ಎಲೆಲೆ ಸಿಂಗಾಪುರ್ ರಸ್ತೆ..

ಲೈಸೆನ್ಸ್ ಮಾಡ್ಕೋಬೇಕು ಅನ್ನುವ ಹುಚ್ಚು. ನನ್ನ ಗೆಳತಿಯರು ಅದಾಗಲೇ ಪರವಾನಿಗೆ ಪಡೆದು ತಮ್ಮ ಗಾಡಿಗಳನ್ನು ರೋಡಿಗೆ ಇಳಿಸಿದ್ರು. ನನ್ನ ಬಹುದಿನದ ಆಸೆಗೆ ಈ ಸಂಗತಿಗಳು ರೆಕ್ಕೆ – ಪುಕ್ಕಗಳು ಹುಟ್ಟುವಂತೆ ಮಾಡಿತ್ತು. ಆದರೆ ಇಂತಹ ಹಾರಾಟಕ್ಕೆ ಅಮ್ಮನ ಮನೆಯೇ ಸುರಕ್ಷಿತ ಅನ್ನೋದು ನನ್ನ ಲೆಕ್ಕಾಚಾರ ಆಗಿತ್ತು. ಅತೃಪ್ತ ಮನಸುಗಳ ಜೊತೆ ಕಾದಾಡಿ, ಮೊಳಕೆಯೊಡೆದ ಕನಸಿಗೆ ತಣ್ಣೀರೆರೆಚುವುದು ನನಗೆ ಇಷ್ಟ ಇರಲಿಲ್ಲ.

‘ಜಾಗ್ರತೆ’ ಅನ್ನೋದು ಬಿಟ್ರೆ ಮತ್ಯಾವ ರೀತಿಯಲ್ಲೂ ನಮ್ಮ ನಿರ್ಧಾರಗಳಿಗೆ ಅಡ್ಡಿಸಿದವರೇ ಅಲ್ಲ ಹೆತ್ತವರು. ಬಾಣಂತನಕ್ಕೆ ಬಂದ ಸಮಯದಲ್ಲಿ ಲೈಸೆನ್ಸ್  ವಿಚಾರ ಕಾರ್ಯರೂಪಕ್ಕೆ ಬಂತು. ಡ್ರೈವಿಂಗ್ ಸ್ಕೂಲ್ ಗೆ ಸೇರಿದ್ದು ಆಯಿತು ಬ್ರೇಕ್, ಕ್ಲಚ್, ಎಕ್ಸಿಲೇಟರ್,  ಒಂದಷ್ಟು ಗೇರ್ ಗಳ ಜೊತೆ ಬಡ್ಕೊಂಡಿದ್ದೂ ಆಯಿತು. ನಮ್ಮ ಮನೆಯ ಕಾರು ಓಡಿಸಲು ಅಪ್ಪ, ಪರ್ಮಿಶನ್ ಕೊಡಬೇಕು ಅನ್ನೋದೇ ನನ್ನ ಟಾರ್ಗೆಟ್ ಆಗಿತ್ತು. ಆದರೆ ಲೈಸೆನ್ಸ್ ಸಿಗೋಕೆ ಕಷ್ಟ ಪಡಬೇಕಾಗಿಲ್ಲಅನ್ನೋದು ಗೊತ್ತಾಗಿದ್ದು,  ಡ್ರೈವಿಂಗ್ ಟೆಸ್ಟ್ ನ ಅವಾಂತರ ನೋಡಿ..!

ಇದೆಲ್ಲಾ ಆಗಾಗ ನೆನಪಾಗೋದು ಸಿಂಗಾಪುರದ ಸಾರ್ವಜನಿಕ ವಾಹನಗಳಲ್ಲಿ ಓಡಾಡುವಾಗ. ಕಂಡ ಕಂಡಲ್ಲಿ ತಿರುವುಗಳಿಲ್ಲ, ಏರು – ತಗ್ಗುಗಳಿಲ್ಲ. ಹಂಪ್ ಗಳಿಲ್ಲ. ಹೊಂಡಗಳ ಬಗ್ಗೆ ಮಾತೇ ಇಲ್ಲ. ಆಹಾ..!  ವಾಹನ ಚಲಿಸುವ ರಸ್ತೆಗಳೂ ಕೂಡ ಎಷ್ಟೊಂದು ಸುಂದರ. ಅದೂ ದೇಶದ ಉದ್ದ – ಅಗಲಕ್ಕೂ ಒಂದೇ ರೀತಿ. ರಸ್ತೆ ತುಂಬಾ ಟ್ರ್ಯಾಫಿಕ್ ರೂಲ್ಸ್ ಗಳನ್ನು ತಿಳಿಸುವ ಬಣ್ಣ ಬಣ್ಣ ರಂಗೋಲಿಗಳಂತಿರುವ ಗುರುತುಗಳು ಅಷ್ಟೇ. 

ಸಿಂಗಾಪುರದ ರಸ್ತೆಗಳದ್ದು ಒಂದೇ ಮಂತ್ರ. ಟ್ರ್ಯಾಫಿಕ್ ರೂಲ್ಸ್ ಅನುಸರಿಸಿದಿಯೋ ಬದುಕಿದಿ. ಚೇಷ್ಟೇ ಮಾಡಿದಿಯೋ “ಡ್ರೈವರ್ ಸೀಟ್” ಭಾಗ್ಯ ಸ್ಥಗಿತಗೊಳ್ಳೋದು ಗ್ಯಾರಂಟಿ. ಇಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಗಳು ಇರುತ್ತವೆ. ವಾಹನ ಚಾಲನೆಗಿಂತಲೂ ರೂಲ್ಸ್  ಬಗ್ಗೆನ  ತಿಳುವಳಿಕೆಗೆ ಹೆಚ್ಚಿನ ಆದ್ಯತೆ. 50 ನಿಮಿಷದಲ್ಲಿ ನಡೆಯುವ, 50 ಪ್ರಶ್ನೆಗಳ ಪತ್ರಿಕೆಯಲ್ಲಿ ಪಾಸ್ ಆಗಲು 45 ಅಂಕಗಳನ್ನು ಪಡೀಬೇಕು. ಥಿಯರಿ ಎಕ್ಷಾಮ್ ಪಾಸ್ ಆಗೋದೇ ಇಲ್ಲಿ ದೊಡ್ಡ ವಿಚಾರ.

ರಸ್ತೆಯ ನಿಯಮ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಡ್ರೈವರ್ ಇಂಪ್ರೂವ್ಮೆಂಟ್ ಪಾಯಿಂಟ್ಸ್ ಸಿಸ್ಟಮ್ (ಡಿಐಪಿಎಸ್)  ಜಾರಿಯಲ್ಲಿದೆ. ಒಬ್ಬ ಚಾಲಕ ಪರವಾನಿಗೆ ಹೊಂದಿದ ಎರಡು ವರ್ಷಗಳಲ್ಲಿ 24 ಡಿಮೆರಿಟ್ ಅಂಕಗಳನ್ನು ಸಂಗ್ರಹಿಸಿದರೆ, ಆತನ ಲೈಸೆನ್ಸ್ ಅಮಾನತುಗೊಳಿಸಲಾಗುತ್ತದೆ. ಮತ್ತೆ ಲೈಸೆನ್ಸ್ ಗಳಿಸಲು ಪರೀಕ್ಷೆ ಬರೆದು, ಪಾಸ್ ಆಗೋದು ಕಡ್ಡಾಯ.

ಸಿಂಗಾಪುರದ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟೀ ಪೀಕ್ ಅವರ್ಸ್ ನ ಲ್ಲಿ ಸಂಚಾರ ದಟ್ಟಣೆ ತಡೆಯಲು ಹಲವೆಡೆ “Electronic Road Pricing ” ಯೋಜನೆಯನ್ನು ತಂದಿದೆ. ಗೊತ್ತುಪಡಿಸಿದ ಕೆಲ ರಸ್ತೆಗಳಲ್ಲಿ ಎಲೆಕ್ಟ್ರಾನಿಕ್  ಗ್ಯಾಂಟ್ರಿಗಳನ್ನು ಇರಿಸಲಾಗಿದೆ. ಇದಕ್ಕಾಗಿ ವಾಹನಗಳ ಚಾಲಕನ ಮುಂಭಾಗದಲ್ಲಿ ಇನ್-ವೆಹಿಕಲ್ ಯೂನಿಟ್  ಎಂಬ ಸಾಧನವನ್ನು ಅಳವಡಿಸಲಾಗಿದೆ. ಆ ಯಂತ್ರದ ಮೂಲಕ ಟೋಲ್ ಬೆಲೆ ಕಡಿತಗೊಳ್ಳುತ್ತದೆ. ಇದಕ್ಕಾಗಿ ಕ್ಯಾಶ್ ಕಾರ್ಡ್ ಸಾಧನ ವಾಹನಗಳಲ್ಲಿ ಇರಿಸಿಕೊಳ್ಳೋದು ಕಡ್ಡಾಯ.

ನಮ್ಮ ಬಳಿ ಲೈಸೆನ್ಸ್ ಇದ್ರೆ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬದಲಾವಣೆ ಮಾಡಿಕೊಳ್ಳುವ ಅವಕಾಶಗಳು ಇವೆ.  ಅದರ ಸಾಹಸವೇ ಬೇಡ ಅನ್ನೋದು ನನ್ನ ಲೆಕ್ಕಾಚಾರ. ಗುರಿ ತಪ್ಪಿ, ಆಯಾ ತಪ್ಪಿ ಏನೋ ಆಗಿ, ಜೈಲಿಗೆ ಹೋಗೋದಿಕ್ಕಿಂತ, ಬೈಯುತ್ತಾ ಬೈಗುಳ ಕೇಳ್ತಾ ಹೆಜ್ಜೆ ಹೆಜ್ಜೆಗೂ ಗೇರ್ ಚೇಂಜ್ ಮಾಡ್ತಾ ಗಾಡಿ ಓಡಿ ಸಲು ನಮ್ಮ ರಸ್ತೆಗಳೇ ಸೇಫ್.

ನಮಗೆ ಆಟೋರಿಕ್ಷಗಳೇ ಜೀವಾಳ. ಸಿಗ್ನಲ್  ಜಂಪ್ ಮಾಡಿ, ಪೊಲೀಸರ ಕಣ್ಣು ತಪ್ಪಿಸಿ,  ಗಲ್ಲಿ ಗಲ್ಲಿಗಳ ಪ್ರದರ್ಶನ ಮಾಡುತ್ತಾ ಸಮಯಕ್ಕೆ ಸರಿಯಾಗಿ ತಲುಪಿಸುವ ಆಪತ್ಭಾಂಧವರು. ಆದರೆ ಇಲ್ಲಿ ಬಸ್, ರೈಲು ಹಾಗೂ ಟ್ಯಾಕ್ಸೀನೇ ಗತಿ. ಸಣ್ಣ- ಪುಟ್ಟ ದೂರಕ್ಕೆಲ್ಲ ಟ್ಯಾಕ್ಸೀ ಗಳನ್ನು ಹಿಡಿಯುವ ಹಾಗಿಲ್ಲ.  ಬಿಸಿಲು – ಮಳೆ ಲೆಕ್ಕಿಸದೇ ನಡೆಯುದೊಂದೇ ಮಾರ್ಗ.

ಈ ದೇಶ, ಉಷ್ಣವಲಯದ ಹವಾಮಾನ ಆದ ಕಾರಣ, ಇಲ್ಲಿನ ಸಾರಿಗೆಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿದೆ. ಸಿಂಗಾಪುರದ ಬಸ್ ಸಿಸ್ಟಮ್ ದೇಶದ ಮೂಲೆ ಮೂಲೆಗೂ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ. ಸಿಂಗಲ್, ಡಬಲ್ ಡೆಕ್ಕರ್ ಬಸ್ ಗಳನ್ನು ಇಲ್ಲಿ ಕಾಣಬಹುದು. SBS Transit, SMRT, Tower Transit Singapore ಮತ್ತು Go-Ahead Singapore ಕಂಪೆನಿಗಳು  ಇಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರಸ್ತುತ. 4,600 ಬಸ್ಸುಗಳು ಕಾರ್ಯಾಚರಣೆಯಲ್ಲಿವೆ. 300 ಕ್ಕೂ ಅಧಿಕ ಮಾರ್ಗಗಳಲ್ಲಿ ಈ ಬಸ್ ಗಳು ಸಂಚರಿಸುತ್ತವೆ.

ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಉದ್ದಕ್ಕೂ, ಗಾಜಿನ ಕಿಟಕಿ ಹೊಂದಿರೋದು ಇದರ ಸ್ಪೆಶ್ಯಾಲಿಟೀ. ಈ ಮೂಲಕ ಹೊರಗಿನ ನೋಟವನ್ನು ಕೂತಲ್ಲಿ ಅನುಭವಿಸುವ ಪರಿ ನಿಜಕ್ಕೂ ಅದ್ಭುತ.  ಈ ಬಸ್‌ಗಳ ಪ್ರಯಾಣಕ್ಕೆ ಟಿಕೆಟ್ ಕೊಡುವ, ಸೀಟಿ ಊದುವ ಕಂಡೆಕ್ಟರ್ ಗಳು ಇಲ್ಲ. ಆ ವ್ಯವಸ್ಥೆ ಈಜ಼ೀ ಲಿಂಕ್ ಅನ್ನೋ ಹೆಸರಿನ ಕಾರ್ಡ್ ನಲ್ಲಿ ಒಳಗೊಂಡಿದೆ.

ಅದಕ್ಕೆ ಟಾಪ್ ಅಪ್ ಮಾಡ್ತಾ ಟಿಕೆಟ್ ತರಹ ಬಳಸುವ ಪದ್ಧತಿ  ಇಲ್ಲಿಯದ್ದು. ಬಸ್ ನ ಪ್ರವೇಶ ಹಾಗೂ ಇಳಿಯುವ ಭಾಗದ ಡೋರ್ ಗಳ ಸಮೀಪದಲ್ಲಿ ಕಾರ್ಡ್ ರೀಡರ್ ಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ಈ ಕಾರ್ಡ್ ಗಳನ್ನು ಸ್ಪರ್ಶಿಸಿ  ದರ ತೆರಬೇಕಾದುದು ಪ್ರಯಾಣಿಕರ ಕೆಲಸ. ಪ್ರಾರಂಭದಲ್ಲಿ ಟ್ಯಾಪ್ ಮಾಡುವಾಗ ಈ ಕಾರ್ಡ್ ನಿಂದ ಬಸ್ ಸಂಚರಿಸುವ ಕೊನೆಯ ನಿಲ್ದಾಣದವರೆಗಿನ ಶುಲ್ಕ ಪಾವತಿಯಾ ಗುತ್ತದೆ. ಇಳಿಯುವ ಸಂದರ್ಭದಲ್ಲಿ ಮಾಡುವ ಟ್ಯಾಪ್, ಕ್ರಮಿಸಿದ ದೂರ ಹಾಗೂ ಅದರ ಮೊತ್ತಕ್ಕೆ ಅನುಗುಣವಾಗಿ ಹಣ ಕಟ್ ಆಗಿ ಉಳಿದವು ನಮ್ಮ ಕಾರ್ಡ್ ಗೆ ಬಂದು ಸೇರುತ್ತದೆ.

ಬಸ್ ನಿಲ್ಲಿಸುವ ಸಲುವಾಗಿ ಚಾಲಕನಿಗೆ ಮುನ್ಸೂಚನೆ ನೀಡಲು ಪ್ರತಿ ಆಸನಗಳ ಬಳಿಯ ರಾಡ್ ಗಳಲ್ಲಿ ಬಟನ್ ಅಳವಡಿಸಲಾಗಿದೆ. ನಮ್ಮ ನಿಲ್ದಾಣ ಸಮೀಸುತ್ತಿದ್ದಂತೆ ಬಟನ್ ಪ್ರೆಸ್ ಮಾಡಿದ್ದಲ್ಲಿ, ” ಬಸ್ ಸ್ಟಾಪಿಂಗ್” ಅನ್ನೋ ಮಾಹಿತಿ ಡಿಸ್ ಪ್ಲೇ  ಆಗುತ್ತದೆ. ಇಳಿಯಲು ಮರೆತು ಹೋಗೋದು, ನಿದ್ದೆ ಮಾಡೋದು, ಚಾಲಕನಲ್ಲಿ ಬೇಡಿಕೆ ಇಡೋದು, ಮನೆ ಮುಂದೆ ಇಳಿಸೋದು ಇವೆಲ್ಲಾ ನಮ್ಮಲ್ಲಿ ಮಾತ್ರ ನಡಿಯೋದು..!!

ಇನ್ನೂ ಬಸ್ಸಿನೊಳಗೆ ತಿನ್ನಲು, ಕುಡಿ ಯಲು ಅನುಮತಿ ಇಲ್ಲ.  ಇಲ್ಲಿ ಡ್ಯುರಿಯನ್ ಅನ್ನೋ ಹಣ್ಣು ತುಂಬಾ ಫೇಮಸ್. ಹಲಸಿನ ಹಣ್ಣಿನ ರೂಪ ಹೊಂದಿದ್ದು, ಗಾತ್ರದಲ್ಲಿ ಸಣ್ಣದು.  ಇದರ ವಾಸನೆ ತುಂಬಾ ವಿಚಿತ್ರ. ಕೆಲವರಿಗೆ ಈ ಹಣ್ಣು ಆಗೋದೇ ಇಲ್ಲ, ಇನ್ನೂ ಕೆಲವರು ತುಂಬಾ ಇಷ್ಟಪಡ್ತಾರೆ. ಆದರೆ ಈ ಹಣ್ಣಿಗೆ ಇಲ್ಲಿನ ಯಾವುದೇ ಸಾರಿಗೆ ವಾಹನಗಳಲ್ಲಿ ಪ್ರವೇಶವಿಲ್ಲ.

ಇನ್ನೊಂದು ಪ್ರಮುಖ ಸಾರಿಗೆ ವ್ಯವಸ್ಥೆ ರೈಲು . ಇದರ ಮೊದಲ ಭಾಗವಾಗಿ ಸೇವೆ ಆರಂಭವಾಗಿದ್ದು 1987 ರಲ್ಲಿ. ಇದನ್ನು  MRT (Mass Rapid Transit) ಎಂದು ಕರೀತಾರೆ. ಪ್ರಸ್ತುತ ಇಲ್ಲಿನ ರೈಲು ಮಾರ್ಗ 5 ಪ್ರಮುಖ ವಿಭಾಗಗಳಲ್ಲಿ, 119 ನಿಲ್ದಾಣಗಳೊಂದಿಗೆ ಒಟ್ಟು 198.6 ಕಿಲೋ ಮೀಟರ್ ನಷ್ಟು ದೂರಕ್ಕೆ ಸಂಪರ್ಕವನ್ನು ಹೊಂದಿದೆ.  ಈ ಪ್ರಮುಖ ರೈಲು ನಿಲ್ದಾಣಗಳಿಗೆ ಪ್ರಯಾಣಿಕರನ್ನು ತಲುಪಿಸುವ ಸಲುವಾಗಿಯೂ ಕಡಿಮೆ ದೂರದ Light Rail Transit { LRT} ಎಂಬ ಪ್ರತ್ಯೇಕ ರೈಲು ಮಾರ್ಗಗಳು ಇವೆ.

ರೈಲುಗಳಿಂದ ಹೆಚ್ಚಿನ ಪ್ರಯೋಜನವೆಂದರೆ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಾಮರ್ಥ್ಯ. ಇಲ್ಲಿನ ರೈಲು ಸೇವೆಗಳ ದರಗಳು, ಬೇರೆ ದೇಶಗಳಿಗೆ ಹೋಲಿಸಿದರೆ ತುಂಬಾ ಅಗ್ಗವಾಗಿದೆ. ಸಾರ್ವಜನಿಕ ಬಸ್ಸುಗಳಂತೆಯೇ, ಇಲ್ಲಿನ   ರೈಲುಗ ಳಲ್ಲಿ ಕಿಕ್ಕಿರಿದ ಜನಸಂದಣಿ ಸಾಮಾನ್ಯ. ಆದರೆ ಸಾರಿಗೆ ವ್ಯವಸ್ಥೆಗಳ ಸಮಯ ಪಾಲನೆ ಹಾಗೂ ಸ್ವಚ್ಛತೆ ಪ್ರಯಾಣವನ್ನು ಸುಖವಾಗಿರುಸುತ್ತವೆ. ಬಸ್ ಹಾಗೂ ಟ್ರೈನ್ ಗೆ ಹೋಲಿಸಿದ್ರೆ ಟ್ಯಾಕ್ಸೀ ಪ್ರಯಾಣ ದರ ತುಂಬಾನೇ  ದುಬಾರಿ. 1 ರಿಂದ 2 ಡಾಲರ್ ಗಳಷ್ಟು ಖರ್ಚಾಗುವ ದೂರಕ್ಕೆ ಟ್ಯಾಕ್ಸೀ ನಲ್ಲಿ ಕಡಿಮೆ ಅಂದ್ರೂ 9 ರಿಂದ 10 ಡಾಲರ್ ನೀಡಲೇಬೇಕು.

ಇನ್ನೂ ಸ್ವಂತ ವಾಹನಗಳನ್ನು ಖರೀದಿಸುವವರ ಕಥೆ ನೀವು ಕೇಳಲೇಬೇಕು. ಅದಕ್ಕೂ ನೂರಾರು ಕಾನೂನುಗಳು. ಇದರ ಮೂಲ ಉದ್ದೇಶ ಇಷ್ಟೇ, ಆದಷ್ಟು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುವ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ. ಕುತೂಹಲಕ್ಕಾಗಿ ಈ ವಿಶಿಷ್ಟ ಕಾನೂನನ್ನು ಎಳೆ ಎಳೆಯಾಗಿ ಬಿಡಿಸಿ ಹೇಳೋದಾದ್ರೆ, ಸ್ವಂತ ವಾಹನವನ್ನು ಖರೀದಿಸುವ ವ್ಯಕ್ತಿ ಮೊದಲಿಗೆ The Certificate of Entitlement { COE  } ಪಡೆಯಬೇಕು.

ಎಂಜಿನ್ ಗಾತ್ರದ ಆಧಾರದ ಮೇಲೆ ಒಂದು ಹೊಸ ವಾಹನದ ವೆಚ್ಚಕ್ಕೆ ಪ್ರತಿ COE ಶುಲ್ಕವನ್ನು ಸೇರಿಸಲಾಗುತ್ತದೆ. ಕಾರುಗಳಲ್ಲಿ ಎರಡು ವರ್ಗಗಳು . ವರ್ಗ A 1,600 ಹಾಗೂ ಕಡಿಮೆ cc ಎಂಜಿನ್,  ವರ್ಗ B 1,600 ಹಾಗೂ ಹೆಚ್ಚು cc ಎಂಜಿನ್. ವರ್ಗ A ವಾಹನಗಳಿಗೆ ಸಾಮಾನ್ಯವಾಗಿ COE ದರ ಕಡಿಮೆ. ವರ್ಗ C –  ಗೂಡ್ಸ್ ವಾಹನಗಳು ಮತ್ತು ಬಸ್ಸುಗಳು (ಸಾರ್ವಜನಿಕ ಸಾರಿಗೆ ಬಸ್ಸುಗಳು ಸೇರಿದಂತೆ). ವರ್ಗ D –  ಮೋಟಾರ್ ಸೈಕಲ್ .  ವರ್ಗ  E ಇತರೇ ವಾಹನಗಳು.  ಹೊಸದಾಗಿ ಖರೀದಿಸಲ್ಪಟ್ಟ ವಾಹನಗಳು ೧೦ ವರ್ಷಗಳ ಕಾಲ ಒಡಾಟಕ್ಕೆ ಅನುಮತಿ ಇದೆ. ಇದಕ್ಕಿಂತ ಮುಂಚೆ ನಿಷ್ಕ್ರಿಯಗೊಳಿಸಿದಲ್ಲಿ COE ನ ರಿಯಾಯಿತಿಗಾಗಿ ನಿಬಂಧನೆಗಳು ಇವೆ.

ಈ ಪ್ರಮಾಣ ಪತ್ರ ಪಡೆಯಲು ಕೂಡ ಬಿಡ್ಡಿಂಗ್ ನಡೆಯುತ್ತದೆ. ಈ ಬಿಡ್ಡಿಂಗ್ ಮಾಡಲು ಠೇವಣಿ ಬೇರೆ ಕಟ್ಟಬೇಕು. ಅದು ವಾಹನಗಳ ವಿವಿಧ ವರ್ಗಗಳಿಗೆ ಅನುಗುಣವಾಗಿ ಹಣ ನಿರ್ಧರಿಸಲಾಗುತ್ತದೆ. ಅದಾದ ಬಳಿಕ ಬಿಡ್ಡಿಂಗ್ ಆರಂಭವಾಗುತ್ತದೆ.  1 ಡಾಲರ್ ನಿಂದ ೮೦, ೦೦೦ ಡಾಲರ್  ವರೆಗೂ ಏರಿಕೆಯಾದ ವರದಿಗಳು ಇವೆ. ವಿಚಿತ್ರ ಅಂದ್ರೆ,  ಕೆಲವೊಮ್ಮೆ ವಾಹನದ ಬೆಲೆಗಿಂತ, ಪ್ರಮಾಣ ಪತ್ರಕ್ಕೆ ಸುರಿಯುವ ದುಡ್ಡೇ ಅಧಿಕವಾಗಿರುತ್ತದೆ. ಪಾವತಿಸಬೇಕಾದ ಬಿಡ್ಡಿಂಗ್ ಹಣವೂ ಕೊನೆಯಲ್ಲಿ ಕಟ್ ಆಫ್ ಬೆಲೆಯ ಮೂಲಕ ತೀರ್ಮಾನಿಸಲಾಗುತ್ತದೆ. ಇನ್ನೊಂದು ಪ್ರಮುಖ ಸಂಗತಿ, ಬಿಡ್ಡಿಂಗ್  ನಲ್ಲಿ ಭಾಗವಹಿಸಿ, ಸೆಲೆಕ್ಟ್ ಆಗಿ, ಕೊನೆಗೆ ,ತಾನೇ ಕ್ಯಾನ್ಸಲ್ ಮಾಡಿದ್ದಲ್ಲಿ ಅಂತ ವ್ಯಕ್ತಿಗಳಿಗೆ ಠೇವಣಿ ಹಣ ಕೈಗೆ ಸಿಗೋದಿಲ್ಲ.

 ಸಾರ್ವಜನಿಕರಿಗೆ ದೊರಕುವ ಸಿಒಇ ಗಳ ಸಂಖ್ಯೆಯು  “ವಾಹನ ಕೋಟಾ ವ್ಯವಸ್ಥೆ”ಯಿಂದ ನಿಯಂತ್ರಿಸಲ್ಪಡುತ್ತದೆ, ಅದು ಕೆಳಗಿನ ಷರತ್ತುಗಳ ಆಧಾರದ ಮೇಲೆ ಪ್ರತಿ 6 ತಿಂಗಳುಗಳಿಗೊಮ್ಮೆ ಲೆಕ್ಕಾಚಾರ ನಡೆಯುತ್ತದೆ. ರಸ್ತೆಗಿಳಿದ ಒಟ್ಟು ವಾಹನಗಳು, ವಾಹನ ದಟ್ಟಣೆ ಹಾಗೂ ಅವಧಿ ಮುಗಿದ  ಅಥವಾ ರದ್ದುಗೊಂಡ ಸಿಒಇ ಗಳಿಂದ ಬರುವ ಹೊಂದಾಣಿಕೆಗಳು.

 ಒಂದು ಸ್ವಂತ ವಾಹನ ಪಡಿಬೇಕಾದ್ರೆ ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ಮುಗಿಸಲೇ ಬೇಕು…!! ಇದೆ ಇಲ್ಲಿನ ಕಾನೂನು. ಇದೇ ಅಭಿವೃದ್ಧಿ ಹೊಂದಿದ ದೇಶದ ಕಾರ್ಯ ವೈಖರಿ. ಹೆಜ್ಜೆ ಹೆಜ್ಜೆಯಲ್ಲೂ ಮೆರಿಟ್ಸ್ ಹಾಗೂ ಡಿಮೆರಿಟ್ಸ್ ಕಂಡು ಹಿಡಿಯುತ್ತಾ ಮುಂದೆ ಸಾಗಿದ್ದಲ್ಲಿ ಇದು ಸಾಧ್ಯ.

 

6 comments

  1. ಪೂರ್ಣ ಪ್ರಮಾಣದಲ್ಲಿ ವಿವರಿಸಿದ್ದೀರಿ . ಧನ್ಯವಾದಗಳು !

  2. ಬಿನ್ನ ಜೀವನಕ್ರಮದ ಪರಿಚಯ ಇಷ್ಟವಾಯ್ತು. ಅಭಿನಂದನೆ!

Leave a Reply