ಅಂತಃಕರಣ ಕಂಡ ‘ಗೋಲ್ಡ್’

ಗೋಲ್ಡ್ : ಇದು ಅಕ್ಷಯ್ ಸಿನಿಮಾವಲ್ಲ, ನಿರ್ದೇಶಕರ ಸಿನಿಮಾ

 ಅಂತಃಕರಣ

ನಾನು ಈ ಸ್ವಾತಂತ್ರ್ಯ ದಿವಸದ ದಿನ ಅಂದರೆ 15 ಆಗಸ್ಟ್‍ರಂದು ನೋಡಿದ ಸಿನೆಮಾ ಗೋಲ್ಡ್. ಶಿವಮೊಗ್ಗದ ಭರತ್ ಸಿನೆಮಾಸ್‍ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನೆಮಾ ‘ಗೋಲ್ಡ್’. ಒಟ್ಟಾರೆಯಾಗಿ ನಾನು ವಜ್ರಕಾಯ ಹಾಗೂ ಸೀಕ್ರೇಟ್ ಸೂಪರ್‍ಸ್ಟಾರ್ ಸಿನೆಮಾಗಳ ನಂತರ ನೋಡಿದ ಫಸ್ಟ್ ಡೇ ಫಸ್ಟ್ ಶೋ ಸಿನೆಮಾ ಇದಾಗಿತ್ತು. ಅವೆರಡು ಸಿನೆಮಾಗಳನ್ನು ಸಂಜೆ 6ಗಂಟೆಯ ಶೋ ನಲ್ಲಿ ನೋಡಿದ್ದರೆ ಗೋಲ್ಡ್ ನ್ನು ಬೆಳಗ್ಗೆ 11 ಗಂಟೆಗೇ ನೋಡಿದೆ. ಹೀಗಾಗಿ ಗೋಲ್ಡ್ ಸಿನೆಮಾ ನೋಡಿದ ಮೊದಲಿಗರಲ್ಲಿ ನಾನೂ ಸಹ ಒಬ್ಬ!

ಗೋಲ್ಡ್ ಸಿನೆಮಾ ಒಂದು ಕ್ರೀಡಾ ಸಿನೆಮಾ. ಅಕ್ಷಯ್ ಕುಮಾರ್, ಕುನಾಲ್ ಕಪೂರ್, ವಿನೀತ್ ಸಿಂಗ್, ಸನ್ನಿ ಕೌಶಲ್, ಮೌನಿ ರಾಯ್, ಅಮಿತ್ ಸಾಧ್ ಮೊದಲಾದವರನ್ನು ತನ್ನ ತಾರಾಗಣದಲ್ಲಿ ಈ ಸಿನೆಮಾ ಹೊಂದಿದೆ. ರೀಮಾ ಕಟಗಿ ನಿರ್ದೇಶಿಸಿರುವ ಈ ಸಿನೆಮಾ ಸ್ವತಂತ್ರ ಭಾರತ ಗೆದ್ದ ಮೊದಲ ಹಾಕಿ ಒಲಂಪಿಕ್ಸ್ ಗೋಲ್ಡ್ ಬಗೆಗಿನದ್ದಾಗಿದೆ. ನಿಜವಾದ ಸಂಗತಿಯ ಸಣ್ಣದೆಂದರೆ ಅತ್ಯಂತ ಸಣ್ಣ ಎಳೆಯನ್ನಿಟ್ಟುಕೊಂಡು ಉಳಿದದ್ದನ್ನು ಪೂರ್ತಿ ಹೊಸದಾಗಿ ಸೃಷ್ಟಿಸಿದ್ದಾರೆ ನಿರ್ದೇಶಕಿ ರೀಮಾ. ಇದು ಸಿನೆಮಾದ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಎರಡೂ ಸಹ ಆಗುತ್ತದೆ. ಕೆಲವೊಂದು ಕಡೆಗಳಲ್ಲಿ ಇದು ಪ್ಲಸ್ ಆಗಿ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗೆ ಕುನಾಲ್ ಕಪೂರ್ ಈ ಸಿನೆಮಾದಲ್ಲಿ ಸಾಮ್ರಾಟ್ ಎಂಬ ಆಟಗಾರನ ಪಾತ್ರವನ್ನು ವಹಿಸಿದ್ದಾರೆ. ಇದು ಧ್ಯಾನ್‍ಚಂದ್‍ರನ್ನು ಸ್ಪೂರ್ತಿಯಾಗಿಟ್ಟುಕೊಂಡು ಮಾಡಿದ ಪಾತ್ರ ಎಂದು ಚೂರು ಸೂಕ್ಷ್ಮತೆಯಿಂದ ನೋಡಿದರೆ ಅರಿವಾಗುತ್ತದೆ. ಆದರೆ ಸಾಮ್ರಾಟ್‍ನ್ನು ಪೂರ್ತಿಯಾಗಿ ಧ್ಯಾನ್‍ಚಂದ್‍ರನ್ನಾಗಿ ಮಾಡಿದ್ದರೆ ಚಿತ್ರಕ್ಕೆ ಧಕ್ಕೆಯಾಗುವ ಸಾಧ್ಯತೆಯಿತ್ತು. ಆದ್ದರಿಂದ ಧ್ಯಾನ್‍ಚಂದ್‍ರಿಗೆ ಹಿಟ್ಲರ್ ಜರ್ಮನ್ ಸೈನ್ಯ ಸೇರುವಂತೆ ಆಹ್ವಾನ ನೀಡಿದ ಪ್ರಸಂಗವನ್ನು ನಿರ್ದೇಶಕರು ಸಿನಿಮಾದಲ್ಲಿ ತರುವುದಿಲ್ಲ. ಒಂದು ವೇಳೆ ಈ ಪ್ರಸಂಗ ಇದ್ದು ಬಿಟ್ಟಿದ್ದರೆ ಧ್ಯಾನ್‍ಚಂದ್‍ರ ಜೀವನದಲ್ಲಿ ಇಲ್ಲದೇ ಇರುವ ಉಳಿದ ಘಟನೆಗಳನ್ನು ಕಾಲ್ಪನಿಕವಾಗಿ ನಿರ್ದೇಶಕರು ತಂದು ಧ್ಯಾನ್‍ಚಂದ್ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಟೀಕೆಗಳು ಎದುರಾಗುವ ಸಾಧ್ಯತೆಯಿತ್ತು.

ಇಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ನಿರ್ದೇಶಕರು ಸೋಲುವುದು ಕಾಲ್ಪನಿಕವಾಗಿ ಸೃಷ್ಟಿಸಿದ ಕಥೆಯಲ್ಲಿ ಹೆಚ್ಚಾಗಿ ಅಕ್ಷಯ್ ಕುಮಾರ್ ಪಾತ್ರದಲ್ಲಿ. ಅಕ್ಷಯ್ ಕುಮಾರ್ ಪಾತ್ರವನ್ನು ಇನ್ನೂ ಸ್ವಲ್ಪ ಚೆನ್ನಾಗಿ ಸೃಷ್ಟಿಸಿದ್ದಲ್ಲಿ ಗೋಲ್ಡ್ ಇನ್ನೂ ಉತ್ತಮ ಸಿನೆಮಾವಾಗುತ್ತಿತ್ತು. ಕೆಲವೊಂದು ಸನ್ನಿವೇಶಗಳಲ್ಲಿ ಅಕ್ಷಯ ಪೂರ್ಣವಾಗಿ ಹೈಲೈಟ್ ಆದರೆ ಕೆಲವೊಮ್ಮೆ ಪೂರ್ಣವಾಗಿ ಹಿಂತೆರೆಗೆ ಸರಿಯುತ್ತಾರೆ. ಸಿನಿಮಾ ಪ್ರಚಾರದಲ್ಲಿ ಅಕ್ಷಯ್ ಅವರನ್ನು ಪೂರ್ಣವಾಗಿ ಹೀರೋ ಮಾಡಿರುವ ಕಾರಣ ಸಿನೆಮಾದಲ್ಲಿ ಹಾಗಿರದೆ ಅವರ ಅಭಿಮಾನಿ ಪ್ರೇಕ್ಷಕರಿಗೆ ಸ್ವಲ್ಪ ನಿರಾಸೆಯಾಗಬಹುದು.

ನಿರ್ದೇಶಕರು ಗೆಲ್ಲುವುದು ಎಲ್ಲಿ ಅಂದರೆ ಅವರು ಬಯಸಿದ್ದರೆ ಸಾಮ್ರಾಟ್ (ಕುನಾಲ್ ಕಪೂರ್ ನಿರ್ವಹಿಸಿರುವ ಪಾತ್ರ) ಅಂದರೆ ಧ್ಯಾನ್‍ಚಂದ್‍ರಿಂದ ಸ್ಪೂರ್ತಿ ಪಡೆದಿರುವ ಪಾತ್ರದ ಮೂಲಕ ಇಡೀ ಸಿನೆಮಾವನ್ನು ಚಿತ್ರಿಸಬಹುದಾಗಿತ್ತು. ಆದರೆ ತಪನ್ ದಾಸ್ ಎಂಬ ಪಾತ್ರದ ಮೂಲಕ ಸಿನೆಮಾವನ್ನು ಚಿತ್ರಿಸುವ ಸಾಹಸಕ್ಕೆ ನಿರ್ದೇಶಕರು ಕೈ ಹಾಕಿ ಅದರಲ್ಲಿ ಯಶಸ್ಸು ಸಹ ಕಂಡಿದ್ದಾರೆ.

ಬೇರೆ ಕ್ರೀಡಾ ಸಿನೆಮಾಗಳಿಗಿಂತ ಗೋಲ್ಡ್ ಭಿನ್ನವಾಗಿ ಕಾಣುವುದು ಅದರ ಮುಖ್ಯ ಪಾತ್ರಧಾರಿಯಿಂದ. ಬೇರೆ ಎಲ್ಲಾ ಹೆಚ್ಚಿನ ಬಾಲಿವುಡ್ ಕ್ರೀಡಾ ಸಿನೆಮಾಗಳನ್ನು ಕ್ರೀಡೆಗಳನ್ನು ಆಡುವವರ ಅಥವಾ ಆಡಿ ಅನುಭವ ಹೊಂದಿರುವವರ ಮೇಲೆ ಚಿತ್ರಿತವಾಗಿವೆ. ಆದರೆ ಗೋಲ್ಡ್ ಹಾಗಲ್ಲ. ಗೋಲ್ಡ್ ಚಿತ್ರಿತವಾಗಿರುವುದು ಒಬ್ಬ ಹಾಕಿ ಪ್ರೇಮಿಯ ಮೇಲೆ. ಆತ ಪ್ರತಿಭಾವಂತ ಹಾಕಿ ಆಟಗಾರನೇನೂ ಆಗಿರುವುದಿಲ್ಲ. ಆದರೂ ಸಹ ಆತ ಹಾಕಿ ತಂಡದ ಮ್ಯಾನೇಜರ್ ಆಗಿ ಹೇಗೆ ತಂಡವನ್ನು ಮುನ್ನಡೆಸುತ್ತಾನೆ ಎಂಬುದರ ಬಗ್ಗೆ ಗೋಲ್ಡ್ ಸಿನೆಮಾ ಇರುವುದು.

ನಿರ್ದೇಶಕಿ ರೀಮಾ ಮಾಡಿರುವ ದೊಡ್ಡ ಸಾಹಸ ಇದು ಎಂದು ಹೇಳುವುದಕ್ಕೆ ಇನ್ನೊಂದು ಕಾರಣ ಭಾರತದಲ್ಲಿ ಹಾಕಿ ಸಿನೆಮಾ ಇದೇ ಮೊದಲೇನಲ್ಲ. ಶಾರುಖ್ ಖಾನ್ ಸಹ ಕೋಚ್ ಆಗಿ ಅಭಿನಯಿಸಿದ ‘ಚಕ್ ದೇ ಇಂಡಿಯಾ’ ಸಿನೆಮಾ ಮೊದಲೇ ಬಂದಿತ್ತು. ಆ ಸಿನೆಮಾ ಕಾಲ್ಪನಿಕವಾಗಿ ಚಿತ್ರಿತವಾಗಿದ್ದರೆ ಈ ಸಿನೆಮಾ ಸಹ ಮೊದಲೇ ಹೇಳಿದ ಹಾಗೆ ಸಣ್ಣ ನೈಜತೆಯ ಎಳೆಯೊಂದಿಗೆ ಚಿತ್ರಿತವಾಗಿದೆ. ಕಾಲ್ಪನಿಕ ಚಿತ್ರ ಸೃಷ್ಟಿಸುವಾಗ ನಿರ್ದೇಶಕರ ಮುಂದಿರುವ ಸವಾಲೇನಾಗಿರುತ್ತದೆ ಎಂದರೆ ಅದರಲ್ಲಿ ಪಂದ್ಯ ನಡೆಯುವ ಸಂದರ್ಭದಲ್ಲಿ ಹೇಗೆ ರೋಚಕ ಕ್ಷಣಗಳನ್ನು ಅಳವಡಿಸಬೇಕು ಎಂಬುದು.

ಸಂಪೂರ್ಣವಾಗಿ ಅಥವಾ ಶೇಕಡಾ 80ಕ್ಕಿಂತ ಜಾಸ್ತಿ ನೈಜತೆಯುಳ್ಳ ಚಿತ್ರವಾದರೆ ಇದಕ್ಕೆ ಅದು ಅಡ್ಡಿಯಾಗುವುದಿಲ್ಲ. ಉದಾಹರಣೆಗೆ ನಾವು ಧೋನಿ ಹಾಗೂ ಅಜರುದ್ದೀನ್‍ರ ಸಿನೆಮಾಗಳನ್ನು ನೋಡಿದರೆ ಅವುಗಳಲ್ಲಿ ಕಾಲ್ಪನಿಕವಾಗಿ ರೋಚಕ ಸಂಗತಿಗಳನ್ನು ಸೃಷ್ಟಿಸಬೇಕಾಗಿ ಬರುವುದಿಲ್ಲ. ಅವರ ವೃತ್ತಿ ಜೀವನದ ರೋಚಕ ಘಟನೆಗಳನ್ನು ಸೇರಿಸಿದರೆ ಸಾಕಾಗುತ್ತದೆ. ಆದರೆ ರೋಚಕ ಸಂಗತಿಗಳನ್ನು ನಿಜವಾಗಿಯೂ ಸೃಷ್ಟಿಸುವುದು ದೊಡ್ಡ ಸಂಗತಿ. ‘ಚಕ್ ದೇ ಇಂಡಿಯಾ’ ಸಿನೆಮಾದ ನಿರ್ದೇಶಕರಿಗೆ ಇದು ಬಹಳ ಸುಲಭವಾಗಿತ್ತು.

ಯಾಕೆಂದರೆ ಆ ಸಮಯದ ತನಕ ಯಾವುದೇ ಪ್ರಸಿದ್ಧ ಹಾಕಿ ಸಿನೆಮಾ ಭಾರತದಲ್ಲಿ ನಿರ್ಮಾಣವಾಗಿರಲಿಲ್ಲ. ಆದ್ದರಿಂದ ಸಿನೆಮಾದಲ್ಲಿ ಅವರಿಗೆ ಅಳವಡಿಸಲು ಬಹಳ ರೋಚಕ ಸಂಗತಿಗಳಿದ್ದವು. ಉದಾಹರಣೆಗೆ 2-0 ಇಂದ ಮೊದಲಾರ್ಧದಲ್ಲಿ ಹಿಂದಿದ್ದ ತಂಡ ಎರಡನೇ ಅರ್ಧದಲ್ಲಿ 3 ಗೋಲು ಗಳಿಸುವುದು, ಗೋಲ್ ಲೈನ್‍ನಲ್ಲಿ ಬಾಲನ್ನು ಡಿಫೆಂಡರ್ ಹಿಂದೆ ತಳ್ಳುವುದು ಹೀಗೆ ಹಲವು ಸಂಗತಿಗಳಿದ್ದವು. ಆದರೆ ಗೋಲ್ಡ್ ಗೆ ಇಂತಹ ಸಂಗತಿಗಳ ಆಯ್ಕೆ ಕಮ್ಮಿಯಿತ್ತು. ಒಂದು ವೇಳೆ ‘ಚಕ್ ದೇ’ ಸಿನೆಮಾದಲ್ಲಿ ಹಾಕಿದ್ದ ಸಂಗತಿಗಳನ್ನೇ ಹಾಕಿದ್ದರೆ ಆ ಸಿನೆಮಾದಲ್ಲಿ ಹಾಗೂ ಇದರಲ್ಲಿ ದೊಡ್ಡ ಸಾಮ್ಯತೆ ಎದ್ದು ಕಾಣಿಸುತ್ತಿತ್ತು. ಆದರೆ ನಿರ್ದೇಶಕಿ ರೀಮಾ ಇದನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಗೋಲ್ಡ್ ಉತ್ತಮ ಸಿನೆಮಾವಾಗುತ್ತದೆ. ಸಿನೆಮಾದಲ್ಲಿ ತೋರಿಸಲಾದ ಆಟದಲ್ಲಿ ಹೆಚ್ಚು ರೋಚಕತೆ ಇಲ್ಲದಿದ್ದರೂ ಸಹ ಆ ರೋಚಕತೆಯನ್ನು ಮ್ಯೂಸಿಕ್‍ನ ಬಲದಲ್ಲಿ ಹಾಗೂ ಉಳಿದ ಸನ್ನಿವೇಶಗಳಲ್ಲಿ ತುಂಬಿಸಿದ್ದಾರೆ.

ಮತ್ತೊಂದು ವಿಷಯದಲ್ಲಿ ಗೋಲ್ಡ್ ಬೇರೆಲ್ಲಾ ಸಿನೆಮಾಗಳಿಗಿಂತ ವಿಭಿನ್ನವಾಗಿ ಕಾಣಿಸುವುದು ಅದು ಸ್ವಾತಂತ್ರ್ಯದ ಸಮಯವನ್ನು ತೋರಿಸುವ ರೀತಿಯಲ್ಲಿ. ಭಾರತ ಸ್ವತಂತ್ರವಾದಾಗ ಆದ ಕ್ರಾಂತಿಕಾರಿ ಬದಲಾವಣೆಗಳನ್ನು ಹಲವು ಸಿನೆಮಾಗಳು ತೋರಿಸಿವೆ. ಆದರೆ ಆಗ ದೇಶ ವಿಭಜನೆಯಾದಾಗ ಆದ ನಷ್ಟವನ್ನು ಗೋಲ್ಡ್ ಬಹಳ ಚೆನ್ನಾಗಿ ತೋರಿಸುತ್ತದೆ. ಭಾರತೀಯ ಹಾಕಿ ಆಟಗಾರರು ಸ್ವ್ವಾತಂತ್ರದ ಸಮಯದಲ್ಲಿ ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಹೋಗಬೇಕಾಗಿ ಬರುವುದು. ಅದರಿಂದ ಭಾರತ ತಯಾರು ಮಾಡಿದ್ದ ಹಾಕಿ ತಂಡ ಛಿದ್ರವಾಗುವುದು. ಇದು ಬಹಳ ಹೃದಯಸ್ಪರ್ಶಿಯಾಗುತ್ತದೆ. ಹಾಗೂ 1948ರ ಒಲಂಪಿಕ್ ಸಮಯದಲ್ಲಿ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾದಾಗ ಮುಖ್ಯ ಪಾತ್ರಧಾರಿ ತಪನ್ ದಾಸ್ (ಅಕ್ಷಯ್ ಕುಮಾರ್) ಪಾಕಿಸ್ತಾನದ ಡ್ರೆಸಿಂಗ್ ಕೊಠಡಿಗೆ ಹೋಗಿ ಅವರಿಗೆ ಗುಡ್‍ಲಕ್ ಹೇಳುವುದು, ಫೈನಲ್‍ನಲ್ಲಿ ಪಾಕಿಸ್ತಾನೀಯರು ಭಾರತಕ್ಕೆ ಸಪೋರ್ಟ್ ಮಾಡುವುದು. ಹೀಗೆ ಆ ಸಮಯದಲ್ಲಿ ಹಾಕಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಮಧುರ ಸಂಬಂಧವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ ನಿರ್ದೇಶಕರು.

ಈ ಲೇಖನದ ಒಟ್ಟು ಸಾರಾಂಶ ಏನೆಂದರೆ ‘ಗೋಲ್ಡ್’ ನೀವು ನೋಡಲೇಬೇಕಾದ ಸಿನೆಮಾ ಎನ್ನುವುದು!!

Leave a Reply