ಗೋವಾ ಹೆಸರೇ ಕಮಾಲ್…

ಖುಷ್ವಂತ್ ಸಿಂಗ್ ಒಮ್ಮೆ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ….

“ನನ್ನ ಪತ್ನಿ ತೀರಿಹೋದಾಗ ನಾನು ತುಂಬ ದುಃಖದಲ್ಲಿದ್ದೆ. ಆದಷ್ಟು ಮರೆಯಲು ಯತ್ನಿಸುತ್ತಿದ್ದೆ. ಆದರೆ ಎಲ್ಲರೂ ಅದರ ಕುರಿತೇ ಮಾತಾಡುತ್ತಿದ್ದರು. ನಾನು ಕುಡಿತದಲ್ಲಿ, ಓದಿನಲ್ಲಿ ಅದನ್ನು ಮರೆಯಲು ಯತ್ನಿಸುತ್ತಿದ್ದೆ. ಜನರ ಕಾಟ ಹೆಚ್ಚಾದಾಗ ಗೋವಾಕ್ಕೆ ಯಾರಿಗೂ ಹೇಳದೆಕೇಳದೆ ಓಡಿಹೋದೆ.” ಎಂದು

ನನಗೆ ಆಶ್ಚರ್ಯವಾಯ್ತು-
ಅಷ್ಟೊಂದು ನೊಂದಜೀವಿಗೆ ನೆಮ್ಮದಿಕೊಡುವಂಥದ್ದು ಅಂಥದ್ದೇನಿದೆ ಗೋವಾದಲ್ಲಿ ಅಂತ. ಮದ್ಯ, ಮಾನಿನಿ, ಜೂಜುಗಳಾಗಿದ್ದರೆ ಅವು ಬೇರೆಕಡೆಯೂ ಸಿಗುತ್ತವಲ್ಲ..?! ಗೋವಾನೆ ಆಗಬೇಕೆ..?

ಮಾವಿನಕೆರೆ ರಂಗನಾಥನ್ ಅವರ ಕಾದಂಬರಿ “ಮಿಥುನ” ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ
ಪ್ರಕಟಗೊಳ್ಳುತ್ತಿದ್ದಾಗ ಪ್ರತಿವಾರ ತಪ್ಪದೆ ಓದುತ್ತಿದ್ದೆ. ಅದರಲ್ಲಿ ಹೀರೋ-ಹೀರೋಯಿನ್ ಓಡಿಹೋಗುವುದು ಗೋವಾಗೆ. ಅದರಲ್ಲಿನ ವರ್ಣನೆ ಗಮನಸೆಳೆದಿತ್ತು. ಅದರೊಟ್ಟಿಗೆ ನಾಯಕಿಗೆ ಮನಃಪರಿವರ್ತನೆಯಾಗಿ, ಬದುಕಿನ ಇನ್ನೊಂದು ಮುಖವನ್ನು ಆಕೆ ಒಪ್ಪಿಕೊಳ್ಳುವ ಕಥೆ ನನಗೆ ತುಂಬ ಹಿಡಿಸಿತ್ತು. ಅದೂ ನಡೆಯುವುದು ಗೋವಾದಲ್ಲಿ. ಕುತೂಹಲ ಮೊಳಕೆಯೊಡೆದದ್ದು ಹೀಗೆ.

ಕೃಷ್ಣದೇವರಾಯನನ್ನು ಕುರಿತ ಅಧ್ಯಯನವೊಂದನ್ನು ಕೈಗೊಂಡಾಗಲಂತೂ ಗೋವಾ ತನ್ನ ಇತಿಹಾಸ ಸಮೇತ ನನಗೆ ಮುಖಾಮುಖಿಯಾಯಿತು. ವಿಜಯನಗರ ಸಾಮ್ರಾಜ್ಯದ ರಾಶಿರಾಶಿ ಮುತ್ತುರತ್ನಗಳ ವ್ಯಾಪಾರದ ಕಥೆಯಿದೆಯಲ್ಲ.. ಅದು ನಿಜಕ್ಕೂ ಶುರುವಾಗುವುದು ಗೋವಾದಿಂದಲೇ. ವಿಜಯನಗರಕ್ಕೆ ಬಂದ ಪ್ರಾವಾಸಿಗರೆಲ್ಲರು ಗೋವಾ ಮೂಲಕವೇ ಪ್ರವೇಶಿಸುತ್ತಿದ್ದರು. ಆ ಮೂಲಕವೇ ಬಹುತೇಕ ಸರಕುಗಳು ಸಾಗಣೆಯಾಗುತ್ತಿದ್ದವು. ಮತ್ತು ಗೋವಾ ಇತಿಹಾಸ ಅದಕ್ಕೂ ಹಿಂದಿನಿಂದಲೂ ಇದೆ ಮತ್ತು ಮುಂದೂ ಇರುತ್ತದೆ.

 

ತೀರ ಇತ್ತೀಚೆಗೆ ಗಣಿಗಾರಿಕೆಯ ಜನ ಉಪಯೋಗಿಸಿಕೊಂಡದ್ದೂ ಗೋವಾವನ್ನೇ. ಹೀಗೆ ಗೋವಾ ನನ್ನನ್ನು ಆಕರ್ಷಿಸುತ್ತಾ ಹೋಯಿತು. ಒಂದೆರಡು ದಿನಗಳ ಮಟ್ಟಿಗೆ ಹೋಗಿಬಂದಿದ್ದೂ ಆಯ್ತು. ಆದರೆ ಅದರ ಆಕರ್ಷಣೆ ಅಷ್ಟಕ್ಕೆ ಕೊನೆಗೊಳ್ಳಲಿಲ್ಲ. ವಿಭಿನ್ನವಾದ ಏನಾದರೊಂದನ್ನು ಗೋವಾ ಕುರಿತು ಮಾಡಬೇಕೆಂಬ ಆಸೆ ಬಹುದಿನಗಳಿಂದಲೂ ಇತ್ತು. ಆದರೆ ಏನೆಂಬುದು ಹೊಳೆದಿರಲಿಲ್ಲ.ಇಂಥಾ ಸಂದರ್ಭದಲ್ಲೇ ದೊರಕಿದ್ದು ಈ “ಸಾಂಸ್ಕೃತಿಕ ಅಧ್ಯಯನ”ದ ಅವಕಾಶ.

ಹೊರಟೆ- ಗೋಮಾಂತವನ್ನು ಹುಡುಕುತ್ತಾ…

 

ಪೌರಾಣಿಕವಾಗಿ ಕಥೆಯೊಂದಿದೆ.

ಜಗತ್ತಿನೆಲ್ಲಾ ಕ್ಷತ್ರಿಯರನ್ನು ಕೊಂದು ಲೋಕವನ್ನೆಲ್ಲಾ ಗೆದ್ದ ಪರಶುರಾಮನಿಗೆ ಕಾರಣಾಂತರಗಳಿಂದ ಲೋಕಭ್ರಷ್ಟನಾಗಬೇಕಾಗಿ ಬಂತು. ಗೆದ್ದ ಎಲ್ಲ ಸ್ಥಳಗಳನ್ನೂ ಕಳೆದುಕೊಂಡು ನೆಲೆಯೇ ಇಲ್ಲದಂತಾದಾಗ ಸಹ್ಯಾದ್ರಿ ಪರ್ವತಗಳ ಕಡೆಯಿಂದ ಏಳುಬಾಣಗಳನ್ನು ಬಿಟ್ಟು, ಸಮುದ್ರದ ನೀರು ಹಿಂದೆ ಸರಿಯುವಂತೆ ಮಾಡಿದ. ಹಾಗೆ ಸಮುದ್ರ ಹಿಂದೆ ಸರಿದ ಜಾಗದಲ್ಲಿ ಸೃಷ್ಟಿಯಾದ ಹೊಸ ಭೂಭಾಗವೇ “ಗೋಮಾಂತ” ಅರ್ಥಾತ್ ಗೋವುಗಳ ನಾಡು. ಇದಕ್ಕೆ ಪರಶುರಾಮ ಕ್ಶೇತ್ರವೆಂಬ ಮತ್ತೊಂದು ಹೆಸರೂ ಇದೆ. ಈ ಕ್ಷೇತ್ರದ ಸೃಷ್ಟಿ ಮಾಡಿಕೊಂಡ ನಂತರ ಪರಶುರಾಮನು ಉತ್ತರದ ಕಡೆಯಿಂದ ಬ್ರಾಹಣರನ್ನು ಕರೆಯಿಸಿ, ಯಜ್ಞಯಾಗಾದಿಗಳಲ್ಲಿ ನಿರತನಾದನೆಂಬ ಪ್ರತೀತಿ. ಪುರಾಣ ನಂಬುವವರಿಗೆ ಇದೊಂದು ಪುಣ್ಯಕ್ಷೇತ್ರವೇ ಆಯಿತಲ್ಲ..! ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದಲ್ಲಿ, ಈ ಪುರಾಣೇತಿಹಾಸವನ್ನು ವೈಜ್ಞಾನಿಕವಾಗಿ ಹೀಗೆ ವಿಶ್ಲೇಷಿಸಬಹುದು.

ಭೂಮಿಯ ಮೇಲಿನ ಭೂಭಾಗವೆಲ್ಲವೂ ಒಂದನೊಂದು ಕಾಲದಲ್ಲಿ ಸಮುದ್ರದಿಂದ ಮೇಲೆದ್ದುಬಂದ ಪ್ರಕೃತಿಸಹಜ ಪ್ರಕ್ರಿಯೆಗಳೇ ತಾನೇ..! ಗೋವಾ ಸಹಾ ಕಾಲಾಂತರದಲ್ಲಿ ಸಮುದ್ರ ಹಿಂದೆ ಸರಿದ ಕಾರಣಕ್ಕಾಗಿಯೇ ಸೃಷ್ಟಿಯಾದ ಭೂಭಾಗ. ಇದು ಎಲ್ಲ ನಡುಗಡ್ಡೆ, ಭೂಶಿರಗಳಲ್ಲಿ ನಡೆಯುವ ಅತಿ ನಿಧಾನವಾದ ಭೌಗೋಳಿಕ ಪ್ರಕ್ರಿಯೆ. ಇದು ನಡೆದದ್ದು ಸುಮಾರು ಕ್ರಿಸ್ತಪೂರ್ವ 12,000ರ ಕಾಲಮಾನದಲ್ಲಿ. ಸಮುದ್ರತೀರದ ಭಾಗಗಳಲ್ಲಿ ದೊರಕಿರುವ ಪಳಿಯುಳಿಕೆಗಳು, ಶಂಖಚಿಪ್ಪುಗಳು, ಇದಕ್ಕೆ ಸಾಕ್ಷಿ ಒದಗಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕರಾವಳಿ ತೀರದ “ಸುರ್ಲ” ಎಂಬ ಹಳ್ಳಿಯಲ್ಲಿ 1863ರ ಸುಮಾರಿಗೆ ದೊರಕಿರುವ ಶಂಖಗಳದ್ದು ಅತಿಮುಖ್ಯ ಐತಿಹಾಸಿಕ ಪುರಾವೆ. ಚೆದುರಿದಂತಿರುವ ಸಹ್ಯಾದ್ರಿ ತಪ್ಪಲಿನ ಅನೇಕ ಹಳ್ಳಿಗಳಲ್ಲಿ ಕೂಡಾ ಈ ಶಂಖಗಳು ಮುಖ್ಯ ಪಳಿಯುಳಿಕೆಗಳು. ಸಮುದ್ರದಲೆಗಳ ತಿಕ್ಕಾಟದಿಂದಾಗಿ ಬಹುದೊಡ್ಡ ಭೂಭಾಗ ಮೇಲಕ್ಕೆ ಸರಿದುಬಂದು ಪಶ್ಚಿಮ ಕರಾವಳಿಯು ರೂಪುಗೊಂಡಿತ್ತು ಮತ್ತು ದಖ್ಖನ್ ಪ್ರಸ್ತಭೂಮಿಯು ಸೃಷ್ಟಿಯಾದದ್ದೂ ಇದೇ ರೀತಿ ತಾನೇ? ಗೋವಾ ಸಹಾ ಈ ಪ್ರಕ್ರಿಯೆಯ ಒಂದುಭಾಗ. ಅಂತೂ ಪರಶುರಾಮನ ಸೃಷ್ಟಿಗೂ ಇದಕ್ಕೂ ತಾಳೆಯಾಗಿರುವುದಕ್ಕೂ ಸಾಕು.

ಗೋವಾ ಪೌರಾಣಿಕತೆ ಇಲ್ಲಿಗೆ ಮುಗಿದಿಲ್ಲ.
ಭೀಷ್ಮಪರ್ವ, ಸ್ಕಂದಪುರಾಣ, ಸುತ ಸಮಾಹಿತಗಳಲ್ಲಿ “ಗೋವಾಪುರಿ”ಯ ಪ್ರಸ್ತಾಪವಿದೆ. ಪರಶುರಾಮ ಯಜ್ಞಗಳಿಗಾಗಿ ಪುರೋಹಿತರನ್ನು ಕರೆಸಿದನಷ್ಟೇ.. ಅವರಲ್ಲಿ ಏಳುಜನರು ಪರಶಿವನ ವಿಶೇಷಪ್ರೀತಿಗೆ ಪಾತ್ರರಾಗಿ ಸಪ್ರರ್ಷಿಗಳೆನಿಸಿದರು. ಮುಂದೆ ಸಪ್ತಕೂಟೇಶ್ವರರೆಂಬ ಹೆಸರಿನಿಂದ ಪ್ರಸಿದ್ಧರಾದರು. ಒಮ್ಮೆ ಶಿವನೇ ಪಾರ್ವತಿಯೊಡನೆ ವಿರಸವೇರ್ಪಟ್ಟಾಗ ಗೋವಾಕ್ಕೆ ಬಂದು ಕೆಲಕಾಲ ಕಳೆದನಂತೆ. ಮತ್ತೊಂದು ಪ್ರತೀತಿಯ ಪ್ರಕಾರ ಶ್ರೀಕೃಷ್ಣನು ಮಗಧದ ರಾಜನೂ, ತನ್ನ ವೈರಿಯೂ ಆದ ಆದ ಜರಾಸಂಧನನ್ನು ಸೋಲಿಸಿದ್ದು ಸಹಾ ಗೋಮಾಂಚಲದಲ್ಲಿ. ಇದು ಹರಿವಂಶ ಪುರಾಣದಲ್ಲಿ ಉಲ್ಲೇಖಿತಗೊಂಡಿದೆ. ಗೋವಾಪುರಿಯು ಏಳು ಯೋಜನಗಳಷ್ಟು ವಿಸ್ತಾರದಲ್ಲಿ ಹರಡಿಕೊಂಡಿತ್ತು ಮತ್ತು ದರ್ಶನಮಾತ್ರದಿಂದಲೇ ಪಾಪ ಪರಿಹಾರ ಮಾಡುವಷ್ಟು ಪವಿತ್ರ ಕ್ಷೇತ್ರವಾಗಿತ್ತೆಂದು ಶ್ರೀಸ್ಕಂದಪುರಾಣದ ಸಹ್ಯಾದ್ರಿಖಂಡದಲ್ಲಿ ವರ್ಣಿತಗೊಂಡಿದೆ.

ಇಷ್ಟಕ್ಕೂ “ಗೋಮಾಂತ” ಎಂಬುದರ ಅರ್ಥವೇನೆಂದು ಎಲ್ಲೂ ವಿವರಣೆ ಸಿಗುತ್ತಿಲ್ಲ.
ಗುಡ್ಡಗಾಡು, ಹುಲ್ಲುಗಾವಲಿನ ತಪ್ಪಲುಪ್ರದೇಶವಾದ್ದರಿಂದ ಗೋವಾದಲ್ಲಿ ಗೋಸಂಪತ್ತು ಸಾಕಷ್ಟಿದ್ದಿರಬಹುದು. ಗೋವಾ ಆಯಕಟ್ಟಿನ ಜಾಗದಲ್ಲಿರುವ ಬಂದರು ಪ್ರದೇಶವಾದ್ದರಿಂದ ವಿದೇಶಗಳ ದೃಷ್ಟಿ ಮೊದಲು ಗೋವಾದ ಮೇಲೆಯೇ ಬೀಳುತ್ತಿತ್ತು. ಗೋವುಗಳನ್ನು ಹೈನುಗಾರಿಕೆಗೆ ಮಾತ್ರವಲ್ಲದೆ ಮಾಂಸಕ್ಕಾಗಿಯೂ ಬಳಸುತ್ತಿದ್ದುದು ಸಾಮಾನ್ಯ. ಗೋವಾದಿಂದ ಗೋವುಗಳ ವ್ಯಾಪಾರವೂ ನಡೆಯುತ್ತಿತ್ತೇ..? ಗೋಮಾಂತ ಎಂದರೆ ಗೋವುಗಳ ಅಂತ್ಯ ಎಂದರ್ಥವೇ ಅಥವಾ ಗೋವುಗಳ ಸಾಕಣೆ ವಿಷಯದಲ್ಲಿ ಗೋವಾಪುರಿಯನ್ನು ಬಿಟ್ಟರಿಲ್ಲ ಎಂದರ್ಥವೇ? ಇರಬಹುದು, ಇರದೆಯೂ ಇರಬಹುದು. ಈ ಕುರಿತು ಹೆಚ್ಚು ಸಂಶೋಧನೆಗಳು ನಡೆಯದೆ ಇರುವುದಕ್ಕೆ ಧಾರ್ಮಿಕ ಕಾರಣಗಳೂ ಇರಬಹುದು. ಬಲ್ಲವರು ಈ ಕುರಿತು ಬೆಳಕು ಚೆಲ್ಲಲಿ ಎಂದು ಆಶಿಸಬಹುದಷ್ಟೇ.

 

Leave a Reply