ಪ್ರೀತಿಯ ಕಮಲ್.. ದಣಿದು ಹೋಗಿದ್ದೀರಾ..?

ಮಂಜುನಾಥ್ ಲತಾ 

ಪ್ರೀತಿಯ ಕಮಲ್ …. ದಣಿದು ಹೋಗಿದ್ದೀರಾ..?

‘ವಿಶ್ವರೂಪಂ-2’ ನೋಡಿ ಹೊರಬಂದ ಕೂಡಲೇ ಈ ಪ್ರಶ್ನೆ ಕೇಳಬೇಕೆನ್ನಿಸಿತು.

ಐದು ವರ್ಷಗಳ ಹಿಂದೆ ‘ವಿಶ್ವರೂಪಂ’ನ ಗೆಲುವಿಗಾಗಿ ಇನ್ನಿಲ್ಲದಂತೆ ದುಡಿದಿದ್ದ ಕಮಲ್ ಹಾಸನ್ ಅದನ್ನು ಮುಂದುವರಿಸಲು ಸಾಕಷ್ಟು ಕಸರತ್ತು ಮಾಡಿದಂತಿದೆ; ಈ ಕಸರತ್ತಿನಿಂದಾಗಿ ಅವರು ಬಳಲಿದಂತೆಯೂ ಕಾಣುತ್ತಿದೆ. ‘ವಿಶ್ವರೂಪಂ’ನ ಅಸಾಧಾರಣ ಸಕ್ಸಸ್ ಗಾಗಿ ಕಮಲ್ ಗೆ ಅಂದಿನ ಕಸರತ್ತು ಬೇಕಿತ್ತು ಕೂಡ.

ಆದರೆ ‘ಮಕ್ಕಳ್ ನೀದಿ ಮಯ್ಯಂ’ ರಾಜಕೀಯ ಪಕ್ಷ ಆರಂಭಿಸಿ, ಪಕ್ಷ ಸಂಘಟನೆಗೆ ತೊಡಗಿಕೊಂಡ ಕಾರಣಕ್ಕೋ ಏನೋ ‘ವಿಶ್ವರೂಪಂ-2’ನ್ನು ಸರಿಯಾಗಿ ರೂಪಿಸಲು ಗಮನಹರಿಸಲಾಗಿಲ್ಲ.

ತಮ್ಮ ಹಳೆಯ ಚಿತ್ರಗಳ ತಂತ್ರಗಾರಿಕೆಯಾದ ಭಾವುಕ, ರೊಮ್ಯಾಂಟಿಕ್ ಸನ್ನಿವೇಶಗಳನ್ನು ಸಂಯೋಜಿಸಿ ಪ್ರೇಕ್ಷಕನ ಕಣ್ಣಲ್ಲಿ ಹನಿ ತುಳುಕಿಸಲು ಯತ್ನಿಸಿದ್ದಾರೆ. ಹಿಂದಿನ ‘ವಿಶ್ವರೂಪಂ’ನ ಫೈಟ್ ಸಂಯೋಜನೆಯ ಸಕ್ಸಸ್ ಅನ್ನೇ ಇಲ್ಲಿ ಹೆಚ್ಚಿನ ರೀತಿಯಲ್ಲಿ ದುಡಿಸಿಕೊಳ್ಳಲು ಹೋಗಿದ್ದಾರೆ; ಸಾಹಸ ಸಂಯೋಜನೆಯ ದೃಶ್ಯಗಳೂ ಕೂಡ ಅದ್ಭುತವಾಗಿವೆ.

ಆದರೆ ಚಿತ್ರಕಥೆಯಲ್ಲಿ ಯಾಕೋ ಎಡವಿದಂತಿದೆ. ಮೊದಲ ಭಾಗವನ್ನು ಮುಂದುವರಿಸಲು ಹಳೆಯ ದೃಶ್ಯಗಳನ್ನೇ ರಿಪೀಟ್ ಮಾಡುತ್ತಾ ಲಿಂಕ್ ಕಲ್ಪಿಸಲು ಯತ್ನಿಸಿದ್ದಾರೆ. ತಾಂತ್ರಿಕವಾಗಿ ಹಾಲಿವುಡ್ ಶೈಲಿಯನ್ನೇ ಅನುಸರಿಸಿರುವುದು ಅವರಿಗೆ ನೆರವಾಗಿದೆ. ಆದರೆ ಚಿತ್ರಕಥೆಯ ಹೆಣಿಗೆಗೆ ಗಮನ ಹರಿಸದೆ ಹೋಗಿರುವುದರಿಂದ ಬಿಡಿಬಿಡಿ ಚಿತ್ರಗಳಾಗಿಯಷ್ಟೇ ಸಿನಿಮಾ ಉಳಿದುಕೊಂಡಿದೆ; ಹಾಗಿದ್ದರೂ ಕೆಲವಾದರೂ ಅದ್ಭುತವೆನ್ನಿಸುವ ಶಾಟ್ ಗಳನ್ನು, ದೃಶ್ಯಗಳನ್ನು ಸಂಯೋಜಿಸುವಲ್ಲಿ ಕಮಲ್ ಗೆದ್ದಿದ್ದಾರೆ.

ಉಗ್ರಗಾಮಿತ್ವದ ಪ್ರಶ್ನೆಗಳು, ಚರ್ಚೆಗಳ ಕುರಿತು ಮೊದಲ ಚಿತ್ರಕ್ಕಿಂತ ಹೆಚ್ಚು ಪಕ್ವತೆ ಗಳಿಸಿಕೊಂಡಂತಿದೆ. ಯಾಕೆಂದರೆ ‘ವಿಶ್ವರೂಪಂ’ ಬಹಳಷ್ಟು ಯಶಸ್ಸು ಕಂಡಿದ್ದಾಗ ‘ಗೌರಿ ಲಂಕೇಶ್’ ಪತ್ರಿಕೆಯಲ್ಲಿ ಜಿ. ರಾಜಶೇಖರ ಅವರು ಎತ್ತಿದ್ದ ಪ್ರಶ್ನೆಗಳು ಬಹಳ ಮುಖ್ಯವಾಗಿದ್ದವು. ಕಮಲ್ ಈ ವಿಚಾರದಲ್ಲಿ ಇನ್ನಷ್ಟು ಪ್ರಬುದ್ಧರಾಗಿದ್ದಾರೆ.

ಆದರೂ ನನ್ನ ಪ್ರೀತಿಯ ಲೆಜೆಂಡ್ ಗಳಲ್ಲೊಬ್ಬರಾದ ಕಮಲ್ ಸಿನಿಮಾಶಕ್ತಿಯಾಗಿ ಕೊಂಚ ದಣಿದಂತಿದೆ; ಮಂಕಾದಂತಿದೆ..

 

Leave a Reply