ಒಂದು ಮಳೆಗಾಲದ ನದಿ ಮತ್ತು ದಡ

ನಟರಾಜ್ ಹೊನ್ನವಳ್ಳಿ

ಪ್ರಿಯ ಸಖೀ,
ಮಳೆಗಾಲದ
ಈ ನದಿಗೆ ವಿಪರೀತ ಪ್ರವಾಹ.
ಅದು ಅಣೆಕಟ್ಟಲ್ಲಿ
ನಿಲಲೊಲ್ಲದು ದಡದ ಹಂಗಿಗೆ
ಮೈಕೊಡದು
ಕೆರೆ ಕಟ್ಟೆ ತುಂಬಿಸಿ ತೂಬ ತಪ್ಪಿಸಿ
ಎಲ್ಲೆಂದರಲ್ಲಿ ಹರಿದು
ಎಲ್ಲ ತೊಳೆದು ಬೆಳಗಿ ಹಗುರಾಗಬಲ್ಲ ಹರೆಯದುತ್ಸಾಹ.
ಹಾಗಾಗಿ
ಬೇರೆ ದಾರಿ ಹುಡುಕಿ ಧುಮುಧುಮುಕಿ ಹರಿಯುತ್ತಿದೆ
ಹಾತೊರೆಯುತ್ತಿದೆ.

ನದಿಗೆ ದಡವಿದ್ದರೆ
ಅದು ನದಿ
ದಡಕ್ಕೆ ತನ್ನಲ್ಲಿ ನದಿಯು ಹರಿದರೆ
ಮಾತ್ರ ಅದು ದಡ
ಎಂಬ ಲಿಖಿತ ನಿಯಮ ಇಬ್ಬರಿಗೂ ಗೊತ್ತು.
ಪ್ರತಿ ಮಳೆಗಾಲದಲ್ಲೂ
ಈ ದಡ
ದಡದಲ್ಲಿ ನಿಂತು ನದಿ ಹರಿಯುತ್ತಾ
ಅರಳುವುದ ನೋಡುತ್ತ
ಪುಳಕಗೊಂಡು ತೃಪ್ತಗೊಳ್ಳುತ್ತದೆ.
ಈ ನದಿ
ಅಲ್ಲಿ ಬಾಗಿ ಇಲ್ಲಿ ಬಳುಕಿ
ಇಳಿಜಾರಲ್ಲಿ
ಭೋರ್ಗರೆದು ದಡಕ್ಕಪ್ಪಳಿಸಿ
ಹೊರನೆಗೆದು ಒಳಬಂದು
ತಿರುವಿನಲ್ಲಿ ತಿರುಗಿ ಮಡುವಲ್ಲಿ ಮೊರೆದು
‘ನಾ ನಿಲ್ಲುವಳಲ್ಲಾ…..’ ಎಂದು ಧುಮುಧುಮನೆ ಹರಿಯುತ್ತದೆ.
ಇದು ಹೀಗೇ ಇರುತ್ತದೆ ಎಂದು
ಎರಡೂ
ತಿಳಿಯುತ್ತವೆ ಪ್ರತಿ ಮಳೆಗಾಲ

ಒಂದು ಶುಭ ದಿನದ
ಮಳೆ ಮುಂಜಾನೆ
ಸೂರ್ಯ ಇನ್ನೂ ಮೂಡಲು ಸಿದ್ಧವಾಗುತ್ತಿದ್ದ
ಬೆಳಗು ಬೆಳಕಾಗಲು
ತೆವಳುತಿತ್ತು
ಆಗ ನದಿ ಮತ್ತು ದಡ
ಬೇರೆಯಾಗಲು ನಿರ್ಧರಿಸಿದವು
ಯಾವತ್ತೂ
ಕೂಡಬಾರದು, ನೋಡಬಾರದು ಎಂಬ
ನಿಯಮಕ್ಕೊಳಪಟ್ಟು
ಬೇರೆಯಾದವು.

ಈ ಒಪ್ಪಂದವನ್ನು
ತಕ್ಷಣ
ಪಾಲಿಸಿದ್ದೇ ತಡ
ದಡ
ನದಿಯನ್ನು ಕಳಕೊಂಡಿತು
ನದಿ
ದಡದಿಂದ ಹರಿದು
ದಿಕ್ಕಾಪಾಲಾಯಿತು
ಆ ವರ್ಷದ
ಮಳೆಗಾಲ ಮುಗಿಯಿತು.

ಅರೆ, ಹುಚ್ಚಿ ಅಳುತ್ತೀಯ ಏಕೆ?
ನದಿ ಹರಿದಲ್ಲೆಲ್ಲಾ
ದಡ ಇರಲೇಬೇಕು ಎಂಬ ನಿಯಮವಿಲ್ಲ
ದಡ ಇರುವ ಕಡೆ ನದಿ ಬರಲೇಬೇಕೆಂಬ ಒತ್ತಾಯವಿಲ್ಲ.
ಇದ್ದರೂ ಅದು ಇಲ್ಲಿಗೆ
ಅನ್ವಯಿಸುವುದಿಲ್ಲ.
ಆದರೂ
ನಾನೂ-ನೀನೂ
ನದೀ ದಡಾ ಆಡದೆ ವಿಧಿಯಿಲ್ಲ.

1 comment

Leave a Reply