಟ್ಟು ಹಾಕಿದವ್ರು. ರಂಗಭೂಮಿ ಸಮಾಜ ಸುಧಾರಕ ಮತ್ತು ರಾಜಕೀಯ ಚಳವಳಿಗಾರರ ಕೈಯಲ್ಲಿ ಒಂದು ಸಾಮಾಜಿಕ ಮಾಧ್ಯಮವಾಗಿ ಬೆಳೆಯೋದಕ್ಕೆ ಕಾರಣವಾದ್ದೇ ಈ ‘ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್’ ನಾಟಕ.

ನನಗೆ ಈ ನಾಟ್ಕ ನೋಡೋ ಚಾನ್ಸ್ ಬೇಗನೇ ಸಿಕ್ತು. ಅದೂ ಮನೇ ಪಕ್ಕದ ಹಾಲ್ ನಲ್ಲೇನೇ. ಇಡಿಯ ನಾಟ್ಕ ನಡಿಯೋದು ಆ ಕಾಲದ ನಂಬೂದ್ರಿಗಳ ಅನಿಷ್ಟ ವಿವಾಹ ಪದ್ಧತಿಯ ಸುತ್ತ. ಆಗ ನಂಬೂದ್ರಿ ಕುಟುಂಬಗಳಲ್ಲಿ ಹಿರಿಯ ಮಗ ಮಾತ್ರವೇ ಮದುವೆಯಾಗೋನು. ಉಳಿದ ಗಂಡು ಮಕ್ಕಳಿಗೆ ಮದುವೆಯಿಲ್ಲ. ಕೆಳ ಜಾತಿಯ ಹೆಣ್ಮಕ್ಕಳು ಅವರ ಬಲಿ. ಆ ಹಿರಿಯ ಮಗ ಹೇಗೇ ಇರಲಿ, ಅವನಿಗೆ ಒಂದರ ಹಿಂದೊಂದು ಮದುವೆ. ಆಸ್ತಿ ತಮ್ಮ ಹಿಡಿತದಲ್ಲೇ ಇರಬೇಕು ಅನ್ನೋ ಕಾರಣಕ್ಕೆ. ಊರಲ್ಲಿ ಇರೋದು ಕೆಲವೇ ಕುಟುಂಬಗಳು. ಮತ್ತೆ ಹೆಣ್ಮಕ್ಕಳ ಗತಿ? ಹಿರೇ ಮಗನನ್ನ ಬಿಟ್ರೆ ಉಳಿದ ಮಕ್ಕಳಿಗೆ ಮದುವೇನೇ ಇಲ್ವಲ್ಲ. ಅದಕ್ಕೇ ಆದೇ ಹಿರೇ ಮಗನಿಗೆ ಮತ್ತೆ ಮತ್ತೆ ಮದುವೆ. ಭಟ್ಟಾದ್ರಿಪಾಡ್ ಈ ಅನಿಷ್ಟವನ್ನೇ ಪ್ರಶ್ನೆ ಮಾಡಿದ್ರು. ಈ ನಾಟ್ಕದ ಮೂಲಕ ನಂಬೂದ್ರಿಯವರ ಸಂಪ್ರದಾಯದ ಕೋಟೆಗೇ ‘ಬಾಂಬ್’ ಇಟ್ರು. ಅದನ್ನ ಅವ್ರೇ ಒಂದ್ಕಡೆ ಹೇಳ್ಕೊಂಡಿದಾರೆ.

ಮಾಧವನ್ ಅನ್ನೋ ವೇದ ಓದೋ ಹುಡ್ಗ ಉನ್ನತ ಅಧ್ಯಯನಕ್ಕೆ ಮದರಾಸಿಗೆ ಹೋಗ್ತಾನೆ. ಹೊರಗೆ ಕಲಿಯೊದಕ್ಕೆ ಹೋಗೋ ಅವನ ಈ ನಿರ್ಧಾರವೇ ಆತನ ಸಮುದಾಯದಲ್ಲಿ ಗಂಭೀರವಾದ ಪ್ರತಿಕ್ರಿಯೆಗಳನ್ನ ಎಬ್ಬಿಸ್ತದೆ. ಥೇತಿ ಎನ್ನೋ ಹೆಣ್ಮಗಳು ಈತನ ಗೆಳತಿ. ಮಾಧವನ್ ಮತ್ತು ಆಕೆ ಮದುವೆಯಾಗೋ ನಿರ್ಧಾರ ಮಾಡಿರ್ತಾರೆ. ಮಾಧವನ್ ಮದರಾಸನಲ್ಲಿರೋವಾಗ್ಲೇ ಥೇತಿ ನ ‘ ಕರ್ಕಡಕಾಮ್ಕುನ್ನು ಅಚನ್ ನಂಬೂದ್ರಿ ಎನ್ನೋ ‘ ಹಿರೀಮಗ’, ಒಬ್ಬ ಮುದುಕ ನಂಬೂದ್ರಿ ಜೊತೆ ಮದುವೆ ಮಾಡೋ ನಿರ್ಧಾರವಾಗಿಬಿಡ್ತದೆ. ಆದರೆ ಇದಕ್ಕೊಪ್ಪದ ಥೇತಿ ಯ ಅಣ್ಣ ಕುಂಜು, ಮಾಧವನ್ ಗೆ ವಿಷಯ ತಿಳಿಸಿ ಕೋರ್ಟಿನಿಂದ ‘ಇಂಜಂಕ್ಷನ್’ ತಂದ್ಬಿಡ್ತಾನೆ. ಇನ್ನೇನು ಮದುವೆ ನಡೀಬೇಕು ಅನ್ನೋವಾಗ್ಲೇ ಕೋರ್ಟ್ ಆದೇಶ ಬರ್ತದೆ. ಮದುವೆ ಮುರೀತದೆ. ಅಲ್ಲಿಗೆ ಬಂದ ಮಾಧವನ್ ಜೊತೆ ಥೇತಿಯ ಮದುವೆಯಾಗ್ತದೆ.

ನಂದಜನ್ ಎನ್ನೋ ಯುವ ನಿರ್ದೇಶಕ ಹಳ್ಳಿಯ ತಂಡವನ್ನಿಟ್ಕೊಂಡು ಈ ನಾಟಕ ಆಡಿದ್ರು. ಸಮಕಾಲೀನ ಜಗತ್ತಿಗೂ ಇಂದಿನ ಹೆಣ್ಮಕ್ಕಳ ಬದುಕಿಗೂ ತಾಳೆ ಹಾಕುತ್ತ ಅವರು ಕಟ್ಟಿರೋ ನಾಟಕ ಬಂಧದಲ್ಲಿ ತುಂಬ ಗಟ್ಟಿ. ಅದ್ಭುತ ನಟರು ನಾಟಕವನ್ನ ತುಂಬ ಸುಲಭವಾಗಿ ದಾಟಿಸುದ್ರು. ನಿಜಕ್ಕೂ ತುಂಬ ಒಳ್ಳೆಯ ನಾಟಕ.

ತುಂಬ ಆಸಕ್ತಿಯ ಸಂಗ್ತಿ ಅಂದ್ರೆ ಭಟ್ಟಾದ್ರಿಪಾಡ್ ಆಡಿಸಿದ ನಾಟಕದ ನಂತರ ಕೋರ್ಟಿನಿಂದ ಇಂಜಂಕ್ಷನ್ ತರೋದು, ಅನಿಷ್ಟ ಮದುವೆಗಳನ್ನ ಮುರಿಯೋದು ನಿರಂತರವಾಗಿ ನಡೆಯೋಕೆ ಶುರುವಾಯ್ತಂತೆ. ರಂಗಭೂಮಿಯ ಶಕ್ತಿ ಇರೋದು ಇಲ್ಲೇ ಅಲ್ವೇ?

 

5 comments

  1. ಈ ನಾಟಕ ಸಮಾಜದ ಮೂಢನಂಬಿಕೆ ಗಳನ್ನ ಅಳಿಸಲು ಉತ್ತಮ ನಿದರ್ಶನ. ಈ ನಾಟಕ‌ಪರಿಚಯಿಸಿದ ನಿಮಗೆ ಧನ್ಯವಾದಗಳು.

Leave a Reply