ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ಮೇಲೆಯೇ ಅರ್ಥವಾಗಿದ್ದು..

ಧೂಪದ ಮಕ್ಕಳು- ಸ್ವಾಮಿ ಪೊನ್ನಾಚಿ

ನಾನು ಚಿಕ್ಕವಳಿದ್ದಾಗ ಅಲ್ಲಲ್ಲಿ ಗುಸುಗುಸು ಸುದ್ದಿಯಾಗಿ ಕೊನೆಗೆ ಪೋಲೀಸರನ್ನು ಕರೆ ತಂದ ಒಂದು ಘಟನೆ ನನಗೆ ಈಗಲೂ ನಿನ್ನೆ ಮೊನ್ನೆ ನಡೆದದ್ದೇನೋ ಎಂಬಷ್ಟು ಸ್ಪಷ್ಟವಾಗಿ ನೆನಪಿದೆ. ನಾನು ಬೆಳೆದದ್ದು ಪೂರ್ತಿಯಾಗಿ ಶಿರಸಿಯ ಕಾಡಿನ ನಡುವಿರುವ ಹಳ್ಳಿಗಳಲ್ಲಿ. ಒಮ್ಮೆ ನಾನು ಇದ್ದ ಅಮ್ಮಿನಳ್ಳಿ  ಎಂಬ ಊರಿನಿಂದ ಒಂದಿಷ್ಟು ದೂರ ಇರುವ ಊರಲ್ಲಿ ಒಬ್ಬ ತೋಟದ ಮಾಲೀಕರು ಕರೆಂಟು ಶಾಕ್ ತಗಲಿ ಸತ್ತು ಹೋದ ಸುದ್ದಿ ಬಂದಿತ್ತು. ಶಾಲೆಯಲ್ಲಿ ನನ್ನ ಸಹಪಾಠಿಗಳೆಲ್ಲರೂ ಆ ವಿಷಯವನ್ನು ಏನೋ ಆಗಬಾರದ ಅನಾಹುತ ಆಗಿ ಹೋಗಿದೆ ಎಂಬಂತೆ ಕಥೆ ಕಟ್ಟಿ  ಇಳಿ ದನಿಯಲ್ಲಿ ಹೇಳುತ್ತಿದ್ದರೆ ನಾನು ಪಿಳಿಪಿಳಿ ಕಣ್ಣು ಬಿಡುತ್ತ, ಮನೆಗೆ ಹೋಗಿ ಅಮ್ಮನ ಬಳಿ ಕೇಳಿ “ನಿನಗ್ಯಾಕೆ ಇಲ್ಲದ ಉಸಾಬರಿ” ಎಂದು ಬೈಸಿಕೊಂಡು ಸೀದಾ ಅಪ್ಪನ ಹತ್ತಿರ ಕುಳಿತು ಮುದ್ದು ಮಾಡುತ್ತ “ಅದೇನಾಯ್ತು ಅಪ್ಪಾ?” ಎಂದಿದ್ದೆ.

ನಾನೇನೇ ಕೇಳಿದರೂ ಸಲೀಸಾಗಿ ಉತ್ತರಿಸಿ ಬಿಡುವ ನನ್ನಪ್ಪ “ತೋಟಕ್ಕೆ  ಹಂದಿ ಬರಬಾರದು ಅಂತಾ ಕರೆಂಟ್  ಹಾಕಿದ್ದರಂತೆ. ಅವರಿಗೇ ತಗುಲಿ ತೀರಿಕೊಂಡರು” ಎಂದಿದ್ದರು. ಅದ್ಯಾಕೋ ನನಗೆ ಆ ಉತ್ತರ ಪೂರ್ತಿ ಆಯ್ತು ಎನ್ನಿಸಿರಲಿಲ್ಲ. ಅದು ಅಪ್ಪನಿಗೂ ಗೊತ್ತಾಗಿತ್ತು. “ತೋಟಕ್ಕೆ ಕರೆಂಟ್ ಹಾಕೋದಿದ್ದರೆ ಪರ್ಮಿಶನ್ ತಗೋಬೇಕು. ಅವರು ತಗೊಂಡಿರಲಿಲ್ಲ. ಅದಕ್ಕೆ ಅಷ್ಟೊಂದು ಗುಟ್ಟು..” ಎಂದಿದ್ದರು. ಆದರೂ ವಿಷಯ ಮತ್ತೇನೋ ಇದೆ ಎನ್ನಿಸಿ ಪುನಃ ಶಾಲೆಗೇ ಹೋಗಿ ವಿಚಾರಿಸಿದ್ದೆ.

ತೋಟದ ಯಜಮಾನರು ತೋಟದ ಸುತ್ತಲೂ ಐಬಿಎಕ್ಸ್ ಹಾಕಿಸಿದ್ದರಂತೆ. ಬೆಳಗೆದ್ದು ಸ್ವಿಚ್ ಬಂದು ಮಾಡಿ ತೋಟದ ಕಡೆ ಹೋಗಿದ್ದರಂತೆ. ಆದರೆ ಅವರ ಹೆಂಡತಿ ಅದು ಪಂಪ್ ಸೆಟ್ ಎಂದುಕೊಂಡು ಮತ್ತೆ ಸ್ವಿಚ್ ಆನ್ ಮಾಡಿಬಿಟ್ಟಿದ್ದರು. ಹೇಗೂ ಕರೆಂಟ್ ಕನೆಕ್ಷನ್ ಇಲ್ಲ ಎಂದು ತಂತಿ ಮುಟ್ಟಿದ  ಯಜಮಾನರು ಅಲ್ಲೇ ಹೆಣವಾಗಿದ್ದರು. ಗಂಡ ಬರದೇ ಬಹಳ ಹೊತ್ತಾಯಿತಲ್ಲ ಎಂದು ಹೆಂಡತಿ ಹೋಗಿ ನೋಡಿದಾಗಲೇ ವಿಷಯ ಗೊತ್ತಾಗಿದ್ದು. ಆದರೆ ಆ ಪ್ರಕರಣ  ಕೊಲೆ ಎನ್ನಿಸಿಕೊಂಡು ಬಿಡುತ್ತದೇನೋ ಎಂಬುದು ಅಲ್ಲಿನವರ ಭಯ. ಜೊತೆಗೆ ಅನುಮತಿ ಪಡೆಯದೇ  ಐಬಿಎಕ್ಸ್   ಹಾಕಿಸಿದ ಪ್ರಕರಣ ಬೇರೆ. ಹೀಗಾಗಿ ಗುಸುಗುಸು ಜೋರಾಗಿಯೇ ಇತ್ತು. ಅದೇಕೋ ಈ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಬಿಟ್ಟಿತ್ತು.

ಗೊತ್ತಿಲ್ಲದೇ ಸ್ವಿಚ್ ಹಾಕಿದ ಆ ಹೆಂಡತಿಗೆ ತನ್ನಿಂದಾಗಿಯೇ ಗಂಡ ಅವಘಡಕ್ಕೆ ಬಲಿಯಾಗಬೇಕಾಯಿತು ಎಂಬ ಪಾಪಪ್ರಜ್ಞೆ ಕಾಡುತ್ತಿರಬಹುದೇ? ಹಂದಿಗೆ ಎಂದು ಹಾಕಿದ ವಿದ್ಯುತ್ ತಂತಿ ತನ್ನನ್ನೇ ಬಲಿ ತೆಗೆದುಕೊಳ್ಳುವಾಗ ಆ ಮನುಷ್ಯನ ಆಲೋಚನೆ ಏನಾಗಿರಬಹುದು ಎಂದೆಲ್ಲ ಯೋಚಿಸಿ ಯೋಚಿಸಿ ನಾನು ಹೈರಾಣಾಗಿದ್ದಷ್ಟೇ ಅಲ್ಲದೇ  ಅಮ್ಮನ ಬಳಿಯೂ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿ ಅವರನ್ನೂ  ಕಂಗೆಡಿಸಿ ಬಿಟ್ಟಿದ್ದೆ. ಕೊನೆ ಕೊನೆಗಂತೂ ಅಮ್ಮ ನನ್ನ ಈ ಪ್ರಶ್ನೆಗಳಿಂದ ರೋಸಿ ಹೋಗಿ “ತಲೆ ತುಂಬಾ ಅದೇ ಪ್ರಶ್ನೆಗಳು ಗಿರಗಿಟ್ಲೆ ಸುತ್ತುತ್ತಿದೆ. ಮತ್ತೆ ಆ ಬಗ್ಗೆ ಮಾತನಾಡಬೇಡ” ಎಂದು ಹಿಗ್ಗಾಮುಗ್ಗಾ ಬೈದು ಸುಮ್ಮನಾಗಿಸಿದ್ದರು.

ಮೊನ್ನೆ ಸ್ವಾಮಿ ಪೊನ್ನಾಚಿಯವರ  ‘ಧೂಪದ ಮಕ್ಕಳು’  ಕಥಾ ಸಂಕಲನ  ಓದುವಾಗ ಈ ಘಟನೆ ಮತ್ತೆ ಮತ್ತೆ ನೆನಪಾಯ್ತು  ‘ಹೀಗೊಂದು ಭೂಮಿಗೀತ’ದಲ್ಲಿ ಮಗ ಮುಂದೆ ಓದಿಸಲಿಲ್ಲ ಎಂದು ಮನೆ ಬಿಟ್ಟು ಹೋದವನು ವಾರವಾದರೂ ಮರಳಿ ಬರದೇ ಕಂಗೆಡುವಂತೆ ಮಾಡುತ್ತಾನೆ. ಮಗನ ವಿದ್ಯಾಭ್ಯಾಸಕ್ಕೆ ಹಣ ಸೇರಿಸುವ ಆಸೆಗೆ ಬಿದ್ದು ಈ ವರ್ಷದ  ಬೆಳೆ ಸರಿಯಾಗಿ ಕೈಗೆ ಸಿಕ್ಕರೆ ಏನಾದರೂ ಮಾಡಬಹುದೆಂದು ಗದ್ದೆ ಕಾಯಲು ವಿದ್ಯುತ್ ತಂತಿ ಹಾಕಿದರೆ ಅದಕ್ಕೆ ಮಗನೇ ಸಿಕ್ಕು ಎಚ್ಚರ ತಪ್ಪಿರುವ ಧಾರುಣ ಘಟನೆಯನ್ನು ಓದುವಾಗಲೆಲ್ಲ ಮತ್ತದೇ ಪ್ರಶ್ನೆ. ತನ್ನದೇ ಮಗ ತಾನು ಮುಂದೆ ಓದಿಸಲು ಬಯಸಿದ ಮಗ, ತಾನು ಹಾಕಿದ ಕರೆಂಟ್ ಗೆ ತಗುಲಿದರೆ ಅಪ್ಪ ಆದವನ ಮನಸ್ಥಿತಿ ಹೇಗಿರಬೇಡ? ಮನೆ ಬಿಟ್ಟು ಹೋಗಿ ಅಪ್ಪನಿಗೆ ಒಂದಿಷ್ಟು ಭಯ ಪಡಿಸಿ ಮುಂದೆ ಓದಿಸಲು ಪ್ರಯತ್ನಿಸುತ್ತಿದ್ದ ಹುಡುಗ ಹಠಾತ್ ಆಗಿ ತನ್ನದೇ ತೋಟದ ಮೂಲೆಯೊಂದರಲ್ಲಿ ಅಡಗಿ ಕುಳಿತಲ್ಲೆ ಕರೆಂಟ್ ಗೆ ಸಿಕ್ಕಿ ಹಾಕಿಕೊಂಡವನ ಮನಸ್ಥಿತಿ ಹೇಗಿದ್ದಿರಬಹುದು? ಯಾಕೋ ಯೋಚಿಸಿದಂತೆಲ್ಲ ನಾನು ಏಳನೇ ತರಗತಿಯಲ್ಲಿ ಅನುಭವಿಸಿದ ಒಂದು ರೀತಿಯ ತಲ್ಲಣ ಮತ್ತೆ ಪ್ರಾರಂಭವಾಯಿತು. ಇಂತಹ ಹಲವಾರು ಕಥೆಗಳಿರುವ ಸ್ವಾಮಿ ಪೊನ್ನಾಚಿಯವರ ‘ಧೂಪದ ಮಕ್ಕಳು’ ನನ್ನ ಈ ವಾರದ ರೆಕಮಂಡ್.

ಹಿಂದೆ ಕಾಡಿನಲ್ಲಿ ಒಂದೆರಡು ದಿನ ಕಳೆಯಲೆಂದು ಹೊರಟಿದ್ದೆವು. ದಾರಿಯುದ್ದಕ್ಕೂ ಹೂ ಮಾಲೆ ಹಿಡಿದ ಮಕ್ಕಳು.  ಗಾಡಿ ಒಂದಿಷ್ಟು ನಿಧಾನಿಸಿದರೂ ಸಾಕು ಕನಸು ಕಂಗಳ ಹೊತ್ತು ಓಡೋಡಿ ಬಂದು ಮಾಲೆ ಹಿಡಿದ ಕೈಯ್ಯನ್ನು ಮುಂದೆ ಚಾಚಿ ನಿಲ್ಲುತ್ತಿದ್ದರು.  ಹೂವೇ ಮುಡಿಯದ ನಾನು ಕೊಳ್ಳುವಂತೆಯೂ ಇಲ್ಲ, ಬೇಡ ಎಂದರೆ ಆ ಪುಟ್ಟ ಮಕ್ಕಳ ಮುಖ ಬಾಡುತ್ತದೆ. ಆದರೆ ಹೂವನ್ನು ಕೊಂಡು ಮಾಡುವುದೇನು ಎಂಬ ಪ್ರಶ್ನೆ.  ನಂತರ ಮೂರು ದಿನ ಕಾಡಲ್ಲಿ ಕಳೆದು ಜೊಯ್ಡಾ ಬಳಿ ಹೋದರೆ ಅಲ್ಲಿ ಧೂಪ ಮಾರುವವರು ನಾವಿದ್ದಲ್ಲಿಗೇ ಬರುತ್ತಿದ್ದರು. ಒಂದಿಷ್ಟು ಮರದ ಚಕ್ಕೆ ತೋರಿಸಿ ಧೂಪ ಕೊಂಡುಕೊಳ್ಳಲು ಒತ್ತಾಯ. ಇದು ನಿಜಕ್ಕೂ ಧೂಪವೇನಾ ಎಂದು ಕೇಳಿದರೆ ಸುಮ್ಮನೆ ನಕ್ಕು ಬಿಡುವ ಮುಗ್ಧ ಮಕ್ಕಳು ಅವರು. ಇದೆಲ್ಲ ಬಹಳ ವರ್ಷ ಹಿಂದಿನ ಮಾತು.

ಇತ್ತೀಚೆಗೆ ಹೋದಾಗ ಈ ಧೂಪದ ಮಕ್ಕಳು ಕಾಣಿಸುತ್ತಿಲ್ಲವಲ್ಲ ಎಂದು ಹುಡುಕುತ್ತಿದ್ದೆ. ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ಮೇಲೆಯೇ ಅರ್ಥವಾಗಿದ್ದು.  ಅಂದಹಾಗೆ ಈಗ ಜೊಯ್ಡಾದಲ್ಲಿ ಧೂಪ ಬೇಕು ಎಂದರೆ ಅಂಗಡಿಗೇ ಹೋಗಿ ಕೊಳ್ಳಬೇಕು. ಒಳ್ಳೆಯ ಕ್ವಾಲಿಟಿ ಧೂಪ ಎಂದು ಹೆಚ್ಚು ಹಣ ಕೊಟ್ಟು ಕೊಂಡು ತಂದು ಸಮಾಧಾನ ಮಾಡಿಕೊಳ್ಳಬೇಕು.

ಆದರೆ ಆ ಮಕ್ಕಳ ಜೊತೆ ತಮಾಷೆ ಮಾಡುತ್ತ  ತಮಾಷೆ ಮಾಡುತ್ತ, “ನಂಗೊತ್ತಿಲ್ಲ ಅಂದ್ಕೊಂಡಿದ್ದೆ? ಇದು ಧೂಪಾನೇ ಅಲ್ಲ. ಬರೀ ಮರದ ಚಕ್ಕೆ. ನಮಗೇ ಸುಳ್ಳು ಹೇಳ್ತೆ?” ಎಂದು ಸಿಟ್ಟು ಮಾಡಿದಂತೆ ನಟಿಸುತ್ತ, ಆ ಮಕ್ಕಳನ್ನು ರೇಗಿಸುತ್ತ, ಅಚ್ಚರಿಯಿಂದ ರಂಗೇರುವ ಆ ಮಕ್ಕಳ ಮುಖವನ್ನು ನೋಡುವ ಅವಕಾಶ ಈಗ ತಪ್ಪಿ ಹೋಗಿದೆ. ಆದರೆ ಆ ಮಕ್ಕಳೆಲ್ಲ ಈಗ ಶಾಲೆಗೆ ಹೋಗಿ ಕಲಿಯುತ್ತಿರಬಹುದು ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ.

‘ಧೂಪದ ಮಕ್ಕಳು’ ಕಥೆಯಲ್ಲೂ ಸ್ವಾಮಿ ಪೊನ್ನಾಚಿಯವರು ಈ ಧೂಪದ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಲು ಇನ್ನಿಲ್ಲದಂತೆ ಒದ್ದಾಡುವ ಮೇಷ್ಟ್ರು ಕಾಣುತ್ತಾರೆ. ಪ್ರತಿದಿನ ಬಸ್ಸು ಹಾಳಾಗಿ, ಈ ಸೋಲಿಗರ ಮಕ್ಕಳು ಶಾಲೆಗೆ ಬರುವಂತಾಗಲಿ ಎಂದು ಬಯಸುವ ಈ ಮೇಷ್ಟ್ರ ಅಂತಃಕರಣ ದೊಡ್ಡದು.

ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿ ಒಂದು ಸುದ್ದಿ ಓದಿದ್ದೆ. ಶಾಲೆಯಲ್ಲಿ ಹೋಮ್ ವರ್ಕ್ ಮಾಡಲಿಲ್ಲ ಎಂದು ಆ ಹುಡುಗನಿಗೆ ವರ್ಗ ಶಿಕ್ಷಕಿ ಒಂದಿಷ್ಟು ಗದರಿದ್ದರು. ನಂತರ ಎರಡು ದಿನ ಆತ ಶಾಲೆಗೇ ಬಂದಿರಲಿಲ್ಲ. ಮೂರನೆಯ ದಿನ ಹುಡುಗ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಸುದ್ದಿ ತಲುಪಿತ್ತು. ಹೋಂ ವರ್ಕ್ ಯಾಕೆ ಮಾಡಲಿಲ್ಲ ಎಂದು ಕೇಳಿದ ಶಿಕ್ಷಕಿ ಪೋಲಿಸರ ಅತಿಥಿಯಾಗಿದ್ದರು. ನಿಜಕ್ಕೂ ಈ ಘಟನೆ ನನ್ನನ್ನು ತುಂಬಾ ಕಾಡಿತ್ತು.

“ಯಾಕ್ರಿ ಈ ವರ್ಷ ನಿಮ್ಮ ವಿಷಯದಲ್ಲಿ ಹಂಡ್ರೆಡ್ ಪರ್ಸೆಂಟ್ ಆಗಲಿಲ್ಲ?” ಇದು ಪ್ರತಿ ವರ್ಷವೂ ಹತ್ತನೇ ತರಗತಿಯ ರಿಸಲ್ಟ್ ಬಂದ ತಕ್ಷಣ ನನಗೆ ಮೇಲಾಧಿಕಾರಿಗಳಿಂದ ಎದುರಾಗುವ ಪ್ರಶ್ನೆ ಇದು. ಒಂದೇ ವಿದ್ಯಾರ್ಥಿ ಫೇಲ್ ಆಗಿರೋದು’ ನನ್ನ ಧ್ವನಿ ನನಗೇ ಕೇಳದಷ್ಟು ಚಿಕ್ಕದಾಗಿರುತ್ತದೆ. ನಾನೇನೋ ಯಾರದ್ದೋ ತಲೆ ಕಡಿದಿದ್ದೇನೆ ಇನ್ನೇನು ಗಲ್ಲಿಗೆ ಹಾಕಬೇಕು, ಅದಕ್ಕೂ ಮೊದಲು ನನ್ನ ಮೇಲೊಂದಿಷ್ಟು ಆರೋಪ ಹೊರಿಸಬೇಕು ಎಂಬಂತೆ ಗುರಾಯಿಸುವಾಗಲೆಲ್ಲ ನಾನು ಅಸಹಾಯಕತೆಯಿಂದ ಕಂಗೆಡುತ್ತೇನೆ. ಯಾಕೆಂದರೆ ಯಾವುದೇ ಮಗುವಿಗೆ ಓದು ಎಂದು ಒತ್ತಾಯ ಹೇರುವಂತಿಲ್ಲ. ಹೋಂ ವರ್ಕ್ ಏಕೆ ಮಾಡಲಿಲ್ಲ ಎಂದು ಒಂದು ಏಟು ಹಾಕುವಂತಿಲ್ಲ. ಪದ್ಯ ಬಾಯಿ ಪಾಠ ಮಾಡಲಿಲ್ಲ ಎಂದು ಗದರುವಂತಿಲ್ಲ, ಕಲಿಸಿದ ಪಾಠ ಏಕೆ ಓದಲಿಲ್ಲ ಎಂದು ಧ್ವನಿ ಎತ್ತರಿಸಿ ಕೇಳುವಂತೆಯೇ ಇಲ್ಲ. ಹಾಗೇನಾದರೂ ನಾನು ಧ್ವನಿ ಎತ್ತರಿಸಿ ಗದರಿದ ರಾತ್ರಿ ನನಗೆ ನಿದ್ದೆ ಇರುವುದಿಲ್ಲ. ಮಾರನೆಯ ದಿನ ಶಾಲೆಗೆ ಹೋಗಿ ಆ ಮಗು ಶಾಲೆಗೆ ಬಂದಿದೆ ಎಂದು ಖಚಿತ ಪಡಿಸಿಕೊಳ್ಳುವವರೆಗೆ ನನ್ನ ಉಸಿರಾಟ ಸ್ಥಿಮಿತದಲ್ಲಿ ಇರುವುದಿಲ್ಲ. ನಾನು ಗದರಿದ ಕಾರಣಕ್ಕೇ ಆ ಮಗು ಏನಾದರೂ ಮಾಡಿಕೊಂಡು ಬಿಟ್ಟರೆ…ರೆ… ನಾನು ಬೈಯ್ದೆ ಎಂದು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತು, ಆ ಮಗುವಿನ ಪಾಲಕರು ನಾಳೆ ಶಾಲೆಯ ಹತ್ತಿರ ಬಂದು ನನ್ನೊಡನೆ ಜಗಳಕ್ಕೆ ನಿಂತರೆ….ಎನ್ನುವ ತಲ್ಲಣದಲ್ಲಿ ನಾನು ನಾನಾಗಿರುವುದಿಲ್ಲ.

ಕೆಲ ವರ್ಷಗಳ ಹಿಂದೆ ನಾನು ಬೇರೆಡೆ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯೊಬ್ಬರು ಒಂದು ಮಗುವಿಗೆ ಎರಡೇಟು ಹೊಡೆದಿದ್ದರಂತೆ. ಪಾಪ  ಅವರು ರಾತ್ರಿ ಹತ್ತು ಗಂಟೆ ಅಂತಿಲ್ಲ, ಹನ್ನೊಂದು ಗಂಟೆ ಅಂತಿಲ್ಲ, ಮತ್ತೆ ಮತ್ತೆ ಫೋನ್ ಮಾಡಿ ಅಲ್ಲಿಯ ಲೋಕಲ್ ಪತ್ರಿಕೆಗೆ ವಿಷಯ ಕಳಿಸಿದ್ದಾರೋ ಕೇಳಿ ಎನ್ನುತ್ತ ಅಲವತ್ತು ಕೊಂಡಿದ್ದರು. ಇಷ್ಟೆಲ್ಲ ನರಳಾಟಕ್ಕಿಂತ ಮಕ್ಕಳು ಹೇಗಿರುತ್ತಾವೋ ಹಾಗೇ ಬಿಟ್ಟು ಬಿಡೋಣ ಅಂದರೆ ಅದಾದರೂ ಸಾಧ್ಯವೇ? ಖಂಡಿತಾ ಇಲ್ಲ. ಮತ್ತದೇ  ಶೇಕಡಾವಾರು ಫಲಿತಾಂಶ ಕಡಿಮೆಯಾಗಿದ್ದಕ್ಕೆ ತಲೆ ತಗ್ಗಿಸಿ ಉತ್ತರ ಕೊಡಬೇಕು, ಮೆಮೋಗೆ ಉತ್ತರಿಸಬೇಕು. ಇಷ್ಟೆಲ್ಲದರ ನಡುವೆ ಯಾಕಾದರೂ ಬಯಸಿ ಬಯಸಿ ಶಿಕ್ಷಕಿಯಾದೆನೋ ಎಂಬ ಹಳಹಳಿಕೆ ದಿನಕ್ಕೊಮ್ಮೆಯಾದರೂ ಮೂಡದಿದ್ದರೆ ಆಗ ಹೇಳಿ.

‘ಧೂಪದ ಮಕ್ಕಳು’ ಕಥೆಯಲ್ಲೂ  ರಂಗಪ್ಪ ಎನ್ನುವ ಹುಡುಗನನ್ನು ಶಾಲೆಗೆ ತರಲು ಇನ್ನಿಲ್ಲದಂತೆ ಮಾಡಿದ ಮೇಷ್ಟ್ರ ಮೊಬೈಲನ್ನೇ ಎತ್ತಿಕೊಂಡು ಓಡಿ ಹೋಗುವುದು ಇಡೀ ವರ್ತಮಾನದ ಅಣಕದಂತೆ ಭಾಸವಾಗುತ್ತದೆ. ಮೊಬೈಲ್ ಕದ್ದುಕೊಂಡು ಹೋದವನನ್ನು ಒಂದಿಷ್ಟು ಗದರಿಸಿದ್ದಕ್ಕೆ ಮೇಷ್ಟ್ರೇ ಪಶ್ಚಾತಾಪ ಪಡುವ ವಾತಾವರಣ ನಿರ್ಮಾಣವಾಗುತ್ತದೆ. ರಂಗಪ್ಪನ ಅಪ್ಪ-ಅಮ್ಮ ಬಂದು ತಮ್ಮ ಮಗ ಕಾಣದೇ ಇರೋದಕ್ಕೆ ಮೇಷ್ಟ್ರೇ ಕಾರಣ ಎಂದು ಗಲಾಟೆ ಎಬ್ಬಿಸುವಾಗ ಈ ಮೇಷ್ಟ್ರೆಂಬ ಮೇಷ್ಟ್ರು  ಅಸಹಾಯಕರಾಗಿ ನಿಲ್ಲುವುದನ್ನು ನೋಡುವುದೇ ಒಂದು ಹಿಂಸೆ.

ಊರಲ್ಲೆಲ್ಲೋ ಗಲಾಟೆ ಮಾಡಿದವನಿಗೂ “ನಿಂಗೆ ಶಾಲೆಲಿ ಇದನ್ನೇ ಕಲಸ್ತ್ರೋ?” ಎಂಬ ಪ್ರಶ್ನೆ, ಯಾರನ್ನೋ ಪ್ರೀತಿಸಿ ಓಡಿ ಹೋಗುವ ಹುಡುಗಿಗೂ ಅದೇ ಪ್ರಶ್ನೆ, “ನಿಂಗೆ ಶಾಲೆಲಿ ಇದನ್ನೇ ಕಲಿಸಿದ್ದೋ?” ಅಂದರೆ ಊರಲ್ಲಿ ಆದ ಉಚಾಪತಿಗೆಲ್ಲ ಆ ಮಕ್ಕಳೊಂದಿಗೆ ದಿನದ ಆರು ತಾಸು ಕಳೆಯುವ ಶಿಕ್ಷಕರೇ ಹೊಣೆಗಾರರೇ ಹೊರತೂ  ಉಳಿದ ಹದಿನೆಂಟು ಗಂಟೆ ಜೊತೆಗಿರುವ ಪಾಲಕರಲ್ಲ ಎಂಬ ಭ್ರಮೆ. ಆದರೆ ತನ್ನದೇ ಮೊಬೈಲ್ ನ್ನು ಕದ್ದೊಯ್ದವನಿಗೂ ಗದರಲಾರದ ಅಸಹಾಯಕ ಸ್ಥಿತಿಯಲ್ಲಿರುವ ಮೇಷ್ಟ್ರು. ಇಡೀ ಕಥೆ ಪ್ರಸ್ತುತ ಸನ್ನಿವೇಶದ ವಿಡಂಬನೆಯಂತೆ ಭಾಸವಾಗುತ್ತದೆ.  ಮೊನ್ನೆಯಷ್ಟೇ ಸ್ನೇಹಿತರೊಬ್ಬರು ಕಳುಹಿಸಿದ ಮೆಸೆಜ್ ಒಂದು ಈ ಸಂದರ್ಭದಲ್ಲಿ ಪ್ರಸ್ತುತ ಎನ್ನಿಸುತ್ತಿದೆ. “ಶಾಲೆಯಲ್ಲಿ ಶಿಕ್ಷಕರಿಂದ ಮೆಲುವಾಗಿ ಹೊಡೆಯುವ ಅಧಿಕಾರವನ್ನು  ಕಸಿದುಕೊಂಡ ನಂತರ ಪೋಲೀಸರಿಗೆ ಹೊಡಿಯುವ ಕೆಲಸ ಜಾಸ್ತಿ ಆಯಿತು.” ಎಂಬ ಮಾತು ಮತ್ತೆ ಮತ್ತೆ ನೆನಪಾಗಿದ್ದು ಸ್ವಾಮಿಯವರ ಈ ಕಥೆ ಓದಿ.

ಒಂದು ಮಠದ ಪೀಠಾಧೀಶರಾದವರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಜೋರು ಚರ್ಚೆ ನಡೆದಿರುವ ಈ ಸಂದರ್ಭದಲ್ಲಿ ಸ್ವಾಮಿಯವರ ‘ಸ್ವಾಮೀಜಿಯ ಪಾದವೂ ಹೆಣದ ತಲೆಯೂ’ ಕಥೆ ತೀರಾ ವಾಸ್ತವಿಕ ಎನ್ನಿಸುವಂತಿದೆ.  ದೇವರ ಅಸ್ತಿತ್ವವನ್ನೇ ನಿರಾಕರಿಸುವ  ವ್ಯಕ್ತಿಯೊಬ್ಬನನ್ನು ಮಠಾಧೀಶರು ತಮ್ಮ ಮರಿಯನ್ನಾಗಿ ಆಯ್ಕೆ ಮಾಡುವುದು ಒಂದು ರೀತಿ ವಿಚಿತ್ರ ಎನ್ನಿಸುತ್ತದೆ. ಯೌವ್ವನದ ದಿನಗಳಲ್ಲಿ ತನ್ನ ಎಲ್ಲ ವಾಂಛೆಗಳನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆಯ ಕುರಿತು ಬಹುದೊಡ್ಡ ಚರ್ಚೆಯಾಗುತ್ತಿರುವ, ಮಠಗಳು ಅನೈತಿಕ ತಾಣಗಳಾಗುತ್ತಿರುವ ಈ ಸಂದರ್ಭದಲ್ಲಿ ಬಸವ ಎಂಬ ವೈಚಾರಿಕತೆ ತುಂಬಿಕೊಂಡ ಹುಡುಗ ಸ್ವಾಮಿಯಾಗಿ ಬದಲಾಗುವುದು ಈ ಸಮಾಜದ ದೃಷ್ಟಿಯನ್ನೇ ವಿವರಿಸುತ್ತಿದೆ ಎನ್ನಿಸಿ ಖೇದವಾಗುತ್ತದೆ. ಹೆಣ ಕಂಡರೆ ಗಡಗಡ ನಡುಗಿ ಬವಳಿ ಬಂದಂತಾಗುವ ಬಸವ ಸ್ವಾಮಿಯಾದ ನಂತರ ಹೆಣದ ತಲೆಗೆ ತನ್ನ ಕಾಲು ತಾಗಿಸುವ ಸಂದರ್ಭದಲ್ಲೂ ಕೂಡ ಅದೇರೀತಿ ಅಚೇತನನಾಗುವುದು ನಮ್ಮ ಸಮಾಜವೇ ಅಚೇತನವಾಗುತ್ತಿರುವುದನ್ನು ಹೇಳಿದಂತಿದೆ.

ಅತೀ ಬಡವರಾದ ಕೆಲವರು ತಮ್ಮ  ಬಳಿ ಇದ್ದ  ಸ್ವಲ್ಪ ಜಾಗವನ್ನೂ ಊರಿಗೆ ಅನುಕೂಲ ಆಗಲೆಂದು ಊರ ಆಸ್ಪತ್ರೆಗೋ, ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆಗಾಗಿಯೋ ಬಿಟ್ಟುಕೊಟ್ಟ ಬಹಳಷ್ಟು ಉದಾಹರಣೆಯನ್ನು ನಾನು ನೋಡಿದ್ದೇನೆ. ಎಕರೆಗಟ್ಟಲೆ ಜಾಗ ಇರುವ, ನಾಲ್ಕೈದು ತಲೆಮಾರಿನಷ್ಟು ಕುಳಿತು ತಿಂದರೂ ಕರಗದಷ್ಟು ಆಸ್ತಿ ಇರುವವರು ಊರ ಹಿತಕ್ಕೆಂದು ದಾನ ಮಾಡಿದ್ದಕ್ಕಿಂತ ಇಂತಹ ಬಡವರ ಆಸ್ತಿಯೇ ಊರ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿದ್ದು ಅದನ್ನೇ ಅವರು ಬಿಟ್ಟುಕೊಡುವ ಸಂದರ್ಭ ಮತ್ತೆ ಮತ್ತೆ ಎದುರಾಗುವುದನ್ನು ಹಿರಿಯರ ಬಾಯಿಂದ ಕಥೆಯಾಗಿ ಕೇಳಿದ್ದೇನೆ. ಶಿವನಜ್ಜಿ ಕಥೆಯಲ್ಲೂ ಅಷ್ಟೇ. ಹೆತ್ತ ಮಗನಿಂದಲೇ ಮನೆಯಿಂದ ಹೊರ ಹಾಕಿಸಿಕೊಂಡ ಶಿವನಜ್ಜಿಯ ಗುಂಟೆ ಲೆಕ್ಕದ ಜಾಗವೂ ಕೂಡ ಶಾಲೆಗೆಂದು ಬರೆಯಿಸಿಕೊಂಡು ಹೆಬ್ಬೆಟ್ಟು ಒತ್ತಿಸಿ, ಕೊನೆಗೆ ಅವಳ ಗುಡಿಸಿಲಿಗೂ ಜಾಗ ಇಲ್ಲದಂತೆ ಮಾಡಿದ  ಊರ ರಾಜಕೀಯ ಕೀಳುತನ ಕಣ್ಣಿಗೆ ಕಟ್ಟುತ್ತದೆ.

ಅಣ್ಣ ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದ ಹೊಸತು. ನಾನಾಗ ಹತ್ತನೆ ತರಗತಿಯಲ್ಲಿದ್ದೆ. ಅಲ್ಲಿಂದ ಮುಂದೆ ಪ್ರತಿ ರಜೆಯನ್ನೂ ನಾನು ಕಳೆಯುತ್ತಿದ್ದುದು ಬೆಂಗಳೂರಿನ ಅಣ್ಣನ ರೂಂ ಎಂಬ ಕಿಷ್ಕಿಂದೆಯಲ್ಲಿ. ಇರುವ ಎರಡೇ ಎರಡು ಕೋಣೆಯಲ್ಲಿ  ಮೂರು ಜನ ಸ್ನೇಹಿತರು. ಅದರ ಮಧ್ಯೆ ಪ್ರತಿ ರಜೆಯಲ್ಲೂ ನಾನು.

ಒಮ್ಮೆಯಂತೂ ಅಣ್ಣ ಹಾಗೂ ಆತನ ಸ್ನೇಹಿತರು ಆಫೀಸ್ ಗೆ ಹೋದ ಸಮಯದಲ್ಲಿ ಏನನ್ನೋ ತರುತ್ತೇನೆ ಎಂದು ಅಂಗಡಿಗೆ ಹೋದವಳು, ತಿರುಗಿ ಮನೆಗೆ ಬರಲಾಗದೇ ಒದ್ದಾಡಿದ್ದು ನನಗೆ ಬೆಂಗಳೂರಿನ ಕುರಿತು ಈಗಲು ಇರುವ ಅವ್ಯಕ್ತ ಭಯಕ್ಕೆ ಕಾರಣ. ಹೀಗಾಗಿಯೇ ಇಂದೂ ನಾನು ಬೆಂಗಳೂರಿಗೆ ಹೋದರೆ ಹೋಗುವ ಸ್ಥಳಕ್ಕೆ ಅಣ್ಣನೇ ತಲುಪಿಸಿಬರಬೇಕು. ಅಥವಾ ಜೊತೆಗೆ ಯಾರಾದರೂ ಸ್ನೇಹಿತರು ಇರಬೇಕು. ಇಲ್ಲವಾದಲ್ಲಿ ಬೆಂಗಳೂರಿನ ಜನಸಾಗರದಲ್ಲಿ ನಾನು ಮುಳುಗಿ ಹೋದೇನು. ಇದಕ್ಕೂ ಹೆಚ್ಚಾಗಿ ಎರಡು ದಿನಕ್ಕಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ಉಳಿಯುವ ಸನ್ನಿವೇಶ ಎದುರಾಗಿಬಿಟ್ಟರೆ ಎಲ್ಲಿ ಖಿನ್ನತೆಗೆ ಗುರಿಯಾಗುತ್ತೇನೋ ಎಂಬ ಆತಂಕ ಕಾಡತೊಡಗುತ್ತದೆ.. ಎಷ್ಟು ಹೊತ್ತಿಗೆ ನಮ್ಮ ಊರಿಗೆ ಹಿಂದಿರುಗೇನು ಎಂಬ ಕಳವಳವಾಗತೊಡಗುತ್ತದೆ

ಒಂದು ಸಮೀಕ್ಷೆಯ ಪ್ರಕಾರ ದಿನವೊಂದಕ್ಕೆ ಉದ್ಯೋಗ ಹುಡುಕಿ ಬೆಂಗಳೂರನ್ನು ಸೇರುವ ಜನರ ಸಂಖ್ಯೆ ಐದು ಸಾವಿರಕ್ಕಿಂತ ಹೆಚ್ಚಂತೆ. ಅದರಲ್ಲೂ ಬೆಳೆ ಇಲ್ಲದೇ, ಯಾವ ಮೂಲಭೂತ ಅಭಿವೃದ್ಧಿಯನ್ನು ಕಾಣದೇ, ಆಡಳಿತ ನಡೆಸುವ ಯಾವ ಪಕ್ಷದ ಸರಕಾರವೇ ಆಗಲಿ, ಅವರೆಲ್ಲರ ದಿವ್ಯ ನಿರ್ಲಕ್ಷಕ್ಕೆ ತುತ್ತಾಗಿ ಹಾಹಾಕಾರ ತುಂಬಿರುವ ಉತ್ತರ ಕರ್ನಾಟಕದ ಜನ ಒಂದು ಹೊತ್ತಿನ ಊಟಕ್ಕಾಗಿ ಬೆಂಗಳೂರಿನ ಕಡೆಗೆ ಮುಖ ಮಾಡುವುದು ಸಹಜ ಎಂಬಂತಾಗಿಬಿಟ್ಟಿದೆ.  ‘ಮಾಯಿ’ ಕಥೆಯಲ್ಲಿ ಸ್ವಾಮಿ ಇಂತಹುದ್ದೊಂದು ಧಾರುಣ ಕಥೆಯನ್ನು ಕಟ್ಟಿಕೊಡುತ್ತಾರೆ. ಯಾರ್ಯಾರನ್ನೋ ಓಲೈಸಿ ಗೊತ್ತಿಲ್ಲದ ಹಳ್ಳಿಯ ಮುಗ್ಧ ಹುಡುಗ ಮಲ್ಲೇಶಿ ತನ್ನವರನ್ನೆಲ್ಲ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದ ಅನಾಥ. ಮುಂದೆ ಓದಿಸುವ ಗತಿ ಇಲ್ಲದೇ ಆತನನ್ನು ಉದ್ಯೋಗ ಅರಸಿ ಹೊರಡುವಂತೆ ಹೇಳಿದ ಅಜ್ಜಿಯ ಮಾತಿಗೆ ಬೆಲೆಕೊಟ್ಟು ಬೆಂಗಳೂರೆಂಬ ಮಾಯಾ ನಗರಿಯನ್ನು ಸೇರಿದ ಮಲ್ಲೇಶಿ ಅನುಭವಿಸಿದ ಕಷ್ಟಕ್ಕೆ ಮಿತಿಯಿಲ್ಲ.

ಬೆಂಗಳೂರೆಂಬ ಜಂತರ್ ಮಂತರ್ ತನ್ನೊಳಗೆ ಸೇರಿದವರನ್ನೆಲ್ಲ ಹಾದಿ ತಪ್ಪಿಸುವ, ಅಷ್ಟೇ ನಿಯತ್ತಾಗಿ, ಚಾಲೂಕಿತನ ತೋರಿಸಿದರೆ ಬೆಳೆಸುವ ಪರಿಯನ್ನು ಸ್ವಾಮಿ “ಮಾಯಿ” ಎಂಬ ಕಥೆಯಲ್ಲಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.

ಇಡೀ ಸಂಕಲನ ನಿಂತಿದ್ದು ‘ಅಕ್ಕ ಅವನು ಸಿಕ್ಕನೆ’ ಎಂಬ ವಿಶಿಷ್ಟ  ಕಥೆಯ ಮೇಲೆ ಎಂದರೆ ತಪ್ಪಾಗಲಾರದು. ಕಥೆಯ ಪರಿಕಲ್ಪನೆ ಹಾಗೂ ಕಥೆಯನ್ನು ಕಟ್ಟುವ ತಂತ್ರಗಾರಿಕೆಯಲ್ಲಿ ನನ್ನನ್ನು ಸೆಳೆದದ್ದು ಈ ಕಥೆ. ಈ ಕಥೆಯನ್ನು ಓದಲಾದರೂ ನೀವು ಈ ಪುಸ್ತಕವನ್ನು ಓದಲೇ ಬೇಕು.

ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುತ್ತ ಸಾಗುವ ಭೂತಕಾಲದ ಕಥೆಯು ವರ್ತಮಾನದ ಆಧುನಿಕ ಜಂಜಾಟದಲ್ಲಿ ಸಿಲುಕುವ ಪರಿಯೇ ಓದುಗರನ್ನು ವಿಶಿಷ್ಟ ಸಂವೇದನೆಗೆ ಒಳಪಡಿಸುತ್ತದೆ. ಮದುವೆಯಾದ ಕೌಶಿಕ ಮಹಾರಾಜನನ್ನು ಬಿಟ್ಟು, ಉಟ್ಟ ಉಡುಗೆಯ ಬಿಸುಟು ಹೊರಡುವ ಅಕ್ಕ ನಡೆಯುತ್ತ ನಡೆಯುತ್ತ  ತಾನು ಮಾಡಿದುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತ ಸಾಗುತ್ತಾಳೆ. ಒಂಟಿ ಹೆಣ್ಣಿನ ಪಾಡನ್ನು ಹೇಳುತ್ತ, ಆ ಮಹಾರಾಜನೇನಾದರೂ  ತನ್ನನ್ನು ಹುಡುಕಿ ಬಂದರೆ ಪೋಲಿಸ್ ಕಂಪ್ಲೇಂಟ್ ಕೊಟ್ಟರಾಯಿತು ಎಂದು ಸಮಾಧಾನ ಮಾಡಿಕೊಳ್ಳುತ್ತಾಳೆ. ಅವಳೇನೋ ಸಮಾಧಾನ ಮಾಡಿಕೊಳ್ಳುತ್ತಾಳೆ ನಿಜ. ಆದರೆ ಅಕ್ಕನ ಕಥೆಯಲ್ಲಿ ಪೋಲಿಸ್ ಕಂಪ್ಲೇಂಟ್ ಕೊಡುವುದು ಅಂದರೇನು ಎನ್ನುತ್ತ ಓದುಗನಂತೂ ತೀವ್ರ ಕ್ಷೋಬೆಗೆ ಒಳಗಾಗುತ್ತಾನೆ. ನಾನಂತೂ ಸೂಕ್ಷ್ಮ ಸಂವೇದನೆಯ ಕಥೆಗಾರ ಸ್ವಾಮಿ ಯಾಕೆ ಇಲ್ಲಿ ಪೋಲಿಸ್ ಕಂಪ್ಲೇಂಟ್ ಎಂಬ ಶಬ್ಧ ಬಳಕೆ ಮಾಡಿದರು ಎಂದು ದಿಕ್ಕೆಟ್ಟು ಒಂದರಗಳಿಗೆ ಸುಮ್ಮನೆ ಕುಳಿತು ಬಿಟ್ಟೆ.

ಮುಂದೆ ಓದಿದರೆ ಅಕ್ಕ ಭೂತದಿಂದ ವರ್ತಮಾನಕ್ಕೆ ಜಿಗಿದಿದ್ದಾಳೆ. ಮಧ್ಯರಾತ್ರಿ ಯಾವುದೋ ಮಠಕ್ಕೆ ಹೋಗಿ ತಂಗಿದ್ದಾಳೆ. ಆ ಮಠದ ಕಾಮುಕ ಕಾವಿಧಾರಿಯೊಬ್ಬ ಅವಳನ್ನು ಬಳಸಿಕೊಳ್ಳಲು ನೋಡಿದ್ದಾನೆ. ಅಲ್ಲಿಂದ ಹೊರಟವಳೇ ಮಹಾಮನೆ ತಲುಪಿದ್ದಾಳೆ. ಮಹಾಮನೆಯ ಶರಣರೂ ಕೂಡ ಎಲ್ಲರೂ ಜಿನರಲ್ಲವಲ್ಲ? ಮನಸ್ಸನ್ನು ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಆದರೂ ಅಲ್ಲಮ ಹಾಗು ಅಣ್ಣ ಬಸವಣ್ಣ ಅವಳಿಗೆ ಸಾಂತ್ವನ ನೀಡಿದ್ದಾರೆ. ಅಕ್ಕ ನೀಲಾಂಬಿಕೆಗೆ ಅವಳನ್ನು ನೋಡಿಕೊಳ್ಳಲು ಹೇಳಿದ ಈ ಪುರುಷಗಣ ಅಕ್ಕನ ಚೆನ್ನಮಲ್ಲಿಕಾರ್ಜುನನ್ನು ಹುಡುಕಿಸುವ ವಾಗ್ಧಾನವನ್ನು ಮರೆತೇ ಬಿಟ್ಟಿದ್ದಾರೆ.

ಇದೀಗ ಅಕ್ಕ ಒಬ್ಬಳೇ ಒಂದು ರಾತ್ರಿಯಲ್ಲಿ ಮಹಾಮನೆ ತೊರೆದು ಶ್ರೀಶೈಲದತ್ತ ಮುಖ ಮಾಡಿದ್ದಾಳೆ. ಬಸ್ ಸ್ಟಾಂಡಿನಲ್ಲಿ ಶ್ರೀ ಶೈಲಕ್ಕೆ ಒಂದೂ ಬಸ್ ಇಲ್ಲ. ಯಾರೋ ಟ್ಯಾಕ್ಸಿಯವನು ಶ್ರೀಶೈಲ ಎಂದು ಕೂಗಿ ಕೂಗಿ ಕರೆಯುತ್ತಿದ್ದಾನೆ. ನಾಳಿನವರೆಗೆ ಕಾಯುವ ಸಹನೆ ಇಲ್ಲದೆ ಅಕ್ಕ ಹತ್ತಿರ ಹೋದರೂ ಹಿಂದೆ ಆದ ಅನುಭವ ನೆನೆದು ಹಿಂಜರಿದಿದ್ದಾಳೆ. ಆದರೆ ಟ್ಯಾಕ್ಸಿಯಲ್ಲಿ ಇನ್ನಿಬ್ಬರು ಹೆಂಗಸರೂ ಇರುವುದನ್ನು ತೋರಿಸಿ ಟ್ಯಾಕ್ಸಿ ಚಾಲಕ “ಅವರು ಶ್ರೀಶೈಲದವರೇ” ಎಂದಿದ್ದಾನೆ. ಅನುಮಾನ ಪಡುತ್ತಲೇ ಅಕ್ಕ ಟ್ಯಾಕ್ಸಿ ಏರಿದ್ದಾಳೆ. ಆದರೆ ಮಾರನೆಯ ದಿನ ಪೇಪರ್ ನಲ್ಲಿ ಭೀಕರ ಗುಂಪು ಅತ್ಯಾಚಾರಕ್ಕೀಡಾದ  ಚಿಕ್ಕದೊಂದು ಸುದ್ದಿ ಯಾವುದೋ ಪೇಪರ್ ನ ಮೂಲೆಯಲ್ಲಿ ಪ್ರಕಟವಾಗಿದೆ. ಅಕ್ಕನಿಗೆ ಅವನು ಸಿಕ್ಕುವುದಾದರೂ ಹೇಗೆ?

ಇಡೀ ಕಥೆ ನನಗೆ ಇಡೀ ಜಗತ್ತಿನ ಹೆಣ್ಣು ಕುಲದ ಕಥೆಯನ್ನು ಹೇಳುವ ರೂಪಕವಾಗಿ ಕಾಣುತ್ತಿದೆ. ಬಿಟ್ಟು ಬಂದರೂ ಮತ್ತೆ ಆತನದ್ದೇನೂ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತ, ತಾನೇ ಬಿಟ್ಟು ಬರಬಾರದಿತ್ತು ಎಂದು ತಪ್ಪನ್ನೆಲ್ಲ ತನ್ನ ಮೇಲೇಯೇ ಆರೋಪಿಸಿಕೊಳ್ಳುವ ಮನಸ್ಸು ಇಡೀ ಹೆಣ್ಣು ಕುಲದ್ದು. ಹೀಗಾಗಿಯೇ ಹೆಣ್ಣು ಭಾವನೆಗಳ ಸಂಕೋಲೆಯಲ್ಲಿ ಬಂಧಿತಳು. ಮಾಡಬೇಕೋ ಬೇಡವೋ, ಮುಂದಡಿ ಇಡಲೋ ಬೇಡವೋ, ನೋಡಿದವರು ಏನೆಂದಾರು…. ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು, ಸಂಶಯಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ಕೊನೆಗೂ ತನ್ನ ಸಂಶಯದಲ್ಲೇ ಕೊನೆಗೊಳ್ಳುವ ಹೆಣ್ಣಿನ ಜೀವನವನ್ನು ಸ್ವಾಮಿ ಅಕ್ಕ ಎನ್ನುವ ರೂಪಕದ ಒಳಗಿಟ್ಟು ಬರೆದಿದ್ದಾರೆ.

ಪ್ರತಿ ದಿನ ಪೇಪರ್ ತೆರೆದರೆ ಒಂದಲ್ಲಾ ಒಂದು  ಮೂಲೆಯಲ್ಲಿ  ಅತ್ಯಾಚಾರದ ಸುದ್ದಿ ಇದ್ದೇ ಇರುತ್ತದೆ. ಇತ್ತೀಚೆಗಂತೂ ಈ ಅತ್ಯಾಚಾರದ ಸುದ್ದಿ ತನ್ನ ಪ್ರಾಮುಖ್ಯತೆಯನ್ನೇ ಕಳೆದುಕೊಂಡು ಪ್ರತಿ ದಿನದ ಮಾಮೂಲಿ ಸುದ್ದಿಯಾಗಿ ಪತ್ರಿಕೆಯ ಯಾವುದೋ ಮುಲೆಯಲ್ಲಿ ಪೇಜ್ ಭರ್ತಿ ಮಾಡುವ ಸುದ್ದಿಯಾಗಷ್ಟೇ ಉಳಿದುಕೊಳ್ಳುತ್ತಿರುವ ಅಸಹ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾರೋ ಯಾರ ಮೇಲೋ ಅತ್ಯಾಚಾರ ಮಾಡಿದರಂತೆ, ಯಾವುದೋ ಕಾಲೇಜ್ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಿದರಂತೆ ಇವೆಲ್ಲವೂ ಮನಸ್ಸನ್ನು ತಟ್ಟದ ದಿನ ನಿತ್ಯದ ಸುದ್ದಿಯಾಗಿ ಬಿಟ್ಟಿರುವುದು ನಿಜಕ್ಕೂ ನಮ್ಮ ಮನಸ್ಸಿನ, ಭಾವನೆಗಳ ಮೇಲೆಯೇ ಅನುಮಾನ ಹುಟ್ಟಿಸುತ್ತಿದೆ. ಹೀಗಿರುವಾಗ ಅಕ್ಕ ಎಂಬ ಅಕ್ಕನ ಕಥೆಯೇ ಹೀಗಾಗಿರುವುದು ಮತ್ತು ಅದೊಂದು ಯಾವ ಪ್ರಾಮುಖ್ಯತೆಯನ್ನೂ ಪಡೆಯದ ಸುದ್ದಿಯಾಗಿರುವುದು ಮತ್ತು ಅದನ್ನು ಸ್ವಾಮಿಯವರು ವಿವರಿಸುವ ತಣ್ಣನೆಯ ಕ್ರಮವನ್ನು ನೀವು ಓದಿಯೇ ಅನುಭವಿಸಬೇಕು.

ನಮ್ಮನ್ನು ನಾವೆಷ್ಟು ಒಳ್ಳೆಯವರು, ಫರ್ಪೆಕ್ಟ್ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಬಗ್ಗೆ ಇತರರು ಏನೆಂದುಕೊಳ್ಳುತ್ತಾರೆ ಎಂಬುದನ್ನು ಎಂದಾದರೂ ಯೋಚಿಸಿದ್ದೇವೆಯೇ?  ಅದರಲ್ಲೂ ಇಂದಿನ ಅತ್ಯಾಧುನಿಕ ಜಗತ್ತಿನಲ್ಲಿ ಯಾವ ವಿಷಯವನ್ನೂ ಮುಚ್ಚಿಡಲು ಸಾಧ್ಯವೇ ಆಗದ ಸ್ಥಿತಿಯಲ್ಲಿ ನಮ್ಮ ನಮ್ಮ ಹಳವಂಡಗಳು, ತಲ್ಲಣಗಳು ಕೂಡ ಅಕ್ಕಪಕ್ಕದವರ   ಬಾಯಿಗೆ ಹುರಿಗಡಲೆ ಆಗಿಯೇ ಆಗುತ್ತದೆ.  ನಮ್ಮ ಮಟ್ಟಿಗೆ ನಾವೆಷ್ಟೇ ಸರಿಯಿದ್ದೇವೆ ಎಂದು ಯೋಚಿಸಿದರೂ ಉಳಿದವರು ನಮ್ಮ ಬಗ್ಗೆ ಹಾಗೆಯೇ ಯೋಚಿಸಲು ಸಾಧ್ಯವೇ? ನಮ್ಮ ಜೊತೆ ಎಷ್ಟು ಚಂದವಾಗಿ ಮಾತನಾಡುತ್ತಾರಲ್ಲ ಎಂದು ನಾವಂದುಕೊಂಡರೂ ಅವರ ಮನಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಭಾವನೆಗಳ ಬಗ್ಗೆ  ತಿಳಿಯಲು ಸಾಧ್ಯವೇ?

ಬೇರೆಯವರ ಕಥೆ ಬಿಡಿ, ಕಟ್ಟಿಕೊಂಡ ಗಂಡ, ಹೆಂಡತಿಯ ಬಗ್ಗೆ ಏನು ಯೋಚಿಸಬಹುದು ಹಾಗು ಹೆಂಡತಿ ಗಂಡನ ಕುರಿತಾಗಿ ಏನು ಯೋಚಿಸಬಹುದು? ಹೆತ್ತ ಮಕ್ಕಳು ನಮ್ಮ ಬಗ್ಗೆ ಏನೆಂದುಕೊಳ್ಳಬಹುದು? ಅಕ್ಕ ಪಕ್ಕದ ಮನೆಯವರಿಗೆ ನಮ್ಮ ಬಗ್ಗೆ ಇರುವ ಭಾವನೆಗಳಾದರೂ ಏನು ಎಂಬುದನ್ನು ಸ್ವಾಮಿ ಇಲ್ಲಿ  ‘ಸ್ವಗತ’ ಎನ್ನುವ ಚಂದದ ಕಥೆಯಾಗಿಸಿದ್ದಾರೆ. ಆ ಭಾವನೆಗಳನ್ನು ಓದಿಯೇ ತಿಳಿಯಬೇಕು. ಗಂಡ ಹೆಂಡತಿಯ ಬಗ್ಗೆ, ಹೆಂಡತಿ ಗಂಡನ ಬಗ್ಗೆ ಯೋಚಿಸುವ ರೀತಿ ನಿಜಕ್ಕೂ ನಮ್ಮನ್ನು ಒಮ್ಮೆ ನಮ್ಮ ಒಳಹೊಕ್ಕು ನೋಡಿಕೊಳ್ಳುವಂತೆ ಮಾಡುತ್ತದೆ. ಇಂತಹ ಕಥೆ ಕಟ್ಟುವ ತಂತ್ರವನ್ನು ಈ ಹಿಂದೆ ಬಹಳಷ್ಟು ಕಥೆಗಾರರು ಬಳಸಿದ್ದರೂ ಇಲ್ಲಿ ಸ್ವಾಮಿಯವರ ಭಾಷೆಯನ್ನು ದುಡಿಸಿಕೊಳ್ಳುವ  ಕ್ರಮವೇ ಅದನ್ನೊಂದು ಉತ್ತಮ ಕಥೆಯನ್ನಾಗಿಸಿದೆ.

ಸಂಕಲನದ ಕೊನೆಯ ಕಥೆ ‘ವಿದಾಯ’ ನನ್ನನ್ನು ಮತ್ತೆ ಮತ್ತೆ ಓದುವಂತೆ ಮಾಡಿದ ಕಥೆ. ಇಬ್ಬರು ಪ್ರೇಮಿಗಳು ಬೇರೆ ಬೇರೆಯಾದ ನಂತರ ಮತ್ತೊಮ್ಮೆ ಭೇಟಿಯಾಗುವುದು, ಆಗ ಅವರ ಮನಸ್ಸಿನಲ್ಲಿ ಕಾಡುವ ಭಾವನೆಗಳು ಇಲ್ಲಿ ಕಥೆಯಾಗಿದೆ. ಮೊದಲಿನಂತೆ ತಬ್ಬಿಕೊಳ್ಳ ಬಾರದೇ? ತನ್ನ ತಲೆಗೂದಲ್ಲಿ ಮುಖ ಹುದುಗಿಸಬಾರದೇ ಎಂದು ಆಕೆ ಬಯಸುವುದು, ಅವಳು ಮೊದಲಿನಂತೆ ತನ್ನೊಡನೆ ಇರಬಾರದೇ ಎಂದು ಆತ ಎಂದುಕೊಳ್ಳುವುದು, ಆದರೂ  ದೂರ ದೂರ ನಿಲ್ಲುವುದು ಎಲ್ಲ ವಿವರಣೆಗಳು ನವಿರಾಗಿ ನಿರೂಪಿತವಾಗಿದೆ. ಹೀಗಾಗಿಯೇ ಕಥೆಯನ್ನು ಮತ್ತೆ ಮತ್ತೆ ಓದಬೇಕೆನ್ನಿಸುವಂತೆ ಮಾಡುತ್ತದೆ

ಒಂಬತ್ತನೆ ತರಗತಿಯಲ್ಲಿ ಓದುತ್ತಿರುವ ನನ್ನ ದೊಡ್ಡ ಮಗ ಸುಪ್ರೀತ್ ಯಾವತ್ತೂ ದೆವ್ವ ಭೂತವನ್ನು ನಂಬಿದವನೇ ಅಲ್ಲ. ಆತ ಹುಟ್ಟಿದ ಮೂರೇ ತಿಂಗಳಿಗೆ ನಾನು ಪುನಃ ನನ್ನ ಡ್ಯೂಟಿಗೆ ಹಾಜರಾಗಬೇಕಿದ್ದರಿಂದ ಎಲ್ಲರನ್ನು ಬಿಟ್ಟು ಎಳೆ ಬೊಮ್ಮಟೆಯನ್ನು ಕಟ್ಟಿಕೊಂಡು, ಜೊತೆಗೊಬ್ಬ ಕೆಲಸದವಳನ್ನು ಜೊತೆ ಮಾಡಿಕೊಂಡು  ನಾನು ಬೆಳ್ತಂಗಡಿಯ ಕಾಡಿಗೆ ಹೊರಟು ಬಿಟ್ಟಿದ್ದೆ. ಶಾಲೆ ಮುಗಿಸಿ ಬಂದರೆ ಇಡೀ ದಿನ ಆತನ ಜೊತೆಗಿರುವುದೇ ಕೆಲಸ. ಹೀಗಾಗಿ ರಾಮಾಯಣ ಮಹಾಭಾರತದ ಕಥೆಗಳು ಆತನಿಗೆ ನಾಲ್ಕೈದೇ ವರ್ಷಕ್ಕೆ ರೂಢಿಯಾಗಿಬಿಟ್ಟಿತ್ತು. ಜೊತೆಯಲ್ಲಿದ್ದ ಕೆಲಸದವಳು ಅಪ್ಪಟ ದೆವ್ವಕ್ಕೆ ಹೆದರುವ, ತನ್ನ ಮೇಲೇ ದೆವ್ವ ಬಂದಿದೆ ಎಂದು ನಂಬುವವಳಾದರೂ ಯಾವುದೇ ಕಾರಣಕ್ಕೂ ಅವಳಿಗೆ ಆ ಕಥೆಗಳನ್ನು ಹೇಳಲೇಬಾರದೆಂದು ತಾಕೀತು ಮಾಡಿದ್ದೆ. ಹೀಗಾಗಿ ಇಂದು ಮಧ್ಯ ರಾತ್ರಿ ಸ್ಮಶಾನದ ಬಳಿ ಹೋಗಿ ಬಾ ಅಂದರೂ ಅಂಜದೇ ಹೋಗಿ ಬರುವ ಆತ ಮಾತ್ರ ನಮಗೆ ಅರಿವಾಗದಂತೆ ಆತನಿಗಿಂತ ನಾಲ್ಕು ವರ್ಷ ಚಿಕ್ಕವನಾಗಿರುವ ತಮ್ಮನನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು  ಭೂತ ದೆವ್ವದ ಭಯ ಹುಟ್ಟಿಸಿಬಿಟ್ಟಿದ್ದಾನೆ.  ತಾನು ಮಾತ್ರ ಅದೆಲ್ಲ ಸುಳ್ಳು ಎನ್ನುತ್ತಲೇ ತಮ್ಮ ಅದನ್ನೆಲ್ಲ ನಂಬುವಂತೆ ಮಾಡಿದ್ದು ನನಗೆ ನಿಜಕ್ಕೂ ಅಚ್ಚರಿ ಎನ್ನಿಸುತ್ತದೆ. ಈಗ ಸಣ್ಣವನ ಬಳಿ, “ಅಣ್ಣನನ್ನು ನೋಡು, ಆತ ಯಾವುದಕ್ಕೂ ಹೆದರುವುದಿಲ್ಲ”  ಎಂದರೂ ನಂಬದ ಸ್ಥಿತಿ.

ಈ ಭೂತ, ದೆವ್ವ ಎಂಬುದೆಲ್ಲ ನಮ್ಮ ಮನಸ್ಸಿನ ನಂಬಿಕೆಗಳು ಎಂಬುದನ್ನು ಸ್ವಕೇಂದ್ರಿತ ನಿರೂಪಣಾ ಕ್ರಮದಿಂದ ಹೇಳುವ ಸ್ವಾಮಿ ಈ ಭೂತ ಎನ್ನುವ ಕಥೆಯನ್ನು ಒಂದಿಷ್ಟು ಬದಲಾಯಿಸಿದರೆ ಉತ್ತಮ ಕಥೆಯಾಗ ಬಹುದಿತ್ತು ಅನ್ನಿಸಿದರೂ ಒಟ್ಟಾರೆಯಾಗಿ ಇಡೀ ಸಂಕಲನ ನಮ್ಮನ್ನು ಒಂದೇ ಗುಕ್ಕಿಗೆ ಓದಿಸುವಲ್ಲಿ ಗೆಲ್ಲುತ್ತದೆ.

5 comments

  1. ಸ್ವಾಮಿ ಪೊಣ್ಣಾಚ್ಚಿ ಅವರ ಧೂಪದ ಮಕ್ಕಳು ಕಥಾ ಸಂಕಲನದ ಪರಿಚಯ ಎಂದಿನಂತೆ ಶ್ರೀದೇವಿ ಅವರ ಜೀವನಾನುಭವಗಳ ಸಂಗತಿಯ ಮೂಲಕವೇ ಕಥಾಲೋಕವನ್ನು ಸೊಗಸಾಗಿ ಪರಿಚಿಯಿಸಿದೆ..ವಾಸ್ತವಿಕ ಸಂಗತಿಗಳ ಮೂಲಕ ಕೃತಿಯನ್ನು ಹೊಕ್ಕು ,ಅಲ್ಲಿನ ಕಥಾ ಜಗತ್ತನ್ನು ಪರಿಚಯಿಸುತ್ತಲೇ ಮತ್ತೆ ವಾಸ್ತವ ಲೋಕದ ಸಂಗತಿಗಳಿಗೆ ಲಿಂಕ್ ಮಾಡುವ ನಿಮ್ಮ ಬರವಣಿಗೆಯ ಬಗೆ ನನಗೆ ಸದಾ ಬೆರಗೆ ಶ್ರೀದೇವಿ ಅವರೆ…ಅಕ್ಕನ ಕಥೆ ಇವತ್ತಿನ ಹೆಣ್ಣುಮಕ್ಕಳ ಪಾಡಾಗುವ ಕಾಲಾಂತರದ ಸೃಷ್ಟಿ ಯನ್ನು ಓದಲೇಬೇಕೆನಿಸುತ್ತದೆ..ಲೇಖಕರ ವೈಚಾರಿಕತೆ, ಕಥೆಕಟ್ಟುವ ನೈಪುಣ್ಯ, ಇವನ್ನೆಲ್ಲಾ ಅವರ ಕಥಾ ಪರಿಚಯದ ಮೂಲಕವೇ ಕಾಣಿಸುತ್ತಿದೆ ನಿಮ್ಮ ಬರಹ…ಕಥೆಗಾರರಿಗೂ ,ಕಥೆಗಾರರನ್ನು ಅವರ ಕಥೆಗಳನ್ನು ಪರಿಚಯಿಸುವ ಕಥಾಕಣಜವಾದ ಶ್ರೀದೇವಿ ಕೆರೆಮನೆ ಅವರಿಗೂ ಧನ್ಯವಾದಗಳು.
    ವಾರಕ್ಕೊಮ್ಮೆ ನಿಮ್ಮ ಬರವಣಿಗೆಯ ಓದು ನಮ್ಮೊಳಗೊಂದು ಖುಷಿ ಮತ್ತು ಚಿಂತನೆ ಮೂಡಿಸುವ ಪದತರಂಗ.

  2. ಸ್ವಾಮಿ ಪೊಣ್ಣಾಚ್ಚಿಯವರ ಧೂಪದ ಮಕ್ಕಳು ಕಥಾ ಸಂಕಲನದ ಪರಿಚಯ ಬಹಳ ಸೊಗಸಾಗಿದೆ ಶ್ರೀದೇವಿ ನಿಮ್ಮ ಜಿವನದ ಸಂಗತಿಗಳ ಜೊತೆಗೆ ಕಥೆಗಳ ಪರಿಚಯ ಹೆಣೆದು ಸುಂದರ ಕಸೂತಿಯಾಗಿಸುವ ನಿಮ್ಮ ಕೌಶಲ್ಯ ಅದ್ಬುತ

  3. ಪುಸ್ತಕದ ಕಥೆಗಳ ಕುರಿತಾದ ವಿವರಣೆ ನಿಮ್ಮ ಅನುಭವಾಮೃತ ಈ ಮಳೆ ಚಳಿಗೆ ಬಿಸಿ ಕಾಫಿ ಕೊಟ್ಟಂತಿತ್ತು. ತುಂಬಾ ಚೆನ್ನಾಗಿ ಬರೆದಿದ್ದೀರಾ. ಸೂಪರ್.

  4. ಧೂಪದ ಮಕ್ಕಳು ಸೊಗಸಾಗಿದೆ ನಿಜ ಸಂಗತಿಯನ್ನು ಪೂರ್ಣ ಮನಸ್ಸಿನಿಂದ ಮೌನವಾಗಿ ಚಿಂತಿಸುವಂತೆ ಮಾಡುತ್ತವೆ ಧನ್ಯವಾದಗಳು ನಿಮಗೆ ಮುಂದಿನ ಅಂಕಣ ಕಾಯುವೆ

Leave a Reply