ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು ‘ವೈಶಾಲಿ’..

ಪೆರಿಯಾರ್ ನದಿಯ ಒಂದು ದಡದ ಮೇಲೆ ‘ ಆಳುವಾ’ ಪಟ್ಟಣವಾದ್ರೆ ಇನ್ನೊಂದು ದಡದ ಮೇಲೆ ‘ ಮನಪ್ಪುರಂ’ ಎನ್ನೋ ಚಿಕ್ಕ ಊರು. ಅಲ್ಲೊಂದು ಶಿವಾಲಯ. ಅದೇನು ಅಂಥ ದೊಡ್ಡ ದೇವಸ್ಥಾನವೇನಲ್ಲ. ಒಂದು ಶಿಲೆಯ ಕಟ್ಟೆ, ಮೇಲೊಂದು ಶಿವಲಿಂಗ. ಶಿವನ ನೆರಳಿಗೆ ಟೆಂಪರರಿ ತಗಡುಗಳು. ಮಳೆಗಾಲದಲ್ಲಿ ಪೆರಿಯಾರ್ ತುಂಬಿ ಆಣೆಕಟ್ಟಿನ ಬಾಗಿಲುಗಳು ತೆರೆದಾಗ ಮನಪ್ಪುರಂ ತುಂಬ ನೀರು. ಶಿವಲಿಂಗವೂ ನೀರಲ್ಲೇ. ಆದ್ರೆ ತುಂಬಾ ತುಂಬಾ ಜನ ಭೆಟ್ಟಿ ನೀಡೋ ದೇವ್ರು ಆತ.

ಶಿವರಾತ್ರಿ ಬಂತೆಂದ್ರೆ ಶಿವನ ಸುತ್ತ ಸಡಗರ. ಅಲ್ಲೊಂದು ಮಹಾಜಾತ್ರೆ. ದೊಡ್ಡದು ಅಂದ್ರೆ ತುಂಬ ದೊಡ್ಡದು. ಒಂದು ತಿಂಗಳ ಕಾಲ ನಡೆಯೋ ಹಬ್ಬ. ಈ ಜಾತ್ರೆಯ ದೊಡ್ಡ ವಿಶೇಷ ಅಂದ್ರೆ ಮನಪ್ಪುರಂನ ಟೆಂಪರರಿ ಬ್ರಿಜ್. ಆಳುವಾ ಪಟ್ಟಣದಿಂದ ಮನಪ್ಪುರಂಗೆ ಹೋಗೋಕೆ ಪೆರಿಯಾರ್ ನದಿ ದಾಟ್ಬೇಕು. ಉಳಿದ ದಿನಗಳಲ್ಲಿ ದೋಣಿಯವ್ರು ನದಿ ದಾಟಿಸ್ತಾರೆ.

ಜಾತ್ರೆಗೆ ಪ್ರತಿದಿನ ಸೇರೋ ಲಕ್ಷಾಂತರ ಜನರನ್ನ ದಾಟಿಸೋದೇನು ಸುಲಭ ಅಲ್ವಲ್ಲ. ಅದ್ಕಾಗೇ ನಗರಸಭೆ ಪ್ರತೀ ವರ್ಷ ಟೆಂಪರರಿ ಬ್ರಿಜ್ ಕಟ್ಟೋದು. ನಿಜಕ್ಕೂ ಆ ಬ್ರಿಜ್ ಕಟ್ಟೋದೇ ಒಂಥರಾ ಸಂಭ್ರಮ. ನಾನೂರು
ಮೀಟರಿನ ಬ್ರಿಜ್ ಅದು. ಕಬ್ಬಿಣದ ಕಂಭಗಳನ್ನ ನದಿಯಾಳದಿಂದ ಹುಗಿದು ತರ್ತಾರೆ, ಸಲಾಕೆಗಳ ಜಾಳಿಗೆ ಕಟ್ತಾ ಅದರ ಮೇಲೆ ಕಬ್ಬಿಣದ ಶೀಟ್ಗಳನ್ನು ಹೊದೆಸ್ತಾ, ಮೇಲೇಳಿಸುವ ಈ ಸೇತುವೆಗೆ ಕೊನೆಯಲ್ಲಿ ಬಾವುಟಗಳ ಶೃಂಗಾರ. ಕೆಂಪು, ಬಿಳಿ ಬಾವುಟಗಳು.

ಮೊದಮೊದಲು ಈ ಬ್ರಿಜ್ ದಾಟೋಕೆ ಹತ್ತು ರೂಪಾಯಿ ಶುಲ್ಕ ಇತ್ತು. ಕೆಂಪು ಹುಡುಗ್ರು ಹೋರಾಟ ಮಾಡಿ ಈಗ ಅದನ್ನೂ ನಿಲ್ಸಿದಾರೆ, ನನ್ನನ್ನ ಮನಪ್ಪುರಂಗೆ ಎಳೀತಿದ್ದದ್ದು ಜಾತ್ರೆಯ ನಾಟಕೋತ್ಸವ. ‘ಉಣ್ಣಿ’ಯಂತೂ ಅವರ ಟೆಂಪರರಿ ಅಂಗಡಿಯೊಂದಿಗೆ ಅಲ್ಲೇ ಜಾಂಡಾ ಹೂಡಿದ್ದ. ನಾಟ್ಕದಲ್ಲಿ ನನಗೆ ಮುಂದಿನ ಸೀಟು ಹಿಡಿಯೋ ಜವಾಬ್ದಾರೀನೂ ಅವನೇ ವಹಿಸ್ಕೊಂಡಿದ್ದ. ಈ ಬಾರಿ ಜಾತ್ರೇಲಿ ಮೂರು
ನಾಟ್ಕಗಳು. ನನ್ನ ಆಫೀಸು ತಿರುಗಾಟ, ಮೀಟಿಂಗುಗಳ ನಡುವೆ ನನಗೆ ನೋಡೋಕಾದದ್ದು ಒಂದೇ ನಾಟ್ಕ. ‘ ವೈಶಾಲಿ’ ಕೇರಳದಲ್ಲಿ ನಾನು ನೋಡಿದ ಮೊದಲ ‘ ಪ್ರೊಫೆಷನಲ್’ ನಾಟಕ.

ನಾನು ನನ್ನ ಜೀವನದ ಮೊದಲ ಪ್ರೊಫೆಷನಲ್’ ನಾಟಕ ನೋಡಿದ್ದೂ ಜಾತ್ರೆಯಲ್ಲಿಯೇ. ಶಿರಸಿಯ ಮಾರೀ ಜಾತ್ರೆಯಲ್ಲಿ. ನಾನು ಚಿಕ್ಕವನಿರೋವಾಗ ಅಮ್ಮನೊಡನೆ ಶಿರಸಿ ಜಾತ್ರೆಗೆ ಹೋಗೋನು. ಅಲ್ಲಿ ನನ್ನ ‘ದೊಡ್ಡಜ್ಜ’, ಹೆಸರಾಂತ ರಂಗ ನಿರ್ದೇಶಕ ಶ್ರೀಪಾದ ಭಟ್ ರ ಅಜ್ಜ ಇದ್ರು. ಅವರೇ ನಮ್ಮ ಜಾತ್ರೆ ಮೆಂಟರ್. ನೀಲೇಕಣಿಯ ದೊಡ್ಡ ಮನೇಲಿ ಅವರ ವಾಸ. ಕೋರ್ಟಿನಲ್ಲಿದ್ದು ನಿವೃತ್ತರಾದ ಅವರು ಊರಿಗೇ ಬೇಕಾದವ್ರಾಗಿದ್ರು. ಅದ್ಕೇ ಜಾತ್ರೆ ಪೆಂಡಾಲ್ ಗೋ, ನಾಟ್ಕಕ್ಕೋ, ಸಿನಿಮಾಕ್ಕೋ ನಮಗೆ ಸ್ಪೆಷಲ್ ಪ್ರವೇಶ. ಹೆಣ್ಮಕ್ಕಳು, ಮೊಮ್ಮಕ್ಕಳನ್ನೆಲ್ಲಾ ಜಾತ್ರೆ ಸುತ್ತಿಸಿ, ಮಿಠಾಯಿ ಕೊಡಿಸಿ, ಸಿನಿಮಾ, ನಾಟ್ಕ ತೋರಿಸಿ ಕಳಿಸೋವ್ರು.

ಆ ಭಾಗಕ್ಕೇ ದೊಡ್ಡ ಜಾತ್ರೆ ಅದು. ಚಿಕ್ಕವನಿದ್ರಿಂದ ಜಾತ್ರೇಲಿ ಏನೇನಿರ್ತಿತ್ತೋ ನೆನಪಿಲ್ಲ. ಆದರೆ ಆಗ ಊರು ಹೊಕ್ಕೋ ಮೊದಲು ಕೊಡ್ತಿದ್ದ ವ್ಯಾಕ್ಸಿನೇಷನ್ ಮತ್ತು ಆ ‘ನಾಟ್ಕ’ ಚೆನ್ನಾಗಿ ನೆನಪಿದೆ. ‘ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ.’ ಝಗಮಗ ಪೋಷಾಕುಗಳು, ಬಣ್ಣ ಬಣ್ಣದ ಸೀನರಿಗಳು, ಹಾಡುಗಳು, ಅವು ತೆರೆದಿಟ್ಟ ಹೊಸ ಲೋಕ. ನನಗೋ ಅದೊಂದು ಬೆರಗು. ಎಲ್ಲಕ್ಕಿಂತಲೂ ಸರಿಯಾಗಿ ನೆನಪಿರೋದು, ನಾಟಕ ಮುಗಿಸಿ ಹೊರ ಬಂದ ಮೇಲೆ ಅಲ್ಲಿ ಕೊಟ್ಟ ಸತ್ಯನಾರಾಯಣ ಪ್ರಸಾದ!

ಈಗ್ಲೂ ಶಿರಸಿ ಮಾರಿ ಜಾತ್ರೇಲಿ ಹತ್ತಾರು ಟೆಂಟ್ ಗಳಿರ್ತವೆ. ದಿನಕ್ಕೆ ಸುಮಾರು ಹತ್ತು ಸಾವಿರ ಜನ ನಾಟ್ಕ ನೋಡ್ತಾರೆ. ನಿಜಕ್ಕೂ ಅದೊಂದು ನಾಟ್ಕದ ಜಾತ್ರೇನೇ. ಈ ವರ್ಷ ನಾನೂ ಜೇವರ್ಗಿ ಕಂಪ್ನಿಯ ಮೂರು ನಾಟ್ಕ ನೋಡ್ದೆ. ಡಬಲ್ ಮೀನಿಂಗ್ ಮಾತುಗಳಿಲ್ಲದೇ ಸಹ್ಯವಾಗಿದ್ವು. ಒಳ್ಳೇ ನಟಿಯೊಬ್ಳು ಇಡೀ ನಾಟ್ಕಾನ ನಡೆಸ್ಕೊಂಡು ಹೋಗ್ತಿದ್ಲು. ಅಷ್ಟು ಪ್ರತಿಭಾವಂತೆ. ‘ಮನಪ್ಪುರಂ’ ಜಾತ್ರೆಯ ಈ ನಾಟ್ಕವೂ ಒಂದು ಹೊಸ
ಲೋಕದ ಅನಾವರಣವೇ. ‘ವೈಶಾಲಿ’, ಹೆಸರಾಂತ ಲೇಖಕ ಎಂ.ಟಿ. ವಾಸುದೇವನ್ ನಾಯರ್ ರ ಕಾದಂಬರಿ ಆಧರಿಸಿದ ನಾಟ್ಕ. ಹೆಚ್ಚಿನವರಿಗೆಲ್ಲ ಗೊತ್ತಿರೋ ಕಥೆಯೇ. ಅಂಗ ರಾಜ್ಯಕ್ಕೆ ಬರ ಬಂದಿದೆ. ಹನ್ನೆರಡು

ವರ್ಷಗಳಿಂದ ಮಳೆಯಿಲ್ಲ. ರಾಜಗುರುವೂ ಅವನ ಮಗನ ದೆಸೆಯಿಂದ ರಾಜ್ಯ ಬೀಟ್ಟು ಹೊರಹೋಗಿದಾನೆ. ಅವನ ಮಗ ದೇವದಾಸಿಯ ಮಗಳು ವೈಶಾಲಿಯನ್ನ ಪ್ರೇಮಿಸಿ ಬಂಡಾಯವೆದ್ದಿದ್ದಾನೆ. ಮಗನನ್ನ ಕರ್ಕೊಂಡು ದೂರ ಹೋದ ರಾಜಗುರೂನ ತಿರುಗಿ ಕರೆಸ್ತಾನೆ ರಾಜ ಲೋಮಪಾದ. ಮಳೆ ಬರೋದಕ್ಕೆ ಯಾಗ ಮಾಡ್ಬೇಕು. ಆದ್ರೆ ಯಾರು ಯಾಗ ಮಾಡೋರು? ರಾಜಗುರುವಿನ ದಿವ್ಯ ದೃಷ್ಟಿ ‘ ಋಷ್ಯಶೃಂಗ’ ನನ್ನಸೂಚಿಸ್ತದೆ.

ಋಷ್ಯಶೃಂಗ ದಿವ್ಯ ಶಕ್ತಿಯವ. ಋಷಿ ವಿಭಂಡಕನ ಮಗ ಈ ಜಗತ್ತನ್ನೇ ನೋಡದೆ ಬೆಳೆದವ. ದೂರದ ಕಾಡಲ್ಲಿ ತಪಸ್ಸು ಮಾಡ್ತಾ ದೊಡ್ಡವನಾದವ. ತನ್ನ ತಂದೆಯನ್ನಲ್ಲದೇ ಬೇರೆ ಮನುಷ್ಯರನ್ನೇ ನೋಡದವ. ಅಂಥವನನ್ನ ಮೋಹದಲ್ಲಿ ಸಿಲುಕಿಸಿ ಕರೆದು ತರೋಕೆ ‘ ವೈಶಾಲಿ’ ಯನ್ನ ಕಳಿಸೋ ನಿರ್ಧಾರವಾಗ್ತದೆ. ಆಕೆ ರಾಜನರ್ತಕಿ ಮಾಲಿನಿ ಯ ಮಗಳು. ರಾಜ ಲೋಮಪಾದನ ಸಂತಾನವೇ. ಆದರೂ ಅದು ಆತನಿಗೆ ತಿಳಿಯದು. ಸರಿ, ಗಾಢವಾದ ಕಾಡನ್ನು ಹೊಕ್ಕ ವೈಶಾಲಿ ಋಷ್ಯಶೃಂಗನನ್ನು ಕಾಣ್ತಾಳೆ. ಮನುಷ್ಯರನ್ನೇ ನೋಡದ ಋಷ್ಯಶೃಂಗ ಕೂಡಲೇ ಆಕೆಯಲ್ಲಿ ಅನುರಕ್ತನಾಗ್ತಾನೆ. ಅಪಾಯ ಅರಿತ ಮುನಿ ವಿಭಂಡಕ ಮಗನನ್ನು
ಎಚ್ಚರಿಸ್ತಾನೆ. ಮೋಹದಿಂದ ಹೊರಬರೋಕೆ ಋಷ್ಯಶೃಂಗ ಮತ್ತೆ ತಪಸ್ಸಿಗೆ ಕೂರ್ತಾನೆ. ಆದೆರೂ ಬಿಡದ ವೈಶಾಲಿ ತನ್ನ ನೃತ್ಯದಿಂದಲೇ ಆತನನ್ನ ಗೆದ್ದು ರಾಜಧಾನಿಗೆ ಕರ್ಕೊಂಡು ಹೊರಡ್ತಾಳೆ.

ದಾರಿಯಲ್ಲೇ ಈಕೆ ಮಾಯಾವಿ ಅಂತ ಭಾವಿಸಿದ ಋಷ್ಯಶೃಂಗ ಶಾಪ ಕೊಡೋಕೆ ಅನುವಾಗ್ತಾನೆ. ಅವನನ್ನು ಆಗಲೇ ಪ್ರೇಮಿಸಹತ್ತಿದ್ದ ವೈಶಾಲಿ ಮತ್ತೆ ಮತ್ತೆ ಆತನ ದಿವ್ಯ ವ್ಯಕ್ತಿತ್ವವನ್ನ, ಮಳೆ ತರಿಸಬಹುದಾದ ಶಕ್ತಿಯನ್ನ ಆತನಿಗೆ ಮನದಟ್ಟು ಮಾಡ್ತಾ ರಾಜಧಾನಿಗೆ ಕರೆತರ್ತಾಳೆ. ಯಾಗ ಸಂಪನ್ನಗೊಳ್ತಿದ್ದಂತೆ ಜೋರಾಗಿ ಮಳೆ. (ಈಗ ನಮ್ಮೂರಲ್ಲೂ ಜೋರು ಮಳೆ. ಮೂರು ದಿನವಾಯ್ತು: ಊರೆಲ್ಲ ಹೊಳೆ)
ರಾಜ ತನ್ನ ಮಗಳು ಶಾಂತಾಳನ್ನ ಋಷ್ಯಶೃಂಗನಿಗೆ ಮದುವೆ ಮಾಡೋ ಪ್ರಸ್ತಾವ ಇಡ್ತಾನೆ. ಈ ಸಂತೋಷ, ಕೇಕೆ, ಗಲಾಟೆಗಳ ಮಧ್ಯೆ ಹೃದಯ ಒಡೆದ ‘ವೈಶಾಲಿ’ ಮರೆತೇ ಹೋಗ್ತಾಳೆ. ಆಕೆಯ ತಾಯಿ ಕಾಲ್ತುಳಿತಕ್ಕೆ ಸಿಕ್ಕು ಸಾಯ್ತಾಳೆ. ವೈಶಾಲಿ ಒಬ್ಬಂಟಿಯಾಗ್ತಾಳೆ.

ವೈಶಾಲಿಯ ಬದುಕಿನ ದುರಂತವನ್ನ ತುಂಬಾ ತುಂಬಾ ಅನುಭವೀ ನಟರು ಸಾಕಷ್ಟು ಪ್ರಭಾವಶಾಲಿಯಾಗಿ ತೆರೆದಿಟ್ರು. (ನನ್ ಪಕ್ದಲ್ ಕೂತ ಹೆಂಗಸರು ಜೋರಾಗಿ ಅಳುವಷ್ಟು) ಅವರಿಗಿಂತಲೂ ಹೆಚ್ಚು ಮಾರ್ಕು ಬ್ಯಾಕ್ ಸ್ಟೇಜ್ ಗೆ. ಓಹ್.. ಎಂಥ ಚಮತ್ಕಾರಗಳು.. ಎಂಥ ಟೆಕ್ನಾಲಜಿ, ಗೊತ್ತೇ ಆಗದಂತೆ ಬದಲಾಗೋ ದೃಶ್ಯಗಳು, ಓಡಾಡೋ ಕಾಡು ಪ್ರಾಣಿಗಳು, ಹಾಡೋ ಬಳ್ಳಿಗಳು, ಯಾಗ ಕುಂಡದಿಂದೇಳೋ ಬೆಂಕಿ, ತೇಲ್ತಾ ಇರೋ ನಾವೆ, ಸ್ಟೇಜ್ ಮೇಲೇ ಸುರಿಯೋ ಮಳೆ. ಎಲ್ಲ ಕರಾರುವಾಕ್ಕು, ಅದ್ಭುತ ಟೈಮಿಂಗ್.

ಮತ್ತೆ ‘ಸುರಭಿ’ಯ ‘ಮಾಯಾ ಬಜಾರ್’ ನಾಟ್ಕದ ನೆನಪು.

6 comments

  1. ನೀವು ಬರೆದಿರೋದು ಓದಿದ ಮೇಲೆ ನಿಜವಾಗಿ ನಾಟಕ ನೋಡಿದಂತೆ ಅನುಭವ ಆಯ್ತು

Leave a Reply