ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು..

ಚಿದಂಬರ ನರೇಂದ್ರ

ಚಹಾಕ್ಕೆ ಸಕ್ಕರೆ ಮರೆಯುತ್ತಾಳೆ
ಕಣ್ಣೀರಿಗೆ ಉಪ್ಪನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ತುಟಿಗೆ ರಂಗನ್ನು ಮರೆಯುತ್ತಾಳೆ
ಮೈ ಗೆ ಸುಗಂಧವನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ಕೂಡುವ ಲೆಕ್ಕ ಮರೆಯುತ್ತಾಳೆ
ಕಳೆಯುವ ಗಣೀತವನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ಶ್ರುತಿ ಮೀಟುವುದ ಮರೆಯುತ್ತಾಳೆ
ತಾಳ ಹಾಕುವುದನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ಕಟ್ಟಿದ ಕಥೆ ಮರೆಯುತ್ತಾಳೆ
ಹುಟ್ಟಿಸಿದ ಹಾಡನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ಹಗಲಿನ ಕತ್ತಲೆ ಮರೆಯುತ್ತಾಳೆ
ರಾತ್ರಿಯ ಬೆಳಕನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ಗಂಡನ್ನ ಮರೆಯುತ್ತಾಳೆ
ಪ್ರೇಮಿಯನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ತನ್ನನ್ನು ಮರೆಯುತ್ತಾಳೆ
ಬ್ರಹ್ಮಾಂಡವನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

ನೆನಪು ಮರೆಯುತ್ತಾಳೆ
ಕೊನೆಗೆ ಮರೆವನ್ನೂ
ಬಹುಶಃ ನಾನು ನೆನಪಿಸುವ ರೀತಿ
ಅವಳಿಗೆ ಇಷ್ಟವಿರಬೇಕು.

2 comments

Leave a Reply