ಮಳೆಯಲ್ಲೂ ಚಕೋರನ ಅರಸುತ್ತಾ..

ಸುನೀತ. ಕುಶಾಲನಗರ

“ಜಿಲ್ಲೆಯಾದ್ಯಂತ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ” -ಜಿಲ್ಲಾಧಿಕಾರಿ. ಬಿಳಿ ಚೌಕಟ್ಟಿನ ವಾಟ್ಸಾಪ್ ಇನ್‍ಬಾಕ್ಸ್ ಗೆ ಬಂದು ಬಿದ್ದ ಎಸ್.ಎಂ.ಎಸ್ ನೋಡಿ ಸಂತೋಷದ ಜೊತೆಗೆ ಜಡಿ ಮಳೆಗೆ ಹೊರಗಿಳಿಯಲಾಗದೆ ಮುದುರಿ ಕೂರಲು ಹಂಬಲಿಸುತ್ತಿದ್ದ ಜೀವಕ್ಕೆ ತುಸು ನಿರಾಳ !

ಡಿ.ಸಿ. ಅದೆಷ್ಟೋ ದೂರದಿಂದ ರಜೆ ಆದೇಶಿಸಿದರೂ ಮರುಕ್ಷಣದಲ್ಲೇ ದೂರದರ್ಶನ, ರೇಡಿಯೋ, ವಾರ್ತಾಪತ್ರಿಕೆಗಳಿಗಿಂತ ವೇಗದ ಸಂದೇಶವಾಗಿ ಮೊಬೈಲ್ ಮೂಲಕ ನಮ್ಮನ್ನು ತಲುಪಿ ಶಾಲಾ ವಿದ್ಯಾರ್ಥಿಗಳಿಗೆ ರಜೆ ತಿಳಿಸುವ ವ್ಯವಸ್ಥೆಗೆ ಅನುವು. ಏರಿಯಾದ ಒಂದು ಮನೆಗೆ ರಜೆಯ ಮಾಹಿತಿ ನೀಡಿದರೆ ಸಾಕು, ‘ನಾಳೆ ರಜಾ ಕೋಳಿ ಮಜಾ… ಮಕ್ಕಳ ಕುಣಿತ ಶುರು.’ ಇಲ್ಲವಾದರೆ ಯಾರಾದರೊಬ್ಬರು ಶಿಕ್ಷಕರು ಶಾಲೆಗೆ ತೆರಳಿ ಮಾಹಿತಿ ನೀಡಬೇಕಾಗುತ್ತದೆ.

ನಮ್ಮ ಬಾಲ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆಗೆ ದಿಢೀರ್ ರಜೆ ಕಡಿಮೆಯೆ. ಒಂದು ವೇಳೆ ರಜೆಯೇನಾದರೂ ನೀಡಿದರೂ ಅದೆಷ್ಟೋ ದೂರದಿಂದ ಹೊಳೆ, ತೋಡು, ಗದ್ದೆ ದಾಟಿ ಕಾಡ ದಾರಿಯನ್ನು ಕ್ರಮಿಸಿ ಬಸ್ ಹಿಡಿದು ಶಾಲೆ ತಲುಪಿ ಮೇಷ್ಟ್ರು ಹೇಳಿದಾಗಲಷ್ಟೇ ಗೊತ್ತು ರಜೆಯ ವಿಚಾರ. ಮತ್ತೆ ಮಳೆಯಲ್ಲಿ ನೆನೆದುಕೊಂಡೇ ಚಕೋರನ ಹುಡುಕಿ, ಹಿಂಬಾಲಿಸಿ ಆಟವಾಡುತ್ತಾ ಮನೆ ಸೇರೋ ಹೊತ್ತಿಗೆ ಮಧ್ಯಾಹ್ನವೇ ಆಗಿರುತಿತ್ತು.
ಈಗ ಬಹುತೇಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮನೆಗಳಲ್ಲಿ ದೂರದರ್ಶನ, ರೇಡಿಯೋ, ಮೊಬೈಲ್ ಇರುವುದರಿಂದ ನಮ್ಮಷ್ಟೇ ವೇಗದಲ್ಲಿ ಅವರಿಗೂ ವಿಚಾರ ತಲುಪಿ ಎಲ್ಲರಿಗೂ ಸುದ್ದಿಮುಟ್ಟಿ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಾಗುತ್ತಿದೆ.

ಆ ದಿನ ಬೆಳಗ್ಗೆಯೇ ತುಂತುರು ಮಳೆ ಪ್ರಾರಂಭವಾಗಿತ್ತು. ಆಟೋರಿಕ್ಷಾ ಮತ್ತು ಬೈಕ್‍ಗಳಲ್ಲಿ ಶಾಲಾಗೇಟ್ ಬಳಿ ಬಂದು ಇಳಿಯುತ್ತಿದ್ದ ಪುಟಾಣಿಗಳನ್ನು ನೋಡುತ್ತಾ ನಿಂತಿದ್ದೆ. ಒಂದನೇ ತರಗತಿಯ ಪುಟಾಣಿಯೊಬ್ಬ ಓಡಿ ಬಂದು “ಟೀಚರೂ… ನೆನ್ನೆ ಬಂದಿತ್ತಲ್ಲಾ ನಾಯಿ ಮರೀ ಅದರ ತಮ್ಮ ಬಂದುಂಟು” ಎಂದು ತೊದಲಿದಾಗ ಪುಟಾಣಿ ಬಿಳಿ ನಾಯಿಮರಿಯೊಂದು ಮಳೆಯಲ್ಲಿ ನೆನೆದು ಕುಯ್… ಕುಯ್… ಎನ್ನುತ್ತಾ ಮಕ್ಕಳ ಹಿಂದೆ ತರಗತಿಯೊಳಗೆಲ್ಲಾ ಓಡಾಡುತ್ತಿತ್ತು. ಹಿಂದಿನ ದಿನವೂ ಶಾಲೆಯೊಳಗೆ ಬಂದಿದ್ದ ಕಪ್ಪು ನಾಯಿ ಮರಿಯೊಂದನ್ನು ಶಾಲಾ ನಾಯಕ ಸಾಕುವುದಾಗಿ ತನ್ನ ಮನೆಗೆ ಓಯ್ದಿದ್ದ. ಮತ್ತೆ ಈ ದಿನ ಇನ್ನೊಂದು ಮರಿ. ಈ ಸುರಿ ಮಳೆಯಲಿ ಬೇಡವಾದ ಹೆಣ್ಣು ನಾಯಿ ಮರಿಗಳನ್ನು ಶಾಲಾ ಮೈದಾನದಲ್ಲಿ ಯಾರೋ ಬಿಟ್ಟು ಹೋಗಿದ್ದಾರೆ. ಅವುಗಳ ಪಾಡು ನೆನೆದು ಮರುಕ ಪಡುತ್ತಿರುವಾಗಲೇ ಮತ್ತೊಬ್ಬ ವಿದ್ಯಾರ್ಥಿ ಆ ನಾಯಿ ಮರಿಯನ್ನು ತಾನು ಒಯ್ಯುವುದಾಗಿ ಹೇಳಿ ಅದಕ್ಕೆ ಬದುಕು ಕೊಟ್ಟ.

ಪುನರ್ವಸು ಮಳೆ ಕಾಲದ ಬದಲಾವಣೆಗೆ ತಕ್ಕ ಹಾಗೆ ಭೋರ್ಗರೆದು ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಶಾಲೆಗಳಿಗೆಲ್ಲಾ ರಜೆಯಾಗಿ ಬೀಗ ಮಾತ್ರ ಉಳಿದರೆ, ಮಳೆಯನ್ನು ಲೆಕ್ಕಿಸದೆ ಕಾಡಾನೆಗಳ ಹಿಂಡು ಶಾಲಾ ಗೇಟಿನ ಬಳಿ ಮೆರವಣಿಗೆ ಮಾಡುತ್ತಿರುವುದನ್ನು ಯಾರೋ ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ‘ಶಾಲೆಗಳಿಗೆ ರಜೆ ಇರುವುದರಿಂದ ವಾಪಾಸಾಗುತ್ತಿರುವ ಕಾಡಾನೆಗಳ ಹಿಂಡು’ ಎಂದು ಅಡಿಗೆರೆ ಬರೆದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವುದನ್ನು ನೋಡಿ ಒಂದು ಕ್ಷಣ ನಗು ಆವರಿಸಿದರೂ ಮರುಕ್ಷಣವೇ ಮನದೊಳಗೆ ಭೀತಿಯ ನಡುಕ. ಹೌದು ! ಒಂದೆಡೆ ಕಾಡಾನೆಗಳ ಹಾವಳಿ, ಮತ್ತೊಂದೆಡೆ ಈಗ ಹುಲಿ ಧಾಳಿಯ ಭೀತಿ ! ಇವೆಲ್ಲದರ ಜೊತೆಗೆ ನಿಲ್ಲದೆ ಸುರಿಯುತ್ತಿರುವ ಮಳೆಯ ಜೊತೆ ಭೂಕುಸಿತ ಹಾಗೂ ಜಲಪ್ರವಾಹ !

ನಾವು ಚಿಕ್ಕವರಿದ್ದಾಗ ಕೋಳಿ ಕೂಗಿದೊಡನೆ ಏಳಬೇಕಾಗಿತ್ತು. ನಮಗಾಗಿ ಮೀಸಲಿಟ್ಟ ಕೆಲಸ ಮುಗಿಸಿ ಶಾಲೆಗೆ ಹೊರಟು ಬರುವಾಗ ಕವಲೊಡೆದ ಕಾಲುದಾರಿಗಳ ವಿವಿಧ ಭಾಗಗಳಿಂದ ಬರುತ್ತಿದ್ದ ಮಕ್ಕಳೆಲ್ಲಾ ಒಂದೆಡೆ ಸೇರಿ ಒಟ್ಟಾಗಿ ಕಥೆ, ಹಾಡು ಹೇಳುತ್ತಾ, ಕಾಡಹಣ್ಣು ತಿನ್ನುತ್ತಾ ಕಾಲುದಾರಿಗಳ ಗುಂಡಿಗಳಲ್ಲಿ ತುಂಬಿದ ಮಳೆ ನೀರಿನಲ್ಲಿ ಆಟವಾಡುತ್ತಾ ಒಟ್ಟಾಗಿ ಸಾಗುತ್ತಿದ್ದೆವು.

ಕಾಲುದಾರಿಗಳೆಲ್ಲಾ ಬಂದು ಸೇರುವ ತಾಣವೊಂದಿತ್ತು. ಅದು ನಮ್ಮ ಕಾಯುವಿಕೆಯ ಜಂಕ್ಷನ್. ಯಾವ ಕಡೆಯಿಂದ ಯಾರು ಮೊದಲು ಬರುತ್ತಾರೋ ಅವರು ಕಾಯದೇ ಹೋಗುವುದಾದರೇ ಒಂದು ಕಾಫಿ ಎಲೆಯನ್ನು ಆ ಕಾಲುದಾರಿಗೆ ಮುಖಮಾಡಿ ಅದರ ಮೇಲೊಂದು ಕಲ್ಲು ಇಟ್ಟುಹೋಗಬೇಕಿತ್ತು. ಹೀಗೆ ಕೊನೆಗೆ ಬರುವರಿಗೆ ಎಲ್ಲರೂ ಹೋಗಿದ್ದಾರೆ ಎಂಬ ಮಾಹಿತಿ ಸಿಗುತ್ತಿತ್ತು. ಕಾಫಿ ಎಲೆ ಮತ್ತು ಕಲ್ಲು ನಮ್ಮ ಸಂವಹನ ಮಾಧ್ಯಮವಾಗಿ ಸುಲಭದಲ್ಲಿ ದಕ್ಕಿ ಜಾಗೃತರಾಗುತ್ತಿದ್ದೆವು.

ಹೀಗೆ ಒಟ್ಟಾಗಿ ಸಾಗುವಾಗ ಚಕೋರ ಅಥವಾ ಅಳಿಲು ಯಾರಾದರೊಬ್ಬರ ಕಣ್ಣಿಗೆ ಬಿದ್ದರೆ ಮುಗಿಯಿತು. ಗುಡ್‍ಲಕ್, ಗುಡ್‍ಲಕ್ ಎಂದು ಎಲ್ಲರಿಗೂ ತೋರಿಸಿ ಈ ದಿನ ಎಲ್ಲವೂ ಶುಭವಾಗುವುದು ಎಂಬ ಹರ್ಷದ ಕೂಗಾಟ.

ಆಗ ಮಳೆಗಾಲವೆಂದರೆ ಎಲ್ಲೆಲ್ಲೂ ವ್ಯಾಪಿಸಿದ್ದ ದಟ್ಟ ಧೈತ್ಯ ಮರಗಿಡಗಳಿಂದ ಕಾರ್ಗತ್ತಲು. ಆದರೂ ಆನೆ, ಹುಲಿಗಳಂತಹ ಭೀತಿಯ ಹಾವಳಿಗಳಾವುದೂ ನಮ್ಮ ಬಳಿ ಸುಳಿಯದೆ ಸ್ವತಂತ್ರದ ಹಾಗೂ ನಿರ್ಭೀಡೆಯ ಬಾಲ್ಯ ನಮ್ಮದಾಗಿತ್ತು.

ಈಗ ಮನೆಯಿಂದ ಮಕ್ಕಳನ್ನು ಹೊರಡಿಸುವಾಗಲೂ, ಶಾಲೆ ಬಿಡುವ ವೇಳೆಯಲ್ಲೂ ಗುಂಪಿನಲ್ಲೇ ಹೋಗಿ ಎಲ್ಲೂ ನಿಲ್ಲಬೇಡಿ, ಬೇಗ ಬೇಗ ಮನೆ, ಶಾಲೆ ಸೇರಿಕೊಳ್ಳಿ ಎಂದು ಭಯವನ್ನು ನಾವೇ ಹುಟ್ಟು ಹಾಕಬೇಕಿದೆ. ಭಯದ ಸನ್ನಿವೇಶಗಳೇ ಸುಳಿಯದ ಆ ದಿನಗಳನ್ನು ನೆನಪಿಸುವ ಮಳೆ ಈಗ ಜೋರಾಗಿ ಹುಯ್ಯುವಾಗಲೆಲ್ಲಾ ಸದ್ದಿಲ್ಲದೆ ಹನಿಯೊಂದು ಒಳ ಹೊಕ್ಕು ಸುರಿ ಮಳೆಯಲೂ ಚಕೋರನ ಎಣಿಸಿದ ನೆನಪು ಕಚಗುಳಿ ಇಡುತ್ತಿದೆ.

Leave a Reply